ಶಾರ್ದೂಲ ವಿಕ್ರೀಡಿತಂ

ಶ್ರೀಮತ್ಸುಂದರವಿಗ್ರಹಂ ಬುಧಜನಧ್ಯೇಯಂ ಸುವರ್ಣಪ್ರಭಂ |
ಸೋಮಾದಿಗ್ರಹಮಧ್ಯಚಾನಿನಿಲಯಂ ಛಾಯಾಸತೀವಲ್ಲಭಮ್ |
ಹೇಮಾಲಂಕತಮಬ್ಜಮಿತ್ರಮಮಲಂ ಸತ್ಯಂಜಗತ್ಕಾರಣಂ |
ಭೌಮಪ್ರೀತಮಹಂ ನಮಾಮಿ ಸತತಂ ಶ್ರೀ ಸೂರ್ಯನಾರಾಯಣಮ್ ||1||

ರಾಗ ನಾಟಿ ಝಂಪೆತಾಳ

ಜಯತು ಜಯ ಮಾರ್ತಾಂಡ | ಜಯತು ಜಗದೋದ್ದಂಡ |
ಜಯತು ಜಯ ಸುರಸೇವ್ಯ | ಜಯತು ಮಹಭವ್ಯ ||ಪ||

ತ್ರಿಜಗಜನಸಂರಕ್ಷ | ತ್ರಿಜಗಾಧಿಪನ ಪಕ್ಷ |
ಅಜಮುಖ್ಯ ಸುರವಿನುತ | ಭಜಿತ ಸುಪ್ರೀತ ||2||

ಕಮಲಬಾಂಧವ ದೇವ | ಕಮನೀಯ ಕರಭಾವ |
ಕುಮುದಸಖಸುಪ್ರೀಯ | ವಿಮಲತರ ಕಾಯ ||3||

ಮೂರು ಮೂರ್ತಿಸ್ವರೂಪ | ಕಾರುಣ್ಯಗುಣದೀಪ |
ಭೂರಿನಿಗಮ ವಿನೋದ | ಸೂರಿನುತಪಾದ ||4||

ಮಾಲಿನೀ ವೃತ್ತಂ

ಸರಸಿಜದಳನೇತ್ರಂ ಚಾರುವಕ್ತ್ರಂ ಪವಿತ್ರಂ |
ಸುರಜನಪರಿಪಾಲಂ ಕಾಲಕಾಲಂ ವಿಶಾಲಂ |
ಸುರಮುನಿಜನವಂದ್ಯಂ ಸತ್ಯಸಂಧಂ ಮುಕುಂದಂ |
ಸುರಚಿರತನುಭಾಸಂ ರಾಘವೇಶಂ ಮಹೇಶಂ ||5||

ರಾಗ ಘಂಟಾರವ ಆದಿತಾಳ

ಗರುಡಗಮನ ನಿನ್ನ ಚರಣಕೊಂದಿೆ ಮುನ್ನ | ಶ್ರೀಮುಕುಂದ | ತವ |
ಶರಣರ ಸಲಹುವ ಬಿರುದ ತೋರಿಸೊ ದೇವ | ಶ್ರೀಮುಕುಂದ ||6||

ಪಂಕಚೋದ್ಭವ ತಾತ ಕಿಂಕರಜನಪ್ರೀತ | ರಕ್ಷಿಸೆನ್ನ | ಅಕ |
ಳಂಕ ಮಹಿಮ ಖಳಬಿಂಕಮರ್ದನಶೀಲ | ರಕ್ಷಿಸೆನ್ನ ||7||

ಅಜರುದ್ರ ವಂದಿತ ತ್ರಿಜಗರಕ್ಷಕ ತಾತ | ತ್ರಾಹಿ ತ್ರಾಹಿ | ದೇವ |
ಕುಜನ ಕುಠಾರನೆ ಭಜಕರಿಗೊಲಿವನೆ | ತ್ರಾಹಿ ತ್ರಾಹಿ ||8||

ಕ್ಷೀರ ಸಾಗರವಾಸ ಚಾರುಮಂಗಲಭಾಸ | ಪಾಲಿಸೆನ್ನ | ಲಕ್ಷ್ಮೀ |
ನಾರಾಯಣನೆ ದಯದೋರಿ ಶುಭೋದಯ | ಪಾಲಿಸೆನ್ನ ||9||

ರಾಗ ಸುರಟಿ ಆದಿತಾಳ

ಪಾಲಿಸು ಗಜವದನ | ಸುಗುಣವಿ | ಶಾಲ ದಯಾಸದನ ||
ಬಾಲೆ ಗಿರಿಜೆಯಳ | ಬಾಲನೆನಿಸಿ ರಿಪು |
ಜಾಲವರಿದ ಜಯ | ಶೀಲನೆ ಎನ್ನ   ||ಪ||

ಪಾಶಾಂಕುಶಧರನೆ | ತ್ರೈಜಗ | ದೀಶ ಗಣಾಧಿಪನೆ ||
ದೋಷರಹಿತ ಸುವಿ | ಲಾಸಿಯೆ ನಿನ್ನಡಿ |
ದಾಸನೆಂದು ನೆರೆ | ಪೋಷಿಸೊ ಕರುಣದಿ ||10||

ಅಂಬಾಸುತ ದೇವ | ವಿಶ್ವಕು | ಟುಂಬ ಲಸದ್ಭಾವ ||
ನಂಬಿದ ಭಕ್ತರ | ದಂಬವ ಪೊರೆವ ತ್ರಿ |
ಯಂಬಕಸುತರ | ಕ್ತಾಂಬರಭೂಷಿತ ||11||

ಧರೆಯೊಳು ರಂಜಿಸುವ | ಮದಪುರ | ವರದೊಳು ನೆಲೆಸಿರುವ ||
ಕರುಣದಿ ನಿಜಕಿಂ | ಕರರಿಗೊಲಿದು ಮನ |
ದಿರವನು ಪಾಲಿಸು | ತಿರುವ ವಿನಾಯಕ ||12||

ರಾಗ ಅಠಾಣ ಆದಿತಾಳ

ಶಾರದೆ ಪಾಲಿಸು | ನೀರಜ ನಯನೆ |
ಚಾರು ಮಂಗಳೆ ಕಲ | ಕೀರ ಸುಗಾನೆ ||13||

ಮಧುರ ಸುಭಾಷಿಣಿ | ಮದಗಜ ಗಾಮಿನಿ |
ಮಧುಕರಾಳಕ ವೇಣಿ | ಮದಿರಾಕ್ಷಿ ವಾಣಿ ||14||

ಸುರಕುಲನುತಿಪಾತ್ರೆ | ಸರಸಿಜನೇತ್ರೆ |
ಸುರುಚಿರ ಸದ್ವಕ್ತ್ರೆ | ಶರಣ ಸಂಸ್ತೋತ್ರೆ ||15||

ಸುಮನಸವಂದಿತೆ | ಸುಮನಸಭೂಷಿತೆ |
ಸುಮನಸರಾಜಿತೆ | ಸುಮುಖ ವಿಚಿತ್ರೆ ||16||

ಭಾಮಿನಿ

ಶಾರದೆಯ ಬಲಗೊಂಡು ಸುಮನಸ |
ವಾರಕಭಿವಂದಿಸುತ ಶ್ರೀಚರ |
ಣಾರವಿಂದಕೆ ನಮಿಸಿ ವಾಲ್ಮೀಕ್ಯಾದಿ ಮುನಿವರರ ||
ಚಾರು ಪದಕೊಂದಿಸುತ ವಾಯುಕು |
ಮಾರನನು ಕೊಂಡಾಡಿ ನಾಮ |
ತ್ತಾರು ಮುಖವುಳ್ಳವನ ನರ್ಚಿಸಿ ಕೃತಿಯನೆಸಗುವೆನು ||17||

ರಾಗ ಸೌರಾಷ್ಟ್ರ ತ್ರಿವುಡೆ ತಾಳ

ಧಾತ್ರಿಜೆಯ ಕುವರರಿಗೆ ವಲ್ಮಿಕ |
ಪುತ್ರ ವಿವರಿಸುತಿರಲು ರಾಮಚ |
ರಿತ್ರಿವನು ಬೆಸಗೊಂಡರಾ ಸುಪ | ವಿತ್ರಗೆರಗಿ ||18||

ಆದರಿಸಿ ಪೇಳಿಂದ್ರಜಿತುಮತ |
ನಾದ ಮೇಲ್ಮಂಡೋದರಿಯು ಸೀ |
ತಾಧವನ ನೀ ಸೇರಿ ಬದುಕೆನ | ಲಾದಶಾಸ್ಯ ||19||

ಯುಕ್ತವೆಂದೂಹಿಸದೆ ಸಮರಾ |
ಸಕ್ತಿಯಲಿ ವೀರೂಪನಯನನ |
ಮುಕ್ತಿಯನು ಕಂಡೈದಿ ಖಳಮಂ | ತ್ರೋಕ್ತವಿಧದಿ ||20||

ಕೋಟಿಯಜ್ಞವನೆಸಗಲಾರದೆ |
ಸೂಟಿಲೊದಗುತ ರಾಘವನ ಸರಿ |
ಸಾಟಿಯಲಿ ಆ ಹವದಿ ಮಿಗೆಬಡಿ | ದಾಟವೆಸಗಿ ||21||

ವಿಗ್ರಹದಿ ಮಡಿದಿರುವ ಕಥೆಯನ |
ನುಗ್ರಹಿಪುದೆನೆ ಮುನಿಪ ಖಳಕುಲ |
ನಿಗ್ರಹನ ನೆನೆದೆಂದ ಧರ್ಮಪ | ರಿಗ್ರಹರಿಗೆ ||22||

ಭಾಮಿನಿ

ತರಳ ಕುಶ ಕೇಳಾ ಖಳಾಧಮ |
ನಿರದೆ ವಿದ್ಯುತ್ಕೇಶಿ ಧನುಜನ |
ಕರೆದು ಪೇಳಿದ ರಾಘವನ ಕೊಲಲೆಂದು ತಂತ್ರದಲಿ ||

ದುರುಳನಾಕ್ಷಣ ಮಿಂಚು ಬುಳುವಿನ |
ತೆರದಿ ಬರುತಿರೆ ಕಂಡು ಮಾರುತಿ |
ವರಸಿದನು ಖಳನಸುವ ರಾಘವರಾಯನಿದಿರಿನಲಿ ||23||

ಕಂದ

ಕಾಣುತ ರಾಘವ ಮುಖ್ಯ |
ಪ್ರಾಣನ ಕೈಯನು ಪಿಡಿಯುತಲತಿ ಮುದದಿಂದಂ ||
ಭಾನುಜನೊಳು ಪೇಳಿದ ಸು |
ತ್ರಾಣನು ಬಹುಪರಿ ಬಳಲಿದ ಕಪಿಭಟನೆನುತಂ ||24||

ರಾಗ ಮಧುಮಾಧವಿ ಏಕತಾಳ

ವೀರವಾನರರೆಲ್ಲ ಕೇಳಿ |
ತೋರಿತೆಲ್ಲರಿಗೆ ಸಂತೋಷವಿಂದಿನಲಿ || ವೀರ ||ಪ||

ಈಶಪಿತಾಮಹ | ವಾಸವಾದಿಗಳ ಸಂ |
ತೋಷದಿ ಭಜಿಸಿ ತಮ್ಮಿಷ್ಟಾರ್ಥವ ||
ಲೇಸಾಗಿ ಪಡೆದು ಮ | ತ್ತವರ ಕಂಡೆಡೆಯೊಳು |
ಘಾಸಿ ಮಾಡುವ ರಿಂಥಾ ಹೇಸಿನ ಖಳರಲ್ಲ ||25||

ಎಲ್ಲಿ ನೋಡಿದರೂ ದಾ | ನವರಟ್ಟ ಹಾಸವು |
ಸೊಲ್ಲು ಸೊಲ್ಲಿಗೆ ಮಾಯಾತಂತ್ರಗಳು ||
ಮಲ್ಲ ಮಾರಣ ಮಂತ್ರಾ | ದಿಗಳಿಂದಲೀಜಗ |
ಭುಲ್ಲವಿಸಿದರು ಈ ಖುಲ್ಲ ದಾನವರೆಲ್ಲ ||26||

ಮಾಯಾವಿಗಳು ಆ | ನ್ಯಾಯವೆಸಗಿ ಜನ |
ಕಾಯಾಸಕೊಡುವುದು ನ್ಯಾಯವೇನೋ ||
ಹೇಯವಿಲ್ಲದ ದೈತ್ಯ | ನ್ಯಾಯಿಗಳಿವದಿರ |
ಕಾಯ ಖಂಡನ ಸುಖೋಪಾಯ ಸಜ್ಜನರಿಗೆ ||27||

ಕುಣಪ ಭಕ್ಷಕರೊಳು | ಸೆಣೆಸಾಟದಿಂ ನೀವು |
ದಣಿದಿರಕಟ ಸದ್ಗುಣಯುತರು ||
ಬಣಗು ರಕ್ಕಸಕುಲ ಹೆಣಗಿ ಸಾವುದು ಕೆಲ |
ದಿನಕೆಂದು ಪೇಳ್ದ ಶ್ರೀಮನುಮಥ ಜನಕ ||28||

ಇಂದು ನಿವೆಲ್ಲರಾ | ನಂದದಿ ವಿಶ್ರಾಂತಿ |
ಹೊಂದಿ ಸುಖದೊಳಿರಿ ಎಂದು ಪೇಳಿ ||
ಚಂದದಿ ವಾನರ | ವಂದ ಸಂತಯಿಸುತ್ತ |
ಬಂದು ಹೊಕ್ಕನು ತಮ್ಮನೊಂದಿಗೆ ಶಿಬಿರ ||29||

ಭಾಮಿನಿ

ಎಂದು ಸಂತಸದಿಂದ ದಶರಥ |
ಕಂದನೆಂದುದ ಕೇಳಿ ಕಪಿಗಳು |
ಚಂದದಿಂ ನಡೆತಂದು ಶಿಬಿರವ ಸೇರುತಿರಲಿತ್ತ ||
ಮುಂದೆ ರವಿ ತಾ ಪಶ್ಚಿಮಾಂಬುಧಿ |
ಮಂದಿರಕೆ ತೆರಳಲೆ ರಾತ್ರಿಯೊಳ್ |
ಮಂದಮತಿ ದಶಕಂಠ ನೈತಂದಿತ್ತ ನೋಲಗವ ||30||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಓಲಗದೊಳಿರುತಿರಲು ರಾವಣ |
ನಾಳುಗಳು ಪದಕೆರಗಿ ನಡುಗುತ |
ಕಾಳಗದ ಪರಿಗಳನು ಪೇಳ್ದರು | ಖೂಳನೊಡನೆ ||31||

ರಾಗ ಕಾಂಭೋಜಿ ಝಂಪೆತಾಳ

ಚಿತ್ತವಿಸು ಖಳಕುಲೋತ್ತಮ ಸಾರ್ವಭೌಮ ರಣ |
ವತ್ತಾಂತಗಳನು ಶೀಘ್ರದಲಿ ||
ಪಥ್ವಿ ಬಾಯ್ ಬಿಡುವ ತೆರದೊಳು ನಮ್ಮ ಮೂಲಬಲ |
ಬಿತ್ತರಿಸಿತೆಲ್ಲ ದೆಸೆಗಳಲಿ ||32||

ಆರು ಸರಿ ಕಲಿಸುಪಾರ್ಶ್ವಕನ ಕರ್ಕಶತನಕೆ |
ವೀರವಾನರರೆಲ್ಲ ಜುಣುಗಿ ||
ಸಾರುತಿರಲತ್ಯಧಿಕ ರೋಷದಿಂ ರಘುರಾಮ |
ಭೋರನಯ್ತಂದು ಧುರಕೊದಗಿ ||33||

ಗುಣಕೆ ಮತ್ಸರವುಂಟೆ ದನುಜ ಕೇಳಾರಾಮ |
ಘನಶರಾಸನದ ವಿದ್ಯೆಯಲಿ ||
ಮನುಮಥಾರಿಯ ಬಗೆವನಲ್ಲ ಮಿಕ್ಕಿನ ದನುಜ |
ಬಣಗುಗಳು ಪಾಡೆ ಸಮರದಲಿ ||34||

ಅಮಿತ ರಾಕ್ಷಸ ಬಲವನೆಲ್ಲ ತರಿದೊಟ್ಟಿದನು |
ನಿಮಿಷಾರ್ಧದೊಳಗೆ ಧುರವೆಸಗಿ ||
ಸುಮನಸರು ಬೆಗಾಗಲಾ ಸುಪಾರ್ಶ್ವಕ ಭರದಿ |
ಗಮಿಸಿದನು ಮುಕುತಿಪದಕಾಗಿ ||35||

ಗೂಢ ಬ್ರಹ್ಮನೊಳು ಹಗೆಮಾಡಿ ಕೆಡದಿರು ಬರಿದೆ |
ಬೇಡು ಸುಖ ಭೋಗವಾತನಲಿ ||
ನಾಡಮಾತಲ್ಲ ದಯಮಾಡು ರಾಮನ ಪದಕೆ |
ನೀಡು ದಶಶಿರವ ಭಕ್ತಿಯಲಿ ||36||

ಇಂತೆಂದ ಚರರ ಬೀಳ್ಕೊಟ್ಟು ದುಮ್ಮಾನದಲಿ |
ಚಿಂತಿಸುತಲಾದಶಾನನನು ||
ಅಂತರಂಗದಿ ಬಳಲಿ ಮಯಜಾತೆಗಹಕೈದಿ |
ಇಂತು ಶೋಕಿಸುತಿರ್ದನವನು ||37||

ರಾಗ ಆನಂದ ಭೈರವಿ ರೂಪಕತಾಳ

ಹರನೇ ಶಂಕರ ಪಾರ್ವತಿ | ವರನೇ ಮುಂದೇಂ ಗೈಯ್ಯಲಿ |
ಧುರದೊಳುರಕ್ಕಸ ಸೇನೆಯು | ಬರಿದಾಯಿತೆ ಶಿವನೆ  ||ಪ||

ತುಂಗಬಲಾನ್ವಿತ ಸಚಿವರೆ | ನ್ನಂಘವಣೆಯ ಭಟರೆಲ್ಲರು |
ಸಂಗರದೊಳು ಮಡಿದರು ಬರಿ | ಮಂಗಗಳೊಳು ಕಾದಿ ||
ತಂಗಿಯ ಸವಿಮಾತಿಗೆ ನಾ | ಹಂಗಿಗ ನಾದುದರಿಂದಲೆ |
ಹಿಂಗಿತು ದಾನವರಾರ್ಭಟೆ | ಭಂಗ ಪಡುವದಾಯ್ತೆ ||38||

ಮತಿಯುತರಾಡಿದ ನುಡಿಗಳ | ಪತಿಕರಿಸದೆ ಬೆದರಿಸಿದೆನು |
ಗತಿಯಿನ್ನೇಂ ಮುಂದಕೆ ಪಶು | ಪತಿನೀ ತೋರೆನಗೇ ||
ಶತಯಾಗಾಂತಕ ಮುಖ್ಯರ | ಮಥಿಸಿದ ಲಕ್ಷ್ಮಣನೇವೆನು |
ಪ್ರತಿಭಟ ಕುಂಭಶ್ರವಣನ | ಗತಿಗೆಡಿಸಿದ ರಾಮ ||39||

ರಣಕರ್ಕಶನಾ ಮೈರಾ | ವಣನನು ಕಪಿಗಳು ಗೆಲ್ಲಲು |
ಎಣಿಕೆಯೆ ನಾನವರಿಗೆ ಮುಂ | ದಣ ಬಗೆಯೇನಕಟಾ ||
ಜುಣುಗಿದೆನಾದರೆ ಮುಂದಕೆ | ಘನವಾದಪವಾದವು ಎನ |
ಗಣನೆಯೆ ಸುರಭಟರೆಲ್ಲರು | ಮಣಿವರೆ ಹಾ ವಿಧಿಯೆ ||40||

ವಾರ್ಧಕ

ಮರುಗಿದಂ ಅಳಲುತತಿಶಯದಿ ಶೋಕಾತುರದೊ |
ಳೊರಗಿದಂ ಹಲವಂಗಮಂ ಗ್ರಹಿಸಿ ಮನದೊಳಗೆ |
ಕರಗಿದಂ ಮಂತ್ರಿಮಾರ್ಬಲದೇಳ್ಗೆಯಂ ನೆನೆಯ ನಿಟ್ಟುಸಿರು ಬಿಡುತ ಖಳನು ||
ಕೊರಗಿದಂ ಪುತ್ರ ಮಿತ್ರ ಸ್ನೇಹಭಾವದೊಳ್ |
ತಿರುಗಿದಂ ಮಂದಿರದೊಳಳಲು ತೊಯ್ಯನೆ ಮಂಚ |
ಕೊರಗಿದಂ ಹಾ ಯೆನುತ ಹಮ್ಮಯಿಸಿ ದಶಕಂಠನಧಿಕ ಸಂತಾಪದೊಡನೆ ||41||

ರಾಗ ಕೇದಾರಗೌಳ ಅಷ್ಟತಾಳ

ದುರುಳ ನೀ ತೆರದೊಳು ತರಹರಗೊಳುತಿರ್ಪ |
ಪರಿಯ ತಾನರಿತು ಬೇಗ ||
ತರುಣಿ ಮಂಡೋದರಿ ಕರ ಕರಿಸುತ ತನ್ನ |
ವರನೆಡೆಗೈದಳಾಗ ||42||

ಮೌನದಿ ಶೋಕವನನುಕರಿಸುತಲಿರ್ಪ |
ದಾನವೇಶ್ವರನಿಗಂದು ||
ಸಾನುರಾಗದಲಿ ಪೇಳಿದಳು ಕೈಮುಗಿದಂಬು |
ಜಾನನೆ ಮನದಿ ನೊಂದು ||43||

ರಾಗ ನೀಲಾಂಬರಿ ಏಕತಾಳ

ಚಿಂತಿಸುವದ್ಯಾತಕಿಂತು | ಪ್ರಾಣಕಾಂತ | ಬಲ |
ವಂತ ನಿನಗಾದುದೇನು | ಪ್ರಾಣಕಾಂತ ||
ಪಂಥವಳಿದು ಪೋದುದೇನೊ | ಪ್ರಾಣಕಾಂತ | ಸೀತಾ |
ಕಾಂತನು ತಾನೇನ ಗೆಯ್ದ | ಪ್ರಾಣಕಾಂತ ||44||

ಹಿರಿಯರೆಂದ ಮಾತ ಮೀರಿ | ಪ್ರಾಣಕಾಂತ | ಬಲು |
ಗರುವದಿಂದ ಮೆರೆದೆಯಲ್ಲೊ | ಪ್ರಾಣಕಾಂತ ||
ಮರುಗಲ್ಯಾಕೊ ಬರಿದೆ ನೀನು | ಪ್ರಾಣಕಾಂತ | ಲಕ್ಷ್ಮೀ |
ವರನ ಪಾದಕೆರಗು ಬೇಗ | ಪ್ರಾಣಕಾಂತ ||45||

ರಾಗ ಕೇದಾರಗೌಳ ಝಂಪೆತಾಳ

ತರುಣಿಯಳ್ ಮಾತ ಕೇಳಿ | ರಾವಣನು |
ಭರದಿ ಧೈರ್ಯವನು ತಾಳಿ ||
ಬರಿಯ ಚಿಂತೆಗಳ ಬಿಟ್ಟು | ಪೇಳಿದನು |
ಸರಸದಿಂ ತನ್ನ ಗುಟ್ಟು ||46||

ಚತುರಂಗ ಸೇನೆಗಾಗಿ | ಮರುಗುವಭಿ |
ಮತವಲ್ಲ ಕೇಳದಾಗಿ |
ಸುತನಿಂದ್ರಜಿತುವಕೊಂದು | ಕಳೆದುದಕೆ |
ವ್ಯಥೆಪಡುವೆ ಮನದೊಳಿಂದು ||47||

ಘೋರತರದಸ್ತ್ರಚಯವು | ಮೂಲಬಲ |
ವೀ ರಕ್ಕಸರ ಸೇನೆಯು ||
ಈ ರೀತಿಯಿರುತಿರಲಿಕೆ | ಬೆದರುವೆನೆ |
ಭೂರಿ ವಾನರ ಸೈನ್ಯಕೆ ||48||

ರಾಮಲಕ್ಷ್ಮಣರ ಸಹಿತ | ಕಪಿಭಟ |
ಸ್ತೋಮವನು ಗೆಲಿದುಮತ್ತಾ ||
ಹೋಮ ಮುಖದಿಂ ಧನುಜರ | ನೆಬ್ಬಿಸುವೆ |
ಕಾಮಿನಿಯೆ ಕೇಳು ವಿವರ ||49||

ರಾಗ ಸಾವೇರಿ ಆದಿತಾಳ

ಪತಿಯೆ ನೀನೆಂದ ಮಾತು | ಕೇಳಲು ಮನ |
ಕೃತಿಶಯ ಮರುಕವಾಯ್ತು ||
ಖತಿಯುತನಾಗಬೇಡ | ನಾನೆಂಬುದ |
ಜತನದಿ ತಿಳಿದು ನೋಡಾ ||50||

ದೋಷಿ ನಿನ್ನಯ ಭಗಿನಿ | ರಕ್ಕಸ ಕುಲ |
ಘಾಸಿ ಗೈಯ್ದಳೆ ತರುಣಿ ||
ಏಸು ಕೀರ್ತಿಗಳು ಬಂತು | ಲೋಕದಿ ನಿನ |
ಗಾ ಸೀತೆಗಾಗಿ ನಿಂತು ||51||

ಆದಿ ಕಾರಣ ಮೂರ್ತಿಯು | ಸರ್ವಾತ್ಮಕ |
ನಾದಿಮಾಯಾ ವಿನೋದಿಯು ||
ಮೇದಿನಿಯೊಳು ದುರುಳ | ನಿಗ್ರಹಕೆಂದು |
ಮೋದದಿ ಜನಿಸಿರುವ ||52||

ಭಾಮಿನಿ

ಪೇಳಲೆಮ್ಮನು ನಿನಗೆ ನೀತಿಯ |
ಪೇಳಿದರೆ ನೀ ಕೇಳುವೆಯ ಮು |
ಟ್ಠಾಳತನದಲಿ ನಡೆವ ನಿನಗಿದು ತಿಳಿದಿಹರೆ ಮುಂದೆ ||
ಹಾಳು ಮಾಡದೆ ಕರ್ಬುರಾನ್ವಯ |
ದೇಳಿಗೆಗೆ ನೀನೊಂದು ಮಾತನು |
ಕೇಳು ಬಿಡು ಸೀತೆಯನು ಕೊಡಿಸಾ ದಾಶರಥಿಗಿನ್ನು ||53||

ರಾಗ ನೀಲಾಂಬರಿ ಝಂಪೆತಾಳ

ಇನ್ನು ಬಿಡು ಬಿಡು ಛಲವನೆನ್ನ | ನುಡಿಯೊಂದ |
ಮನ್ನಿಸಾ ರಾಘವನ ಪದಕೆರಗು ಮುನ್ನ   ||ಪ||

ರಕ್ಷಿಸುವನಾ ರಾಮಚಂದ್ರ | ನಿಮಗಿನ್ನು |
ಪೇಕ್ಷಿಸನು ಸಹಜ ವಿಭೀಷಣ ಸುಗುಣ ಸಾಂದ್ರ ||
ಈ ಕ್ಷಣದೊಳವನಿಜೆಯ ಕೊಟ್ಟು | ಮನ್ನಿಸೆನೆ |
ಈಕ್ಷಿಸುವನಾ ಕರುಣಿ ನಿಜ ದಯವನಿಟ್ಟು ||54||

ಸಾಕೋರ್ವ ಮಗ ವಿರೂಪಾಕ್ಷ | ಇವನಿಂದ |
ಬೇಕಾದ ಸುಖದೊಳಿರಬಹುದು ಸುರಶಿಕ್ಷ ||
ಆ ಕುಲ ಕುಠಾರಳಿಂದೇನು | ಸುಖಬಂತು |
ಲೋಕದೊಳು ಹಿಂದಿನಂತಿರಲು ಕುಂದೇನು ||55||

ನಾರಾಯಣನು ಕಾಣೋ ರಾಮಾ | ನಾರಿಯಳು |
ಧಾರಿಣೀಸುತೆ ಲಕ್ಷ್ಮಿ ಕೇಳು ನಿಸ್ಸೀಮ ||
ಚಾರು ಮಹಶೇಷ ಲಕ್ಷ್ಮಣನು | ಮೀಕ್ಕಿರುವ |
ವೀರ ಕಪಿಗಳು ದೇವತಾಂಶ ಕೇಳಿನ್ನು ||56||

ಭಾಮಿನಿ

ತ್ಯಜಿಸು ಕಡು ಮೂರ್ಖತೆಯ ನೀನಾ |
ಭಜಕಕುಲ ದೈವದೊಳು ಹಗೆಯನು |
ಭಜಿಸದಿರು ಸುಖವಂತನಾಗಿಯೆ ಪಾಲಿಸೆಮ್ಮವರ ||
ಅಜಪಿತನ ಕರುಣದೊಳು ಬಾಳ್ವುದು |
ತ್ರಿಜಗದೊಳಗತಿ ಮಾನ್ಯವದುವೇ |
ಸುಜನ ಮಾರ್ಗವು ಕೇಳೆನಲು ಖತಿಗೊಳುತಲಿಂತೆಂದ ||57||