ರಾಗ ಬೇಗಡೆ ಅಷ್ಟತಾಳ

ಸದರವಲ್ಲಿದು ಕೇಳು ದಶವದನ | ಕಾಳಗಚಮತ್ಕೃತಿ |
ಚದುರತೆಯು ಬೇರಿಪ್ಪುದಾ ಹದನ ||
ಮದಮುಖತ್ವದಿ ಪುದಿದು ತಾ ನಿ |
ನ್ನಧಿಕ ಸಾಹಸಿಯೆಂದು ಸತಿಯರ |
ಬೆದರಿಸುತ ಕಳವಿನೊಳು ತರುವೀ |
ಯದಮತನವಿದರೊಳಗೆ ಸಲುವುದೆ ||180||

ಹತ್ತು ತಲೆ ಇಪ್ಪತ್ತು ತೋಳುಗಳು | ಕಾಣಲ್ಕೆ ಬಹು ಸ |
ತ್ತ್ವಾತಿಶಯದಿಂದಿರುವ ಕಟ್ಟಾಳು ||
ಸುತ್ತಿರುವ ಸಾಗರವು ಭೂಮಿಯ |
ನುತ್ತಮದ ಕುಲವನಿಮಿಷರ ನು |
ಗ್ಗೊತ್ತಿದತಿಶಯ ಬಲವುಬಲುಸುಖ |
ವೆತ್ತಿರುವ ಸಂಪತ್ತು ಶೀಲನೆ ||181||

ಪರ ವನಿತೆಯರಿಗಳುಕಬಹುದೇನೈ | ಸಮಸ್ತ ಶಾಸ್ತ್ರವ |
ನರಿತ ಪಂಡಿತನಲ್ಲವೇ ನೀನೈ |
ವರಮಹಾ ಪೌರಾಣ ಮತಗಳ |
ಪರಮ ವೇದಾಂತಾದಿ ಶ್ರುತಿಗಳ |
ಪರಿಯನರಿತಾಚಾರ್ಯ ಪದವಿಗೆ |
ಸರಿಬಹುದೆ ತಸ್ಕರದ ವಿದ್ಯವು ||182||

ಸಾರಿ ಕೊಲ್ಲಲು ಪಾಪವಿಲ್ಲೆಂದು | ಹೇಳುತಿಹ ಗಾದೆಯು |
ಚಾರುತರ ಶತಿವಾಕ್ಯಕದು ಮುಂದು |
ಸಾರಿ ಹೇಳಿದೆ ಮೂರುಬಾರಿಗೆ |
ದೂರಲಾಗದು ಸುರರೆನುತ ನಾ |
ಸಾರಿದೆನು ನೀ ಪೋಗು ಸುಮ್ಮನೆ |
ದಾರಿಹಿಡಿ ಈ ಸಾರಿ ಬಿಟ್ಟೆನು ||183||

ಸೋಕುವುದೆ ಪರನಿಂದೆ ನಮಗಿನ್ನು | ಲೋಕತ್ರಯದೊಳಿಹ |
ನೇಕದುಷ್ಟರ ಸದೆವ ಬಗೆಗಿನ್ನು |
ಏಕವಚನವು ಏಕಮಾರ್ಗಣ |
ಏಕಪತ್ನೀವ್ರತವು ಬಳಿಕಿ |
ನ್ನೇಕ ನಿಶ್ಚಯಬುದ್ಧಿ ಕೇಳಿ |
ಕ್ಷ್ವಾಕುವಂಶದ ಮಾತುಗಳ ಬಗೆ ||184||

ಭಾಮಿನಿ

ಎಂದು ಪೇಳ್ದಾ ರಾಘವೇಶ್ವರ |
ನೊಂದು ಬಾಣವನೆಸೆಯಲಾ ಶರ |
ಮಂದಮತಿಯನು ಕೊಂಡು ಪೋದುದು ಮಯಸುತೆಯ ಗಹಕೆ ||
ಹೊಂದಿಸುತ ಶರಬಂದು ಮೂಡಿಗೆ |
ಗಂದು ಸೇರಲು ಸುರರು ಜಯ ಜಯ |
ವೆಂದು ಪೊಗಳಿದರಸ್ತ್ರದೀಕ್ಷಾಚಾರ್ಯ ರಘುವರನ ||185||

ಕಂದ

ಅನುಜನ ಶೋಕದಿ ರಾಘವ |
ವನಜಾಸನಸುತನೊಡಗೊಂಡಾ ಮಾರುತಿಯಂ ||
ಕ್ಷಣದೊಳ್ ಕರೆದಾತನ ಕೂ |
ಡಿನಿತವರ್ ಬರುತಿರೆ ಕಂಡನು ಸಹಭವನಿರವಂ ||186||

ಭಾಮಿನಿ

ಕಮಲಭವನಸ್ತ್ರದಲಿ ಕುಂದಿದ |
ವಿಮಲಕಾಯನನೀಕ್ಷಿಸುತಲಾ |
ಸುಮನಸರು ಬೆರಗಾಗೆ ತಮ್ಮನ ನೆಗಹಿ ಮುದ್ದಿಸುತ |
ಅಮಮ ಸಹಜನೆ ಅಗಲಿದೆಯ ಹಾ |
ಕುಮತಿ ರಕ್ಕಸನಸ್ತ್ರಹತಿಯಲಿ |
ಅಮಿತ ವಿಕ್ರಮ ಬಸವಳಿದೆಯಾ ಎನುತ ಚಿಂತಿಸಿದ ||187||

ರಾಗ ಆನಂದ ಭೈರವಿ ರೂಪಕತಾಳ

ಅಗ್ರಜನಾದೆನ್ನೊಳಗ | ತ್ಯುಗ್ರತೆ ಪುಟ್ಟಿದುದ್ಯಾತಕೆ |
ಶೀಘ್ರದೊಳತಿಹಿತ ವಾಕ್ಯವ | ನುಗ್ರಹಿಸೆಲೊ ಅನುಜ ||
ಆಗ್ರಹದಿಂದಾ ಖೂಳನ | ನಿಗ್ರಹಕೆನುತಲೆ ಪೋಗಿಯೆ ||
ವಿಗ್ರಹದಲಿ ಮಡಿದೆಯ ಕದ | ನಾಗ್ರಣಿ ನೀನಿಂದು ||188||

ಯಾತಕೆ ಕಳುಹಿದೆ ಕಲಹಕೆ | ನೀತಿಯೆ ನಾಮಾಡಿದ ಪರಿ |
ಮಾತಿಗೆ ಸಿಲುಕಿದೆನಲ್ಲದೆ | ಭೂತಳವಿರುವನಕ ||
ಪ್ರೀತಿಯ ಚಿಕ್ಕವ್ವೆಗೆ ನಾ | ನೇತರ ಮಾತುಸಿರಲಿ ಹಾ |
ಹೇತುಗನಾದೆನು ಲೋಕದಿ | ಸೀತೆಯ ಬಗೆಗಾಗಿ ||189||

ಘನವಾದಡವಿಯೊಳೈದಿದೆ | ದಣಿಯುತ ಹಸಿತಷೆಯಿಂದಲಿ |
ಇನಿತಾದರು ಮಮ ಸೇವೆಯ | ನನುಕರಿಸಿದೆಯಲ್ಲೆ ||
ವನದೊಳಗಾದಿನ ಸುಮ್ಮನೆ | ುುನಿಸಿಲಿ ಪೇಳಿದ ರೀತಿಯ |
ನೆಣಿಸುತ ಕೋಪದೊಳಿರುವೆಯೊ | ಅನುಜಾತನೆಪೇಳು ||190||

ಜನಕನ ತೆರದೊಳು ಪಾಲನೆ | ಮನದೊಳು ಸದ್ಗುರು ಭಾವನೆ |
ವಿನಯದೊಳತಿಹಿತ ಸೇವನೆ | ಯನು ಗೈಯ್ಯುವ ರಚನೆ |
ಧನುಜಕುಲಾಂತಕ ವೀರನೆ | ಘನಮಹಿಮನೆ ಸುಚರಿತ್ರನೆ |
ಮನುಮಥ ರೂಪನೆ ಎನ್ನಯ | ತನುವಿಂಗತಿಹಿತನೆ ||191||

ಭಾಮಿನಿ

ಏನುಫಲ ರಾವಣನ ಕೊಂದಿ |
ನ್ನೇನುಫಲ ಸೀತೆಯನು ತಂದಿ |
ನ್ನೇನು ಫಲ ಸುಗ್ರೀವ ಮುಖ್ಯರ ಸಖ್ಯತನದಿಂದ ||
ಭಾನುವಂಶಾಂಭುಧಿಯ ತ್ರೈಶಿರ |
ಭಾನು ನೀನಳಿಯಲ್ಕೆ ಎನಗಿ |
ನ್ನೇನು ಗತಿ ಪರಬ್ರಹ್ಮಹಾ ಎಂದಳಲಿದನು ರಾಮ ||192||

ಕಂದ

ಅನುಜನ ನೆನೆನೆನೆದಳಲುವ |
ಮನುಮಥನಯ್ಯನ ಕಂಡಾ ಜಾಂಬವ ದೇವಂ |
ಘನವೇಗದೊಳೈತಂದಾ |
ವನಜಾಂಬಕನಡಿಗೆರಗುತ ಪೇಳಿದ ನಾಗಳ್ ||193||

ರಾಗ ಮಧ್ಯಮಾವತಿ ಏಕತಾಳ

ಕ್ಷೀರ ಸಾಗರವಾಸ ತ್ರೈಜಗಧೀಶ |
ಮಾರಮಣನೆ ಸದ್ವಿಲಾಸ ಮಹೇಶ ||
ನೀರಜನಯನ ನಿರ್ಗುಣಸತ್ಯಸದನ |
ಘೋರ ಭವಾಬ್ಧಿತಾರಣ ವಿಶ್ವಭರಣ ||194||

ಜೀಯ ಬಿನ್ನಪವಿದ ಲಾಲಿಸಿ ಕೇಳು |
ಮಾಯಾಮಾನುಷನಲ್ಲೊನೀನು ಕಪಾಳು ||
ಆಯಾಸಬಡಲೋಕೊ ಮನುಜರ ತೆರದಿ |
ವಾಯುಜಾತನ ಕೂಡೆ ಬೆಸಸು ನಿಮಿಷದಿ ||195||

ಸಂಜೀವನವ ತರಲಿಂದು ಲಕ್ಷ್ಮಣನು |
ಸಂಜೀವಿಸಲು ಬಹುದಲ್ಲೊ ಕೇಳ್ ನೀನು ||
ಕಂಜಾಸನನ ಸುತನೆಂದುದ ಕೇಳಿ |
ಮಂಜುಳರೂಪನಾ ಕ್ಷಣ ಧೈರ್ಯತಾಳಿ ||196||

ರಾಗ ಭೈರವಿ ಝಂಪೆತಾಳ

ಬಾರೊ ಮುಖ್ಯಪ್ರಾಣ | ಭೂರಿ ವಿಕ್ರಮ ಸುಗುಣ |
ಪಾರ ಮಹಿಮನೆ ಜಗ | ತ್ರಾಣ ಕಪಿವರನೆ ||
ಘೋರ ವಿಧಿಶಕ್ತಿಯಲಿ | ವೀರ ಲಕ್ಷ್ಮಣ ಬಳಲಿ |
ಧಾರಿಣಿಯೊಳೊರಗಿಹನು | ದಾರ ಸಾಹಸನು ||197||

ಜೀವಿಸುವ ಬಗೆಗೆ ಸಂ | ಜೀವನವ ತಾ ಬೇಗ |
ಭಾವಿಕನೆ ನಮ್ಮುಭಯ | ಜೀವ ಹಿತಕರನೆ ||
ಈ ವಚನ ಬರಲಂದು | ಪಾವನಾತ್ಮಜ ಮುಂದು |
ಭಾವಿಸುತ್ತಿರೆರಾಮ | ದೇವನೆಂದುದನು ||198||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳುತಾ ಕ್ಷಣದೊಳಗೆ ಹರುಷವ |
ತಾಳಿ ಪವಮಾನಿಯು ತತುಕ್ಷಣ |
ನೀಲಮೇಘಶ್ಯಾಮನಂಘ್ರಿಗೆ | ಬೀಳುತೊಡನೆ ||199||

ಪೇಳಿದರೆ ಜಾಂಬವನು ಪರ್ವತ |
ಕೀಳಲಾಗದು ನಾಲುಕೌಷಧ |
ಮೂಲಸಹ ತಾರೆನೆ ಪ್ರಭಂಜನ | ಬಾಲನೆಗೆದ ||200||

ಹಾರಿದನು ಗಗನದೊಳು ಪರ್ವತ |
ಕೇರಲಾಕ್ಷಣ ವನಚರರು ಬಳಿ |
ಕಾರಿಸುತ ತಂದಿತ್ತ ರೌಷಧ | ಬೇರುಸಹಿತ ||201||

ಏರಿಸುತ ಬಾಲದೊಳು ಹೊರೆಯನು |
ಧೀರನೈತರುತಿರಲಿಕಂಬರ |
ದಾರಿಯಲಿ ರಾಮನನು ಸ್ಮರಿಸುತ | ವೀರಬರಲು ||202||

ಬರಬರುತ ಸಾಕೇತ ಪುರದಲಿ |
ಭರತ ಶತ್ರುಘ್ನರನು ಕಾಣುತ |
ಲಿರದೆ ಗ್ರಹಿಸಿದ ರಾಮಲಕ್ಷ್ಮಣ | ರಿರವನಂದು ||203||

ಅರರೆ ಚೋದಿಗವೆನುತಲಾಕ್ಷಣ |
ಮರುತ ಸುತನರೆಘಳಿಗೆ ಯೋಚಿಸು |
ತಿರಲು ಕೇಳೈ ಕುಶನೆ ಮುಂದಣ | ಚರಿತೆಗಳನು ||204||

ವಾರ್ಧಕ

ಇತ್ತ ಸಾಕೇತಪುರದೊಳು ಭರತನಾ ದಿನದಿ |
ಚಿತ್ತದಲಿ ಬೇಸರಿಸಿ ನಿದ್ರೆ ಗೈದಿರಲಾಗ |
ಅತ್ಯುಗ್ರ ಕನಸ ಕಂಡಾ ಕ್ಷಣದೊಳೇಳುತೈತಂದಿತ್ತನೋಲಗವನು ||
ಮತ್ತೆ ವಿಬುಧರ ಕರೆಸಿ ಪೇಳ್ದನಾ ಕೌತುಕುವ |
ಸತ್ತ್ವನಿಧಿ ಲಕ್ಷ್ಮಣಂ ರಣರಂಗದೊಳ್ ಮಡಿದ |
ವತ್ತಾಂತಗಳ ಕಂಡೆನಿದಕೆ ಪ್ರಾಯಶ್ಚಿತ್ತಮೇನೆಂದು ಬೆಸಗೊಳಲಿಕೆ ||205||

ರಾಗ ನೀಲಾಂಬರಿ ಏಕತಾಳ

ವಿಸ್ತರಿಸಿ ಪೇಳ್ವೆವಿಂದು | ಭರತರಾಯ | ಪ್ರಾಯ |
ಶ್ಚಿತ್ತದ ವಿಧವನೆಲ್ಲ | ಭರತರಾಯ ||
ಹೊತ್ತ ಕಳೆವುದೇತಕಿಂದು | ಭರತರಾಯ | ಶೋಕಿ |
ಸುತ್ತಲಿರುವುದುಚಿತವಲ್ಲ  | ಭರತರಾಯ ||206||

ಜಾತಕವ ನೋಡಲಿಂದು | ಭರತರಾಯ | ಧನು |
ಜಾತರಿಂದುಪದ್ರವಿಹುದು | ಭರತರಾಯ ||
ಖ್ಯಾತಿವಂತ ಬರಿಸೊ ಧನವ |  ಭರತರಾಯ | ದಾನ |
ವೀ ತತುಕ್ಷಣದೊಳು ನಡೆಸೊ | ಭರತರಾಯ ||207||

ರಾಗ ಸಾಂಗತ್ಯ ರೂಪಕತಾಳ

ಎಂದಾತನೊಳು ಪೇಳುತಂದು ಭೂಸುರರೆಲ್ಲ |
ರೊಂದಾಗಿ ಮಿಂದು ಸಂತಸದಿ ||
ಬಂದು ದಾನಗಳನೊಂದೊಂದಾಗಿ ಕೊಡುತಿರ |
ಲೆಂದರು ದ್ವಿಜರು ತತ್‌ಕ್ಷಣದಿ ||208||

ಭೂದಾನವೆಮಗೆ ದುರ್ದಾನವಾ ವಿಪ್ರಗೆ |
ಗೋಧಿಯಾ ರಾಮದೀಕ್ಷಿತಗೆ ||
ಗೋದಾನವಿದು ನಮ್ಮ ಸೋದರನಿಗೆ ತಾಪ್ಯ |
ಮಾಧವ ಪೌರಾಣಿಕರಿಗೆ ||209||

ಭಂಗಾರ ನಮ್ಮಯ ಸುತನಿಗೀವುದು ಯೋಗ್ಯ |
ರಂಗ ಜೋಯಿಸಗೆ ಧಾನ್ಯಗಳು ||
ಸಿಂಗಾವಧಾನಿಗೆ ನಾಳಿಕೇರಗಳು ಕಾ |
ಳಿಂಗಪಂಡಿತಗೆ ತೇಜಿಗಳು ||210||

ಸಿದ್ಧಾಂತಿ ಸುಬ್ಬಾ ಪಂಡಿತರಿಗೀವುದು ಬಹು |
ಶುದ್ಧವಾಗಿಹ ರತ್ನಾದಿಗಳ ||
ಉದ್ದವಾಚಾರ್ಯಗೆ ವಾಹನಂಗಳುನಮ್ಮ |
ಗದ್ದೆ ಶಾಸ್ತ್ರಿಗಳಿಗಾನೆಗಳು ||211||

ಪುಟ್ಟಿಬೆಲ್ಲವ ಪುಟ್ಟ ಭಟ್ಟಗೀಯಲಿ ಒಳ್ಳೆ |
ಪಟ್ಟೆದಾನವು ನಮಗಿರಲಿ ||
ಬಟ್ಟೆದಾನವು ಕುಟ್ಟೀಭಟ್ಟಗೀಯುವದೆಂದು |
ಶಿಷ್ಟರೀ ಪರಿಯಿಂದ ನುಡಿಯೆ ||212||

ತಿಲ ತೈಲ ಲವಣ ತ್ರಿಶೂಲ ಮುಂತಾಗಿಹ |
ಬಲವಾದ ದುರ್ದಾನಾದಿಗಳ ||
ಇಳೆಯಪಾಲಕನಿತ್ತು ಮನ್ನಿಸುತಿರಲಭ್ರ |
ದೊಳಗೆ ಕಂಡನು ಪ್ರಕಾಶವನು ||213||

ರಾಗ ಮಾರವಿ ಆದಿತಾಳ

ನೋಡಿದ ಹೊಳಪನು ನಭದಿ | ಇದು | ಮೂಡಿದುತ್ಪಾತವ ಜವದಿ |
ಗಾಢದಿ ಕೆಡಹುವೆನೆನುತ | ಶರ | ಬೇಡಿದನನುಜನೊಳಾತ ||214||

ಸದರದಿ ಬಾಣವ ಕೊಂಡು | ಶರ | ತುದಿಯ ಪಿಡಿಯುತಿರಲಂದು ||
ಮುದದಿಂದಂಬರ ಮಾತಾ | ಆ | ದುದ ಕೇಳಿದನಾ ಭರತ ||215||

ಭಾಮಿನಿ

ಭರತ ತೊಡಬೇಡಕಟ ಬಾಣವ |
ಪರಮ ಭಗವದ್ಭಕ್ತನಾ ರಘು |
ವರನ ಸೇವಧುರಂಧರನು ಕಮನೀಯಗುಣಭರಿತ ||
ಮರುತ ಸುತನಿವನೆನಲು ಮರಳಿದ |
ಭರದಿ ಮಂದಿರದೆಡೆಯೊಳೈತರ |
ಲಿರದೆ ಬಂದನು ರಾಮದೂತನು ವಾಯುವೇಗದಲಿ ||216||

ವಾರ್ಧಕ

ದುರುಳ ರಾವಣನಂದು ಮನಮರುಗುತಿರೆ ಗುಪ್ತ |
ಚರರ ವಾಕ್ಯವ ಕೇಳುತರಿದು ಶೋಕವ ಕೊಡಹಿ |
ಧುರದಿ ಮಡಿದವರನೆಬ್ಬಿಸಲು ಸಂಜೀವನವತರಲು ಪೋಗಿಹ ಹನುಮನ ||
ಬರವನೀಕ್ಷಿಸುತಾತನಂ ಕೊಂದು ಬಾರೆನುತ |
ಸುರವಿರೋಧಿಯು ಮಾಲ್ಯವಂತನಂ ಕಳುಹಲ್ಕೆ |
ಶರಧಿಮಧ್ಯದಿ ಪವನಜಾತನಂ ತಾಗಿದಂ ಭರಿತ ರೌದ್ರಾವೇಶದಿ ||217||

ರಾಗ ನಾದನಾಮಕ್ರಿಯೆ ಅಷ್ಟತಾಳ

ನಿಲ್ಲು ನಿಲ್ಲೆಲೊ ವಾಯುತನುಜನೆ | ನೀ |
ನೆಲ್ಲಿಗೆ ಪೋಗುವೆ ಖೂಳನೆ ||
ಬಲ್ಲೆಯಾದರೆ ರಣಕುಶಲವ | ಎ |
ನ್ನಲ್ಲಿ ತೋರಿಸು ಕೈಯ ಚಳಕವ ||218||

ಬಲ್ಲೆ ಬಲ್ಲೆನು ದಶಗಳನೆಂಬ | ದೈತ್ಯ |
ನಲ್ಲಿದ್ದು ಹೊಟ್ಟೆ ಹೊರುವ ಶುಂಭ ||
ಗೆಲ್ಲಲು ಬಂದೆಯ ತನ್ನನು | ನಿನ್ನ
ಹಲ್ಲ ಮುರಿದು ಚೆಲ್ಲ ಬಡಿವೆನು  ||219||

ಸಾಕು ಸಾಕೆಲೊ ಕೋಡಗವು ನೀನೆ | ಬಲು |
ಜೋಕೆಯಿಂ ಮಾತಾಡು ಸುಮ್ಮನೆ ||
ನೀ ಕಪಿಚೇಷ್ಟೆಯ ತೋರಲು | ನಿನ್ನ |
ಶಾಕಿನಿಬಳಗಕೀವೆನು ಕೇಳು ||220||

ಫಡ ಫಡ ಕೇಳ್ ನಿನ್ನ ಗರ್ವವ | ಲಂಕೆ |
ಯೊಡೆಯನೊಳೊರೆಯಲು ಮತ್ತವ ||
ಕೊಡುವ ಬೇಗದಿ ವೀರ ಕಂಕಣ | ಎನ್ನ |
ತಡೆಯೆ ತೋರುವೆ ಯಮಪಟ್ಟಣ ||221||

ಘುಡು ಘುಡಿಸುತ ದೈತ್ಯನುರವನ್ನು | ಬಿಡ |
ದೊಡನೆ ತಿವಿಯೆ ಮಾಲ್ಯವಂತನು ||
ಸಿಡಿದು ಪಾತಾಳದೊಳುರುಳುತ್ತ | ಬೀಳ |
ಲೊಡನೆ ಮುಷ್ಟಿಯೊಳಿಟ್ಟ ಹರಿಸುತ ||222||

ಭಾಮಿನಿ

ಖಳನ ಗೆಲಿದಾ ವಾಯುಪುತ್ರನು |
ಹೊಳೆವ ಸಂಜೀವನವು ಸಹಿತಲೆ |
ಘಳಿಲನೈತರೆ ಕಂಡು ದಭ್ರದಿ ಸೂರ್ಯನಿರುವಂತೆ ||
ಜಲಜನಾಭನು ಕಂಡು ನಿಶಿಯೊಳು |
ನಳಿನಸಖನುದಯಿಸಿದನೀತನ |
ನಿಳಿಸುವೆನು ಧರೆಗೆನುತ ಕಾರ್ಮುಕ ನೆಗಹಲನುವಾದ ||223||

ಕಂದ

ಕಾಣುತಲದನಾ ವೈದ್ಯ ಸು |
ಷೆಣನು ರಾಘವನಿದ್ದೆಡೆಗೈತಂದಾಗಳ್ ||
ಏನಿದು ದೇವನೆ ನಿನ್ನನು |
ಮಾನವು ಸರಿಯಲ್ಲೆನುತಲೆ ಪೇಳಿದ ಹದನಂ ||224||