ರಾಗ ಬಿಲಹರಿ ಅಷ್ಟತಾಳ
ಧರಣಿಪಾಲಕ ಧರ್ಮಸೂನು | ನಿನ್ನ | ವರಭಾಗ್ಯ ಪೇಳಲಿನ್ನೇನು ||
ಹರುಷವಾಂತೆನು ನೋಡಿ | ನಿರತ ಸನ್ಮತಿಗೂಡಿ |
ಧರೆಯನಾಳುವ ಮಿಕ್ಕವರು ನಿ | ನ್ನೊರೆಗೆ ಬಾರರು ಧರ್ಮವೀರರು || ಧರಣಿ || ||೬೨||
ಜಂಭಾರಿಯಾಸ್ಥಾನದಿಂದ | ಮಿಕ್ಕಿ | ಕಾಂಬ ನಿನ್ನೋಲಗದಂದ ||
ಕುಂಭಿನಿ ನೃಪನಿಕು | ರುಂಬದೊಳಿಲ್ಲ ಕು |
ಲಾಂಬುನಿಧಿ ಪೂರ್ಣೇಂದು ನಿನ್ನ ಮು | ಖಾಂಬುಜದ ಸೊಬಗೇಕೆ ಕಂದಿತು || ಧರಣಿ || ||೬೩||
ಸೋದರರೊಳಗಾಯ್ತೆ ಭೇದ | ಬೇರೆ | ಮೇದಿನಿಪರೊಳುಂಟೆ ವಾದ ||
ಸಾಧಿಪಹಗೆಯ ವಿ | ರೋಧಿಗಳಿಹರೆ ವಿ |
ನೋದಗೋಷ್ಠಿಗೆ ಸಲದ ಮನಸಿನ | ವೇದನೆಯನುಸುರೆಂದಡೆಂದನು || ಧರ ||೬೪||
ರಾಗ ನೀಲಾಂಬರಿ, ತ್ರಿವುಡೆತಾಳ
ಲಾಲಿಸು ಕಮಲನೇತ್ರ | ನೀರದ ಗಾತ್ರ | ಲಾಲೀಸು ಕಮಲನೇತ್ರ || ಪಲ್ಲವಿ ||
ಕಾಲಕಂಧರಕಂಜಸುತಸುರ | ಪಾಲ ಮುಖ್ಯಾಮರವಿನುತ ಕರು |
ಣಾಲವಾಲಸುಶೀಲ ಲಕ್ಷ್ಮೀ | ಲೋಲತ್ರಿಭುವನ ಪಾಲಪಾವನ || ಲಾಲಿಸು ||೬೫||
ಅರಿಗಳನ್ನೆಲ್ಲ ತೀರ್ಚಿ | ನಮ್ಮನು ನೆಲದೈ | ಸಿರಿಯ ಸಂಪದಕೆ ಸಾರ್ಚಿ ||
ಪೊರೆವ ನಿತ್ಯಾನಂದ ನಿನ್ನಯ | ಕರುಣದಿಂ ನಿಶ್ಚಿಂತನಾದರು |
ಭರತಕುಲ ಸಂಹರಣ ಪಾಪಕೆ | ಮರುಗಿ ಮನವಿದು ಮರುಕಗೊಂಡುದು || ಲಾಲಿಸು ||೬೬||
ಭಾಮಿನಿ
ಎಂದ ನುಡಿಯನು ಕೇಳಿ ನಸುನಗೆ |
ಯಿಂದ ಶ್ರೀಹರಿ ನುಡಿದನೇನಿದು ||
ಮಂದಮತಿಗಳು ಕೌರವಾದಿಗಳಳಿಯೆ ಕಾಳಗದಿ ||
ಬಂದುದೇ ಕುಲಹತ್ಯ ನಿನಗಿದ |
ನೆಂದರಾರು ವೃಥಾ ಮರುಳ್ತನ |
ದಿಂದ ಮುನಿ ನುಡಿಯುರುಳು ಕಣ್ಣೊಳು ಸಿಲುಕಿದೈ ನೃಪತೀ ||೬೭||
ರಾಗ ಘಂಟಾರವ ಏಕತಾಳ
ಅರಸುಕುವರರಾಗಿ ಹುಟ್ಟಿ | ಧುರಕೆ ಯುದ್ಧಾಂಗಣವ ಮೆಟ್ಟಿ |
ನಿಂದರೇ | ಕಾದಿ | ಕೊಂದರೇ ||೬೮||
ಪಾಪಕೆ ಪಕ್ಕಾದೆನೆಂದಾ | ರೋಪಿಸುವ ಸಿದ್ಧಾಂತ ಚೆಂದ |
ವಪ್ಪುದೇ | ನೋಡು | ತಪ್ಪದೇ ||೬೯||
ಅಜ್ಞನೇ ನೀ ತುರಗಾಧ್ವರ ಸ | ದ್ಯಜ್ಞವ ಕೈಕೊಂಡು ಮುಗಿಸ |
ಲಾರ್ಪೆಯಾ | ಶೌರ್ಯ | ತೋರ್ಪೆಯಾ ||೭೦||
ದರ್ಪಯುತರ ಗೆಲಿದು ಕರವ | ತರ್ಪೊಡರಿದು ನಿಮ್ಮಂತರವ |
ಮಿಗುವರು | ನೋಡಿ | ನಗುವರು ||೭೧||
ಮಾಡಲರಿದು ಮಖವ ಚಿಂತೆ | ಬೇಡ ಬರಿದೆ ಬಯಲ ಭ್ರಾಂತೆ |
ದಕ್ಕದೂ | ಕುದುರೆ | ಸಿಕ್ಕದೂ ||೭೨||
ಕಂದ
ಸಾಹಸಿಗ ಯವ್ವನಾಶ್ವನ |
ನಾಹವದೊಳ್ಜೈಸಿ ಯಜ್ಞ ಹಯವಂತರುವೀ ||
ಬಾಹುಬಲನೀತನಿವನಂ |
ಹೋಹೋ ನಾವರಿತುದಿಲ್ಲವೇಯೆನೆ ಭೀಮಂ ||೭೩||
ರಾಗ ಶಂಕರಾಭರಣ ಮಟ್ಟೆತಾಳ
ವನಜನಾಭ ಕೇಳು ಧರ್ಮ | ತನಯನಿಷ್ಟಸಿದ್ಧಿಗಾಗಿ |
ಮುನಿವರೇಣ್ಯ ವ್ಯಾಸರೆಂದು | ದನುನಿದಾನಿಸೀ ||
ಮನದಿ ನಿಶ್ಚಯಿಸಿದೆವಿನ್ನು | ಬಿನುಗರಂತೆ ಬಿಡೆವು ಕಾರ್ಯ |
ಘನತೆಗಂಜಿ ಪೂಣ್ದು ತಪ್ಪು | ವೆನೆ ಪ್ರತಿಜ್ಞೆಗೇ ||೭೪||
ಅಂದು ತಂದೆ ನೆರೆದ ಖಚರ | ವೃಂದವನ್ನು ಸದೆದು ಸೌ |
ಗಂಧಿಕವನು ರಾಜಸೂಯ | ಕೆಂದು ಧಾವಿಸೀ ||
ತಂದೆ ಪುರುಷ ಮೃಗವನೇ | ನೆಂದು ಬಗೆದೆ ತರುವೆನೆಂದೊ |
ಡೊಂದು ಕುದುರೆಗಿನಿತನೆನ್ನ | ಮುಂದೆ ನುಡಿವುದೇ ||೭೫||
ಬಲ್ಲೆ ಪುರುಷ ಮೃಗವ ತಂದ | ಮಲ್ಲತನವದೀಗ ಬೇಡ |
ಗೆಲ್ಲಲರಿದು ಭದ್ರಪುರದ | ವಲ್ಲಭಾದ್ಯರ ||
ಇಲ್ಲಿ ಸುಖದೊಳುಂಡು ಬಾಯ | ಬಲ್ಲವಿಕೆಯೊಳಾಣೆಯಿತ್ತೋ |
ಡಲ್ಲಿ ಕೇಳ್ವರುಂಟೆ ನಿನ್ನ | ಸೊಲ್ಲ ಸಡಗರಾ ||೭೬||
ರಾಗ ಕಾಂಭೋಜಿ ಝಂಪೆತಾಳ
ನುಡಿದ ಭಾಷೆಗೆ ತಪ್ಪಿ ನಡೆದವನೆ ನೋಡುತಲೆ |
ಹೊಡೆದಿಕ್ಕಿ ಕೆಡಹಿ ನೂರ್ವರನು ||
ಮುಡಿಸಿದೆನು ದ್ರೌಪದಿಯ ಮುಡಿಗೆ ಕರುಳನು ಕಡೆಗೆ
ತೊಡೆಯುಡಿದೆನಾ ಸುಯೋಧನನ ||೭೭||
ಅಳಿಬಲರನಿಲ್ಲಿ ಜೈಸಿದೊಡೆ ಭದ್ರಾವತಿಯ |
ನೊಳಪೊಗುವ ಸತ್ವಯುತನಹೆಯಾ ||
ಅಳಿಮಲ್ಲಿಗೆಯ ಪೊದರ ತುಳಿದು ಬಂಡುಂಡೊಡದು |
ಸುಳಿವುದೇ ಚಂಪಕಾವನವ ||೭೮||
ಅಳಿಬಲರೆ ಕಿಮ್ಮೀರ ಕೀಚಕ ಹಿಡಿಂಬಾದಿ |
ಖಳರವರ ಜೀವವನು ಹಿಂಡಿ ||
ಹಿಳಿದರಣಭೀಮನೀ ಭೀಮಭಾಷೆಯ ಹಿಂದು |
ಗೆಳೆದುಳಿವನೇ ಮಾನ ನೀಗಿ ||೭೯||
ಮಾನನಿಧಿಯಹುದು ನೆತ್ತರ್ಗುಡಿದೆ ನೆರೆದಖಿಳ |
ಸೇನೆಗಳ ನಡುವೆ ಕುಳ್ಳಿರ್ದು ||
ದಾನವಿಯ ಕೈವಿಡಿದೆ ಬಾಣಸಿಗ ನಿನ್ನಯ ಕು |
ಲೀನತೆಯನೆಲ್ಲ ನೀ ತೊರೆದು ||೮೦||
ಕೊಂದು ನರಕನನಲ್ಲಿ ರಕ್ಕಸಿಯರನು ಮದುವೆ |
ನಿಂದೆ ಮೊಲೆಗೊಟ್ಟ ಪೂತನಿಯ |
ಕೊಂದೆಮೊಲೆಹಾಲಿನೊಂದಿಗೆ ಪ್ರಾಣವನು ಹೀರಿ |
ನಿಂದಿಸಲ್ಕಾರು ನೀನೆನ್ನಾ ||೮೧||
ಆರೆಂಬೆ ಬಕನ ಬಲಿಗೂಳ ಮುಕ್ಕಿದ ಸತ್ವ |
ಸಾರಭಗದತ್ತನೊಳು ಪೊಣರಿ ||
ವಾರಣದಿ ಸಿಲುಕಿರಲು ತೋರಿ ನರನಿಂ ಬಿಡಿಸಿ |
ಪಾರುಗಾಣಿಸಿದಾತನರಿಯ ||೮೨||
ವಾರ್ಧಕ
ಬಲಿಗೊಳಿಸಿ ಗೋಪರಿಂಗೋವರ್ಧನಾಚಲಕೆ |
ತಲೆಮರೆಸಿ ನೀನುಂಡನಿತನುಂಡೆನೇ ಕೃಷ್ಣ |
ನೆಲೆಯಿಲ್ಲದಲೆದೆಯಾಂ ಕಲಿಜರಾಸಂಧನಂ ಕೊಲುವ ಮೊದಲೀಗ ಜಗಕೇ ||
ಸಲೆದೈವವಾದೆ ಹೋಗಲಿ ನುಡಿದು ಫಲವೇನು |
ನಿಲುವನಂ ನೋಳ್ಪೆನೆನ್ನಿದಿರೆಂದು ನಿಜಗದೆಯ |
ನಲುಗಿ ಘುಡುಘುಡಿಸಿ ನಿಲುವನಿತರಲಿ ಧರ್ಮಜಂ ಮಾರುತಿಯ ತಡೆದೆಂದನು ||೮೩||
ರಾಗ ಪುನ್ನಾಗ ಏಕತಾಳ
ತಾಳುತಾಳೈಯೆನ್ನ ತಮ್ಮನೇ | ಕೋಪ | ತಾಳುವದುಚಿತವೆ ಸುಮ್ಮನೇ ||
ಭಕ್ತ | ರಾಳಾಗಿ ಸಲುವ ಕೃಪಾಳುವಿನಿದಿರಲಿ || ತಾಳು ||೮೪||
ಯುಕ್ತವಾಗದು ಕೋಪ ಬಂದರೆ | ಯಜ್ಞ | ಭೋಕ್ತಾರನೇ ಬೇಡವೆಂದರೆ ||
ನಮ್ಮ | ಶಕ್ತಿಸದ್ಯುಕ್ತಿಶಾ | ಸ್ತ್ರೋಕ್ತಿಯಿಂದಪ್ಪುದೇನು || ತಾಳು ||೮೫||
ನೀನೆ ತಿಳಿದು ನೋಡು ನಿನ್ನಲಿ | ನಂದ | ಸೂನುವೆ ನಡಸಬೇಕೆನ್ನಲಿ ||
ಮುಂದೆ | ತಾನೆತಾನಾಗಿ ಸು | ಮ್ಮಾನದಿ ನಡೆವುದು || ತಾಳು ||೮೬||
ಕಂದ
ಬಡಬಡಿಸಿ ಭೀಮನಂ ಮುಂ |
ಗಡೆಯೊಳ್ ಮುಳಿಸಾಂತನಂತೆ ತೋರುವ ಹರಿಯಂ ||
ಪೊಡಮಟ್ಟು ನುತಿಸಿ ಪುನರಪಿ |
ನುಡಿದಂ ಮೆಲುಮಾತಿನಿಂದ ಯಮಸುತನಾಗಳ್ ||೮೭||
ರಾಗ ಧನ್ಯಾಸಿ ಏಕತಾಳ
ಸ್ವಾಮೀ | ಜಯ | ತಾಮರಸಾಕ್ಷನಮಾಮಿ | ಸದ್ಭಕ್ತ ಪ್ರೇಮಿ || ಪಲ್ಲವಿ ||
ಕಾಮಜನಕ ಕಂಜೋದರ ನಿತ್ಯನಿ | ರಾಮಯ ನಿಜನಿಗಮಾಗಮವಂದಿತ | ಸ್ವಾಮಿ || ಅ.ಪ ||
ಮಾಡಲೂ | ಮುನಿ | ಯಾಡಿದ ಪರಿ ಮನ | ಮಾಡಿಬಿಟ್ಟರಿಂದು |
ಜಗದೊಳ | ಗಾಡದಿಹರೆ ತಿಳಿ | ಗೇಡಿತನಕೆ ರಣ | ಹೇಡಿಗರಿವರೆಂದು ||
ಆಡಲೂ | ಆನೇತರವನು ಕಾ | ಪಾಡಲೂ | ನೀನಲ್ಲದೆ ಮತ್ತೀ |
ರೂಢಿಯೊಳಿಹರೇ | ನೋಡಲು ನಮ್ಮೊಡ |
ಗೂಡಿ ನೋಡಿ ದಯ | ಮಾಡುವ ಮಹಿಮರು || ಸ್ವಾಮೀ ||೮೮||
ಆದರೇ | ವಾ | ಗ್ವಾದವ ಮರೆದಪು | ದಾದಿಮೂರ್ತಿ ದಯದಿ |
ಭೀಮನೊ | ಳಾದ ಖತಿಯ ಕಳೆ | ದಾಧರಿಸೈ ಕರು | ಣೋದಧಿಯನುನಯದಿ |
ಈ ಧರೆ | ನುಂಗಲು ಬೀಜವ | ಮೇದರೆ | ಮೆಳೆ ಹೊಲವನು ಕಾಯುವ |
ಹಾದಿಯಿಹುದೆ ನಿ | ನ್ನಾಧಾರಕೆ ಕುಂ |
ದಾದರೆ ಪಾಂಡವ | ಸೋದರರುಳಿವರೆ || ಸ್ವಾಮೀ ||೮೯||
ವಾರ್ಧಕ
ಇಂತೆನಲು ನಸುನಗುತ ಖಳವೈರಿ ನುಡಿದ ಕೇಳ್ |
ಚಿಂತೆಯಂ ಬಿಡು ಭೂಪ ನಿನ್ನಮನದೆಣಿಕೆಯಿ |
ದ್ದಂತೆ ನಡೆಸುವೆವಾವು ತುರಗಾಧ್ವರವ ಮಾಡು ಭೀಮನಿವನೇನೆಂದಡಂ ||
ಅಂತರವನರಿಯೆವೇ ಸಾಕೆಂದು ಸಂತೈಸಿ |
ಕುಂತೀ ಕುಮಾರರೆಲ್ಲರ ಬೇರೆ ಬೇರೆ ಮನ |
ವಾಂತು ಮನ್ನಿಸಿ ಸುಖದೊಳಿರುಳಗಳೆದುದಯದೊಳು ಯಮಜನಂ ಕರೆದೆಂದನು ||೯೦||
ಕಂದ
ಕಳುಹಿಸು ಹಯಮಂ ತರ್ಪರ |
ಗಳಿಗೆಯಿದೇಲೇಸು ಪಯಣಕಿನ್ನಾಂ ಪೋಪೆಂ ||
ಬಳಿಯಟ್ಟು ಬರ್ಪೆ ಕಜ್ಜಂ |
ಗೊಳೆಯವಸರಕೆಂದು ನುಡಿದು ಮುರರಿಪು ನಡೆದಂ ||೯೧||
ರಾಗ ಘಂಟಾರವ ಅಷ್ಟತಾಳ
ಅತ್ತ ದ್ವಾರಕೆಗೈದಲು ಗೋಪಾಲ |
ನಿತ್ತ ಕರ್ಣಜ ಮೇಘನಾದ ಮ | ರುತ್ತನಯರೀ ಮೂವರು ||೯೨||
ಬಂದನುಜ್ಞೆಯ ಹೊಂದಿ ಭೂಪಾಲನ |
ವಂದಿಸುತ ಬೀಳ್ಕೊಂಡು ಸಂತಸ | ದಿಂದ ತಾವ್ನಡೆ ತಂದರು ||೯೩||
ದಾರಿಯುದ್ದಕೆ ಶುಭಶಕುನವ ನೋಡಿ |
ಮೀರಿ ಮನದಲಿ ಹಿಗ್ಗಿ ಕಂಡರು | ದೂರದಿಂ ಗಿರಿಯೊಂದನು ||೯೪||
ಭಾಮಿನಿ
ಹತ್ತಿದರು ಶಿಖರವನು ತದ್ಗಿರಿ |
ಯೊತ್ತಿನಲಿ ರಾಜಿಸುವ ಭೂಪ ಕು |
ಲೋತ್ತಮನ ಭದ್ರಾವತೀಪುರವದರ ಚೆಲುವಿಕೆಗೆ ||
ಚಿತ್ತದಲಿ ಬೆರಗಾಂತು ತನ್ನಯ |
ಹತ್ತಿರದಿ ಕುಳ್ಳಿರಿಸಿತಲೆದೂ |
ಗುತ್ತ ಮಾರುತ ಜಾತ ಕರ್ಣಾತ್ಮಜನೊಳಿಂತೆಂದ ||೯೫||
ರಾಗ ಕಾಂಭೋಜಿ ಝಂಪೆತಾಳ
ಭಾನು ಸುತಸುತನೆ ನೋ | ಡೀ ನಗರರಚನಾ ವಿ | ಧಾನವನು ಪುರದಸಂಪದವ |
ಆನುಸುರಲರಿಯೆನಿ | ದ್ದಂತೆ ಬಣ್ಣಿಸಲು ಚತು | ರಾನನಂಗಾದರಸದಳವೂ ||೯೬||
ಮನಸಿಜೋದ್ಭವಕಾರಿ | ವನಮಾಲಿಕಾ ಶೋಭಿ | ಯನವರತ ಶ್ರೀಕರಗ್ರಾಹೀ ||
ಎನಗೆ ಕುಂದೇನಿನ್ನು | ವನಜಾಕ್ಷನಂತಿರ್ಪೆ | ನೆನುವಂತೆ ತೋರ್ಪುದೀನಗರೀ ||೯೭||
ತೆಂಗು ಹಲಸಿಮ್ಮಾವು ಕೌಂಗು ಹೊಂಬಾಳೆ ಚೆಂ | ದೆಂಗುಗಳ ತೋಟವಲ್ಲಲ್ಲೀ ||
ಕಂಗೊಳಿಸುತಿದೆ ಕೈ ಹೊ | ಲಂ ಪುರಾಂಗನೆ ಪಚ್ಚೆ | ರಂಗು ಸೀರೆಯನುಟ್ಟತೆರದೀ ||೯೮||
ಮುಗಿಲಮುಟ್ಟುವಕೋಟೆ | ಯಗಳಗಡಿ ಪಾತಾಳ | ಹಗೆತನದಿ ಹೊಗುವದೆಂತಿದರ ||
ಮಗನೆ ನೀನೋಡೊಂದು | ಯುಗ ಯುದ್ಧವೆಸಗಿದರು | ಸಿಗುವದೆಂತೈ ಕೈಗೆ ತುರಗಾ ||೯೯||
ಕಂದ
ಹರಿಯಾಡಿದ ನುಡಿಯಂದಂ |
ಸರಿಯಾದುದೆ ಪೋಗಲರಿದೆ ಪುಗಲೆಡೆಗುಡದೇ |
ಪುರವಿದು ನಮಗೆನೆ ಕೇಳ್ದಾ |
ಧುರವಿಕ್ರಮ ಮೇಘನಾದನವನೊಡನೆಂದಂ ||೧೦೦||
ರಾಗ ಮಾರವಿ ಏಕತಾಳ
ಮುತ್ತಯ್ಯನೆ ಕೇಳೀ ಪುರದಗಳನು | ಹತ್ತಿಳಿಯಲದೇಕೆ ||
ಪತ್ತನವನು ಪುಗಲೇಕೀಯೋಚನೆ | ಚಿತ್ತಕೆ ತರಲೇಕೆ ||೧೦೧||
ಪಿಡಿದಾ ತುರಗವ ತಂದಿಲ್ಲಿಗೆ ನಿ | ನ್ನಡಿಗಳಿಗೊಪ್ಪಿಸುವೇ |
ತಡೆವವರನು ತಲೆಬಡಿದೆನ್ನಯ ಕೈ | ಬೆಡಗನು ತೋರಿಸುವೆ ||೧೦೨||
ಬಂಧಿಸಿ ತುರಗವ ನಿಂದಿರೆ ನಾವ್ ನಡೆ | ತಂದಪರರಿಭಟರು
ಮುಂದೆ ರಣಾಂಗಣವೀಯೆಡೆಗಾಗಲಿ | ಹೊಂದಲಿ ಸಮಸಮರ ||೧೦೩||
ನೋಡಲಿ ನಿನ್ನ ಗದಾಘಾತದ ಸವಿ | ನೋಡಲಿ ಕರ್ಣಜನ |
ಪಾಡಿನ ಪೊಸಮಸೆಯಲಗಿನ ಸವಿ ಹರಿ | ದೋಡಲಿ ರುಧಿರಜಲಾ ||೧೦೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಆಗ ರವಿಜಜ ನುಡಿದ ಪಿತಕೇಳ್ | ಮೇಘನಾದನ ಕಾರ್ಯಕುಶಲೋ |
ದ್ಯೋಗವೇಲೇಸಲ್ಲದಿನ್ನೊಂ | ದಾಗಲರಿದು ||೧೦೫||
ಆದರವಸರ ಸಲದು ಕಾಲವ | ಸಾಧಿಸದೆ ಕಣ್ಣಾರೆ ಕಾಣದೆ |
ಹೋದರಾ ಕುದುರೆಯನು ತರುವೊಡೆ | ಹಾದಿಯಿರದು ||೧೦೬||
ತಂದಪರು ನೀರ್ಗಾಗ ಹಿಡಿದೆಳ | ತಂದು ಕಟ್ಟಿದಡಿಲ್ಲಿಮತ್ತೈ |
ತಂದು ಬಿಡಿಸುವ ವೀರರುಂಟೆ ವ | ಸುಂಧರೆಯಲಿ ||೧೦೭||
ಭಾಮಿನಿ
ಹೊಗಳಿದನು ಮಕ್ಕಳನು ಮಾರುತಿ |
ಮಿಗುವ ಕಾರ್ಯಾಲೋಚನೆಗೆ ಬಗೆ |
ಬಗೆಯ ಮಾತಿಂದನಿತರಲಿ ಮಧ್ಯಾಹ್ನವಾಗಿರಲು ||
ಪೊಗುವನೀರ್ಗೊಳದಿಂದ ಪೊರಮಡು |
ವಗಣಿತಶ್ವಾವಳಿಯೊಳಾ ಪೊಸ |
ಬಗೆಯ ಚೆಲುವಿನ ಹಯವ ಕಾಣದೆ ಮನದಿ ಮರುಗಿದನು ||೧೦೮||
ರಾಗ ನೀಲಾಂಬರಿ ರೂಪಕತಾಳ
ಆರೊಡನುಸುರುವೆ ಕರ್ಣಕು | ಮಾರನೆ ನಮಗಿಂದೊದಗಿದ |
ದಾರುಣ ಸಂಕಷ್ಟಕೆ ಪರಿ | ಹಾರವದಿನ್ನಿಹುದೇ ||
ಚಾರುಸುಲಕ್ಷಣವಾರುಹ | ತೋರದು ತನಗಾಗಡಣದಿ |
ತೋರದು ಬುದ್ಧಿಗೆ ಮುಂದಿನ | ದಾರಿಯು ಮುರಹರನೇ ||೧೦೯||
ಮುನಿವರ ಪುಸಿದನೆ ಪುಸಿದೊಡೆ | ವನರುಹಲೋಚನೆ ಸೈರಿಸು |
ವನೆ ಸೈರಿಸೆ ಹತಭಾಗ್ಯನೆ | ಜನಪತಿಯಮಜಾತಾ ||
ಜನಪತಿ ಹತಭಾಗ್ಯರೊಳೆಂ | ದೆನುವೆನೆ ಶುಭಶಕುನದೊಳಿ |
ನ್ನೆನಗೊದಗುವ ಫಲನಿಷ್ಫಲ | ವೆನಲಿನ್ನಾರ್ಗೆನಲಿ ||೧೧೦||
ಭದ್ರಾವತಿಯಿಂತುರಗಲ | ಸದ್ರತ್ನವ ತಹೆನೆಂದಾ |
ನುದ್ರೇಕದೊಳಾಡಿದೆ ಬಲ | ಭದ್ರಾನುಜನೊಡನೆ ||
ಮದ್ರಚಿತಾeಭಂಗ ಗು | ರುದ್ರೋಹಗಳೊಂದಿಗೆ ಧ |
ರ್ಮದ್ರೋಹವೆ ಹಾ ಸಲಹೊ ಜ | ಗದ್ರಕ್ಷಣ ನಿಪುಣ ||೧೧೧||
ಭಾಮಿನಿ
ಸಲ್ಲಲಿತಲಕ್ಷಣದ ಹಯಮಿ |
ಲ್ಲಿಲ್ಲದಿರ್ದೊಡೆ ವಿಧಿವಶದಿ ಭೂ |
ವಲ್ಲಭನಕಂಡಪೆನದೆಂತೋ ಮೂರುಲೋಕದಲೀ ||
ಎಲ್ಲಿರಲಿ ತಂದಪ್ಪನುಳಿದಡೆ ||
ಸಲ್ಲದೆನ್ನಯ ಭಾಷೆಯೆನೆಪದ |
ಪಲ್ಲವಕೆ ಹೈಡಿಂಬಿಸುತತಲೆವಾಗುತಿಂತೆಂದ ||೧೧೨||
ರಾಗ ಸೌರಾಷ್ಟ್ರ ಅಷ್ಟತಾಳ
ಚಿಂತೆಯ ಬಿಡುಕಾರ್ಯ ಸಫಲವಪ್ಪಂತಿದೆ | ಅಜ್ಜ ಕೇಳು || ಬಪ್ಪ |
ಪಾಂಥರನೆರವಿಯಿಂದುಲುಹು ಕೇಳಿಸುತಿದೆ | ಅಜ್ಜ ಕೇಳು ||೧೧೩||
ಎಡಬಲದಲಿ ವಾಘೆವಿಡಿದು ತಂದಪರಿತ್ತ || ಅಜ್ಜ ಕೇಳು | ಚಿನ್ನ |
ದೊಡವೆಯಿಂ ಶೃಂಗಾರಮಾಗಿರ್ಪುದಾ ಹಯ | ಅಜ್ಜ ಕೇಳು ||೧೧೪||
ಆಯುಧ ಪಾಣಿಗಳಧಿಕ ಸಂಭ್ರಮದಿಂ | ಅಜ್ಜ ಕೇಳು | ಸುತ್ತು |
ಕಾಯುವರದೊ ನೋಡು ಮುನಿಪೇಳ್ದ ಗುರುತಿದೆ | ಅಜ್ಜ ಕೇಳು ||೧೧೫||
ತಪ್ಪದಾ ಕುದುರೆಯೆ ಕಪ್ಪೈಸೆಕಿವಿಯೊಂದು || ಅಜ್ಜ ಕೇಳು | ಎನ |
ಗಪ್ಪಣೆಕೊಡು ಹಿಡಿತಪ್ಪೆನೀಕ್ಷಣದಲ್ಲಿ || ಅಜ್ಜ ಕೇಳು ||೧೧೬||
ರಾಗ ಶಂಕರಾಭರಣ ಮಟ್ಟೆತಾಳ
ನುಡಿದನುಜ್ಞೆಯಾಂತು ಭೀಮ | ನಡಿಗೆ ಮಣಿದು ಮೇಘನಾದ |
ನಡೆದನಶ್ವರಕ್ಷಕರನು | ತಡೆದು ಗರ್ಜಿಸಿ ||
ಒಡನೆ ಮುಗಿಲುಗಾಳಿ ಮಿಂಚು | ಸಿಡಿಲು ಕಲ್ಮಳೆಗಳ ಸಿಟ್ಟಿ |
ವಡೆದು ಮಾಯಕದಲಿ ಭಟರ | ಬಡಿದ ಭಂಗಿಸಿ ||೧೧೭||
ಎತ್ತ ನೋಡಲತ್ತ ಕರದಿ | ಕತ್ತಿ ಕುಂತಶೂಲವಿಡಿದು |
ಮುತ್ತಿಕೆತ್ತಿಕುತ್ತಿ ಕಡಿವ | ದೈತ್ಯರಿದಿರಲಿ ||
ಅತ್ತಲಿತ್ತ ಜುಣುಗಿ ಜಾರಿ | ಸತ್ವವಳಿದು ಗಾಯವಡೆದು |
ಸತ್ತರೋಡಿದರು ಕೆಲಂಬ | ರೆತ್ತಲೆನ್ನದೆ ||೧೧೮||
ಅಂಧಕಾರ ಕವಿಸಿಬಲವ | ನಂದಗೆಡಿಸಿ ವಾಮಕಕ್ಷ |
ದಿಂದ ಹಯವನೌಂಕಿಹಿಡಿದು | ನಿಂದನಭ್ರದಿ ||
ಮಂದಮತಿಯೆ ಕೇಳು ಕಳ್ಳ | ರಂದವಿದು ಪರಾಕ್ರಮಕ್ಕೆ |
ಕುಂದು ವೀರನಹಡೆನಿ | ಲ್ಲೆಂದು ಜರೆದರು ||೧೧೯||
Leave A Comment