ರಾಗ ಸೌರಾಷ್ಟ್ರ  ತ್ರಿವುಡೆತಾಳ

ಅಣ್ಣ ಚಿಂತಿಸಬೇಡ ಕಾರ್ಯವ |
ಬಣ್ಣಗಾರರ ಮಾತಿದಲ್ಲದೆ |
ಪುಣ್ಯನಿಧಿ ಲಕ್ಷ್ಮಣನ ಕೆಡಹುವ | ಚಿಣ್ಣರುಂಟೆ ||267||

ನಾಡಮಾತಿಗೆ ನೀವು ಚಿಂತೆಯ |
ಮಾಡಲೇತಕೆ ಪುಸಿಯೊ ದಿಟವೊ |
ನೋಡಿ ಬರುವೆನು ಕಳುಹು ತನ್ನನು | ಗಾಢದಿಂದ ||268||

ಅಪ್ಪಣೆಯ ಕೊಡಿ ಎನುತಯೋಧ್ಯೆಯೊ |
ಳಿಪ್ಪ ಬಲವನು ನೆರಹಿ ಕಡೆಗಾ |
ಸರ್ಪಶಯನಗೆ ಕರಮುಗಿದ ಕಂ | ದರ್ಪರೂಪ ||269||

ಶಾರ್ದೂಲವಿಕ್ರೀಡಿತ ವೃತ್ತ

ಪಾರಾವಾರಸಮಾನಮಾರ್ಬಲಗಳಿಂ ಸೇನಾನಿಗಳ್ ಸಂಗಡ |
ಭೇರೀಶಂಖ ಮದಂಗ ವಾದ್ಯರವದಿಂ ನಾನಾಭ್ರಘೋಷಂಗಳಿಂ ||
ಶೂರತ್ವಾನ್ವಿತರಾಗಿ ಮುತ್ತಿದರಿಯಂ ತೋರಿಪ್ಪ ಭೂಪಾಲರಾ |
ಮಾರಾರಿ ತ್ರಿಪುರಂಗಳಂ ಮುರಿವವೋಲೋರಂತೆ ಬೆಪ್ಪಾಗಲು ||270||

ರಾಗ ಕಲ್ಯಾಣಿ ಏಕತಾಳ

ಭರತ ಸಂಗರಕೆಂದು ಬಂದನೆಂಬುದ ಕಂಡು |
ಅರಿತ ರ್ಬಾಲಕರಂದು ತ್ವರಿತಾಗ್ರ ಗೊಂಡು ||
ಶರತುದಿಗೇರಿಸಿ ಮೈಮರೆತಿರ ಬಾರದೆಂದು |
ತರತರ ಬಾಣಗಳ ಎಚ್ಚರೊಬ್ಬರೊಂದೊಂದು ||271||

ಎಚ್ಚ ಬಾಣಗಳು ಬಂದು ಕಚ್ಚಿತೆಲ್ಲರ್ಗೊಂದೊಂದು |
ಬೆಚ್ಚಿತವರದಂಡು ಆಶ್ಚರ್ಯಗೊಂಡು ||
ಬಚ್ಚರು ತಮ್ಮೊಳವು ಹೆಚ್ಚಿತು ವಿಕ್ರಮವು |
ಮಚ್ಚರದಿಂದ ಕಂಡು ಕೊಚ್ಚಿತವರ ದಂಡು ||272||

ಬಾಲಾರ್ಕಳ ಮೊಗದ ಹೋಲುವೆ ಕಂಡಾಗ |
ಶ್ರೀಲೋಲ ನಾಹದ್ದೇ ಹೋಲುವೆ ಮೊಗದ
ಲೀಲೆಯಿಂದಲಿ ಬಂದು ಪೇಳಲಿಂತೆಂದು ಹನುಮ |
ಕೇಳಬೇಕದ ನೆಂದು, ಭರತ ನೈತಂದು ||273||

ರಾಗ ಕೇದಾರಗೌಳ ಅಷ್ಟತಾಳ

ಕಂದ ನಿಮ್ಮನು ಪೆತ್ತ ತಂದೆ ತಾಯಿಗಳಾರು |
ಬಂದುದೆಲ್ಲಿಂದ ನೀವು ||
ಇಂದು ನಮ್ಮಯ ವಾಜಿಯನು ಕಟ್ಟ್ಟಿ ಅನುಜನ |
ಕೊಂದ ಕಾರಣವದೇನು ||274||

ಈ ಧುರದೊಳು ಮೊದಲಾದ ದುರ್ಬುದ್ಧಿಯ |
ಕಾದೆ ನಿಮ್ಮವಗುಣವ ||
ಕ್ರೋಧವ ಬಿಟ್ಟು ಹಯವ ಬಿಡಿ ಹಿಂದಕಿ |
ನ್ನಾದರೂ ನಡೆಯಿರಣ್ಣ ||275||

ತುರಗವ ಬಿಡಬೇಕಾದರೆ ಕೆಲಸಗಳುಂಟು |
ಮರುಳರಂದದಲಿ ನೀವು ||
ತರಳರಿರೆಲ್ಲಿ ನೀ ವಾರೆಂದು ಬೆಸಗೊಂಬ |
ದುರುಳತನಗಳೇನು ||276||

ಸಂಗರದಲಿ ಬಿಡು ಸರಳ ಸಾಹಸದಿ ಪ್ರ |
ಸಂಗವೇತಕೆ ಮರುಳೆ ||
ಅಂಗದೊಳಗೆ ಭಯವುಳ್ಳೊಡೆ ನಿನಗೆ ತು |
ರಂಗದಾಶೆಯನು ಬಿಡು ||277||

ಉತ್ಸಾಹದಂಡಕ ರಾಗ ಮಾರವಿ ಏಕತಾಳ

ಏನೆಂಬೆ ಬಂದ ಸೇನೆಗಳೆಲ್ಲವ |
ಸೂನುಗಳಿರ್ವರು ಒಂದೇ ನಿಮಿಷಕೆ |
ಆನೆ ಕುದುರೆ ಮಂದಿ ವಾನರಾಧಿಪ ಸಹ |
ಮಾಣದೆ ಭರತನ ಕಾನನದೊಳಗೆ ||278||

ಹತ್ತು ಭರತಗಿಪ್ಪತ್ತು ನಳಗೆ ಮೂ |
ವತ್ತು ಜಾಂಬವಗೆ ನಾಲ್ವತ್ತು ನೀ ಲಗೈ |
ವತ್ತಂ ಗದಗರುವತ್ತು ಗವಯನಿಗೆ |
ಮತ್ತು ಮತ್ತಂಬನಿತ್ತು ಕಾದಿದರು ಏನಾನೆಂಬೆ ||279||

ಮರಳಿದ ಹನುಮ ಬಿದ್ದುರುಳಿ ಜಾಂಬವನೆ |
ಚ್ಚರಳಿದ ಸುಷೇಣ ತೆರಳಿದ ಗವಯನು |
ನರಳಿದ ನಳ ಬೀಸುರುಳಿದಂಗದ ಕ |
ಣ್ಣರಳಿದ ಭರತನು ತೆರಳಿದರೆಲ್ಲ ಏನಾನೆಂಬೆ ||280||

ಭಾಮಿನಿ

ಕೆಲರು ಬಿಸುಟರು ಧನುವ ರಣದಲಿ
ಕೆಲರು ಶಸ್ತ್ರವ ಮರೆದರಲ್ಲಿಯೆ
ಕೆಲರು ಪ್ರಾಣವ ತೊರೆದರಲ್ಲಿಯೆ ಕೆಲರು ಮೂರ್ಛೆಯಲಿ |
ಕೆಲರು ಮರಳಿದರದರೊಳಗೆ ಕೆಲ
ಕೆಲರಯೋಧ್ಯೆಗೆ ಪೋಗಿ ಪೇಳ್ದರು
ಕೆಲರು ಬದುಕಿದೆವೆಂದು ಬಿಟ್ಟೋಡಿದರು ಸಂಗರವ ||281||

ರಾಗ ಘಂಟಾರವ ಜಂಪೆತಾಳ

ಭರತ ಸಂಗರದಿ ಮೈಮರೆದನೆಂಬುದ ಕೇಳಿ |
ಅರಿತ ರಾಘವನಂದು ನೆರೆ ಕೇಡಿದೆಂದು ||182||

ಯಾಗದೀಕ್ಷಯ ನಿಲಿಸಿ ಬೇಗ ಮಂತ್ರಿಯ ಕರೆಸಿ |
ರಾಘವನು ಹೊರಪಯಣಕಾಗಿ ನಡೆತಂದ ||183||

ರಾಗ ಆಹೇರಿ ಜಂಪೆತಾಳ

ಪುರವ ಹೊರವಂಟ ಶ್ರೀರಾಮ ತನ್ನ |
ಪರಿವಾರ ಸಹಿತ ಸಂಗರಕೆ ನಿಸ್ಸೀಮ || ಪಲ್ಲವಿ ||

ಪೊಡವಿಯಗಲದೊಳೆಯ್ದು ವಾನೆಗಳ ಸೇನೆಗಳ |
ಎಡಬಲಕೆ ಬಿಡದಿರುವದಂತಿಗಳ ಪಂತಿಗಳ |
ನಡನಡುವೆ ಸಂದಣಿಪ ವಾಜಿಗಳ ತೇಜಿಗಳ |
ಜಡಿವ ವಾದ್ಯಗಳ ಚೋದ್ಯಗಳ ನಡೆದು ಸಂ |
ಗಡ ಬರುವವಂದಿಮಾಗಧರ ಪದ್ಯಗಳ ||184||

ಶಿವನ ಹಣೆಗಣ್ಣೊ ಪ್ರಳಯಾಂಧಕಾರದ ಮಳೆಯೊ |
ವಿವರಿಸಲು ವಡಬಾನಳನೊ ಕಾಲಭೈರವನೊ |
ಜವನ ಕಡೆ ಚತುರಂಗ ಮಾರ್ಬಲವೊ ಎನುತ ಜನ |
ನಿವಹವಾಶ್ಚರ್ಯಗೊಳುತಿರಲು ಕುಶಲವರಿ |
ರುವ ವನವ ಸುತ್ತಲೂ ಕವಿಯುತ್ತ ಬರಲು ||185||

ರಾಗ ಗೌಳಮಲಹರಿ ಅಷ್ಟತಾಳ

ಕುಶಲವರನು ಕಂಡ ರಾಮ ಸಾ |
ಹಸದಿ ಬಿಲ್‌ಬಾಣ ರಂಜಿಸಲು ನಿಸ್ಸೀಮ   || ಪಲ್ಲವಿ ||

ರಣದಿ ಬಿದ್ದವರನ್ನು ನೋಡಿ ಸತ್ತ |
ಹೆಣಗಳನೆಳೆದು ತಿನ್ನುವ ನಾಯ ಗಾಡಿ |
ನೊಣಗಳು ಕವಿದೊಂದು ಗೂಡಿ ಲಕ್ಷು |
ಮಣನ ನೋಡುತ ಮನದೊಳು ಚಿಂತೆಮಾಡಿ ||186||

ಭರತಶತ್ರುಘ್ನರ ಕಂಡ ಮನ |
ಕರಗಿ ಕಾತರಿಸುತ್ತ ತಾಮೂರ್ಛೆಗೊಂಡ |
ಕರಿ ತುರಗವು ರಥ ತಂಡ ಬಿದ್ದು |
ಹೊರಳಲು ರಣದಲ್ಲಿ ಸುಭಟರ ಮುಂಡ ||187||

ಭಾಮಿನಿ

ರಣದೊಳಗೆ ಪವಡಿಸಿದ ವೀರರ
ಗಣಿಸಿ ತುದಿಯಾಗುವರೆ ಎಲ್ಲಿಯು
ಹೆಣನ ಮಯವೇ ಮಯವು ಮುನಿವಾಲ್ಮೀಕಿಯಾಶ್ರಮದಿ |
ಗುಣಕೆ ಹುರುಡೇ ಜಾಣರೆನುತಾ
ಕ್ಷಣಕೆ ಬಂದಾ ಮಕ್ಕಳಿರ್ವರ
ಕೆಣಕಿ ಮಾತಾಡಿದನು ತನ್ನಯ ರಾಜನೀತಿಗಳ ||188||

ರಾಗ ಕಾಪಿ ಅಷ್ಟತಾಳ

ಇನ್ನಾದರು ಬೇಡ ಬೇಡ ಮಕ್ಕಳಿರ |
ಸನ್ಮತ ನಿಮಗಲ್ಲ ಇದು ಬಾಲಕರಿರ |    || ಪಲ್ಲವಿ ||

ಶಿಶುಗಳಾಗಿಹ ನಿಮ್ಮೊಳೆಮಗೆ ಕಾಳಗವೇಕೆ |
ವಶವಾದಡಾದರಾಗಲಿ ನಿಮ್ಮ ರಾಜ್ಯದ |
ಪೆಸರೇನು ತಂದೆ ತಾಯ ಬಿಲ್‌ವಿದ್ಯ ಕ |
ಲಿಸಿದವನಾವ ರಾಯ ನೀವಿಬ್ಬರು |
ಋಷಿಯಾಶ್ರಮದೊಳಿಪ್ಪಹಸನೇನು ಮಾಯ ||189||

ಮಕ್ಕಳು ನಮ್ಮೊಳು ಕಾದಲಾರದೆ ನೀ ಹೆ |
ಮಕ್ಕಳಂದದಿ ನಮ್ಮ ನಾರೆಂದು ಬೆಸಗೊಂಬು |
ದಕ್ಕೆ ನಮ್ಮೊಡನೆ ನಂಟೆ ನಮ್ಮನು ಕಕ್ಕು |
ಬೆಕ್ಕಾಗಿ ಕಾಂಬುದುಂಟೆ ಕ್ಷತ್ರಿಯರ ವಂ |
ಶಕ್ಕಿದು ನೀತಿ ಕಾದಲು ಮನಸುಂಟೆ ||190||

ಚತುರಸಾಗರವನಾಳುವ ದೊರೆ ನೀನು ನಿ |
ನ್ನತಿಶಯ ಬಿರುದು ವಿಕ್ರಮಶಾಲಿಯಾದರೆ |
ಗತಿಯಿಲ್ಲದವರು ನಾವು ಕಾದುವ ವೀರ |
ರ್ಮತಿಯಿಲ್ಲದಿಹಿರಿ ನೀವು ನಿಮಗೆ ಬಾಣ |
ಪ್ರತಿಯಾಗಿ ಹೂಡಿ ಕಾದುವಡರಿಯೆವು ನಾವು ||191||

ವಚನ || ಇಂತೆಂಬ ಬಾಲಕರ ನುಡಿಯಂ ಕೇಳಿ ರಾಮನು ಸುಗ್ರೀವನೊಡನೆ ಏನೆಂದನು ಎಂದರೆ –

ರಾಗ ಘಂಟಾರವ ಜಂಪೆತಾಳ

ಕಪಿರಾಜ ಕೇಳಿದೆಯ ಬಾಲಕರ ನುಡಿಗಳನು |
ನಿಪುಣರಿವರಾವ ಪುರುಷಂಗೆ ಜನಿಸಿದರೊ | ||192||

ಈಗಲಿವರೊಳು ಕದನ ಹೇಗಾಗುವುದೊ ಕಾಣೆ |
ನಾಗಭೂಷಣ ಬಲ್ಲ ನಟನೆಯಿದನೆಲ್ಲ | ||193||

ನಮ್ಮ ಕಾರ್ಯದ ಮೇಲೆ ತಮ್ಮಂದ್ಯರಳಿದಿರಲು |
ಎಮ್ಮ ಜೀವಗಳಿದ್ದು ಇನ್ನೇನು ಫಲವು | ||194||

ವಚನ || ಹೀಗೆಂದು ನಿಶ್ಚಯವಂ ಮಾಡಿ ರಣಕೆ ಸನ್ನದ್ಧನಾದ ರಾಮನಂ ಕಂಡು ಕುಶನು ಲವನೊಡನೆ ಏನೆಂದನು ಎಂದರೆ –

ರಾಗ ಸೌರಾಷ್ಟ್ರ ಅಷ್ಟತಾಳ

ಮೊದಲು ಬಂದವರಂಥ ಹದಗರ ನಲ್ಲೀತ | ನೋಡೆ ತಮ್ಮ | ಈತ |
ಗಿದಿರಾಗಿ ನಿಲುವಡೆ ಸದರವಲ್ಲವೊ ಜೋಕೆ | ನೋಡೆ ತಮ್ಮ ||195||

ಬಿಲ್ಲುವಿದ್ಯಗಳ ತಾಬಲ್ಲ ಕೋವಿದನೀತ | ನೋಡೆ ತಮ್ಮ | ಮಾತಿ |
ನಲ್ಲಿ ಚದುರಗೆಣೆಯಿಲ್ಲ ಕೇಳೆನ್ನಾಣೆ | ನೋಡೆ ತಮ್ಮ ||196||

ತುಂಗವಿಕ್ರಮ ರಣರಂಗಸಾ ಹಸಿಯಾತ | ನೋಡೆ ತಮ್ಮ | ಈಗ |
ಸಂಗರ ದೊಳು ನಮ್ಮ ಭಂಗಕಿಕ್ಕದೆ ಬಿಡ | ನೋಡೆ ತಮ್ಮ ||197||

ರಾಗ ನಾದನಾಮಕ್ರಿಯೆ ಅಷ್ಟತಾಳ

ಅಣ್ಣನಾಡಿದ ಮಾತ ಲವ ಕೇಳಿ ಅಗ್ರ |
ಗಣ್ಯನು ಮನದಿ ಧೈರ್ಯವ ತಾಳಿ |
ಕಣ್ಣಾರೆ ನೋಡಿವನ ಪಾಡೇನು ತಾಯ |
ಪುಣ್ಯವಿ ದ್ದರಸಡ್ಡೆ ಮಾಡೆನು ||198||

ಧನು ಶರವನು ಕೈಯೊಳ್ಪಿಡಿದನು ತಾಯಿ |
ಮುನಿವಾಲ್ಮೀಕಿಗೆ ಕೈಯ ಮುಗಿದನು |
ಮಣಿಸಿ ಬಿಲ್ಲಿಗೆ ತೆಬ್ಬ ಬಿಗಿದನು ರಾಮ |
ನನು ತಾಗೆನ್ನುತ ಬಾಣವೆಸೆದನು ||199||

ವಾರ್ಧಕ

ಹಲವು ಮಾತಾಡಿ ರೋಷಿತರಾಗಿ ತಮ್ಮೊಳಗೆ
ಕಲಹ ಕಾರಣಗಳಾಯಿತು ತಂದೆಮಕ್ಕಳಿಗೆ
ಉಳಿದ ಪಟುಭಟರೆದೆಯು ತಲ್ಲಣಿಸಿತಲ್ಲಲ್ಲಿ ಬೆರಗಾಗಿ ನೋಡುತಿರಲು |
ಪ್ರಳಯಕಾಲದ ರುದ್ರನುರಿಗಣ್ಣೊ ವಡಬಾನ
ಳನ ಬಾಯ್ದೆರೆಯೊ ಕಾಲಭೈರವನ ದಾಡೆಯೋ
ಎನಲಾರ್ಭಟಿಸುತ ಕಾದಲು ರಾಮಗಿದಿರಾಗಿ ಶರಬಂದು ಕವಿಯುತಿರಲು ||200||

ರಾಗ ಶಂಕರಾಭರಣ ಮಟ್ಟೆತಾಳ

ವೀರ ರಾಮ ರಣದಿ, ಮದವೇರಿ ಹೂಂಕರಿಸಿ ಸರಳ |
ವಾರಿಧಿಯವೊಲೆಸೆದು ಕುಶನ ಮೋರೆಗಿಟ್ಟನು ||

ಮಾರಿ ಮುಂದುವರಿದು ಬಾಣ ಭೋರುಗುಡಿಸಿ ಬೃಹದ ಕಂಡು |
ಬೇರೆ ಬೇರೆ ಕಡಿದು ಬಿಸುಟ ಧಾರಿಣಿಯಲಿ ||201||

ಕಂಡು ಪರ್ವತಾಸ್ತ್ರಗಳನು ಮಂಡೆಗಾಗಿ ಬಿಡಲು ತರಳಾ |
ಖಂಡಲಾಯು ಧಂಗಳಿಂದ ಖಂಡಿಸಿರ್ದನು ||

ಪುಂಡರೀಕನಯನನೆಸೆದ ತಂಡ ತಂಡದುರಗಶರವ |
ದಿಂಡುಗಡಿದ ಗರುಡಬಾಣದಿಂದ, ಲವನು ||202||

ಭಾಪು ಭಳಿರೆತರಳನೆಂದು ಚಾಪವನ್ನು ನೆಗಹಿಕೊಂಡು |
ಭೂಪನೆಸೆದನಗ್ನಿಶರವ ಕೋಪದಿಂದಲೆ ||
ತಾಪವಡರಿ ಜಗವನೆಲ್ಲ ರೂಪುಬಾಣ ಸುಡುತಲಿರಲು |
ಶ್ರೀಪತಿಯಾ ತನಯ ಜಲದಿ ಮಾಪುಗೈದನು ||203||

ಎಚ್ಚ ಬಾಣಂಗಳೆಲ್ಲ ನುಚ್ಚು ನೂರಾಗೆ ಕಂಡು |
ಕಿಚ್ಚಿನಂತೆ ಕುಶಗೆ ಶೌರ್ಯ ಹೆಚ್ಚಿತಾಗಲೆ ||204||

ಹಿಂದೆ ರಾವಣಾದಿಗಳನು ಕೊಂದು ಬಂದಿರುವ ಕಣೆಗ |
ಳೊಂದುಳಿಯದಂತೆ ರಣದಿ ಸಂದವಾಗಲೆ ||
ಕಂದರಾಟ ಮಾರಿಯಾಯಿತೆಂದು ಪೇಳಿ ಕುಶನ ಕಣ್ಣ |
ಮುಂದೆ ನಿಲುವ ವೀರರಾವ ರೆಂದರಾಗಳೆ ||205||

ರಾಗ ಕೇತಾರಗೌಳ ಅಷ್ಟತಾಳ

ಮಕ್ಕಳೊಡನೆ ರಾಮಚಂದ್ರದೇವಗೆ ಮನ |
ದಕ್ಕರುಂಟೆಂಬುದನು |
ಲೆಕ್ಕಿಪ ಬಗೆಯಂತೆಕುಶನಿಟ್ಟಶರ ಬಂದು |
ಹೊಕ್ಕಿತಂದೊಡಲೊಳಗೆ ||206||

ರಕ್ಕಸರಿಪು ಬಸವಳಿದು ಬೇಸಗೆಯ ಝ |
ಳಕ್ಕೆ ಬಾಡಿದ ಲತೆಯ ||
ಮಿಕ್ಕಂತೆ ರಥದಿಂದಬಿದ್ದು ಮೂರ್ಛಿತನಾಗಿ |
ಗಕ್ಕನೆ ಪವಡಿಸಿದ ||207||

ಲೋಕನಾಯಕ ರಣದೊಳು ಮಲಗಿರೆ ಸುರಾ |
ನೀಕವಂಬರದೊಳಗೆ ||
ರಾಕೇಂದು ಮಂಡಲವಿರದೆ ಬಾಧಿಸೆ ರಾಹು |
ಸೋಕಿದಂದದ ಮುಖದ ||208||

ಶ್ರೀಕಂಬುಕಂಠದೊಳೆಸೆದು ರಾಜಿಸುತಿಪ್ಪ |
ಏಕಾವಳಿಯ ಹಾರವ ||
ಆ ಕುಮಾರರು ಕಂಡುಭರತಶತ್ರುಘ್ನರಿ |
ದ್ದಾಕಡೆಗೈದಿದರು ||209||

ವಿಪರೀತವಿದು ನೋಡು ತಮ್ಮ ಕಟ್ಟಿದಮುತ್ತಿ |
ನಪರಂಜಿಕೊರಳ ದಂಡೆ ||
ಅಪರೂಪವಿದು ನಮ್ಮ ತಾಯಿಗಾ ಗುವದೆಂದು |
ಅಪಹರಿಸಿದರಿರ್ವರು ||210||

ತಪಸಿಗೆ ಕಾಣಿಕೆ ಕೊಡಬೇಕೆಂದೆನುತಲೆ |
ಕಪಿಗಳಿರ್ವರ ಸಾಯದ ||
ನಿಪುಣರೆಂದ್ಹೆಡೆಗೈಯ ಬಿಗಿಯೆ ಮಾರುತಿ ಕಂಡು |
ಲಪಗುಟ್ಟುತಿಂತೆಂದನು ||211||

ರಾಗ ಆಹೇರಿ ಅಷ್ಟತಾಳ

ಕಂಡಿರೇ ನೀವು ಕಂಡಿರೇ |
ಕಂಡಿರೆ ನೀವು ಕಂಡಿರೆ ಕುಶಲವರು |
ಹಿಂಡುಸೇನೆಯನೆಲ್ಲ ಭಂಡುಮಾಡಿದರು || ಪಲ್ಲವಿ ||

ರಣದೊಳಗೆಲ್ಲರ ಮಲಗಿಸಿ ಮತ್ತಾ |
ಗುಣನಿಧಿ ರಾಮನ ಕೊರಳಿಂದ ಕಿತ್ತ ||
ಮಣಿಗಣ ರತುನ ಹಾರವನೆಲ್ಲ ಪೊತ್ತಾ |
ಕ್ಷಣದೊಳ ಗೈದಿ ಬರುವರು ನಮ್ಮತ್ತ ||212||

ಕೊಂಡುಹೋಗಲಿ ನಮ್ಮ ನಲ್ಲಿಗೆ ಸೀತೆ |
ಕಂಡರೆ ರಕ್ಷಿಸುವಳು ಜಗನ್ಮಾತೆ ||
ಪುಂಡುಹುಡುಗರೊಳು ಜಗಳಾಟವೇಕೆ ಭೂ |
ಮಂಡಲದೊಳು ನಮ್ಮಕೊಂದಂತೆ ಜೋಕೆ ||213||

ವಚನ || ಇಂತೆಂದು ಹನುಮಜಾಂಬವರು ಪ್ರಸಂಗಿಸುತ್ತಿರಲಾಗಿ ಅತ್ತಲಾ ಜಾನಕಿಯು ಪುತ್ರರು ಬಾರದಿರಲು ಏನೆನುತಿರ್ದಳದೆಂತೆನೆ –

ರಾಗ ಮಧ್ಯಮಾವತಿಏಕತಾಳ

ತರಳಲವನ ಕುಶ ತರುವೆನೆಂದೆನುತಲಿ |
ತೆರಳಿಪೊದವನಿನ್ನೂ ಬರಲಿಲ್ಲವೇಕೆ || ಪಲ್ಲವಿ ||

ಏನುಮಾಡಿದರೊ ಇನ್ನೆಂತು ಕಾದಿದರೊ ಈ |
ಸೂನುಗಳಳಿದರೊ ಕಾನನದೊಳಗೆ ||
ತಮ್ಮನ ಕರೆದು ತಾರೆಂದೆನುತಲೆ ಮಗನ |
ಸುಮ್ಮನೆ ಕಳುಹಿದೆನಯ್ಯಯ್ಯ ವಿಧಿಯೆ ||214||

ಹದಿಮೂರು ವರುಷವಾಗದ ಬಾಲರಿವರೀಗ |
ಕದನದೊಳೆಂತು ಕಾದುವರೆಂದು ತಿಳಿಯೆ ||
ಸದನದೊಳ್ ಮುನಿಪನಿಲ್ಲದ ವೇಳೆಯಲಿ ಲವ |
ಕುದುರೆ ಬಂದುದರನ್ನು ಕಟ್ಟಿದನೇಕೊ ||215||

ಬೇಡ ಇಂತೆಂಬ ಬಾಲಕರ ಮಾತನು ಮಾರಿ |
ಕೇಡಿಗಲ್ಲವೆ ಕದನ ಅವರೊಳೀಸಾರಿ ||
ಮಾಡುವದೇನಿನ್ನು ಮತ್ತೊಬ್ಬರೆನಗಿಲ್ಲಿ |
ನೋಡಿಬರುವರಿಲ್ಲ ಮಕ್ಕಳನಲ್ಲಿ ||216||

ದ್ವಿಪದಿ

ಮರಳಿ ಜಾನಕಿ ಸುತರು ಬರಲಿಲ್ಲವೆಂದು |
ಮರುಳುಗೊಂಡಳು ತನ್ನ ಮನಸಿನೊಳಗಂದು  ||217||

ಪಾತಾಳದಿಂದ ಮುನಿನಾಥ ಬರನೇಕೆ |
ಸೀತೆ ಹೀಗೆಂದು ಮೂರ್ಛಿತಳಾದಳಾಕೆ ||218||

ಎಂಬ ಸಮಯದಿ ಹನುಮ ಜಾಂಬವರ ಬಿಗಿದು |
ಕುಂಭಿನಿಯೊಳೆಳಕೊಂಡು ಬರುತಿರಲು ನೆರೆದು ||219||

ಏನಾದರೋ ತನಯರೆಂದು ಚಿಂತಿಸುವ |
ಜಾನಕಿಯ ಮುಂದಿರಿಸಿ ಕೈಮುಗಿದನು ಲವ ||220||

ತಾವು ತಂದೊಡವೆಗಳ ತಾಯ ಮುಂದಿರಿಸಿ |
ಪ್ರೀಯದಲಿ ತೋರಿದನು ಬೇರೆ ವಿಂಗಡಿಸಿ ||221||