ರಾಗ ಅಠಾಣ ತ್ರಿವುಡೆತಾಳ

ಲಾಲಿಸೈ ರಘುನಾಥನೆ | ಭೂಲೋಲಶ್ರೀ |
ನೀಲಮೇಘಶ್ಯಾಮನೆ ||
ಬಾಲೆ ಸೀತಾಧವನೆದಶರಥ |
ಬಾಲ ನಿರ್ಜರಪಾಲ ಸುಗುಣ ವಿ |
ಶಾಲ ಮನುಮುನಿಜಾಲವಂದಿತ |
ಕಾಲಭಯಹರ ಮೂಲರೂಪಿಯೆ ||225||

ನಳಿನ ಬಾಂಧವ ದೇವನೆ | ಮೂಡಿದನೆಂದು |
ತಿಳಿದೀ ಮನದ ಭಾವನೆ |
ಘಳಿಲ ನೆಸೆಯುವೆನೆನುತ ನೀಕರ |
ತಳದಿ ಚಾಪವ ನೆಗಹಲ್ಯಾತಕೆ |
ತಿಳಿದು ನೋಡದೊಪವನಸುತ ನಿ |
ರ್ಮಲಚರಿತ ಖಳಕುಲವಿಲಯನನು ||226||

ಮಾರ ಸನ್ನಿಭತೇಜನೆ | ಧಾರಣಿಪತಿ |
ಘೋರದನುಜ ಹಾರನೆ ||
ವೀರ ಮಾರುತಿ ಭೂರಿವೇಗದಿ |
ಸಾರು ತೈತಹನಭ್ರಮಾರ್ಗದಿ |
ಚಾರುತರ ಸಂಜೀವನದಹೊರೆ |
ಮೀರುತಿದೆ ಸೂರಿಯನ ಸುಪ್ರಭೆ ||227||

ಇಂತು ಸುಷೇಣನೆಂದ | ಮಾತನುಕೇಳಿ |
ಕಂತುಜನಕ ತಾನೊಂದ ||
ಚಿಂತಿಸದೆ ತಪ್ಪಾಯ್ತೆನುತಮತಿ |
ವಂತ ಪೇಳ್ತಿರೆ ಸಂತಸದಿಬಲ |
ವಂತನಾ ಹನುಮಂತ ಸೀತಾ |
ಕಾಂತನಂಘ್ರಿಗೆ ನಿಂತು ಮಣಿದನು ||228||

ರಾಗ ಕೇದಾರಗೌಳ ಝಂಪೆತಾಳ

ಒಡೆಯ ನೀ ಲಾಲಿಸೆನುತ | ಕೈಮುಗಿದು |
ನಡೆದಿರುವುದೆಲ್ಲ ಚರಿತ ||
ಕಡೆಗೆ ಪೇಳ್ವೆನು ರಘುಜನು | ವಾಯುಜನ |
ತಡವರಿಸುತಿಂತೆಂದನು ||229||

ಸ್ವಾಮಿಕಾರ್ಯಧುರಂಧರ | ಛಲದಿ ನಿ |
ಸ್ಸೀಮ ಬಲವಂತ ಚತುರ ||
ಗೋಮಿನಿಯೊಳಿಹರೆ ನಿನ್ನ | ಪೋಲುವರು |
ನೀ ಮಹಾತ್ಮಕನು ಮುನ್ನ ||230||

ಇತ್ತ ದಶರಥ ನಂದನ | ನುಡಿಯುತಿರ |
ಲತ್ತ ಕಪಿವರ ಸುಷೇಣ ||
ಚಿತ್ತದಲಿ ರಘುರಾಮನ | ಸ್ಮರಣೆಗೈ |
ದಿತ್ತ ಬಂದನು ತತ್ ಕ್ಷಣ ||231||

ಪರಮ ಸಂಜೀವನವನು | ಲಕ್ಷ್ಮಣ ನಿ |
ಗೆೆರೆಯೆ ಚೇತರಿಸುತವನು ||
ಕರದಿ ಧನುಶರಗಳಾಂತೇ | ಎದ್ದನೈ |
ಸುರಕಲ್ಪತರುವಿನಂತೆ ||232||

ರಣದೊಳಗೆ ಮಲಗಿರುವರ | ವರ ವಿಭೀ |
ಷಣ ಕಮಲಮಿತ್ರಕುವರ ||
ಇನಿಬರೇಳಲ್ಕೆ ಸುರರು | ಪೂಮಳೆಯ |
ತ್ವರಿತದಿಂ ಸುರಿಸಲವರು  ||233||

ಇನನು ತಾನಪರಾಬ್ಧಿಗೆ | ತೆರಳಲ್ಕೆ |
ಚಿನುಮಯಾತ್ಮಕ ಸಹಜಗೆ ||
ಮನದಣಿಯೆ ಬಿಗಿದಪ್ಪುತ | ಶಿಬಿರದೊಳ |
ಗನುನಯದಿ ತೆರಳಲಿತ್ತ ||234||

ವೀರ ವಾನರ ಪತಿಗಳು | ತೋಷದಿಂ |
ದಾ ರಾಘವನಿಗೆರಗಲು ||
ಮಾರಮಣನಾಜ್ಞೆಯಿಂದ | ಬೀಡಿಕೆಯ |
ಸೇರಿಸುಖಪಡೆದರೆಂದ ||235||

ಭಾಮಿನಿ

ಇತ್ತ ಕೇಳೈ ಕುಶನೆ ದಶಶಿರ |
ಚಿತ್ತದಲಿ ಕಡುನೊಂದು ದುಗುಡದಿ |
ಮತ್ತಕಾಶಿನಿ ಮಯಸುತೆಯ ಭವನದೊಳು ಮಲಗಿರಲು ||
ಅತ್ತ ವಾನರರಾರ್ಭಟೆಯು ಕೇ |
ಳುತ್ತ ಮನದಲಿ ಗಹಿಸಿದನು ಸೌ |
ಮಿತ್ರಿ ರಣದಲಿ ಜೀವಿಸಿದ ಸಂಜೀವನದೊಳೆನುತ ||236||

ಕಂದ

ಧುರದೊಳು ಮಡಿದಿಹ ಲಕ್ಷ್ಮಣ |
ನಿರವಂ ಚಾರಕ ನಿಂ ತಿಳಿದಾ ದಶವದನಂ ||
ಕರಕರಿಸುತಲೆದ್ದಾ ಕ್ಷಣ |
ಮರುಗಿದ ತನ್ನಪಜಯದಿರಗಳ ನೆನೆದಾಗಳ್ ||237||

ರಾಗ ದೇಶಿ ಅಷ್ಟತಾಳ

ಹರ ಹರ ಎನಗಿಂಥ ಭವಣೆಯು | ಬಂತೆ |
ಒರೆಯಲಿನ್ನ್ಯಾರಿಗೀ ವಿಧಿಯು ||
ಧುರಪರಾಕ್ರಮಿ ರಾವಣನೆಂದು | ಹೆಸ |
ರಿರದೆ ಕೆಟ್ಟಿತು ಸೀತೆಗಾಗಿಂದು ||238||

ಮಾವನ ಮಾತಿಗೆ ಜರೆದೆನು | ಎನ್ನ |
ಭಾವೆಯಳೆಂದುದ ಮರೆತೆನು ||
ಆ ವಿಭೀಷಣನೆಂದ ನೀತಿಯ | ಕೇಳ |
ದೀ ವಿರೋಧದಿ ಕೆಟ್ಟೆ ಖ್ಯಾತಿಯ ||239||

ಮೂರು ಬಾರಿಯೊಳಾ ಮನುಜಪತಿ | ಸಾರಿ |
ಸಾರಿ ಹೇಳಿದನು ಎನಗೆ ನೀತಿ ||
ಮೀರಿ ಕಳದೆನಹಂಕಾರದಿ | ಇನ್ನು |
ಯಾರಿಗೆ ಹೇಳ್ವೆ ಮುಂದಣ ವಿಧಿ ||240||

ಅನ್ಯರಿಂದಪಜಯವಾಗಲು | ನಾವು |
ಸಂನ್ಯಾಸಿಯಾಗುವುದದು ಮೇಲು ||
ಇನ್ನ್ಯಾವ ಪರಿಯ ನಾ ಕಾಣೆನು | ಎನ್ನ |
ಅನ್ಯಾಯ ನಡತೆಯ ಮಾಣೆನು ||241||

ಇಂತು ಚಿಂತಿಸುತ ದಾನವನಂದು | ಖತಿ |
ಯಾಂತು ಬೇರೊಂದುಪಾಯವನಂದು ||
ಸಂತಸದಿಂದ ಯೋಚಿಸುತಾಗ | ಮತಿ |
ವಂತ ರಕ್ಕಸನೆದ್ದನತಿ ಬೇಗ ||242||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರರೆ ತಪ್ಪಾಯ್ತೇನುತ ಚಿಂತೆಯ |
ಮರೆತು ಖಳನತ್ಯಧಿಕ ರೋಷದಿ |
ಭರದಿ ಸಭೆಗೈತಂದು ಮಾರಣ | ದಿರವ ನೆನೆದ ||243||

ಕೋಟಿಯಜ್ಞವನೆಸಗಿ ಮಗಮ |
ಜ್ಜೂಟನನು ಮೆಚ್ಚಿಸುತ ನಿಮಿಷದಿ |
ಕೋಟಿಸಂಖ್ಯೆಯೊಳಸುರ ಸೈನ್ಯದ | ಕೂಟಸಹಿತ ||244||

ಮಡಿದ ಧೂಮ್ರಾಕ್ಷಾದಿ ದೈತ್ಯರ |
ಗಡಣ ನೂರ್ಮಡಿಯಧಿಕ ಕುಂಡದೊ |
ಳೊಡನೆ ಎಬ್ಬಿಸುವೆನು ಮಹಾಧ್ವರ | ದಢದೊಳೆಸಗಿ ||245||

ಅಳವಿಯೊಳು ಜಯಲಲನೆಯೊಳ ಪಿಡಿ |
ದೆಳೆವೆ ನಿಶ್ಚಯವಿನ್ನು ಸುಮ್ಮನೆ |
ಅಳಲಿ ಮಾಡುವುದೇನೆನುತ ಖಳ | ತಿಲಕನಂದು ||246||

ರಾಗ ಭೈರವಿ ಏಕತಾಳ

ಧನಪನ ವೈಮಾನದೊಳು | ತಾ |
ವಿನಯದಿ ಕುಳಿತುಕೊಂಡಿರಲು ||
ದನುಜಗಡಣವೈತರಲು | ನಿಕುಂ |
ಭಿಲಪುರಕಾಗಿ ಮುಂಬರಲು ||247||

ಅಟ್ಟಹಾಸದಿ ನಿಕುಂಭಿಲೆಗೆ | ಬರೆ |
ದುಷ್ಟರಕ್ಕಸರಾರ್ಭಟಗೆ ||
ತಟ್ಟನೆ ಸುರರಭ್ರದೊಳು | ಕಂ |
ಗೆಟ್ಟೋಡಿತು ಭೀತಿಯೊಳು ||248||

ಕುಲದೇವತೆಯಳ ಬಳಿಗೆ | ಬಂ |
ದೊಲವಿಂ ಪೂಜಿಸುತೆನಗೆ ||
ಗೆಲುವಂಗವ ಮಾಡೆನುತ | ಖಳ |
ಬೆಳಗಿದ ನಾರತಿ ನಗುತ ||249||

ರಾಗ ನಾಮ ನಾರಾಯಣಿ ತ್ರಿವುಡೆತಾಳ

ಮಂಗಳ ಮಹಿಷಾಸುರಮರ್ದಿನಿ
ಮಂಗಳ ತ್ರೈಜಗಸನ್ಮೋಹಿನಿ |
ಮಂಗಳ ಶ್ರೀಕಾಂತೆ | ಗುಣವಂತೆ ||
ಮಂಗಳ ಗುಣವಂತೆಗೆಂದೆನುತಲೆ |
ಮಂಗಳಾರತಿಯ ಬೆಳಗಿದನು ||250||

ಜಯ ಜಯ ಭುವನೇಶ್ವರಿ ದೇವಿಗೆ |
ಭಯ ಹರಿ ಸರ್ವೇಶನ ರಾಣಿಗೆ |
ಜಯತು ಶರ್ವಾಣಿ | ಫಣಿವೇಣಿ ||
ಜಯ ಜಯ ಫಣಿವೇಣಿಗೆಂದೆನುತಲಿ |
ಮಣಿಮಯ ದಾರತಿಯ ಬೆಳಗಿದನು ||251||

ಸುರವರ ಮನುಮುನಿಜನ ಪೂಜಿತೆ |
ಸುರಚಿರ ಸನ್ಮಣಿಗಣಭೂಷಿತೆ |
ದುರಿತ ವಿನಾಶೆ | ಹರ ಪ್ರೀತೆ ||
ಹರುಷದಿ ಹರಪ್ರೀತೆಗೆಂದೆನುತಲಿ |
ಮರಕತದಾರತಿಯ ಬೆಳಗಿದನು ||252||

ರಾಗ ಅಹೇರಿ ಏಕತಾಳ

ಮಂಗಳಂ ಮಹಿಷಾಸುರ ಮರ್ದಿನಿಗೆ |
ಮಂಗಳಂ ತ್ರೈಜಗನ್ಮೋಹಿನಿಗೆ ||
ಮಂಗಳಂ ಸರ‌್ವೇಶ್ವರನರ್ಧಾಂಗಿಗೆ | ಜಯ |
ಮಂಗಳಾರತಿಯ ಬೆಳಗಿರೆ || ಶೋಭಾನೆ ||253||

ರಾಗ ಸಾಂಗತ್ಯ ರೂಪಕತಾಳ

ಕುಲದೇವಿಯೊಲುಮೆಯ ಪಡೆದು ತಾ ವಿತಳಕ್ಕೆ |
ಬಿಲಮುಖದಿಂ ಖಳರೊಡನೆ ||
ಬಲವಿರೋಧಿಯ ವೈರಿ ರಚಿಸಿರ್ಪ ಯಜ್ಞದ |
ಸ್ಥಳಕ್ಕೆ ತಾ ದುರುಳ ನೈತಂದ ||254||

ಅರಿಗಳೈತರದಂತೆ ದ್ವಾರದೊಳರ್ಬುದ |
ನಿರುತಿ ಭೇತಾಳ ಜಟ್ಟಿಗಳ ||
ಇರಿಸುತ್ತ ಕುಲಪುರೋಹಿತರಿಂದ ಯಜ್ಞವ |
ವಿರಚಿಸಲನುಗೆಯ್ದ ಖಳನು ||255||

ಕರಿಚರ್ಮದುಡಿಗೆ ಮಾನುಷ ರಕ್ತ ಲೇಪನ |
ಕರುಳಿನ ಯಜ್ಞಸೂತ್ರಗಳ ||
ಕರದೊಳು ನರದ ಪವಿತ್ರವು ಕೊರಳೊಳು |
ಧರಿಸಿದ ನೆಣದ ದಂಡೆಗಳ ||256||

ಬೇಡುತ್ತ ಹವ್ಯವಾಹನನ ಸಂತೋಷದಿ |
ಜೋಡಿಸಿ ಕರಗಳೆಲ್ಲವನು ||
ನೀಡಿ ಬ್ರಹ್ಮನ ಮಹೇಶ್ವರನ ಸಂಸ್ತುತಿಸುತ್ತಾ |
ಮಾಡಿ ಭಾರ್ಗವಗೆರಗಿದನು ||257||

ಇತ್ತ ಕರ್ಬುರ ಮಹೀಸುರರೊಡಗೂಡುತ |
ಮತ್ತಥರ್ವಣ ಮಂತ್ರಗಳಲಿ ||
ಚಿತ್ತ ಶುದ್ಧದಿ ಮಹದಭಿಚಾರ ಕತ್ಯವ |
ವಿಸ್ತರಿಸಿದನು ಸಾಮದಲಿ ||258||

ದುರುಳ ರಾವಣ ತನ್ನ ಶಿರವ ನೊಂದೊಂದಾಗಿ |
ತರಿದು ಭಾರ್ಗವಮಂತ್ರೋಕ್ತದಲಿ ||
ಚರು ತಿಲಾಜ್ಯವು ಮಾಂಸದೊಡನೆಯಾಹುತಿಗೊಡ |
ಲರಳಿದನಗ್ನಿ ತೇಜದಲಿ ||259||

ತುಳುಕಿತಂಬುಧಿಯು ದುರ್ಗಂಧ ಕಂಡೆಡೆಯೊಳು |
ಚಲಿಸದೋಡೀತು ಸುರವಂದ ||
ಇಳೆಯು ಬಾಯ್ಬಿಡುತಿರೆ ಸುಳಿಗಾಳಿ ಮುಸುಕಲಾ |
ನಳಿನಾಕ್ಷ ಶರಣನೊಳೆಂದ ||260||

ಏನಿದದ್ಭುತ ಧಾರಿಣಿಯ ಕಡೆಗಾಲವೊ |
ದಾನವೇಂದ್ರನ ಕಡು ಮುನಿಸೊ ||
ನೀನು ಬಲ್ಲಿದನಿದನುಸಿರೆನೆ ಶರಣನು |
ಮಾನವಾಧಿಪಗೆಂದನಾಗ ||261||

ರಾಗ ಘಂಟಾರವ ಅಷ್ಟತಾಳ

ಭೀಮ ಬಲಾನ್ವಿತ ಶ್ಯಾಮಲ ನಿಭಗಾತ್ರ | ರಾಮಚಂದ್ರ | ಗುಣ |
ಧಾಯ ನಿಸ್ಸೀಮ ಚಿತ್ತಯಿಸು ಬಿನ್ನಪವನ್ನು | ರಾಮಚಂದ್ರ ||262||

ದಿತಿಜ ನಿಂದಿನಲಿ ಭಾರ್ಗವನುಪದೇಶದಿ | ರಾಮಚಂದ್ರ || ಭೂತ |
ತತಿಗಳಿಂದೊಡಗೂಡಿ ಮಾರಣಾಧ್ವರ ಮಾಳ್ವ | ರಾಮಚಂದ್ರ ||263||

ವಿತಳದೊಳೆಸಗುವ ನಭಿಚಾರ ಕತ್ಯವ | ರಾಮಚಂದ್ರ || ಮನು |
ಮಥವೈರಿಗಸದಳವಾದ ಮಾರಣ ಮಾಳ್ಪ | ರಾಮಚಂದ್ರ ||264||

ಪುಟ್ಟುತಿಹುದು ದೈತ್ಯಕೋಟಿ ಕುಂಡದೊಳಿಂದು | ರಾಮಚಂದ್ರ || ಜಗ |
ಜಟ್ಟಿ ರಾವಣನ ನೂರ್ಮಡಿಯ ವಿಕ್ರಮಿಗಳು | ರಾಮಚಂದ್ರ ||265||

ಹಿಂದೆ ಶಕ್ರಾರಿ ಗೆಯ್ದಿಹ ಯಜ್ಞ ಕುಂಡದಿ | ರಾಮಚಂದ್ರ || ಮುದ ||
ದಿಂದಥರ್ವಣ ವಿಧಿಯಿಂದ ಕತ್ಯವ ಮಾಳ್ಪ | ರಾಮಚಂದ್ರ ||266||

ಕಳುಹಿಸು ವೀರ ವಾನರ ಪ್ರಮುಖಾದ್ಯರ | ರಾಮಚಂದ್ರ || ನೀಲ |
ನಳ ವಾಯುಪುತ್ರನಂಗದ ಮುಖ್ಯ ಸುಭಟರ | ರಾಮಚಂದ್ರ ||267||

ಭಾಮಿನಿ

ಖಳರು ಮಾಯವಿಗಳು ತಂತ್ರದಿ |
ಗೆಲುವುಪಾಯಗಳಿಂದ ನಮ್ಮೊಳು |
ಹಳಚಿದರು ಬಳಲಿಸಿದರೀ ಕಪಿಕಟಕವೆಲ್ಲವನು ||
ಕೊಳಗುಳದಿ ನೊಂದಿರುವರಿವರೊಳು |
ತಳುವದೀ ದುರ್ಘಟದ ಕಾರ್ಯವು |
ಘಳಿಲನುಸಿರಲಿಕೇನ ನೆಂಬರೊ ಲೋಕದೊಳು ತನಗೆ ||268||

ರಾಗ ಭೈರವಿ ಏಕತಾಳ

ರಾಘವ ನಿಂತೆಂದುದನು | ಕೇ | ಳ್ದಾಗಲೆ ಮರುತಾತ್ಮಜನು ||
ಬೇಗದಿ ರಾಮನ ಪದಕೆ | ಶಿರ | ಬಾಗಿಸಿ ಪೊರಟನು ಕ್ಷಣಕೆ ||269||

ಮುಕ್ಕುವನೈ ತ್ರೈಭುವನ | ತರಿ | ದಿಕ್ಕುವೆ ಕಾಲ ಭೈರವನ ||
ಪೊಕ್ಕು ಮುರಿವೆ ತರಣಿಜನ | ಎಂ | ದೊಕ್ಕಣಿಸಿತು ಕಪಿಗಡಣ ||270||

ಭರದಿಂ ಕುಂಭಿಣಿಗಿಳಿದು | ದನು | ಜರಕೇಳಿದರತಿ ಮುಳಿದು ||
ತ್ವರಿತದಿ ನೀಲಾಂಗದರು | ಸಹ | ಅರುಸುತ ಬರೆ ಕಪಿವರರು ||271||

ಕಾಣದೆ ದಶಕಂಠನನು | ಪಾವ | ಮಾನಿಯು ಬಿಲದ್ವಾರವನು ||
ತಾ ನೋಡುತಲದ ತಿವಿದ | ಬಡ | ದಾನವರನು ಕೆಡಹಾಯ್ದ ||272||

ಹಾರಿದರವರು ವಿತಳಕೆ | ಬಿಡ | ದಾರುಭಟಿಸುತಿಹ ಭರಕೆ ||
ಧಾರಿಣಿಯದುರಲಿಕಾಗ | ಧುರ | ದೀರರ ಸದೆದರು ಬೇಗ ||273||

ಖಳ ಪ್ರಮುಖಾದ್ಯರ ತರಿದು | ಖತಿ | ಯಲಿ ಕಾದುವರನು ಮುರಿದು ||
ಛಲದಂಕರ ಶಿರವರಿದು | ಬಲಿ | ಗಳನರ್ಪಿಸಿದರು ಮುಳಿದು ||274||

ಕುಂಡದೊಳುದ್ಭವಿಸುವರ | ಮುಂ | ಕೊಂಡು ತಿವಿದು ಮಿಕ್ಕವರ ||
ದಿಂಡು ದರಿದರಾಕ್ಷಣದಿ | ಖಳ | ತಂಡವನಿರಿದರುತ್ಸಹದಿ ||275||

ಹಿತದಿಂ ಭಗುಜನತಾಗಿ | ಪಶು | ಪತಿಯನು ಕಾಣುತಲೆರಗಿ ||
ಖತಿಯಿಂ ಪೂರ್ಣಾಹುತಿಯ | ಕೆಡಿ | ಸುತಲೊದೆದರು ಖಳಪತಿಯ ||276||

ಮೌನದೊಳಿರೆ ಖಳರಾಯ | ದು | ಮ್ಮಾನದಿ ಮುಂದಿನುಪಾಯ ||
ಕಾಣದೆ ಕಪಿವರರಿರಲು | ಕಡು | ಜಾಣನಂಗದ ಕಿನಿಸಿನೊಳು ||277||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚಂಡ ಬಲನಂಗದನು ತಾ ಖತಿ |
ಗೊಂಡು ಮಂಡೋದರಿಯ ಸೀರೆಯ |
ದಿಂಡರಂದದೊಳೆಳೆದನವನು | ದ್ದಂಡತನದಿ ||278||

ಕಂಡು ರಾಕ್ಷಸಬಲ ಬೆದರೆ ಮುಂ |
ಕೊಂಡು ಧಾತ್ರಿಯೊಳೆಳೆದು ಕೆಡಹುತ |
ಮಂಡೆಯನು ಪಿಡಿದೊಯ್ದನಾಕೆಯ | ಗಂಡನಿದಿರು ||279||

ನೋಡಿ ಖಳ ಮಾತಾಡದಿರೆ ಸತಿ |
ರೂಢಿಯೊಳು ಬಿದ್ಧಧಿಕ ಶೋಕವ |
ಮಾಡಿದಳು ಹಾಹಾರವದಿಮಿಡು | ಕಾಡುತೊಡನೆ ||280||

ರಾಗ ಆನಂದಭೈರವಿ ಏಕತಾಳ
ಹರನೆ ಎನ್ನ ರಮಣನಿದಿರು |
ದುರುಳ ಕಪಿಗಳೆಳೆಯುತಿಹರು |
ಹರುಷದಿ | ಬಲು | ಸರಸದಿ ||281||

ಪರರ ಸತಿಯ ನೆಳೆದು ತಂದ |
ಪರಿಯೊಳೆನ್ನ ತವಕದಿಂದ |
ಎಳೆವರು | ಕಂಡು | ಮುಳಿವರು ||282||

ಮೂರು ಲೋಕಕಗ್ರಗಣ್ಯ |
ಚಾರು ದನುಜಕುಲವರೇಣ್ಯ |
ರಕ್ಷಿಸು | ಎನ್ನ | ನೀಕ್ಷಿಸು ||283||

ಮುಯ್ಯಿಗೆ ಮುಯ್ಯಿ ತೀರಿತೇ |
ನಯ್ಯ ನಿನ್ನ ಮುಂದೀವೊತ್ತೇ |
ನಾಯಿತು | ನೋಡು | ನೀನಿಂತು ||284||

ಕರ್ಮಫಲವು ಸಿಕ್ಕಿತೇನೈ |
ಶರ್ಮಿಯಾದಡೀಗ ಎನ್ನ |
ಮಾನವ | ಕಾಯೋ | ದಾನವ ||285||

ಭಾಮಿನಿ

ಪ್ರಳಯ ಭೈರವನಂತೆ ಕ್ರೋಧವ |
ತಳೆಯ ರಾವಣ ಕ್ಷಣದಿ ಕರದೊಳು |
ಹೊಳೆವ ಹಿಮಕರಹಾಸವನು ಸೆಳೆದಧಿಕ ರೋಷದಲಿ ||
ಝಳಪಿಸುತ ವಾಲಿಜನನಿಕ್ಕಡಿ |
ಗಳ ರಚಿಸಿ ಹನುಮಂತ ದೇವನ |
ಬಳಿವಿಡಿದು ತಿವಿಯಲ್ಕೆ ಕೋಪದೊಳೆಂದ ವಾಯುಜನು ||286||

ರಾಗ ಕಲ್ಯಾಣಿ ಏಕತಾಳ

ಬಿಡೋ ಬಿಡೋ ನಿನ್ನಯ ರಣಗೌರವ |
ಸುಡು ಕೇಳಲೊ ದುರ್ಬುದ್ಧಿಯೆ ||
ಬಡ ದಾನವರಂದದಿ ಮಾರಣವನು |
ನಡೆಸಲು ನೀನಯ್ತಂದಿಯೆ ||287||

ಅಲ್ಲದ ಕತ್ಯವನೆಸಗುವರೇನೈ |
ಕಳ್ಳರಂದದಿ ನೀನಿಂದಿಗೆ ||
ಖುಲ್ಲನೆ ನಿನ್ನ ವಿಚಾರವನೆಲ್ಲವ |
ಬಲ್ಲೆನು ಕೇಳ್ ರಕ್ಕಸಗೂಗೆ ||288||

ಏನೈ ಫಡ ದಾನವನೇ ನಿನ್ನಯ |
ಜಾಣತನಗಳಿಂದೇನಾಯ್ತು ||
ಕೇಣವಿಲ್ಲದೀ ಹೀನ ಕತ್ಯಂಗಳ |
ನೀನೆಸಗೆಲು ಗುಣ ವೇನ್ಬಂತು ||289||

ಮಾನವಂತರೆಸಗುವರೇನೀ ತೆರ |
ಹೀನತರದ ಬಲು ಕತ್ಯಗಳ ||
ನೀನೆಸಗಿದ ಮೇಲ್ ಲೋಕದಿ ಮುಂದಿ |
ನ್ನೇನೆಂಬರು ಪೇಳೆಲೊ ಖೂಳ ||290||

ಭಾಮಿನಿ

ವೀರ ವಾಯುಜನೆಂದ ಮಾತನು |
ದಾರ ದಶಿಶಿರ ಕೇಳಿ ಮನದಿವಿ |
ಚಾರಿಸುತಲಹುದೆಂದು ಶಿರವಲ್ಲಾಡಿಸುತ ಜವದಿ ||
ಚಾರು ಪುಷ್ಪಕವೇರಿ ತವಕದೊ |
ಳಾರುಭಟಿಸುತಲೈದಿ ಸತಿಸಹ |
ಭೂರಿಬಲವೈತಂದು ಹೊಕ್ಕನು ತನ್ನ ಮಂದಿರವ ||291||