(ಮೊದಲನೆಯ ಸಂಧಿ : ಕೀಚಕವಧೆ)

ಕಂದ

ಶ್ರೀಲಕ್ಷ್ಮೀಕಾಂತಂ ವನ |
ಮಾಲಾ ವೃಂದಾರಕೇಂದ್ರವಂದಿತಪಾದಂ ||
ಬಾಲಾರ್ಕಾಮಿತಭಾಸಂ |
ನೀಲನಿಭಾಂಗಂ ಕಟಾಕ್ಷದಿಂ ಪೊರೆಗೆಮ್ಮಂ || || ೧ ||

ರಾಗ ಸಾವೇರಿ ಆದಿತಾಳ

ಜಯ ಜಯ ಜಯ ಜಯ ಗಜವಕ್ತ್ರ | ಜಯ ಜಯ ಕಮಲಜ ನುತಿಪಾತ್ರ || ೨ ||
ಪರಶುಪಾಶಾಂಕುಶಧರ ಪನ್ನಗಭೂಷ | ಶರಣಾಗತಪೋಷ ತರಣಿಪ್ರಭಾಸ || ೩ ||
ಕರುಣಾಕರ ಗುಣಶರಧಿಗಂಭೀರ | ಪುರಹರವರಪುತ್ರ ಮುರಹರಮಿತ್ರ || ೪ |

ವಾರ್ಧಕ

ಹರನಂ ಭಜಕಪಾಲನಂ ಕಾಲಕಾಲನಂ |
ಗಿರಿಸಂಭವಾಲೋಲನಂ ರುಂಡ ಮಾಲನಂ |
ವರ ಗಜಾಜಿನಚೇಲನಂ ಧೃತಕಪಾಲನಂ ಈಶನಂ ಫಣಿಭೂಷನಂ ||
ದುರುಳದಾನವಭಂಗನಂ ವೃಷತುರಂಗನಂ |
ನಿರತ ಸುಜನರ ಸಂಗನಂ ವಿಧೃತ ಗಂಗನಂ |
ಪರಮಕರುಣಾಪಾಂಗನಂ ಮಹಾಲಿಂಗನಂ ಸ್ಮರಿಸುವೆಂ ಮನ್ಮನದೊಳುಂ || ೫ ||

ಭಾಮಿನಿ

ಗಿರಿಜೆ ಸಿರಿ ಸರಸ್ವತಿಯರಂಘ್ರಿಗೆ |
ಪರಮಭಕ್ತಿಗಳಿಂದ ನಮಿಸುತ |
ಸುರಪ ಮುಖ್ಯಾಮರರಿಗೆರಗುತ ಕವಿಗಳಂ ನೆನೆದು ||
ಗುರುವಿನಡಿದಾವರೆಗೆ ವಂದಿಸಿ |
ವರಮಹಾಭಾರತಪುರಾಣದೊ |
ಳೊರೆವೆ ಧರೆಗೆ ವಿರಾಟಪರ್ವವ ಯಕ್ಷಗಾನದಲಿ || || ೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಜನಪ ಜನಮೇಜಯಗೆ ತೋಷದಿ | ಮುನಿಪ ವೈಶಂಪಾಯ ಭಾರತ |
ಘನ ಕಥಾಸಾರವನು ಪೇಳ್ತಿರೆ | ವಿನಯದಿಂದ || ೭ ||

ಋಷಿತಿಲಕಗೆಂದನು ಧರಾಧಿಪ | ಅಸಮ ಬಲ ಪಾಂಡವರು ತಮ್ಮಯ |
ಪೆಸರನಡಗಿಸಿ ಗುಪಿತ ವಾಸದೊ | ಳೆಸೆದರೆಂತು || ೮ ||

ದುರುಳ ಕೀಚಕನೆಂಬ ಖಳ ಯಮ | ಪುರಕೆ ತೆರಳಿದನೆಂದೆ ಭೀಮನ |
ಕರಹತಿಯೊಳೆಂತವ ಮಡಿದನೆನ | ಗೊರೆವುದಾರ್ಯ || ೯ ||

ಎನಲು ಕೇಳುತ ನೃಪನ ವಚನಕೆ | ಮನದಿ ಸಂತಸವೆತ್ತು ಯತಿಪತಿ |
ವನಧಿಶಯನನ ಪಾದಕಮಲವ | ನೆನೆದುಸಿರ್ದ || ೧೦ ||

ವಾರ್ಧಕ

ಧರಣಿಪಾಗ್ರಣಿ ಪರೀಕ್ಷಿತಜಾತ ಲಾಲಿಸೈ |
ಧರೆಯನುಂ ದ್ಯೂತಮುಖದಿಂ ಸೋತು ಪಾಂಡವರು |
ತರುಣಿ ದ್ರೌಪದಿ ಸಹಿತಮಾರಣ್ಯವಾಸಮಂ ಕಳೆದುಮವನೀಸುರರನು ||
ಮರಳಿ ನೀವೆಂದೆನುತಲನುಜರಂ ಸಹಿತಲಾ |
ತರಣಿಜಸುತಂ ಮರುತಸಖಗೆ ಬಲವಂದೆರಗಿ |
ಹರಿಯನುಂ ಮನದೊಳಗೆ ಧ್ಯಾನಿಸುತಲೊಂದು ವಟಕುಜದ ನೆಳಲಂ ಸಾರ್ದರು || ೧೧ ||

ಕಂದ

ಇಂತಾ ವಟಕುಜದೆಡೆಯೊಳ್ |
ಕೌಂತೇಯಂನಿಂದು ಮನದೊಳಾಲೋಚಿಸುತಂ |
ತಾಂ ತವಕದೊಳನುಜರನುಂ |
ಚಿಂತೆಯೊಳಂ ಕರೆದುಸಿರ್ದ ನಮ್ರತೆಯಿಂದಂ || ೧೨ ||

ರಾಗ ನೀಲಾಂಬರಿ ರೂಪಕತಾಳ

ಅನುಜಾತರಿರ ಕೇಳಿ ವನವಾಸದವಧಿಗೆ | ದಿನ ಸಂದುದೀ ನೆಲೆಗಿನ್ನು |
ಮನುಜರರಿಯದಂತೆ ಗುಪಿತದೊಳಿರುವರೆ | ಮನೆಯೆಲ್ಲಿ ದೊರಕೊಂಬುದೆಮಗೆ || ೧೩ ||

ಎಲ್ಲಿ ನೋಡಿದಡಾ ಕೌರವಗಂಜಿ ನಡೆವವ | ರಲ್ಲದಿಲ್ಲವನಿಪರೊಳಗೆ |
ಇಲ್ಲ ನಮಗಿಹರೆ ಠಾವೆನೆ ಕೇಳಿ ಪಾರ್ಥ ತಾ | ಮೆಲ್ಲನೆ ಪೇಳ್ದನಗ್ರಜಗೆ || ೧೪ ||

ಅಣ್ಣ ಚಿಂತಿಪುದೇಕೆ ರಣರಂಗದೊಳಗಗ್ರ | ಗಣ್ಯನಾಗಿಹನು ಕೀಚಕನು |
ಕಣ್ಣೆತ್ತಿ ನೋಡರಾ ಕಡೆಯ ಕೌರವರಲ್ಲಿ | ಮಿಣ್ಣನಿರುವ ಒಂದು ವರುಷ || ೧೫ ||

ಕುರುಪತಿಯನು ಮಿಕ್ಕ ಭಟನು ಕೀಚಕನಾತ | ನಿರುವ ಕಾರಣ ಮತ್ಸ್ಯಭೂಪ |
ತರಣಿಜಾದಿಗಳಿಂಗೆ ಬೆದರ ನಾವೀಗಲ್ಲಿ | ಮರೆಯಿಂದ ಕಳೆವ ವತ್ಸರವ || ೧೬ ||

ಭಾಮಿನಿ

ಅರಸ ಕೇಳೈ ಪಾರ್ಥನೆಂದುದ |
ಧರಣಿಪತಿ ಕೇಳುತ್ತ ಮನ ನಿ |
ರ್ಧರಿಸಿದನು ಪಶ್ಚಿಮದಿ ನಿರ್ಭಯವಾಹುದೆಂಬುದನು ||
ವರುಷವೊಂದನು ಗುಪಿತದಿಂದಾ |
ಚರಿಸುವೆವು ಎಂದೆನುತ ಮನದಲಿ |
ಮರುಗಿ ಮಾರುತ್ತರವ ಕಾಣದೆ ಪೇಳ್ದನವರೊಡನೆ || ೧೭ ||

ರಾಗ ಯರಕಲ ಕಾಂಭೋಜಿ ಝಂಪೆತಾಳ

ಕೇಳಿರನುಜಾತರಿರ ಪೇಳ್ವೆ ನಾನೆಂತು | ಕೀಳುವಲರೊಳು ಸೇವಿಸುವ ಕಾಲಬಂತು  || ಪ ||

ಪಿರಿದಾಗಿ ಬಳಲಿದಿರಿ ವನದೊಳಗೆ ಹನ್ನೆರಡು | ವರುಷವೆನ್ನೊಡನೆ ಬಲು ಬಗೆಯಿಂದಲಿ |
ಧರೆಯೊಳೆನ್ನಂಥ ಪಾಪಿಗಳ್ಯಾರು ನಿಮಗಿನ್ನು | ಪರ ಸೇವೆಯನು ಮಾಡಿರೆಂಬೆ ನಾನೆಂತು || ೧೮ ||

ರಾಯ ಚಿಂತಿಪುದೇಕೆ ಬೇರುಂಟೆ ಮತವೆಮಗೆ | ಛಾಯೆಯೈಸಲೆ ನಿಮ್ಮ ಕಾಯಕಾವು ||
ಜೀಯ ನೀವ್ಯಾವ ವೇಷದಿ ಇರುವಿರೆಂಬೀ ಉ | ಪಾಯವನು ಪೇಳ್ದೆಮ್ಮ ಕರುಣದಿಂ ಸಲಹೈ || ೧೯ ||

ರಾಗ ಕೇದಾರಗೌಳ ಅಷ್ಟತಾಳ

ಎಂದ ಮಾತನು ಕೇಳುತಂದು ಮನದಿ ಧರ್ಮ | ನಂದನ ದುಗುಡದಿಂದ |
ಇಂದು ನಾ ಭೂಸುರವೇಷದೊಳಿಹೆ ಕಂಕ | ನೆಂದು ಪೆಸರು ತನಗೆ || ೨೦ ||

ಎನಲಾ ಮಾತನು ಕೇಳುತನಿಲಸಂಭವ ಬಾಣ | ಸಿನ ಮನೆ ಸ್ಥಿರವೆನಗೆ |
ಜನರಿಗೆ ವಲಲನೆಂದೆನಿಪ ನಾಮದೊಳಿರ್ಪೆ | ನೆನೆ ಪಾರ್ಥನಿಂತೆಂದನು || ೨೧ ||

ಎನಗಮರಾವತಿಯೊಳಗಾದ ಕೊರತೆಯುಂ | ಟನುಕರಿಸುವೆನದರ |
ಜನಪಾಲಾಗ್ರಣಿ ನಿನ್ನ ಸತ್ಯವಿದ್ದರೆ ಗೆಲ್ವೆ | ನೆನೆ ಯಮಳರು ಪೇಳ್ದರು || ೨೨ ||

ಪಶುರಕ್ಷೆ ಹಯದ ಪಾಲನೆಯೊಳಿರುವೆವೆನು | ತುಸಿರಲು ದ್ರುಪದಜೆಯು |
ಎಸೆದಿರ್ಪೆ ಸೈರಂಧ್ರಿ ವೇಷದೊಳೆನೆ ಕೇಳು | ತಸಮ ಸಾಹಸರೈವರು  || ೨೩ ||

ಮಡದಿಯನೊಡಗೊಂಡು ಪಶ್ಚಿಮಮುಖವಾಗಿ | ನಡೆತಂದು ಮತ್ಸ್ಯೇಶನ |
ಪೊಡವಿಯ ಕಂಡೊಂದು ವನಕೆ ಬಂದಚ್ಯುತ | ನಡಿಯ ಧ್ಯಾನಿಸಿ ನಿಂದರು ||೨೪||

ರಾಗ ಸಾಂಗತ್ಯ ರೂಪಕತಾಳ

ಧನುಶರಾಯುಧಗಳ ವರ ಬನ್ನಿಮರಕಾಗ | ಮನುಜರು ತಿಳಿಯದಂದದಲಿ |
ಹೆಣನಾಕಾರದಲಿ ಚರ್ಮದಿ ಸುತ್ತಿ ಬಿಗಿದು ಜ | ನ್ನುಣಿಯರ್ಗೆ ನಮಿಸಿ ಧರ್ಮಜನು || ೨೫ ||

ಗುಪಿತದೊಳಿಹೆವೊಂದು ವರುಷದ ಪರಿಯಂತ | ಕಪಟದಿಂದಾರ್ ಮುಟ್ಟದಂತೆ |
ಕೃಪೆಯಿಂದ ಕಾಯ್ದು ರಕ್ಷಿಸಬೇಕು ನೀವೆಂದು | ನೃಪತಿ ಪೇಳಿದ ಕೈಯ ಮುಗಿದು || ೨೬ ||

ಅವಧಿಯೊಳಗೆ ಪಾರ್ಥ ಬಂದೊರ್ವ ಕೇಳಿದ | ರವಗೀವುದಲ್ಲದೆ ಬೇರೆ |
ಪವನಸಂಭವ ಮೂರ್ಖನಾತಗೀಯದಿರೆಂದು | ಅವನೀಶನಮರರ್ಗೆ ಮಣಿದ || ೨೭ ||

ಕಂದ

ಭೂಮಿಪನೆಂದೀ ಪರಿಯಲಿ |
ಈ ಮಾರುತಸುತಗೀಯದಿರೆನಲುಂ ಕೇಳ್ದಾ ||
ಭೀಮಂ ತಾ ಲಯದಂತ್ಯದ |
ಕಾಮಾರಿಯೆನಲ್ಕೆ ರೋಷದೊಳಗಿಂತೆಂದಂ || ೨೮ ||

ರಾಗ ಭೈರವಿ ಏಕತಾಳ

ಸೋದರರೊಳಗಾನಲ್ಲಾ | ದು | ರ್ಯೋಧನ ನಾನಾದೆನಲ್ಲಾ |
ಕಾದಿರಲೈ ಸುರಜಾಲ | ನಾ | ನೊಯ್ದರೆ ತಡೆಯಲಿ ಕಾಲ || ೨೯ ||

ಧರಣಿಯ ಕೊಡೆನೆಂದಿರಲಿ | ಪುರ | ಹರ ಕೈಯಿಕ್ಕದಿರೆನಲಿ |
ಕುರುಬಲವನು ಮುಂಗೊಂಡು | ಹೊಯ್ | ದೊರೆಸುವೆ ಕೈದುವ ಕೊಂಡು || ೩೦ ||

ಗದೆಯಿಂ ಕೌರವರೆದೆಯ | ಮುರಿ | ದೊದೆವೆನು ಉಳಿದವರ್ ಪಡೆಯ |
ಕದನದೊಳೆಂಬೀ ಮಾತ | ಕೇ | ಳಿದು ಪೇಳ್ದನು ಭೂನಾಥ || ೩೧ ||

ರಾಗ ಕೇದಾರಗೌಳ ಆದಿತಾಳ

ತಮ್ಮ ಬಾ ಬಾ ಕೋಪವಿದೇನು | ಒಮ್ಮೆ ಸೈರಿಸಿನ್ನು |
ಧರ್ಮ ಕೆಟ್ಟರೇನು ಸ್ವಾರ್ಥ | ನಮ್ಮ ಕಷ್ಟ ವ್ಯರ್ಥ || ೩೨ ||

ಅರಿಯದಾತನಲ್ಲ ನೀನು | ಮರೆಯ ಮಾತಿನ್ನೇನು |
ಮರುಳಾಟ ಸಾಕು ಬಾರೆಂದು | ಕರೆದಪ್ಪಿದನಂದು || ೩೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಭೀಮನನೊಡಬಡಿಸಿ ಶ್ರೀ | ಕಾಂತನನು ಧ್ಯಾನಿಸುತ ಧರ್ಮಜ |
ಸಂತಸದಿ ಸಂನ್ಯಾಸಿವೇಷವ | ನಾಂತು ನಡೆದ || ೩೪ ||

ಬಂದು ಮತ್ಸ್ಯನ ಪುರವರಕೆ ನಲ | ವಿಂದ ನಗರವನೀಕ್ಷಿಸುತಲ |
ಯ್ತಂದು ಬಾಗಿಲ ಚರರ ಕಂಡಿಂ | ತೆಂದನಾಗ || ೩೫ ||

ದ್ವಾರಪಾಲರು ಕೇಳಿ ನಿಮ್ಮಯ | ಭೂರಮಣನೊಳು ಪೇಳಿ ಭೂಸುರ |
ನೋರುವನು ಬಂದಿರುವನೆಂಬೀ | ವಾರತೆಯನು || ೩೬ ||

ಕಂದ

ಎನೆ ಕೇಳುತಲಾ ಚರನುಂ |
ಘನ ವೇಗದೊಳಯ್ದಿ ಭೂಪನನು ಕಾಣುತ್ತಂ ||
ಮನದೊಳ್ ನಸುಬೆದರುತಮಾ |
ಜನಪಾಲಾಗ್ರಣಿಗೆ ಕರವ ಮುಗಿದಿಂತೆಂದಂ || ೩೭ ||

ರಾಗ ಕಲ್ಯಾಣಿ ಅಷ್ಟತಾಳ

ಲಾಲಿಸು ಮತ್ಸ್ಯಭೂಪ | ಕೀರ್ತಿಕಲಾಪ | ಲಾಲಿಸು ಮತ್ಸ್ಯಭೂಪ   || ಪಲ್ಲವಿ ||

ಪುರವಲಯದೊಳೊರ್ವನು | ಕಾರಣಿಕ | ಪುರುಷ ಸಂನ್ಯಾಸಿ ತಾನು |
ಭರದಿಂದ ಬಂದು ನಿಂದಿರುವನಾತನಿಗೆ ನಾ | ನರುಹುವ ಮಾತೇನು | ಕರುಣಿಸು ಧೊರೆನೀನು     ||೩೮||

ಎನಲು ಕೇಳುತ ಮತ್ಸ್ಯನು | ಧಿಮ್ಮನೆ ಸಿಂಹಾ | ಸನದಿಂದಲೆದ್ದು ತಾನು |
ವಿನಯದೊಳಯ್ತಂದು ತದ್ವಿಪ್ರನಂಘ್ರಿಗೆ | ವಿನಮಿತನಾಗಿ ಭಕ್ತಿಯಲಿ  ಮನ್ನಿಸುತೆಂದ ||  ||೩೯||

ರಾಗ ಭೈರವಿ ಝಂಪೆತಾಳ

ಕರುಣಾಳು ನೀವೆಮ್ಮ | ಪುರಕೆ ಬಿಜಯಂ ಗೆಯ್ದ |
ಪರಿಯನರುಹೆನಲೆಂದ | ನರಸಗಾ ಪಾರ್ವ || ೪೦ ||

ಅವನಿಪತಿ ಕೇಳು ಪಾಂ | ಡವರ ಸೇರಿರ್ದೆ ನಾ |
ನವರಿಗಾಯ್ತಡವಿ ಮ | ತ್ತೆಮಗೆ ಸಂಚರಣೆ || ೪೧ ||

ದೊರಕಿತದರಿಂದಲೀ | ಪುರಕೆ ಬರವಾಯ್ತೆಮಗೆ |
ನರರು ಕಂಕನೆನುತ್ತ | ಕರೆವರೆನ್ನುವನು || ೪೨ ||

ಎನಲು ಕೇಳ್ದು ವಿರಾಟ | ಮನದಿ ಸಂತಸ ತಾಳ್ದು |
ಅನುಮಾನವೇನೆನ್ನ | ಮನೆಯೊಳಿಹುದೆಂದ || ೪೩ ||

ವಾರ್ಧಕ

ಇತ್ತಲುಂ ಧರ್ಮಜಂ ಕಂಕನೆಂದಿರುತಿರೆ ಮ |
ರುತ್ತಸುತನತ್ತಲುಂ ಬಾಣಸಿನ ಭವನದೊಳ್ |
ವರ್ತಿಸಿದನಾಚೆಯೊಳ್ ಪಾರ್ಥನರೆವೆಣ್ಣಾಗಿ ಸಾರ್ದಿರೆ ನೃಪಾಲಯವನು ||
ಮತ್ತೆ ನಕುಲಂ ಹಯದ ಪೋಷಣೆಯೊಳಿರ್ದನವ |
ನೊತ್ತಿನನುಜಂ ಪಶುಸಮೂಹ ರಕ್ಷಕನಾಗಿ |
ಮತ್ತಗಜಗಮನೆ ಸೈರಂಧ್ರಿ ವೇಷವನಾಂತುಮಯ್ತಂದಳೇಂ ಪೊಗಳ್ವೆನು || ೪೪ ||

ರಾಗ ದೇಶಿ ಅಷ್ಟತಾಳ

ಏನೆಂಬೆ ದ್ರುಪದಜೆಯ ಬರವನೀಗ |  ಮೀನಕೇತನನಾನೆಯಂದದಿ
ಮಾನಿನೀ ಮಣಿಬಂದಳು || ಏನೆಂಬೆ  || ೪೫ ||

ಕಡಗ ಕಂಕಣಗಳು ಝಣ ಝಣರೆನು | ತಡಿಯಿಡುವ ವೇಳೆಯಲಿ ನೂಪುರ |
ವಡಿಗಡಿಗೆ ಮೊಳಗುತ್ತಲೆ  || ಏನೆಂಬೆ  || ೪೬ ||

ಮಡದಿರನ್ನಳೆ ವಿಟರಕ್ಷಿಮೃಗವ ಪೊಂ | ಗೊಡಮೊಲೆಯ ಕೂರಂಬಿನೊಳಗಡ |
ಗೆಡಹುತೊಯ್ಯನೆ ಬಂದಳು || ಏನೆಂಬೆ  || ೪೭ ||

ವಾರ್ಧಕ

ಮಡದಿಯತಿ ವೇಗದಿಂ ತಡೆಯದನುರಾಗದಿಂ |
ನಡೆಯಲವಳಂ ಕಂಡು ನಲಿದು ಬೆಂಬಳಿಗೊಂಡು |
ನುಡಿಗೆ ಗಿಣಿ ಸೋಲ್ವುದಂ ನಡೆಗಂಚೆ ನಿಲ್ವುದಂ ಮೆಲ್ಲನಡಿಯಿಡುವ ಭರಕೆ ||
ಕೊಡಮೊಲೆಯು ಕುಣಿವುದಂ ನಡುವಳ್ಕಿ ದಣಿವುದಂ |
ಕುಡಿನೋಟದಂದಮಂ ಬಿಡುಮುಡಿಯ ಚಂದಮಂ |
ಬಿಡದೆ ಈಕ್ಷಿಪಜನರ್ ತಡೆದು ನಿಟ್ಟಿಪ ಮನರ್ ತಾವಾಗಿ ನೋಡುತಿರಲು || ೪೮ ||

ಕಂದ

ಇಂತಾ ದ್ರುಪದಜೆಯುಂ ನಲ |
ವಿಂ ತಾ ಸೈರಂಧ್ರಿವೇಷದಿಂದಯ್ತರಲಾ ||
ಕಾಂತೆಯನೀಕ್ಷಿಸಿ ಮತ್ಸ್ಯನ |
ಕಾಂತೆಯುಮತಿ ಹರುಷದಿ ಸಖಿಯರೊಳಿಂತೆಂದಳ್ || ೪೯ ||

ರಾಗ ಕಲ್ಯಾಣಿ ಅಷ್ಟತಾಳ

ಯಾರೆ ಬಂದವಳು | ನೀರೆ ನೀ ಕೇಳಿ | ನ್ನ್ಯಾರೆ ಬಂದವಳು |
ಮಾರನ ಮದದಾನೆಯಂತೆ ನೋಳ್ಪರ ಕಣ್ಗೆ |
ತೋರುತ್ತಲಿರುವ ಶೃಂಗಾರದ ಸತಿಯಿವಳ್ || ಯಾರೆ | || ೫೦ ||

ಸುರರ ಕನ್ನಿಕೆಯೊ ಮೇಣು | ಪನ್ನಗವಧುವೊ | ನರರೊಳಿನಿತು ರೂಪಳು |
ತರುಣಿಯರೊಳು ಕಾಣೆನಾದರಾಕೆಯನಿಲ್ಲಿ |
ಕರೆ ಕೇಳ್ವೆ ತಾನೆಲ್ಲಿ ಇರುವಳೆಂಬುದನೀಗ || ಯಾರೆ  || ೫೧ ||

ಆರ್ಯ, ಏಕತಾಳ

ಇಂತೆನೆ ಕೇಳ್ದತಿ ಸಂತಸದಿಂ ಸಖಿ | ತಾಂ ತತುಕ್ಷಣದೊಳಗಯ್ತಂದುಂ ||
ಕೌಂತೇಯರರಸಿಯ ತನ್ನರಸಿಯಳಾ | ಮುಂತೆ ನಿಲಿಸಲವಳಿಂತೆಂದಳ್ || ೫೨ ||

ರಾಗ ಯರಕಲ ಕಾಂಭೋಜಿ ಝಂಪೆತಾಳ

ತರುಣಿ ನೀನ್ಯಾರೆಂಬುದರುಹೆನ್ನೊಳು | ಹರಿಣಾಂಕವದನೆ ಕೋಮಲೆ ಕುಂದರದನೆ ||
ತರುಣಿ   || ಪಲ್ಲವಿ ||

ಜಲಜಾಕ್ಷಿ ನೀನಿರುವ ಸ್ಥಳವೆಲ್ಲಿ ವರನ್ಯಾರು |
ಮಲಿನ ವೃತ್ತಿಯಿದೇನು ಚೆಲುವೆ ನೀನು |
ಬಲು ಭರದೊಳಿಂದೆಮ್ಮ ನಿಲಯಕ್ಯಾತಕೆ ಬಂದೆ |
ತಿಳಿಯಪೇಳೆನಲೆಂದಳತಿ ಸೊಬಗಿನಿಂದ ||  || ೫೩ ||

ಅರಸಿ ಕೇಳ್ ಗಂಧರ್ವರುರುಬಲಾನ್ವಿತರೈವ |
ರಿರುತಿಹರು ಪತಿಗಳೆನ್ನಯ ಮನಕೆ ಖತಿಯ |
ಬರಿಸಿದುದರಿಂದಲವದಿರ ಬಿಡುವೆ ನಾನೊಂದು |
ವರುಷವೆಂದೆನುತ ಪಾಂಡವರ ಸತಿಯ ಸೇರ್ದೆ ||  || ೫೪ ||

ವನಿತೆ ಸಹಿತವರಿಗಾಯ್ತಡವಿಯದರಿಂದೆನಗೆ |
ಇರುವರೆ ಠಾವಿಲ್ಲದಿರೆ ಬಂದೆನೆನಲು |
ಮನದಿ ಹರುಷಿಸಿ ವಿಲಾಸಿನಿಯರೊಡನಿಹುದೆಂದು |
ಜನಪನರ್ಧಾಂಗಿಯವಳನು ಮನ್ನಿಸಿದಳು  || ೫೫ ||

ಭಾಮಿನಿ

ಅರಸ ಕೇಳಿಂತಾ ಮಹಾತ್ಮರಿ |
ಗಿರಲು ಘಟಿಸಿತು ಮತ್ಸ್ಯಭೂಪನ |
ಪುರದೊಳಿನ್ನುಳಿದವರ ಪಾಡೇನಂಬುಜಾಸನನ ||
ಬರಹವನು ತಾ ಮೀರ್ವೆನೆಂದರೆ |
ಪುರಹರಗೆ ತೀರದು ಕಣಾ ನೃಪ |
ವರರಿಗಾಯಿತು ಪರರ ಸೇವೆಯೊಳಿರುವ ದಿನವೆಂದ || ೫೬ ||

ಕಂದ

ಈ ಪರಿಯಿಂದಾ ಪಾಂಡವ |
ರಾಪುರದೊಳ್ ನಿಜವನೊರ್ವರರಿಯದ ತೆರದಿಂ ||
ರೂಪವನಡಗಿಸಿ ಕಳೆದರು
ಶ್ರೀಪತಿಯ ಕಟಾಕ್ಷದಿಂದ ದಶಮಾಸವನುಂ || ೫೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳೈ ನುಡಿದ ವರುಷಕೆ | ತೆರಳೆ ದಶಮಾಸಂಗಳೈವರ |
ತರುಣಿಗಾದಾಯಾಸವೇನೆಂ | ದೊರೆವೆ ನಾನು || ೫೮ ||

ಜನಪ ಮತ್ಸ್ಯೇಶ್ವರನ ಮಾನಿನಿ |  ಯನುಜ ಕೀಚಕನೆಂಬ ದುರುಳನು |
ಮನದೊಳಗ್ರಜೆಯನು ನಿರೀಕ್ಷಿಪ | ನೆನಹಿನಿಂದ || ೫೯ ||

ಒಂದು ದಿನ ಸೊಬಗಿಂದ ತನ್ನಯ | ಮಂದಿರವ ಪೊರಮಟ್ಟು ಘನಮದ |
ದಿಂದಲವನಯ್ತಂದನತುಳಾ | ನಂದದಿಂದ || ೬೦ ||

ತರುಣಿಯರ ಮಧ್ಯದಲಿ ಕುಳಿತಿಹ | ಹಿರಿಯಳನು ಕಂಡೆರಗಲುನುಜನ |
ಶಿರವ ನೆಗಹುತಲಪ್ಪಿ ಮುದ್ದಿಸಿ ಹರುಷದಿಂದ || ೬೧ ||

ತಮ್ಮ ಬಂದೈ ಕುಳಿರು ಬಾ ಬಾ | ರೆಮ್ಮ ಭಾಗ್ಯದ ಕಣಿಯೆ ಬಾರೆನೆ |
ಸುಮ್ಮುದದಿ ಮಂಡಿಸಿದನಾಕೆಯ | ಸಮ್ಮುಖದೊಳು || ೬೨ ||

ಭಾಮಿನಿ

ದುರುಳನಿಂತಗ್ರಜೆಯ ಕೆಲದಲಿ |
ಸುರುಚಿರಾಸನವೇರ್ದು ಕುಳಿತಾ |
ಧರಿಸಿ ನೋಡಿದನೊಯ್ಯನಬಲಾವಾರವನು ಬಳಿಕ ||
ಅರಸ ಕೇಳಾ ನಡುವೆ ರತುನದ |
ಸರದೊಳಿರ್ಪ ಶಿಖಾಮಣಿಯವೋಲ್ |
ಮೆರೆವ ದ್ರುಪದಾತ್ಮಜೆಯ ಕಾಣುತ ಮನದೊಳಿಂತೆಂದ || ೬೩ ||

ವಾರ್ಧಕ

ಸರಸಿರುಹನೇತ್ರದಿಂ ಕನಕಾಭಗಾತ್ರದಿಂ |
ಮಿರುಗುತಿಹ ನಾಸ್ಯದಿಂ ವಿಧುಮಂಡಲಾಸ್ಯದಿಂ |
ತರಣಿಸಂಕಾಶದಿಂ ಸೌಂದರ್ಯವೇಷದಿಂ ಮೌಕ್ತಿಕಾಭರಣದಿಂದ ||
ಮೆರೆದಿಹ ಕಪೋಲದಿಂದರ್ಧೇಂದುಫಾಲದಿಂ |
ಗುರುಪಯೋಧರಗಳಿಂದಲಕುತಿಹ ಸರಗಳಿಂ |
ಹರಿಯಕ್ಷಮಧ್ಯದಿಂ ವಿಟರಿಗತಿ ಜೋದ್ಯದಿಂದಿರುವಳಿವಳಾವ ಸತಿಯೊ || ೬೪ ||

ಕಂದ

ಇಂತಾ ದ್ರುಪದಾತ್ಮಜೆಯಂ |
ಸಂತಸದಿ ನೋಡಿ ದಣಿದವನತಿ ಭ್ರಮೆಯಿಂದಂ ||
ಕಂತುವಿಗಂಗವನೊಪ್ಪಿಸಿ |
ಸಂತಾಪದೊಳಳುತಗ್ರಜೆಯೊಡನಿಂತೆಂದಂ || ೬೫ ||

ರಾಗ ಕಾಂಭೋಜಿ ಝಂಪೆತಾಳ

ಸಹಜಾತೆ ಕೇಳು ಸತಿಯರ ನಡುವೆ ತಾರಾನಿ | ವಹದೊಳು ಶಶಾಂಕ ಮೆರೆವಂತೆ |
ಬಹಳ ಪ್ರಕಾಶದಿಂ ತೋರ್ಪಳೀ ಚೆಲುವಿಕೆಯು | ಮಹಿಯೊಳಿಲ್ಲಬಲೆಯರೊಳಿನಿತು || ೬೬ ||

ಮೂರು ಲೋಕದಿ ನೋಡಲೀ ರೂಪು ಸೌಂದರ್ಯ | ವ್ಯಾರಿಗುಂಟಮಮ ಸತಿಯರೊಳು |
ಮಾರನರಗಿಣಿಯಂತೆ ತೋರುವಳು ಕಣ್ಗೆ ಇವ | ಳ್ಯಾರೆಂಬುದರುಹಬೇಕೆನಗೆ || ೬೭ ||

ಆರಾದಡೇನವಳ ಪತಿಗಳು ಬಲಾಢ್ಯರತಿ | ವೀರ ಗಂಧರ್ವರುಗಳಿವಳು |
ಸೇರುವವಳಲ್ಲ ನೀ ಮರಳೆಂದು ಕಳುಹಿದಳು | ಮಾರಚೇಷ್ಟಿತನನ್ನು ಮನೆಗೆ || ೬೮ ||