ರಾಗ ಭೈರವಿ ಏಕತಾಳ

ತರುಣಿ ಮಣಿಯೆ ಕೇಳೆ ಎನ್ನ |
ಧುರಕೆ ನಿಲುವರಾರೆ ಮುನ್ನ |
ಸುರ ನರೋರಗಾದಿ ಮುಖ್ಯ | ಧರಣಿಪಾಲರು ||58||

ಸುರರ ಸತಿಯರುಗಳು ನಮ್ಮ |
ಪರಿಜಾರಿಕೆಗಿರಲು ಬೊಮ್ಮ |
ಶರುವ ಮುಖ್ಯರೊಲುಮೆಯಿರಲು | ಅರಿಗಳೇವರು ||59||

ಅರಿಗಳಿಲ್ಲವೆಂದು ತಿಳಿದು |
ಪರರ ಲಲನೆಯನ್ನು ತಂದು |
ಕುರಿಗಳಂತೆ ಕೊಲಿಸಲೇಕೆ | ತರಳರೆಲ್ಲರ ||60||

ಮೂಲಬಲವಿನ್ನುಂಟು ಕೇಳು |
ಶೂಲಿ ಬ್ರಹ್ಮೇಂದ್ರ ಶಕ್ತಿ |
ಜಾಲದಿ ವಾನರರ ನರರ | ಕೋಳುಗೊಂಬೆನು ||61||

ಲಾಲಿಸಿ ಕೇಳಿನ್ನು ದೈತ್ಯ |
ಮೂಲಬಲ ಮುಂತಾಗಿ ಸೀತಾ |
ಲೋಲನಸ್ತ್ರ ತಾಳದೇ ನಿ | ರ್ಮೂಲವಪ್ಪುದು ||62||

ಮೂರು ಲೋಕದೊಳಗೆ ಎನ್ನ |
ವೀರತನಕೆ ಸರಿಯಾರಿನ್ನಾ |
ಮಾರ ವೈರಿ ಭಜಕನಲ್ಲೆ | ಧಾರಿಣೀಯೊಳೆ ||63||

ಪರಸತಿಯರ್ಗಳುಪಿದವನು |
ಗುರು ಹಿರಿಯರ ಜರೆಯುವವನು |
ಪರಶಿವನ ಶರಣನೆಂದು | ಧರಣಿ ಹೊರುವಳೇ ||64||

ರಾಗ ಮಧ್ಯಮಾವತಿ ತ್ರಿವುಡೆತಾಳ

ಹರನ ಬಿಲ್ಲನು ಮುರಿದು ಸೀತೆಯ |
ವರಿಸಿದವನಾರರಿಯಬಾರದೆ |
ಧುರದಿ ಮಾರೀಚಾದಿ ಮುಖ್ಯರ | ತರಿದ ಪರಿಯ ||65||

ಖರ ತ್ರಿಶಿರ ದೂಷಣ ಸುಬಾಹುಗ |
ಳಿರದೆ ಮಡಿದರು ಖಳವಿರಾಧನ |
ಪರಿಯನರಿತೀ ತೆರದಿ ಹಗೆತನ | ಧರಿಸಬಹುದೇ ||66||

ಸುರರದಲ್ಲಣ ನಿನ್ನ ತೊಟ್ಟಿಲ |
ಹುರಿಗೆ ಕಟ್ಟಿದ ವಾಲಿಯನು ಸಂ |
ಹರಿಸಿದವನಲಿ ನಿನ್ನ ವೈರವ | ಮೆರಸಬಹುದೆ ||67||

ಸೇತು ಕಟ್ಟಿದರುಂಟೆ ಮೊದಲಲಿ |
ಈ ತೆರದಿ ಮಂಗಗಳು ಕಾರ್ಯವ |
ನೋತು ಮಾಡುವದುಂಟೆ ನೀನದ | ನ್ಯಾತಕರಿಯೆ ||68||

ಕುಂಬಕರ್ಣನ ಕೊಲುವ ವೀರರು |
ಕುಂಭಿನಿಯೊಳಿಹರೇ ನಿಧಾನಿಸು |
ಜಂಭವೈರಿ ವಿರೋಧಿಯಸುವನು | ಕೊಂಬರಿಹರೇ ||69||

ಅಂಬುಜಾಸನಪಿತನು ದುಷ್ಟಕ |
ದಂಬವನು ಕೊಲಲೆಂದು ಮಾನುಷ |
ಡಿಂಬದೊಳಗಿಳೆ ಗಿಳಿದ ತಿಳಿಯೆನ | ಲಂಬುಜಾಕ್ಷಿ ||70||

ಭಾಮಿನಿ

ಹರ ಪಿತಾಮಹ ಸುರಪ ಮುಖ್ಯರ |
ಧುರಕೆ ಮಣಿದವನಲ್ಲ ದಶಶಿರ |
ಧರೆಯ ಹುಲು ನರಮನುಜನಿಗೆ ಶರಣೆನಲು ಬಳಿಕಿನ್ನು ||
ಧುರ ಪರಾಕ್ರಮಿ ಯೆಂತಹೆನು ಕೇಳ್ |
ತರುಣಿ ಲಾಲಿಸೆನಲ್ಕೆ ದುಃಖದಿ |
ಮರುಗಿ ಬಿಗಿಯಪ್ಪುತಲಿ ದಶಮುಖಗೆಂದಳಾಕಾಂತೆ ||71||

ರಾಗ ಸಾಂಗತ್ಯ ರೂಪಕತಾಳ

ಜಲದೊಳಗಡಗಿರ್ದ ಪಿಂತೆ ಅದಿಯೋಳಿತ |
ಖಳ ಶಿರೋಮಣಿ ತಮಾಸುರನ ||
ಗೆಲಿದುದಲ್ಲದೆ ಕೂರ್ಮನಾಗಿ ಮಂದರವೆತ್ತಿ |
ಒಲಿದಮರರಿಗಿತ್ತ ಸುಧೆಯ ||72||

ಕಲಿಹಿರಣ್ಯಾಕ್ಷ ಮತ್ತವನಗ್ರಜನ ಕೊಂದು |
ಬಲಿಯ ಬಂದಿಸಿ ಪಾರ್ಥಿವರನು ||
ತಲೆಗಡಿದಿವ ತನ್ನ ನಂಬಿರುವರನೆಲ್ಲ |
ನೊಲಿದು ಪಾಲಿಪ ಲಕ್ಷ್ಮೀರಮಣ ||73||

ಶರಣಾದ ಧ್ರುವನಿಗೆ ಸ್ಥಿರಪದವಿಯನಿತ್ತ
ಭರದಿ ಗಜೇಂದ್ರನ ಪೊರೆದ ||
ಕರುಣಿಸಿದನು ನಮ್ಮ ಲಂಕಾಧಿಪತ್ಯವ |
ಶರಣು ಹೊಕ್ಕರೆ ವಿಭೀಷಣಗೆ ||74||

ಅಖಿಳಾಂಡ ಕೋಟಿ ಬ್ರಹ್ಮಾಂಡನಾಯಕನೀತ |
ಮುಕುತಿದಾಯಕ ಸದ್ವಿಲಾಸ |
ಅಕಳಂಕ ಸಚ್ಚಿದಾನಂದೈಕರೂಪನು |
ಸಕಲ ಲೋಕೇಶ ಮಹೇಶ ||75||

ಸೃಷ್ಟಿಗೊಡೆಯನಾತ ದುಷ್ಟದಾನವರನ್ನು |
ಕುಟ್ಟಿ ಕೊಲ್ಲಲು ಜನಿಸಿಹನು ||
ಮುಟ್ಟಿ ವಂದಿಪರಿಗಿಷ್ಟಾರ್ಥವೀವನು ದಿಟ |
ಪಟ್ಟಾಭಿರಾಮಚಂದಿರನು ||76||

ಭಾಮಿನಿ

ಅಳಲಿದಳು ಬೇಡಕಟ ರಾಮನೊ |
ಳಳವಿಗಿದಿರಾಗದಿರೆನುತ ಬಲು |
ಬಳಲಿ ಬೆಂಡಾಗುತ್ತ ಬೇಡಲು ಚರಣದಲಿಬಿದ್ದು ||
ಬಳಿಕ ಖಳ ತಿಳಿದನು ಪತಿವ್ರತೆ |
ಲಲನೆಯಿವಳೆಂದೆನುತ ಮನದಲಿ |
ಒಲಿದು ಮಾತಾಡಿಸಿದ ರಾವಣನಧಿಕ ವಿನಯದಲಿ ||77||

ರಾಗ ಶಂಕರಾಭರಣ ಅಷ್ಟತಾಳ

ಲಾಲಿಸು | ಮಯತನುಜೆ ಮಚ್ಚರಿತವ | ಲಾಲಿಸು    ||ಪ||

ಕ್ಷೀರಾಬ್ಧಿ ಶಯನನೊಲಗದಿ | ನಾವು |
ದ್ವಾರಪಾಲಕರಾಗಿ ಮುದದೀ | ಇರೆ |
ಮಾರಮಣನ ಕಾಂಬುತ್ಸಹದಿ | ಮುನಿ ||
ಚಾರು ಸನಕ ಸನಂದನ ರೈತರೆ ಮದ |
ವೇರಿ ಧಿಕ್ಕಾರದೊಳಡ್ಡಗಟ್ಟಿದೆವೆಂದು || ಲಾಲಿಸು ||78||

ಘೋರ ರಾಕ್ಷಸರಾಗಿರೆನುತ | ರೋಷ |
ವೇರಿ ಶಪಿಸಲಾಗಿ ಇನಿತ | ನಾವು |
ದೂರಲಸುರ ವೈರಿನಗುತ | ನೀವು ||
ಮೂರು ಜನ್ಮದಿ ವೈರದೋರಿ ಮತ್ತೆನ್ನೊಳು |
ಹೋರಾಡಿ ಬನ್ನಿರೆಂದೆನುತಾಜ್ಞೆಗೈದಿಹ || ಲಾಲಿಸು ||79||

ಜಯನೆಂದು ಎನ್ನಭಿದಾನ | ಕೇಳ್ ವಿ |
ಜಯ ಕುಂಭಕರ್ಣ ಸೋದರನ | ದೇಹ |
ದ್ವಯ ಎಂದು ಕೇಳ್ ಮಧ್ಯಜನನ | ಹಿಂದೆ |
ಮಯಜೆ ಕೇಳಾ ಹಿರಣ್ಯಕ ಹಿರಣ್ಯಾಕ್ಷರಾ |
ಗಿಯೆ ಜನಿಸಿದೆನು ಮೊದಲ ಜನ್ಮವದು ಬಾಲೆ || ಲಾಲಿಸು ||80||

ಇನ್ನೊಂದು ಸಲ ದೇಹ ಧರಿಸಿ | ವೈರ |
ಪನ್ನಗಶಯನನೊಳಿರಿಸಿ | ಯುದ್ಧ |
ವನ್ನೆಸಗಲು ರೌದ್ರವೆರಸಿ | ಅಗ |
ಉನ್ನತ ಪದವಿಯ ನೈದಿ ಸಂತಸದೊಳು|
ಮುನ್ನಿನಂತಿಹೆವು ಕೇಳ್ ಪನ್ನಗನಿಭವೇಣಿ || ಲಾಲಿಸು ||81||

ಭಾಮಿನಿ

ಆಡಿ ತಪ್ಪಲು ಬಹುದೆ ಮಾತನು |
ಓಡಿ ಸಿಕ್ಕಲುಬಹುದೆ ಶಪಥದಿ |
ಕೂಡಿ ಕಾಡಲು ಬಹುದೆ ಲೋಕದೊಳಿನ್ನು ಕೇಳ್ ತರಳೆ ||
ಮಾಡಿ ಕೀಳಲು ಬಹುದೆ ಕಾರ್ಯವ |
ನಾಡ ಮಾತಲ್ಲಬಲೆ ಚಿಂತಿಸ |
ಬೇಡೆನುತ ಸಂತಯಿಸಿದನು ಮಂಡೋದರಿಯ ವ್ಯಥೆಯ ||82||

ರಾಗ ಸಾರಂಗ ಅಷ್ಟತಾಳ

ಸತಿಯ ಸಂತಯಿಸಿ ದಾನವನು | ಬಲು |
ಹಿತದಿಂದ ನಿದ್ರಗೆಯ್ದವನು |
ಅತುಳ ಬಲಾನ್ವಿತನೆದ್ದುದಯದಿ ಮಿಂದು |
ಅತಿಮುದದಿ ಪೂಜೆಯನು ವರ ಪಶು |
ಪತಿಗೆ ವಿರಚಿಸುತೆಂದನು || ಸತಿಯ ||83||

ಹರನೆ ಶಂಕರ ವಿಶ್ವಂಭರನೆ | ಗೌರೀ |
ವರನೆ ಶ್ರೀಕರ ಮಹೇಶ್ವರನೆ ||
ದುರಿತ ವಿದೂರನೆ ತ್ರಿಜಗ ಸಂರಕ್ಷಕನೆ |
ಶರಣರಕ್ಷಕನೆಂಬ ಬಿರುದನು |
ಭರದಿ ತೋರಿಸೆನುತ್ತಲಿ || ಸತಿಯ ||84||

ಕರಗಳಿಪ್ಪತ್ತ ಜೋಡಿಸಿದ | ಜಯ |
ಧುರದಿ ಕೊಡಿಸು ಎಂದೆರಗಿದ ||
ಹರುಷದೊಳಾಕ್ಷಣ ದಶಶಿರವಂಘ್ರಿಯೊ |
ಳಿರಿಸಿ ತನ್ನಿಷ್ಟವನು ಬೇಡಿದ |
ಧುರ ಪರಾಕ್ರಮಿ ದೈನ್ಯದಿ || ಸತಿಯ ||85||

ಧರೆಯೊಳೊಂದಿಸುತ ಶಂಕರನ | ತಾನು |
ಧರಿಸಿದ ಮಾಲ್ಯಾದಿ ವಸನ |
ಶಿರದೊಳ್ ಕಿರೀಟಗಳಿರಿಸುತ್ತ ಮೋದದಿ |
ಸರಸದಿಂ ಸಭೆಗೈದಿಯೋಲಗ |
ವಿರಚಿಸಿದನುತ್ಸಹದಲಿ ||86||

ವಾರ್ಧಕ

ತರಸಿದಂ ದಿಕ್ಪಾಲರಿತ್ತ ಕಪ್ಪಗಳೆಲ್ಲ |
ಹೊರಿಸಿದಂ ಭಂಡಾರದಿಂದಖಿಳ ನಾಣ್ಯಗಳ |
ಬರಿಸಿದಂ ದ್ವಿಜರ ಸಂಕುಲಗಳಂ ದಾನಗಳನಿತ್ತನೇನದ್ಭುತವದು ||
ಭರದಿ ಕಾರಾಗಹದೊಳಿರುವರಂ ತೆಗೆಸಿದಂ |
ತರತರದ ಸುಂಕಗಳ ಹರಿಸಿದಂ ಸಂತಸದಿ |
ವಿರಚಿಸಿದ ಭೂರಿ ವೈಭವವ ಪುರದಿಹಜನಕೆ ಭಾರಿ ಧನವಿತ್ತನಾಗ ||87||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದಾನವನು ಸಂತೋಷದಿಂದಲಿ |
ದಾನಧರ್ಾದಿಗಳ ನಡೆಸಿ ನಿ |
ಧಾನದಿಂ ಪ್ರಜೆಗಳಿಗುಸಿರ್ದವಿ | ಧಾನಗಳನು ||88||

ವರ ವಿಭೀಷಣ ನಿಮಗೆ ತಾನಿ |
ನ್ನರಸನಾಗುವ ಸರ್ವಹಿತದೊಳು |
ನೆರೆದು ಕಪ್ಪವ ಕೊಡುವದೆಂದನು | ಹರುಷದಿಂದ ||89||

ಸರಸದಿಂ ಸಂತಯಿಸುತವರನು |
ತರಿಸಿದನು ಮಣಿಮಯದ ರಥವನು |
ಭರದೊಳೇರಿದನಾ ದುಶಾಸ್ಯನು | ಧುರವನೆಸಗೆ ||90||

ಅನಿತರೊಳಗಷ್ಟಾದಶಾಕ್ಷೌ |
ಹಿಣಿಯ ಬಲವೈತಂದು ಕೂಡಲು |
ವನಿತೆಯರ ಸೇಸೆಯನು ಕೊಂಡಾ | ದನುಜನಾಗ ||91||

ಭರದೊಳಾ ದಿಗುತಟವ ಭೇದಿಪ |
ತೆರದೊಳೈತರುತಿರಲು ದಾನವ |
ರಿರದೆ ಭೋರ್ಗುಡಿಸುತಿರೆ ಕಹಳೆಗ | ಳೊರೆದವಂದು ||92||

ವಾರ್ಧಕ

ಕೆಲಸಾರು ಪುಣ್ಯಜನಕುಲಮೌಳಿ ಬರುತಲಿದೆ |
ಕೆಲಸಾರು ಶಂಕರಾರ್ಚಿತ ಬಿಂಬ ಬರುತಲಿದೆ |
ಕೆಲಸಾರು ಪ್ರಮುಖ ನಿರ್ಜರ ವೈರಿ ಬರುತಲಿದೆ ಯೆನುತಟ್ಟಹಾಸದಿಂದ ||
ಕೆಲಸಾರು ವೈರಿಮದಗಜಸಿಂಹ ಬರುತಲಿದೆ |
ಕೆಲಸಾರು ಸಾಮ್ರಾಜ್ಯಪದಮೂರ್ತಿ ಬರುತಲಿದೆ |
ಕೆಲಸಾರು ಮೂಲೋಕ ದಲ್ಲಣನು ಬರುತನಿದೆಯೆನುತ ಕಹಳೆಗಳುಲಿದವು ||93||

ರಾಗ ಶಂಕರಾಭರಣ ರೂಪಕತಾಳ

ಕೇಳು ಕುಶನೇ ಧನುಜ ಸೇನೆಯು | ಬರುವ ಪರಿಯ |
ಕೇಳುಕುಶನೇ ಧನುಜ ಸೇನೆಯು ||ಪ||

ವೀರ ದುರುಳೆಲ್ಲರಧಿಕ |
ಶೂರತನದೊಳಹಿತರುಗಳ |
ಸೂರೆಗೊಂಬೆವೆನುತ ಮದವ |
ನೇರಿ ಬರುವ ಸಂಭ್ರಮಗಳ || ಕೇಳು ||94||

ಪಾಠಕರುಗಳಖಿಳದನುಜ
ಕೋಟಿಗಡಣ ಬರುತಲಂದು |
ನೋಟಕರಿಗೆ ಭೀತಿಯವರ್ಗ |
ಳಾಟದಿಂದ ನಟಿಸಿತಾಗ || ಕೇಳು ||95||

ಛತ್ರ ಚಾಮರಂಗಳಿಂದ |
ಚಿತ್ರರಥದ ಗಡಣದಿಂದ |
ಧಾತ್ರಿ ನಡುಗವಂತೆ ಬರೆ ವಿ |
ಧಾತ್ರ ಮುಖ್ಯರೆಲ್ಲ ಬೆದರೆ || ಕೇಳು ||96||

ಬತ್ತೀಸಾಯುಧಗಳ ತಮ್ಮ |
ಹಸ್ತದಿಂದ ಪಿಡಿದು ರೋಷ |
ವೆತ್ತು ಮುತ್ತುತತ್ತ ಕೀಶ |
ಮೊತ್ತವ ಬೆನ್ನೊತ್ತುತಾಗ || ಕೇಳು ||97||

ಕಂದ

ಒಕ್ಕಣಿಸಲಿಕಳವಲ್ಲದ |
ಸೊಕ್ಕಿದದನುಜರ ಸೇನೆಯು ಬರೆ ಕಂಡಾಗಳ್ |
ರಕ್ಕಸವೈರಿಯು ಕೇಳಿದ |
ಅಕ್ಕರದಿಂದಲಿ ಶರಣನೊಳೀ ಹದನಗಳು ||98||

ರಾಗ ಬೇಗಡೆ ಅಷ್ಟತಾಳ

ಶರಣ ವಿಭೀಷಣ ಕೇಳೆನ್ನ ಮಾತ |
ದುರುಳರೈತಹರವರ್ಯಾರೆಂಬ ವಾರ್ತೆ ||
ಅರುಹಲು ಬೇಕು ನೀನರಿತುದನೆಲ್ಲ |
ತರಹರಿಪುದು ಕಪಿಸೇನೆ ಸುಳ್ಳಲ್ಲ ||99||

ಸುರರಭ್ರದೊಳಂಜಿದರು ಈ ಅರ್ಭಟೆಗೆ |
ಭರದೊಳೋಡಿದ ರೆಲ್ಲವರು ಕಂಡಕಡೆಗೆ ||
ಪರಮೇಷ್ಠಿ ಇವರ ಪುಟ್ಟಿಸಿದನಿನ್ನ್ಯಾಕೆ |
ಅರುಹಲಸಾಧ್ಯವಾದುದು ತಿಳಿದವರ್ಗೆ ||100||

ಏಸುಭಟರ ಕೂಡಿ ಬರುತಿಹರವರು |
ಪೋಷಿಸಿದವನಿಗೇನಾಗಬೇಕವರು ||
ದಾಸ ನೀನಿದ ಬಲ್ಲೆಯಾದರೆ ಪೇಳು |
ಈಸು ವತ್ತಾಂತವೆಲ್ಲವನು ಇಂದಿನೊಳು ||101||

ರಾಗ ನವರೋಜು ಏಕತಾಳ

ಚಿತ್ತವಿಸೈ ರಘುರಾಮ | ಪುರು | ಪೋತ್ತಮ ಸದ್ಗುಣ ಧಾಮ ||
ಹತ್ತುಗಳನಸುರ | ಮೊತ್ತದೊಡನೆಮುಂ |
ದೊತ್ತಿ ಬರುವ ಮದ | ವೆತ್ತುತ ರೋಷದಿ ||102||

ಮುಕ್ಕಣ್ಣ ನಂದದಲಿ | ಬಲು | ಸೊಕ್ಕಿರುವ ಹಮ್ಮಿನಲಿ ||
ಒಕ್ಕಣಿಸಲಿಕೆ ವಿ | ರೂಪನಯನನೆಂಬ |
ರಕ್ಕಸನಣುಗರೊಳ್ | ಚಿಕ್ಕವನೀತನು ||103||

ಸೃಷ್ಟಿ ಪಾಲಕ ಕೇಳು | ಕಡು | ದುಷ್ಟ ರಕ್ಕಸರುಗಳು ||
ಅಷ್ಟಾದಶವಕ್ಷೌಹಿಣಿ ಸೇನೆ ಸ |
ಮಷ್ಟೀಕರಿಸಿ ಬೇ | ನ್ನಟ್ಟುತೈತರುವರು ||104||

ಅರ್ಭಟೆಯಿಂದದೈತಹರು | ಬಲು | ಕರ್ಬುರ ವಂಶಗಳವರು ||
ಪರ್ಬದೆ ರೋಷವು | ತರ್ಬಿದೆ ನಮ್ಮನು |
ಮಾರ್ಬಲ ಬರೆ ಭೂ | ಗರ್ಭ ನಡುಗುತಿದೆ ||105||

ಭಾಮಿನಿ

ರಣದೊಳೀ ರಕ್ಕಸರ ಪಡೆಯೊಳು |
ಸೆಣೆಸುವರ ನಾ ಕಾಣೆ ಲೋಕದಿ |
ಇನಕುಲೇಶನೆ ಕೇಳು ಪರಸತಿಗಳುಪಿ ರಾವಣನ ||
ಮಿನುಗುವೀ ಸೈನ್ಯವಿದು ಪರರಿಗೆ |
ತೃಣಸಮಾನವಿದೆನಿಸಿತಲಯೆಂ |
ದೆನುತ ಪೇಳ್ತಿರಲಂದು ಮುತ್ತಿತು ವಾನರರ ಪಡೆಯ ||106||

ರಾಗ ಭೈರವಿ ತ್ರಿವುಡೆ ತಾಳ

ಏನನೆಂಬೆ | ಸಾಹಸ | ಕೇನನೆಂಬೆ   ||ಪ||

ಏನನೆಂಬೆನು ಮಾನವಾರಿಯ |
ಸೂನು ಚಾಪವ ಹಿಡಿಯುತ |
ಕ್ಷೋಣಿ ಬಿರಿಯುವ ತೆರದಿ ವಾನರ |
ಸೇನೆಯನು ಬಿಡದಡಚಿ ಬರುವುದ || ನೇನ ||107||

ತುಂಬಿತಾ ಖಳ ಸೇನೆ ಕೀಶಕ |
ದಂಬವನು ಪುಡಿಗೆಯ್ಯುತ ||
ಕುಂಭಿನಿಯು ಬಾಯ್ಬಿಡುವ ತೆರೆದೊಳ |
ಗಂಬುಗಳ ವಾನರರಿಗೆಸೆದುದು || ನೇನ ||108||

ಬಿದ್ದು ನಳ ಹೊರಳಿದನು ಗಾಯಕೆ |
ಮದ್ದರಸಿದ ಸುಷೇಣಕ ||
ಬಿದ್ದಿತಾ ಖಳ ಸೇನೆ ದಾನವ |
ರುದ್ಧಟಕೆ ಬಲ ಕುಗ್ಗಿದುದರೆ || ನ್ನೇನ ||109||

ಪ್ರಳಯಕಾಲದ ಸಿಡಿಲಿನಂದದಿ |
ಖಳರು ಬತ್ತೀಸಾಯುಧ ||
ಝಳಪಿಸುತ ಘುಡುಘುಡಿಸಿ ವಡಬಾ |
ನಳನ ತೆರದೊಳು ಗಜರಿ ಬರುವುದ ನೇನ ||110||

ಬಿಡದೆ ವಾನರ ಗಡಣವೆಲ್ಲವು |
ಗಡಬಡಿಸುತಾ ಖೂಳರ |
ಒಡಲ ಕೆಡಹುತಲಧಿಕ ರೋಷದಿ |
ಝಡಿದು ಬಡಿದರು ಖಳರ ಸೇನೆಯ || ಏನ ||111||

ವಾರ್ಧಕ

ಸಿಡಿದು ಕೆಡೆದಿಹ ಹೆಣನ ರುಂಡದಿಂ ಮುಂಡದಿಂ |
ಕಡಿದ್ಹೊರಳು ತೈತರುವ ಕಾಲ್ಗಳಿಂ ತೋಲ್ಗಳಿಂ |
ನಡುನಡುಗಿ ಬರುವ ಮದದಾನೆಯಿಂ ಸೇನೆಯಿ ಕುಣಿವ ಭೂತಂಗಳಿಂದ ||
ಹೊಡಕರಿಸಿ ಬಹ ಶಿರಸ್ತ್ರಾಣದಿಂ ಬಾಣದಿಂ |
ಉಡಿದು ಬಿದ್ದಿರುತಿರುವ ಶಕಟದಿಂ ಮುಕುಟದಿಂ |
ಕಡುಗಲಿಗಳೆಸಗುತಿಹ ಗುದ್ದಾಟವದ್ದಾಟದಿಂ ಸಮರಮೆಸೆದಿರ್ದುದು ||112||