ರಾಗ ಸೌರಾಷ್ಟ್ರ ಅಷ್ಟತಾಳ

ಮಂಗಳಮಹಿಮ ರಾಮನ ಕಂಠ ಸರಗಳ |
ನೋಡೆ ಯಮ್ಮ ಸಮ |
ರಾಂಗಣದಲಿ ಬಿದ್ದ ಶತ್ರುಘ್ನ ನುಡುದಾರ |
ನೋಡೆ ಯಮ್ಮ ||222||

ಕಂಗೋಳಿಸುವ ಭರತನ ಕೈಯ ಕಡಗವ |
ನೋಡೆಯಮ್ಮ ಬಹು |
ತುಂಗವಿಕ್ರಮ ಲಕ್ಷುಮಣನಿಟ್ಟ ಮಕುಟವ |
ನೋಡೆ ಯಮ್ಮ ||223||

ಪೊಡವಿಪಾಲಕ ಕೈಯೊಳ್ಪಿಡಿವ ಬಿಲ್ಬಾಣವ |
ನೋಡೆ ಯಮ್ಮ ಇಕೊ |
ಕಡುಜಾಣ ಹನುಮಂತ ಮಿಡುಕಾಡುತ್ತಿರುವಂಥ |
ನೋಡೆ ಯಮ್ಮ ||224||

ಬಿಡದೆ ಸಂಗರದಿ ನಮ್ಮೊಡನೆ ಕಾದಿದನೀತ |
ನೋಡೆ ಯಮ್ಮ ಈಗ |
ನಡುಗುವ ಜಾಂಬವ ಹೆಡೆಗೈಯ ಬಿಗಿದವ |
ನೋಡೆ ಯಮ್ಮ ||225||

ವಾರ್ಧಕ

ಮೃಗವು ಹುಲಿಗಂಜಿ ಸಿಂಹದ ಬಾಯ ಹೊಗುವಂತೆ
ಬಗೆಬಗೆಯ ಚಿಂತೆಯಿಂದಿಪ್ಪ ಜಾನಕಿಗೆ ಶ್ರೀ
ರಘವರನ ಕೊರಳ ಹಾರಗಳ ತಂದಿರಿಸಿ ಕೈಮುಗಿದ ಮಕ್ಕಳ ನೋಡುತ |
ತೊಗಲೆದ್ದು ಮೈಯುಡುಗಿ ಬಿದ್ದಿರುವ ಜಾಂಬವಾ
ದಿಗಳ ಕಂಡಂಜಿ ಮೂರ್ಛಿತೆಯಾಗಿ ಜನಕಸುತೆ
ಮಗುಳೆದ್ದು ಪತಿಯಳಿದ ಕ್ಲೇಶದಿಂ ಹಲುಬಿ ಕುಶನಿಗೆ ಪೇಳ್ದಳಂಬುಜಾಕ್ಷಿ ||226||

ರಾಗ ಸಾವೇರಿ ಏಕತಾಳ

ಮಗುವೇ, ನೀನಿಂತು ಮಾಳ್ಪರೇ ಅಯ್ಯಯ್ಯ ಎನ್ನ    || ಪಲ್ಲವಿ ||

ರಘುವಂಶಾಬ್ಧಿ ಪೂರ್ಣಚಂದ್ರ ಅಗಣಿತಭೋಗದೇವೇಂದ್ರ |
ಸುಗುಣ ಎನ್ನಯ ಕಾಂತ ರಾಘವರಾಯ ||227||

ತಂದೆ ರಾಮಚಂದ್ರನ ತಮ್ಮಂದ್ಯರು ಬೇರೆ ಮೂವರ |
ಕೊಂದಿರಲ್ಲ ಕಾದಿ ರಣದಿ ಅಯ್ಯಯ್ಯ ವಿಧಿಯೆ ||228||

ಮಾನವರ ಕುಲಕ್ಕಭಿ ಮಾನವಂತ ರಿವರಿಗಿಂಥ |
ಮಾನಭಂಗವೇ ಮಕ್ಕಳಿರ ಅಯ್ಯಯ್ಯ ವಿಧಿಯೆ ||229||

ಪಾತಾಳಲೋಕದಿಂದ ಮುನಿನಾಥ ಬರಲಿಲ್ಲವಿನ್ನೂ |
ಏತರ ಊಪಾಯ ವಿದಕ್ಕೆ ಅಯ್ಯಯ್ಯ ವಿಧಿಯೆ ||230||

ರಾಗ ಮಧ್ಯಮಾವತಿ ಏಕತಾಳ

ಸೀತೆ ಮಕ್ಕಳಿಗೆಂದ ಮಾತ ಕೇಳುತಲಾಗ |
ಕೋತಿಗಳರಸನಿಗಾಯ್ತು ಸಂತೋಷ |
ಭೀತಿಯ ಬಿಟ್ಟು ತಮ್ಮೊಳಗೆ ತಾವ್ಮಾತಾಡೆ |
ಪಾತಾಳದಿಂ ಮುನಿನಾಥನು ಬಂದ ||231||

ಬಂದ ಮುನಿಯ ದೂರದಿಂದ ಕಾಣುತ ಸೀತೆ |
ನಂದನರ್ ಸಹ ಪಾದ ದ್ವಂದ್ವಕ್ಕೆ ನಮಿಸೆ |
ತಂದೆ ನೀವಿಲ್ಲಿರದೊಂದೇ ದಿವಸವೆನ್ನ |
ಕಂದರ್ಮಾಡಿದ ಕತ್ಯ ವೆಂದಳಾ ಮುನಿಗೆ ||232||

ಕರವ ಮುಗಿದು ಬೆದರಿರುವ ಮಕ್ಕಳ ನೋಡಿ |
ವರಮುನಿ ಪ್ರೇಮದಿರ್ವರನು ಕುಳ್ಳಿರಿಸಿ |
ತರಣಿವಂಶಜರೊಳೆಂತಾಯ್ತು ಸಂಗರ ಯಾವ |
ಪರಿಯಿಂದ ನೀವ್ ಕಾದಿದಿರಿ ಬಾಲಕರಿರ ||233||

ರಾಗ ರೇಗುಪ್ತಿ ಅಷ್ಟತಾಳ

ಕೇಳಿ ವಾಲ್ಮೀಕಿಮಹಾಮುನಿರಾಯ |
ಕಾಳಗದೊಳು ನಮ್ಮೊಳಾದಂತಬಗೆಯ  || ಪಲ್ಲವಿ ||

ರಾಮನೆಂಬವನೊಂದು ಸೀಮೆಯ ದೊರೆಯಂತೆ |
ಪ್ರೇಮದಿಂದನುಜರು ಮೂವರಂತೆ ||
ಆ ಮಖತುರಗಕೋಸ್ಕರ ನಮ್ಮೊಡನೆ ಸಂ |
ಗ್ರಾಮದೊಳಗೆ ಯುದ್ಧ ಮಾಡಿದ ಪರಿಯನು ||234||

ಆನೆ ಕುದುರೆ ಮಂದಿ ಸೇನೆ ಮಾರ್ಬಲಸಹ |
ತಾನೆ ರಾಘವನನು ಜರುಸಹಿತ ||
ನಾನಾವಿಧದಿ ನಮ್ಮ ಕೂಡೆ ಯುದ್ಧವ ಮಾಡೆ |
ನಾನೆ ನಿಮ್ಮ ಕಟಾಕ್ಷದಿಂದ ಸಂಹರಿಸಿದೆ ||235||

ವಾನರ ಕುಲಕಭಿಮಾನಿಗಳಿವರಂತೆ |
ಏನುಮಾಡಿದರೂ ಸಾವಿಲ್ಲವಂತೆ ||
ತಾನೆ ನಿಮ್ಮಯ ಪಾದಕೊಪ್ಪಿಸಬೇಕೆಂದು |
ಮಾನಭಂಗವ ಮಾಡಿಕೊಂಡುಬಂದೆವು ನಾವು ||236||

ವಚನ || ಇಂತೆಂಬ ಬಾಲಕರ ನುಡಿಯಂ ಕೇಳಿ ವಾಲ್ಮೀಕಿಮುನಿವರನು ನೊಂದುಕೊಂಡವನಾಗಿ ಏನೆಂದನು ಎಂದರೆ –

ರಾಗ ಸಾವೇರಿ ಅಷ್ಟತಾಳ

ತಪ್ಪ ಮಾಡಿದಿರಿಬ್ಬರೂ ಕೇಳಿದರಿದ |
ಕೊಪ್ಪರ್ಲೋಕದ ಜನರು ||
ಸ್ವಲ್ಪಬುದ್ಧಿಗಳಾಯಿತವರ ಕೊಂದು ರಾಮ |
ನಪ್ಪನಲ್ಲವೆ ನಿಮ್ಮಗೆ ಬಾಲಕರಿರ ||237||

ಭೂಮಿಗೋಸ್ಕರ ದುಷ್ಟರ ಕೊಲ್ವದಕೆಂದು |
ರಾಮಾವತಾರನಾದ ||
ಪ್ರೇಮದಿ ದಶರಥನುದರದಿ ಜನಿಸಿದ |
ಶ್ರೀ ಮಹಾವಿಷ್ಣು ರಾಮ ಜಾನಕಿ ಲಕ್ಷ್ಮಿ ||238||

ಶಾಲೆಯ ಬಿಟ್ಟು ದೂರ ಪೋಗದಿರೆಂದು |
ಪೇಳಲಿಲ್ಲವೆ ಕುವರ ||
ಕೇಳದೆ ಹೀನಕರ್ಮವ ಮಾಡಿದಿರಿ ನಿಮ್ಮ |
ಚಾಳಿಗಿನ್ನೇನೆನ್ನಲಿ ಭೂಲೋಕದಲ್ಲಿ ||239||

ತರಳೆ ನೀಮರುಗದಿರೆ ಆದರೆ ನೋಡಿ |
ಬರುವೆ ಬಿದ್ದವರ ಮೋರೆ ||
ಅರಿಯದೆ ಬಂದ ಕತ್ಯಗಳಿವು ದೋಷಕ್ಕೆ |
ಪರಿಹಾರವುಂಟು ಮುಂದೆ ಕೇಳಿದೆ ಹಿಂದೆ ||240||

ವಚನ ||   ಇಂತೆಂದು ಮುನಿ ಚಾಲ್ವರಿಯಲು ಮಕ್ಕಳು ಭಯಭ್ರಾಂತರಾಗಿ ಕಣ್ಣುಕಣ್ಣು ಬಿಡಲು
ಜಾನಕಿ ಏನೆನ್ನುತಿರ್ದಳದೆಂತೆನೆ –

ರಾಗ ದೇಸಿ ಅಷ್ಟತಾಳ

ಏನುಮಾಡಲಿ ಮುನಿಯೆ ತಿಳಿಯದೆನ್ನ |
ಸೂನುಗಳೆಸಗಿದ ಹೀನಕರ್ಮಗಳಿಗಿನ್ನೇನುಮಾಡಲಿ || ಪಲ್ಲವಿ ||

ತಂದೆ ತಾಯಿಗಳಣ್ಣ ಬಂಧುಬಾಂಧವರನ್ನು |
ಮಂದಿರ ಬದುಕು ಬಾಳುವೆಗಳೆಲ್ಲವ ಬಿಟ್ಟು |
ಬಂದೆ ನಾ ವನದೆಡೆಗೆ ಕಳುಹಿದ ರಾಮ |
ಚಂದ್ರ ಜಾಲರ ನುಡಿಗೆ ಮುನಿಯೆ ಕಪೆ |
ಯಿಂದ ರಕ್ಷಿಸೆ ಮತ್ತೆ ಕಂದರಿವರ ಪೆತ್ತೆ ||241||

ಹಿಂದೆ ನಾಬಲು ಬಲುನೊಂದುಕೊಂಡವಳಿನ್ನು |
ಮುಂದಾದರು ಲೇಸಾಗಿರುವೆನೆಂದರೆ ಯೆನ್ನ |
ಕಂದರಿಂದಿನಿತಾಯಿತು ಓಲೆಯ ಭಾಗ್ಯ |
ಕುಂದಿ ಲಕ್ಷಣ ಹೋಯಿತು ಮಕ್ಕಳು ಪುಣ್ಯ |
ವಂದ್ಯರಾದಡೆ ಹೀಗೆ ಬಂದಿರುವದು ಹೇಗೆ ||242||

ವನದೊಳ ಗಿರಲೆನ್ನ ದನುಜನೊಯ್ಯಲು ಮುನ್ನ |
ವನಜಾಕ್ಷ ಕಳುಹಿದಾಕ್ಷಣಕೆ ಸಾಹಸದಿಂದ |
ಹನುಮ ಲಂಕೆಗೆ ಹಾರಿದ ಎನಗಶೋಕ |
ವನದಿ ಮುದ್ರೆಯ ತೋರಿದ ಭಕ್ತನನಿಂಥ |
ಗುಣವುಳ್ಳ ಕಪಿಯ ಬಂಧನವ ಮಾಡಿದರಲ್ಲೊ ||243||

ಬಲವಂತರಾಗಲು ಬೇಕೆಂದು ನೀವು ಸ |
ಕಲವಿದ್ಯೆಗಳ ಪೇಳಿದವರಿಗೆ ಧನುರ್ವಿದ್ಯ |
ಕಲಿಸಿದ್ದೆ ಕೇಡಾಯಿತು ಅದರಿಂದಲೀ |
ಕುಲವೆ ಸಂಹಾರಾಯಿತು ಇನ್ನಿದ ಹೇಳಿ |
ಫಲವೇನೆನ್ನಯ ಪುಣ್ಯಫಲವು ಹೀಗಾಯಿತು ||244||

ರಾಗ ಘಂಟಾರವ ಜಂಪೆತಾಳ

ಅಮ್ಮ ಕೇಳೀಗ ನೀನಳಲಿ ಮಾಡುವದೇನು |
ಬ್ರಹ್ಮಲಿಪಿ ತಪ್ಪುವುದೆ ಭಯದಿ ಕೆಡಗಿದರೆ ||245||

ಸಾವು ಹುಟ್ಟುಗಳೆಂಬ ಸಂಸಾರ ಮಾನವರ |
ಯಾವನಾದರು ಬಿಡದು ಅವರವರ ಕರ್ಮ ||246||

ನಿತ್ಯವಲ್ಲೀ ದೇಹ ನೀರೆ ಜಾನಕಿ ಕೇಳು |
ಅತ್ತು ಸಾವವರುಂಟೆ ಸತ್ತವರ ಕೂಡೆ ||247||

ಇಂದವರು ನಾಳೆ ನಾವೆಂದಿಗಾದರು ಕಾಲ |
ಹೊಂದುವುದು ಈ ದೇಹ ಒಂದು ದಿವಸದಲಿ ||248||

ನೀತಿಯನು ಪೇಳ್ದು ಭೂಜಾತೆಯನೊಡಂಬಡಿಸಿ |
ಆ ತಪಸಿ ಹನುಮನೊಳುಮಾತಾಡುತಿರ್ದ ||249||

ವಾರ್ಧಕ

ಪರಿಪರಿಯದುಃಖದಲಿ ಮರುಗುತಿಹ ಜಾನಕಿಯ
ವರಮುನಿಪ ಸಂತೈಸಿ ಒಡನೆದ್ದನಾಕ್ಷಣದಿ
ತರಳರಂ ಕರಕೊಂಡು ತನ್ನ ಶಿಷ್ಯರು ಸಹಿತಸಂಗ್ರಾಮಭೂಮಿಗಾಗಿ |
ಶರಧಿಬಂಧನಕೆಂದು ತರಿಸಿದಂ ಬೆಟ್ಟಗಳ
ಧರಣಿಗಾಧಾರವಿಲ್ಲೆಂದವನ ಸುತರು ಕರಿ
ತುರಗವಾನರರ ಹೆಣಪರ್ವತವನೆಸಗಿದರೊ ಎಂದು ಕಾಣಿಸಿತು ಮುನಿಗೆ ||250||

ರಾಗ ಕೇದಾರಗೌಳ ಅಷ್ಟತಾಳ

ಎತ್ತ ನೋಡಿದರು ರಾಮನ ಮಂದಿ ಕುದುರೆಗಳ್ |
ಸತ್ತ ಹೆಣಗಳ ರಾಸಿ ||
ಛತ್ರ ಚಾಮರ ವಾದ್ಯ ಕೊಂಬು ತಂಬಟೆ ಭೇರಿ |
ಸುತ್ತುಮುತ್ತೊಡವೆರಸಿ ||251||

ಹಸ್ತದೊಳಗೆ ಬಿಲ್, ಬಾಣ ಬಿದ್ದಿರುವರ |
ರಕ್ತದೋಕುಳಿಯ ಮೇಲೆ ||
ಮುತ್ತಿನೊಣಗಳು ಕವಿವರಾಮನ ಮುನಿ |
ಪೋತ್ತಮ ರಣದಿ ಕಂಡ ||252||

ಕಂದಿದಾನನದ ಕಾಂತಿಯ ಬೆಳ್, ಚಾಯದ |
ಅಂದವಾದವಯವದ ||
ಹಿಂದೆ ಮುಂದಡಬಿದ್ದ ತೊಡೆ ಕಾಲು ಕರಗಳ |
ಕುಂದಣಂಗಳ ಚಿನ್ನದ ||253||

ಚಂದ ಚಂದದ ಮಣಿಮಕುಟ ಕಂಕಣ ಹಾರ |
ದಿಂದ ರಾಜಿಸುತಿರುವ ||
ಒಂದಾಗಿ ಮಲಗಿರ್ದ ಭರತಶತ್ರುಘ್ನರ |
ಹಿಂದೆ ಲಕ್ಷ್ಮಣನ ಕಂಡ ||254||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಣದೊಳಗೆ ಸಾಲಾಗಿ ಮಲಗಿದ |
ಹೆಣಗಳನು ತಾ ನೋಡಿ ಮುನಿಪತಿ |
ಮನಸಿನಲಿ ನೆನಸಿದನು ನಾರಾ | ಯಣನ ಪದವ ||255||

ಈಕ್ಷಿಸುತ ಭೂಪಾಲಸೇನೆಗೆ |
ಪ್ರೋಕ್ಷಿಸಿದನು ಕಮಂಡಲುದಕವ |
ರಾಕ್ಷಸಾಂತಕನೆದ್ದ ಸುರಪನ  | ವಕ್ಷದಂತೆ ||256||

ನಿದ್ದೆಯಲಿ ಮಲಗಿರ್ದ ಲಕ್ಷ್ಮಣ |
ನೆದ್ದನಾಕ್ಷಣದೊಳಗೆ ಭರತನು |
ಇದ್ದ ಮಾರ್ಬಲವೆಲ್ಲ ಕುಣಿಯು | ತ್ತೆದ್ದುದಲ್ಲಿ ||257||

ತಳಿದರನಿಮಿಷರಮತಧಾರೆಯ |
ಮಳೆಯ ಮೈಮರೆದೊರಗಿದವರೆ |
ಚ್ಚರಿಕೆಯಾದುದು ಸೈನ್ಯ ರಾಘವ | ಹರುಷದಿಂದ ||258||

ರಾಗ ಪಂತುವರಾಳಿ ಮಟ್ಟೆತಾಳ

ಜಯ ಜಯಾ, ಲೋಕಪಾಲಕ ವಾಲ್ಮೀಕಿಮುನಿ  || ಪಲ್ಲವಿ ||

ಸೂರ್ಯಕೋಟಿ ಪ್ರಭಾಮಾನ ಧೈರ‌್ಯ ಬುದ್ಧಿ ಧರ್ಮಜ್ಞಾನ
ಕರ್ಮವರ್ಜಿತಾಪರೋಕ್ಷ ಧರ್ಮಸಂಗನಿರ್ಮಲಾಂಗ ||259||

ಕಂದ

ಚರಣಕೆ ಪೊಡಮಟ್ಟಂದಾ
ಕರುಣಾಂಬುಧಿ ರಾಮ ತನ್ನ ಸೈನ್ಯಸಮೇತಂ
ವರಮುನಿಪನ ಕೊಂಡಾಡುತ
ತರಳರ ಮೊಗನೋಡಿ ರಾಮ ಮತ್ತಿಂತೆಂದಂ ||260||

ರಾಗ ನಾದನಾಮಕ್ರಿಯೆ ಅಷ್ಟತಾಳ

ಕಂದರಿವರು ಯಾರು ಮುನಿಯೆ ಇವರ |
ತಂದೆತಾಯಿಗಳಾರು ಮುನಿಯೆ ||
ಮಂದಿರದೆಡೆಯೆಲ್ಲಿ ಮುನಿಯೆ ಇವರ್
ನಿಂದ ಠಾವಾವುದು ಮುನಿಯೆ ||261||

ಬಿಲ್ಲುವಿದ್ಯಗಳನ್ನು ಮುನಿಯೆ ಇವ
ರೆಲ್ಲಿ ಕಲ್ತವರಯ್ಯ ಮುನಿಯೆ ||
ಇಲ್ಲಿ ಬಂದಿಹುದೇಕೆ ಮುನಿಯೆ ನಮ್ಮ |
ನೆಲ್ಲ ಕೊಂದುದೇಕೆ ಮುನಿಯೆ ||262||

ರಾಗ ಘಂಟಾರವ ಜಂಪೆತಾಳ

ದಾನವಾಂತಕ ಕೇಳು ಧರ್ಮಶಾಸ್ತ್ರಂಗಳೊಳ |
ಗೀ ನಡತೆ ಮೊದಲುಂಟೆ ಈ ರಾಜ್ಯದೊಳಗೆ ||263||

ತಂದೆ ಮಕ್ಕಳು ಕೂಡಿ ತಮ್ಮೊಳಗೆ ಕಾದುವುದು |
ಹಿಂದೆ ಕೇಳಿದುದಿಲ್ಲ ಹೀಗೆಂಬ ವಾರ್ತೆ ||264||

ಭಾನುವಂಶಜ ಕೇಳು ಬೃಹಳ ಮಾತುಗಳೇಕೆ |
ಏನಾಗಬೇಕಿವರು ಜಾನಕಿಯ ಸುತರು ||265||

ಅರಿಯದವನೇ ನೀನು ಆಯಿತಾಯಿತು ಸಾಕು |
ಬರಿಯ ಮಾತುಗಳೆಮ್ಮ ಮರಳುಮಾಡುವುದು ||266||

ಮಕ್ಕಳಿವರಿಂತೆಂಬ ಮಾತ ಕೇಳುತ ರಾಮ |
ಆಕ್ಷಣವೆ ಕೇಳಿದನು ಲಕ್ಷ್ಮಣನ ಕರೆದು ||267||

ರಾಗ ಮಾಧ್ಯಮಾವತಿ ಅಷ್ಟತಾಳ

ಏನಯ್ಯ ತಮ್ಮ ಏನಯ್ಯ |
ಏನಯ್ಯ ತಮ್ಮ ಈ ಮುನಿಗಳ ಮಾತು |
ಜಾನಕಿ ಪಡೆದಳು ಮಕ್ಕಳನೆಂತು   || ಪಲ್ಲವಿ ||

ಜನಪರವಾದ ಬಂದಿದೆ ಸೀತೆಗೆಂದು |
ವನಕೊದಿವಳನಲ್ಲಿ ಬಿಟ್ಟು ಬಾರೆಂದು |
ನಿನಗೆ ಪೇಳಿದಮೇಲೆ ಏನಾಯಿತಲ್ಲಿ |
ವಿನತ ನಿಪೇಳಿದ ಮಾತುಗಳಲ್ಲಿ ||268||

ಕಾಡಿನೊಳಿರುವರೆ ಮನೆಯೆಲ್ಲಿ ಬಂತು |
ರೂಢಿಯೊಳಗೆ ಇಷ್ಟು ದಿನವೆಲ್ಲಿ ಸಂತು |
ನೋಡಿದರತಿಮುದ್ದು ಸೊಬಗಿನೊಳಿಂತು |
ಜೋಡುಮಕ್ಕಳ ಸೀತೆ ಪಡೆದಳಿನ್ನೆಂತು ||269||

ಅಣ್ಣ ನೀನಾಡಿದಪ್ಪಣೆ ಹೊತ್ತು ತಾನು |
ಮಿಣ್ಣನೆ ರಥವೇರಿ ಸೀತೆಯೊಬ್ಬಳನು |
ವನ್ಯದೊಳಗೆ ಬಿಟ್ಟು ಬಂದಲ್ಲದಾನು |
ಬಣ್ಣಿಸಲರಿಯೆನು ಆಮೇಲಾದುದನು ||270||

ವಚನ || ಇಂತೆಂದು ಲಕ್ಷ್ಮಣಂ ನುಡಿಯಲಾಗಿ ಸಂತೋಷದಿಂದ ಮುನಿವರಂ ಏನೆಂದನು
ಎಂದರೆ –

ರಾಗ ಫರಜು ಮಟ್ಟೆತಾಳ

ಒಂದೇ ಮನಸಲ್ಲ ರಾಘವನಿಗೆ | ಹಿಂದಣ ದಿನಿಸಲ್ಲ  || ಪಲ್ಲವಿ ||

ಕಂಡವರ ಮಾತಕೇಳಿ ಹೆಂಡತಿಯ ಬಿಡುವರೇ |
ಕಂಡು ಕಂಡು ತಿಳಿದು ತಿಳಿದು ಕಪಟ, ಮಾತಾಡುವರೇ |
ಮಂಡಲಾಧಿನಾಯಕ ನೀಭಂಡಾಟಗಳ ಮಾಳ್ಪರೇ |
ಹಿಂಡುದೊರೆಗಳಿದರ ಕೇಳಿ ಕಂಡು ಹರುಷ ಬಡುವರೇ ||271||

ಕಾಡಿನಲ್ಲಿ ಅಳುವ ಸತಿಯ ಕಂಡು ನಾ ಒಡಬಡಿಸಿದೆ |
ಬೇಡ ದುಃಖವೆಂದು ಧೈರ್ಯಪೇಳಿ ಅಭಯ ಕೊಡಿಸಿದೆ |
ಮಾಡಿ ಪರ್ಣಶಾಲೆಯನ್ನು ಮತ್ತೆ ನಾ ವಿಂಗಡಿಸಿದೆ |
ಜೋಡುಮಕ್ಕಳ್ಹೆತ್ತಮೇಲೆ ಇಷ್ಟು ದಿವಸ ನಡೆಸಿದೆ ||272||

ಕುಶಲವರೆಂದು ಪೆಸರಿಟ್ಟು ಬರಹವೆಲ್ಲ ಬರೆಸಿದೆ |
ಕುಶಲದಿಂದ ರಣದಿ ಬಾಣವೆಸೆವ ವಿದ್ಯೆಕಲಿಸಿದೆ |
ಹಸುಮಕ್ಕಳ ಇಷ್ಟುದಿವಸ ಈ ಪರಿಯಲಿ ಮೆರೆಸಿದೆ |
ಅಸುರವೈರಿ ಇನ್ನು ರಕ್ಷಿಸೆನುತ ಮುಂದೆ ನಿಲಿಸಿದೆ ||273||

ಕಂದ

[ತರಳರು ನಿನ್ನವರೆಂದೇ
ಅರಿಯುವಡೀ ಕಷ್ಟಮೊದಗಿಬಂತಾ ವಿಧಿಯಿಂ
………………………………………………………..] ||274||

ರಾಗ ಪುನ್ನಾಗವರಾಳಿ ಏಕತಾಳ

ಓದಿದರು ಮಕ್ಕಳೋದಿದರು ಮುನಿಯ |
ಪಾದಕ್ಕೆರಗಿ ಬಂದ ವೇದ ಶಾಸ್ತ್ರ ಪುರಾಣಗಳ ||   || ಪಲ್ಲವಿ ||

ತಂಬೂರಿ ವೀಣೆ ಮದ್ದಳೆ ಸಂಗೀತ ಸಾಹಿತ್ಯ ಶ್ರುತಿ |
ತುಂಬುರಗಂಧರ್ವ ಯಕ್ಷರಿಂದ ಮಿಗಿಲು ||
ಕುಂಭಿನೀಜಾತೆಯ ಮಕ್ಕಳೆಂಬ ರೀತಿ ಪಾಡುತಿರಲು |
ಸಂಭ್ರಮವ ನೋಡಿ ಹರ್ಷವಾಗುತ್ತಿದ್ದ ರಾಮಚಂದ್ರ ||275||

ಬಣ್ಣಿಸಿ ಬಣ್ಣಿಸಿ ಸ್ವರಕಿನ್ನರಿಯ ನುಡಿಸುತಿರಲು |
ಸಣ್ಣ ಸಣ್ಣ ಬೆರಳ ಸೊಬಗ ಸರ್ವರು ನೋಡಿ ||
ಪುಣ್ಯವಂತೆ ಸೀತೆಯೆನಲು ಕಣ್ಣನೀರಿಂದಪ್ಪಿ ರಾಮ |
ಚಿಣ್ಣರನ್ನು ತೆಗೆದು ಮುದ್ದುಮಾಡುತ್ತಿದ್ದಗಳಿಗೆ ಗಳಿಗೆ ||276||

ರಾಗ ಘಂಟಾರವ ಝಂಪೆತಾಳ

ವಾಲ್ಮೀಕಿ ಮುನಿ ನಿಮಗೆ ಶರಣು ಶರಣು   || ಪಲ್ಲವಿ ||

ಗುರುರಾಯ ನಿಮ್ಮಂಥ ಗುಣನಿಧಿಗಳಿನ್ನುಂಟೆ |
ಕರವ ಮುಗಿವೆನು ನಿಮಗೆ ಕರುಣಿಸಯ್ಯ ||277||

ಬಾನುಕುಲ ಸಸಿಯುರಿದು ಕ್ಷೀಣವಾಗಲು ಕಂಡು |
ತಾನೆ ನೀರೆರೆದು ಕಾಯ್ದಿರಿ ನಿರ್ಣಯ ||278||

ಸರ್ವಜ್ಞ ನೀನಿಂದು ಸಕಲಕರ್ಮಂಗಳಿಗೆ |
ನಿರ್ವಹಿಸುವಾಧಾರ ನಿನ್ನದಯ್ಯ ||279||

ಪುರಕೆ ಹೋಗುವ ನಾವು ಪುತ್ರರನು ಕರಕೊಂಡು |
ತರಳೆಜಾನಕಿಸಹಿತ ತೆರಳಿ ನೀವು ||280||

ಬಳಿಕ ಯಾಗವ ಮುಗಿಸಿ ಬರಬಹುದು ನಿಮಗಿತ್ತ |
ಪುಳಕಾಮತಾಬ್ಧಿಯಲಿ ಪುಣ್ಯನಿಧಿಯೆ ||281||

ದ್ವಿಪದಿ

ರಾಘವನ ನುಡಿಕೇಳಿ ಹಾಗಾಗಲೆನುತ |
ಬೇಗದಲಿ ವಾಲ್ಮೀಕಿಮುನಿಪ ನಸುನಗುತ ||282||

ಶಿಷ್ಯರನು ಕಳುಹಿದನು ಶೀಘ್ರದೊಳಗಂದು |
ಆಶ್ರಮದ ಸೀತೆಯನು ಕರೆತನ್ನಿರೆಂದು ||283||

ಹೋದರಾ ಕ್ಷಣ ಕಂಡು ಪೇಳೆ ಜಾನಕಿಯ |
ಪಾದದಪ್ಪಣೆಯಾಯ್ತು ವಾಲ್ಮೀಕಿ ಮುನಿಯ ||184||

ತೆರಳಬೇಕೆಂದವರು ವಾರ್ತೆಯನು ಪೇಳೆ |
ತರಳೆಜಾನಕಿ ಮನದಿ ಹರ್ಷವನು ತಾಳೆ ||185||

ಬಂದಳೊಯ್ಯನೆ ಕಣಕೆ ಬಲು ಬೇಗದಿಂದ |
ಮಂದಗಾಮಿನಿಗೆ ಕೈಮುಗಿಯೆ ಜನವಂದ ||186||

ಧರಣಿಜೆಯ ನೋಡಿದಾ ಕ್ಷಣವೆ ಶ್ರೀರಾಮ |
ಹರುಷದಿಂದಿದಿರಾಗಿ ಬಂದ ನಿಸ್ಸೀಮ ||187||

ರಾಗ ಮೋಹನ ಅಷ್ಟತಾಳ

ಪತಿಯ ನೋಡಿದಳು ಸೀತೆಯುಮೂಜಗವ ರಕ್ಷಿಸುವಂತ || ಪಲ್ಲವಿ ||

ಕ್ಷಿತಿಯ ಜನರಿಗೆ ಸದ್ಗತಿಯ ಪಾಲಿಪ ಪಶು |
ಪತಿಪ್ರಿಯ ವರರಘುಪತಿಯ ನೋಡಿದಳು    || ಅನುಪಲ್ಲವಿ ||

ಎಡಬಲದಲಿ ಮೂವರು ತಮ್ಮಂದ್ಯರು |
ತೊಡೆಯೊಳಿರ್ವರು ಮಕ್ಕಳು ||
ಕಡುಜಾಣ ಹನುಮ ಸುಷೇಣ ಜಾಂಬವಸಹ |
ನಡುವೆ ಕುಳ್ಳಿರಿಸಿ ಸಂಗಡ ವಿರಾಜಿಸುತಿಪ್ಪ ||188||

ವಾರ್ಧಕ

ರಥವೇರಿದಂ ರಾಮಚಂದ್ರ ಜಾನಕಿಸಹಿತ
ಅತಿಶಯದಿನೊಪ್ಪುತಿಹ ಅಂದಣಾವಳಿಗಳಿಂ
ಪಥಿವಿಜೆಯ ಸನಿಯದಲ್ಲಿ ಮಿಕ್ಕನಾರಿಯರೆಲ್ಲರೆಡೆಬಿಡದೆ ಮಕ್ಕಳೊಡನೆ |
ಜೊತೆಯವರು ವಾಹನಂಗಳನೇರಿ ಬರಲು ಮುನಿ
ಪತಿಯ ಪಲ್ಲಂಕಿಯೊಳು ಕುಳ್ಳಿರಿಸಿ ಬಳಿಕ ರಘು
ಪತಿಯ ಸೇನಾಸಮುದ್ರವು ಬರುತಿರಲು ಸರ್ವಜನರು ಸಂತೋಷದಿಂದ ||189||

ರಾಗ ಮೋಹನ ಏಕತಾಳ

ಪುರಕೆ, ತೆರಳಿದ ರಾಮ ಸಂತೋಷದಿ ನಿಜ |
ಪುರಕೆ ತೆರಳಿದ ರಘುರಾಮ ||  || ಪಲ್ಲವಿ ||

ಪರಿಪರಿಯ ಪಾಠಕರು ವಿಧವಿಧದಲಿ ಪೊಗಳುತ್ತ |
ಭರದಿ ಶಂಖ ಭೇರಿ ವಾಧ್ಯ ಕೊಂಬು ತಂಬಟೆ ಮೊರೆಯುತ್ತ |
ನೆರೆದ ಕೇರಿ ಕೇರಿ ಜನರು ಇರದೆ ಮಕ್ಕಳ ನೋಡುತ್ತ |
ಪರಮಪುಣ್ಯ ವಂತರೆಂದು ಕೈಗಳೆತ್ತಿ ನಲಿಯುತ್ತ ||190||

ವಾರ್ಧಕ

ಭೂಮಿಪತಿ ಕೇಳ್ಬಳಿಕ ಉಳಿದ ಯಜ್ಞವ ಮುಗಿಸಿ
ರಾಮಚಂದ್ರಂ ತನ್ನ ಸತಿಸುತರುಸಹಿತ ಸು
ಪ್ರೇಮದಿಂ ರಾಜ್ಯಮಂ ಪಾಲಿಸುತ ಬಹುಕಾಲ ಸುಖದಿಂದಲಿರ್ದರೆನುತ |
ನೇಮದಿಂ ಜನಮೇಜಯಕ್ಷಿತಿಪ ಕೇಳೆಂದು
ಆ ಮುನಿವರಂ ಪೇಳ್ದ ಕುಶಲವರ ಕಾಳಗವ
ನಾ ಮನಕೆ ಬಂದವೋಲೊರೆದೆ ಶ್ರೀ ಕಣ್ವಪುರಕೃಷ್ಣನ ಕಟಾಕ್ಷದಿಂದ ||191||

ಕುಶಲವರ ಕಾಳಗ ಸಂಪೂರ್ಣ