ರಾಗ ಸಾರಂಗ ಅಷ್ಟತಾಳ
ನಡಿ ನಡಿ ನಡಿಯೋ ಖೋಡಿ | ಸಾರಿದೆಸಾಕೆ | ನ್ನೊಡನ್ಯಾತಕಿಂಥ ಮೋಡೀ ||
ದಡಿಗ ನಿನ್ನಯ ಹಸ್ತ | ಪಿಡಿದವಳೊಡನಿಂತು |
ಬಡಿವಾರ ನುಡಿವುದೆ | ನ್ನೊಡನೆ ಬಲ್ಗೈಯ್ಯದೆ || ನಡಿ ||286||
ಪರ ನಾರಿಯರಿಗಳುಕೀ | ಆಮೇಲ್ದಂಡ | ಧರನಾಜ್ಞೆಯಲಿ ಸಿಲುಕೀ |
ನರಕಭಾಜನನಾಗಿ | ನರಳುವದೇನ್ಸುಖ |
ಬರುವದೆ ಭಂಡ ಪಾ | ಮರ ಮೊಗದೋರದೆ || ನಡಿ ||287||
ಖೂಳ ಯೌವನ ಮದದೀ | ಮುಂಗಾಣದೆ | ಪಾಳಾಗದಿರುಕ್ಷಣದಿ ||
ನೀಲಾಳಕಿಯರನೀ | ಗೋಳುಗುಟ್ಟಿಸಿ ವಂಶ |
ಮೂಲವನಳಿವೆನೀ | ವಾಳಿ ನೋಡಿಕೊ ಸಿದ್ದ | ನಡಿ ||288||
ಚಿನುಮಯಾತ್ಮಕ ಮೂರ್ತಿಯ | ನಿಂದಿಸಿ ನಾನಾ | ಘನ ಪಾಪಕೊಳಗಾದೆಯಾ ||
ಶುನಕನು ಸಿಂಹನ | ಮುನಿಸಿಂದ ಬಗುಳಿದ |
ರಿನಿತು ಕುಂದಹುದೆ ಜೀ | ವನವ್ಯಾಕೆ ಸುಡುಸುಡು || ನಡಿ || ||289||
ಭಾಮಿನಿ
ತರುಣಿಯತಿ ನಿಷ್ಠುರದಿ ದೂಷಿಸಿ |
ಜರೆವುತಿರೆ ಕೇಳುತ್ತಲಾ ಖಳ |
ತುರುಬ ಹಿಡಿದೆಳೆವುತ್ತ ಕುಸುಬುತ ಕೆಡಹಲವನಿಯಲೀ ||
ಹರಹರಾ ಮುಂದಾರು ಗತಿ ಯೆಂ |
ದೊರೆವುತಿರೆ ದಶಕಂಠ ಹಿಂದಕೆ |
ಸರಿಯೆ ಸತಿಮರುಗಿದಳು ಕಲ್ಮರ ಕರಗುವಂದದಲೀ ||290||
ರಾಗ ನೀಲಾಂಬರಿ ಏಕತಾಳ
ಅಯ್ಯೋ ನಾನೇನ್ಮಾಡಲೀ | ಕಾಮುಕರಿದಿರು | ಪ್ರಾಯದೊಳೆಂತಿರಲೀ ||
ಕೈಯಾರೆಯಳೆದನಿಂದೂ | ಆ ಕಾಲನಿವನ | ವಯ್ಯುವ ದಿವಸವೆಂದೂ ||
ತಾತಗೆನ್ನುವೆನೆಂದರೆ | ಎನ್ನಿಂದ ವ್ಯರ್ಥ | ಘಾತವಾಗಿರುವ ಬೇರೇ ||
ಯಾತಕೊದರಿಕೊಳಲಿ | ನಾನಿಂತಕಡು | ಪಾತಕಿ ಭುವನದಲೀ ||291||
ಎಲ್ಲಾತಂಕವ ಮರೆದೂ | ಈ ರೀತಿಯಲ್ಲಿ | ಪುಲ್ಲನಾಭನ ನೆನೆದೂ ||
ಕಲ್ಲೆದೆಯಾಗಿರಲೂ | ಈ ದುಷ್ಟಬಂದು | ನಿಲ್ಲಲೀಸನು ಮೊದಲೂ |
ತಪಕಿಲ್ಲಿ ವಿಘ್ನ ಬಂತು | ಮುಂದೇನುದಾರಿ | ವಿಪರೀತ ಕಾರ್ಯವಿಂತೂ ||
ಕಪಟವಿದೆಂದರಿಯೆ | ಶೀಘ್ರದಲಿ ನೀ | ಕಪೆಮಾಡೋ ಶ್ರೀಹರಿಯೆ ||292||
ಹುಟ್ಟಿದ ದಿನವಿಡಿದೂ | ಚಿಂತಿಸಿ ನಾನಾ | ಕಷ್ಟ ಜೀವನಕಾದುದೂ ||
ಸೃಷ್ಟಿಯೊಳ್ಪುಣ್ಯವಂತರೂ ಇಲ್ಲವೇನೈ ಸಂ | ತುಷ್ಟಿಯೊಳ್ ಬಾಳ್ವರೂ ||293||
ಯಾಕುದಿಸಿದೆಜಗದೀ | ಅನಾಥಳಾಗಿ | ವ್ಯಾಕುಲಸಾಗರದೀ ||
ಭೀಕರಪ್ಪುದು ಮನಕೇ | ಈ ಹೆಣ್ಣುಜನ್ಮ | ಸಾಕೆನ್ನ ಭವಭವಕೇ ||294||
ರಾಗ ಭೈರವಿ ಆದಿತಾಳ
ಹೆಣ್ಣು ಜನ್ಮವು ಕಷ್ಟವೆಂಬುದ | ಕಣ್ಣಿನಲಿಕಂಡೆ |
ಎಣಿಸಿದರೆದೆಹಾರುವದು ಮ |
ತ್ಪುಣ್ಯಫಲವಿಂತಾಯ್ತು ಶಿವ ಶಿವ || ಪಲ್ಲವಿ ||
ತಂದೆ ತಾಯಿಸುಬಂಧು ಬಳಗದಂದ ಗೋಷ್ಠಿಯ ಬಿಟ್ಟು ಮರುಗುತ |
ಹಿಂದು ಮುಂದೆನಗಾರುಗತಿಯಿಲ್ಲೆಂದು ಚಿಂತೆಬಿಟ್ಟು ನಾನಾ |
ದಂದುಗದಿ ಮನನೊಂದು ತಾಪದಿ |
ನಿಂದಿರಲು ಖಳಬಂದು ಮುಟ್ಟಿದ |
ನಿಂದುವರಲಿದರೆಂದದೂರನು | ವಿಚಾರಿಸಿಕರುಣವ |
ತಂದು ನೋಳ್ಪಾರೆಲ್ಲಿ ಶಿವಶಿವ ||295||
ಕಂದು ಕುಂದಿವುತಾಪ್ರಳಾಪಿಸಿ ತಂದದಿಂನಿದಾನವೆಸಗದೆಮ |
ಧಾಂಧಕಾರಿಯಕಂದರವ ಬಲ್ಪಿಂದಖಂಡಿಸಿ |
ಕೊಂದುದಿತಿಜನ ಸದಾಸುಖಿಪಮು
ಕುಂದನಡಿಯಿಂನೆಂದುನೋಡುವೇ | ಹೆಣ್ಣು ||296||
ದಿಕ್ಕು ದೆಸೆಯಿಂದಕ್ಕರಿಲ್ಲದ | ಕಕ್ಕುಲಿತೆಬಾಳ್ವೆಯಾತಕೆ |
ಹಕ್ಕಿಬಾಯ್ಬಿಡುವಂತೆಚಿತ್ತದ ದುಃಖವೆಂತುತಾಳ್ವೆಯಿಂಥಾ |
ಚಿಕ್ಕಹರಯದಿಸೊಕ್ಕಿ ನಾನೀರಕ್ಕಸನ ಬಾಯ್ಬುಕ್ಕಿಗಾಗುವೆ |
ಮಿಕ್ಕ ಕುಜನರಸೊಕ್ಕ ಮುರಿದುಪ ಚಾಡಿಸಬಡಿದುರು |
ಮುಕ್ಕಣ್ಣನಿನಗರುಹು ||
ತುಕ್ಕಿಮಹಾಂತರದೊಳಾಗಲಸು |
ದಿಕ್ಕಲಾವಹುದು |
ಗಕ್ಕನೆಮತ್ಪ್ರಾಣವಳಿದರೆ ತಕ್ಕುಪಾಯವಪೇಕ್ಷಿಸಲುಮುಂ |
ದಕ್ಕೆ ತಾಹತವಕೆ ತೋರ್ಪುದು || ಹೆಣ್ಣು ||297||
ಘೋರವಿಪಿನದಿ ಸೇರಿಕೊಂಡಾಕಠೋರ ಮಗಗಳಿಂದ | ಯೆನಗಾ |
ಧಾರವಿಲ್ಲದೆ ಬೇರೆ ಮನುಜರಮೊರೆ ಗಾಣ್ಬುದೆಂದು | ತನ್ನಯ |
ವೈರಿಯಾದರು ಜಾರಿತಪ್ಪರುಬಾರದಿಂನೆಂದೂ ಶಿವ ಶಿವ |
ನಾರಿಯನುವದು ಮೂರುಲೋಕದೊಳೆಂನಕಷ್ಟ
ವನೋಡಿಮರೆಯಲಿನ್ನು |
ದಾರಿಗಾದ್ವೈಪಾಯಸಕಲದಲಿ
ನಿರೀಕ್ಷಿಸುವದಕೆಮು |
ರಾರಿಯೆಸರಿವಾರಿಜಾಕ್ಷಮನೋರಥವ
ದಯದೋರಿಯೆನಗಾ |
ಸರಾಗದಿಂದ ಶರೀರವೊಲಿಸುವ ಯೋಗವಿಂದಿಗೆ | ಹೆಣ್ಣು ||298||
ಭಾಮಿನಿ
ಬಿಕ್ಕಿ ಬಿರಿದಳಲುತ್ತಮಾನಿನಿ |
ರಕ್ಕಸನ ಮೊಗನೋಡಿ ನಿನ್ನಯ |
ಸೊಕ್ಕ ಮುರಿವಡೆ ನಾರಿ ಪುರುಷನ ಕೊಲುವದನುಚಿತವೂ ||
ಮಿಕ್ಕಿ ನೀ ಪರಸತಿಯ ಮೇಲ್ಕೈ |
ಯಿಕ್ಕಿದರೆ ತವ ಮಸ್ತಕಾವಳಿ |
ಘಕ್ಕನೇ ಸೀಳಾಗಲೆನುತಲ ದಶ್ಯ ವೊಂದಿದಳೂ ||299||
ವಾರ್ಧಕ
ಈ ಪರಿಯ ಮಾನಭಂಗದೊಳಿತ್ತದುರುಳ ಸಂ |
ತಾಪದಿಂಪುರಕೈದಿ ತತ್ಫ್ರಾಹಸ್ತಾದ್ಯರಸ |
ಮೀಪದೊಳ್ ಕರೆದು ನಾಂ ಕಾರ್ತವೀರ್ಯಾರ್ಜುನನ ಜೈಸಬೇಕೀಕ್ಷಣದಲೀ ||
ನೈಪುಣತ್ವದ ದೈತ್ಯದಳವವನ ದೇಶಮಂ |
ವ್ಯಾಪಿಸಿಲು ಮುಂಬರಕ್ಕೆನುತ ರಣಕರ್ಕಶನಿ |
ರೂಪವನ್ನಿತ್ತು ಖಳಸೇನೆಯನ್ನೊಡಗೊಂಡು ಪೊರಟನದ್ಭುತ ವೇಷದೀ ||300||
ರಾಗ ಕಾಂಭೋಜಿ ಝಂಪೆತಾಳ
ಇತ್ತ ಸಾಸಿರ ತೋಳ್ಗಳಾಂತು ಮಾಹಿಷ್ಮತಿ ಯ |
ಪತ್ತನವನತುಳ ವೈಭವದೀ |
ಅತ್ಯಧಿಕ ಬಲ ಕಾರ್ತ ವೀರ್ಯಾರ್ಜುನನುಧರೆಯ |
ಸತ್ಯದಿಂದಾಳುತ್ತಾಲೀರ್ದಾ ||301||
ಇರುತಿರಲ್ಕೊಂದು ದಿನ ಜಲಕೇಳಿಯೆಣಿಸಿಸುರ |
ಚಿರನರ್ಮದಾತೀರದಲ್ಲೀ ||
ತರತರದ ನಾರಿಯರನೊಡಗೊಂಡು ಪೋಗಿರಲು |
ದ್ದುರುಳದಶಕಂಠ ಬಲವೆರದೂ ||302||
ತದ್ದೇಶಕೈದವನಾ ವಾರ್ತೆಯಂ ಕೇಳ್ದ ಪ್ರ |
ಬುದ್ಧಿಯಲಿ ನರ್ಮದೆಗೆ ಬಂದೂ ||
ಶುದ್ಧತರ ನದಿಯಲ್ಲಿ ಮಿಂದು ಮಡನಂಸುಪ್ರ |
ಸಿದ್ಧ ಖಳ ಪೂಜಿಸುತ್ತಿರಲೂ ||303||
ಅದಕರ್ಧ ಯೋಜನದ ದೂರ ಜಲಮಧ್ಯದಲಿ |
ಸುದತಿಯರ ಸಂದಣಿಯ ನಡುವೇ ||
ಮದನ ಬಹಿರಂಗರತಿಯುತ್ಸವದಿ ನಪನಿರಲು |
ಚದುರೆಯರು ಕಂಡರೀ ಜನವಾ ||304||
ನಾಚುತ ನಿಜಾಂಗಮಂ ವಸನದಿಂದಲೆ ಮುಚ್ಚು |
ತಾ ಚಕ್ರವರ್ತಿಯೊಡನುಸುರೇ ||
ವಾಚಿಸುವದೇನೆರಡು ಪಾರ್ಶ್ವದಭುಜಾಳಿಯಿಂ |
ದಾ ಚಲಿಪ ಜಲವ ಕಟ್ಟಿದನೂ ||305||
ವಾರ್ಧಕ
ತನ್ನದಿಯ ತಡಿಯಲ್ಲಿ ದಂಡಿಳುಹಿೊಂಡಸುರ |
ಪನ್ನಗಾಭರಣನಂ ಪೂಜಿಸುತ್ತಿರಲವನ |
ತನ್ನೊಡನೆ ಕರತಂದು ಮನ್ನಿಪಡಿದಿರ್ಗೊಂಬ ಕಡಲಂತೆ ಜಲ ನಿಮಿಷದೀ |
ಸನ್ನುತದಿ ಮೇಲ್ವರಿಯೆ ಸೈನ್ಯ ಕಂಗೆಡುತಲಿರ |
ಲನ್ನೆಗಂ ದಶಕಂಠನರ್ಧಾರ್ಚನೆಯೊಳೆದ್ದು |
ಸನ್ನೆಯೋಳ್ತಾರಣೆಗೆ ಸೂಚಿಸಲು ನಪತಿಯಂ ಕಂಡೊಡೆಯಗಿಂತೆಂದನೂ ||306||
ಭಾಮಿನಿ
ದನುಜಪತಿ ಕೇಳ್ಕಾರ್ತವೀರ್ಯಾ |
ರ್ಜುನಮಹಾ ಜಲಕೇಳಿಯೊಳಗೆ |
ಮ್ಮನುನಿರೀಕ್ಷಿಸಿ ಭುಜದಿ ನದಿಯಂ ಸೇತುಕಟ್ಟಿಹನೂ |
ಇನಿತವನ ಚಾರಿತ್ರವೆನಲಾ |
ಕ್ಷಣದಿ ಘರ್ಜಿಸಿ ಕಣೆಯ ಸುರಿಯಲು |
ಕನಲಿನಪವರಖೂಳಗಿ ದಿರಾದನು ರಣಾಂಗಣಕೇ ||307||
ರಾಗ ಪಂಚಾಗತಿ ಮಟ್ಟೆತಾಳ
ದಾರೆಲಾಮದೀಯ ಧುರವ |
ಹಾರವಿಸುತ ಬಂದ ಭಟನ |
ಮೋರೆಹ್ಯಾಗಿರುವುದು ನೋಳ್ಪೆ ನೀ ರಣಾಗ್ರದೀ |
ಧೀರತನವ ನಿಲಿಸುತೀ ಸಂ |
ಸಾರ ಶರಧಿಯಿಂದಲೀಗ |
ಪಾರುಗಾಣಿಸುವೆನೆನುತ್ತ | ಮೀರಿಹೊಡದನೂ ||308||
ವಸುಮತೀಶ ನೆಸೆದ ಬಾಣ |
ಮಸುಗುತಲೆಮುಂಗಾರಮೇಘ |
ವೆಸೆದುನಭವ ಮುಸುಕುವಂತೆ | ಪಸರಿಕೊಳ್ಳಲೂ ||
ಅಸಮ ಬಾಣಕಂಜಿ ಭರದೊ |
ಳಸುವ ಮರದು ನಿಲಲಸಾ ಧ್ಯ |
ವೆಸಗೆನಿದ್ರೆ ಗೈದರಾಗ | ವಿಷಮ ದೈತ್ಯರೂ ||309||
ಸುತ್ತ ಮುತ್ತ ಲಸ್ತ್ರ ಶಸ್ತ್ರ |
ವೆತ್ತಿ ಹೊಡೆಯೆದನುಜದಳವು |
ತತ್ತರಿಸುತರಣದಿ ಹಿಂದ | ಕೊತ್ತಿಚದುರಲೂ ||
ಮತ್ತೆ ಭೋರ್ಗರವು ತಲಾ ಪ್ರ |
ಹಸ್ತನಾಗ ಹವಕೆ ನಿಂತು |
ಕತ್ತರಿಸಿದ ನಪನದಳವು | ಮುತ್ತುವಂದದೀ ||310||
ಧುರದೊಳನ್ಯೋನ್ಯರೋಷ |
ವೆರದು ಕಾದುತಿರಲುನಪತಿ |
ಮೊರದು ತಾ ಪ್ರಹಸ್ತನಿರವ | ಭರದಿನೋಡುತಾ ||
ಮರುಳೆದುರುಳ ದೊರೆಯನಂಬಿ |
ಹರಣವೆಮ್ಮೊಳೊಪ್ಪಿಸುವುದು |
ಹೊರತು ನಿನೊಳಾಗದೆನುತಸರಳನೆಚ್ಚನೂ ||311||
ಕನಲಿ ಬರುವ ಶರವ ತರಿವು |
ತಿನಿತು ಯೆನ್ನೊಳಿದಿರುನಿಲುವ |
ಜನರಕಾಣೆ ನೀಗ ನಿನ್ನ | ಘನಮದಾಂಧವ ||
ಮನದೊಳೆಣಿಸದಿರುನಿರರ್ಥ |
ತನುವ ಮಾರಿಗುಣಿಸಿಕೊಡುವೆ |
ನೆನುತಪಲ್ಲ್ಮೊರವುತಾಗ | ಕಣೆಯ ನೆಸೆದನು ||312||
ಧಾರುಣೀಶ ಸಚಿವನಾಸ್ತ್ರ |
ವಾರವೆಲ್ಲ ತರಿದು ದೊರೆಯ |
ತೋರಿ ತವಶರೀರವೆರದು | ಸಾರಿಮನೆಯಲೀ ||
ನಾರಿಗೊಲವ ತೋರ್ಪುದುಚಿತ ಸಾರಿ | ಪೇಳ್ವೆನೆನುತ ಲವನ |
ಮೂರುಬಾಣದಿಂದ ಮೂರ್ಛೆ | ಗೇರಿಸೀದನು ||313||
ವಾರ್ಧಕ
ಸಾರಣನ ಮೂವ್ವತ್ತು ಬಾಣದಿ ಪಚಾರಿಸುತ |
ಮಾರೀಚನಂಪತ್ತು ಮಾರ್ಗಣದಿ ಜಾಡಿಸುತ |
ಘೋರಕುಂಭನನಾಲ್ಕು ಶರದಿ ಮಾತಾಡಿಸುತ ಕಂಪನಂ ಕಂಗೆಡಿಸುತಾ |
ಮೂರು ಕಣೆಯಲಿ ಮಾಲ್ಯವಂತನಂಹಾರಿಸುತ |
ಮೀರಿಬೃಹಖಳರನಸ್ತ್ರದ್ವಯದಿ ಭಾರಿಸುತ |
ಬೇರುಳಿದ ಮೋಹರಕೆ ಭೀಕರವ ದೋರಿಸುತ ನಪನುಲಿದ ನಾರ್ಭಟಿಸುತಾ ||314||
ಮೊರೆವ ಕೋಲಾಹಲ ಸ್ವರದಿಂದ ಜನದಿಂದ |
ತರತರದಿಬೀಳ್ವ ಮಣಿರಥದಿಂದ ಪಥದಿಂದ |
ತಿರುಗಿ ಹಿಂದೊತ್ತುತಿಹ ಹಯದಿಂದ ಭಯದಿಂದ ಕಿರ್ರೆನುವ ಗಜಗಳಿಂದಾ ||
ಕೊರಕೊರೆದು ಮುಸುಕುತಿಹ ಶರದಿಂದ ಭರದಿಂದ |
ಹರುಷಿಸುವ ಶಾಕಿನಿಯ ಚಯದಿಂದ ಲಯದಿಂದ |
ಮೆರೆದುದಾರಣ ಮಹಾಕುಲದಿಂದ ಛಲದಿಂದ ಭೋರ್ಗುಡಿಪ ರಭಸದಿಂದಾ ||315||
ಭಾಮಿನಿ
ಇತ್ತ ಸಚಿವನು ಮೂರ್ಛೆಗೈದಿರ |
ಲತ್ಯಧಿಕ ರೋಷದಲಿ ಖಳನಿ |
ಪ್ಪತ್ತು ತೋಳ್ಗಳ ಕುಣಿಸುತಾ ಸಾಸಿರ ಭುಜಾನ್ವಿತನಾ ||
ಮತ್ತ ಗಜದಿದಿರಿನಲಿ ಗಜಬಂ |
ದೊತ್ತುವಂತಾರ್ಭಟಿಸಿ ಕಿಡಿಯುಗು |
ಳುತ್ತ ಮುಂಬರಿದೆಂದ ಕರ್ಕಶ ಸಿಂಹನಾದದಲೀ ||316||
ರಾಗ ಭೈರವಿ ಅಷ್ಟತಾಳ
ಹುಲು ನಪಾಲಕನೆ ಕೇಳೂ | ಎನ್ನೊಡನಿಂತ |
ಛಲವಿನಿತ್ಯಾಕೊ ತಾಳೂ ||
ಜಲಕೇಳಿಯಲ್ಲಿ ಹೆಂಗಳ ಕುಣಿಸುವದಲ್ಲ |
ಕಲಹವ ನೀನರಿಯೇ || ||317||
ಇನಿತೆಂದ ಮಾತಾಲಿಸೀ | ಘಕ್ಕನೆ ನೃಪ |
ಮುನಿಸಿಂದಹೂಂಕರಿಸಿ |
ಧನಪಾದಿದಿಕ್ಪಾಲರನು ಗೆಲ್ದೆನೆಂಬಹ |
ಮ್ಮನು ತೋರಿಸೆನುತೆಚ್ಚನೂ ||318||
ಜಮದಗ್ನಿಯಾತಿಧ್ಯವಾ | ಮಾಡಿಸಲಾಗ |
ಭ್ರಮೆಗೊಂಡು ನೀಸತ್ಯವ |
ಸಮವೆಸಗಿದ ಮಹಾಮಹಿಮ ನೀ ಬಲ್ಲೆನೆಂ |
ದಮರಿಬಾಣವತೂರಿದ ||319||
ಅಣ್ಣನ ಪೊರಡಿಸಿದಾ | ಆಮೇಲೆ ಮು |
ಕ್ಕಣ್ಣನಗಿರಿಯೆತ್ತಿದಾ |
ಪುಣ್ಯಾತ್ಮನೆಂಬುದ ತಿಳಿದಿಹೆನೆಂದಗ್ರ |
ಗಣ್ಯತೂರಿದನಸ್ತ್ರವಾ ||320||
ಹಾಳೂರಿಗುಳಿದವನೇ | ಶ್ರೇಷ್ಠನೆಂಬುದ |
ಕೇಳಿಹೆ ಬಡನಪನೇ |
ತಾಳು ಪೂರ್ವದ ಶೌರ್ಯಮುಂದೈಯ್ಯದೆನು ತಸ್ತ್ರ |
ಜಾಲವತುಂಬಿದನೂ ||321||
ವೇದಾವತಿಯನೀಕ್ಷಿಸೀ | ಮುಟ್ಟಲು ಮಾನ |
ಪೋದುದನೀಗ್ರಹಿಸೀ |
ಹಾದಿ ಹಿಡಿದು ಹೋದರುತ್ತಮವೆನು ತಲಾ |
ಚ್ಛಾದಿಸಿ ಪೊದನಂದೂ ||322||
ಜನಪನ ನುಡಿಯ ಕೇಳ್ದು | ರಾವಣಮಹಾ |
ಧ್ವನಿಗೈದು ಕೋಪತಾಳ್ದು |
ಮನುಜ ಕೇಳ್ಮರುಮಾತನಾಡಿ ನೀ ಕೆಡಬೇಡೆಂ |
ದೆನುತ ಕೋಲ್ಗರದನಂದೂ ||323||
ಇಂತನ್ಯೋನ್ಯದೊಳೀರ್ವರು | ವರ್ಮದಿ ಪಂಥ |
ವಂ ತಾಳ್ದುಪಟುಭಟರು |
ಅಂತಕನೆದೆಂಚ್ಚುವಂತೆ ಹೊಯ್ದಡಿದ |
ರೇನೆಂಬೆನದ್ಭುತವಾ ||324||
ವಾರ್ಧಕ
ಗಿರಿಗಿರಿಗಳೊಂದಾಗಿ ಮಾರ್ಮಲೆವ ವೋಲ್ಧೀರ |
ರುರವಣಿಸಿ ತಿಮಿರಾಸ್ತ್ರವೆಸೆಯಲರ್ಕಾಸ್ತ್ರದಿಂ |
ತರಿದಗ್ನಿಬಾಣಮಂ ವರುಣಾಸ್ತ್ರದಿಂ ತಣಿಸಿ ಕಾದಾಡಿ ತಂತಮ್ಮೊಳು ||
ಭರದಿ ಮೇಘಾಸ್ತ್ರಮಂ ಪವನಾಸ್ತ್ರ ದಿಂ ಸವರಿ |
ವುರಗಬಾಣವ ಬಿಡಲು ಗರುಡಾಸ್ತ್ರದಿಂ ಗೆಲಿಯೆ |
ಪರಿಪರಿಯ ಮುಸಲ ತೋಮರ ಮುದ್ಗರಾದ್ಯಖಿಳ ಕೈದುಗಳನೊದಗಿಸಿದರೂ ||325||
ಭಾಮಿನಿ
ಸೋಲದೀರ್ವರು ಮಲ್ಲಯುದ್ಧದಿ |
ಮೇಲೆಮೇಲಮರುತ್ತಲಿರೆ ಖಗ |
ಜಾಲದಿಂದುರುಳೈದ ವೊಲಜ ಶರದಿ ದಶಮುಖನಾ |
ಲೀಲೆಯಡಗಿಸಿ ಕದ್ದ ಕಳ್ಳನ |
ತೋಳಬಿಗಿದೊಯ್ವಂತೆ ಪಥದಿ ನ |
ಪಾಲಸಂಭ್ರಮದಿಂದ ಕುಣಿಸುತ ಪುರಕೆ ನಡೆತಂದಾ ||326||
ವೃತ್ತ
ಪರಮಾನಂದ ಚಯಾತಿ ರೇಕದಿ ಮಹಾ ನೃಪತನ್ನ ಪುರಕೊಯ್ಯಲೂ |
ಪರಿತೋಷಾಬ್ಧಿಯೊಳಾಳುತಾ ಪುರಜನಂ, ಬಂದಾತನಂ ಕಾಣಲೂ ||
ಪೊರಬಾಗಲ್ಬಳಿಯಲ್ಲಿ ರಾವಣನ ಕೈ ಕಟ್ಟಿರಿಸಿ ಸನ್ಮೋಹದಿ |
ವರಸಿಂಹಾಸನವೇರಲಂಗನೆಯರಾ | ರತಿ ಯೆತ್ತಿದರ್ತೋಷದೀ || ||327||
ರಾಗ ಢವಳಾರ ತ್ರಿವುಡೆ ತಾಳ
ಮಂಗಲ ನಪಶೇಖರ ವೈರಿಭು ||
ಜಂಗಮ ನಿಕುರುಂಬ ಖಗೇಶ್ವರ |
ತುಂಗವಿಕ್ರವನೇ ಜಯಾ ಜಯ |
ಜಯ ಜಯವೆಂದಾಡುತ ಸತಿಯರು |
ಮಂಗಳಾರತಿಯಾ ಬೆಳಗೀರೇ || ಶೋಭಾನೆ ||328||
ಪಾರಾವಾರ ಗಂಭೀರೋದ್ಧಾರಾ |
ಧೀರ ಕಪಾಕರ ಮಾರ ಶರೀರಾ |
ವೀರಾಧಿವೀರಾ ಜಯ ಜಯಾ |
ಜಯ ಜಯ ವೆಂದಾಡುತ ಸತಿಯರು |
ಮೇರುವೆಯಾರತಿಯಾ ಬೆಳಗೀರೇ || ಶೋಭಾನೆ ||329||
ಚಿತ್ರಚರಿತ್ರ ಸನ್ಮಂತ್ರ್ರಾಧಿಪ ಪುರು ಷೋತ್ತಮ
ಚಕ್ರಾಂಕಿತ ಸಂಭವ ವರ |
ಕಾರ್ತವೀರ್ಯಾರ್ಜುನನೇ ಜಯ ಜಯಾ ||
ಜಯ ಜಯವೆಂದಾಡುತ ಸತಿಯರು |
ಮುತ್ತಿನಾರತಿಯಾ ಬೆಳಗಿರೇ | ಶೋಭಾನೆ ||330||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ದಾನವ ಸೈನ್ಯ ಮರುಗುತ |
ಪತ್ತನಕೆ ನಡೆತಂದು ಮೆಲ್ಲನೆ |
ಮತ್ತೆ ಕೈಕಸೆಗುಸುರಿದರುತ ತ | ದ್ವಾರ್ತೆಗಳನೂ | ||331||
ಹೆತ್ತೊಡಲು ಮರುಕದಲಿ ಬಳಿಕಾ |
ಮತ್ತಕಾಶಿನಿ ಮಾವನಾದ ಪು |
ಲಸ್ತ್ಯನೆಡೆಗೈತಂದು ನಮಿಸುತ | ವಿಸ್ತರಿಸಲೂ ||332||
ಭರದಿ ಪೊರಟಲ್ಲಿಂದ ನೃಪಮಂ |
ದಿರಕೆ ಬರಲತಿಭಕ್ತಿಯಲಿ ಸ |
ತ್ಕರಿಸಿ ಕೈಮುಗಿದೆಂದನಾ ಮನಿ | ವರನೊಳಂದೂ ||333||
ನಿನ್ನ ದರುಶನದಿಂದ ನಾಬಹು |
ಧನ್ಯನಾದೆನುದಾವಗಮನವಿ |
ದೆನ್ನೊಡನೆ ತಿಳುಹೆನಲು ತನ್ಮುನಿ | ಸನ್ನೆಗೈದಾ ||334||
ಭಾಮಿನಿ
ಅರಸ ಕೇಳ್ ದಶಕಂಠನೆನ್ನುವ |
ತರಳ ಮಮಪೌತ್ರನು ಕಣಾಯಿ |
ನ್ನೊರವುದೇನೀಗಿವನ ಕರುಣದಿ ಬಿಟ್ಟು ಕಳುಹೆನಲೂ ||
ಭರದಿ ಕಟ್ಟಿದ ಕೈಯ ಸಡಿಲಿಸಿ |
ದುರುಳನನು ಸತ್ಕರಿಸಲವರೀ |
ರ್ವರಿಗೆ ಮಿತ್ರತ್ವವನು ಮಾಡಿದನಗ್ನಿ ಸಾಕ್ಷಿಯಲೀ ||335||
ಕಂದ
ಇಂತು ಪಿತಾಮಹನಿಂದ |
ಚಿಂತಾಬ್ಧಿಯ ದಾಟಿ ದೈತ್ಯ ಲಂಕಾಪುರಕಂ ||
ಸಂತೋಷದಿ ಬಂದಾ ನಿಜ |
ಸಂತತಿಯೊಡಗೂಡಿ ಮೆರೆದ ಭುಜವಿಕ್ರಮದೊಳ್ ||336||
ಭಾಮಿನಿ
ದಶರಥಾತ್ಮಜ ಲಾಲಿಸೈಮ |
ತ್ತಸುರಪತಿ ಮೂಜಗವ ಗೋಳ್ಗು |
ಟ್ಟೆಸುವದರಿತವನಿಯಲಿ ನೀ ಮನುಜಾವ ತಾರದಲೀ ||
ಮಸಗಿ ದೈತ್ಯರ ಪೆಸರನಡುಗಿಸಿ |
ವಸುಮತಿಯ ಪಾಲಿಸಿದೆ ತವ ಸಾ |
ಹಸವನಾ ನೆಂತೊರವೆನೆನುತಲಗಸ್ತ್ಯ ಮುನಿನುಡಿದಾ ||337||
ವಾರ್ಧಕ
ಶ್ರೀ ಮದುತ್ತರಕಾಂಡ ಕಥನ ಮಂ ಪ್ರೀತಿಯೋಳ್ |
ರಾಮನಿಗಗಸ್ತ್ಯ ಮುನಿಪೇಳ್ದುದಂ ನಿಖಿಳಜನ |
ಭೂಮಿಯೊಳಗಾಲಿಸುವ ತೆರದಿ ನಗರಾಖ್ಯಪಟ್ಟಣದಿ ಭೂಸುರಕುಲದೊಳೂ ||
ನೇಮದಿಂದೆಸೆವ ವಿಠ್ಠಲನ ಸತಿಗೌರಿ ಸು |
ಪ್ರೇಮದಿಂ ಪಡದ ಸುತ ಸುಬ್ಬಯ್ಯನೆಂಬವಂ |
ಶ್ರೀ ಮಹಾ ವೆಂಕಟಾಚಲನನು ಗ್ರಹದಿಂದಲೊರದನೀ ಸಂಗತಿಯನೂ ||338||
ರಾಗ ಆಹೇರಿ ಝಂಪೆತಾಳ
ಜಯ ಮಂಗಳಂ ಸದಾ ಶುಭ ಮಂಗಳಂ |
ಭವಾಂತು ಜಯ ಮಂಗಳಂ ||ಪ||
ಭಾಗವನುತ ನಾಮಕವಿಜನ ಸುಪ್ರೇಮ
ಕೋದಂಡರಾಮ ಬವಾಂತು ಜಯ ಮಂಗಳಂ || ||ಅ.ಪ.||
ಭೂಮಿ ಚಾರಿತ್ರ ಶೀಲರ ಮಣೀಯ ಗುಣಲೀಲಾ |
ಸಾಮಗಾನ ವಿಲೋಲಸನ್ಮಂಗಳೋ |
ದ್ಧಾಮ ನಿಧಿಕುಲ ಬಾಲಹೇ ಮುಖಚೆತ ಸುಚೇಲ |
ವ್ಯೋಮ ಚರ ಪರಿಪಾಲ ಶುಭ ಮಂಗಳಂ |
ಭವಾಂತು ಜಯ ಮಂಗಳಂ ||339||
ಅನುಪಮಾಲಂಕಾರ ಸನಕಾದಿ ಮುನಿವರ |
ವಿನುತದೀನೋದ್ಧತಜಯ ಮಂಗಳಂ ||
ದನುಜ ಮೇಘ ಸಮೀರವನಜ ಸಖ ಗಂಭೀರ |
ಕನಕ ಭೂಧರಧೀರ ಭವಂತಜಯ ಮಂಗಳಂ ||340||
ಘೋರ ದುರಿತ ವಿರಾಮ ಧಾರಾಧಿರಶ್ಯಾಮ |
ವೈರ ಸಂಕುಲಭೀಮ ಮಂಗಳಂ ||
ವೀರ ಮುಖ ಜಿತಸೋಮ | ಭೂರಿ ದೇವಲಲಾಮ |
ಚಾರು ವೆಂಕಟ ಧಾಮ | ಜಯ ಮಂಗಳಂ ಭವಾಂತು ಜಯ ಮಂಗಳಂ ||341||
ಕಂದ
ಶ್ರೀ ಕಷ್ಣಾಚ್ಚುನಿತಾಂತದೊ |
ಳೀ ಕೃತಿ ಮುದ್ರಾಪಿಸುತ್ತೆ ಪ್ರಕಟಿಸಿದಿದನುಂ ||
ಪ್ರಾಕತ ಭಾಷಾಭಿಜ್ಞರ್ |
ಸ್ವೀಕತವನು ಗೈದು ಮುದದಿ ವಾಚಿಸಲನಿಶಂ ||342||
ರಾವಣೋದ್ಭವ ಪ್ರಸಂಗವು ಸಂಪೂರ್ಣವು
Leave A Comment