ರಾಗ ನಾಟಿ ರೂಪಕತಾಳ
ಭಜಿಸುವೆ ಮನದಲಿ ನಿತ್ಯವು ಭಜಕರ ಕುಲ ದೈವವ ಸುರ |
ವ್ರಜಸೇವಿತ ನೆಂದೆನಿಸುವ ಗಜವದನನ ಪದವ ||1||
ಗೌರಿಯ ಮೋಹದ ಪುತ್ರನ ಗಣನಾಯಕ ಸುಚರಿತ್ರನ |
ಪೌರುಷಜನಮದಭಂಗನ ಪರತರ ಪಾವನನ ||2||
ಬಹುವಿಧ ನಾಮದ ಮೂರ್ತಿಯ ಬಹುಲೋಕದೊಳಗೆ ಕೀರ್ತಿಯ |
ಚೌವೇದ ಶ್ರುತಿಸಾರನ ಚರಸರಿಸ್ಕೃಪಧರನ ||3||
ಭಾಸುರ ಮಣಿಗಣ ರತ್ನವಿಭೂಷಣ ಲಂಬೋದರ ವಿ |
ಘ್ನೇಶನೆ ಶರಣಾಗತಪರಿ ಪೋಷಣನೆಂದೆನಿಪ ||4||
ಏಸು ಮಹಿಮೆಯುಂಟೆಂಬುದನಾ ಸರಸಿಜಭವನರಿಯ |
ಬೇಸರದೆಲ್ಲರ ರಕ್ಷಿಪಮೂಷಿಕವಾಹನನೆ ||5||
ಮದುವೆಯ ಮುಂಜಿಯ ಶುಭಲಗ್ನದ ಕಾರ್ಯದೊಳಾವಾಗಲು |
ಮೊದಲಿನ ಪೂಜೆಯ ಕೊಂಬುವದದೆ ನಿನ್ನಯಬಿರುದು ||6||
ಅದರಿಂದಲೆ ನಿನ್ನನು ಕಾವ್ಯದ ಮೊದಲಿಗೆ ಪ್ರಾರ್ಥಿಸಿದೆನು |
ಮಧುಪುರಗಣ ನಾಥನೆ ತವ ಪದಕೆ ನಮೋಯೆಂಬೆ ||7||
ದ್ವಿಪದಿ
ಗಜಮುಖಗೆ ತಲೆವಾಗಿ ಸಿರಿಗೆ ವಂದಿಸುತ |
ಅಜನರಸಿ ಶಾರದೆಯನರಿತು ಮನ್ನಿಸುತ ||8||
ಪರಶಿವಗೆ ಕೈಮುಗಿದು ಪಾರ್ವತಿಗೆ ನಮಿಸಿ |
ಸಿರಿದೇವಿಯರಸನಂ ಶೀಘ್ರದಿಂ ಭಜಿಸಿ ||9||
ಶಂಕರಾಚಾರ್ಯರಿಗೆ ಶರಣೆಂಬೆ ಬಳಿಕ |
ನಾ ಕಂಡ ಗುರುವೆನಗೆ ದಯಮಾಡುವನಕ ||10||
ವಾಲ್ಮೀಕಿ ಮುನಿಪತಿಗೆ ವಂದನೆಯ ಮಾಡಿ |
ಒಲ್ಮೆಯಿಂ ಸಕಲ ಸುರರೊಳು ಮತಿಯ ಬೇಡಿ ||11||
ರಾಮಾಯಣದೊಳು ಕುಶಲವರ ಕಾಳಗವ |
ಭೂಮಿಯೊಳು ಪೇಳ್ವೆ ಬಹುವಿಧ ಪರಾಕ್ರಮವ ||12||
ಬಾಲಕರ ನುಡಿಯೆಂದು ನಿಂದಿಸದೆ ಬರಿದೆ |
ಕೇಳಿ ಸಂತೋಷಿಸುವ ಮನುಜರಿಂಗಿರದೆ ||13||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಧಾರಿಣಿಪ ಜನಮೇಜಯಂಗಾ |
ಚಾರು ಮಂಗಳಮಹಿಮ ಜೈಮಿನಿ |
ಭಾರತವ ಪೇಳ್ದಿರಲು ಬಹುವಿ | ಸ್ತಾರದಿಂದ ||14||
ತಂದೆ ಮಕ್ಕಳುತಾವು ತಮ್ಮೊಳ |
ಗೊಂದೆ ಮತವಾಗಿರದೆ ರಣದೊಳು |
ನಿಂದು ಕಾದುವರುಂಟೆ ಪೇಳೆನ | ಗೆಂದ ಭೂಪ ||15||
ಆಗ ಮುನಿ ಕರುಣಿಸಿದ ಕುಶಲವ |
ರಾಘವರ ಸಂಗರದ ಕಥೆಯನು |
ಈಗ ಭೂಮಿಯೊಳೊರೆವ ಯಕ್ಷ | ರಾಗದಿಂದ ||16||
ಧರೆಯೊಳುತ್ತಮ್ಮವೆನಿಪಯೋಧ್ಯಾ |
ಪುರವನಾಳುವ ರಾಮಚಂದ್ರನು |
ಅರಸಿಕೈಕೆಯ ಮಾತಿಗೋಸುಗ | ವನಕೆ ಬಂದು ||17||
ದುರುಳ ಖರದೂಷಣರ ಕೊಂದ |
ಲ್ಲಿರಲು ಸೀತೆಯನೊಯ್ಯೆ ರಾವಣ |
ಕರಡಿಕಪಿಗಳನೆರಹಿ ಶರಧಿಗೆ | ಸೇತುಕಟ್ಟಿ ||18||
ಹತ್ತುಶಿರದನಪಡೆಯು ಸಹಿತಲೆ |
ಕತ್ತರಿಸಿದಾಕುಂಭಕರ್ಣನ |
ಮತ್ತೆ ಸೀತೆಯತಂದು ರಾಜ್ಯವ | ನಾಳುತಿರಲು ||19||
ವಾರ್ಧಕ
ರಾವಣಾದಿಗಳ ಸಂಹರಿಸಿ ೆರೆಯೊಳಗಿರ್ದ
ದೇವರ್ಕಳಂ ಬಿಡಿಸಿ ಲಂಕಾಧಿಪತ್ಯಮಂ
ತೀವಿದತಿಸಂಭ್ರಮದೊಳಾ ವಿಭೀಷಣಗಿತ್ತು ಸುಗ್ರೀವನಂ ಮನ್ನಿಸಿ |
ಭಾವಶುದ್ಧಿಯೊಳಯೋಧ್ಯಾಪುರಕೆ ನಡೆತಂದು
ಭೂವರಂ ತಾನಾಗಿ ಪಾಲಿಸಿದ ರಾಜ್ಯಮಂ
ಕೋವಿದರಸನದೊಂದು ದಿನ ಚಿಂತೆಯಿಂದಿರಲ್ ಕಂಡು ಜಾನಕಿ ಪೇಳ್ದಲು ||20||
ರಾಗ : ಘಂಟಾರವ ಜಂಪೆತಾಳ
ಕಾಂತ, ಶಿರೋಮಣಿಯೆ ರಾಮ ಜಗದೀಶ |
ಚಿಂತಿಸುವ ಬಗೆಯೇನು ಚಿನ್ಮಯನೆ ನೀನು ||21||
ನಾರಿಕುಲಮಣಿ ಕೇಳು ಎನ್ನಿಂದ ಮೇಲಿನ್ನು |
ಉರ್ವಿಗಿಲ್ಲೊಡೆಯರಂತಕನಾದೆಕುಲಕೆ ||22||
ಪೂರ್ವಜನ್ಮದಲಿ ಶಿವಪೂಜೆಯಂ ಮಾಡಿದರೆ |
ಸರ್ವಥಾಮಕ್ಕಳಿಂದೆನಗಾಗದಿಹರೆ ||23||
ವಾರ್ಧಕ
ಕಾಂತೆ ಕೇಳಿನ್ನೇತಕಾ ಮಾತನಾಡಿದರೆ
ಭ್ರಾಂತನೆಂಬರು ಕೇಳ್ದ ಜನರೆಲ್ಲ, ಪೂರ್ವಜ
ನ್ಮಾಂತರದ ಪುಣ್ಯವಿಲ್ಲದೆ ಬಯಸಿದರೆ ಮಕ್ಕಳಾಗುವರೆ ಮನುಜರಿಂಗೆ |
ಇಂತು ಸುತರಿಲ್ಲದಾರ್ತಿಯೊಳಿರ್ವರಿರ್ದು ಬಲು
ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು
ನಿಂತಿರಲು ರಾಮನುಪಚಾರಂಗಳಂ ಮಾಡಿ ಸಾಷ್ಟಾಂಗ ವಂದಿಸಿದನು ||24||
ರಾಗ ಭೈರವಿ ಜಂಪೆತಾಳ
ಜಯ ಜಯ ಮಹಾಮೌನಿಕುಲ ಶಿಖಾಮಣಿಯೆ |
ಭಯ ನಿವಾರಣವಾಯ್ತುಪಾದದರುಷಣದಿ ||25||
ಸಕಲಸುರಸೇವಿತನೆ ತ್ರಿಕರಣವಿರಾಜಿತನೆ |
ಮುಕುತಿದಾಯಕ ದೇವ ಋಷಿ ಚಾರುಶೀಲ ||26||
ರಾಮ ಇಕ್ಷ್ವಾಕುಕುಲ ಭೂಮಿಪಾಲಕ ಪಾಹಿ |
ಭೀಮವಿಕ್ರಮ ಪುಣ್ಯ ನಾಮ ನೀಕೇಳು ||27||
ಅರಿತೆ ನಿನ್ನಂತರಂಗವ ಮಕ್ಕಳಿಲ್ಲೆಂಬ |
ಕೊರತೆಯನುಕಳೆಯಲ್ಕೆ ಬಂದೆ ನಾನಿಂದು ||28||
ಮುಂದೇನುಪಾಯ ಮುನಿ ಮಕ್ಕಳಾಗುವುದಕ್ಕೆ |
ತಂದೆ ಕಾರುಣ್ಯದೊಳಗರುಹಬೇಕಯ್ಯ ||29||
ಜಾನಕಿಯ ಕರೆದು ಮುನಿ ಮಂತ್ರೋಪದೇಶವನು |
ತಾನಿತ್ತನಾಗ ಸಂತಸದಿ ಕೇಳಿದಿರೆ ||30||
ನಿರ್ಭಯದೊಳಿರು ನೀನು ನಿನ್ನರಸಿ ಗರ್ಭದೊಳ |
ಗಿಬ್ಬರಾಹರು ನಿನಗೆ | ಮೃಗಮಕ್ಕಳೆಂದ ||31||
ಭಾಮಿನಿ
ಮುನಿಪನಾಡಿದ ಮಾತ ಕೇಳಿದು |
ಮನಸಿನಲಿ ಸಂತೋಷವಾಗಲು |
ಜನಪವನು ಬೀಳ್ಕೊಟ್ಟು ಋಷಿ ತನ್ನಾಶ್ರಮಕೆ ತೆರಳೆ |
ದಿನವ ಕಳೆದರು ಹಲವು ರಾಜ್ಯವ
ನನುಕರಿಸಿ ಪಾಲಿಸುತಯೋಧ್ಯದ
ಜನರು ಸುಖಹಿತರಾಗೆ ರಾಘವನಾಳ್ವ ಕಾಲದಲಿ ||32||
ರಾಗ ಘಂಟಾರವ ಜಂಪೆತಾಳ
ಸಕಲಭಾಗ್ಯಗಳಿರವು ಸರ್ವಜನ ಸುಖಕರವು |
ಸುಕತ ಮಂಗಳದಿರವು ಸಾಕೇತಪುರವು ||33||
ನಾಕಾಧಿಪನ ಭೋಗ ಎನಗೆ ತನಗೆಂಬಾಗ |
ಬೇಕೆಂಬ ಜನರಿಲ್ಲ ಬೇಡದವರೆಲ್ಲ ||34||
ಕೇಡ ಕಂಡವರಿಲ್ಲ ಚಾಡಿ ಹೊಲೆ ಹೇಸಿಲ್ಲ |
ಬೀಡುಬಿಟ್ಟಳು ಲಕ್ಷ್ಮಿ ಓಡಿತು ದರಿದ್ರ ||35||
ವಚನ || ಇಂತು ಸೌಭಾಗ್ಯದಿಂದ ರಂಜಿಸುವಂಥ ಅಯೋಧ್ಯಾ ಪಟ್ಟಣಕ್ಕೆ ವಸಂತನೈತಂದನದೆಂತೆನೆ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚಿಗುರಿದವು ವನದೊಳಗೆ ತರುಗಳು |
ಮುಗುಳನಾಂತವು ಪುಷ್ಪಲತೆಗಳು |
ಬಗೆಬಗೆಯ ಫಲನಿಕರ ಪುಷ್ಪಗ | ಳಾಯಿತಾಗ ||36||
ತುಂಬಿಗಳ ಝೇಂಕಾರ ಹೆಚ್ಚಿತು |
ಅಂಬುಜಗಳೆದೆಬಿರಿಯೆ ಬಿಚ್ಚಿತು |
ಅಂಬರದೊಳಾಡಿದವು ಗಿಣಿಗಳು | ಸಂಭ್ರಮದೊಳು ||37||
ಅಗರು ಚಂದನ ಜಾಜಿ ಮಲ್ಲಿಗೆ |
ಯುಗುಳುವಾತವು ಬೀಸಿ ರಾಜ್ಯದಿ |
ಮಘಮಘಿಪ ಪರಿಮಳಗಳಾದುವು | ನಾಲ್ಕುದೆಸೆಗೆ ||38||
ವಚನ || ಆ ಸಮಯದಲ್ಲಿ ವನಪಾಲಕನೊರ್ವನೈತಂದು ರಾಘವೇಶ್ವರನೊಡನೆ ಏನೆಂದು ಬಿನ್ನೈಸುತ್ತಿದ್ದನು ಎಂದರೆ –
ರಾಗ ಸೌರಾಷ್ಟ್ರ ಮಟ್ಟೆತಾಳ
ರಾಮ ರಾಘವ ರಾಜೀವಲೋಚನ |
ಭೂಮಿಪಾಲಕ ಭಕ್ತವತ್ಸಲ || ಪಲ್ಲವಿ ||
ಸುಗುಣ ತರುಗಳು ಎಲ್ಲ ಚಿಗುರಿ ವನದೊಳು |
ಬಗೆಯ ಫಲಗಳು ಬಹಳ | ಕಾನನ ದೊಳು ||39||
ಕಾಡ ಮೃಗಗಳು ಎಲ್ಲಕೂಡಿ ವನದೊಳು |
ಆಡುತೈದವೆ ಅಂಜಿಕಿಲ್ಲದೆ ||40||
ರಾಗ ಯಾಲಪದ ಏಕತಾಳ
ಕದಲಿ ಖರ್ಜೂರ ದ್ರಾಕ್ಷೆ |
ತುದಿಮೊದಲಿಲ್ಲದೆ ಜಂಬು ನಿಂಬೆ |
ಉದುರುತ್ತೈದವೆ ನಾನಾಫಲಗಳು ಚಿತ್ತೈಸೆಂದು |
ಪದುಮನಾಭನ ಪದಕೆರಗಿದನು ||41||
ವಚನ || ಅಗಲಾ ಗಜತುರಗರಥಪದಾತಿಗಳೆಂಬ ಚತುರಂಗಸೇನೆಯಂ ಕೂಡಿಕೊಂಡು
ರಾಘವೇಶ್ವರನು ಬೇಟೆಗೈದಿದನದೆಂತೆನೆ –
ರಾಗ ಫರಜು ಏಕತಾಳ (ದ್ರುತ)
ಬೇಟೆಯಾಡುತ್ತ ಬಂದ |
ರಾಮ ಸಂತೋಷದಿಂದ || ಪಲ್ಲವಿ ||
ಈಟಿ ಕಠಾರಿಯ ಕೋಟಿಮಂದಿ ನೆಗೆ |
ದಾಟವನಾಡುತ ನಾಟಕವಾಗಿ | ||42||
ಸೊಕ್ಕಿದ ಮೃಗಗಳ ಧಿಕ್ಕರಿಸುತ ಬಲು |
ಗಕ್ಕಸದಿಂದಲಿ ರಕ್ಕಸವೈರಿ | ||43||
ನಾನಾ ಫಲದ ವಿತಾನವ ಕೊಯ್ಯುತ |
ಕಾನನದೊಳಗಾ ಜಾನಕಿಸಹಿತ | ||44||
ಪುಷ್ಪದಿ ರಚಿಸಿದ ಚಪ್ಪರಮಂಚದೊ |
ಳೊಪ್ಪಿ ಸೀತೆ ಕಂದರ್ಪನ ಜನಕ | ||45||
ವಚನ || ಇಂತು ಮೂರುನಾಲ್ಕು ದಿನಪರ್ಯಂತ ಬೇಟೆಯಾಡುತ್ತಿರಲು ಮತ್ತಲ್ಲಿ ಏನಾಯಿತು ಎಂದರೆ –
ರಾಗ ಘಂಟಾರವ ಆಟತಾಳ (ವಿಲಂಬಿತ, ದ್ರುತ)
ಮತಿವಂತೆ ಪುಷ್ಪವತಿಯಾದಳು ಸೀತೆ |
ಪತಿಯ ಕೂಟದಿ ಜೊತೆಯಳಿರದುಪರತಿಯ ವೇಳ್ಯದಿ ಮಾನಿನಿ ||46||
ಮಲ್ಲಿಕಾಸ್ಮಿತೆ ಮಧುರಕೋಕಿಲವಾಣಿ |
ಫುಲ್ಲಲೋಚನೆ ಸಲ್ಲಲಿತವನದಲ್ಲಿ ಮಾನಿನಿ ಜಾನಕಿ ||47||
ಅಂಬುಜಾನನೆ ಅರಸಂಚೆ ಗಮನೆ ಶ್ರೀ |
ರಂಭೆ ಪುತ್ಥಳಿ ಬೊಂಬೆ ಇನ್ನೇನೆಂಬೆ ಶೃಂಗಾರಾಂಗನೆ ||48||
ರಾಗ ಕಲ್ಯಾಣಿ ಏಕತಾಳ
ಸೀತೆ ದೂರದಿ ನಿಂತ ರೀತಿಯರಿತು ರಾಮ |
ತಾ ತಿಳಿಯಲು ಮನಕಾತತುಕ್ಷಣದಿ ||49||
ಚಾತುರಂಗದ ಸೇನೆ ತಾ ತಿರಿಗಿಸಿಕೊಂಡು |
ಭೂತಳಾಧಿಪನು ಸಾಕೇತ ಪಟ್ಟಣಕೆ ||50||
ಬಂದು ರಾಘವ ತನ್ನ ಮಂದಿಯ ಬೀಳ್ಕೊಟ್ಟು |
ಚಂದದಿ ಕಳುಹಿದನಂದು ಮಾತಾಡಿ ||51||
ರಾಗ ಆಂದೋಳಿ(ಕ) ಅಷ್ಟತಾಳ
ಮದಗಜ ಗಮನೆಯೈದನೆ ದಿವಸದಿ ಮಿಂದು |
ಸದಮಳ ವಿಧದಲಂಕರಿಸುತ್ತ ||
ಸದನಕ್ಕೆ ಬರೆ ಕಂಡು ರಾಮ ಸಂತಸದಿ ಮು |
ಟ್ಟಿದರೆ ಗರ್ಭವನಾಂ ತಳು ಸೀತೆ ||52||
ಚಾರುಚರಿತ್ರೆ ಚಂದ್ರಮುಖಿ ಚಂದನಗಂಧಿ |
ವಾರಿಜವದನೆ ವಾಸವಸ್ತೋತ್ರೆ ||
ಮಾರಿದ ಗುರುನಿತಂಬಿನಿ ಸೊಬಗಿನ ಸೋನೆ |
ಮಾರನ ಮುಂಗೈ ಯರಗಿಣಿಯೆ ||53||
ಕನ್ನಡಿ ಕದಪು ಕಂಗಳ ನೋಟವರಳ್ಗಣ್ಣ |
ಬಿನ್ನಾಣದಬಲೆ ಬಿಂಕದ ನಾರಿ ||
ಮನ್ಮಥನೆರಕದಚ್ಚಿನ ಬೊಂಬೆ ಮೈತುಂಬೆ |
ಚಿನ್ನದಂತೆಸೆದು ರಂಜಿಸಿದಳು ||54||
ಮೂರು ತಿಂಗಳು ತುಂಬೆ ಮುದ್ದು ಮೋರೆಯಲಿ ಬಿ |
ಳ್ಪೇರಿತು ತ್ರೈಜಗದೊಡತಿಗೆ ||
ಶ್ರೀರಾಮನರಸಿಯ ಗುರುಕುಚವೆರಡು ಕ |
ಪ್ಪೇರಿತು ಛಾಯಾಮಾತ್ರದೊಳಾಗ ||55||
ರಾಗ ಕಾಂಭೋಜಿ ಏಕತಾಳ
ಮಂಗಳಾಂಗಿಗೆ ನಾಲುಕು ತಿಂಗಳಾಗಲಾಗ ರಘು |
ಪುಂಗವ ಸಂತೋಷದಿ ಪುರಂಗಳನೆಲ್ಲ ||
ಸಿಂಗರಿಸಿ ಪಟ್ಟಣದೊಳಂಗನೆಯರೆಲ್ಲ ಶೋಭ |
ನಂಗಳ ಪಾಡುತ್ತ ಸೀಮಂತಗಳಾಗಲು ||56||
ಕೇರಿ ಕೇರಿಯ ಬಾಲೆಯರಾರತಿಗಳನ್ನೆ ತಂದು |
ಶ್ರೀರಾಮಸೀತೆಯರಿಗೆತ್ತಿ ಸಾರುತಿರ್ದರು ||
ಆರೇಳು ತಿಂಗಳು ತುಂಬೆ ನಾರಿ ಸೀತಾದೇವಿಗಿಚ್ಛೆ |
ಬೇರೆ ಬೇರೆ ತಂದು ಕೊಟ್ಟರೂರಹೆಂಗಳು ||57||
ಕಂದ
ನಯನುಡಿ ಮಾತಾಡುತ ನಿ |
ನ್ನಯ ಮನಸಿನ ಬಯಕೆಯೇನು ಪೇಳೆಲೆ ರಾಮಂ |
ಭಯದಿಂದುಸುರಿದಳಾ ತ |
ನ್ನಯ ಕಾಂತಗೆ ಸೀತೆ ಬಳಿಕ ಕರವಂ ಮುಗಿದು ||58||
ರಾಗ ಸೌರಾಷ್ಟ್ರ ಮಟ್ಟೆತಾಳ
ವಾರಿಜಾಂಬಕ ಧಾರಿಣೀಪತೇ |
ಮಾರಸನ್ನಿಭ ಮಂಜುಳಾಕರ || ಪಲ್ಲವಿ ||
ಕೇಳು ರಾಘವ ವನದ ಹೆಂಗಳ |
ಮೇಳದಿಂದಲೆ ಇರುವೆನಲ್ಲಿಯೆ ||59||
ಎಂದು ಬರುವೆ ನೀ ಮಂದಗಾಮಿ ನಿ |
ಇಂದು ಎನ್ನೊಳು ಪೇಳೆಂದ ರಾಘವ ||60||
ಮೂರು ದಿವಸದ ಮೇಲೆ ಬರುವೆನು |
ಕಾರಣೀಕನೆ ಕಳುಹು ಎನ್ನನು ||61||
ಭಾಮಿನಿ
ಧರಣಿಜೆಯು ತನಗಿಚ್ಛೆಯಾದುದ
ನರುಹೆ ಕಳುಹುವೆನೆಂದು ಸಂತೈ
ಸಿರಲು, ನಗರದಿ ತಿರುಗುತಿಹ ಚಾರಕರ ನಡುವಿರುಳು |
ಕರೆಸಿ ತನ್ನ ವಿಚಾರ ಸುದ್ಧಿಯ
ಪುರದ ಜನರೇನೆಂಬರೆನೆ ವಿ
ಸ್ತರಿಸಿದರು ಕೈಮುಗಿದು ನಗರದೊಳೊರೆದ ವಾರ್ತೆಗಳ ||62||
ರಾಗ ಘಂಟಾರವ ಜಂಪೆತಾಳ
ರಣಪರಾಕ್ರಮ ಧೀರ ಗುಣನಿದಾನ ಕಠೋರ |
ಮಣಿಮಕುಟ ಧೃತಹಾರ ಮಂಜುಳಾಕಾರ ||63||
ಸತ್ಯಧರ್ಮವಿಚಾರ ಸಾಧುಜನ ಪರಿವಾರ |
ನಿತ್ಯಮಂಗಳರೂಪ ನಿಜಸುಪ್ರತಾಪ ||64||
ಧರ್ಮದಾನಗಳಲ್ಲಿ ಧೈರ್ಯಮಾನಿಗಳಲ್ಲಿ |
ನಿರ್ಮಲಾತ್ಮಕನೆಂದು ನಿನ್ನ ಪೊಗಳುವರು ||65||
ರಾಗ ಕೇದಾರಗೌಳ ಅಷ್ಟತಾಳ
ಬಲ್ಲಿದವರ ಕುಲದೈವ ನೀನೆಂದು ಊ |
ರೆಲ್ಲ ಕೊಂಡಾಡುವರು ||
ಖುಲ್ಲ ನಿರ್ಭಾಗ್ಯನಿಂದಿರುಳೊರ್ವ ರಜಕನು |
ಸಲ್ಲದ ನುಡಿಯ ಪೇಳ್ದ ||66||
ವಲ್ಲಭೆ ತವರ್ಮನೆ ಗುಸುರದೈದಿದಳೆಂದು |
ಕೊಲ್ಲುತ್ತವಳ ನೆಳೆವ ||
ಬಲ್ಲವರೊಡಬಡಿಸಿರೆ ರಾಮನಂತೆ ಹು |
ಚ್ಚಲ್ಲ ಕೂಡುವೊಡೆಂದನು ||67||
ಭಾಮಿನಿ
ನುಡಿಯ ಕೇಳುತ ಕೈಯ ಧನುಶರ
ಪೊಡವಿಗುದುರಿತು ರೋಷ ಭರದು
ಗ್ಗಡದ ರೌದ್ರಾವೇಷದಲಿ ಮರಳಿದನು ಮಂದಿರಕೆ |
ಮಿಡುಕುತಿರ್ದನು ಮನಸಿನಲಿ ಕಂ
ಗೆಡುತ ಕಣ್ಣಿಗೆ ನಿದ್ರೆ ಬಾರದೆ
ಪೊಡವಿಪತಿರಘುನಾಥ ಮಾತಾಡಿದನು ತನ್ನೊಳಗೆ ||68||
ರಾಗ ಗೌಳಮಲಹರಿ ರೂಪಕತಾಳ
ಮೋಸವಾಯಿತು ಮಾನಿನಿಯ ಮನೆಗೆ ತಂದು |
ಅಸುರದೊಳು ಸಿಕ್ಕಿದ್ದಾ ಸೀತೆಯ ಪುರಕೆ ತಂದು || ಪಲ್ಲವಿ ||
ರಕ್ಕಸರ, ಕೈಯೊಳಗೆ, ಸಿಕ್ಕಿ ಭಂಗಬಟ್ಟು, ಅವ |
ರಿಕ್ಕಿದ್ದುಂಡದಲೆಯೆಂದು ಲೆಕ್ಕಿಸದೇ ಪುರಕೆ ತಂದು ||69||
ಮಾನವರ, ಕೊಂದು ಮತ್ತೆ ಮಧುಮಾಂಸಗಳನ್ನೆ ಮೆಲ್ವ |
ದಾನವರ, ಕೈಮುಟ್ಟಿದ ಮಾನಿನಿಯ ಮನೆಗೆ ತಂದು ||70||
ಕದ್ದುಕೊಂಡು ಹೋಗಿ ತನ್ನ ಬಿದ್ದಣಿಗರೊಡನೆ ಕೂಡಿ |
ಶುದ್ಧವೇ ರಕ್ಕಸನ ವಶದೊಳಿದ್ದ ಹೆಣ್ಣ ಮನೆಗೆ ತಂದು ||71||
Leave A Comment