ರಾಗ ನಾದನಾಮಕ್ರಿಯೆ (ಯಾಲಪದ) ಏಕತಾಳ
ಬೆಳಗಾಗುತ್ತಲೇ ಏಳುವಳು |
ನಳಿನಮಿತ್ರಗೊಂದಿಸುವಳು |
ಜಲಜಪುಷ್ಪಗಳನೆ ಕೊವಳು ಆಹೂವ ಮುನಿ |
ಗಳ ಪಾದಕರ್ಪಿಸುವಳು ||132||
ಮೂರು ಪ್ರದಕ್ಷಿಣೆ ಗೈವಳು |
ಮಾರಿ ಭಕ್ತಿ ಭಾವದೊಳು |
ಸೇರಿ ಮತ್ತೆ ಪರ್ಣಾಶ್ರಮದೊಳು ಕುಳಿತುಕೊಂಡು |
ಶ್ರೀರಾಮನ ಧ್ಯಾನ ಮಾಳ್ಪಳು ||133||
ರಾಮ ಶ್ರೀ ರಾಮಾಯೆನ್ನುತ್ತ |
ರಾಮನಾಮ ಕೊಂಡಾಡುತ್ತ |
ನೇಮದಿಂದ ದಿನವ ಕಳೆಯಲು ಜಾನಕಿಗಿಂತು |
ನೌಮಾಸ ತುಂಬಿದ್ದಾಯಿತು ||134||
ರಾಗ ವರಾಳಿ ಏಕತಾಳ
ಅಂಗನೆ ಸೀತೆಗೊಂಭತ್ತು ತಿಂಗಳಾಯಿತು ಕೋಮ |
ಲಾಂಗಿಗೆ ಸಂತಾಪ ಹೆಚ್ಚಿ ಮುಂಗಾಣಿಸಿತು || ಪಲ್ಲವಿ ||
ಸುತ್ತಮುತ್ತಲಿರುವ ಮುನಿ ಪತ್ನಿಯರೆಲ್ಲ ಕೂಡಿ |
ಮತ್ತಗಜಗಮನೆಯ ಆಪತ್ತ ನೋಡುತ್ತ ||
ಮತ್ತದಕ್ಕೆ ಬೇಕಾದಂಥ ವಸ್ತುಗಳೆಲ್ಲ ತರಿಸಿ |
ಸುತ್ತಲು ಭೂಜಾತೆಯ ಕಾಯುತ್ತಲಿರ್ದರು ||135||
ನಾರಿಯರತ್ತಿತ್ತ ಸುಳಿವ ಕಾರಣ ಕಂಡು ಮುನಿ |
ಬೇರೇನಿನ್ನಾ ಹುದೊ ಯೆಂದು ಬೆದರುತಿರ್ದನು ||
ನಾರಾಯಣನೆ ಗತಿ ಎನ್ನುತ್ತ ವಾಲ್ಮೀಕಿ ತಾನು ಮತ್ತೆ |
ಮೂರು ದಿನದಿ ಹಗಲೂ ಇರುಳೂ ಕಾಯುತ್ತಿದ್ದನು ||136||
ವಾರ್ಧಕ
ಮಂದಗಾಮಿನಿ ಸೀತೆ ಶುಭಲಗ್ನ ಶುಭತಿಥಿಯೊ
ಳೊಂದಿರುಳು ಪಡೆದಳಿಬ್ಬರು ಕುಮಾರಕರ ಸುರ
ದುಂದುಭಿಯು ಮೊಳಗಿತಾಕಾಶದಲಿ ಸುರರು ಜಯವೆಂದು ಪೂಮಳೆಗರೆಯಲು |
ಮುಂದೆ ರವಿಕುಲದ ಬೆಳೆ ಹಸನಾಯ್ತು ರಘುವಂಶ
ಸಿಂಧುಚಂದ್ರಮರೊ ಜಾನಕಿಯ ಪುಣ್ಯಾಂಕುರದ
ಬಂಧುರವೊ ಎಂದು ತೋರಿತು ನೋಳ್ಪವರ ಕಣ್ಮನಕ್ಕೆ ಬೆಳಗಿದರಿರ್ವರು ||137||
ರಾಗ ಕಾಂಭೋಜಿ ಏಕತಾಳ
ಹೆತ್ತ ಮಕ್ಕಳ ಬಾಳಂತಿಗೆ ಹತ್ತು ರಾತ್ರಿ ಯಾದಮೇಲೆ |
ಚಿತ್ತೈಸಿ ವಾಲ್ಮೀಕಿ ಮುನಿ ಪೋತ್ತಮನಂದು ||
ಶಾಸ್ತ್ರವಿಧದುತ್ತಮ ಪುಣ್ಯಾರ್ಚನೆಯ ಮಾಡಿ ಮಂತ್ರ |
ಯುಕ್ತದಿಂದ ಕಾರ್ಯಂಗಳ ವಿಸ್ತರಿಸಿದ ||138||
ಸೋಮ ಸೂರ್ಯರಂತಿಪ್ಪ ಸತ್ಕೋಮಲಾಂಗರಿರ್ವರಿಗೆ |
ಪ್ರೇಮದಿ ಕುಶಲವರೆಂದು ನಾಮವಿಟ್ಟನು ||139||
ಆ ಕುಮಾರರಿಬ್ಬರ ಶುಭಕರಣ ಗಳನೆ ನೋಡಿ |
ತಾ ಕರುಣಿಸಿ ಸೀತೆಗೆ ವಾಲ್ಮೀಕಿ ಪೇಳಿದ ||
ಕೋಕಿಲಸುವಾಣಿ ಕೇಳ್ನಿನ್ನೀ ಕುಮಾರರಿಬ್ಬರು ಭೂ |
ಲೋಕದೊಳು ಜಾಣರೆನ್ನಿಸಿಕೊಂಡಿರ್ಪರು ||140||
ಸೃಷ್ಟಿಜಾತೆ ನಿನ್ನ ಮಕ್ಕಳ್ ಪುಟ್ಟಿದ ಲಗ್ನದ ಗುಣದಿ |
ಅಷ್ಟದಿಕ್ಪಾಲಕರಿಂದಲೂ ಶ್ರೇಷ್ಠರೆನ್ನಿಸಿ ||
ಕಷ್ಟದಿಂದ ತಂದೆಮಕ್ಕಳ್ಗಿಷ್ಟವಾಗಿ ಮುಂದಯೋಧ್ಯಾ |
ಪಟ್ಟಣವಾಳ್ವರು ಕೇಳವ್ವ ದಷ್ಟಾಂತವಿದು ||141||
ವಚನ || ಈ ರೀತಿ ವಾಲ್ಮೀಕಿ ಮುನಿಪತಿಯು ಬಾಲರಿಂಗೆ ನಾಮಕರಣವಂ ಮಾಡೆ
ಸುರನಾರಿಯರು ತೊಟ್ಟಿಲೊಳಿಕ್ಕಿ ತೂಗಿ ಪಾಡಿದರದೆಂತೆನೆ –
ರಾಗ ಜೋಗುಳಪದ ಅಟತಾಳ
ಜೋ ಜೋ, ಜೋ ಜೋ, ಜೋ ಜೋ, ಎನುತ |
ಜೋಗುಳವನು ಪಾಡಿದರು ಸತಿಸಹಿತ ||142||
ಜೋ ಜೋ, ಬಾಲಕ ರೊಳು ಹೊಸರನ್ನ |
ಜೋ ಜೋ, ರಘುಕುಲತಿಲಕ ಮೋಹನ್ನ ||143||
ಜೋ ಜೋ, ಶ್ರೀರಾಮ ಚಂದ್ರಕುಮಾರ |
ಜೋ ಜೋ ದಶರಥ ರಘುಕುಲೋದ್ಧಾರ ||144||
ಜೋ ಜೋ, ಲವಬಾಲ ಗುಣಗಣಶೀಲ |
ಜೋ ಜೋ, ಕುಶತನು ಜನೆ ಗುಣಲೀಲ ||145||
ಜೋ ಜೋ, ಕುಶಲವರ್ಗೆಂದೋಲಾಡುತ್ತ |
ಜೋಡೆಯರೆಲ್ಲ ತೂಗಿದರು ಪಾಡುತ್ತ ||146||
ದ್ವಿಪದಿ
ಮೊಲೆಹಾಲನುಣುತಿರುವ ಮಕ್ಕಳಿರ್ವರಿಗೆ |
ಹಲವು ಮಿಗಲಾ ದಿವಸ ವರುಷ ನೆಲೆಯಾಗೆ ||147||
ತಪಸಿನಾಶ್ರಮದೊಳಗೆ ತನೆಯರಿರೆ ಕಂಡು |
ಚಪಲಾಕ್ಷಿ ಮನದೊಳಗೆ ಚಿಂತಿಸುವಳಂದು ||148||
ಪರದೇಶಿ ಸುತರಿವರ ಪಾಪವೇ ಎಂದು |
ತರಳೆ ದುಃಖಿಸೆ ಮುನಿಪ ತಾ ತಿಳಿದನಂದು ||149||
ಸುರಪುರಕೆ ಕಳುಹಿದನು ಶಿಷ್ಯರನು ಬೇಗ |
ಸುರತರಳರಾಭರಣಗಳ ತಂದರಾಗ ||150||
ಮಕುಟದರಳೆಲೆ ಮುತ್ತು ಮತ್ತದರ ಸುತ್ತೂ |
ಅಖಿಲ ರತ್ನಾಧಿಗಳು ಹದರೊಳಿರುತಿತ್ತು ||151||
ಕಾಲಲಂದುಗೆ ಗೆಜ್ಜೆ ಕಡಗ ಕೈಬೆರಳ |
ಸಾಲಾದ ಉಂಗುರವು ಸರಪಣಿಯು ಕೊರಳ ||152||
ಹುಲಿಯುಗುರು ಒಡ್ಯಾಣ ಹೂವಿನಂಗಿಗಳ |
ಬಲು ಪ್ರಕಾಶದೊಳಿರುವ ಬಹುಭೂಷಣಗಳ ||153||
ತೊಡಿಸಿದನು ಮಕ್ಕಳಿಗೆ ತಕ್ಕ ವಸ್ತುಗಳ |
ಉಡಿಸಿದನು ಮುನಿರಾಯ ಉಡುವ ಪಟ್ಟೆಗಳ ||154||
ರಾಗ ಶಂಕರಾಭರಣ ಮಟ್ಟೆತಾಳ
ಕಂಡು ಸೀತೆ ಹರ್ಷವಾಂತಳು |
ಪುಂಡರೀಕ ವದನೆ ತನ್ನ ಮಕ್ಕಳಾ, ಚೆಲುವಿಕೆಯನು || ಪಲ್ಲವಿ ||
ಶಶಿಯ ಪೋಲ್ವ ಮುದ್ದುಮುಖದೊಳೆಸೆವ ಕದಪಿನಲ್ಲಿ ಹೊಳೆವ |
ಮಿಸುಪ ಕರ್ಣಕುಂಡಲಂಗಳೆಸೆದು ಜೋಲುತ ||
ಕುಸುಮಶರನ ಬಾಣವೆರಡು ಶಿಶುಗಳಾಯ್ತ ಚೆಲುವ ಬ, |
ಣ್ಣಿಸುವೊಡರಿದು ಕುಶಲವರ ಸಂತಸದಿ ಬರುವ ಮಕ್ಕಳನ್ನು ||155||
ಗೆಜ್ಜೆ ಕಾಲಂದುಗೆಗಳುಲಿಯೆ ಪ್ರಜ್ವಲಿಪ ಮಾಗಾಯ್ಗಳೊಲೆಯೆ |
ವಜ್ರದ ಕೆತ್ತಿಗೆಯ ಮುಕುಟ ಶಿರದೊಳೆಸೆಯಲು ||
ಸಜ್ಜನರೆದೆಯ ಮಣಿಗಳೊ ಬಲು ದುರ್ಜನರೆದೆಗೆ ಕಣೆಗಳೊ ಎನೆ |
ಲಜ್ಜೆಯಿಂದ ಒಲೆದು ನಲಿದು ಹೆಜ್ಜೆಯಿಡುವ ಮಕ್ಕಳನ್ನು ||156||
ರಾಗ ಭೈರವಿ ಜಂಪೆತಾಳ
ಮೂರು ವರುಷದ ಮೇಲೆ ಮುದದಿಂದ ಮಕ್ಕಳಿಗೆ |
ಹೇರಂಬ ನಕ್ಕರವನಾರಂಭಿಸಿದನು ||157||
ಬರಹವೆಲ್ಲವ ಕಲಿತು ಬಂದ ಮಕ್ಕಳ ನೋಡಿ |
ಗುರು ವೇದ ಶಾಸ್ತ್ರಗಳ ಗುಣದಿ ಕಲಿಸಿದನು ||158||
ಸಂಗೀತ ವಿದ್ಯೆಯನು ಸಾಧಿಸುತ ಪಾಡಿದರು |
ವಿಂಗಡಿಸಿ ನುಡಿಸಿದರು ವೀಣೆಗಳ ಸ್ವರವ ||159||
ಆ ಮುದ್ದು ಮಕ್ಕಳಿಗೆ ಅರ್ತಿಯಲಿ ವಾಲ್ಮೀಕಿ |
ರಾಮಾಯಣದ ಕವಿತೆ ಸಾಮದಲಿ ಕಲಿಸಿ ||160||
ವಚನ || ಇಂತು ಸಕಲ ವಿದ್ಯೆಯಂ ಕಲಿತಂಥವರಾಗಿ ಕುಶಲವರು ಒಂದಾನೊಂದು ದಿನ
ಮುನಿಯೆಡೆಗೆ ಬಂದು ಏನೆಂದರು ಎಂದರೆ –
ರಾಗ ವರಾಳಿ ಏಕತಾಳ
ಜಯ ಜಯಾ ಮಹಾ ಮುನಿವರೇಣ್ಯ ಪಾಹಿ |
ಭಯವಿನಾಶನ ಅಗ್ರಗಣ್ಯ || ಪಲ್ಲವಿ ||
ಬುದ್ಧಿವಂತರು ನಾವಾದೆವಯ್ಯ ಬಿಲ್ಲು |
ವಿದ್ಯೆಯ ಕಲಿಸಬೇಕು ಎಮಗೆ ನೀವು ||161||
ಬೇಟೆಗೆ ಪೋಪ ಮಕ್ಕಳೆಲ್ಲ ಕಂಡು ನಗೆ |
ಪಾಟಿ ಮಾಳ್ಪರಯ್ಯ ನಮ್ಮ ಹೆಡ್ಡರೆಂದು ||162||
ಕರುಣಿಸಿದಿರಿ ವಿದ್ಯೆಗಳನೆಲ್ಲ ನಮ್ಮ |
ಗುರುವೆ ನಿಮ್ಮ ಕರುಣೆಗಿನ್ನು ಎರಕವಿಲ್ಲ ||163||
ಸಣ್ಣವರಯ್ಯ ನಿಮಗೆ ಬಿಲ್ಲುವಿದ್ಯ |
ಬಣ್ಣವಲ್ಲೀಗ ಕೇಳಿರಪ್ಪಗಳಿರ ||164||
ರಾಗ ಕಾಂಭೋಜಿ ಏಕತಾಳ
ನೋಡು ಜಾನಕಿ ಮಕ್ಕಳು ಬಿಲ್ಲು ವಿದ್ಯವ |
ಗಾಢದಿ ಕಲಿಸೆಂದು ಕಾಡುತ್ತ ಲಿಹರಿಂದು ||165||
ಚೆಲುವ ಬಾಲಕರಿವರು ಬಲವಂತವಾಗಿಹ |
ಕಲಿಗೆಳೆದುರು ನಿಂತು ಕಾದಿ ಕೊಲ್ಲುವರೆಂತು ||166||
ಸುಲಭವಲ್ಲೆನಲಿಂದು ಛಲಮಾಡುವರು ಬಂದು |
ಹುಲಿಮರಿಗಳು ಹೊಲಹುಲ್ಲ ಮೇಯುವವೆ ಹೇಳು ||167||
ಭಾಮಿನಿ
ಆಗಲಾ ಮುನಿಯೆಂದ ವಚನವ
ನಾಗವೇಣಿಯು ಕೇಳ್ದು ಪ್ರೇಮದಿ
ಯೋಗಿಮುನಿಪತಿಗೆರಗಿ ಮಕ್ಕಳ ನೋಡಿ ನಗುತಿರಲು |
ಆಗದಾಗದು ಗುರುವೆನುತ ತಲೆ
ವಾಗಿ ಸೀತೆಯ ಕರೆದು ಮೆಚ್ಚಿಸ
ಲಾಗ ಮಕ್ಕಳಿಗೆಂದಳಬಲೆ ವಿವೇಕಮಾರ್ಗಗಳ ||168||
ರಾಗ ಪಂತುವರಾಳಿ ಮಟ್ಟೆತಾಳ
ಸದರವಲ್ಲ ಬೇಟೆ ಮಕ್ಕಳಿರ ಸಣ್ಣವರು ನಿಮಗೆ || ಪಲ್ಲವಿ ||
ಸದರವಲ್ಲ ಬೇಟೆ ನಿಮಗೆಯದರ ತಳ್ಳಿಬೇಡ ನಮಗೆ |
ಚದುರರ್ನೀವು ಚಿಣ್ಣರು ಮುನಿಪದದ ಸೇವೆಮಾಡುತ ||
ಮುದದಿ ವೇದಶಾಸ್ತ್ರ ಪೌರಾಣದ ಸುಗೀತಿ ರಾಜ್ಯನೀತಿ |
ಯದನು ತಿಳಿದು ಮೇಲೆ ನಾನಾ ಯುಧದ ವಿದ್ಯೆ ಕಲಿಯಿರಪ್ಪ ||169||
ಕಾಡಿನೊಳಗೆ ಬಹಳ ಕರಡಿ ಸಿಂಹ ಶಾರ್ದೂಲ ಹಂದಿ |
ಕಾಡುತಿಹವು ವಿಷಸರ್ಪಗಳಾಡಿ ಕೂಡಿ ಬೆದರಿಸುವವು |
ಮೂಢರಕ್ಕಸರು ಮನೆಯ ಮಾಡಿರುವರು ಕಂಡ ಜನರ |
ಪೀಡಿಸುವರು ಸಟೆಮಾತಲ್ಲ ಕೇಡು ಬಪ್ಪುದು, ಮಕ್ಕಳಿರ ||170||
ಸೀತೆ ಬೇಡವೆಂದು ಪೇಳ್ದ ಮಾತ ಕೇಳದೆ ಮುನಿ |
ನಾಥನಡಿಗೆ ನಮಿಸಿ ಧನುವ ಚಾತುರ್ಯದಿ ಪಿಡಿಯುತ |
ಆತು ಶರವ ತೊಡುವ ಬಿಡುವ ರೀತಿ ಕ್ಷಣದಿ ಕಲಿಯುತಾ ಕಿ |
ರಾತಮಕ್ಕ ಳೊಡನೆ ಮೃಗ ವ್ರಾತವನ್ನು ಸೆದೆದರಾಗ ||171||
ಭಾಮಿನಿ
ಹುಲಿ ಕರಡಿ ಶಾರ್ದೂಲ ಸಿಂಹ
ಜ್ವಲಿತಗಜ ಕಾಡ್ಕೋಣ ಹಂದಿಯ
ಬಳಗವನು ಎಸೆದೆಸೆದು ಮೃಗಜಾತಿಗಳ ಸಂಹರಿಸಿ |
ನಲಿದು ಬೃಹರಾಶ್ರಮಕೆ ಈ ಪರಿ
ಕಳೆಯುತಿರಲೊಂದು ದಿನ ವರುಣನು
ಕಳುಹಿದೋರ್ವನು ಬಂದು ಮುನಿಪದಕೆರಗುತಿಂತೆಂದ ||172||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚಿತ್ತಯಿಸು ಮುನಿನಾಥ ವರುಣನು |
ಮತ್ತೆ ಯಜ್ಞವ ನಡೆಸಲೋಸುಗ |
ವಿಸ್ತರದಿ ಕಳುಹಿಸಿದ ಓಲೆಯ | ನಿತ್ತು ನಿಮಗೆ ||173||
ಕಾದಿಹರು ಕೂಡಿರುವ ಋಷಿಗಳು |
ಹಾದಿಯನ್ನೀಕ್ಷಿಸುವನಬ್ಧಿಪ |
ಓದಿ ನೋಡೀಕ್ಷಣವೆ ತೆರಳೆಂದು | ಪಾದಕೆರಗೆ ||174||
ಓಲೆಯನು ಕೊಂಡಾಕ್ಷಣವೆ ಮುನಿ |
ಪಾಲ ಸೀತೆಯ ಕರೆದು ಪೇಳಿದ |
ಲೋಲಲೋಚನೆ ಕರೆಯಿಹುದು ಪಾ | ತಾಳದಿಂದ ||175||
ರಾಗ ತೋಡಿ ಏಕತಾಳ
ಪೋಗಿ ಬರುವೆ ಯಾಗಕ್ಕೆ ಈಗ ಮಕ್ಕಳ್ ಜೋಕೆ |
ನಾಗವೇಣಿ ನಿನ್ನ ಕುವರ ರ್ಪೋಗದಿರಲಿ ದೂರ ||176||
ಎಂದಿಗೆ ಬರುವಿರಿ ಇತ್ತ ತಂದೆ ಮುನಿರಾಯ |
ಕಂದರಿರ್ವರೇ ಬೇಸರ್ವರೆಂದಳಾಗ ಸೀತೆ ||177||
ನಾಳೆ ಬರುವನೆಂದು ಮತ್ತಾ ಬಾಲರ ನೋಡುತ್ತ |
ಲೀಲೆಯಿಂದ ಮುದ್ದುಮಾಡಿ ಕಾಲಿಗೆರಗಿಸುತ್ತ ||178||
ರಾಗ ನಾದನಾಮಕ್ರಿಯೆ ಅಷ್ಟತಾಳ
ನಾಳೆ ಬೃಹದು ಬದ್ಧ ವೇನಯ್ಯ | ಮುನಿ |
ಪಾಲ ಬೇಸರ್ವೆವುನಾವಯ್ಯ ||
ನಾವು ಸಂಗಡ ಬಂದರಾಗದೇ | ಅಲ್ಲಿ |
ನೀವು ಹೋಗದೆ ಯಜ್ಞ ಸಾಗದೆ ||179||
ಥರವಲ್ಲ ವಿಪಿನದೊ ಳೊಬ್ಬಳೆ | ಅಮ್ಮ |
ಅರೆಗಳಿಗೆಯು ಬಿಟ್ಟು ಇರುವಳೆ ||
ತರಳರು ನಡೆವುದೆಂತಲ್ಲಿಗೆ | ಸುಮ್ಮ |
ನಿರಿ ನಾಳೆ ಬಹೆನು ನಾನಿಲ್ಲಿಗೆ ||180||
ಒಬ್ಬೊಬ್ಬರ್ತಿರುಗದಿ ರಡವಿಗೆ | ಕುಶ |
ದರ್ಭೆಗೆ ಹೊರಡ ಬೇಡಾಚೆಗೆ ||
ಇಬ್ಬರೂ ಜೋಡಾ, ಗಿರಿಯೆಂದು | ಮುನಿ |
ತಬ್ಬಿ ಬೀಳ್ಕೊಂಡು ನಡೆದನಂದು ||181||
ಭಾಮಿನಿ
ತೆರಳಿದನು ಮುನಿಯತ್ತ ಕುಶ ತಾ |
ವರವಿಪಿನದೆಡೆಗಿತ್ತಲಾ ಲವ |
ತರಳರೊಡನಾಡುತ್ತಲಿರಲಾಶ್ರಮಸಮಾಪದಲಿ |
ಇರುತಿರಲು ಲೀಲೆಯೊಳಯೋಧ್ಯಾ |
ಪುರದ ವತ್ತಾಂತವನು ಪೇಳುವೆ |
ಧರಣಿಪತಿ ರಘುನಾಥ ಜನಹತ್ಯೆಯನು ಕಳೆವುದಕೆ ||182||
ರಾಗ ಕಾಂಭೋಜಿ ಜಂಪೆತಾಳ
ಅಶ್ವಮೇಧವ ರಚಿಸಬೇಕೆಂದು ಶ್ರೀರಾಮ |
ಶಶ್ವತದಿ ಸನ್ನಹವ ತರಿಸಿ ||
ವಿಶ್ವಮಿತ್ರಾದಿಗಳು ಯಾಗಶಾಲೆಯ ರಚಿಸಿ |
ವಿಶ್ವನಾಯಕ ದೀಕ್ಷೆ ವರಿಸಿ ||183||
ಮತ್ತಲ್ಲಿ ಕುದುರೆಯನು ತರಿಸಿ ಶಂಗರಿಸಿ ಶಾ |
ಸ್ತ್ರೋಕ್ತದಿಂ ಪೂಜೆಗಳ ನಡೆಸಿ ||
ಉತ್ತಮದ ಬಿರುದುಗಳ ಬರೆದು ಕುದುರೆಯ ಹಣೆಗೆ |
ಸುತ್ತಿದರು ಮಂತ್ರವಿಧಿ ವೆರಸಿ ||184||
ಆನೆ ಕುದುರೆಯು ಮಂದಿ ಸೇನೆ ಮಾರ್ಬಲ ಸಹಿತ |
ತಾನೆ ತೆರಳಿದನು ಶತ್ರುಘ್ನ ||
ನಾನಾವಿ ಧದಿ ಮೊರೆವ ವಾದ್ಯಸಂ ದಣಿಯಿಂದ |
ಲಾನಂದ ದಲಿ ಪೊರಟು ಪುರವ ||185||
ಅಂಗ ಕಾಂಭೋಜ ಕರ್ಣಾಟ ಮಾಳವ ಗೌಳ |
ವಂಗ ಮಲೆಯಾಳ ದ್ರಾವಿಡರ ||
ಸಂಗರದಿ ಸೋಲಿಸುತ ಸರಕುಕ ಪ್ಪವಗೊಂಡು |
ಹಿಂಗದೆಲ್ಲರನು ಒಳಗೊಂಡು ||186||
ಛಪ್ಪನ್ನ ದೇಶದೊಳಗಿಪ್ಪ ರಾಯರ ಕೈಯ |
ಕಪ್ಪವನು ಸೆಳೆದು ಧುರವಾಂತು ||
ತಪ್ಪದೇ ಮಂದಿ ಕುದುರೆಯ ಸಹಿತ ವಾಲ್ಮೀಕಿ |
ಇಪ್ಪಾಶ್ರಮಕೆ ಬಂದರೆಲ್ಲ ||187||
ಎತ್ತಣ ತುರಂಗವಿದು ಪೊಕ್ಕು ಪೊದೋಟಗಳ |
ಕತ್ತರಿಸಿ ಕೆಡಿಸಿತೆಂದೆನುತ ||
ಚಿತ್ತದಲಿ ಕೋಪಿಸುತ ಹತ್ತಿರಕೆ ಬಂದು ಲವ |
ಮಸ್ತಕದ ಲಿಪಿಯನೋದಿದನು ||188||
ರಾಗ ಘಂಟಾರವ ಝಂಪೆತಾಳ
ವೀರವಿತರಣ ಶೂರ ವಿಜಯಸದ್ಗುಣಸಾರ |
ಸಾರಸಾಂಬಕ ಧೀರ ಶರಧಿಗಂಭೀರ ||189||
ವೈರಿಮದ ಗಜಸಿಂಹ ವಾಸವಾರ್ಚಿತ ರ್ಮ |
ಪೌರುಷಾಗ್ರಣಿ ರಾಮ ಭಳಿರೆ ನಿಸ್ಸೀಮ ||190||
ಈತನದು ಯಜ್ಞಾಶ್ವವಿದರ ಕಟ್ಟಿದರೀಗ |
ಭೂತಳದೊಳವ ಜಾಣ ಭುಜಬಲ ತ್ರಾಣ ||191||
ಹೀಗೆಂದು ಬರೆದ ಲಿಪಿಯೋದಿನೋಡಿದ ಲವನು |
ಮೂಗಿನಲಿ ಬೆರಳಿಟ್ಟು ತೂಗಿದನು ಶಿರವ ||192||
ರಾಗ ಶಂಕರಾಭರಣ ಅಷ್ಟತಾಳ
ಸೀತಾ ನಂದನನು ಓಲೆಯ ನೋಡಿ |
ನ್ನೇತರ ಬದುಕೆಂದನು ||
ಭೂತಳದೊಳಗೊರ್ವ ಖ್ಯಾತನಾಗಿಹ ಮೇಲೆ |
ಪೇತುಗರೆಂದೆಂಬ ಮಾತು ಬಂತೆಮಗೆ ||193||
ಬಂದದ್ದೆಲ್ಲವು ಬರಲಿ ಈಪ್ರಾಣವು |
ಇಂದೇ ಹೋದರು ಹೋಗಲಿ ||
ಮುಂದುವರಿಯಲು ತಾಯ್ ಮುನಿ ಕೋಪಿಸಲಿ ಬಿಡೆ |
ನೆಂದು ಹತ್ತಿರೆ ಬಂದು ನಿಂದು ನೋಡಿದನು ||194||
ಮರನ ಬಳ್ಳಿಯ ತೆಗೆದ ಆ ಕುದುರೆಯ |
ಕೊರಳ ಸಂದಿಗೆ ಬಿಗಿದ ||
ವರಕದಳಿಗೆ ಕಟ್ಟಿ ಲರಸುಗಳದು ಬಿಡು |
ಪರಿಹಾಸ್ಯ ವಲ್ಲೆಂದರರಿದು ಬಾಲಕರು ||195||
ಮನದಿ ಹೂಂಕರಿಸಿದನು ಕೈಯೊಳಗಿದ್ದ |
ಧನುವ ಝೇಂಕರಿಸಿದನು ||
ಅನುಮಾನವೇನು ಹತ್ತಿರಬಂದು ಕಟ್ಟಿರ್ದು |
ದನು ಬಿಡೆ ತುರಗವನೆಂದು ಗರ್ಜಿಸಿದ ||196||
ರಾಗ ಕೇದಾರಗೌಳ, (ಆಹೇರಿ) ಜಂಪೆತಾಳ
ಕಂಡು ಬೆರಗಾದರಿವರೆಲ್ಲ ಇವನ |
ದಿಂಡತನಕೀಗ ಬಾಲರೊಳು ಜೋಡಿಲ್ಲ || ಪಲ್ಲವಿ ||
ಮುದ್ದುಮೊಗ ಮುಗುಳ್ನಗೆಯ ಮುನಿಬಾಲಕರ ಕೆಳೆಯ |
ತಿದ್ದಿದ ಕಿರೀಟಿಗಳ ಥರಥರದ ಮಾಟಗಳ |
ಬುದ್ಧಿವಂತರ ನುಡಿಯ ಬಲ್ಲತನಗಳ ನಡೆಯ |
ವಿದ್ಯೆಯನು ಕಲಿತ ಬಾಯ್ದೆರೆಯ ಕೈಯೊ |
ಳಿದ್ದ ಧನು ಶರವೆಸೆವನೂತನದ ಪರಿಯ ||197||
ಕಡಿದನಾನೆಯ ಕರವ ಬಡಿದ ಕುದುರೆಯ ಶಿರವ |
ಹೊಡೆದ ರಾವ್ತರ ಬದಿಯ ಒಡೆದ ಮಾವುತರೆದೆಯ |
ತಡೆದ ನೋಡುವ ಭಟರ ಹಿಡಿದನಗ್ಗದಧಟರ |
ಮಿಡಿದ ಮೈರಕ್ತದೋಕುಳಿಯ ಖಾತಿ |
ವಡೆದ ರಣರಂಗಸಾಹಸದ ವೆಗ್ಗಳೆಯ ||198||
ವಚನ || ಇಂತು ಮಾರ್ಬಲವಂ ಛಾನಾಹಾನಿಯಂ ಮಾಡೆ ಶತ್ರುಘ್ನಂ ಬಾಲಕನ ಸಮಾಪಕ್ಕೆ
ಬಂದು ಏನೆಂದನು ಎಂದರೆ –
ರಾಗ ನಾದನಾಮಕ್ರಿಯೆ ಮಟ್ಟೆತಾಳ
ಯಾರ ಕಂದನಯ್ಯ ನೀನು ಅಂಜಿಕಿಲ್ಲದೆ ಇಂಥ |
ಘೋರ ಕಾಡೊಳೊರ್ವನೆ ನಮ್ಮಶ್ವ ಕಟ್ಟಿದೆ ||199||
ಕಟ್ಟಿದರೆನಾಯಿತಯ್ಯ ದಿಟ್ಟನಾದರೆ ಇದರ |
ಬಿಟ್ಟುಕೊಂಡು ಪೋಗೊ ಧೈರ್ಯವಷ್ಟುಂಟಾದರೆ ||200||
ನಾಡ ರಾಯನೆಂದು ಮಾತನಾಡಬೇಡವೊ ನಿನ್ನ |
ಕೂಡೆ ಯುದ್ಧ ಮಾಡಿ ಗೆಲ್ವದೇನು ಗಣ್ಯವೊ ||201||
ಬೇಡ ಬೇಡ ಸುಮ್ಮನಿಷ್ಟು ಪಂಥವೆಮ್ಮೊಳು ಅತ್ತ |
ನೋಡಬಾರದೇ, ಬಿದ್ದರಾರು ನಿಮ್ಮೊಳು ||202||
ಮಕ್ಕಳು ಸಣ್ಣವನೆಂದು ಬಿಟ್ಟೆನು ನಿನ್ನ ಇಂಥ |
ಸೊಕ್ಕಿನವ, ನೆಂದು ತಿಳಿಯಲಿಲ್ಲವೊ ಮುನ್ನ ||203||
ದಕ್ಕದು ದಕ್ಕದು, ಬಿಡು ಧರ್ಮವಲ್ಲವೊ ನಿನಗೆ |
ತಕ್ಕ ಬುದ್ಧಿಯಾಹದಿನ್ನು ತಡವಿಲ್ಲವೊ ||204||
Leave A Comment