ರಾಗ ಘಂಟಾರವ ಏಕತಾಳ

ಅರ್ಗಳರಿಪು ಸೇನೆಯನು | ಕಂಡು |
ಭೋರ್ಗರೆದಾ ರವಿಸೂನು ||
ಗರ್ಗರ ಕಡಿಯುತ ಹಲ್ಲ | ಬಲ |
ವರ್ಗವ ಪೊಗೆ ರಣಮಲ್ಲ ||113|

ಅರ್ಕತನುಜ ಕೇಳಿತ್ತ | ಕಡು |
ಮೂರ್ಖತೆಯನು ಬೀರುತ್ತ |
ಮರ್ಕಟತನ ತೋರದಿರು | ಎನ್ನ |
ಕರ್ಕಶತನಕಿದಿರಾರು ||114||

ಅಲ್ಪ ಖಳಾಧಮ ನೀನು | ಬಲ |
ಸ್ವಲ್ಪವ ಗೆಲಿದರಿನ್ನೇನು ||
ಬಲ್ಪಿನಿಂ ರಣಕನುವಾಗೆ | ನಿನ್ನ |
ತಲ್ಪಿಸುವೆನು ಯಮನೆಡೆಗೆ ||115||

ಸ್ವರ್ಗಾಧಿಪಸಹಿತಾಗಿ | ನಮ್ಮ |
ವರ್ಗಳಧಣಿಗೆ ಬೆಂಡಾಗಿ |
ಮಾರ್ಗವು ಸಿಗಲೋಡುವರು | ನಮ್ಮ |
ಮಾರ್ಗಣ ಕಿನ್ನಿದಿರ್ಯಾರು ||116||

ಎಂದು ವಿರೂಪಾಕ್ಷಕನು | ಶರ |
ವಂದವನೆಸೆಯಲ್ಕದನು ||
ಚಂದದಿ ಕಡಿಯುತ ರವಿಜ | ಬ |
ಲ್ಪಿಂದ ತಿವಿಯಲಾ ದನುಜ ||117||

ರಾಗ ಶಂಕರಾಭರಣ ಮಟ್ಟೆತಾಳ

ನೊಂದು ಚೇತರಿಸಿ ಖಳನು |
ನಿಂದು ಧೈರ್ಯದಿಂದ ರವಿಯ |
ನಂದನನಿಗೆ ದಿವ್ಯ ಸರಳ | ವಂದವೆಸೆದನು ||118||

ಚಂದದಿಂದ ಲಲಗು ಮುರಿದು |
ಮುಂದೆ ಬರುವ ಖಳನ ತಿವಿಯ |
ಲಂದು ಕೋಪದಿಂದ ತ್ರಿಶೂಲ | ದಿಂದ ಪೊಡೆಯಲು ||119||

ಬರುವ ಶೂಲಕಂಡು ರವಿಜ |
ಕರದಿ ಪಿಡಿದು ಪುಡಿಯ ಗೈಯೆ |
ಭರಿತ ಕೋಪದಿಂದ ಖಡುಗ | ಸೆಳೆದು ಧನುಜನು ||120||

ಬರಲು ಕಂಡು ರವಿಜ ರೋಷ |
ವೆರೆಸಿ ಖಡುಗವೆಳೆಯಲಾಗ |
ತ್ವರಿತದಿಂದ ಗದೆಯಕೊಂಡು | ತಿರುವುತೆಸೆಯಲು ||121||

ಸುರರು ಮೆಚ್ಚುವಂತೆ ಗದೆಯ |
ಮುರಿದು ಮುಷ್ಟಿಯಿಂದ ತಿವಿಯೆ |
ಭರದಿ ಮೂರ್ಛೆಗೊಂಡು  ಬಿದ್ಧ | ಧುರುಳ ಧರೆಯೊಳು ||122||

ಭಾಮಿನಿ

ಭಾನುಜನ ಕರಹತಿಗೆ ರಾವಣ |
ಸೂನು ಧರೆಯೊಳು ಬೀಳೆ ನಿರ್ಜರ |
ಸೇನೆ ಬೆದರುವ ತೆರದೊಳೈದಲು ರವಿಜನೆಡೆಗಾಗಿ ||
ವಾನರಾಧಿಪನಿಂಗೆ ತ್ರಿದಶರು |
ಮಾನದಿಂ ಪೂಮಳೆಯ ಕರೆಯಲು |
ದಾನವಾಧಮ ಖೂಳ ದೀರ್ಘೋಧರನು ಮಾರ್ಮಲೆತ ||123||

ರಾಗ ನಾಟಿ ರೂಪಕ ತಾಳ

ದೀರ್ಘೋದರನೆಂಬಸುರನು | ಭೋರ್ಗುಡಿಸುತಲಂದು |
ಕೂರ್ಗಣಿಯಿಂ ಕಪಿಗಳನೆಮ | ನೂರ್ಗಟ್ಟಿದ ನಂದು ||    ||ಪ||

ಅರ್ಬುದದನುಜರ ಸೇನೆಯ | ಪರ್ಟಿದ ರೋಷದಲಿ
ತರ್ಬುತಲಿನಸುತಬರುತಿರೆ | ಕರ್ಬುರನಾಚೆಯಲಿ ||
ಬರ್ಬುತಲೆ ಕಪಿಗಡಣವ | ನುರ್ಬುತ ಕೋಪದಲಿ ||
ಆರ್ಭಟಿಸುತಲೈತಂದನು | ಸ್ವರ್ಭಾನು ತೆರದಲಿ ||124||

ಹೆಕ್ಕಳಿಕೆಯ ನೇನೆಂಬೆನು | ಮುಕ್ಕಣ್ಣನ ತೆರದಿ ||
ಸಿಕ್ಕಿದ ದನುಜರನೆಲ್ಲರ | ತಿಕ್ಕಿದ ಸಾಹಸದಿ ||
ಸೊಕ್ಕಿದ ಕರಿಘಟೆಯಂದದಿ | ಲೆಕ್ಕಿಸದನಿಬರನು ||
ಧಿಕ್ಕರಿಸುತ ತಪನಾತ್ಮಜ | ಫಕ್ಕನೆ ಬರಲವನು ||125||

ಆರಲೊ ನೀ ಹುಲು ಮರ್ಕಟ | ತೋರೆಲೊ ಸಾಹಸವ ||
ಭೋರನೆ ಗಮಿಸದಿರೆನುತಲೆ | ತೂರಿದ ಬಲು ಶರವ ||
ವಾರಿಜ ಮಿತ್ರನ ಪುತ್ರನು | ಕೂರಲಗನು ಮುರಿದು ||
ಹೋರುವ ದುರುಳನ ಪಿಡಿದೆಳೆ | ದಾರುಭಟೆಸೆ ಮುಳಿದು ||126||

ರಾಗ ಭೈರವಿ ಝಂಪೆತಾಳ

ಭಣಗು ಮರ್ಕಟರ ಕುಂ | ಭಿನಿಯದಿೀಶ್ವರರುಗಳ |
ಘನ ಶೌರ್ಯ ದುಬ್ಬಟೆಗೆ | ಧನುಜರಂಜುವರೆ ||
ಮನುಮಥಾರಿಯ ಬಗೆವ | ರಲ್ಲ ಸೆಣೆಸಾಟದಲಿ |
ಬಿನುಗೆ ನೀ ನಮ್ಮವರ |  ಕೆಣಕಿ ಕೆಟ್ಟೆಯಲಾ ||127||

ನಿಮ್ಮ ಕುಲ ಧರ್ಮವದು | ಹೆಮ್ಮೆ ನುಡಿ ನುಡಿದಸುವ |
ಹಮ್ಮಯಿಸುವನಕ ಬಾ | ಯ್ಬಮ್ಮತನ ಬಿಡದು ||
ಘಮ್ಮನೀ ಪೌರುಷವ | ನಮ್ಮೊಳೆಂದೇನು ಫಲ |
ಸುಮ್ಮನಾಕಡೆ ಸಾರೊ | ಕೊಮ್ಮೆ ಬೆಳೆದಸುರ ||128||

ಮರ ಮರವ ಹಾರಿ ಪಲ್ | ಗಿರಿದು ಹಣ್ಣನು ಮೆಲುವ |
ತೆರನಲ್ಲ ರಣದೆಣಿಕೆ | ಬಿರುಸು ಕಾಣೆಲವೊ ||
ಅರುಹಿ ಫಲವೇನಿನ್ನು | ಬರಿಯ ಮರ್ಕಟಗಿದನು |
ಧುರದ ಪರಿನೋಡೆನುತ | ಭರದಿ ಕಣೆಯೆಚ್ಚ ||129||

ಬಣಗು ಧನುಜನೆ ಕೇಳು | ಕುಣಪ ಭೋಜನಗೈದು |
ಘನಚೌರ್ಯ ಬಾಯ್ಬಡುಕ | ತನದಿ ಸೊಕ್ಕಡರಿ ||
ಮನಬಂದ ರೀತಿಯೊಳು | ಕೆಣಕಿ ಬೊಗಳಲು ನಿನ್ನ |
ಕ್ಷಣದಿ ಭಂಗಿಸುವೆ ನೆಂ | ದಿನಸುತನು ಹೊಯ್ದ ||130||

ಹೊಡೆದ ಪೆಟ್ಟಿಗೆ ದ್ವೆತ್ಯ | ಗಡಬಡಿಸಿ ಮೂರ್ಛೆಗೈ |
ದೊಡನೆ ರಥದೊಳು ಬೀಳೆ | ಪಿಡಿದು ಮಷ್ಠಿಯನು ||
ಕಡುಗಿ ದಾನವರುಗಳ | ಬಡಿದು ಬರಲತ್ತಲೆಡೆ |
ಬಿಡದೆ ಮುತ್ತಿತು ದೈತ್ಯ  | ಪಡೆಯುರವಿಜನಿಗೆ ||131||

ಭಾಮಿನಿ

ಖಳರು ಮೂರ್ಛೆಯೊಳಿರಲು ದೈತ್ಯರು |
ಕಳವಳಿಸಿ ಮುತ್ತಿದರು ರವಿಜನ |
ಬೆಳೆಯೊಳೈತಂದಖಿಳ ಶಸ್ತ್ರಾಸ್ತ್ರದೊಳು ಹೆಣಗಾಡೆ |
ತಿಳಿದು ಮೂರ್ಛೆಯನನಿತರೊಳು ಖಳ |
ಕಲಿತ ರೋಷದಿ ರಾಘವೇಂದ್ರನ |
ಬಳಿಯೊಳೈತರೆ ರವಿಜ ದೀರ್ಘೋದರನ ತಡೆದೆಂದ ||132||

ರಾಗ ದೇಶಿ ಅಷ್ಟತಾಳ

ಎಲ್ಲಿಗೈದುವೆ ಫಡ ದೀರ್ಘೋದರ ದೈತ್ಯ |
ನಿಲ್ಲು ನಿಲ್ಲಲೊ ಖುಲ್ಲ ತನಗಳ |
ನೆಲ್ಲ ನಿಲಿಪೆನು ಮೆಲ್ಲನೆ ||133||

ಬಣಗು ಮರ್ಕಟ ಸೆಣೆಸುವೆಯಾ ನಿನ್ನ |
ಕಣನ ಮಧ್ಯದಿ ಶಾಕಿನೀಗಣ |
ಕುಣಬಡಿಸುವೆನು ಕ್ಷಣದಲಿ ||134||

ಯಾತುಧಾನನೆ ಹೇಡಿತನದ ನಿನ್ನ |
ಮಾತಿಗಂಜುವರಲ್ಲ ಕಪಿಭಟ |
ವ್ರಾತ ವೆಂದೆನುತೆಚ್ಚನು ||135||

ಸಾಕು ಸಾಕೆಲೊ ಪೋಕ ವಾನರ ನಿನ್ನ |
ನಾ ಕಣನ ಮಧ್ಯದಲಿ ಸೀಳ್ವೆ ಪಿ |
ನಾಕಿ ಮೆಚ್ಚುವ ತೆರದೊಳು ||136||

ಮೂಢ ದಾನವ ಹೇಡಿ ನಿನ್ನೊಳು ಮಾತ |
ನಾಡಿ ಫಲವೇನೆಂದು ಕೋಪದಿ |
ಗಾಢ ಮುಷ್ಟಿಯೊಳೆರಗಲು ||137||

ಪುಂಡ ದಾನವ ಡೆಂಡೆಣಿಸುತಲೆ ಭೂ |
ಮಂಡಲದಿ ಬೀಳಲ್ಕೆ ರಕ್ಕಸ |
ತಂಡ ಬೆದರಿತು ನಿಮಿಷದಿ ||138||

ಭಾಮಿನಿ
ಖಳ ಶಿರೋಮಣಿ ಕೂಗಿದಾರ್ಭಟೆ
ಗಿಳೆ ಮುಗುಚುವಂತಾಯ್ತು ತತ್‌ಕ್ಷಣ |
ತಳುವದಾ ದೀರ್ಘೋದರನ ಯಮಭಟರು ಕೊಂಡೊಯ್ಯೆ ||
ಕಳುಹಿದನು ಸುರಪನು ಸುಪುಷ್ಪದ |
ಹೊಳೆವ ಮಾಲೆಯನಂದು ರವಿಜಗೆ |
ತಳಿದರಾ ವಂದಾರಕರು ಸುಮವಷ್ಟಿಯನು ಧರೆಗೆ ||139||

ದ್ವಿಪದಿ

ಕುಶಲವರು ಕೇಳಿರಾ ಕಣನ ಮಧ್ಯದೊಳು |
ದಶಕಂಠನೋರ್ವ ತಾನುಳಿದ ನಂದಿನೊಳು ||140||

ರಣದಿ ಮಡಿದವರ ಕಂಡದಿಕ ಚಿಂತಿಸಿದ |
ಮನ ಮೋಹದಿಂದವರ ಗುಣವ ಯೋಚಿಸಿದ ||141||

ಸುಮನಸರ ಸಂಕುಲವ ಬಗೆವನಲ್ಲೀತ |
ಕಮನೀಯರೂಪ ಗುಣಭರಿತ ವಿಖ್ಯಾತ ||142||

ಎಂದು ಚಿಂತೆಯೊಳು ಮನನೊಂದು ಬಸವಳಿದು |
ಮಂದಮತಿ ದಶಕಂಧರನು ಕ್ಷಣದಿ ಮುಳಿದು ||143||

ಹೀರುವೆನು ಕಪಿಕಟಕದಸುವೆಂದು ಬರಲು |
ಭೂರಿ ಖತಿಯೊಳು ರಾಮನನುಜ ಮುಂಬರಲು ||144||

ಉರಿಯನುಗುಳುತ ರೋಷದಿಂದ ದಶವದನ |
ಭರದಿ ನುಡಿಸಿದ ದುರುಳನಾಗ ಲಕ್ಷ್ಮಣನ ||145||

ರಾಗ ಕಾಂಭೋಜಿ ಅಷ್ಟತಾಳ

ಹರ ಸುರಪತಿ ಬ್ರಹ್ಮ ಮುಖ್ಯರು | ಎನ್ನ |
ಧುರದೊಳು ಗೆಲುವಡಶಕ್ಯರು ||
ನರನೆ ನೀ ರಣದಿ ಬಂದಿದಿರಾದೆ | ಎನ್ನ |
ಸರಳ ಸಾರವನು ನೀನರಿಯದೆ ||146||

ಈಸು ಪರಾಕ್ರಮವಿರಲಿಕೆ | ದೈತ್ಯ |
ರಾಶಿಯ ಕೊಲಿಸಿದೆ ಯೇತಕೆ ||
ಭಾಷಿಸುವರೆ ಸತ್ತ್ವಶೀಲರು | ತಮ್ಮ |
ವಾಸಿಪಂಥವನೆಂದೂ ಹೇಳರು ||147||

ಮನುಜ ನಿನ್ನನ್ನು ಗೆಲದಿರೆ ಮುನ್ನ | ತನ್ನ |
ದನುಜರೆನ್ನುವರೆ ಲೋಕದೊಳಿನ್ನಾ ||
ಘನಪರಾಕ್ರಮಿಯಾದಡೀಕ್ಷಣ | ನೀನು |
ಕೆಣಕಿ ನೋಡಿದರೆ ಕಾಂಬುದು ಘನ ||148||

ಎನುತಮರಾರಿಯು ಬಿಲ್ಲಿಗೆ | ಕೋಲ |
ನನುಕರುಸುತ್ತಿರೆ ಹನುಮಗೆ ||
ದಿನಪ ಕುಲಜ ಕಳುಹಿದನಂದು | ತನ್ನ |
ಅನುಜನೊತ್ತಾಸೆಗೆನುತಲಂದು ||149||

ರಾಗ ಭೈರವಿ ಅಷ್ಟತಾಳ

ಮಾನವ ಹುಡುಗ ನೀನು | ಎನ್ನೊಳು ಹಾಣಾ |
ಹಾಣಿಯೊಳ್ ಮೆರೆವರೇನು ||

ತ್ರಾಣವುಳ್ಳಡೆಯೆನ್ನ ಕೂಡೆ ತೋರೆನುತಲಿ |
ಬಾಣ ವರ್ಷವ ನೆಚ್ಚನು ||150||

ಕಣೆಯ ಅಭ್ಯಾಸದೊಳು | ಪಂಡಿತನೇ ನಿ |
ನ್ನೆಣಿಸೆನು ರೋಷದೊಳು ||
ರಣದಿ ನಿನ್ನಯ ಪ್ರಾಣವೆನಗೆ ಒಪ್ಪಿಸುವೆನೆಂ |
ದಣಕಿಸಿ ಶರವಿಡಲು ||151||

ಭೋರನೈತಹ ಕೋಲ್ಗಳ | ಖಂಡಿಸಿ ಮತ್ತಾ |
ಕ್ರೂರಾಸ್ತ್ರ ಸಮೂಹಗಳ ||
ಸಾರಥಿ ಶಿರವ ರಾವಣನ ಕಿರೀಟವ |
ಚಾರು ಪತಾಕೆಗಳ ||152||

ಕಡಿದು ಲಕ್ಷ್ಮಣದೇವನು | ದಾನವನುರ
ಕಿಡಲು ದಿವ್ಯಾಸ್ತ್ರವನು ||
ಗಡ ಬಡಿಸುತ ಭಯದೊಡನೆ ಮತ್ತಾ ಖಳ |
ರೊಡೆಯನಾಚೆಗೆ ಸಾರ್ದನು ||153||

ಭಾಮಿನಿ

ಎಲವೊ ದಶಶಿರ ಕೇಳು ಪರಸತಿ |
ಗಳುಪಿ ಕೆಡಬೇಡಕಟ ಧೂರ್ತರ |
ಕುಲಕೆ ಗುರುವಾಗದಿರು ಬೇಡ ಭವಾಬ್ಧಿ ಪೋತನನು ||
ಉಳುಹುವನು ನಿನ್ನಸುವನಾತನ |
ನೊಲಿಸಿ ಶರಣವಿಭೀಷಣನ ಕೂ |
ಡಿಳೆಯ ಪಾಲಿಪುದುಚಿತವಿದು ಹಿತವಾಗದಿರೆ ಮನಕೆ ||154||

ರಾಗ ಭೈರವಿ ಏಕತಾಳ

ಭರಿಸೈ ಮಣಿಮಯ ರಥವ | ನೀ |
ತರಿಸೈ ಮುಕುಟ ಕುಂಡಲವ ||
ಧರಿಸುತ ಸೂತನ  ಕೂಡಿ | ಈ |
ಧುರಕನುವಾಗೆಲೊ ಖೋಡಿ ||155||

ಇದರೊಳಗಾವುದು ನೋಡು | ಬುಡ |
ತುದಿಯ ವಿಚಾರವ ಮಾಡು ||
ಒದಗದಿರಲು ಬಿಟ್ಟೋಡು | ನಿನ್ನ |
ಮದಮುಖತನ ನೀಗಾಡು ||156||

ಎನೆ ಕೇಳ್ದಾ ದಶಕಂಠ | ನುಡಿ |
ದನು ಕಡು ಮೂರ್ಖರ ನೆಂಟ ||
ಅನಿಮಿಷರೆದೆದಲ್ಲಣನು | ನಾ |
ನಿನಗಂಜಿದ ಮೇಲಿನ್ನು ||157||

ಧನುಜರೊಡೆಯ ತಾನೆಂತು | ಎನು |
ತನಿಮಿಷರಿಪು ಖತಿಯಾಂತು ||
ಕ್ಷಣದಿಂ ಬ್ರಹ್ಮಾಸ್ತ್ರವನು | ತೆಗೆ |
ದಿನಿತು ಬಿಲ್ಲಿಗೆ ತೊಡಲವನು ||158||

ಸ್ಮರಿಸೈ ರಾಮನ ಪದವ | ನೀ |
ಬರಿಸೈ ವಾನರ ಬಲವ ||
ಶಿರ ಕಾವವರೈತರಲಿ | ನಿ |
ನ್ನ್ಹರಣವನುಳಿಸಲಿಂದಿನಲಿ ||159||

ಎಂದಾ ಖಳ ಲಕ್ಷ್ಮಣನ | ಸುರ |
ವಂದ ಬೆದರೆ ದಶವದನ |
ಚಂದದಿ ಬ್ರಹ್ಮಾಸ್ತ್ರದೊಳು | ಬಿಡೆ |
ನೆಂದೆಸೆದನು ಖಾತಿಯೊಳು ||160||

ವಾರ್ಧಕ

ಕಿಡಿಯ ಪೇರ್ಗಣೆಗಳಿಂ ಘುಡುಘುಡಿಪ ರವಗಳಿಂ |
ಝಡಿವ ಕಾರ್ಬೊಗೆಗಳಿಂ ನಡಸಿರುವ ಪರಿಗಳಿಂ |
ಸಿಡಿಲಗರ್ಜನೆಗಳಿಂ ಘಣ ಘರ್ಣಾಕೃತಿಗಳಿಂ ವಡಬಾನಲನ ತೆರದೊಳು ||
ಮಡನ ನಿಟಿಲಾಗ್ನಿಯಂತೆಸೆವ ಬಲು ಚೋದ್ಯಮಂ |
ಕಡಲಿನಾರ್ಭಟೆಗಳಿಂದೊಡನೆ ಸುಪ್ರಭೆಗಳಿಂ |
ಹೊಡಕರಿಸುತೇಳ್ವುದಂ ಪೊಡವಿ ನಡುಗುವ ತೆರಂ ಐದುದಾ ಬ್ರಹ್ಮಾಸ್ತ್ರವು ||161||

ಭಾಮಿನಿ

ಸುರರು ಬಿಡದೋಡಿದರು ನಾಕದಿ |
ಭರದಿ ನಂದಿಯನೇರ್ದ ಶಂಕರ |
ನಿರದೆ ದುಮ್ಮಿಕ್ಕಿದನು ತನ್ನಯ ಪುರಕೆ ಚತುರಾಸ್ಯ ||
ತರಣಿ ವಂಶಜನನುಜ ಶರಹತಿ |
ಗೊರಗಿ ಮೂರ್ಛೆಯೊಳಿರಲು ರಾವಣ |
ಭರಿತ ರೋಷದೊಳೈತರುತ ಕಂಡೆಂದ ರಾಘವಗೆ ||162||

ರಾಗ ಪಂತುವರಾಳಿ ಮಟ್ಟೆತಾಳ

ಕಲಿತ ರೋಷದಿ | ಖಳನು ಶೀಘ್ರದಿ ||
ಮಲೆತು ನಿಂದ ರಾಘವೇಂದ್ರ | ನೊಡನೆತವಕದಿ ||163||

ಕಿಡಿಯನುಗುಳುತ | ಘಡ ಫಡೆನ್ನುತ ||
ಧಡಿಗನೊಡನೆನಿಂದ ಭಕ್ತ | ರೊಡೆಯ ಗಜರುತ ||164||

ಕಾಣುತಸುರನು | ಬಾಣತತಿಯನು ||
ತ್ರಾಣದಿಂದಲೆಸೆಯೆ ಚಿತ್ರ | ಭಾನುಕುಲಜನು ||165||

ಕಡಿದು ಬಾಣವ | ಬಿಡದೆ ತ್ರಾಣವ ||
ನಿಡುಸರಳ್ಗಳೆಸೆಯಲೆಂದ | ಕಡುಗಿ ದಾನವ ||166||

ಭಾಮಿನಿ

ಅರರೆ ಮಾನವ ಪತಿಯೆ ನೀ ಜಯ |
ಸಿರಿಯ ಸಾಧಿಪೆನೆನುತ ಮನದಲಿ |
ಬರಿದೆ ಯೋಚನೆಗೆಯ್ದ ಪರಿಯೇನಾಯ್ತು ಇಂದಿನಲಿ ||
ದುರುಳ ಕೇಳೆಲೊಗೆಲವಿನಬಲೆಯು |
ನಿರತ ನಿಮ್ಮೊಳು ದಢದಿ ನೆಲೆಸಿಹ |
ಪರಿಯ ತೋರ್ಪೆನೆನುತ್ತಲಿಂತೆಂದನು ಖಳಧ್ವಂಸಿ ||167||

ರಾಗ ಮಾರವಿ ಅಷ್ಟತಾಳ

ಜಾಣನಹುದೆಲವೊ | ಲೋಕದೊಳು ಸು | ತ್ರಾಣನಹುದೆಲವೊ   || ಪ ||

ಕಳವಿನೊಳ್ ಹೆಣ್ಣ ಕದ್ದೊಯ್ದ | ವಿದ್ಯ |
ತಿಳುಹಿದನಿನ್ನ್ಯಾವ ಚೋದ್ಯ ||
ಖಳಕುಲಾಧಮ ನಿನ್ನ ಚರಿತೆ ಲೋಕದೊಳೆಲ್ಲ |
ನೆಲೆಸಿಕೊಂಡಿರ್ಪುದಲ್ಲ | ಕಂಡವರೆಲ್ಲ |
ಹೊಲಸೆಂದು ಪೇಳ್ವರಲ್ಲ ದುರ್ಗುಣವ ನೀ |
ತಿಳಿದು ಮಾಡಿದೆಯ ಖುಲ್ಲ ||168||

ಮಾರ್ವಲೆತಿಹ ರಣಹೇಡಿ | ನೀ ಸ |
ದ್ಧರ್ಮ ಬುದ್ಧಿಯ ಬಿಟ್ಟ ಖೋಡಿ ||
ವರ್ಮವೆಂದೆನುತ ಸುಳ್ಳಾಡಿ ಜಟಾಯುವ |
ಶರ್ಮದಿ ಕೊಂದೆಯಲ್ಲ || ಪೂರ್ವಾಮರ |
ಧರ್ಮಕ್ಕೆ ಸರಿಯೆ ಖುಲ್ಲ || ನಿನ್ನನು ಘೋರ |
ಕರ್ಮಿಯೆಂದೆನುವರಲ್ಲ ||169||

ಭಾಮಿನಿ

ಖುಲ್ಲ ಕೇಳೆಲೋ ನೀನು ಗರ್ವದ |
ಮಲ್ಲನಲ್ಲವೆ ಲೋಕದಲಿ ಹೆಂ |
ಗಳ್ಳರಲಿ ಸುಳ್ಳರಲಿ ಜೀವದ ಕಳ್ಳರೆರವಿನಲಿ ||
ಖುಲ್ಲರಲಿ ಕುಹಕಿಗಳ ಮುಖ್ಯರೊ |
ಳೆಲ್ಲರಲಿ ನಾಕುಮಡಿಯೆಂಬುದ |
ಬಲ್ಲೆವೈ ಸಾಕಾ ಪರಾಕ್ರಮದೇಳ್ಗೆನಮ್ಮೊಡನೆ ||170||

ರಾಗ ಶಂಕರಾಭರಣ ಮಟ್ಟೆತಾಳ

ಇನಕುಲೇಶನೆಂದ ಮಾತ ಕೇಳಿ ದಶಶಿರ |
ಮುನಿಸಿನಿಂದ ಪೇಳ್ದನೆಲವೊ ಮಾನವೇಶ್ವರ ||
ಬಿನುಗೆ ನಿನ್ನ ಸಹಜನೆನ್ನ ಬಿಡದೆ ಗರ್ವದಿ |
ರಣದಿ ಮೂದಲಿಸಲಿಕವನ ತರಿದೆ ವಹಿಲದಿ ||171||

ಸುಡು ಸುಡೆಲವೊ ಪಾಪಿ ನಿನ್ನನೀಗ ರಣದಲಿ |
ಕೆಡಹಲಿಕಸಾಧ್ಯವಲ್ಲವೆನ್ನ ಶರದಲಿ ||
ಹೊಡೆಯೆ ಶರಣ ಕೋಪಿಸುವನೆನುತ್ತ ತಡೆದನು |
ಬಿಡು ಬಿಡಿನ್ನು ತಡೆಯೆ ಕೇಳು ಕಡೆಯ ಮಾತನು ||172||

ಎನ್ನ ಧುರದಿ ಕಾದಿಗೆಲುವ ಪನ್ನತಿಕೆಯನು |
ನಿನ್ನೊಳಿಲ್ಲವಾಡಲ್ಯಾತಕುನ್ನತಿಕೆಯನು ||
ಇನ್ನು ಶರಣನೆಂಬ ವಚನವನ್ನು ತೆಗೆದೆ |
ನಿನ್ನ ಮತ್ತವನ ಕೊಲುವೆನಿನ್ನು ಮುನಿದರೆ ||173||

ಮೋರೆಯಿಂದ ಧೀರತನವು ಹಾರಿಬರುವುದು |
ಆರು ಭಟೆಯು ನೋಡೆ ಬಲು ಗಭೀರವಿರ್ಪುದು ||
ವೀರತನದಿ ಕಾದುತಿರಲು ವಾರೆಪೋಪುದು |
ಶೂರತನದಿ ಗೈವ ರಣವಿಚಾರವಲ್ಲಿದು ||174||

ಸಾರು ಸಾರೆನುತ್ತಲೆಚ್ಚನೊಂದು ಬಾಣವ |
ಸಾರಥಿಯರಥಾಶ್ವ ಚಾಪ ದಿವ್ಯ ಕವಚವ ||
ಚಾರು ಕುಂಡಲಗಳು ಮುಕುಟ ಶ್ವೇತಛತ್ರವು |
ಸೂರೆಗೈಯ್ದುದಾಗ ದುರುಳನಟ್ಟಹಾಸವು ||175|

ವೀರದಶರಥೇಂದ್ರ ಸುತನ ಕೂರಲಗುವಿಗೆ |
ದಾರಿಗಾಣದಾಯ್ತು ಖೂಳ ರಾವಣೇಶಗೆ ||
ಹಾರಿಬಿದ್ದು ಧಾತ್ರಿಗೊರಗಿ ಚೇತರಿಸುತಲೆ |
ಮೋರೆ ಮೋರೆನೋಳ್ಪನಸುರನಂದು ಭ್ರಮೆಯಲೆ ||176||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನೆಲವೊ ದಶಕಂಠ ಕಡುದು |
ಮ್ಮಾನದಿಂದಲಿ ನೋಳ್ಪಪರಿಯ ನಿ |
ಧಾನವಾವುದು ಪೇಳು ನಿನ್ನಯ | ಹೀನತೆಯನು ||177||

ಜಾಣತನವೇನಾಯ್ತು ಸುಮ್ಮನೆ |
ಗೋಣತಗ್ಗಿಸಿ ನೆಲನ ನೋಳ್ಪುದು |
ದಾನವರ ರಣಕರ್ಕಶತೆಯ ವಿ | ಧಾನವೇನು ||178||

ರಥವಿಹೀನರ ಚಾಪಶರ ಸಾ |
ರಥಿವಿಹೀನರ ವಸ್ತ್ರಹೀನರ |
ಮಥಿಸುವವರಾವಲ್ಲ ರಣದಲಿ | ವ್ಯಥಿಸಲೇಕೆ ||179||