ಭಾಮಿನಿ
ಭಂಡರಿರ ಬಗುಳದಿರಿ ಜೀವವ |
ಕೊಂಡು ನಡೆವ ಕೃತಾಂತ ದೂತರ |
ಕಂಡು ಪೆಣನಡ್ಡೈಸುವಂತಾಯ್ತೈಸಲೇ ನಿಮ್ಮ ||
ಗಂಡು ತನವಿಂದೆನುತ ತುರಗವ ||
ಕೊಂಡು ನಡೆದ ಪ್ರಚಂಡ ವಿಕ್ರಮ |
ದಿಂಡುಗೆಡೆದೈತಂದು ನೃಪತಿಯೊಳೆಂದರೀ ಹದನ       ||೧೨೦||

ರಾಗ ಸೌರಾಷ್ಟ್ರ ಏಕತಾಳ
ಲಾಲಿಸಬೇಕು ಯವ್ವನಾಶ್ವ | ಭದ್ರಾವತೀಶ | ಲಾಲಿಸಬೇಕು |
ಲಾಲಿಸು ಪರಭೂ | ಪಾಲರ ಮಾಯಾ | ಜಾಲವರಿಪುಶುಂ | ಡಾಲ ಮೃಗೇಶ || ಪಲ್ಲವಿ ||

ಸತ್ರವಾಜಿಯ ನೀರಿಗೆಂದು | ಕೊಂಡೊಯ್ಯಲಿಂದು |
ಧೂರ್ತ ದಾನವನೋರ್ವ ಬಂದು | ಯುದ್ಧಕ್ಕೆ ನಿಂದು ||
ಕತ್ತಲೆವೀಸಿ ಸ | ಮಸ್ತ ಬಲವತರಿ | ದೊತ್ತಿದದೋರ್ಬಲ | ಸತ್ವಸಮರ್ಥ    ||೧೨೧||

ಸಂಗರ ಶೂರರತ್ಯಾತುರದಿ | ಕಾದಾಡಿಧುರದಿ ||
ಭಂಗವಟ್ಟರು ಖಳನ ಶರದಿ | ನಡೆತಂದುಭರದಿ |
ಬಾಂಗೇರಿದನು ತು | ರಂಗವ ಪಿಡಿದೇ | ಕಾಂಗ ವೀರನು | ತ್ತುಂಗ ಬಲಾಢ್ಯ           ||೧೨೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಚಾರರೆಂದುದ ಕೇಳಿ ಕಡು ಖತಿ | ಯೇರಿ ನುಡಿದನಿದೇನು ನಮ್ಮಯ |
ಚಾರುತುರಗವನೊಯ್ದರೇ ರಿಪು | ಚೋರರಿಂದು          ||೧೨೩||

ಎಲ್ಲಿ ತನಯ ಸುವೇಗ ಜೋಧರ | ದೆಲ್ಲಿ ರಾವ್ತರದೆಲ್ಲಿ ರಥಿಕರ |
ನೆಲ್ಲರನು ಬರಹೇಳು ಯುದ್ಧಕೆ | ನಿಲ್ಲದೀಗ      ||೧೨೪||

ಉತ್ತಮಾಶ್ವವ ಕಳ್ಳತನದಿಂ | ದತ್ತಕೊಂಡೋಡಿದರೆ ಬಿಡುವೆನೆ |
ಮೃತ್ಯು ಮುಖದಿಂದವಗೆ ತಕ್ಕ ನಿ | ವೃತ್ತಿಗೊಡದೆ         ||೧೨೫||

ಇಷ್ಟು ದಿನ ಪರ್ಯಂತ ನಮ್ಮೀ | ಪಟ್ಟಣಕೆ ಹಗೆಗೊಂಡು ಬಂದ ಗ |
ರಿಷ್ಠರನು ನಾ ಕಾಣೆನೆಂದೆಂ | ಬಷ್ಟರೊಳಗೆ     ||೧೨೬||

ಕೇಳಿ ಕೆರಳಿ ಸುವೇಗನಾ ಭೂ | ಪಾಳನಂಘ್ರಿಗೆ ಮಣಿದು ಪ್ರಳಯದ |
ಕಾಳ ಭೈರವನಂತೆ ರೌದ್ರವ | ತಾಳಿ ನುಡಿದ  ||೧೨೭||

ರಾಗ ಮಾರವಿ ಏಕತಾಳ
ತಾತನೆ ಕೇಳ್ ನಿ | ರ್ಭೀತಿಯೊಳೋರ್ವ ನೃ | ಘಾತುಕನೈತಂದು |
ಘಾತಿಸಿ ಚರರನು | ಕೊಂಡೊಯ್ದನೆ ನ | ಮ್ಮಾತುರಗವನಿಂದು   ||೧೨೮||

ನಡೆಯಲಿ ಬೇಕಾ | ದೆಡೆಯಲಿ ಖಳ ಕಂ | ಡೆಡೆಯೊಳಗಡಗಿರಲಿ ||
ಹುಡುಕಿ ಹಿಡಿದು ಹರಿ | ಗಡಿದೀಡಾಡದೆ | ಬಿಡುವೆನೆ ನೀಚನನು    ||೧೨೯||

ಹೂಡಲಿ ಸೂರ್ಯನ | ಹಯರಥಗಳ ಸಮ | ಜೋಡಿನೊಳನುವಾಗಿ ||
ದೂಡಲಿ ಸುರಹಯ | ಕಾಗಿ ಜತೆಯ ಹೊ | ದಾಡಿ ತರುವೆ ಭರದಿ ||೧೩೦||

ಅಸಮಾಕ್ಷನ ಮರೆ | ಯೊಗುವನೆ  ಮಿಗೆ ತಾ | ಯ್ಬಸುರನು ಪೊಕ್ಕಪನೆ ||
ಬಿಸಜಾಕ್ಷನದಯ | ನಮಗಿದ್ದರೆ ಜೀ | ವಿಸಲಿನ್ನಾರ್ತವನೆ                        ||೧೩೧||

ವಾರ್ಧಕ
ಏನೆಂಬೆ ಯವ್ವನಾಶ್ವಂ ದಶಾಕ್ಷೋಹಿಣೀ |
ಸೇನೆಯಂ ನೆರಹಿ ಮಗನಂ ಕೂಡಿ ಪೊರಟನನು |
ಮಾನದಿಂ ಮೇಘನಾದಂ ಪೋದ ಕುರುಪನರಿದಪರ ದಿಗ್ಭಾಗದತ್ತ ||
ಆ ನರಾಧಿಪನ ಬರವಂ ನೋಡಿ ಪವಮಾನ |
ಸೂನು ಹಯ ರಕ್ಷಣೆಗೆ ಮೊಮ್ಮಗನ ನಿಲಿಸಿ ಮದ |
ದಾನೆಯಂತಿಳಿದನಾ ಪರ್ವತದ ಶಿಖರದಿಂ ಕರ್ಣಾತ್ಮಜಾತನೊಡನೆ        ||೧೩೨||

ಕಂದ
ಇದಿರಾಂತಿರ್ಕಡೆಯಿಂ ರಿಪು |
ಕದಳೀವನ ಕಲಭದಂತೆ ಸೈನ್ಯವನಿರಿಯಲ್ |
ವಿಧುಧರನೊಲು ಯವನಾಶ್ವಂ |
ಪದುಮಾಪ್ತನ ಮೊಮ್ಮನೊಡನೆ ಮಾರ್ಮಲೆದೆಂದಂ     ||೧೩೩||

ರಾಗ ಶಂಕರಾಭರಣ ಅಷ್ಟತಾಳ
ವೀರನಹುದೊ ಭಾಪುರೆ ನ | ಮ್ಮೂರ ಸೇರಿ ಮಾಯಕದಲಿ ||
ವಾರುಹವನು ಕದ್ದು ತಂದ | ಚೋರ ನೀನೆಲಾ ||೧೩೪||

ಚೋರನಲ್ಲ ನೋಡು ಸತ್ವ | ಸಾರನೆಂದು ನಿನಗೆ ರಣದಿ ||
ತೋರಿ ಕೊಟ್ಟುಕೊಂಡು ನಡೆವೆ | ಚಾರುಹಯವನು      ||೧೩೫||

ಹಿಡಿದ ತುರಗವನ್ನು ಬಿಟ್ಟು | ಕೊಡುವದೊಳ್ಳಿತೀಗ ನಿನ್ನ ||
ಕಡುಹತೋರಿ ಕೆಡುವ ದಾರಿ | ಹಿಡಿಯ ಬೇಡೆಲಾ         ||೧೩೬||

ಹಿಡಿದ ಮೇಲೆ ಬಿಡುವುದುಂಟೆ | ನುಡಿವುದೇಕೆ ವ್ಯರ್ಥ ಹಯವ ||
ಬಿಡುವನಲ್ಲ ಶೌರ್ಯವಿರಲು | ಬಿಡಿಸು ಬಾರೆಲಾ          ||೧೩೭||

ಧುರಕೆ ಯೋಗ್ಯನಲ್ಲ ನಮ್ಮ | ಶರವ ತಡೆಯಲಾರೆ ಬೇಡ ||
ತರಳುತನದ ಮಾತನಾಡಿ | ಹರಣಗೊಡದಿರು            ||೧೩೮||

ತರಳನಹುದಂಜುವೆನೆ ಮಾಂಸ | ಭರಿತಘನಗಾತ್ರಂಗೆ ನಿನಗೆ ||
ಕರಿಗೆ ಬೆದರಿ ಸರಿವ ಮರಿ ಕೇ | ಸರಿಯೇನಿರುವುದೆ       ||೧೩೯||

ಭಾಮಿನಿ
ಹಾಲನೆರೆದಂತಾಯ್ತು ಹಾವಿಗೆ |
ಬಾಲಕನೆ ನಿನಗೆಂದ ನುಡಿ ಹುರಿ |
ಗೋಲ ಸವಿನೋಡಾದರಿದಕೋ ಸೈರಿಸೆಂದೆಚ್ಚ ||
ಹಾಲನೆರೆದೈ ಭೂಪ ಹಾವಿನ |
ಬಾಲವನು ಬಡಿದೆಬ್ಬಿಸಿದೆ ಕಡೆ |
ಗಾಲವಿದು ನಿನಗಿನ್ನು ನೋಡೆಂದಾರ್ದು ಖಂಡಿಸಿದ                  ||೧೪೦||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಾತಿನಲಿ ಬಲು ಚಪಲನೈ ಸ | ತ್ವಾತಿಶಯ ಸಂಪನ್ನ ನೀ ನಿ |
ರ್ಭೀತನಹೆ ಮೆಚ್ಚಿದೆನು ನಿನ್ನಯ | ತಾತನಾರೈ           ||೧೪೧||

ನಿಂದು ಕಾದುವ ಸಮಯದಲಿ ತಾಯ್ | ತಂದೆಯರ ಹೆಸರೇಕೆ ಕರ್ಣಾ |
ನಂದ ಕರವಹ ಮಾತಿನಿಂ ಜಯ | ಹೊಂದದೈಸೆ         ||೧೪೨||

ಮತ್ತನಾದೆಯ ಕುದುರೆಯನು ಕ | ದ್ದಿತ್ತ ತಂದಿಹೆನೆಂಬ ಗರ್ವದಿ |
ಹೊತ್ತುಗಳೆಯದೆ ಮಾಳ್ಪೆ ಪ್ರಾಯ | ಶ್ಚಿತ್ತ ವಿಧಿಯ        ||೧೪೩||

ಕರೆಸು ಹಿರಿಯರ ಬೆಂಬಲಕೆ ಪವಿ | ಶರವಿದಕೊ ಕೊಳ್ಳೆಂದು ಹೂಡಿದೊ |
ಡುರವತಾಗಿತು ಕರ್ಣಸುತ ಮೈ | ಮರೆದನಾಗ           ||೧೪೪||

ಕಂದ
ಅರೆನಿಮಿಷದಿ ಮೈಮರೆದೆ |
ದ್ದರಿ ಸಾರಥಿಯಂ ತಗುಳ್ದುರಿಪು ಭೂಭುಜನಂ |
ಹರಿವಿದ್ರೋಹಿಯೆ ನಿಲ್ಲೆಂ |
ದಿರಿಯಲ್ಕಾನೃಪತಿ ಬಿಳ್ದುಮೂರ್ಛೆಗೆಸಂದಂ    ||೧೪೫||

ವಾರ್ಧಕ
ಚೇತರಿಸಿಕೊಂಡೆದ್ದು ನೃಪತಿ ನುಡಿದಂ ರಮಾ |
ನಾಥ ಹಾ ನಿನ್ನವನ ಮರೆದೆಯಾರಣದಿ ಕೈ |
ಸೋತುನಿಲುವಂತಾಯ್ತೆ ನಿಷ್ಠೆ ನಿಜಕರ್ತವ್ಯ ಸತ್ಯಕ್ಕೆ ತೊಡಕಾದುದೆ ||
ಘಾತಿಸಿದನಿವನೀ ಕುಮಾರಂ ಕುಮಾರನೇ |
ಪಾಥೋರುಹಾಕ್ಷ ನೀನೇ ಬಲ್ಲೆಯಾದಡಾಂ |
ಮಾತನಾಡಿಸಿ ನೋಳ್ಪೆ ನಿನ್ನೊಮ್ಮೆಗೆಂದ ಮತ್ತಾತನೊಡನಿಂತೆಂದನು     ||೧೪೬||

ರಾಗ ಮಧ್ಯಮಾವತಿ ಏಕತಾಳ
ಕೇಳೆನ್ನ ಮಾತನು ವೃಷಭಸುಕೇತಾ | ಪೇಳುವೆನಿನ್ನೊಡನಿಪ್ಪೊಂದು ಮಾತ ||
ಕಾಳಗದೊಳುಸೋತು ನುಡಿದಪನೆಂದು | ತಾಳಬೇಡನು ಮಾನಮುನಿನ್ನೊಳಿಂದು
ಕೇಳಯ್ಯಾ ಮಾತ ಕೇಳಯ್ಯಾ         ||೧೪೭||

ಅಳಿವುಳಿವುದಕಾಗಿ ಬೆದರುವನಲ್ಲ | ಕೊಳುಗುಳವನು ಬಿಟ್ಟು ಕಳೆಯೆಸುಳ್ಳಲ್ಲ ||
ನಳಿನಾಭನ ಪದಕಿಂಕರರಾವು | ಅಳುಕುವೆವಾತನ ಮನಕಾಗೆ ನೋವು     ||೧೪೮||

ಜಡಜಲೋಚನನ ವಿದ್ರೋಹಿಯಾನೆಂತು | ಕಡೆಗೆಂದ ನಿನ್ನ ಮಾತಿನೊಳಾಯ್ತು ಭ್ರಾಂತು ||
ನುಡಿವೀರನಹುದು ನೀನಾರಕುಮಾರ | ನಡೆತಂದುದೇಕೆಯೇನುಂಟು ವಿಚಾರ        ||೧೪೯||

ವಾರುಹವನು ಪಿಡಿದೊದಾತನೆತ್ತ | ಸಾರಿದನಾರ ಮಾತಿಂದ ನೀನಿತ್ತ ||
ಘೋರಸಂಗರಕಾಗಿ ಬಂದೆ ಹೇಳೆಂದ | ಧಾರಿಣಿಪತಿಮಾತಿಗಾತನಿಂತೆಂದ            ||೧೫೦||

ರಾಗ ಭೂಪಾಳಿ ಅಷ್ಟತಾಳ
ಭೂಪಾಲ ತಿಲಕ ಚಿತ್ತೈಸು ಸದ್ಗುಣಿಯೆ | ನಾಪೇಳ್ವನುಡಿಗಳ ಹರಿಭಕ್ತಾಗ್ರಣಿಯೆ   || ಪಲ್ಲವಿ ||

ತರಣಿ ಸಂಜಾತಲೋಕೈಕವಿಕ್ರಮದಾನ |
ಪರ ಕರ್ಣನಾತನ ಸುತವೃಷಕೇತನಾ | ಗಿರುವೆನೈ ಕ್ರತುವೊಂದನು ||
ಯುಧಿಷ್ಠರ | ಧರಣಿಪ ಗುಣಸಾಂದ್ರನು |
ಗೆಯ್ಯುವುದೆಂದು | ತಿರುವನಾಂತಿಹನು ಹಸ್ತಿನಪುರವರನು || ಭೂಪಾಲ || ||೧೫೧||

ಬಂಧುಹತ್ಯದ ಪಾಪಕಾಗಿ ಪಾರಾಶರ‍್ಯ |
ನೆಂದಂತೆ ಮಾರುತನಂದನಸಹನಾವು | ಬಂದೆವು ಮೂವರಿತ್ತ |
ಶ್ರೀ ವರನಾಜ್ಞೆ | ಯಿಂದ ವಾಜಿಯ ನಿಮಿತ್ತ | ಹಯಾಧ್ವರ | ಕೆಂದು ಕೊಂಡೊಯ್ಯಲತ್ತ |
ಘಟೋತ್ಕಚ | ಕಂದನದನು ಹಿಡಿತಂದ ನಮ್ಮತ್ತಾ || ಭೂಪಾಲ ||            ||೧೫೨||

ಮತ್ತಾದುದನು ನೀನೆ ಬಲ್ಲೆಯೆಂದೆನಲೆಂದ |
ಮಿತ್ರಪೌತ್ರನೆ ಬಂದೆನ್ನ eನಾಂಧತೆಗೆ ನೀ | ಮಿತ್ರನಂತಾದೆಯಿಂದು ||
ಧರ್ಮವೆರೂಪು | ವೆತ್ತ ನೃಪಾಲನೆಂದ | ಧರ್ಮಜನ ಸ | ಮಸ್ತರಾಡುವರಿಂತೆಂದು ||
ಯಾಗವ ಪುರು | ಷೋತ್ತಮ ನಡೆಸಲಿನ್ನಪ್ಪುದೆ ಕುಂದು || ಭೂಪಾಲ         ||೧೫೩||

ಭಾಮಿನಿ
ಸಫಲವಪ್ಪುದು ಭಕ್ತಸುರಪಾ |
ದಪನ ಪ್ರೀತ್ಯರ್ಥದಲಿ ಸಲುವೀ |
ವಿಪುಲಧನಕನಕಾದಿ ವಸ್ತೂತ್ಕರಗಳಿವು ಸಿದ್ಧ ||
ಚಪಲಹಯಮಿದನೊಂದನೇ ಕೊ |
ಟ್ಟಪೆನೆ ಕೊಡೆ ಸರ್ವಸ್ವವಲ್ಲದೆ ||
ರಿಪುಗಳೇ ನೀವಿನ್ನು ಮಾರುತಸುತನದೆಲ್ಲಿಹನು           ||೧೫೪||

ಕಂದ
ಅಂತಾಗೆ ತೋರ್ಪೆಬಾರೆನೆ |
ಸಂತಸದಿಂದೀರ್ವರೇರಿ ರಥಮೊಂದರೊಳಂ ||
ನಿಂತೈತರಲಿತ್ತಲ್ ಭೂ |
ಕಾಂತಾತ್ಮಜ ಪವನಸುತನನೆಡೆಗೊಂಡೆಂದಂ                        ||೧೫೫||

ರಾಗ ನಾದನಾಮಕ್ರಿಯೆ ಅಷ್ಟತಾಳ
ಕಾರಣಮಿಲ್ಲದೆ ನಡೆತಂದು | ಕದ್ದ | ವಾರುಹ ಚೋರನೆ ನೀನಿಂದು ||
ತೋರು ಪೌರುಷವಿದ್ದರೆನ್ನಲ್ಲಿ | ಕಾಲ | ನೂರತೋರಿಸುವೆನೀಕ್ಷಣದಲ್ಲಿ       ||೧೫೬||

ಬೆಳ್ಳನಂತಾಡುವ ಮಾತಿಗೆ | ಬೆರ್ಚು | ವಳ್ಳೆದೆಯವನೆ ಯೀ ಮಾತಿಗೆ ||
ಕಳ್ಳರೊದಗುವರೆ ರಣದಲ್ಲಿ | ಬುದ್ಧಿ | ಯುಳ್ಳೊಡಿನಿತು ನೋಡುಮನದಲ್ಲಿ    ||೧೫೭||

ಬುದ್ಧಿವಂತನು ನೀನೆ ಸಾಹಸಿ | ಕಾವ | ಲಿದ್ದವರನು ಹೊಡೆದೋಡಿಸಿ |
ಗೆದ್ದರೆ ಗೆಲವಲ್ಲವದು ನೋಡು | ಸುಪ್ರ | ಸಿದ್ಧನಾದರೆ ನಿಂದು ಕಾದಾಡು     ||೧೫೮||

ರಾಗ ಕಾಂಭೋಜಿ ಝಂಪೆತಾಳ
ಫಡಫಡೆಲೆ ಹುಡುಗ ನೀ | ನುಡಿಯದಿರು ಸಡಗರವ |
ಬಡಿದಿಕ್ಕಿಧುರದೊಳಾಂತವರ ||
ಹಿಡಿದಶ್ವವನು ಕೊಂಡು | ನಡೆವ ವೇಳೆಯಲಿ ಕೈ |
ತಡೆವ ಕಡುಗಲಿಗಳಾರಿಹರು           ||೧೫೯||

ತಡೆವರಿಲ್ಲೆಂದಾಸೆ | ವಡುವೆಯಾ ಹಯದೊಳೀ |
ಪೊಡವೀಶ್ವರನ ಸುತ ಸುವೇಗ ||
ಕೊಡಲಿಯಾಂ ವೈರಿ ವಿ | ದ್ರುಮಕೆ ತಡೆಯೆಂದೆಚ್ಚ |
ಕಿಡಿಯಿಡುವ ದಿವ್ಯ ಮಾರ್ಗಣವ       ||೧೬೦||

ಸಾಧ್ಯವಲ್ಲಿದು ನಿನಗೆ | ಸಮರವೆನ್ನೊಳು ಕೌರ |
ವಾದ್ಯರನು ಗೆಲಿದ ರಣಭೀಮ ||
ಮಧ್ಯಮನು ಕೌಂತೇಯ | ರೊಳಗಾನು ನೋಡೆಂದು
ಮಧ್ಯದಿಂ ಕಡಿದು ಖಂಡಿಸಿದ           ||೧೬೧||

ಭಾಮಿನಿ
ಪೊಡವಿಪಾಲಕ ಕೇಳು ಮಾರುತಿ |
ಯೊಡನೆ ಖಾಡಾಖಾಡಿಯಿಂ ಖತಿ |
ವಿಡಿದು ವೀರ ಸುವೇಗ ಹೊದಾಡುತ್ತಲಿರಲಾಗಾ ||
ಜಡಜಸಖ ಸಂಜಾತನಾತ್ಮಜ |
ನೊಡನೆ ತಾನೈತರುತ ಕಂಡನು |
ತಡೆದು ತನಯನ ನುಡಿದ ವಿನಯೋಕ್ತಿಯಲಿ ಯವನಾಶ್ವ          ||೧೬೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಗನೆ ಬಿಡು ಸಂಗರವ ಬಿಲ್ಲನು | ನೆಗಹದಿರು ಮನದೊಳಗೆ ವೈರವ |
ಬಗೆಯ ಬೇಡಿವರುಗಳು ನಮ್ಮಯ | ಹಗೆಗಳಲ್ಲ           ||೧೬೩||

ಬಂಧುಹತ್ಯ ನಿಮಿತ್ತ ಯಮಸುತ | ನಿಂದ ಹಯಮೇಧವನು ನಡೆಸುವ |
ನಿಂದಿರಾಧವನಿತ್ತ ತುರಗಕೆ | ಬಂದರಿವರು     ||೧೬೪||

ಹುಟ್ಟಿ ಮಾನಿಸನಾದುದಕೆ ಹಯ | ದೊಟ್ಟಿನಿಂದೆಲ್ಲವನು ಪಾದವ |
ಮುಟ್ಟಿ ಹರಿಗರ್ಪಿಸುವೆನೈ ನಿನ | ಗಿಷ್ಟವೈಸೆ    ||೧೬೫||

ಆತನಿಂತೆನಲಸ್ತುಯೆಂದಾ | ಜಾತತಾತನ ಕೆಲದಿನಿಂದನು |
ವಾತಜಾತನಪದಕೆರಗಿವೃಷ | ಕೇತು ನುಡಿದ  ||೧೬೬||

ರಾಗ ನಾದನಾಮಕ್ರಿಯೆ ರೂಪಕತಾಳ
ತಾತಚಿತ್ತೈಸೆನ್ನ ಮಾತನೀ ಪೊಳಲಧಿ | ನಾಥನೀತನು ಯವ್ವನಾಶ್ವ ||
ನೀತಿಶಾಸ್ತ್ರಾಗಮವಿದ ವಿಷ್ಣುಭಕ್ತ ವಿ | ಖ್ಯಾತ ವಿಕ್ರಮ ಪುಣ್ಯ ಚರಿತ           ||೧೬೭||

ನೆಗಳಿದನೈ ಯುದ್ಧ ಹಗೆಗಾರರಿವರೆಂದು | ವಿಗಡ ಕ್ಷತ್ರಿಯ ಪಂಥವಿಡಿದು ||
ಮಿಗೆ ನಾವು ನಡೆತಂದ ಬಗೆಯರಿದೆಲ್ಲವ | ನಗಧರಾರ್ಪಣಗೈವ ಮನದಿ    ||೧೬೮||

ಬಂದನೆನ್ನೊಡನೆ ನಿಮ್ಮನು ಕಾಂಬ ತವಕದೊ | ಳೆಂದ ಮಾತಿಗೆ ಮರುತಜನು ||
ಮಂದಹಾಸದೊಳಪ್ಪಿ ನೃಪತಿಯ ತಕ್ಕೈಸಿ | ಲೆಂದನು ಪ್ರೇಮಭಾವದೊಳು            ||೧೬೯||

ಭಾಮಿನಿ
ಸೋಮವಂಶಲಲಾಮ ವಿಜಯೋ |
ದ್ಧಾಮ ಸಂಗರ ಭೀಮ ಕೇಳೈ |
ಭೀಮನಿನಗಪರಾಧವೆಸಗಿದೆನದನು ಮರೆದಪುದು ||
ಕಾಮಿತಾರ್ಥಫಲಪ್ರದಾತನ |
ಕಾಮಿಸಿಹೆ ಕಾಣಿಸುವುದೆನಗಿ |
ನ್ನೀಮಹತ್ಸಂಪದವನರ್ಪಿಸುವುದಕೆ ನೆರವಾಗಿ                         ||೧೭೦||

ಕಂದ
ಆಳಾಗಿಹನೈ ನಿಮಗಾ |
ನಾಳೀಕಾಂಬಕನೆನಲ್ಕೆ ನಿಮ್ಮೈಸಿರಿಯಂ |
ಪೇಳುವಡರಿದೆನಗೆನಲು ನೃ |
ಪಾಳನ ಕೊಂಡಾಡಿ  ಮೆಚ್ಚಿ ಪವನಜನೆಂದಂ   ||೧೭೧||

ರಾಗ ಮೋಹನ ಅಷ್ಟತಾಳ
ಯವನಾಶ್ವ | ಭೂಪ | ಯವನಾಶ್ವ     || ಪಲ್ಲವಿ ||

ಯವನಾಶ್ವಭೂಪಕುಲಾಂಬುಜಮಿತ್ರ | ವಿವರಿಸಲಿನ್ನುಂಟೆ ನೀನೆಮ್ಮ ಮಿತ್ರ ||
ಭುವನದೊಳೆಣೆಗಾಣೆನೈ ಸುಚರಿತ್ರ | ದಿವಿಜೇಂದ್ರ ವಿಭವಸಂಪನ್ನ ಪವಿತ್ರ  ||೧೭೨||

ಮಾಧವನಂಘ್ರಿಪರಾಯಣ ನೀನು | ಸೋದರೊಳಗೆಮಗಾದೆಯಿನ್ನೇನು ||
ಪೋದಪುದೈಸಲೆ ನಾವೆಲ್ಲರಿನ್ನು | ಮೇದಿನೀಪತಿ ಹಾದಿ ನೋಡಿ ಹಣ್ಣಹನು ||೧೭೩||

ಬೇಡಿಕೊಂಬೆನು ಬಪ್ಪುದರಮನೆಯೆಡೆಗೆ | ಮಾಡುವಾತಿಥ್ಯವ ಕೈಕೊಂಡು ಕಡೆಗೆ ||
ಕೂಡಿಕೊಂಡತ್ತ ಪೋದಪುದೆಂಬ ನುಡಿಗೆ | ಹೂಡಿದರಥದೊಳೇಳ್ತಂದರಾಯೆಡೆಗೆ     ||೧೭೪||

ವಾರ್ಧಕ
ಮೂರು ದಿನಮಲ್ಲಿ ಸುಖದಿಂದಿರ್ದುಮತ್ತವರು |
ಭೂರಮಣ ಧರ್ಮಜನ ಕಾಂಬರ‍್ತಿಯಿಂದಾ ಸ |
ಮೀರ ಸುತನೆಚ್ಚರಿಸೆ ಭದ್ರಾವತೀಶ್ವರಂ ಸಕಲ ಸನ್ನಾಹದೊಡನೆ ||
ಭೋರಿಡುವ ಕಹಳೆದುಂದುಭಿ ವಾದ್ಯರವಗಳಿಂ |
ಮೇರೆದಪ್ಪಿದ ಮಹಾರ್ಣವದಂತೆ ನೆರೆದ ಪರಿ |
ವಾರಸಹ ಸುತಸುವೇಗನ ಕೂಡಿ ಹಯದೊಡನೆ ಪೊರಟನಿಭನಗರಿಗಾಗ   ||೧೭೫||

ದ್ವಿಪದಿ
ಪೃಥ್ವೀಶ ಕೇಳ್ ಬಳಿಕ ಪವನಸಂಜಾತ |
ಅರ್ಥಿಯಿಂದೈತರುತ ಯವನಾಶ್ವ ಸಹಿತ       ||೧೭೬||

ಗ್ರಹಿಸಿದನು ಮನದೊಳಗೆ ಮಧ್ಯಮಾರ್ಗದಲಿ |
ಬಹುದಿವಸವಾದುದಾನಗ್ರಜನನಗಲಿ            ||೧೭೭||

ಪಡೆವೆರಸಿ ಪೋಪುದಕೆ ತಡವಪ್ಪುದೆಂದು |
ನಡೆದನೋರ್ವನೆ ಮುಂದೆ ಗಜನಗರಿಗಂದು   ||೧೭೮||

ನೋಡಿದನು ಧರ್ಮಜನ ಪದಕೆರಗಿ ನಿಂದು |
ಆಡಿದನು ನಡೆದ ಘಟನೆಗಳ ನಿಂತೆಂದು        ||೧೭೯||

ಬಳಿಕ ತದ್ವಾರ್ತೆಗಳನವರಾಡುತಿರಲು |
ಇಳೆಯರಸ ಯವನಾಶ್ವಮುಂತಾಗಿ ಬರಲು   ||೧೮೦||

ಭದ್ರಗಜವೇರಿ ಬಹುವಿಧದ ವೈಭವದಿ |
ಭದ್ರಾವತೀಶ್ವರನನಿದಿರ್ಗೊಂಡ ಮುದದಿ       ||೧೮೧||

ರಾಗ ಮೋಹನ ಏಕತಾಳ
ಕರಿಕಂಧರದಿಂದವತರಿಸುತ ಭೂ | ವರಧರ್ಮಜ ನಿಲುವನಿತರಲಿ ||
ಸರಸೀರುಹ ಸಖ ಪೌತ್ರ ಘಟೋತ್ಕಚ | ತರಳರೆರಗಿದರು ಚರಣದಲಿ       ||೧೮೨||

ಬಂದಾಕ್ಷಣ ಭದ್ರಾವತಿಯರಸನು | ತಂದ ಸುವಸ್ತುಗಳೆಲ್ಲವನು ||
ಒಂದುಳಿಯದೆ ಪದಕರ್ಪಿಸಿ ಮಣಿದಿಂ | ತೆಂದನು ಸಂತಸವಟ್ಟವನು         ||೧೮೩||

ಭಾಮಿನಿ
ಕಂಡರಿಯೆ ಕೇಳ್ದಲ್ಲದಿಂದೇ |
ಕಂಡೆಕಂಗಳ ಹಬ್ಬವನು ತನು |
ಗೊಂಡಸದ್ಧರ್ಮವನು ಪ್ರತ್ಯಕ್ಷದಿ ನೃಪೋತ್ತಮನೆ ||
ಕಂಡೆನೆನ್ನಪರಾಧವಿರೆ ಮಾ |
ರ್ಕೊಂಡು ಮನ್ನಿಸಬೇಕೆನಲು ಭೂ |
ಮಂಡಲೇಶ್ವರ ಬರಸೆಳೆದು ಬಿಗಿಯಪ್ಪುತಿಂತೆಂದ         ||೧೮೪||

ವಾರ್ಧಕ
ಯವನಾಶ್ವ ಕೇಳು ನೀನಪರಾಧಿಯೇ ತಪ್ಪಿ |
ದವರಾವು ನಮ್ಮ ನೀನೇ ಮನ್ನಿಸಲು ಬೇಕು |
ಹವಣಿಂತುಟಿನ್ನುಮಾ ಮಾತದೇಕೈದನೆಯ ತಮ್ಮ ನೀನೆಮಗೆ ನಿಜದಿ ||
ವಿವರಿಸುವಡಿನ್ನಿಲ್ಲವೆನಲಾಗ ಕುದುರೆಸಹಿ |
ತವನ ಮಗನೆರಗಲ್ಕೆ ಭೀಮನೊಳು ಸಮಸಮ ಧು |
ರವನಾಂತ ಬಿಲ್ಲಾಳು ಬಾರೆಂದು ನಸುನಗುತ ಕೈವಿಡಿದು ಸಂತಯಿಸಿದಂ  ||೧೮೫||

ರಾಗ ಮೋಹನ ಝಂಪೆತಾಳ
ಧರಣಿಪಾಲಕನಿಂತು | ಪರಿಪರಿಯೊಳವರನುಪ
ಚರಿಸಿ ತಮ್ಮರ ಮನೆಗೆ | ಕರತಂದನಾಗ       ||೧೮೬||

ಬೇರೆಬೇರವರ ಸ | ತ್ಕಾರದಲಿ ದಣಿಸಿಕಂ |
ಸಾರಿಯನು ನೆನೆದಿರ್ದ | ಚಾರುಹರ್ಷದಲಿ     ||೧೮೭||

ವಾರ್ಧಕ
ಮತ್ತೆ ಭೀಮನ ಕಳುಹಿ ಹರಿಯ ಕರೆತಂದು ಮುನಿ |
ಪೋತ್ತಮನ ಮತದಿ ದೀಕ್ಷೆಯಗೊಂಡು ಪಾರ್ಥನಿಂ |
ಪೃಥ್ವಿಪಾಲರ ಗೆಲಿಸಿ ಕಪ್ಪಮಂ ತರಿಸಿ ವೇದೋಕ್ತದಿಂದಾ ಯಾಗಮಂ ||
ಪೂರ್ತಿಗೊಳಿಸಿ ಸಮಸ್ತ ಭೂಪಾಲರೊಳ್ ಕೀರ್ತಿ |
ವೆತ್ತು ಭೂತಳವ ಪಾಲಿಸುತಿರ್ದನೈ ಧರ್ಮ |
ಪುತ್ರನಾ ಹರಿಯ ಕಾರುಣ್ಯದಿಂ ಕೇಳು ಜನಮೇಜಯಮಹೀಪಾಲನೆ          ||೧೮೮||

ರಾಗ ಮೋಹನ ಢವಳಾರ ಏಕತಾಳ
ವಾರಿಜಾಕ್ಷಿಯರೆಲ್ಲಗೂಡಿ | ತಾರಮಂದ್ರದಿ ದನಿಗೂಡಿ |
ಸಾರಿಗ ಪದ ಸಸ್ವರದಿಂಪಾಡಿ | ಶ್ರೀ ರಂಗನ ಚರಿತವ ಕೊಂಡಾಡಿ ||
ಧಾರಿಣಿಗಧಿಕರೆಂದೆನಿಸುವ ಪಾಂಡು ಕು |
ಮಾರರಿಗಾರತಿಯಾ ಬೆಳಗೀರೆ || ಶೋಭಾನಂ           ||೧೮೯||

ಕಂದ
ವೆಂಕಟರಮಣಂ ಬಡೆಕಿಲ |
ಶಂಕರನಾರಾಯಣಾಖ್ಯಭೂಸುರನ ಸುತಂ |
ಪಂಕಜನಾಭನ ಪದಯುಗ |
ಕಿಂಕರನಾಂ ಯಕ್ಷಗಾನದಿಂದಿದನೊರೆದೆಂ     ||೧೯೦||

ರಾಗ ಮೋಹನ ಏಕತಾಳ
ನಂದ ನಂದನಾಯ ಜಯ | ಜಯ | ಮಂಗಲಂ |
ದೇವ | ವೃಂದಗಂಧರ್ವಾರ್ಚಿತಾಯ ಶುಭಮಂಗಲಂ | ನಂದ || ಪಲ್ಲವಿ ||

ಸಾರಮಣಿ ಕೆಯ್ಯೂರ ರತ್ನ | ಹಾರಕಟಕ ಶೋಭಿತಾಯ |
ಘೋರದುರಿತ ನಿರ್ಧೂತಾಯ | ಜಯಮಂಗಲಂ | ಶುಭಮಂಗಲಂ || ನಂದ          ||೧೯೧||

ಚಾರು ಗಂಧಮಾಲ್ಯ ಸುಮನೋ | ಹಾರ ವಸನ ಭೂಷಿತಾಯ |
ನಾರದಾದಿ ಸನ್ನುತಾಯ | ಜಯಮಂಗಲಂ | ಶುಭಮಂಗಲಂ || ನಂದ     ||೧೯೨||

ಕಾಮಕೋಟಿ ಸುಂದರಾಯ | ನಾಮರೂಪ ವರ್ಜಿತಾಯ |
ಕಾಮಿತಫಲ ಪ್ರದಾಯ | ಜಯಮಂಗಲಂ | ಶುಭಮಂಗಲಂ || ನಂದ       ||೧೯೩||

* * *