ರಾಗ ಸಾರಂಗ ಅಷ್ಟತಾಳ
ನಾನೇನಹೇಳಲಮ್ಮಾ | ನೀನೆನುವಂತ |
ಸ್ವಾನುಭೋಗಗಳಿಂದಮ್ಮಾ ||
ನಾನಾದರೀಪರಿಯಾದಿಯೊಳ್ಪುರುಷನ |
ಧ್ಯಾನವಿಡಿದು ನಾನಾಯಾಸವ ಬಟ್ಟುದಾ || ನಾನೇನು ||228||
ಮಾರನೆಂಬುವನು ನಾರೀ | ಪ್ರಾಯದೊಳೆಂಥಾ |
ಕ್ರೂರನಾಗಿಹನುಮಾರೀ ||
ಸ್ತ್ರೀರಮಣರು ಕ್ಷಣಸೇರಿರದೀರ್ದರೆ |
ಸೂರೆಗೊಳ್ಳುವ ಚಮತ್ಕಾರದಿ ಚಿತ್ತವ || ನಾನೇನ ||229||
ನಿನ್ನಂತೆನಾನು ಹೆಣ್ಣೇ | ಉಪಚರಿಸುವ |
ದಿನ್ನೆರೆತು ಮೆಲುವ ಹಣ್ಣೇ |
ಸನ್ನು ತ ಫಲಪುಷ್ಪ ವನ್ನೀಯ ಬಹುದು ಮೋ |
ಹನ್ನೆಕೇಳೀಕಾರ್ಯವೆನ್ನಿಂದಾಹುದುಹ್ಯಾಗೆ || ನಾನೇನ ||230||
ಏನಾದರೇನ್ಕಾರ್ಯವೇ | ಪ್ರಾಣೇಶನು |
ತಾನೊಲಿಯದ ಸೌಖ್ಯವೇ ||
ಆ ನಕ್ಷತ್ರಗಳ ವಿತಾನದಿ ಶಶಿಯಬಿ |
ಟ್ಟಾ ನಭದಂದದಿ ಮಾನನಿಯರಬಾಳ್ವೆ || ನಾನೇನ ||231||
ವ್ಯರ್ಥ ನೀ ಮರುಗದಿರೋಬೇಗದಿ ನಿನ್ನ |
ಪೆತ್ತಯ್ಯನೊಡನುಸುರೂ ||
ಅರ್ತಿಯಿಂ ಪರಿಣಯಬಿತ್ತ್ತರಿಸುತ ಮೋಹ |
ವೆತ್ತು ಸುಖಿಸುಮತ್ತೆ ಹೊತ್ತುಗಳೆವದೇಕೆ || ನಾನೇನ ||232||
ಭಾಮಿನಿ
ಸರಸಿಜಾಂಬಕಿ ನುಡಿದ ವಚನಕೆ |
ಹರುಷಿಸುತ ಲಜ್ಜೆಯಲಿ ನಾನೆಂ |
ತೊರವೆ ಪಿತನೇನ್ಮನದಿ ತಿಳಿವನೊ ಪುರುಷನವನೆನಲೂ ||
ತರುಣಿ ಕೇಳ್ನಿಜಜನಕನಲಿ ಮ |
ತ್ತರುಹುವಡೆ ಚಂಚಲವೆ ಬೃಹಳಾ |
ಚ್ಚರಿಯವೆನಲವಳೈದಿ ಮಯನಿಂಗೆರಗಲಿಂತೆಂದಾ ||233||
ರಾಗ ಸಾಂಗತ್ಯ ರೂಪಕತಾಳ
ಬಾರವ್ವಮಗಳೆ ನಿನ್ನಾನನಬಾಡಿದ |
ಕಾರಣವೇನುಸುರಿಂದೂ ||
ದಾರೇನಂದರು ಚಿಂತಾ ಭಾರವ ಪೇಳೆನ |
ಲ್ಮೋರೆಯ ತಗ್ಗಿ ನಾಚಿಸಲೂ ||234||
ಚಿನ್ನದ ಬೊಂಬೆಯಂತೆಸೆವ ಪುತ್ರಿಯ ಕಂಡು |
ತನ್ನೊಡನೊರೆಯಲ್ಯಾಕಿನಿತೂ |
ಬಿನ್ನವೆ ಮುನ್ನಾದವಡಲದುಃಖಗಳನ್ನು |
ನಿನ್ನನೀಕ್ಷಿಸಿಮರತಿರುವೇ ||235||
ಪ್ರಾಯಸಮರ್ಥೆಯಾದುದರಿಂದಾತಕ್ಕ |
ಪ್ರೀಯನಪೇಕ್ಷೆಯೊಳಿಲ್ಲೀ |
ಆಯಾಸಗೊಂಡು ನೀ ಬಂದೆಯೋ ತಿಳುಹೆನೆ |
ತೋಯಜಾಂಬಕಿ ಪೇಳ್ದಳಾಗ ||236||
ರಾಗ ನವರೋಜು ಏಕತಾಳ
ಅಪ್ಪಯ್ಯ ನೀ ಕೇಳೂ | ನಾ | ನೊಪ್ಪುವಂದದಿ ಪೇಳೂ ||
ತಪ್ಪಾಡಿದಳೆಂ | ದಪ್ಪಳಿಸದಿರು ಸ |
ಮರ್ಪಕವಾಹಂ | ತೊಪ್ಪಿಸಿ ಕೊಡುವೆನು || ಅಪ್ಪಯ್ಯ ||237||
ಸರಸದಿ ಪುಷ್ಪದ ಲತೆಯಾ | ನೀ | ನೆರೆನೆಟ್ಟೂ ಮರೆತಿಹೆಯಾ ||
ನೆರೆದತಿ ಕೋಮಲ | ತರದೊಳು ಕುಸುಮಂ |
ಕುರಿತವಾಗಿಮೇ | ಲ್ಪರಿವುತಲಿಹುದೈ || ಅಪ್ಪಯ್ಯ ||238||
ಪತಿಯಾದ ವೃಕ್ಷದಲೀ | ಸಂ | ಗತಲೆತ್ತಾನಂದದಲೀ ||
ಜತೆಗೂಡಿಸಿ ದಂ | ಪತಿಯಂದದಿಬೆರ |
ದತಿ ಮೋಹದಿಸಂ | ತತರಂಜಿಪುದೂ || ಅಪ್ಪಯ್ಯ ||239||
ಸೂರಿ ಶ್ರೀ ಲತೆಗಳಿಗೇ | ಆ | ಧಾರಗಳಿಲ್ಲದೆ ಕಡೆಗೇ ||
ಕೋರವಿಸುವದೆ ವಿ | ಚಾರಿಸು ಲೋಕದ |
ಸಾರವನರುಹಿದೆ | ಕಾರುಣ್ಯದಲೀ || ಅಪ್ಪಯ್ಯ || ||240||
ಭಾಮಿನಿ
ಸುತೆಯ ಭಾವವ ತಿಳಿದು ಮಯ ತಾ |
ನತಿಶಯದ ವೈಭವದಿ ಪರಿಣಯ |
ಮತವನನುಕರಿಸುವೆ ವಥಾ ಚಿಂತಿಸದೆ ನಿಳಯದಲೀ ||
ಜತೆಯೊಳಿಹ ಮಾನಿನಿಯರೊಡ ನಾ |
ಡುತ ವಿಲಾಸದೊಳಿಹುದೆನಲುಮ |
ನ್ಮಥನ ಗಿಣಿಯಂತೈದಿಪೇಳ್ದಳು ಪೂರ್ವಸಖಿಯೊಡನೇ ||241||
ರಾಗ ನೀಲಾಂಬರಿ ರೂಪಕತಾಳ
ಮಾನಿನಿ ಯೇನ್ಮಾಡಲಿನೀ | ವೈನವಪೇಳೊಡನೇ |
ನಾನದ ಮರತಿರುವದಕಾ | ಮೀನಧ್ವಜಬಿಡನೇ || ಮಾನಿನಿ || ಪಲ್ಲವಿ ||
ಕನಸಿಲಿತೋರುವನಿಧಿಯೋಲ್ | ವಿನಯದಿ ಮನ್ನಿಸುವೇ |
ಎನಗಿದು ಧಿಟಕಾಣದೆಮ | ತ್ತನುದಿನ ಚಿಂತಿಸುವೇ ||
ವನಿತಾಮಣಿ ಪಿತ ಪೇಳಿದ | ದಿನವೆಂದಿಗೆ ಬಹುದೋ |
ನೆನೆಸಿದರೆದೆ ಝಲ್ಝಲ್ಲನೆ | ತನುವರ್ಧಾಗಿಹುದೋ || ಮಾನಿನಿ ||242||
ಸಲೆ ಯೌವನಕುಲರತ್ನವು | ಜಲಪರಿಯುವತೆರದೀ |
ಗೆಲವಿಲ್ಲದೆಮತ್ತದು ನಿ | ಷ್ಫಲವಾಹದು ಭರದೀ |
ಬೆಲೆಯಿತ್ತರುಬರೆದೀಗಿನ | ಕಲೆಮುಂದಕೆ ಸಖಿಯೇ |
ಕಳವಳವಾಗಿಹುದೆನ್ನಲಿ | ತಿಳಿ ಚಂದಿರಮುಖಿಯೆ || ಮಾನಿನಿ ||243||
ತದನಂತರ ನಿದ್ರಾಹಾ | ರದಿಮನವಿನಿತಿಲ್ಲ |
ಹದಮೀರಿಕ್ಷಣ ಯುಗದಂ | ದದಿ ತೋರುವುದಲ್ಲಾ |
ಹದಯದಿ ನೋಡೀ ವರುಷವು | ಹದಿನಾರರ ಭರವೂ |
ಸುದತಿಯರಿಗೆ ಬಾಧಕವಿದು | ವಿಧಿಗೇನ್ಮತ್ಸರವೂ || ಮಾನಿನಿ ||244||
ಭಾಮಿನಿ
ವಿರಹ ತಾಪವನುಸುರೆ ತನ್ಮತ |
ವರಿತು ಕಂಗೆಡಬೇಡ ತವಪಿತ |
ನೊರೆದ ನುಡಿಪುಸಿಯಹುದೆ ಲೋಕದಿಪಸಿವಧಿಕವೆಂದೂ ||
ಎರಡುಕೈಯಿಂದುಂಬುವರೆನಾ |
ಗರಿಕ ಪುರುಷನಕೂಡಿ ಸೌಖ್ಯದೊ |
ಳಿರುವೆನಿಶ್ಚಯವೆನುತ ಸಂತೈಸಿದಳು ಮಯಸುತೆಯಾ ||245||
ವಾರ್ಧಕ
ಇಂತವಳ ಸಂತೈಸುತಿರೆ ಮಯಾಸುರ ಮಗಳ |
ಚಿಂತೆಗಳನಂದು ನೋಡುತಪುತ್ರಿಬೇಗೇಳು |
ಕಾಂತನಂನೋಳ್ಪೆಬೆಂಬಿಡದೆ ನೀಬಾಯೆಂದು ಪೊರಮಟ್ಟು ಬರೆ ವನದಲೀ ||
ಸಂತೋಷವೆರದು ವನ ಬೇಟೆಯೊಳುವಿಶ್ರಮಿಸ |
ಲಾಂತೊಂದುನೆಳಲಲ್ಲಿ ಕುಂತಿರುವ ದಶಮುಖಗೆ |
ತಾಂತವಕದಿಂದೋರ್ವಚರಕಂಡು ನಮಿಸಿ ಬಳಿಕಿಂತೆಂದನಾಗಭರದಿ ||246||
ರಾಗ ಹರಾಜು ಏಕತಾಳ
ಸ್ವಾಮಿ ಪರಾಕೂ ನೋಡೂ | ಸಂಗಡಗೂಡೂ |
ಸ್ವಾಮಿ ಪರಾಕೂ ನೋಡೂ || ಪಲ್ಲವಿ ||
ಹೆಣ್ಣಿನೊಳೀಹೆಣ್ಣ | ವರಿಸಲುಬೇಕಣ್ಣ |
ಬಣ್ಣಿಸಲಾರೆಕಣ್ಣ | ಮೈಯ್ಯಂತಬಣ್ಣಾ || ಸ್ವಾಮಿ || ||247||
ಮಾರನ ಮದಕರಿ | ಮಾಜುವಳ್ಮನಬೆದರಿ |
ಯೇರು ಮದ್ದಾನೆ ಕುದುರಿ | ವಾಹ್ವಾರೆ ಚದುರಿ || ಸ್ವಾಮಿ || ||248||
ಹರೆಯದ ಮದವೇರಿ | ಹಮ್ಮಿನೊಳಿಹಪೋರಿ |
ಕರೆಸಿಕೊ ಹೊಂತಕಾರಿ | ಸ್ಮರನ ಕಠಾರೀ || ಸ್ವಾಮಿ || ||249||
ತೊಡೆಗಳೆರಡು ರಂಭೆ | ಹುಡುಗಿ ಚಿನ್ನದ ಬೊಂಬೆ |
ಕುಡಿಮೊಲೆಗಳುಲಿಂಬೆ | ಹಣ್ಣೆನೀನೆಂಬೇ || ಸ್ವಾಮಿ ||250||
ಆದರೊಂದುಂಟು ದಕ್ಷ | ಅಲ್ಲಿಹನೊಬ್ಬ ರಕ್ಷ |
ವಾದಿಸಲೇನು ಶೀಕ್ಷ | ಹಿಡಿಯವಳಪಕ್ಷಾ || ಸ್ವಾಮಿ ||251||
ಕಂದ
ಚರನಾಡಿದ ಮಾತಾಲಿಸಿ |
ದುರುಳಂ ಸ್ಮರತಾಪದಿಂದ ಮತ್ತಾಮಯಗಂ |
ಭರದಿಂ ಚಾರರ ಮುಖದಿಂ |
ಕರಸಲು ಸುತೆಸಹಿತಬರಲು ಮನ್ನಿಸಿಕೇಳ್ದಂ ||252||
ಭಾಮಿನಿ
ಎತ್ತಣಿಂದೈತಂದಿರಿಲ್ಲಿಗೆ |
ಮತ್ತೆ ನೀವಿಹದೇಶವಾವುದು |
ವಿಸ್ತರದ ಪೆಸರೇನುಗಮನವಿದೆಲ್ಲಿ ತವಕದಲೀ ||
ಚಿತ್ತಜನ ಮಸದಂಬಿನಂತಿಹ |
ಮತ್ತ ಕಾಶಿನಿದಾರು ನಿಮ್ಮಯ |
ವರ್ತಮಾನವ ಪೇಳಬೇಕೆನಲೆಂದನಾಮಯನೂ ||253||
ರಾಗ ಸಾರಂಗ ತ್ರಿವುಡೆತಾಳ
ಹೇಳುವೆದಾನವೇಂದ್ರಾ | ರಾಕ್ಷಸಕುಲ | ಪಾಲಾಬ್ಧಿ ಪೂರ್ಣಚಂದ್ರಾ |
ದಿವೌಕಸ | ವ್ಯಾಳನಿಕರ ಖಗೇಂದ್ರಾ | ಸದ್ಗುಣ ಸಾಂದ್ರಾ ||
ತಾಳಲೆನ್ನಳವಲ್ಲ ಪೂರ್ವದ |
ಬಾಳಿಕೆಯ ನುಸುರಿದರೆ ಫಲವೇನ್ |
ಛಾಳಿಯಲ್ಲಿದು ಮನದಿ ತಿಳಿ ಶಶಿ
ಮೌಳಿನಿ ರ್ದಯವಾದ ಪರಿಯನು || ಹೇಳುವೆ ||254||
ವರಹೇಮನಗರದಲೀ | ಗಂಧರ್ವಾತ್ಮಜೆಯ |
ಕರವಿಡಿದೊಲವಿನಲಿ | ರಾಜ್ಯವನಾಳು |
ತಿರಲಾಕೆಗರ್ಭದಲಿ | ಜನಿಸಿದಳು ಮರಳೀ |
ಹರುಷದಿಂದಿರಲಾಗಳಾಸತಿ |
ಪರಮಪದವಿಗೆ ಸೇರೆ ಚಿಂತಾ |
ಶರಧಿಯಲಿ ಮಳುಗುತ್ತ ಮತ್ತೀ |
ತರಳೆಯಿಂದದಮರತೆ ಮನದಲಿ || ಹೇಳುವೆ ||255||
ಪುಸಿಯ ಮಾತುಗಳೇನಲ್ಲ | ನಾಮಯನೆಂಬ |
ಪೆಸರಿಂದ ಕರೆವರೆಲ್ಲಾ | ಮಂಡೋದರಿಯೆಂ |
ದೆಸೆವ ಕನ್ನಿಕೆಗೆನಲ್ಲಾ | ಯಾರೆಂಬುದಿಲ್ಲ |
ಕುಶಲ ಪುರುಷನನೀಕ್ಷಿಸುತ್ತಲಿ |
ವಸುಧೆಗೈಯ್ಯಲು ನಿನ್ನದರುಶನ |
ವೆಸಗಿತೈದಿದ ಸಂಗತಿಯ ನಿ |
ನ್ನು ಸುರಬೇಕೆನಲೆಂದ ದಶಮುಖ | ಹೇಳುವೆ ||256||
ವಿನಯದಿ ಲಾಲಿಸಿಂದು | ನಾವಿಶ್ರವಸುವಿನ |
ತನಯ ದಶಾಸ್ಯನೆಂದೂ | ಹೇಳ್ವರು ಜಗದಿ |
ಘನಲಂಕಾಪುರದಿಬಂದೂ | ರಾಜಿಸುವೆನಿಂದೂ ||
ಮನದಿ ಮಗಬೇಟೆಯ ನಿರೀಕ್ಷಿಸಿ |
ವನಕೆ ಬಂದಿರುತಿರಲು ತವದರು |
ಶನವು ಘಟಿಸಿತು | ಪ್ರಶ್ನೆಗುತ್ತರ |
ಎನಿತು ಮಂಗಲ ಕಾರ್ಯಕಾರಣ || ||257||
ಭಾಮಿನಿ
ದಶಮುಖನ ನುಡಿಕೇಳಿಹರುಷದಿ |
ಬಿಸಜಭವನಂತಸ್ಥನಹರಾ |
ಕ್ಷಸ ಶಿರೋಮಣಿಕೀರ್ತಿಯುತ ಸಾಹಸಿಗಸಿರಿವಂತಾ ||
ಅಸಮಬಲ ನಿನಗಿನಿತು ಗುಣವಿರೆ |
ಶಶಿಮುಖಿಗೆ ಪತಿಯಾಗೆನಲು ಕಾ |
ಮಿಸಿದೆ ಕಾಮಿನಿಕಾಮುಕನು ಮಲೆಯಾಳಕೈವಂತೇ ||258||
ವಾರ್ಧಕ
ಕುಲಶೀಲ ರೂಪುಲಾವಣ್ಯಾದಿ ವಿದ್ಯದಿಂ |
ಕಳೆಯುಳ್ಳವನ ಬಿಟ್ಟು ಬದಲಳಿಯನಂ ನೋಡಿ |
ತೊಳಲಲ್ಯಾಕೆನುತತತ್ಕ್ಷಣದಿದಶಮುಖಗೆ ನಿಜಸುತೆಯನತಿಸಂಭ್ರಮದೊಳು ||
ವಲಿದು ಶುಕ್ರಾಚಾರ್ಯಮತವಿಡಿದು ಶಾಸ್ತ್ರೋಕ್ತ |
ದಲಿ ಧಾರೆಯನ್ನೆರೆಯೆ ಮಾವನಾಗಿಹಮಯಗೆ |
ತಲೆವಾಗಿ ಸರ್ವರಿಂದೊಡಗೊಡಿ ಹರುಷದಿಂ ಪುರಕೈದ ವೈಭವದೊಳು ||259||
ಈ ಪರಿಯ ವಿಭವದಿಂ ದಶಕಂಠನಧಿಕ ಪ್ರ |
ತಾಪದಿಂದಿರುತಿರಲ್ಕಾ ಬಳಿಕಲೊಂದು ದಿನ |
ಗೋಪಮುಖ ದಿಗ್ದೇಶದರಸುಗಳ ಗೆಲ್ವೆನೆಂದತ್ಯಧಿಕಹಂಕೃತಿಯೊಳೂ ||
ಆ ಪರಂಪರೆಯ ಪ್ರಧಾನರಂ ಕರೆಸಿ ಧುರ |
ಕೋಪ ಚತುರಂಗಬಲವೆರಸಿ ಸನ್ನಾಹದಿಂ |
ದಾಪರಾಕ್ರಮಿಪೊರಟನೀ ಕೇಳು ಲೋಕ ಕಂಪಿಸುವಂತೆ ದಿಗ್ವಿಜಯಕೇ ||260||
ಸುರಪನಂ ಕಂಗೆಡಿಸಿ ಶಿಖಿಯ ಘರ್ಜಿಸಿ ದಂಡ |
ಧರನಂಪಚಾರಿಸುತನಿರುತಿಯಂ ಜಡಿದು ಮೇ |
ಲ್ವರುಣಗಂಜಿಸುತಲಾ ಮರುತನಂ ಮಥಿಸಿದಂ ಧನಪಪುಷ್ಪಕವ ಕೊಂಡೂ ||
ಭರದೊಳೀಶಾನ್ಯತತ್ಕಾಳಿಕೇಯರ ಜೈಸಿ |
ಧರೆಯೊಳಿಹಚಪ್ಪನ್ನ ದೇಶಂಗಳಂ ಪೊಕ್ಕು |
ಮೆರೆದತಿವಿಲಾಸದಿಂ ಹರನನೀಕ್ಷಿಪೆನೆಂದು ಕೈಲಾಸಕೈತಂದನೂ ||261||
ರಾಗ ಭೈರವಿ ತ್ರಿವುಡೆತಾಳ
ಧೀರನಹುದೋ | ಲೋಕದಿ | ಶೂರನಹುದೊ ||
ಧೀರನಹುದೊ ಕುಬೇರಪುಷ್ಪಕ |
ವೇರಿ ಬಂದು ಪುರಾರಿ ನಿಳಯಕೆ |
ಹಾರಿಸಲು ಮುಂದೇರದಿರಲುಕ |
ಠೋರ ನಾದದಿ ಭೋರ್ಗುಡಿಸುತಿದ |
ಚಾರುಲಂಕೆಗೆ ಸೇರಿಸಿದರೀ |
ಗೌರಿಯರಸ ಮನೋರಥವದಯ |
ದೋರಿಕೊಡುವಸ ದಾಯೆನುತಲು |
ಭ್ಪೆೇರಿ ಸುಲಭವೆನುತ್ತಲಮರಿದ || ಧೀರನಹುದೋ ||262||
ಕರಿವದನ ಗುಹ ಭಂಗಿ ಭೈರವ |
ತರತರದ ಭೂತಾದಿ ನಿಜಕಿಂ |
ಕರ ನುತಿಯ ಲಾಲಿಸುತ ಗಿರಿಜೆಯ |
ಸರಸದಿಂದೆಡ ತೊಡೆಯ ಮೇಲ್ಕು |
ಳ್ಳಿರಿಸಿಕೊಳುತ ಕಪರ್ದಿ ಹರುಷದಿ |
ಮೆರೆವ ಸಮಯದೊಳೀ ನಿಶಾಚರ |
ಕರತಳದಿ ಕೀಳಲ್ಕಜಾಂಡವು |
ತರೆಹರಿಸಿ ಚಂಚಲಿಸಿತಾ ಗಿರಿ | ಧೀರನಹುದೋ ||263||
ಅದುಭುತಾರ್ಭಟೆಯಿಂದಲಾ ದಶ |
ವದನನೆತ್ತುವ ಭರಕೆ ಪಾರ್ವತಿ |
ಬೆದರಿ ಹಾಹಾ ಯೇನಿದಚ್ಚರಿ |
ಹದಯ ಬೆಚ್ಚುವದೆನುತ ವಲ್ಲಭ |
ನೆದೆಗೆ ತಕ್ಕೈಸುತಿರೆ ಪುರಹರ |
ಹದನರಿತು ನೀನಂಜ ಬೇಡೆನು |
ತಧಿಕ ಸಂಪ್ರೀತಿಯಲಿ ಮತ್ತಾ |
ಸುದತಿಯೊಡನಿಂತೆಂದನಾಕ್ಷಣ | ಧೀರನಹುದೋ ||264||
ರಾಗ ಬೇಗಡೆ ಏಕತಾಳ
ನೋಡು ನೀ ವಿಚಿತ್ರವ ನಾರೀ | ನಾ ಪೇಳ್ವೆನಿದಕೊ |
ಖೋಡಿದಶಮುಖನಾಟವದು ಗೌರೀ |
ನಾಡಜನರೂರೆಲ್ಲ ಪಂಚಂ |
ಪಾಡು ಮಾಡಿದೆನೆಂಬ ಖಾಡಾ |
ಖಾಡಿಯಲಿ ಬಂದೀಗ ತನ್ನಯ |
ಮೋಡಿಯೆನ್ನಲಿ ತೋರಬಂದಿಹ || ನೋಡು || ||265||
ಭೀಮಬಲಜಯ ವಿಜಯರೆಂಬಟರೂ | ಇವರಿರ್ವರಾದಿಯೊ |
ಳಾಮುಕುಂದ ಕವಾಟ ಪಾಲಕರೂ |
ಮಾ ಮನೋಹರನಲ್ಲಿ ಯೋಗಿಲ |
ಲಾಮ ಸನಕ ಸನಂದನರು ಬರ |
ಲಾಮಹಿಮರೆಡೆಯಲ್ಲಿ ತಡೆಯಲು |
ನೇಮಿಸಿದರುರುಶಾಪವವರಿಗೆ || ನೋಡು ||266||
ಅತ್ತು ಮರಗುತ ದೂರಲಚ್ಚುತಗೇ | ಜನುಮತ್ರಯದೊಳ್ |
ಮತ್ತ ದಾನವರಾಗಿ ನೀವ್ಕಡೆಗೇ |
ಮತ್ಸಮೀಪಕೆ ಸೇರುವಂದವ |
ಬಿತ್ತರಿಸೆ ಮೊದಲೊಂದು ಜನ್ಮವ |
ನುತ್ತರಿಸಿದಶಕಂಠನಿವತಾ |
ನೊತ್ತಿನವ ಕಲಿಕುಂಭಕರ್ನನು || ನೋಡು ||267||
ವಾರಿಜಾಸನ ವಂಶಸಂಭವರೂ | ಆ ವಿಶ್ರವಸುಸುಕು |
ಮಾರರೀರ್ವರು ಪೂರ್ಣಬಲಯುತರೂ |
ಚಾರುಧನಪನ ಪುಷ್ಪಕವಮಿಗೆ |
ಸೂರೆಗೊಂಡೇರುತ್ತ ಭರದಿಂ |
ದೀ ರಜತಗಿರಿಗೈಯೆ ರಥ ಹಿಂ |
ಜಾರಿ ನಿಲಲದ ಕಂಡು ಖತಿಯಲಿ || ನೋಡು ||268||
ಶೈಲಮೂಲವ ಕಿತ್ತುಕೊಂಡಿಂದೂ | ಆ ಲಂಕೆಗಿರಿಸಿದ |
ಮೇಲೆ ದಾರಿಂದಾಹದೇನೆಂದೂ |
ಕೀಳುವಾರ್ಭಟಕೀಗ ಧನುಜನ |
ಕೂಲ ಕಾರ್ಯವದೋರಿ ತತ್ಪ್ರತಿ |
ಬಾಲ ಲೀಲೆಯೊಳಾಡುವಂದದಿ |
ಲೀಲೆಯೊಳುಕುಣಿದಾಡಿಸುವೆ ಕೇಳ್ || ನೋಡು ||269||
ಭಾಮಿನಿ
ಗಿರಿಜೆಯೊಡನಿಂತುಸುರಿ ಹರಕಾ |
ಲ್ಬೆರಳನೊತ್ತಲು ಖಳನಕೈಗಳು |
ಭರದಿ ಸಿಲುಕಿ ಮಹಾಪ್ರಯಾಸದೊಳೊದರಿ ಭೋಯೆನುತಾ ||
ಮರುಗಲಿಳೆ ಕಂಪಿಸಿತು ಸುರಪಾ |
ದ್ಯರು ಬೆದರೆ ಕಂಗೆಡುತಲಿರಲಾ |
ದುರುಳಕೆಟ್ಟೆ ವಥಾಯೆನುತ ನುತಿಗೈದ ಸಾಮದಲೀ ||270||
ವೃತ್ತ
ಜಯ ಶಂಭೋ ನಿಗಮಾಗಮಾರ್ಚಿತಪದಂ ಶ್ರೀಕಂಠ ಸಾಂಬ ಪ್ರಭೋ |
ಜಯ ಗೌರೀಮುಖಪಂಕಜಾರ್ಕ ವಿಲಸ ತ್ಪಂಚಾನನಂಸದ್ವಿಭೋ ||
ಜಯ ಭಕ್ತಾಳಿಸುರೌಘಸನ್ನುತಮಹಾ ಸ್ವಾಮಿನ್ ಕಪಾಮಂದಿರಂ |
ಜಯ ನಿತ್ಯಂ ಕಲಯಾಮಿ ತತ್ತವ ಪದಂಮೂರಕ್ಷ ಸಾಕ್ಷಾತ್ಕರಂ ||271||
ವಾರ್ಧಕ
ಚಿರಕಾಲ ನರಳುತ್ತ ವಿಧವಿಧದಿ ಸಂಸ್ತುತಿಸೆ |
ಕರುಣದಿಂದಂಗುಷ್ಠಮಂ ತೆಗೆಯೆ ಹರುಷದಿಂ |
ಕರಗಳಂ ಬಿಡಿಸಿಕೊಂಡಘಹರನ ಮುಂದೈದಿ ಕೈಮುಗಿದು ಸ್ತುತಿಸುತಿರಲೂ ||
ಪುರಹರಂ ನೋಡಿ ಶಭಾಸು ಮೆಚ್ಚಿದೆ ನು ನಿ |
ನ್ನುರುತರ ಮಹಾರವಕೆ ರಾವಣಾಖ್ಯವನಿತ್ತೆ |
ಭರದೊಳೀ ಚಂದ್ರಹಾಸವ ಕೊಂಡು ಪೋಗೆನಲ್ ಪೊರಟು ಹಿಮಗಿರಿಗೈದನೂ ||272||
ಭಾಮಿನಿ
ಚಾರು ಹಿಮವದ್ಗಿರಿಯ ತಡಿಯೊಳು |
ವೀರತಪದಿ ವಿರಾಜಿಸುವವೈ |
ಯ್ಯರ ದ ಬಲೆಯ ಕಂಡು ರಾವಣನಿಂದು ಬೆರಗಾಗೀ ||
ಮಾರನಂಬಿನ ಘಾಯದಲಿ ಮನ |
ವೂರಿತನ್ನಾರಿಯ ಸಮೀಪಕೆ |
ಸೇರಿಮೆಲ್ಲನೆ ನಗುತ ಪೇಳ್ದನು ವಿನಯ ಪರನಾಗೀ | ||273||
ರಾಗ ಶಂಕರಾಭರಣ ಅಷ್ಟತಾಳ
ಮಾತಾಡೇ | ಪ್ರೀತಿಯೊಳು ಕಣ್ದೆರದೊಂದು | ಮಾತಾಡೆ || || ಪ ||
ಮಾತಾಡೆ ಮಾನಿನಿ | ಜಾತಿ ಶಿಖಾಮಣಿ || ಮಾತಾಡೆ || || ಅನುಪಲ್ಲವಿ ||
ಮಾರನರ್ಧಾಂಗಿಯಂತಿರುವೇ | ಶಂ |
ಗಾರದ ಕಾಂತಿಯೋಳ್ಮೆರವೆ | ಪ್ರಾಯ |
ವೇರುವದಿನಕಿದು ತರವೇ | ವೈ |
ಯಾರದ ಹರೆಯವೇನ್ ಸ್ಥಿರವೇ | ಮುದ್ದು
ನಾರಿ ನೋಡಿನ್ನಾರಭಾರವೆನ್ನದುದಯ |
ದೋರಿ ತೋಶದಲಿ ಶ | ರೀರವ ದಣಿಸದೇ | ಮಾತಾಡೆ ||274||
ನೀದಾರು ಪೆಸರೇನ್ಪ್ರವೀಣೇ | ಜ್ಞಾನ |
ಸಾಧನ ಹೀಗಲ್ಲ ಕಾಣೇ | ಚಿತ್ತ |
ಭೇದವೆಣಿಸದಿರೆನ್ನಾಣೇ | ನಾನಿ |
ನ್ನಾದರ ವೆರಸುವೆ ಕಾಣೀ | ಪ್ರತಿ |
ವಾದಿಸದೆನಗೆ ಸ | ಮಾಧಾನವಪ್ಪಂತೆ |
ಕ್ರೋಧವೆಸಗದನು | ವಾದ ಸಮ್ಮೋದದಿ || ಮಾತಾಡೆ ||275||
ಕಂದ
ಆಸತಿ ನಿಜ ದೃಷ್ಟಿಯ ತ |
ನ್ನಾಸಾಗ್ರದೊಳಿಟ್ಟು ಹರಿಯ ಭಜಿಸುವ ಭರದೊಳ್ |
ಮೋಸವಿದೆಂದರಿಯದೆ ಸಂ |
ತೈಸುತ ದಶಕಂಠಗೊರೆದಳಾತ್ಮಸ್ಥಿತಿಯಂ ||276||
ರಾಗ ತುಜಾವಂತು ಝಂಪೆತಾಳ
ಯಾಕಿನಿತು ನೀ ಕೇಳ್ವುದೇನುವದೇನಣ್ಣಾ |
ಬೇಕಾದವರಿಗುಸುರು ಬಳಲಿಪರು ನಿನ್ನಾ || ಯಾಕಿನಿತು || || ಪ ||
ಸುರಗುರುವಿನಾತ್ಮಸಂಭವ ಕುಶಧ್ವಜನೆಂಬ |
ಧರಣಿಸುರಶ್ರೇಷ್ಠನತಿ ನಿಗಮಾಗಮದಲೀ |
ಎರಡನೆಯ ಬ್ರಹ್ಮನೆಂದೆನಿಸಿ ನಿಜ ಶಿಷ್ಯರಿಗೆ |
ವರ ಜಪಾ ಪಾಠಗಳನೊರವ ಸಮಯದಲೀ || ಯಾಕಿನಿತು ||277||
ತದ್ವೇದ ಮುಖದಿ ನಾ ಜನಿಸಿರುವ ಕಾರಣದಿ |
ವಿದ್ವಾನುಗಳು ವೇದವತಿಯೆಂಬರೂ |
ಸದ್ವಚನದಿಂ ಕರೆಯೆ ತದನಂತರದಿಜನರು |
ಮದ್ವಿವಾಹವ ಬಯಸಿ ಬಂದೊರೆಯಲಂದೂ || ಯಾಕಿನಿತು ||278||
ಪಿತ ಕೇಳಿ ಹರಿಯೆ ತನ್ನಳಿಯ ಹೊರತನ್ಯರಿಗೆ |
ಸುತೆಯ ಕೊಡೆನೆನುತ ನಿಶ್ಚೈಸಿರಲು ಮರಳೀ |
ಅತಿಬಲಾನ್ವಿತ ಶಂಭುವೆಂಬ ದಾನವ ಬಂದು |
ಹತಗೈದ ನೆನ್ನ ಮೇಲ್ಮನವನಿಟ್ಟವನಾ || ಯಾಕಿನಿತು ||279||
ಜನಕನ ಪ್ರತಿಜ್ಞೆಯನು ಪೂರೈಸಬೇಕೆನುತ |
ಲಿನಿತನುಷ್ಠಾನ ಪೂರ್ವಕ ತಪದೊಳಿರುವೇ |
ವನಜಾಕ್ಷ್ಯ ದಯದೊಳಿನ್ನೆಂದೊಲಿವನೋ ತಿಳಿಯೆ |
ನೆನಲೆಂದನಾಗ ದಶವದನ ಕಾತುರದಿ || ಯಾಕಿನಿತು ||280||
ರಾಗ ಸಾವೇರಿ ಅಷ್ಟತಾಳ
ಅಹಹ ಯೇನೊರೆವೆನಾನೂ | ಮಾನಿನಿರನ್ನೆ |
ಗ್ರಹಿಸೀಗ ಮನದಿ ನೀನೂ |
ವಿಹಿತವಲ್ಲಿದು ಕೋಟ್ಯಾಂತರ ಹೊನ್ನಿತ್ತರು ಪ್ರಾಯ |
ಬಹುದೆ ಹಿಂತಿರುಗಿ ಜಾಣೇ | ಪ್ರವೀಣೇ || ||281||
ಆ ಪೋರ ಕೃಷ್ಣ ನೆಲ್ಲೀ | ಕೇಳ್ನಿನ್ನಂಥ |
ರೂಪಿನ ತರುಣಿ ಯೆಲ್ಲಿ |
ಕಾಪುರುಷರಲಿ ಮತ್ತಾ ಪಂಚಶರನ ಸಂ |
ತಾಪವುಡಗುತಿಹುದೇ | ಸುಖ ಬಹುದೇ || ||282||
ತಟ್ಟನೆ ಶ್ರಮವ ನೀಗಿ | ಆಮೇಲೆನ್ನ |
ಪಟ್ಟದ ರಾಣಿಯಾಗೀ |
ಅಷ್ಟ ಭೋಗದೊಳಳ ವಟ್ಟು ಮನ್ನಿಸು ನಿನ್ನ |
ಕಷ್ಟವ ನೋಡಲಾರೆ | ಯೇ ನೀರೇ || ||283||
ಈರೇಳು ಭುವನದಲೀ | ಸ್ತ್ರೀಯರು ತನ್ನ |
ಹಾರೈಪರೊಲವಿನಲ್ಲೀ |
ನಾರಿಕೇಳ್ವೀರಾಧಿವೀರ ರಾವಣನೆಂಬ |
ಪೌರುಷ ಪೆಸರಿಹುದೂ | ಜೋಡಹುದೂ || ||284||
ಕಂದ
ವಿಪರೀತದ ನುಡಿಯಾಲಿಸಿ |
ತಪದುರಿಯೊಂದಾಗಿ ನಿಂದು ಧಗಧಗಿಸುವ ವೋಲ್ ||
ಕುಪಿತಾಕಾರದಿ ದೈತ್ಯನ |
ಲಪನವನೀಕ್ಷಿಸುತ ಪೇಳ್ದಳತಿ ನಿಷ್ಠುರದೊಳ್ ||285||
Leave A Comment