ಭಾಮಿನಿ

ಎಲೆ ಪರೀಕ್ಷಿತಸೂನು ಕೇಳಾ |
ಖಳನು ಪೊರಟಯ್ತರುತ ಮನದಲಿ |
ಹಲವ ಹಂಬಲಿಸುತ್ತೆ ಬಂದನು ತನ್ನ ಮಂದಿರಕೆ ||
ಬಳಲಿದನು ಬಾಡಿದನು ರಾತ್ರಿಯ |
ಕಳೆವುಪಾಯವ ಕಾಣದಯ್ವರ |
ಲಲನೆಯನು ನೆನೆನೆನೆದು ಮರುಗಿದನುದಯ ಪರಿಯಂತ || ೬೯ ||

ಕಂದ

ಖಳನೀ ತೆರದಿಂ ನಿಶಿಯಂ |
ಕಳೆದುದಯದೊಳೆದ್ದುವಮಳನೀಕ್ಷಿಪ ಭರದಿಂ ||
ಘಳಿಲನೆ ಬರೆ ಸಹಜಾತೆಯ |
ನಿಳಯದ ಬಾಗಿಲೊಳ್ ಕಂಡನು ದ್ರುಪದಾತ್ಮಜೆಯಂ || ೭೦ ||

ರಾಗ ಭೈರವಿ ಝಂಪೆತಾಳ

ಕಂಡು ಸತಿಯಳ ಭ್ರಾಂತು | ಗೊಂಡು ಕಳವಳಿಸುತ್ತ |
ಚಂಡ ಭುಜಬಲನೆಂದ | ಲಂಡತನದಿಂದ || ೭೧ ||

ಎಲಗೆ ಸೈರಂಧ್ರಿ ನಿ | ಲ್ಲಳುಪಿದೆನು ನಿನಗೆ ಸ್ಮರ |
ನುಳಿಸನೆನ್ನನು ಬರಿದೆ | ಬಳಲಿಸದಿರಿನ್ನು || ೭೨ ||

ಸೋತು ಬಂದವನೊಡನೆ | ಮಾತನಾಡದೆ ಪೋಪು |
ದ್ಯಾತರ ಗುಣಾಂಶವಿದು | ನೀ ತಿಳಿಯದವಳೆ || ೭೩ ||

ಇನ್ನು ನಾ ನಿಲಲರಿಯೆ | ಎನ್ನ ಮೋಹದಿ ಕರೆಯೆ |
ತಿಣ್ಣ ಮೊಲೆಯಿಂದಿರಿಯೆ | ಚೆನ್ನಾಗಿ ನೆರೆಯೆ || ೭೪ ||

ಎಂದೆನಲು ಬೆದರುತ್ತ | ಮಂದಮತಿ ಈ ದುರುಳ |
ಮುಂದುವರಿವನೆನುತ್ತ | ನಿಂದು ಪೇಳಿದಳು || ೭೫ ||

ರಾಗ ಧನ್ಯಾಸಿ ಏಕತಾಳ

ಯಾಕೆಲೊ ನಿನಗಿಂಥ ಮಾತು | ಸಾಕೆನ್ನೊಡನಿನಿತು |
ಜೋಕೆಯಿಂದಲಯ್ದು ಮನೆಗೆ | ಕಾಕನಾಡದಿನಿತು || ೭೬ ||

ಪರನಾರಿಯರ್ಗಳುಪಿ ಯಮನಂ | ಡಲೆಗೆ ಸಿಲುಕಿ ವ್ಯರ್ಥ |
ನರಕದಲ್ಲಿ ಕ್ರಿಮಿಗಳಂತೆ | ಉರುಳ್ವುದೇನೊ ಸ್ವಾರ್ಥ || ೭೭ ||

ತರವಲ್ಲನ್ಯಸತಿಯರ್ಬೇಟೆ | ಕುಲಕೆ ಮೃತ್ಯುವ ತಾರದೆ |
ಮರುಳೆ ಸುಮ್ಮನೆ ತೆರೆಳು ಮನೆಗೆ | ಬರಿ ಬಯಲಾಸೆಯೊಳಿರದೆ || ೭೮ ||

ಸುಲಲಿತಾಂಗಿ ಎನ್ನೊಳಿನಿತು | ಕರುಣವಿಲ್ಲ ನಿನಗೆ |
ಲಲನೆ ನಿನ್ನ ಬಲೆಗೆ ಸಿಲುಕಿ | ಪೋಪೆನೆಂತು ಮನೆಗೆ || ೭೯ ||

ಮಲಯಜಗಂಧಿ ನಿನ್ನೊಡನೆ | ರಮಿಸದುಳಿಯೆನೈಸೆ |
ಚೆಲುವೆ ಜೀವದ ಮೇಲೆ ಸರಸ | ವೇನೆ ಚಂಪಕನಾಸೆ || ೮೦ ||

ಎಲೆ ಖೂಳ ಪ್ರಾಣವನ್ಯಾಕೆ | ಕಳಗೊಂಬೆಣಿಕೆ ಬೇಡ |
ಕೊಲುವರೆನ್ನ ಪತಿಗಳು ಕೇ | ಳಿದರೆ ನಿನ್ನ ಗಾಢ || ೮೧ ||

ಬಲು ಧೀರ ಗಂಧರ್ವರೈವ | ರುಗಳವರಾಯುಧಕೆ |
ತಲೆಯತೆರುವೆಯದು ಸಿದ್ಧ ಸಾ | ರಿದೆನು ಗಮಿಸಾಲಯಕೆ || ೮೨ ||

ತೆಗೆಯೆ ನಿನ್ನ ರಮಣರ್ ಗಿಮಣರ್ | ಬಗೆವನಲ್ಲ ನಾನು |
ಜಗದೊಳಧಿಕ ವೀರನೆಂಬುದ | ಸುಗುಣೆಯರಿಯೆ ನೀನು || ೮೩ ||

ಮೃಗಧರ ಮುನಿದೆಡೊಮ್ಮೆ | ನಿಲುವೆ ನಾನಾಹವಕೆ |
ಮುಗುಳಂಬನಾನೆ ನೀ ದಯದಿ | ತೋಷಬಡಿಸು ಮನಕೆ || ೮೪ ||

ದುರುಳ ಕೆಡಬೇಡೆಲವೊ ಜಗದೊ | ಳಿದಿರಿಲ್ಲೆಂಬೆ ನಿನಗೆ |
ಧುರದೊಳಧಿಕ  ಶೌರ್ಯರೆನ್ನ | ರಮಣರಾಹವದೊಳಗೆ || ೮೫ ||

ಹರಿ ಹರ ಬ್ರಹ್ಮೇಂದ್ರರನ್ನು | ಸರಕು ಮಾಡರು ನೀನು |
ಶಿರವನವರಿಗೀವೆ ತೃಣವ | ಮುರಿದು ಸಾರ್ದೆ ನಾನು || ೮೬ ||

ಎಲಗೆ ನೀರೆ ಮರುಳೆ ತಾನಾ | ರೆಂಬುದರಿಯೆ ಇನ್ನು |
ಬಲವೈರಿ ಮುಖ್ಯರನು ಗೆಲುವೆ | ಕಲಹದಲ್ಲಿ ನಾನು || ೮೭ ||

ಬಲವಿಹೀನರ್ ನಿನ್ನ ರಮಣರ್ | ಗಿಮಣರೆಲ್ಲಿ ತೋರು |
ಕೊಲುವೆನವರಂತಿರಲಿ ನಾ ಕೈ | ಮುಗಿವೆ ನೀ ದಯೆದೋರು || ೮೮ ||

ಭಾಮಿನಿ

ಭೂಪ ಕೇಳಾ ಖಳನ ವಚನವ |
ನಾ ಪತಿವ್ರತೆ ಕೇಳ್ದು ಬಿಡನೀ |
ಪಾಪಿ ತಾನಿಲ್ಲಿರುವುದನುಚಿತವೆಂದು ಪಿಂತಿರುಗಿ ||
ಪೋಪಳನು ಕಾಣುತ್ತ ಮದನನ |
ತಾಪಕಂಗವನಿತ್ತು ಬೆದೆಬೆಂ |
ದಾ ಪರಾಕ್ರಮಿ ಬಂದು ನಮಿಸಿದನಗ್ರಜೆಯ ಪದಕೆ | ||೮೯||

ಕಂದ

ಎರಗಿದ ಸಹಭವನಂ ಘನ |
ಹರುಷದಿ ಪಿಡಿದೆತ್ತುತಧಿಕ ಪ್ರೇಮದಿನಾಗಳ್ ||
ಪರಿಕಿಸಿ ಮುಖದಂಗವನುಂ |
ಸ್ಮರಶರಹತಿಯಿಂ ಬಳಲುವುದರಿದಿಂತೆಂದಳ್ || ೯೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಬಂದೈ ತಮ್ಮ ನುಡಿ ನಿ | ನ್ನಾನನದ ಸಿರಿ ಕುಂದಿದೇತಕೆ |
ಮಾನಿನಿಯ ಕೆಣಕಿದೆಯೊ ಬುದ್ಧಿವಿ | ಹೀನನಾಗಿ || ೯೧ ||

ಕುಲವ ಕೆಡಿಸಿದೆ ಪಾಪಿ ವ್ಯರ್ಥದಿ | ಗಳಿಸಿಕೊಂಡೆಯಧೋಗತಿಯ ಪರ |
ಲಲನೆಯರ ಬೇಟೆಯದು ಪುರುಷಗೆ | ಸಲುವುದೇನೈ || ೯೨ ||

ಆದುದಾಗಲಿ ನಿನ್ನ ಮನಕೆ ವಿ | ನೋದವಾದುದ ಪೇಳು ಕೇಳ್ವೆನು |
ಭೇದ ಬೇಡೆನಲುಸಿರ್ದ ವಿಗತಾ | ಮೋದನಾಗಿ || ೯೩ ||

ರಾಗ ಕೇದಾರಗೌಳ ಆದಿತಾಳ

ಅಕ್ಕ ಕೇಳೆಂಬುದಿನ್ನೇನು | ಮಿಕ್ಕನೆನ್ನ ಸ್ಮರನು |
ಘಕ್ಕನೆಚ್ಚನಾತನುರಕೆ | ಸಿಕ್ಕಿದೆನಾ ಶರಕೆ || ೯೪ ||

ನಿನ್ನ ಗೆಳತಿಯರ ನಡುವೆ | ಕನ್ನೆಯೊರ್ವಳಿಹಳು |
ಇನ್ನೇನೆಂಬೆ ಸೂರೆಗೊಂಡ | ಳೆನ್ನ ಮನವನವಳು || ೯೫ ||

ಮರಳಿ ಮಾತಿನ್ನೇನು ಜೀವ | ಕರಗುವುದಿನ್ನವಳ |
ನೆರೆಯದುಳಿಯೆನೆಂತಾದರೀ | ಹರಣವ ನೀ ಸಲಹೆ || ೯೬ ||

ರಾಗ ನೀಲಾಂಬರಿ ರೂಪಕತಾಳ

ಎಲೆ ಪಾಪಿ ಕೆಡಬೇಡ ಕುಲಕೆ ಮಾರಿಯ ತಂದೆ | ಸಲುವುದೆ ಪರರ ನಾರಿಯರ |
ಚೆಲುವನಂಗೀಕರಿಸುವೆನೆಂದಡಂತಕ ತಾನು | ಮುಳಿದು ನರಕಕಿಕ್ಕದಿಹನೆ || ೯೭ ||

ಜಯಸಿರಿಯು ತೊಲಗುವಳ್ ಭುಜಲಕ್ಷ್ಮಿ ಹಿಂಗುವಳ್ | ಲಯವಕ್ಕು ಸಕಲ ಸಂಪದವು |
ಬಯಲಾಸೆ ಬೇಡ ಪೂರ್ವದಲಿ ರಾವಣನು ಸೀ | ತೆಯನೊಯ್ದ ಕಥೆಯ ಕೇಳ್ದರಿಯ || ೯೮ ||

ಬಲವಂತರವಳ ಕಾಂತರು ಗಂಧರ್ವರು ನಿನ್ನ | ತಲೆಯ ಕೊಂಬರು ಕೇಳ್ದ ಕ್ಷಣದಿ ||
ಛಲ ಬೇಡ  ಬದಲವಳಿಂದ ಸೌಂದರ್ಯದ | ಲಲನೆಯ ಮದುವೆ ಮಾಡುವೆನು || ೯೯ ||

ಮರುಳಾದೆಯೇನೆ ಕೇಳಕ್ಕ ಇನ್ನೇನೆನ್ನ | ಹರಣವಾಕೆಯ ವಶವಾಯ್ತು |
ಬರಿದಾದ ಡಿಂಬಕ್ಕೆ ಮದುವೆಯ ಮಾಳ್ಪೆನೆಂ | ದರೆ ಸೊಗಸಹುದೆ ಪೇಳೆನಗೆ || ೧೦೦ ||

ಹಲವು ಮಾತಿನ್ನೇನಾ ಲಲನೆಯ ಭೋಗಿಸ | ದುಳಿಯದು ಪ್ರಾಣವಿಂದೆನಗೆ |
ಸಲಿಸೊಂದು ಬಯಕೆಯೇನಾದಡಗಾಲಿ ಮುಂದೆ | ಉಳಿಸಿಂದೀಗೆನುತೆರಗಿದನು || ೧೦೧ ||

ಕಂದ

ಅಡಿಗೆರಗುತಲತಿ ದುಃಖದಿ |
ಬಿಡದಳಲುತ್ತಲಿ ಬಳಲ್ವುದನೀಕ್ಷಿಸುತವನಂ ||
ಬಿಡಲಾರದೆ ಮನಮರುಗುತ |
ಮಡದಿಯರತಿದೇವಿ ನುಡಿದಳನುಜನೊಳಗಾಗಳ್ || ೧೦೨ ||

ರಾಗ ಕೇದಾರಗೌಳ ಝಂಪೆತಾಳ

ತಮ್ಮ ಶೋಕಿಸದಿರಿನ್ನು | ನಡೆ ಸುಮ್ಮ | ನೊಮ್ಮೆ ಮಂದಿರಕೆ ನೀನು |
ಕಮ್ಮಗೋಲನ ಬಾಧೆಗೆ | ಸಿಲುಕಿ ನೀ | ನುಮ್ಮಳಿಸಬಹುದೆ ಹೀಗೆ || ೧೦೩ ||

ಜಾಲ ಮಾತಲ್ಲ ಕೇಳು | ಪರಸತಿಯ | ಮೇಳ ಸೊಗಸಹುದೆ ಪೇಳು |
ಕಾಳು ಮಾಡಿದೆ ಕುಲವನು | ಸಾರಿದೆನು | ನಾಳೆ ಕಳುಹುವೆನವಳನು || ೧೦೪ ||

ಮನೆಗಯ್ದು ನಡೆಯೆನ್ನುತ | ಕಳುಹಿಸಲು | ಘನ ಹರುಷವನು ತಾಳುತ |
ವನಿತೆ ತನಗಾಹಳೆನುತ | ಗಮಿಸಿದನು | ಮನದೊಳಗೆ ಗುಡಿಗಟ್ಟುತ || ೧೦೫ ||

ಭಾಮಿನಿ

ಎಲೆ ಪರೀಕ್ಷಿತಸೂನು ಕೇಳಾ |
ಖಳನು ಸಂತಸವೆತ್ತು ತನ್ನಯ |
ನಿಳೆಯಕಯ್ದಿದನಿತ್ತ ರವಿ ಜಾರಿದನು ಪಶ್ಚಿಮದ ||
ಜಲಧಿಗಾ ರಾತ್ರಿಯನು ತಾಪದಿ |
ಕಳೆದನಾ ಖಳನುದಯದಲಿ ನೃಪ |
ಲಲನೆಯಿತ್ತಲು ಕರೆದು ನುಡಿದಳು ದ್ರುಪದನಂದನೆಗೆ || ೧೦೬ ||

ರಾಗ ತೋಡಿ ಅಷ್ಟತಾಳ

ವನಿತೆ ಸೈರಂಧ್ರಿ ಕೇಳನುಜನ ಮನೆಗಯ್ದಿ | ವಿನಯದಿ ಮಧುವ ನೀನು |
ಘನ ಬೇಗ ತಾ ಹೋಗೆಂದೆನೆ ಕೇಳ್ದು ಭಯದಿಂದ | ವನಜಲೋಚನೆ ಪೇಳ್ದಳು || ೧೦೭ ||

ಅಮ್ಮ ಕೇಳಿನ್ನೇನನುಸುರುವೆ ನಿಮ್ಮಯ | ತಮ್ಮ ಕೇವಲ ದುಷ್ಟನು |
ಹೆಮ್ಮೆಯಿಂ ಕೈಯಿಕ್ಕದಿರನಿನ್ನೊರ್ವಳು ಪೋಗ | ಲಮ್ಮೆನಲ್ಲಿಗೆ ನಾ ದೇವಿ || ೧೦೮ ||

ಅನುಪಮಬಲರೆನ್ನವರು ನಿಮ್ಮ ಅನುಜಗೆ | ಹನನವಪ್ಪುದು ತನ್ನಿಂದ |
ಎನಗಪಕೀರ್ತಿ ಬರುವುದು ಕಂಡುದ ಪೇಳ್ದೆ | ನೆನಲು ಝೇಂಕಿಸುತೆಂದಳು || ೧೦೯ ||

ಎಲಗೆ ನಿನ್ನವರಿಂದಲಹುದೇನು ಎನ್ನೊಳು | ಸಲುಗೆಯೆ ನಿನಗಿನಿತು ||
ಲಲನೆ ನಿನ್ನಿಂದಾಹ ಬಳಲಿಕೆಯನು ಕಾಂಬೆ | ಘಳಿಲನೆ ನಡೆಯೆಂದಳು || ೧೧೦ ||

ಎಂದ ಮಾತನು ಕೇಳಿ ನೊಂದು ಪಾಂಚಾಲನ | ನಂದನೆ ಮಧುವಿಗೆಂದು |
ಹೊಂದಳಿಗೆಯ ಕೊಂಡು ನಿಂದಳಲುತ ಶ್ರೀಗೋ | ವಿಂದ ರಕ್ಷಿಪುದೆಂದಳು || ೧೧೧ ||

ವಾರ್ಧಕ

ಜನಮೇಜಯ ಕ್ಷಿತಿಪ ಲಾಲಿಸೈ ಪಾಂಡವರ |
ವನಿತೆಯಾಲೋಚಿಸಿದಳಾ ಖಳಂ ಬಿಡನೆನ್ನ |
ನೆನುತಲತಿ ಭಕ್ತಿಯಿಂ ತಪನನಂ ಭಜಿಸಿದಳು ನಿರುಪಮ ಸ್ತೌತ್ಯದಿಂದ ||
ಇನನವಳ ನುತಿಗೊಡಂಬಟ್ಟೋರ್ವ ದೂತನಂ |
ವಿನಯದಿಂ ಕರೆದೈವರರಸಿಯಂ ಸಲಹಿಂದಿ |
ಗೆನೆ ಕೇಳುತಾ ಘೋರ ದಾನವಂ ನರರರಿಯದಂತೆ ಬೆಂಬಲಮಾದನು || ೧೧೨ ||

ಕಂದ

ಇಂತಿನಚರನುಂ ಬಂದುದ |
ನುಂ ತಿಳಿಯದೆ ದ್ರುಪದಾತ್ಮಜೆ ಬೆದರುತ್ತಾಗಳ್ ||
ಎಂತಯ್ದುವೆನಾ ಖಳನಾ |
ಮುಂತೆನುತಲಿಯಧಿಕ ದುಗುಡದಿಂದಯ್ತಂದಳ್ | || ೧೧೩ ||

ರಾಗ ಮಧುಮಾಧವಿ ಏಕತಾಳ

ಏನೆಂಬೆನು ದುಮ್ಮಾನದೊಳಯ್ತಹ | ಮಾನಿನಿಯಳ ಸೊಬಗ |
ತಾನಯ್ತಂದಳು ನೋಡುವ ವಿಟರ ವಿ | ತಾನವ ಮರುಗಿಸುತ || ೧೧೪ ||

ಸೆಳೆನಡು ಬಳುಕುತ್ತಳುಕುತ ಮೆಲ್ಲನೆ | ತಳಿರಡಿಗಳನಿಡುತ |
ಕಲಶಕುಚದ ಕೋಮಲೆ ಬಂದಳು ಸ್ಮರ | ನಲಗೆಂಬಂದದಲಿ || ೧೧೫ ||

ಕಳೆದಳೊ ನಮ್ಮನು ತುಳಿದಳೊ ಹೃದಯವ | ನೆಳೆದಳೊ ಧೈರ್ಯವನು ||
ಸೆಳೆದಳೊ ಕಂಗಳ ಮುಳಿದುರೆ ಪ್ರಾಣವ | ನಳಿದಳೆನುತ ವಿಟರು || ೧೧೬ ||

ಕಂದ

ಸರಸಿಜಮುಖಿಯೀ ಪರಿಯಿಂ |
ಭರದಿಂ ಕೀಚಕನ ಬಳಿಗೆ ಬರುತಿರೆ ಮತ್ತಾ ||
ತರುಣಿಯ ದೂರದೊಳೀಕ್ಷಿಸಿ |
ಬೆರಗಾಗುತ್ತವನುಸಿರ್ದ ತನ್ನಯ ಮನದೊಳ್ || || ೧೧೭ ||

ರಾಗ ಕಾಪಿ ಅಷ್ಟತಾಳ

ಇವಳ್ಯಾವ ಲೋಕದ ಸತಿಯೋ | ಮತ್ತೀ |
ಯುವತಿಯ ಪಡೆದವಳೇಂ ಪುಣ್ಯವತಿಯೊ | ಇವಳ್ಯಾವ     || ಪ ||

ರತಿಯ ಸೌಂದರ್ಯವಂತಿರಲಿ | ಸುರ | ಸತಿಯರ ಸೊಬಗು ತಾನಾಚೆಯೊಳಿರಲಿ |
ಪೃಥಿವಿಯೊಳಿನಿತು ರೂಪಿಲ್ಲ | ದ್ರುಪದ | ಸುತೆಯ ಕಂಡರಿವೆ ಈ ಪರಿಯಂದವಲ್ಲ || || ೧೧೮ ||

ಏನು ಸುಕೃತವ ಮಾಡಿದೆನೊ | ಮತ್ತೀ | ಮೀನಾಂಕನೃಪನೆನ್ನ ದಯದಿ ನೋಡಿದನೊ |
ಈ ನಾರಿ ಕೃಪೆಯಾದಳೆನಗೆ | ತಾನಿ | ನ್ನೇನು ಧನ್ಯನೊ ಈಕೆ ಬಂದಳೆನ್ನೆಡೆಗೆ || || ೧೧೯ ||

ಇವಳಂಗಸಂಗವೈಭವವ | ಅನು | ಭವಿಸಿದ ಮೇಲ್ಹೋಗಲಿ ಜೀವ ||
ಯುವತಿಗೆ ಸರಿಯಿಲ್ಲ ಸಿದ್ಧ | ಎನು | ತವಿಳಂಬದಿಂಖಳ ತಾನಿದಿರೆದ್ದ || || ೧೨೦ ||

ಕಂದ

ಧಿಮ್ಮನೆ ನಿಂದಾ ದುರುಳಂ |
ಸುಮ್ಮಾನದಿನಾ ಲತಾಂಗಿಯನು ಕಾಣುತ್ತಂ ||
ಹಮ್ಮಿನೊಳಿರಲೀ ಸತಿಯುಂ |
ಸಮ್ಮುಖದಿ ಬಂದು ನಿಲಲವ ನಗುತಿಂತೆಂದ || || ೧೨೧ ||

ರಾಗ ಭೈರವಿ ಝಂಪೆತಾಳ

ಬಾರೆ ಭಾಮಾಮಣಿಯೆ | ಬಾರೆ ಸ್ಮರನರಗಿಣಿಯೆ |
ಬಾರೆ ಮುದ್ದಿನ ಕಣಿಯೆ | ಬಾರೆ ಗುಣಮಣಿಯೆ || ೧೨೨ ||

ಮದನನೆಂಬ ದುರಾತ್ಮ | ನೊದೆದನೆನ್ನಸುವೆ ನೀ |
ಚದುರೆ ಬೆಂಬಲವಾಗಿ | ಬದುಕಿಸೀ ತನುವ || ೧೨೩ ||

ಅನುಮಾನವೇನೆನ್ನ | ಮನವ ಸಂತಸಬಡಿಸು |
ವನಿತೆ ಕುಳ್ಳಿರು ಎನಲು | ಕನಲಿ ಪೇಳಿದಳು || ೧೨೪ ||

ಎಲವೊ ಪಾತಕಿ ಬಾಯ | ಹುಳವಪ್ಪುದೀ ಮಾತು |
ಸಲುಗೆಯೇ ನಿನಗೆ ಪರ | ಲಲನೆಯರೊಳಿನಿತು || ೧೨೫ ||

ಮರಣ ಬೇಕೆಂಬಾಸೆ | ಇರೆ ಶೂಲದಲಿ ಬಿದ್ದು |
ಹರಣವನು ಕೊಡು ಯಮಗೆ | ಬರಿದೆ ಗಳಹದಿರು || ೧೨೬ ||

ತರುಣಿ ನಿನ್ನಯ ಮಾತು | ಕರಗಿಸದು ಎನ್ನುವನು |
ಕರುಣಿಸೊಮ್ಮೆಯೆನುತ್ತ | ಕರವಿಡಿದನವನು || ೧೨೭ ||

ಭಾಮಿನಿ

ದುರುಳನೀ ಪರಿಯಿಂದಲಾಕೆಯ |
ಕರವಿಡಿಯಲೊಡೆ ಮುರುಚಿ ಭಯದಿಂ |
ದಿರದೆ ಬಾಗಿಲ ದಾಂಟಿ ಸಭೆಗೋಡುವಳನೀಕ್ಷಿಸುತ ||
ತರಳೆ ಪೋಪೆಯದೆಲ್ಲಿ ನಿಲ್ಲೆನು |
ತುರವಣಿಸಿ ಬೆಂಬತ್ತುತಾ ಖಳ |
ತುರುಬ ಹಿಡಿಯುತ ಕುಸುಬಿದನು ಕೆಡಹಿದನು ಹುಡಿಯೊಳಗೆ || ೧೨೮ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಖೂಳನೀ ಪರಿಯಿಂದಲೈವರ | ಮೇಳದಬಲೆಯನೊದೆಯಲವನಿಗೆ |
ಬೀಳುತಲಿ ಬಾಯ್ಬಿಡುತ ಪೊರಳಿದ | ಳಾ ಲತಾಂಗಿ || ೧೨೯ ||

ಹುಡಿಯೊಳ್ ಹೊರಳುವ ಸತಿಯ ನಾಸಿಕ | ದೆಡೆಯೊಳೊಸರುವ ರಕ್ತವನು ಕಂ |
ಡೊಡನೆ ಭಾಸ್ಕರನಿತ್ತ ದೂತನು | ಘುಡುಘುಡಿಸುತ || ೧೩೦ ||

ಫಡ ಫಡೆನುತಾರ್ಭಟಿಸಿ ಭುಜಗಳ | ನೊದರುತಯ್ತಂದಾ ದುರಾತ್ಮನ |
ಕೆಡೆಯೆನುತ ಕುಸುಬಿದನು ತಿವಿದನು | ಕಡುಹಿನಿಂದ || ೧೩೧ ||

ಕರಹತಿಗೆ ಡೆಂಡಣಿಸುತಾ ಖಳ | ನುರುಳಿ ಧರೆಯೊಳು ಪೊರಳಿ ಮೆಲ್ಲನೆ |
ತರಹರಿಸುತೊರಲುತ್ತ ಬಂದನು | ಮರಳಿ ಮನೆಗೆ || ೧೩೨ ||

ಕಂದ

ಖಳನೀ ತೆರದಿಂ ಬಿದ್ದೆ |
ದ್ದಳುತೈತಲ್ಕಾಣುತವನಿಪತಿಯೋಲಗದೊಳ್ ||
ಕುಳಿತವರೆಲ್ಲರ್ ಭಯಮಂ |
ತಳೆದಿರಲಾ ಲಲನೆ ಗೋಳಿಡುತಮತಿ ದುಃಖಿಸಿದಳ್ || ೧೩೩ ||

ರಾಗ ನೀಲಾಂಬರಿ ಏಕತಾಳ

ಅಕಟಕಟೆನ್ನಯ ವಿಧಿಯೆ | ಶಕುತಿಯೊಳಾ ಖಳನೊದೆಯೆ ||
ಸಕಲರು ನೋಡುವರಿದನು | ಲಕುಮೀಯಾಳ್ದನೆ ನೀನು || ೧೩೪ ||

ಕರುಣದಲಿ ಸಲಹೆನ್ನ | ಎರೆಯರು ಬಿಟ್ಟರು ಮುನ್ನ |
ಹರ ಹರ ಈ ಶೋಕವದು | ವರರಿಗೆ ತಾಗಲಿ ಇಂದು || ೧೩೫ ||

ಯಾರಿಗೆ ಪೇಳುವೆನಿನ್ನು | ಯಾರು ವಿಚಾರಿಪರಿದನು |
ಭೂರಿ ಜನರುತಾವಿಹ ಸಭೆಯು | ಆರಣ್ಯವಾಯ್ತಯ್ಯಯ್ಯೋ || ೧೩೬ ||

ರಾಗ ಆನಂದಭೈರವಿ ಅಷ್ಟತಾಳ

ಈ ತೆರದಿಂದಂಬುಜಾಕ್ಷಿ | ಭೀತಿಯಿಂದಲಧಿಕ ಶೋಕ |
ತಾಳುತ್ತ | ಧರೆಗೆ ಬೀಳುತ್ತ || ೧೩೭ ||

ಕೆಡೆದು ಹುಡಿಯೊಳ್ ಹೊರಳುತ್ತಡಿ | ಗಡಿಗೆ ಮನದಿ ಮರುಗಿ ಗೋಳಿ |
ಟ್ಟಳಲಿದೋ | ಬಹು | ಬಳಲಿದೋ || ೧೩೮ ||

ಮರಳಿ ಮೆಲ್ಲನೆದ್ದು ಬಿಕ್ಕಿ | ಬಿರಿದಳುತ್ತಲಾಗ ಸಭೆಯ |
ನೋಡುತ್ತ | ಧರೆಗೆ | ಬೀಳುತ್ತ || ೧೩೯ ||

ಭಾಮಿನಿ

ಎಲೆ ಧರಾಧಿಪ ಲಾಲಿಸಿಂತಾ |
ಲಲನೆ ಬಾಯ್ಬಿಡುತಿರಲು ಹಿಮಕರ |
ಕುಲ ಶಿರೋಮಣಿ ಸಮಯವಲ್ಲೆನುತುಸಿರದಿರುತಿರಲು ||
ಕಲಿಮರುತ್ತನುಜಾದಿಗಳು ಭುಜ |
ಬಲವ ಮೆರೆವಡೆ ವೇಳೆಯಲ್ಲೆನು |
ತುಳುಕದಿರೆ ಶೋಕಿಸುತ ಮತ್ತಿಂತೆಂದಳುಬುಜಾಕ್ಷಿ || ೧೪೦ ||

ರಾಗ ಕಾಂಭೋಜಿ ಆದಿತಾಳ

ಶಿವನೇ ಇನ್ನ್ಯಾರಿಗೆಂಬೆ ನಾನು | ಖಳನುಪದ್ರವನು | ಶಿವನೇ ಇನ್ನ್ಯಾರಿಗೆಂಬೆ ನಾನು  || ಪ ||

ಸುಮ್ಮನೆ ಕಂಡರಿವರೆಲ್ಲ | ಆತನೆನ್ನವನಿಗೆ ಕೆಡಹಿ ಪೋದನಲ್ಲ  || ಅ.ಪ ||

ಎಲೆ ಕಂಕಸಂನ್ಯಾಸಿ ನೀ ಕಾಂಬೆ | ಸತ್ಯಾತ್ಮನೀನು | ಹಲವು ಧರ್ಮವ ಬಲ್ಲೆನೆಂಬೆ |
ಸಭೆಯಿದಿರೊಳೆನ್ನ | ಖಳನೊದ್ದು ಪೋದುದ ನೀ ಕಾಂಬೆ | ಬಡವರ್ಗೆ ಬಡವ |
ರೊಲವಾಗಬೇಕು ಬದ್ಧವೈಸೆ  || ೧೪೧ ||

ವಾರ್ಧಕ

ಯುವತಿಯೀ ಪರಿಯಿಂದಲಳವುದಂ ಕಾಣುತಂ |
ಪವನಜಂ ನೊಂದಳಕಟಕಟ ಸತಿಯೆಂದೆನುತ |
ತವಕದಿಂ ಕೋಪದಿಂ ಕಂಡಂ ನೃಪಾಲಯದ ಮುಂದಣ ಮಹಾತರುವನು ||
ಅವನಿಗಿವಳಂ ಕೆಡಹಿದಧಮನಂ ಮುರಿವೆ ಮ |
ತ್ತವನ ವಂಶವನರೆವೆಯರಿತರಾದರೆ ಕೌರ |
ವರ ವೃಂದಮಂ ತರಿವೆಯಣ್ಣನಾಜ್ಞೆಯ ಮೀರ್ವೆನೆನುತುಬ್ಬಿದಂ ಭೀಮನು || ೧೪೨ ||

ರಾಗ ಕೇದಾರಗೌಳ ಅಷ್ಟತಾಳ

ಮರುತನಂದನನಿಂತು ಮರವನೀಕ್ಷಿಸಲು ಕಂ | ಡರಿತವನಿಂಗಿತವ |
ಧರಣಿಪಾಗ್ರಣಿ ಧರ್ಮಸುತನೆಂದ ಮತ್ತೊರ್ವ | ರರಿಯದ ತೆರದೊಳಂದು || ೧೪೩ ||

ಮರುಳಾದೆಯೇನಯ್ಯ ವಲಲ ಈ ಮರವಿದು | ನರರಿಗಾಶ್ರಯವಪ್ಪುದು |
ಮುರಿವುದುಚಿತವಲ್ಲ ನಿನಗೆ ಬಾಣಸಿನ ಮಂ | ದಿರಕೆ ಮತ್ತುಂಟು ಬೇರೆ || ೧೪೪ ||

ಕಡಿಯದಿರೈ ಧರ್ಮಮಯದ ತರುವ ನಮ್ಮ | ನುಡಿ ಕೇಳೆಂದೆನೆ  ಲಾಲಿಸಿ |
ಬಿಡನೀತನೇಂಗೆಯ್ವೆನೆಂದು ಮರುಗುತೆದ್ದು | ನಡೆದನಾಚೆಗೆ ಭೀಮನು || ೧೪೫ ||

ಮರುತಜನಯ್ದೆ ಭೂಮಿಪ ಮನಮರುಗುತ್ತ | ಪರರಿಗೆ ಪೇಳ್ವಂದದಿ |
ಅರುಹಿದನೆಲೆ ನೀರೆ ಏಕೆ ದುಃಖಿಸುವೆ ನೀ | ದುರುಳನಧಿಕ ಶೌರ್ಯನು || ೧೪೬ ||

ಬಗೆಯನಾತನು ಮತ್ಸ್ಯಭೂಪನ ನಿನ್ನಲ್ಲಿ | ಹೊಗದು ದೋಷವು ಲಾಲಿಸು |
ಮೃಗವಿಲೋಚನೆ ಧರ್ಮವಿದು ನೀ ದುಃಖಿಸದಿರು | ದುಗುಡವ ಬಿಡು ಸುಮ್ಮನೆ || ೧೪೭ ||

ಕಂದ

ಭೂಮಿಪನಿಂತೆನೆ ಕೇಳ್ದುಂ |
ಭಾಮಾಮಣಿ ಯೋಚಿಸಿದಳಿವಂ ಧರ‍್ಮಾತ್ಮಂ ||
ಭೀಮನೊಳೀಕ್ಷಿಪೆನೆನುತಾ |
ಭಾಮೆಯು ಬಂದಳು ಅಳುತ್ತಲೊಡತಿಯ ಬಳಿಗಂ  || ೧೪೮ ||

ರಾಗ ಆನಂದಭೈರವಿ ಅಷ್ಟತಾಳ

ಕಂಡಳೀಕೆಯ ನೃಪನರ್ಧಾಂಗಿ | ಪುಂಡರೀಕಾಕ್ಷಿಯಳಲುತ ಬಳಲುತ ಬರೆ ||
ಕಂಡಳು    || ಪಲ್ಲವಿ ||

ಏನಾಯಿತೆಲೆ ನೀರೆ ಏಕೆ ದುಃಖಿಸುವೆ ನಿ | ನ್ನಾನನದ ಸಿರಿ ಕಂದಿತೇತಕೆ ಇಂಥಾ |
ಹಾನಿ ಯಾರಿಂದಾಯಿತು | ಮಂಡೆಯಲಿ ಧೂ |
ಳೇನಿದೆಲ್ಲಿಂದ ಬಂತು | ಪೇಳೆನ್ನೊಳು ನಿ |
ಧಾನವನೆನೆಲೆಂದಳತಿ ದುಃಖದಿಂದ  || ೧೪೯ ||

ಅರಿಯಿರಿ ನೀವ್ ಧೊರೆತನದ ಮೇಲಿರುವಾಗ | ಮರವೆಯಪ್ಪುದು ಬಡವರ ಮಾತದೇನುಂಟು |
ದುರುಳ ನಿಮ್ಮಯ ತಮ್ಮನು || ಬಲು  ಬಗೆಯಿಂದ | ಮರುಗಿಸಿದನು ತನ್ನನು | ಅನ್ಯಾಯವಿ |
ನ್ನರಸಿಗೊಪ್ಪಿಗೆಯಾಗೆ ಪೇಳುವುದ್ಯಾರಿಗೆ  || ೧೫೦ ||

ತಿರುಕೂಳಿಗಳು ನಾವು ಮೊದಲೆ ನಮ್ಮನು ಈ | ಪರಿಯ ನಿರ್ಬಂಧ ಪಡಿಸಿದರೆಂತಿರುವೆವು |
ಕರೆಸಿ ನೀವಿನ್ನಾದರು || ಬುದ್ಧಿಯ ತಮ್ಮ | ಗರುಹಿ ಮತ್ತೆಂದಾದರು | ಮಾನದೊಳೆನ್ನ |
ಪೊರೆದರಿರ್ಪೆನಲ್ಲದಿರೆ ಪೋಪೆ ಕಳುಹಿಸಿ | ಸಾಕವ್ವ ನಿಮ್ಮ ಸೇವೆಯು ಮುಂದೆಮಗೆ || ೧೫೧ ||

ಭಾಮಿನಿ

ಅಳಲಬೇಡಿನ್ನಬಲೆ ಸತ್ಯವ |
ನಳಿದವರ ಕೊಲಿಸುವೆನು ಪರಸತಿ |
ಗಳುಪಿದವ ನನ್ನನುಜನೇನು ಸುದೇಷ್ಣೆಯೆನೆ ಕೇಳ್ದು ||
ಲಲನೆ ನುಡಿದಳು ನೀವಿದೇತಕೆ |
ಕೊಲಿಸುವಿರಿ ತನ್ನವರು  ಕೀಚಕ |
ಕುಲವ ತೀರ್ಚುವರೆನಗೆ ಪಾತಕವಿಲ್ಲ ಸಾರಿದೆನು || || ೧೫೨ ||