ವಚನ || ಇಂತು ರಾಮಚಂದ್ರದೇವರು ಕಣ್ಣಿಗೆ ನಿದ್ರೆಯುಂ ಬಾರದೆ ಹಲವ ಹಂಬಲಿಸಿ ರಾತ್ರಿಯಂ ಕಳೆದು ಮರುದಿನದುದಯದೊಳೊಡ್ಡೋಲಗಂಗೊಟ್ಟು ಅನುಜನಾದ ಲಕ್ಷ್ಮಣನಂ ಕರೆದು ಏನೆಂದನು ಎಂದರೆ –
ರಾಗ ವಂದಾವನಸಾರಂಗ ಏಕತಾಳ
ಬಾರಯ್ಯ ತಮ್ಮ ಕೇಳೆಂದನು ಬಲು |
ಘೋರ ಕಾನನದೊಳು ನಾರಿ, ಸೀತೆಯ ಬಿಟ್ಟು ಬಾರಯ್ಯ || ಪಲ್ಲವಿ ||
ಅಡವಿಗೆ ಕರಕೊಂಡು ಪೋದವ ಇಲ್ಲಿ |
ಬಿಡಲಿಲ್ಲ ಜನರಪವಾದವ ಅಲ್ಲಿ |
ಮಡದಿಯೊರ್ವಳ ಬಿಟ್ಟು ಕಡೆಗೆ, ಪೇಳ್ವುದು ಗುಟ್ಟು ||72||
(ಸಾಂಗತ್ಯ) ರಾಗ ತೋಡಿ ರೂಪಕತಾಳ
ಈರೇಳು ಭುವನದೊಡೆಯ ವಿಶ್ವಪತಿ ರಾಮ |
ಸಾರಸಾಂಬಕ ದೇವ ನೀನು ||
ನಾರಿಜಾ ನಕಿಯಲ್ಲಿ ತಪ್ಪು ಕಾಣದೆ ಸುಮ್ಮ |
ನಾರಣ್ಯದೊಳು ಬಿಡಲೇಕೆ ||73||
ಅರಿಯದ ಮೂಢಾತ್ಮರಾರೇನ ಪೇಳ್ದರು |
ಅರಿಯದೆ ದೇವರ ಮನಸು ||
ಕರುಣಿಸಬೇಕು ಕಂಜಾಕ್ಷಿ ನಮ್ಮಮ್ಮನೆಂ |
ದೆರಗಿದ ಪಾದಪದ್ಮದಲಿ ||74||
ಏಳಯ್ಯ ತಮ್ಮ ನೀನೆಷ್ಟು ಹೇಳಿದರೇನು |
ಕೇಳುವನಲ್ಲ ಈ ಮಾತ ||
ಭಾಳಲೋಚನನಾಣೆ ಬಲುಕಷ್ಟ ಬಂದರೂ |
ಆಳುವನಲ್ಲ ಜಾನಕಿಯ ||75||
ಈಪರಿಯಲಿ ರಾಮ ಕೋಪಿಸೆ ಲಕ್ಷ್ಮಣ |
ತಾಪವ ತಾಳಿದು ಮನದಿ ||
ಆ ಪುಣ್ಯವಂತೆಯ ಕರೆದು ಏಕಾಂತದಿ |
ತಾ ಪೇಳಿದನು ಧರಣಿಜೆಗೆ ||76||
ಪುಣ್ಯಲೋಚನೆ ಪುಣ್ಯವಂತೆ ಜಾನಕಿ ನೀವ |
ರಣ್ಯಕೆ ತೆರಳಬೇಕಂತೆ ||77||
ಅಗ್ರಜನಪ್ಪಣೆ ಈಗ ನಾವ್ ಕಾಡಿಗೆ |
ಶೀಘ್ರದಿ ಪಯಣವಾಗುವಡೆ ||78||
ರಥವೇರು ತಡವೇತಕಿನ್ನು ತೆಕ್ಕೊಳ್ಳವ್ವ |
ಜೊತೆಗೆ ಬೇಕಾದ ವಸ್ತುಗಳ ||79||
ಪಥಿವಿಯಾತ್ಮಜೆ ಕೇಳು ಮಾತ ನಿನ್ನಯ ಮನೋ |
ರಥ ಸಲಿಸುವ ರಘುನಾಥ ||80||
ರಾಗ ಘಂಟಾರವ ಜಂಪೆತಾಳ
ತನುಜ ಲಕ್ಷ್ಮಣ ಕೇಳು ಮುನಿಗಳಾ ಶ್ರಮದಿ ಭೋ |
ಜನವ ಮಾಡಿಸಲಿಷ್ಟವೆನಗಾಯಿತಯ್ಯ ||81||
ತರಿಸು ಸನ್ನಹವೆಲ್ಲ ತೊಡರಿಲ್ಲವೆಂದಾಗ |
ಪರಮಪಾವನೆ ಮಾತೆ ಪೊರಟಳಾ ಸೀತೆ ||82||
ವಾರ್ಧಕ
ಜಗದುಪತಿ ಕೇಳಿಂತು ಲಕ್ಷ್ಮಣನೊಳುಸುರುತಲೆ
ನಗೆಮೊಗದಿ ತನ್ನಿಷ್ಟದೊರಕಿತೀ ದಿನವೆಂದು
ಮಿಗೆ ಸರ್ವಭೂಷಣಂಗಳ ಧರಿಸುತಾ ಸೀತೆ ಪಯಣಸನ್ನಾಹವಾಗಿ |
ಅಗಿಲು ಚಂದನ ಗಂಧ ಕಸ್ತೂರಿ ಕುಂಕುಮವ
ಬಗೆಬಗೆಯ ದಿವ್ಯಾಂಬರಂಗಳಂ ತರಿಸಿಕೊಂ
ಡೊಗುಮಿಗೆಯ ಹರ್ಷದಿಂದಂತಃಪುರಕೆ ಬಂದು ಕೌಸಲ್ಯೆಗಿಂತೆಂದಳು ||83||
ರಾಗ ಕಾಂಭೋಜಿ ಏಕತಾಳ
ತಾಯೆ ಕೇಳಿಂದೊಂದು ಮಾತ ರಾಮನಪ್ಪಣೆಯನಿತ್ತ |
ಪ್ರೀಯದಿಂದ ವನದಿ ಮುನಿಸ್ತ್ರೀಯರ ಕೂಡಿ ||
ಆಯತದಿಂದವರಿಗೆಲ್ಲ ಬಾಯನದಾನವನಿತ್ತು |
ನೋಯಿಯನ್ನು ಮಾಡಿ ನಾಳೆಬಾಹೆನೆಂದಳೂ ||84||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಏನೆ ಜಾನಕಿ ಇಂದಿಗಿಲ್ಲಿಗೆ |
ದಾನವಾಂತಕ ಬರಲು ಹೇಳಿದ |
ಮಾನಿನೀಮಣಿ ಜೋಕೆ ಪೋಗುವ | ಕಾನನದೊಳು ||85||
ಪೋಗಿಬಹೆನೆಂ ದೆನ್ನುತಲೆ ತಲೆ |
ವಾಗಿ ಕೈಕೆಸು ಮಿತ್ರೆಯರಿಗೆ ಸ |
ರಾಗದಿಂದಲೆ ಪಯಣವಾದಳು | ನಾಗವೇಣಿ ||86||
ರಾಗ ನಾದನಾಮಕ್ರಿಯೆ ಅಷ್ಟತಾಳ
ರಾಮನಚರಣವ ನೆನೆಯುತ್ತ | ತಾಯಿ |
ಭೂಮಿದೇವಿಗೆ ನಮೋ ಎನ್ನುತ್ತ ||
ಗ್ರಾಮದೇವತೆಯ ಕಂಡೆರಗುತ್ತ | ಕುಲ |
ಸ್ವಾಮಿಗೆ ಜಯವೆಂದು ಪೊಗಳುತ್ತ ||87||
ಕೇರಿ ಕೇರಿಯ ಮನೆ ಮನೆಗಳಲಿ ಇದ್ದ |
ನಾರಿಯರಿಗೆ ಮುಗಿದು ಕರಗಳ ||
ನೀರೆ ಜಾನಕಿ ನಡೆತಂದಳು | ರಥ |
ವೇರಿ ಕಾಡಿಗೆ ಹೊಡೆ ಎಂದಳು ||88||
ವಾರ್ಧಕ
ಹಾರಿಸಿದ ರಥವನರೆನಿಮಿಷದಲಿ ಗಡಗಡನೆ
ಜಾರಿಸಿದ ಕಲುಮುಳ್ಳು ಗಿರಿ ಪರ್ವತಂಗಳಂ
ತೋರಿಸಿದ ಬಲು ಭಯಂಕರವಾದ ಶಾರ್ದೂಲ ಸಿಂಹ ಹುಲಿ ಕರಡಿಗಳನು |
ಹೋರಿಸಿದ ರಕ್ಕಸರ ಹೊಳಲುಗಳ ಮುರಿದ ಕಡೆ
ಘೋರಿಸಿದ ರಥದ ಕೀಲ್ಗಳು ಕಳಚುವಂತೆ ಮದ
ವೇರಿಸಿದ ಹಯಗಳಂ ಬೋಳೈಸುತಿರೆ ಕಂಡು ನಾರಿ ಜಾನಕಿ ಪೇಳ್ದಳು ||89||
ರಾಗ ಭೈರವಿ ಏಕತಾಳ
ಎಲ್ಲಿಗೆ ಪಯಣವಿದೇನು | ನಿಲು |
ನಿಲ್ಲಲೊ ಲಕ್ಷ್ಮಣ ನೀನು ||
ಕಲ್ಲೆದೆ ಯಾದೆ ಇದೇಕೆ | ಥರ |
ವಲ್ಲ ಪೋಗುವದಿನ್ನು ಜೋಕೆ ||90||
ಹುಲಿ ಸಿಂಹಗಳು ಶಾರ್ದೂಲ | ಹಾ |
ವ್ಗಳು ಹರೆಯುತಲಿವೆ ಬಹಳ ||
ಕಳವಳಿ ಸುತ್ತಿದೆ ಮನಕೆ | ಎನ್ನ |
ನೆಳೆಯುವ ದೇಕೊ ಗಹನಕೆ ||91||
ಮುನಿವಧುಗಳನಾರ ಕಾಣೆ | ಇದು |
ವನವಲ್ಲವೆ ಪೇಳೆನ್ನಾಣೆ ||
ದನುಜರ ಹೊಳಲಿದೆ ಮುಂದೆ | ರಥ |
ವನು ತಿರುಗಿಸು ನೀ ಹಿಂದೆ ||92||
ವಚನ || ಇಂತೀ ಜಾನಕಿ ನುಡಿಯಲಾಗಿ ಸೌಮಿತ್ರಿ ಏನೆಂದನು ಎಂದರೆ-
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮೇದಿನೀಸುತೆ ಕೇಳು ಜನರಪ |
ವಾದ ಬಂದುದ ಕಳೆಯಲೋಸುಗ |
ಆ ದಯಾನಿಧಿ ಕಳುಹಿದನು ತಾ | ಭೇದದಿಂದ ||93||
ಸೃಷ್ಟಿಗೀಶ್ವರ ರಾಮಚಂದ್ರನು |
ಸಿಟ್ಟಿನಿಂದಲೆ ನಿಮ್ಮನೀಗಳೆ |
ಬಿಟ್ಟುಬಾರೆಂದೆನುತ ನೇಮವ | ಕೊಟ್ಟನೆನಗೆ ||94||
ವಾರ್ಧಕ
ಪ್ರಳಯ ಕಾಲದ ಸಿಡಿಲು ಬಂದೆರಗಿ ವಟವಕ್ಷ
ಇಳೆಗೊರಗುವಂತೆ ಲಕ್ಷ್ಮಣನ ನುಡಿಕೇಳ್ದು ಭೂ
ತಳಕೆ ಮೂರ್ಛಿತಳಾಗಿ ಬಿದ್ದಳಂಗನೆ ಕಂಡು ಸೌಮಿತ್ರಿ ಬೆರಗಾಗುತ |
ತಳಿರ ಕಣ್ಗೊತ್ತಿ ಕಂಬನಿಯೊರಸಿ ಎಲೆನೀರ
ತಳಿದು ಪತ್ರಗಳ ಕೊಡೆವಿಡಿಯಲ್ಕೆ ಮೂರ್ಛೆಯಂ
ತಿಳಿದೆದ್ದು ಲಕ್ಷ್ಮಣನ ಮೊಗನೋಡಿ ಜನಕಸುತೆ ಅಳುತ ಮತ್ತಿಂತೆಂದಳು ||95||
(ಸಾಂಗತ್ಯ) ರಾಗ ನೀಲಾಂಬರಿ ರೂಪಕತಾಳ
ಕಯ್ಯರೆ ಖಡ್ಗವ ಕೊಟ್ಟು ತನ್ನರಸಿಯ |
ಹೊಯ್ಯೆಂದು ಪೇಳದೆ ಬರಿದೆ ||
ಒಯ್ಯನೆ ಕಾಡೊಳು ಬಿಟ್ಟು ಬಾರೆಂದನೆ |
ಅಯ್ಯಯ್ಯ ರಾಮ ಕರುಣಾಳು ||96||
ರಾಮನ ಭುವನಾಭಿರಾಮನ ಶರಣಸು |
ಪ್ರೇಮನ ಚರಣವನಗಲಿ ||
ಈ ಮಹಾಕಾಡೊಳು ಇರುವದೆಂತಯ್ಯಯ್ಯೋ |
ರಾಮಾ ರಾಮಾಯೆಂದಳಬಲೆ ||97||
ಕಾಡಿನೊಳಗೆ ಹುಲಿಯಿರುವ ಸುದ್ದಿಯ ಕೇಳಿ |
ನಾಡಿಂದೊಕ್ಕಲು ತೆಗೆದಂತೆ ||
ನಾಡಮಾತನು ಕೇಳಿ ಎನ್ನನೀ ರೀತಿಯ |
ಮಾಡಿದನಲ್ಲ ಎನ್ನರಸ ||98||
ಕಾಣಲಾರದ ಪಗೆಯವರಿಗೆ ತಲೆಯಲ್ಲಿ |
ಮಾಣಿಕ್ಯ ವುಂಟೆಂದರವನ ||
ಪ್ರಾಣವ ಕಳೆವಂತೆ ಜಾಲಮಾತಿಗೆ ಯೆನ್ನ |
ಪ್ರಾಣೇಶ ತೊರೆದನೆ ವಿಧಿಯೆ ||99||
ಪಟ್ಟಿ ಪ್ರಮಾಣ ತಾರ್ಕಣೆ ಸಾಕ್ಷಿ ಚತುರ್ವಿಧ |
ದಷ್ಟಧರ್ಮಗಳು ರಾಜ್ಯದಲಿ ||
ಭ್ರಷ್ಟರ ನುಡಿಗೆನ್ನ ತೊರೆದ ಇನ್ನಿರುವುದು |
ಕಷ್ಟಸಂಸಾರ ಬಡವರಿಗೆ ||100||
ವಚನ || ಇಂತೆಂದು ಜಾನಕಿ ನುಡಿಂುಲಾಗಿ ಲಕ್ಷ್ಮಣನು ಮನಸ್ಸಿನಲ್ಲಿ ನೊಂದುಕೊಂಡು ಮರುಗುತ್ತ ನಿಲಲು ವನಜಾಂಬಕಿ ಮತ್ತೇನೆಂದಳು ಎಂದರೆ –
ರಾಗ ಆನಂದಭೈರವಿ ಆದಿತಾಳ (ವಿಲಂಬಿತ)
ಏಕೆ ನಿಂತಿರುವೆ ಲಕ್ಷ್ಮಣ ಕೋಪಿಸುವನು |
ಕಾಕ್ತುಸ್ಥ ನಿನ್ನ ಮೇಲೆ ||
ಸಾಕು ತಾನಾದರೂ ರಾಮ ಒಳ್ಳಿತಾಗಿರಲಿ |
ರಾಕೇಂದುನಿಭವದನ ||101||
ವಲ್ಲಭಗಿಂಥ ಮನಸು ಬಂತಲ್ಲ ಹೀಗೆ |
ಕಲ್ಲೆದೆಯಾಯಿತಲ್ಲ ||
ಕೊಲ್ಲದ ಬಿಟ್ಟು ಪೋಪೆಯಾ ಈ ಕಾಡಿನೊಳ |
ಗೆಲ್ಲಿಗೆ ಪೋಗಲಿನ್ನಾನು ||102||
ಕೌಸಲ್ಯೆ ಸುಮ್ಮನಿದ್ದಳೆ ಸುಮಿತ್ರಾದೇವಿ |
ಈ ಕತ್ಯ ಕೊಪ್ಪುಕೊಟ್ಟಳೆ ||
ಬಹು ಕಾಲ ಇದ್ದ ಜಾಂಬವ ಹನುಮಂತ ಭಕ್ತ |
ತಾವ್ಕೇಳಿ ಸುಮ್ಮನಿದ್ದರೆ ||103||
ಯಾರಿದ್ದು ಏನ ಮಾಳ್ಪರು ಎನ್ಹಣೆಯಲ್ಲಿ |
ಈ ರೀತಿ ಬರೆದ ಮೇಲೆ ||
ಮೂರುಬಾರಿಗು ಪೇಳಿದ ಮೇಲೆ ಇನ್ನುಂಟೆ |
ಶ್ರೀರಾಮಚಂದ್ರನಾಶೆ ||104||
ವಚನ || ಇಂತೆಂದು ಜಾನಕಿಯು ಪೇಳಲಾಗಿ ಲಕ್ಷ್ಮಣನು ಏನೆಂದನು ಎಂದರೆ –
ರಾಗ ತೋಡಿ ಏಕತಾಳ (ಯಾಲಪದ)
ಅಂಬರ ಗೀರ್ವಾಣಿ ವಾಣಿ |
ಕುಂಭಿನೀದೇವಿ ಕಲ್ಯಾಣಿ |
ಶಂಭು ಕಮಲಜೇಂದ್ರ ಗಣಪರಾ ಮೂಲೋಕಪಾಲ |
ರೆಂಬ ಮುಖ್ಯ ದೇವತೆಗಳಿರ ||105||
ವನದೊಳಿಪ್ಪ ಮುನಿಗಳಿರ |
ವನಿತೆ ಸೀತೆ ಇಹಳು ಜೋಕೆ |
ಎನುತ ಕೈಯ ಮುಗಿದು ತಿರುಗಿದ ದಿಕ್ಪಾಲಕರಿಗೆ |
ಮಣಿದು ಕಾವ ಕರುಣೆ ಕೇಳಿದ ||106||
ವಾರ್ಧಕ
ಇಂತೆಂದು ಸಕಲಸುರರಿಂಗೆರಗಿ ಲಕ್ಷ್ಮಣಂ
ತಾಂ ತಿರುಗಿದಂ ಪುರಕೆ, ಕಂಡು ಜಾನಕಿ ಬಳಿಕ
ಸಂತಾಪದಿಂ ಕೂಗಿದಳು ಹಲುಬುತೊರಳಿದಳು ಕಲ್ಮರಂ ಕರಗುವಂತೆ ||107||
ರಾಗ ನೀಲಾಂಬರಿ ಅಷ್ಟತಾಳ
ವನದೊಳಗಿರಲು ನಾಹಿಂದೆ ಎನ್ನ |
ದನುಜನೊಯ್ಯಲು ಕೂಡೆ ಬಂದೆ ||
ಕ್ಷಣದೊಳಗಸುರರ ಕೊಂದೆ ಬಿಡೆ |
ನೆನುತ ಸತ್ಯವ ಮಾಡಿ ತಂದೆ ||108||
ಅರಿತು ನೀ ಸುಖದೊಳಗಿರದೆ ಎನ್ನ |
ನೆರೆದ ಕಾಡೊಳು ಬಿಟ್ಟು ಬರಿದೆ ||
ಕರಗದೆ ಮನಸಯ್ಯ ನಿನಗೆ ಎನ್ನ |
ಮರೆತೆಯಾ ಗತಿ ಯಾರಿನ್ನೆನಗೆ ||109||
ಬಲುಬಲು ಗುಣಗಳುಳ್ಳವನೆ ಜಗ |
ವುಳುಹಿದ ಲಕ್ಷ್ಮೀಧವನೆ ||
ಸುಲಲಿತ ರೂಪ ಕೇಶವನೆ ನಾ |
ಬಳಲುವೆ ನೈ ಪರ ಶಿವನೆ ||110||
ರಾಗ ನಾದನಾಮಕ್ರಿಯೆ ಅಷ್ಟತಾಳ
ಸೀತೆ ಹೀಗೆಂದು ಕೂಗಾಡುತ್ತ ಭೂತ |
ನಾಥನ ದೆಸೆಗೆಂದು ನೋಡುತ್ತ ||
ಭೂತಳ ದೊಳು ಬಿದ್ದಳ್ಮಾಣದೆ ಮೈಯೊಳ್ |
ಧಾತುಗುಂದುತ ಕಡೆಗಾಣದೆ ||111||
ಕಂಡು ಚಮರಿಮಗ ಬೀಸುತ್ತ ಗಿಳಿ |
ವಿಂಡು ತಳಿರ ತಂದು ಹಾಸುತ್ತ ||
ಹಿಂಡುಪಕ್ಷಿಗಳು ಸಂವರಿಸುತ್ತ ದೇವಿ |
ಪುಂಡರೀಕಾಕ್ಷನ ನೆನೆಯುತ್ತ ||112||
ಬಿಸಿಲಿನಡೆಗೆ ಮೈಗೆ ಬೀಳುತ್ತ ಬಿದ್ದು |
ಕೊಸರುಗೊಂಡೆದ್ದು ಮತ್ತೇಳುತ್ತ ||
ಉಸುರದಂದದಿ ಭಯ ತಾಳು್ತ ರಾ |
ಕ್ಷಸರ ಬೊಬ್ಬೆಗಳನ್ನೆ ಕೇಳುತ್ತ ||113||
ಕೂಗುತಿರಲು ಸೊಲ್ಲು ಸೊಲ್ಲಿಗೆ ಬಂದ |
ನಾಗ ವಲ್ಮಿಕಮುನಿಯಲ್ಲಿಗೆ ||
ಯಾಗಸನ್ನಹಗಳ ನರಸುತ್ತ ಕಂಡು |
ನಾಗವೇಣಿಯ ಮೆಲ್ಲ ನುಡಿಸುತ್ತ ||114||
ರಾಗ ಘಂಟಾರವ ಜಂಪೆತಾಳ
ಅಮ್ಮ ಕೇಳಂಜದಿರು ಅಳುವುದೇತಕೆ ನೀನು |
ನಿಮ್ಮ ರಾಜ್ಯಗಳೆಲ್ಲಿ ನೀನಾರ ಮೃಗಳು ||115||
ಮಾತೆ ಕೇಳ್ನೀನಾವ ಭೂತಳಾಧಿಪನರಸಿ |
ಏತಕೋಸ್ಕರ ಬಂದೆ ಈ ತಪೋವನಕೆ ||116||
ಕಾಂತೆ ನಿನ್ನನು ಹಿಂದೆ ಕಂಡ ಹೊಲಬಿದೆ ಮುಂದೆ |
ಚಿಂತೆಬಿಡು ವಾಲ್ಮೀಕಿ ಎಂದೆನ್ನಪೆಸರು ||117||
ಆಪತ್ತು ಬಂದಾಗ ಅತಿಧೈರ್ಯವಿರಬೇಕು |
ಈಪಾಟಿ ಕೂಗುವರೆ ಈ ಕಾಡಿನೊಳಗೆ ||118||
ನಯದಿಂದ ವಾಲ್ಮೀಕಿ ನಂಬಿಕೆಯ ಮಾತಾಡೆ |
ಭಯದಿಂದ ಪೇಳಿದಳು ಬಲ್ಲಮುನಿಯೊಡನೆ ||119||
ರಾಗ ತೋಡಿ ರೂಪಕತಾಳ
ದಶರಥ ನಪತಿಗೆ ಸೊಸೆಯಾಗಬೇಕೆನ್ನ |
ಪೆಸರು ಜಾನಕಿಯೆಂಬರೆಲ್ಲ ||
ಯಶವಂತ ರಾಮನ ರಾಣಿಯಯೋಧ್ಯಾ |
ದೆಸೆಯನಾಳುವನೆನ್ನ ರಮಣ ||120||
ಇರಲೊಂದು ದಿನ ನಡುವಿರುಳು ಪಟ್ಟಣದೊಳು |
ತಿರುಗಲು ರಜಕನ ಮನೆಯ ||
ತರುಣಿಪುರುಷರು ತಮ್ಮೊಳಗೆ ಕೊಂದಾಟದಿಂ |
ದರುಹಿದರೇನೋ ನಾನರಿಯೆ ||121||
ಮರುದಿನದುದಯದಿ ಅನುಜ ಕರೆದು ನಾ |
ನರಿಯದಂದದಿ ನೇಮವಿತ್ತ ||
ತರಳೆಯ ಕಾಡೊಳು ಬಿಟ್ಟು ಬಾರೆಂದೆನೆ |
ಕರೆತಂದ ಸೌಮಿತ್ರಿ ನಿನ್ನೆ ||122||
ಈ ದಡದಲಿ ಬಿಟ್ಟು ಹೊದ ಲಕ್ಷ್ಮಣನಿನ್ನು |
ಹಾದಿಯ ಕಾಣದೆ ಮುಂದೆ ||
ಹೇ ದಯಾನಿಧಿ ನಿನ್ನ ಪಾದವಕಂಡೆ ಇ |
ನ್ನಾದರೂ ಕಾಯಬೇಕೆನ್ನ ||123||
ವಿಷವ ಕುಡಿದು ಸಾವೆನೆಂದರೆ ಈಗೆನ್ನ |
ಬಸುರಿಗಾಯಿತು ತಿಂಗಳಾರು ||
ವಶವಿಲ್ಲದಿಂತು ಜೀವಿಸುವಂಗಕಾಣೆಂದು |
ಶಶಿಮುಖಿ ಬಿದ್ದಳಂಘ್ರಿಯಲಿ ||124||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಏಳು ಚಿಂತಿಸಬೇಡ ಜಾನಕಿ |
ಕೇಳಿದೆನ್ನಿಮಾತ ಲಾಲಿಸು |
ಲೋಲಲೋಚನೆ ಅಂಜಿಕೆಯ ಬಿಡು ಪಾಲಿಸುವೆನು ||125||
ಮುಗುದೆ ಕೇಳಾ ಬೇರೆ ಮನದಲಿ |
ಬಗೆಯದಿರು ವಾಲ್ಮೀಕಿ ಮುನಿನ |
ಮ್ಮಗಣಿತಾಶ್ರಮದೊಳಗೆ ಬಂದಿರು ಮೃಗಳು ನಮಗೆ ||126||
ರಾಗ ಗೌಳಮಲಹರಿ ಏಕತಾಳ
ನಂಬಿಕೊಳ್ಳೆ ನಂಬಿಕೊಳ್ಳೆ ನಾರಿ ಕೇಳವ್ವ |
ಹಂಬಲಿಸದಿರೆಲೆ ಮರಿದುಂಬಿಗುರುಳವ್ವ ||127||
ಠಕ್ಕಿನ ಮಾತಲ್ಲ ಕೇಳೆ ಚಿಕ್ಕ ಪ್ರಾಯದವ್ವ |
ಅಕ್ಕರಿಂದಿಬ್ಬರು ಸಣ್ಣಮಕ್ಕಳಾಹ ರವ್ವ ||128||
ಪುತ್ರರಾದ ಮೇಲೆ ನೀವಿನ್ನಿತ್ತ ಕೇಳಿರವ್ವ |
ಮತ್ತೆ ರಾಮಚಂದ್ರದೇವನೊತ್ತಿಲಿರ್ಪೆಯವ್ವ ||129||
ಇಕ್ಕೊ ದೂರವಿಲ್ಲ ನಮ್ಮಾಶ್ರಮಕೆ ನೀ ಬಾರವ್ವ |
ಮುಕ್ಕಣ್ಣನಾಣೆಗೂ ಬೇರೆಲೆಕ್ಕಿಸದಿರವ್ವ ||130||
ವಾರ್ಧಕ
ಹೊಡೆದ ಮಳೆನೀರ ಹೊಳೆಯಲಿ ಮುಳುಗಿ ಸಾವವನ
ಹಿಡಿದೆತ್ತಿ ಜೀವವನು ಕಾಯ್ದಂತೆ ವಾಲ್ಮೀಕಿ
ನಡುಗುತಿಹ ಜಾನಕಿಯ ಕರೆತಂದನೊಡನಿರ್ದ ತಾಪಸೋತ್ತಮರು ಸಹಿತ |
ಕಡುಪತಿವ್ರತೆ ಜಗಜ್ಜನನಿ ತನ್ನಾಶ್ರಮಕೆ
ನಡೆತಂದಳಿನ್ನು ಪಾವನನಾದೆ ತಾನೆಂದು
ಬಿಡದಿತ್ತ ಪರ್ಣಶಾಲೆಯ ಕಟ್ಟಿ ಸಜ್ಜನರಿಗಡವಿಯೇ ಮನೆಯಾಹುದು ||131||
Leave A Comment