ಭಾಮಿನಿ
ದೇವದೇವಾರ್ಚಿತ ಪದದ್ವಯ |
ದೇವದೇವೇಶ್ವರ ಜಗನ್ಮಯ ||
ದೇವಕೀಸಂಜಾತ ನಿತ್ಯಾನಂದ ಗೋವಿಂದ ||
ಭಾವನಾತ್ಮಕ ಭಕ್ತಜನ ಸಂ |
ಜೀವ ನೀನೊಲಿದೆನ್ನ ವಿಲಸ
ದ್ಭಾವನೆಯನನುಗೊಳಿಸು ಲಕ್ಷ್ಮೀರಮಣ ಶ್ರೀಕೃಷ್ಣ        ||೧||

ಕಂದ
ವಿನುತಾಶ್ವಮೇಧ ಕಥನವ |
ನೆನಗರುಹು ದಯಾಲವಾಲ ನೀನೆಂದೆನಲಾ ||
ಜನಮೇಜಯ ನೃಪನಂ ಜೈ |
ಮಿನಿಮುನಿ ಕೊಂಡಾಡಿ ಪೇಳ್ದನತಿ ಹರ್ಷದೊಳಂ         ||೨||

ವಾರ್ಧಕ
ಕೇಳೆಲೆ ಮಹೀಪಾಲ ಕೌರವಾದ್ಯರನೆಲ್ಲ |
ಕಾಳಗದಿ ಹರಿಯ ದಯದಿಂ ಗೆಲ್ದು ಧರೆಯನಿದ |
ನಾಳುತಿರ್ದಂ ಧರ್ಮನಂದನಂ ಧರ್ಮದಿಂ ತಮ್ಮಂದಿರಿಂದ ಕೂಡಿ ||
ಪೇಳಲೇನೀ ಹಸ್ತಿನಾವತಿಯೊಳಾದ ನೃಪ
ರೋಳಿಯೊಳು ಮಿಗಿಲಿವಂ ರಾಘವೇಶ್ವರನ ಸಮ |
ಪಾಳಿಯೆಂಬ ನೆಗಳ್ತೆವಡೆದೊಂದುದಿನ ತನ್ನ ಸಹಭವರೊಳಿಂತೆಂದನು      ||೩||

ರಾಗ ಭೈರವಿ ಝಂಪೆತಾಳ
ಅನುಸಂಭವರು ಕೇಳಿ ವನಧಿಪರಿಯಂತರಾ |
ವನಿಯ ಸಾಮ್ರಾಜ್ಯವನು ನಮಗೇ ||
ಅನುಗೊಳಿಸಿದನು ದಯಾವನಧಿಯರಸಾದೆನೆಂ |
ದೆನಗೆ ಸೊಗಮಿನಿತಿಲ್ಲ ಮನದಿ        ||೪||
ಈ ಧರಾತಲಕಾಗಿ ಕಾದಿ ಸತ್ತವರ ನೆನ |
ಪಾದರಾಗಲೆ ಧೈರ್ಯಗುಂದಿ ||
ಮಾಧವನ ಸ್ಮರಣೆಯನುವಾದವಲ್ಲದೆ ಬೇರೆ |
ಹಾದಿಯೇ ಕಾಣದಿನಿದಾಗಿ  ||೫||

ಆ ದಿವ್ಯರೂಪರೂಪಿಂಗೆ ಗುಣಗುಣಕೆ ಬೇ |
ಕಾದ ಸತ್ಯತ್ಯಾಗ ಶೌರ್ಯ ||
ಆದಿತ್ಯಪುತ್ರನೆಮ್ಮಣ್ಣ ಕರ್ಣನೊಳಲ್ಲ |
ದಾದುದೇ ಮಿಕ್ಕಮನುಜರಲಿ           ||೬||

ಹೆತ್ತವರ ಹೆಚ್ಚಳವ  ಮರೆಸಿ ಪೊರೆದನು ನಮ್ಮ
ಮುತ್ತಯ್ಯ ಮುದುಕಶಂತನುಜ ||
ಚಿತ್ತಜಾರಾತಿ ಸಮಸತ್ವನಿಚ್ಛಾಮರಣಿ |
ಸತ್ತನಲ್ಲಯ್ಯೂರ್ಧ್ವರೇತ     ||೭||

ಅಂಧನಲ್ಲವೆ ಹಿರಿಯ  ಜನಕ ಮಕ್ಕಳನೆಲ್ಲ |
ಕೊಂದನಿವ ಭೀಮಹಾಯೆಂದು ||
ನೊಂದು ಶಪಿಸನೆ ನಮಗೆ  ಗುರುವಲ್ಲವೇ ದ್ರೋಣ |
ಸಂದ ವಿಕ್ರಮ ಧನುರ್ಧಾರಿ             ||೮||

ಭಾಮಿನಿ
ನುಡಿದುಫಲವೇನಿನ್ನು ಮೆಚ್ಚೆನು |
ಪೊಡವಿಯೊಡೆತನ ಸಾಕು ನೀನೇ |
ನಡೆಸು ಸದ್ಧರ್ಮದಲಿ ರಾಜ್ಯವನೇರು ಗದ್ದುಗೆಯ ||
ನಡೆದು ವನವಾಸಕ್ಕೆ ಮುಕ್ತಿಯ |
ಪಡೆವ ಮನಮೆನಗಾಯ್ತಿದಕೆ ಮರು |
ನುಡಿಯಲಾಗದೆನಲ್ಕೆ ಬಿನ್ನಯಿಸಿದನು ಕಲಿಭೀಮ         ||೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಏನಿದೇನಣ್ಣಯ್ಯ ಚಿತ್ತ | ಗ್ಲಾನಿಯಾದುದಿದೇಕೆ ವಸುಧಾ |
ಮಾನಿನಿಯ ಕೈಬಿಡುವ ಮನದನು | ಮಾನವೇನು       ||೧೦||

ಖೂಳರಾ ಕೌರವರು ತಮ್ಮಯ | ಪಾಳುಕೆಲಸದ ಫಲದಿ ಸತ್ತಡೆ |
ಗೋಳಿಡುವುದೇಕಣ್ಣ ನಮ್ಮಯ | ಬಾಳಬೈದು ||೧೧||
ಬಂಧುಬಾಂಧವರೆಲ್ಲ ರಣಕೈ | ತಂದು ಸೆಣಸಲು ಸೆಣಸಿದೆವು ನ |
ಮ್ಮಿಂದ ಬಂದಪರಾಧವೇನಿದ | ನೆಂದು ತಿಳುಹು         ||೧೨||

ಮಾಡಿ ಸಾರಥ್ಯವನು ಹರಿಜನ | ಗೂಡಿಸಿದನೆನೆ ನಮಗಿದೊಂದನೆ
ನೋಡಿ ತಿಳಿದರೆ ಸಾಕು ಬಿಡು ಸುಡು | ಗಾಢ ವ್ಯಥೆಯ  ||೧೩||

ಏರಿ ಜೇನಿಂಗಾಗಿ ನೊಣಗಳ | ತೂರಿಹಳಿಕೈ ಸೇರೆಮರದಿಂ |
ಜಾರಿ ಬಿದ್ದಂತಾಯ್ತು ನಿನ್ನ ವಿ | ಚಾರವಿಂದು    ||೧೪||

ಭಾಮಿನಿ
ಬಿಡುವೃಥಾ ಚಿಂತಿಸದಿರೆಂಬೀ |
ನುಡಿಯ ನುಡಿವನಿತರಲಿ ದೂರದಿ |
ನಡೆತರುವ ಮುನಿಪತಿಯ ಕಂಡೊಡನೆದ್ದಿದಿರ್ಗೊಂಡು ||
ಅಡಿಗೆರಗಿ ಕರೆತಂದು ಕೂರಿಸಿ |
ಕಡವರದ ಪೀಠದಲಿ ಪೂಜಿಸಿ |
ನುಡಿಸುವೈವರ ನೋಡಿ ಯಮಜನೊಳೆಂದನಾ ವ್ಯಾಸ ||೧೫||

ರಾಗ ಬೇಗಡೆ ಅಷ್ಟತಾಳ
ಲಾಲಿಸೈ ರಾಜಾಧಿರಾಜೇಂದ್ರಾ | ಸದಯಾಂತರಂಗ ಸು |
ಶೀಲ ಸುಜನಾಭರಣ ಗುಣಸಾಂದ್ರಾ ||
ನೀಲಮೇಘ ಶ್ಯಾಮಳನ ನಿಜ | ಲೀಲೆಯನು ನೆನೆದೊಗುವ ನಿನ್ನ ವಿ |
ಶಾಲ ಮನಚಿಂತಾಲತಾಂಗಿಯ | ನೋಲಯಿಸುವೀ ಸೋಲವಾಂತುದೆ    ||೧೬||

ಕತ್ತಲೊಳು ಕಾಣದಿರೆ ಭಾಸ್ಕರನು | ಪೆರ್ಜೊಡರ ಕೈಕೊಂ |
ಡೆತ್ತಿ ತೋರಿಪರಾರು ದಾರಿಯನು ||
ಸುತ್ತಿತಾ ಬೇಸತ್ತೊಡನಿಲಗೆ | ಮತ್ತೆ ಬೀಸುವರಾರು ಧರ್ಮ ಸು |
ಪುತ್ರನೀನಳವಳಿದೊಡರಿಪುವ | ತತ್ವವಿದರಾರಿತ್ತ ಲೋಕದಿ        ||೧೭||

ನೊಂದಡಾವಿಹಗೇಂದ್ರವಿಷದುರಿಗೆ | ಮಂತ್ರಿಸುತ ರಕ್ಷಾ |
ಬಂಧನವನಾರೆಸಗುವರು ನಿನಗೆ ||
ಬಂದ ಚಿಂತೆಯದಂದುಗವದೇ | ನೆಂದು ಪೇಳಿನ್ನಂದದಿಂದಲಿ |
ಸಂದೆಗಂ ಬೇಡೆಂದ ಮುನಿಪನಿ | ಗೆಂದನವನಭಿವಂದಿಸುತ್ತಲೀ   ||೧೮||

ರಾಗ ಶಂಕರಾಭರಣ ಅಷ್ಟತಾಳ
ಮುನಿರಾಯ | ದರ್ಶನದಿಂ ಧನ್ಯತೆಯಾಂತೆ | ಮುನಿರಾಯ        || ಪಲ್ಲವಿ ||

ಮುನಿರಾಯ ಸಾತ್ಯಾವತೇಯಾ | ಎನ್ನ | ಮನಕಿಲ್ಲ ಸೌಖ್ಯದೊಂದಾಯಾ |
ಆದ | ರೆನುವೆನಿನ್ನೊಳು ಬಿಚ್ಚಿಬಾಯಾ  || ಗಂಗಾ |
ತನಯಾದಿ ಹಿರಿಯರಾ | ನನವನೋಡುವಯೋಗ
ಕೊನೆಗೊಂಡಮೇಲೆ ಭೂ | ವನಿತೆಯನಾಯಕನಾದೆ || ಮುನಿರಾಯ        ||೧೯||

ಆಗದುದಾಯಿತೆನ್ನಿಂದ | ರಾಜ್ಯ | ಭಾಗವ ಬಯಸಿದ್ದರಿಂದ |
ಅಂತೆ | ಹೋಗದು ದುರಿತದ ಬಂಧ || ಕಾಡ |
ಹೋಗಿ ಹೊಕ್ಕಲ್ಲಿ ವಿ | ರಾಗಿಯೆನಿಸಿದೇಹ |
ಭೋಗವನೀಗದೊಂ | ದಾಗದಾತುಮನಲ್ಲಿ || ಮುನಿರಾಯ        ||೨೦||

ಕಂಡುಕೊಂಡಿಹೆನೆನ್ನಕ್ಷೇಮ | ಈಭೂ | ಮಂಡಲವಾಳಲಿ ಭೀಮ |
ರಾಜ | ದಂಡವನೊಲ್ಲೆನಿನ್ನಮಮ || ಹೇಸಿ
ಗೊಂಡೆನೆನ್ನಯಲಜ್ಜ | ಭಂಡತನಕೆಮಾಡಿ |
ದ್ದುಂಡುತೀರದೆಮುಚ್ಚಿ | ಕೊಂಡಿಡೆ ಮುಗಿವುದೆ || ಮುನಿರಾಯ    ||೨೧||

ಕಂದ
ಎನಗಾಶೀರ್ವದಿಸೆನ್ನಯ |
ಮನದಿಷ್ಟಂಸಿದ್ಧಿಪಂತೆ ಮಾಮೈಮನೆಯೆಂ ||
ದನುತಾಪದಿ ಪದಕೆರಗಿದ |
ಜನಪಾಲನನೆತ್ತಿ ನುಡಿದನತಿವಿನಯದೊಳಂ  ||೨೨||

ರಾಗ ಶಂಕರಾಭರಣ ಏಕತಾಳ
ಧಾತ್ರೀಶ್ವರನೆ ಕೇಳು ಯುದ್ಧ | ಕ್ಷೇತ್ರದಿವೈರಿಗಳಗೆದ್ದ |
ಪಾತ್ರತೇಹೆಚ್ಚೆಂಬವಿದಿತ | ಶಾಸ್ತ್ರವನರಿಯ ||
ಕ್ಷಾತ್ರತೇಜವಿಂತುಟಿದಕೆ | ಗೋತ್ರವಧೆಯಾಯ್ತೆಂದರದಕೆ |
ಗಾತ್ರವದಂಡಿಸುವಧರ್ಮ | ಸೂತ್ರವಿಹುದೇನೈ || ಧಾತ್ರಿ           ||೨೩||

ಆದರೀಗನಿನ್ನಮನದಿ | ಖೇದವಿರಲುಮಾಡು ಭರದಿ |
ವೇದವಿಹಿತವಾದತುರಗ | ಮೇಧಾಧ್ವರವನು ||
ಮೇದಿನೀಪಾಲಕರಪಾಪ | ವ್ಯಾಧಿಗೀಯೌಷಧಿಯೆಲೇಪ |
ಸಾಧಿಸುನಿನ್ನರ್ಗೆದೊಡ್ಡಿ | ತಾದುದಲ್ಲಯ್ಯ       ||೨೪||

ತಪ್ಪಾಡಿದೆನೆ ಮುನಿಯೆ ಕ್ಷಮಿಸು | ಮುಪ್ಪುಗೊಂಡುದೆನ್ನಮನಸು |
ಕಪ್ಪುಗೊರಲನಾಣೆ ಮುಂದೆ | ಬಪ್ಪದುರಿತಕೆ |
ಅಪ್ಪುದಾದರದರ ವಿಧಿಯೆಂ | ತಿಪ್ಪುದು ಪಿಂದಾರುಗೈದ |
ರೊಪ್ಪುಗೊಂಡರೆನಗೆ ನಡೆಸ | ಲಪ್ಪುದೆ ಪೇಳೈ || ಧಾತ್ರಿ ||೨೫||

ರಾಗ ಕಾಮವರ್ಧಿನಿ ರೂಪಕತಾಳ
ಅವಧರಿಸಿನ್ನು ಹರಿಶ್ಚಂದ್ರರಾಯ ರಾ | ಘವದೇವ ನಳ ನಹುಷಾದಿ |
ಅವನಿಪಾಲರುಗೆಯ್ದರಿದನು ಪೂರ್ವದಲಿ ಸ | ತ್ವವಿಹೀನರಿಂಗಿದು ಸಲದು  ||೨೬||

ಬಿಳಿಯೊಂದು ಕಪ್ಪೊಂದು ಬಣ್ಣದಕಿವಿಗಳ | ಥಳಥಳಿಸುವ ಬೆಳ್ಪುಮೈಯ್ಯ |
ಹೊಳೆವಬಂಗಾರಬಣ್ಣದ ಬಾಲದಿಂದಕಂ | ಗೊಳಿಸುವ ಕುದುರೆಯನಾಯ್ದು ||೨೭||

ತಂದುವಿಧ್ಯುಕ್ತ ಪೂಜೆಯ ಮಾಡಿ ಯಜಮಾನ | ನಂದು ತನ್ನಗ್ಗಳಿಕೆಯನು |
ಒಂದು ಸುವರ್ಣಲೇಖನದಲ್ಲಿ ಬರೆದು ತಾಂ | ಬಂಧಿಸಿ ಕೂಡೆಬಿಟ್ಟಪುದು     ||೨೮||

ತಿರುಗಿವತ್ಸರವೊಂದು ಬರುವನಿತರಲಿ ತ | ತ್ತುರಗವ ಕಟ್ಟಿ ಕಾದುವರ |
ಅರಸುಮಕ್ಕಳ ಜೈಸಿ ಕಪ್ಪವ ಹೊರಿಸಿ ಹಿಂ | ತಿರುಗಿಬಪ್ಪುದು ಬಲ್ಲಭಟರು   ||೨೯||

ವಾರ್ಧಕ
ಮತ್ತೆ ಋತ್ವಿಜರ ಮತವೆತ್ತುವೇದೋಕ್ತದಿಂ |
ಬಿತ್ತರಿಸಿಯಾಗವಂ ಧರಣಿಸುರಗಣವನಿ |
ಪ್ಪತ್ತುಸಾವಿರವನರ್ಚಿಸಿ ಗೋಸಹಸ್ರಂಗಳಂ ಮುತ್ತು ರತ್ನಂಗಳಂ ||
ಪ್ರತ್ಯಪ್ರತ್ಯೇಕದಿಂದವರ್ಗೆ ಕೊಡುವದು ತಾನೆ |
ವಸ್ತ್ರಗಂಧಾದಿ ಭೂಷಿತನಾಗಿ ತನ್ನಸತಿ |
ಯೊತ್ತಿನಿಂ ಮಲಗಿ ಕಾಮೇಚ್ಛೆಯಂ ಮರೆವುದಾ ಜನ್ನ ಮುಗಿವನ್ನೆವರೆಗಂ    ||೩೦||

ಕಂದ
ಅಸಿಪತ್ರವ್ರತವಿದು ಪಾ |
ಲಿಸುವುದು ಹಯಮೇಧಯಾಗ ದೀಕ್ಷಾಬದ್ಧಂ ||
ವಸುಧಾಧಿಪ ಕೇಳ್ದೈಸಂ |
ತಸಮಾದುದೆ ಮಾಡೆನಲ್ಕೆ ಧರ್ಮಜನೆಂದಂ  ||೩೧||

ರಾಗ ಸುರುಟಿ ಏಕತಾಳ
ಸಾಧು ಜನವರೇಣ್ಯ | ಪರಹಿತ | ಸಾಧನಾಗ್ರಗಣ್ಯ ||
ಮೋದವಾಯ್ತು ಹಯಮೇಧವ ಕೈಕೊಂ |
ಡಾಧರಿಸುವ ಪು | ಣ್ಯೋದಯವೆಂತುಟೊ || ಸಾಧು ||  ||೩೨||

ನೊಂದರುಬಹುದಿವಸ | ಸಹಭವ | ರಿಂದಾಗದು ಕೆಲಸ |
ತಂದಪುದೆಲ್ಲಿಂದೆಂದರಿಯೆನು ನೀ |
ವೆಂದ ಸುಲಕ್ಷಣದಿಂದಿಹತುರಗವ || ಸಾಧು || ||೩೩||

ಧನವಿರದೆನುವಂತು | ಶ್ರೀಹರಿ | ಗೆನದೆ ಮಾಳ್ಪುದೆಂತು |
ಎನಗಿದರೊಳು ಸಂ | ಜನಿಸದುದೃಢಮನ |
ವೆನೆ ಪುನರಪಿಯಾ ಮುನಿಯಿಂತೆಂದನು || ಸಾಧು ||    ||೩೪||

ವಾರ್ಧಕ
ಮರುಗಲೇಕೈ ಭೂಪ ಮರುತರಾಜಂ ಹಿಂದೆ |
ತುರಗಾಧ್ವರಂಗೈದು ತೆತ್ತ ಹೊನ್ನಿನ ಹೊರೆಯ |
ಹೊರಲಾರದಿಡಿಕಿಹರು ಹಿಮಗಿರಿಯೊಳಿಹುದದಂತರಿಸು ಭದ್ರಾವತಿಯೊಳು ||
ತುರಗಮಿಪ್ಪುದು ನಿನಗೆ ಶೌರ್ಯಮಿರೆ ದೊರೆಕೊಳದೆ
ಪರಮಸಂಪ್ರೀತಿಯಿಂ ನಿಮ್ಮೈವರಂ ಪೊರೆವ
ಕರುಣನಿಧಿ ಬಾರನೇ ಬರಿದೇಕೆ ಯೋಚನೆಗಳೆಂದಡವನಿಂತೆಂದನೂ        ||೩೫||

ರಾಗ ಆನಂದಭೈರವಿ ಅಷ್ಟತಾಳ
ಚೆಂದವಾಯ್ತು ನಿಮ್ಮ ಮಾತು | ಬಂಧು ಹತ್ಯದಿಂದ ಸೋತು |
ಬೆಂದರೆನಗೆ ಪಾರ್ವರೊಡವೆಯ ||
ತಂದು ಮಾಡಲು ಮದ್ದುಗುಣಿಕೆ | ತಿಂದ ಮರುಳನ ಮುದ್ದಿನೆಣಿಕೆ |
ಯಂದವಾಗದೆ ಪೋಗದಿನ್ನೇನು       ||೩೬||

ಎಷ್ಟಪೇಳ್ದರ್ ನೀರ ಹೋಮ | ಕ್ಕಿಟ್ಟೆಯಲ್ಲಯ್ ಸುಗುಣಧಾಮ |
ಸೃಷ್ಟಿ ಸರ್ವವಿದಾರದೆಂದರಿವೇ ||
ಕೊಟ್ಟ ಕಶ್ಯಪ ಮುನಿಗೆ ಭಾರ್ಗವ | ಮೆಟ್ಟಿನಿಲುವರೆ ಬೇರೆ ಮಾರ್ಗವ |
ಕಟ್ಟಿಕೊಂಡೆಯ ಸಾಕು ಸಂದೇಹ      ||೩೭||

ಕಂದ
ವಸುಧಾಗತಧನಕೆಂದುಂ |
ವಸುಂಧರಾನಾಥರೊಡೆಯರದರಿಂ ಪೇಳ್ದಾ |
ವಸುವಂತಂದುಜ್ಜುಗಿಸೆನೆ |
ನಸುನಗೆಯಿಂ ಭೀಮಸೇನ ನೃಪತಿಯೊಳೆಂದಂ                      ||೩೮||

ರಾಗ ನಾದನಾಮಕ್ರಿಯೆ ಅಷ್ಟತಾಳ
ತಡವೇತಕಿನ್ನಗ್ರಜಾತನೆ | ನಂಬಿ | ನಡೆವುದೈಸಲೆ ಮುನಿ ಮಾತನೆ ||
ನೆಡುವ ಜಾಗವ ಯಜ್ಞ ಸ್ತಂಭಕ್ಕೆ | ನೋಡಿ | ಕೊಡಿಸಪ್ಪಣೆಯ ಕಾರ್ಯಾರಂಭಕ್ಕೆ      ||೩೯||

ಆರಿವರಿಂದ ಸನಾಮರು | ಧರ್ಮ | ಸಾರವ ಬಲ್ಲ ನಿಷ್ಕಾಮರು ||
ಬೇರೆ ಯೋಚನೆ ಬೇಡ ಮನದಲ್ಲಿ | ರಾಕ್ಷ | ಸಾರಿಯ ಕೃಪೆಯಾಗದಿರದಿಲ್ಲಿ  ||೪೦||

ಹೊಕ್ಕು ಭದ್ರಾವತಿ ನಗರವ | ಮುರಿ | ದಿಕ್ಕಿ ಮಾರ್ಮಲೆತರ ಗರ್ವವ ||
ತೆಕ್ಕೊಂಡು ಕುದುರೆಯ ಬಹೆ ನೋಡು | ಮುನಿ | ಮುಕ್ಕಣ್ಣನಿವನಾಣೆ ಮನಮಾಡು   ||೪೧||

ಭಲರೆ ಭಾಪುರೆ ಭಾಪು ಮಾರುತಿ | ಸೋಮ | ಕುಲಕೆ ನಿನ್ನಿಂದಲೆ ಕೀರುತಿ ||
ಛಲದಂಕ ನೀನಲ್ಲದಾರುಂಟು | ರಟ್ಟೆ | ಬಲಿತೊಡನ್ಯರ್ಗೇನು ಫಲಮುಂಟು            ||೪೨||

ಕಂದ
ಈ ತೆರದಿಂ ಭೀಮನ ಗುಣ |
ರೀತಿಯ ಪೊಗಳಲ್ಕೆ ಮುನಿಪನತಿ ಸಂಭ್ರಮದಿಂ |
ದಾ ತಾಪಸ ಮುಖ್ಯರ ವೃಷ |
ಕೇತಂ ಪದಕೆರಗಿ ಧರ್ಮಜಾತನೊಳೆಂದಂ     ||೪೩||

ರಾಗ ಭೈರವಿ ಅಷ್ಟತಾಳ
ಕಿರಿಯಪ್ಪ ಲಾಲಿಸಿತ್ತ | ಬಿನ್ನಪವನ್ನು | ಮರುತ ಜಾತನ ಕೂಡುತ್ತಾ ||
ತೆರಳುವೆ ತುರಗವ | ತರಲೆನಗಪ್ಪಣೆ | ಕರುಣಿಸಿ ಕಳುಹೆಂದನು  ||೪೪||

ರಾಗ ಕೇದಾರಗೌಳ ಅಷ್ಟತಾಳ
ಮಗನೆ ಮೆಚ್ಚಿದೆ ನಿನ್ನ ಪೌರುಷ ಪಂಥ ಪಾ | ಡಿಗೆ ತಕ್ಕ ನುಡಿದುದಕ್ಕೆ |
ಹಗೆಗಳೊಳಿದಿರಾಗಿ ಪೋಗಿ ಕಾದಾಡುವ | ಬಗೆಗಾಜ್ಞೆಗೊಡೆನಿದಕ್ಕೆ            ||೪೫||

ರಾಗ ಭೈರವಿ ಅಷ್ಟತಾಳ
ಅಂದರಿದೇನು ತಾತ | ಸುಮ್ಮನೆ ನುಡಿ | ಯಿಂದ ಪೇಳಿದರೆ ಮಾತ ||
ನಿಂದು ಹೊದಾಡಿ ಕ | ಯ್ಯಿಂದ ತೋರಿಸದಿರೆ | ಹಂದೆಯೆನ್ನರೆ ಲೋಕದಿ    ||೪೬||

ರಾಗ ಕೇದಾರಗೌಳ ಅಷ್ಟತಾಳ
ಪಂಥವಿದ್ದರೆ ಕಾರ್ಯದಂತರವರಿತು ತ | ಕ್ಕಂತೆ ವರ್ತಿಸದಿದ್ದರೆ |
ಎಂತಾಯ್ತು ನೋಡು ನೀನೇ ನಾವು ನಿನ್ನಯ್ಯ | ಕೌಂತೇಯನನುಕೊಂದುದ          ||೪೭||

ರಾಗ ಭೈರವಿ ಅಷ್ಟತಾಳ
ಅದು ನಿಮ್ಮ ದೋಷವೆಂತು | ತಾತಗೆ ತ್ಯಾಗ | ವಿಧಿಯೆ ಸಾವಾಗಿ ಸಂತು |
ಒದಗದಿದ್ದರೆ ನಿಮ್ಮ | ಭ್ಯುದಯ ಕಾರ್ಯದಿ ಮತ್ತೆ | ನ್ನಧಟ ತೋರಿಸುವದೆಂತು       ||೪೮||

ರಾಗ ಕೇದಾರಗೌಳ ಅಷ್ಟತಾಳ
ಅಣುಗ ಸಣ್ಣವ ಯುದ್ಧಾಂಗಣದಿ ನೀ ಪಟುಭಟ | ರಣಕದಿಗೆಲುವೆನೆಂಬ ||
ಎಣಿಕೆಯಬಿಡು ಬಂದು ಹೆಣಗುವ ರಿಪುಗಳು | ತೃಣಕೆ ಲೆಕ್ಕಿಸರು ನಿನ್ನ        ||೪೯||

ರಾಗ ಭೈರವಿ ಅಷ್ಟತಾಳ
ಮಾಡಾಶೀರ್ವಾದವನ್ನು | ವಾಯುಜನೊಡ | ಗೂಡಿ ಪೋಗೆಂದು ನೀನು ||
ನೋಡಾಮೇಲೆನ್ನ ಕೈ | ವಾಡವಾಂತರ ಹೊಡೆ | ದೋಡಿಸಿಬಹೆನು ಬದ್ಧಾ  ||೫೦||

ಭಾಮಿನಿ
ಧುರದೊಳರಿತಿಂಥಿಣಿಯ ಸತ್ವದೊ |
ಳಿರಿದಿರಿದು ಕಲಿಯವ್ವನಾಶ್ವನ |
ಪರಿಭವಿಸದಿರೆ ದಿನಕರನ ಸಂಜಾತನಾತ್ಮಜನೇ ||
ಪರಸಿಕಳುಹೆಂಬನಿತರಲಿ ಸಂ |
ಗರ ಭಯಂಕರ ವರ ಘಟೋತ್ಕಚ |
ತರಳತಲೆವಾಗುತ್ತ ಭೂಪೋತ್ತಮನೊಳಿಂತೆಂದ         ||೫೧||

ರಾಗ ಭೈರವಿ ಏಕತಾಳ
ಅಜ್ಜನೆ ಕೊಡಿಸನುಮತಿಯ | ಎ | ನ್ನಜ್ಜನ ಪಯಣದಿ ಜತೆಯ ||
ಉಜ್ಜುಗಿಸಿಹೆ ಘೋಟಕವ | ತಹ | ಕಜ್ಜದೊಳಿಹ ನಾಟಕವ           ||೫೨||

ಅರ್ಗಳರೇಕಾದಿರಲಿ | ಸುರ | ವರ್ಗಾಧಿಪರೈತರಲಿ ||
ಮೂರ್ಗಣ್ಣನ ದಯದಿಂದ | ನ | ಮ್ಮೂರ್ಗೆಳೆತಹೆ ಭರದಿಂದ        ||೫೩||

ಪಾತಾಳದೊಳವಿತಿಡಲೀ | ಫಣಿ | ನಾಥನೆ ಬೆಂಬಲಗುಡಲೀ ||
ಆ ತುರಗವ ಪಿಡಿತಂದು | ಕೊಡು | ವಾತನೆ ನಾಂಬಳಿ ಸಂದು    ||೫೪||

ಭಾಮಿನಿ
ನೋಡಿಮುನಿ ಹಿಗ್ಗಿದನು ಮನದಲಿ |
ಮಾಡುತುರಗಾಧ್ವರವ ಸಂಶಯ |
ಬೇಡ ತಾನೇ ನಡೆವುದಿನ್ನೀ ಕಾರ್ಯ ಶೀಘ್ರದಲಿ ||
ಕೂಡಿ ಬಪ್ಪುದು ಹರಿಯ ದಯವೆಂ |
ದಾಡಿ ನೃಪತಿಯ ಪರಸಿ ನಡೆದನು |
ಮೂಡಿದಿನ ಪಡುಗಡಲ ತಡಿಯೆಡೆಗೈದನಭ್ರದಲಿ         ||೫೫||

ವಾರ್ಧಕ
ನಡೆದ ಮುನಿಯತ್ತ ಸಂಧ್ಯಾಸಮಯದೊಳಗಿತ್ತ |
ಪೊಡವೀಶ ನಿತ್ಯ ವಿಧಿಯಂ ತೀರ್ಚಿ ಚಿತ್ತದೊಳ |
ಗಡಿಗಡಿಗೆ ಯಾಗಮಂ ಮಾಡಲಾಪನೆ ಮಾಡಲಾರೆನೇ ನಿಜದೀಕ್ಷೆಯಂ ||
ಹಿಡಿವೆನೇ ಬಿಡುವೆನೇ ತಾನೆಂದು ಚಿಂತಿಸುತ |
ಜಡಜೇಕ್ಷಣನೆ ಜಗದ್ರಕ್ಷಕನೆ ಲೋಕಮಂ |
ನಡೆಸುವಾತನೆ ಕೃಷ್ಣ ನಿನ್ನಿಷ್ಟದಂತಾಗಲೆಂದು ಧ್ಯಾನಿಸುತಿರ್ದನು            ||೫೬||

ರಾಗ ಕೇದಾರಗೌಳ ಝಂಪೆತಾಳ
ಅನಿತರೊಳಗೋರ್ವ ಚರನು | ನಡೆತಂದು | ಜನಪತಿಯೊಳಿಂತೆಂದನು ||
ದನುಜರಿಪು ದಯವದೋರಿ | ಇತ್ತಲರ | ಮನೆಗಾಗಿ ಬಹನು ಶೌರಿ           ||೫೭||

ಬಂದನಚ್ಯುತನೆಂಬುದಾ | ಕೇಳಿ ನಡೆ | ತಂದನತಿವಿಭವದಿಂದ ||
ನಿಂದಿದಿರ್ಗೊಂಡು ಮಣಿದು | ಹರಿಯ ಕರ | ತಂದು ಸಂತಸದಿ ಕುಣಿದು     ||೫೮||

ಹರಿವಿಷ್ಟರವನೇರಿಸಿ | ಕಾಲ್ದೊಳೆದು | ಭರಿತಭಾವದೊಳರ್ಚಿಸೀ ||
ಚರಣತೀರ್ಥವ ಸೇವಿಸೀ | ನುತಿಸಿದರು | ಸರುವರೊಂದಾಗಿ ನಮಿಸೀ      ||೫೯||

ಜಯಜಯ ಜಗನ್ನಿವಾಸಾ | ಲಕ್ಷ್ಮೀಶ | ಜಯಜಯತು ಪೀತವಾಸಾ ||
ಭಯಹರಣ ಪುಣ್ಯಚರಿತಾ | ರಕ್ಷಿಸ | ಕ್ಷಯಮಹಿಮ ಸುಗುಣಭರಿತ            ||೬೦||

ಇಂತೈವರೇಕಮನದೀ | ಪೊಗಳುತಿರೆ | ಕಂತುಪಿತನವರ ದಯದೀ ||
ಸಂತಸಂಗೊಳಿಸಿ ಪರಸಿ | ಪೇಳ್ದ ಭೂ | ಕಾಂತನೊಳು ಪ್ರೀತಿವೆರಸೀ        ||೬೧||