ರಾಗ ಕಾಂಭೋಜಿ ಮಟ್ಟೆತಾಳ

ನಿಲ್ಲು ನಿಲ್ಲೆಲೋ ನೀನು ಸಮರಕೆ |
ಬಲ್ಲೆ ನಿನ್ನ ಬಗೆಯನೆಂದು ಭುಲ್ಲವಿಸಿದನು ||205||

ನೋಡಿ ಧನುವನು ಹೂಡಿ ಶರವನು |
ಕೂಡೆ ಕೂಡೆ ಬಿಡಲು, ಕಡಿದಾಡಿ ಬಿಸುಟನು ||206||

ಕೋಪದಿಂದಲೆ ಭೂಪನನುಜನು |
ಚಾಪವನ್ನು ಸೆಳೆಯೆ ಲವಗೆ ತಾಪ ಹೆಚ್ಚಿತು ||207||

ಮತ್ತೆಯೆಲ್ಲರೂ ಸುತ್ತುಕವಿದರು |
ಎತ್ತಿ ಖಡ್ಗವನು ಲವನ ಮುತ್ತಿಕೊಂಡರು ||208||

ಬೊಬ್ಬಿರಿದರು ಇಬ್ಬರ್ತಿವಿದರು |
ಸರ್ಬ ಬಲವು ಮುಸುಕೆ ಪೆಟ್ಟಿನಹಬ್ಬವಾಯಿತು ||209||

ಸೀತೆಯಣುಗನು ಧಾತುಗೆಟ್ಟನು |
ಭೂತಳಕ್ಕೆ ಮೂರ್ಛೆವೋಗಿ ಸೋತು ಬಿದ್ದನು ||210||

ಭಾಮಿನಿ

ಗರುಡದೇವನ ಗರುವದುರುಬೆಗೆ
ಉರಗನಿದಿರೇ ಸುತ್ತುಮುತ್ತಿಂ
ದರಿಭಟರು ಕುತ್ತಿದರೆ ಲವನೊರಗಿದನು ಮೂರ್ಛೆಯಲಿ |
ತರಳನನು ಕೈಗಟ್ಟಿ ರಥದೊಳ
ಗಿರಿಸಿ ಕುದುರೆಯ ಬಿಟ್ಟು ಮರಳಿದ
ರರಿತು ತಾಪಸವಟುಗಳೈದಿಂತೆಂದರವನಿಜೆಗೆ ||211||

ಸೌರಾಷ್ಟ್ರ ತ್ರಿವುಡೆತಾಳ

ಬೇಡವೆಂದರೆ ಮಾತ ಕೇಳದೆ |
ನಾಡಪಾಲರ ಯಜ್ಞದಶ್ವವ |
ಕಾಡಬಳ್ಳಿಯ ಹರಿದು ಕಟ್ಟಿದ | ನೋಡಿ ಲವನು ||212||

ಬೇಡಿಕೊಂಡರು ತರಳರೆಮ್ಮವ |
ರಾಡಿದಾ ನುಡಿ ಕೇಳದವರೊಳು |
ಮಾಡಿದನು ಯುದ್ಧವನು ಖಾಡಾ | ಖಾಡಿಯಿಂದ ||213||

ಅಷ್ಟದಿಕ್ಕನು ಕವಿದು ಬಾಲಗೆ |
ಬಿಟ್ಟುಬಾಣವ ಕಡೆಗೆ ಹೆಡೆಮುಡಿ |
ಕಟ್ಟಿ ಒಯ್ದರು ಪುರಕೆ ರಥದೊಳ | ಗಿಟ್ಟು ಜವದಿ ||214||

ಕೇಳುತಾಕ್ಷಣ ದೊಳಗೆ ತನ್ನಯ |
ಬಾಲಕನ ಭಂಗವನು ಧಾತ್ರಿಯ |
ಮೇಲೆ ತಾ ತಲೆ ತಿರುಗಿ ಬಿದ್ದಳು | ಲೋಲನಯನೆ ||215||

ರಾಗ ಸೌರಾಷ್ಟ್ರ ಮಟ್ಟೆತಾಳ

ಕಂಜಲೋಚನ ಕಾರುಣ್ಯಾಂಬುಧಿ |
ಮಂಜುಳಾಕರ ಮಾಧವ ಪ್ರಿಯ | ||216||

ಚಕ್ರಧಾರಣ ವಿಕ್ರಮರಣ |
ಶಕ್ರಸನ್ನಿಭ ಸುಪ್ರಭಾಕರ ||217||

ದೇಶಕೋಶವ ಬಿಟ್ಟು ನಾವನ |
ವಾಸಿಯಾದರೂ ಲೇಸಕಾಣೆನು ||218||

ಈ ಕಾಡಲ್ಲಿ ವಾಲ್ಮೀಕಿಮುನಿಪತಿ |
ಸಾಕಿ ಮಕ್ಕಳ ಸಲಹಿದ ಯತಿ ||219||

ಆತನಿಲ್ಲದ ವೇಳ್ಯದಿ ಲವ |
ಏತಕೈದಿದ ಮಾತ ಕೇಳದೆ ||220||

ಇಲ್ಲವೇ ಕುಶ ಮಲ್ಲಸಾಹಸ |
ಎಲ್ಲಿಗೈದಿದ ಬಲ್ಲರಾಗಿ ಹ ||221||

ಖುಲ್ಲರಾಯರು ಕೂಡಿಬಂದವ |
ರೆಲ್ಲ ಲವನನು ಕೊಲ್ವರಲ್ಲವ್ವ ||222||

ವಾರ್ಧಕ

ಧರಣೀಶ ಕೇಳಿಂತು ಜನಕನಂದನೆಯು ತರ
ತರದಿ ಹಲುಬುತ್ತಲುರೆ ಬೆಂಡಾಗಿ ಬುಡಕಡಿದ
ಮರದಂತೆ ಧೊಪ್ಪನೆ ಧರಿತ್ರಿಗುರುಳಿದು ಬಳಿಕ ಚೇತರಿಸಿ ಮೆಲ್ಲನೆದ್ದು |
ಬೆರಳನೆಡೆಮುರಿದು ಬೆಂಡಾಗಿ ವಿರಹದಿ ತನ್ನ
ತರಳನಾಪತ್ತಿಗೋಸ್ಕರ ಮರುಗುತಿರೆ ಕುಶನು
ಪರಿಸಮಾಪಕೆ ಕುಶವ ನೆತ್ತಿಕೊಂಡೈತಂದು ತಾಯ ಕಂಡಿಂತೆಂದನು ||223||

ರಾಗ ವರಾಳಿ ಏಕತಾಳ

ಚಿಂತಿಸುವದೇತಕೆ ಪೇಳಮ್ಮಯ್ಯ ನಿನ |
ಗಿಂಥದುಃಖ ಬಂದುದೇತಕಮ್ಮಯ್ಯ ||
ಅಂತರಂಗದಂತರವೇ ನಮ್ಮಯ್ಯ ಚಂದ್ರ |
ನಂಥ ಮೊಗದಕಾಂತಿ ತಗ್ಗಿ ತಮ್ಮಯ್ಯ ||224||

ಕಣ್ಣನೀರು ತಂಬಿದೇತ ಕಮ್ಮಯ್ಯ ಚೆಲ್ವ |
ಬಣ್ಣಗುಂದಿ ತಣ್ಣಗಾಯಿತಮ್ಮಯ್ಯ ||
ಬಣ್ಣಿಸಿ ನೀನೆಣ್ಣಿಸದಿರಮ್ಮಯ್ಯ ಮು |
ಕ್ಕಣ್ಣನಾಣೆ ಅಂಜಬೇಡ ವಮ್ಮಯ್ಯ ||225||

ರಾಗ ನೀಲಾಂಬರಿ ಏಕತಾಳ

ಯಾವ ರಾಯ ರೊ ನಾನರಿಯೆ ಕಂದ ಕಂದ, ನಾವಿರುವ |
ತಾವಿಗಾಗಿ ಬಂದರಂತೆ ಕಂದ ಕಂದ ||226||

ಕೋವಿದಶ್ವ ತಂದರಂತೆ ಕಂದ ಕಂದ, ಪಾ |
ರ್ಥಿವರಶ್ವಕಟ್ಟಿ ಲವನು ಕಂದ ಕಂದ ||227||

ಹೆಮ್ಮೆಯಿಂದ ಮಾತನಾಡಿ ಕಂದ ಕಲಹವ ಬಯಸಿ |
ಗಮ್ಮನೆ ಶರ ವೆಚ್ಚನಂತೆ ಕಂದ ಕಂದ ||
ಸುಮ್ಮಾನದಿ ಮುತ್ತಿಕೊಂಡು ಕಂದ ಕೈಗಟ್ಟಿ ನಿನ್ನ |
ತಮ್ಮನ ಪಿಡಿ ದೊಯ್ದರಂತೆ ಕಂದ ಕಂದ ||228||

ವಾರ್ಧಕ

ಪರಿಪರಿಯ ದುಃಖಮಂ ಬಣ್ಣಿಸುತ ಭೂಜಾತೆ
ತರಳನಾಗಮ ಪೇಳೆ ತಾಯ ಮೊಗಮಂ ನೋಡಿ
ಉರಿಗಣ್ಣನಂತೆ ರೋಷಿತನಾಗಿ ಪೌರುಷದೊಳೊರೆದ ತನ್ನಯ ಮಾತೆಗೆ |
ವರಜನನಿ ಕೇಳು ಎನ್ನಯ ಅನುಜನನ್ನೊಯ್ದ
ದುರುಳರಾರಾದಡಾಗಲಿ ಕಾದಿ ನಿಮಿಷದೊಳು
ಮರಳಿ ಹಯವಂ ಸಹಿತ ಸೆಳೆದು ತಾರದೆ ಬಿಡೆನು ಪರಿಕಿಸೆನ್ನಯ ಸಾಸವ ||229||

ರಾಗ ಕೇದಾರಗೌಳ ಅಷ್ಟತಾಳ

ಅಮ್ಮ ಚಿಂತಿಸಬೇಡ ಆದಡೇನಾಯಿತು |
ಬ್ರಹ್ಮಲಿಖಿತ ತಪ್ಪೂದೆ ||
ಸುಮ್ಮನೆ ಮರುಗದಿರ್ಲವನ ಕೊಂಡೊಯ್ದವ |
ಬೊಮ್ಮನ ಪಿತನಾಗ ಲಿ ||230||

ಇಂದ್ರಾಗ್ನಿ ಯಮ ವಾಯು ವರುಣ ಕುಬೇರ ಗೌ |
ರೀಂದ್ರ ದಿಕ್ಪಾಲಕರ ||
ಮಂದಿರ ಕ್ಕೊಯ್ದಡಗಿಸಿದರೆನ್ನನುಜನ  |
ತಂದು ನಿಮಗೆ ತೋರುವೆ ||231||

ಲೋಕವೆ ಮುಳುಗಳಿ ನಾಕವೆ ಬೀಳಲಿ |
ರಾಕೇಂದು ಧರ ಮುನಿಯಲಿ ||
ಶ್ರೀಕಂಠನಾಣೆ ತಪ್ಪಿದರೆ ಎನ್ನನುಜನ |
ನಾ ಕರತರುವೆನಮ್ಮ ||232||

ವಚನ || ಇಂತೆಂದು ತಾಯ ಮುಂದೆ ಭಾಷೆಯನ್ನುಚ್ಚರಿಸಿ ರಣಕೆ ಸನ್ನದ್ಧನಾದ ಕುಮಾರ
ಕಂಠೀರವನಂ ಕಂಡು ವಜ್ರಸೀಸಕಮಂ ತೊಡಿಸಿ ಶತ್ರುಗಳ ಜೈಸುವಂಥ
ಮಂತ್ರೋಪದೇಶವಂ ಮಾಡಿ ಮಂಗಲವಚನದಿಂ ಪರಸಿದಳದೆಂತೆನೆ –

ರಾಗ ಭೈರವಿ ಝಂಪೆತಾಳ

ಸ್ಥಿರಜೀವರಾಗಿ ನೆರೆ ಸಿರಿವಂತರಾಗಿ ಸಂ |
ಗರಶೂರರಾಗಿರೆಂದ್ಹರಸಿದಳು ಮಗನ  || ಪಲ್ಲವಿ ||

ಹಗೆಯವರ ಕೂಡೆ ನಿಜವನು ಪೇಳದಿರಿ ಮಗನೆ |
ಅಗಲದಿರಿವನದ ಮಧ್ಯದೊಳಿರ್ವರು ||
ಖಗಮಗಂಗಳ ಕೋಟಲೆಗೆ ಎಚ್ಚರಿಕೆಯೊಳಿರಿ |
ಜಗವುಳ್ಳನಕ ಬಾಳಿರೆಂದು ಪರಸಿದಳು ||233||

ಹಿತಶತ್ರುಗಳ ಕೂಡೆ ಅತಿಸ್ನೇಹ ಮಾಡದಿರಿ |
ಅತಿಮಿತ್ರ ರೊಡನೆ ಸಂಗತರಾಗಿ ರಿ ||
ಸತತ ಹೋದಲ್ಲಿ ಒಳ್ಳಿತ ಕೊಡಲಿ ಶಿವನೆನುತ |
ಸತಿ ಯೆತ್ತಿದಳು ಮಗನ ತಡಸಿ ಮಸ್ತಕವ ||234||

ದ್ವಿಪದಿ

ವಾಲ್ಮೀಕಿಮುನಿಪದವನೊಮ್ಮೆ ಧ್ಯಾನಿಸುತ |
ನಿರ್ಮಲದಿ ಅಷ್ಟದಿಕ್ಕುಗಳಿಗೊಂದಿಸುತ ||235||

ಅಮ್ಮಜಾನಕಿಗೆರಗಿ ಆ ಕ್ಷಣವೆ ಬಂದ |
ತಮ್ಮ ಲವನನು ಕಾಂಬ ಕಡುತವಕದಿಂದ ||236||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಕುಶನು ರಣಕೆ ತೆರಳಿಬರುವ ಕುಶಲನಡೆಗಳೊ |
ವಷಭಧ್ವಜನ ಕಣ್ಣಿಂದುಗುಳ್ವ ಬಿಸಿಯ ಕಿಡಿಗಳೊ ||237||

ಕುಸುಮಬಾಣ ನೆಸುವ ಶರದ ಪೆಸರು ಪಲ್ಲಟ ವೊ |
ವಸುಧೇಶರ ಮಕುಟವಜ್ರ ದೆಸೆವ ಜಳಕ ವೊ ||238||

ಬಿಸಜಮುಖಿಯ ರೆಸಳುಗಣ್ಣೊಳೆಸೆವ ನೋಟ ವೊ |
ಪಸುಳೆಗಳ ಕೈಯೆಸಕದಿನುರು ಳಿಸಿದ ಚಳಕ ವೊ ||239||

ರಾಗ ವಂದಾವನಸಾರಂಗ ಏಕತಾಳ

ಏನನೆಂಬೆನು ಕುಶನ ಧೈರ್ಯವ ಬಂದು |
ಆನೆಯ ಮೇಲೆ ಬಿದ್ದು ಸೆಣಸುವ ಶೌರ್ಯವ   || ಪಲ್ಲವಿ ||

ತಡೆದನೆ ಓಡಿ ಹೋಹ, ಸೆನೆಯನೆಲ್ಲ |
ಬಡಿದನೆ ಮುಂದರಿವ ಮದ್ದಾನೆಯ ನೆಚ್ಚು |
ಕೆಡಹಿ ಶತ್ರುಘ್ನನ ಬಿಡಿಸಿಕೊಂಡವನು ಲವನ ||240||

ಬಿಟ್ಟು ತಂದರು ತಿರಿಗಿ ವಾಜಿಯ ಬಿಡದೆ |
ಕಟ್ಟಿ ಕೊಂಡರು ಮಖದ ತೇಜಿಯ ಕುಶನ |
ದಿಟ್ಟ ತನಕೆ ಪುಷ್ಪವಷ್ಟಿ ಸುರಿಯಿತು ವನಕೆ ||241||

ವಾರ್ಧಕ

ಹರಿಹರರು ತಾವಿಬ್ಬರೊಂದಾಗಿ ಕಾದಿದರೆ
ಧುರದೊಳಿದಿರಾಗಿ ನಿಲುವವರುಂಟೆ ಭೂಪಾಲ
ತರಳರಿರ್ವರು ತಮ್ಮೊಳೇಕಮತವಾಗಿರಿವ ಉರುಬೆಗಾನುವರಾವರು |
ದುರುಳತನದಿಂದಲಿದಿರಾಗಿ ಶತ್ರುಘ್ನನಾ
ಪರಿವಾರಸಹಿತ ತೆರಳಿದನು ಯಮಪಟ್ಟಣಕೆ
ಚರನೊರ್ವನೈತಂದು ರಾಮಚಂದ್ರನ ಕೂಡೆ ಕರವ ಮುಗಿದಿಂತೆಂದನು ||242||

ರಾಗ ಘಂಟಾರವ ಜಂಪೆತಾಳ

ವಿಶ್ವನಾಯಕ ಕೇಳು ಅಶ್ವಮೇದದ ಕುದುರೆ |
ತಾ ಸ್ವತಂತ್ರದಿ ತಿರುಗುತಷ್ಟದೇಶಗಳ ||243||

ಅರಸರೆಲ್ಲರ ಗೆಲಿದು ಅಲ್ಲಿ ಕಪ್ಪವ ತಳೆದು |
ಬರುತಿರಲು ವಾಲ್ಮೀಕಿ ಮುನಿಪನಾ ಶ್ರಮದಿ ||244||

ತರಳನೊರ್ವನು ಕಂಡು ತಡೆದನಾ ಕುದುರೆಯನು |
ಸರಳನೆಸೆದೆಲ್ಲರಿಗು ಸಾಕುಮಾಡಿದನು ||245||

ಬಾಣವೆಸೆ ಯಲ್ಕವನ ತ್ರಾಣಕ್ಕೆ ಜೋಡಿಲ್ಲ |
ಪ್ರಾಣವಳಿ ದವರ ಗೀರ್ವಾಣ ತಾಬಲ್ಲ ||246||

ಮಕ್ಕಳಾಟಿಕೆ ಕಡೆಗೆ ಮಾರಿಯಾಯಿತು ನಮಗೆ |
ಒಕ್ಕಣಿಸಲೇನಿನ್ನು ಶತ್ರುಘ್ನನೊಸಗೆ ||247||

ರಾಗ ಆಹೇರಿ ಜಂಪೆತಾಳ

ಕೇಳಿ ಮೂರ್ಛಿತನಾದ ರಾಮ ತನ್ನವರು |
ಕಾಳಗದೊಳಗೆ ಮಡಿದ ವತ್ತಾಂತಗಳನು ||248||

ಮಖತುರಗ ಮಾರ್ಬಲವು ಸಹಿತ ಶತ್ರುಹನ |
ಸಕಲ ರಾಯರನು ಬಾಲಕರು ಗೆಲಿದುದನು ||249||

ಲಕ್ಷ್ಮಣನೆ ಬಾರೊ ಸಂಗರಕೆ ಸೇನೆ ಸಹಿ |
ತೀಕ್ಷಣದೊಳತಿಜವದಿ ಪೋಗಯ್ಯ ದುರಕೆ ||250||

ಆ ಕ್ಷಣಕೆ ಬಲಗೂಡಿ ಬಂದು ನಿಂದಿರಲು |
ರಾಕ್ಷಸಾಂತಕ ನಿಂತು ಪೇಳ್ದ ಕಾ ಹುರಕೆ ||251||

ರಾಗ ದೇಶಿ ಅಷ್ಟತಾಳ

ರಣಕೆ ಸನ್ನಹವಾದರೆಲ್ಲ ಲಕ್ಷು |
ಮಣ ತಮ್ಮ ನಪಜಯವನು ಕೇಳಿ ಸೊಲ್ಲ || ಪಲ್ಲವಿ ||

ಆನೆ ಕುದುರೆಗಳ ತರಿಸಿ ಅದರ |
ನಾನಾ ವಿಧದ ಪದುವಾಯಿಂದ ಶಂಗರಿಸಿ ||
ಠಾಣರಾವುತರನ್ನೆ ಬರಿಸಿ ತನ್ನ |
ಸೇನೆಯ ನೆರಹಿ ಡಂಗರುವನ್ನೆ ಹೊಯ್ಸಿ ||252||

ಛತ್ರ ಚಾಮರ ಪತಾಕೆಗಳ ಸುಭ |
ಟೋತ್ತಮ ರ್ಪಿಡಿದ ಬತ್ತೀಸಾಯುಧಗಳ ||
ಎತ್ತಲು ಕುದುರೆ ಮಂದಿಗಳ ಸುತ್ತ |
ಮುತ್ತಲು ವಾದ್ಯ ತಂಬಟೆಯ ಭೇರಿಗಳ ||253||

ಈಡಾದ ರಥವ ಹತ್ತಿದರು ಮುಂದೆ |
ಜೋಡಾಗಿ ಕುದುರೆ ಮಂದಿಗಳನೊತ್ತಿದರು ||
ಓಡುತ್ತ ವನವ ಮುತ್ತಿದರು ಅವರ |
ನೋಡಲು ಕಾಡುಕಾಡೆಲ್ಲ ಸುತ್ತಿದರು ||254||

ವಚನ || ಇಂತು ಮಾರ್ಬಲವು ಕವಿಯುತ್ತಿರಲಾಗಿ ಕಂಡು ಕುಶನು ಲವನೊಡನೆ ಏನೆಂದನು ಎಂದರೆ –

ರಾಗ ಕಾಂಭೋಜಿ  ತ್ರಿವುಡತಾಳ

ನೋಡಿದೆಯಾ ತಮ್ಮ ನೋಡಿದೆಯ ನಮ್ಮ |
ಕೂಡೆ ಖಾಡಾಖಾಡಿ ಯುದ್ಧ ಮಾಡಲು ಬಂದಂಥ ಪಡೆಯ || ಪಲ್ಲವಿ ||

ಮೊದಲು ನಾವು ಕಟ್ಟಿಕೊಂಡ ಕುದುರೆಗಾಗಿ ಸೆಣಸಿದವರ |
ಸೆದೆದು ಛಾನಾ ಹಾನಿಯನ್ನು ಮಾಡಿದ ಮೇಲೆ ||
ಅದರೊಳೊರ್ವ ತಪ್ಪಿಸಿಕೊಂಡೊದಗಿ ಊರಿಗೈದಿ ಮತ್ತೆ |
ಬದಲು ಪಡೆಯ ಕೂಡಿಕೊಂಡು ಎದುರು ಬಂದು ನಿಂದಿರುವುದ ||255||

ಎತ್ತಣಿಂದ ಬಂದುದೊ ಭೂಪೋತ್ತಮರಮಂದಿ ಕುದುರೆ |
ಕತ್ತಲೆ ತಾಬಂದು ರವಿಯ ಮುತ್ತುವ ಹಾಗೆ ||
ಬತ್ತೀಸಾಯುಧಂಗಳನ್ನು ಹಸ್ತದಿ ಪಿಡಿದು ಸುತ್ತ |
ಮುತ್ತಲು ನಮ್ಮೊಡನೆ ಖಡ್ಗವೆತ್ತಿ ರಣಕೆ ನಿಲುವ ಭಟರ ||256||

ರಾಗ ಮಾರವಿ ಮಟ್ಟೆತಾಳ

ಅಬ್ಬರಿಸಿ, ತಮ್ಮೊಳು ತಾವಿಬ್ಬರು ಮಾತಾಡಿಕೊಂಡು |
ಸರ್ಬ ಬಲ, ಕಿದಿರು ಬಿಲ್ಲ ತೆಬ್ಬನೇರಿಸಿ ||
ಬೊಬ್ಬಿಡುತ್ತ ಸರಳ ಬಿಡುವ ಉಬ್ಬಟೆಯ, ಕಂಡು ಲಕ್ಷ್ಮ |
ಣಾರ್ಭಕರ, ಸಮ್ಮುಖಕ್ಕೆ ಎಬ್ಬಟ್ಟಿದ ತನ್ನ ಪಡೆಯ ||257||

ಬಿಟ್ಟು ಬಿಟ್ಟು ಬಾಣವ ಬಂದಷ್ಟೂ ಕುದುರೆ ಮಂದಿಗಳನು |
ಕುಟ್ಟಿ ಕುಟ್ಟಿ ತಲೆಯ ಕಣದೊಳೊಟ್ಟುತಿರ್ದರು ||
ಅಟ್ಟಿ ಹಿಡಿದು ಬಡಿದು ಮಲ್ಲ ಮುಷ್ಟಿಯಿಂದ ತಿವಿದು ನಾವಿ |
ನ್ನೆಷ್ಟು ಕಾದಲೆಂದು ಯಮನ ಪಟ್ಟಣಕಟ್ಟಿದರೆಲ್ಲರ ||258||

ಬಂದ ಬಂದ ಪಡೆಯನೆಲ್ಲ ಕೊಂದು ಕೊಂದು ಬಿಸುಟ ಮೇಲೆ |
ನಿಂದನು ಲಕ್ಷ್ಮಣನು ಕಾದಲೆಂದು ಗುರುವದಿ ||
ಒಂದೆ ಬಾಣವೆಸೆದು, ರಥದಿಂದ ಕೆಡಹೆ ಮೂರ್ಛೆಯೋದ |
ಅಂದವ ಕಾಣುತ್ತ, ಸುರರಂದು ಪೊಗಳಲಂಬರದೊಳು ||259||

ಕಂದ

ಲಕ್ಷ್ಮಣ ರಥದೊಳು ಮೈಮರೆ
ದಾಕ್ಷಣದೊಳ್ ದೂತನೈದಿ ಪೇಳಲ್ ಕೇಳ್ದು |
ಆ ಕ್ಷಿತಿಧರ ಮನಮರುಗಿದ
ನಿಕ್ಷ್ವಾಕ್ಕುಲದೀಪ ನಂದಿದುದೆ ಹಾಯೆನುತಂ ||260||

ರಾಗ ತೋಡಿ ಏಕತಾಳ

ಲಕ್ಷ್ಮಣರುದ್ರಪ್ರತಾಪ ಇಕ್ಷ್ವಾಕ್ಕುಲ ದೀಪ |
ನೀ ಕ್ಷಿತಿಯೊಳ್ ಬಿದ್ದಮೇಲೆ ದೀಕ್ಷೆ ಯೇತಕಿನ್ನು ||261||

ಬ್ರಹ್ಮಾದಿ ದೇವರ್ಕಳೊಳು ತಮ್ಮಗೆಣೆಯುಂಟೆ |
ನಮ್ಮ ಶೌರ್ಯತಗ್ಗಿ ಕ್ಷಾತ್ರ | ಧರ್ಮ ಕೆಟ್ಟಿತಿನ್ನು ||262||

ಕರ್ಮವಶವಲ್ಲದಿಷ್ಟು ವರ್ಮ ಬಾರದಲ್ಲ |
ಸುಮ್ಮನೇ ಕಳುಹಿ ಮೋಸ ನಮ್ಮಿಂದಾಯಿತಲ್ಲ ||263||

ರಾಗ ನೀಲಾಂಬರಿ ರೂಪಕತಾಳ

ಏನ,ಮಾಡಲಿ ನಾನು ಈ ವಿಷಮ, ಗತಿಗಿನ್ನೀ |
ಸೂನುಗಳಿಂದೀವಂಶಕೆ ಊನವು ಬಂತಲ್ಲ  || ಪಲ್ಲವಿ ||

ಶರಧಿಗೆ ಸೇತುವ ಕಟ್ಟಿದೆ ಸರ್ವರಿಗೂ ಸಮನೆನಿಸಿದೆ |
ಧುರದೊಳು ದುಷ್ಟರ ಶಿರಗಳ ತರಿದೆನು ರಕ್ಕಸರ ||
ಪರಶುವಿನಾಯುಧ ಸೆಳೆದೆನು ಪಂಥವ ಹಿಗ್ಗಿಸಿದೆನು ಈ |
ತರಳರೊ ವಂಶವ ಕೆಡಿಸುವ ದುರುಳರೊ ನಾನರಿಯೆ ||264||

ಏತಕೆ ತೊಡಗಿದೆ ಯಜ್ಞವ ನೇತಕೆ ಕಳುಹಿದೆಯನುಜರ |
ಏತಕೆ ತಡೆದರೊ ತರಳರು ಏತಕೆ ಕಾದಿದರೊ ||
ಏತಕೆ ಮಡಿದರೊ ಇವರಿನ್ನೇತಕೆ ರಾಜ್ಯವು ತನಗಿ |
ನ್ನೇತಕೆ ದೊರೆತನವೆಂಬುದು ಪಾತಕ ಶಿವ ಶಿವನೆ ||265||

ಕಂದ

ಅನುಜನ ಕೇಡಿಂಗೋಸ್ಕರ
ವನಜಾಂಬಕ ಚಿತ್ತದಲ್ಲಿ ಮರುಗುತ್ತಿರಲು |
ಘನಶೌರ್ಯಗ್ರಣಿ ಕೈಕಾ
ತನುಜಂ ಬಂದಣ್ಣನಂಘ್ರಿಗೆರಗುತ ಪೇಳ್ದಂ ||266||