ಕಂದ
ಎಂದಾ ಸತಿಯಂ ಬೀಳ್ಗೊಂ |
ಡಂದಾ ಪಾಂಡವರ ರಾಣಿಯತಿ ಭೀತಿಯೊಳಂ ||
ಮಂದಿರಕಯ್ತರಲುಂತಾ |
ನಂದಳಲುತ ದಿವವನುಳಿದುಸಿರ್ದಳ್ ಮನದೊಳ್ || ೧೫೩ ||
ರಾಗ ಯರಕಲಕಾಂಭೋಜಿ ಅಷ್ಟತಾಳ
ಎಂತು ತಾಳುವೆನು | ಈ ವಿಧದೊಳಿ | ನ್ನೆಂತು ಬಾಳುವೆನು || ಪಲ್ಲವಿ ||
ಬಂದೆಲ್ಲರಿದಿರಿನೊಳು | ಮೆಟ್ಟಿದನೆನ್ನ | ನಿಂದು ಖೂಳನು ಕಾಲೊಳು ||
ಮಂದಮತಿಯು ನಾಳೆ | ಬಂದು ಪಿಡಿದರೇವೆ | ಮುಂದೇನು ಗತಿ ತನಗೆ | ಹೀಗಾಗೆ || ಎಂತು || ೧೫೪ ||
ಯಾರಿಗುಸಿರುವೆನು | ಈ ಶೋಕವನು ತಾ | ನ್ಯಾರು ಕೇಳುವರಿದನು |
ಧಾರಿಣಿಯೊಳು ಹೆಣ್ಣು | ಜನ್ಮವ ಸುಡಲಿನ್ನು | ಭೂರಿ ಬಾಧೆಗೆ ಸಂದೆನು | ಇನ್ನೇನು || ಎಂತು || ೧೫೫ ||
ರಮಣರ್ಗೆ ಪೇಳುವೆನೊ | ಎಂದರೆ ತಾನು | ಯಮಜ ಧರ್ಮದೊಳಿಹನು ||
ಅಮರೇಂದ್ರಸುತನಾತ | ನೊಳಗಿಹ ಮಿಕ್ಕಿನ | ಯಮಳರಿಂದಲಿ ತೀರದು | ತಾನಿಂದು || ಎಂತು || ೧೫೬ ||
ಇವರೆಲ್ಲರೊಳು ಭೀಮನು | ಎನ್ನಯ ಕಾಮಿ | ತವ ಸಲಿಸುವ ಕಾಂತನು ||
ಅವಗೆದೂರುವೆನಾತ | ನೊಳಗಾಗದಿರಲು ವಿ | ಷವನೆ ಕುಡಿವೆನೆಂದಳು | ಶೋಕದೊಳು || ಎಂತು || ೧೫೭ ||
ಭಾಮಿನಿ
ಅರಸ ಕೇಳಾ ದ್ರುಪದಸುತೆಯೀ |
ಪರಿಯ ಶೋಕದೊಳೆದ್ದು ಭೀಮಂ |
ಗರುಹಿ ನೋಡುವೆನೆನುತ ರಾತ್ರಿಯೊಳೊರ್ವರರಿಯದೊಲು ||
ತರಳೆ ಬಂದಳು ಬಾಣಸಿನ ಮಂ |
ದಿರದೆ ಪಾಕಂಗೈದು ಬಳಲಿದು |
ಭರದ ನಿದ್ರೆಯೊಳಿರ್ಪ ಭೀಮನ ಕಂಡಳಾ ಕಾಂತೆ ||೧೫೮||
ರಾಗ ಶಂಕರಾಭರಣ ತ್ರಿವುಡೆತಾಳ
ಬಾಲೆ ಕಂಡಳು ಮರುತಜನ ನಿ | ದ್ರಾಲತಾಂಗಿಯ ಸುರತಸುಖದಿಂ |
ದೇಳದೊರಗಿರೆ ಮನದಿ ನುಡಿದಳು | ಲೋಲನಯನೆ ||೧೫೯||
ಎಬ್ಬಿಸಿದರಿನ್ನೇನನೆಂಬನೊ | ಗಬ್ಬಿಹೆಣ್ಣಿವಳೆಂದು ಬೈವನೊ |
ತುಬ್ಬಹುದು ನಾ ಬಂದುದಿವಸ | ದ್ದಬ್ಬರಿಸಲು ||೧೬೦||
ಏನು ಮುನಿದರು ಮುನಿಯಲೆಂದವ | ನಾನನದ ವಸನವನು ತೆಗೆದಾ |
ಮಾನಿನೀಮಣಿ ಗಲ್ಲಪಿಡಿದು ನಿ | ಧಾನದಿಂದ ||೧೬೧||
ಅಲುಗಿ ಮುದ್ದಿಸುತಿರಲು ಭೀಮನು | ಘಳಿಲನೆಚ್ಚರಿತೆದ್ದು ಮುಂದಿಹ |
ಲಲನೆಯನು ಕಾಣುತ್ತಲೆಂದನು | ತಳುವದಂದು ||೧೬೨||
ರಾಗ ಕಲ್ಯಾಣಿ ಅಷ್ಟತಾಳ
ಮಾನಿನಿರನ್ನಳೆ | ಬಂದುದಿ | ದೇನು ಕಾರ್ಯ ಪೇಳೆ |
ಮಾನವಂತೆ ನಿನ್ನಾನನವೇತಕೆ | ಮ್ಲಾನವಾಗಿರುವುದಿದೇನೆ ಲತಾಂಗಿ || ಮಾನಿನಿ ||೧೬೩||
ಇಲ್ಲಿಹನಾರಿಯರು | ತಿಳಿಯುವರ್ | ಖುಲ್ಲರುಳಿದ ಜನರು |
ನಿಲ್ಲದಿರೆಲೆ ದೇಶಿಗರಾವೆಂಬುದ | ಬಲ್ಲೆ ಬಂದುದ ತಳುವಿಲ್ಲದುಸುರು ನಡೆ || ಮಾನಿನಿ ||೧೬೪||
ರಾಗ ಯರಕಲ ಕಾಂಭೋಜಿ ಅಷ್ಟತಾಳ
ಪೇಳಲೇನಾನಿನ್ನು | ಎನ್ನಳಲನು | ಪೇಳಲೇನಾನಿನ್ನು ||ಪಲ್ಲವಿ||
ನಿನ್ನೆ ಕೀಚಕನು | ಎಂದೆನಿಪೋರ್ವ | ಕುನ್ನಿಯೊದೆದನೆನ್ನನು ||
ಬೆನ್ನ ಬಿಡನು ಪಾಪಿ | ಯಾ ಖೂಳ ನುಪಟಳ | ವಿನ್ನೆಂತು ತಾಳುವೆನು | ಬಾಳುವೆನು || ಪೇಳ ||೧೬೫||
ನಿನ್ನಂಥ ವಲ್ಲಭರು | ಇದ್ದರು ನಾನು | ಬನ್ನಬಡುವುದಾದರು ||
ಇನ್ನು ಪ್ರಾಣವ ಕಳೆ | ಕೊಂಬೆನೀ ಪಾತಕ | ನಿನ್ನ ತಟ್ಟುವುದೆಂದಳು | ಶೋಕದೊಳು || ಪೇಳು ||೧೬೬||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎನಲು ಕೇಳುತ ಖತಿಯೊಳನಿಲಸು | ತನು ನುಡಿದನೀ ಗಂಡುತನವನು |
ವನಿತೆ ಸುಡು ಪೇಳದಿರು ತನ್ನೊಳು | ಮನೆಗೆ ತೆರಳು || ೧೬೭ ||
ಉಳಿದ ನಾಲ್ವರು ರಮಣರೊಳು ಪೇಳ್ | ಸಲಿಸುವರು ನಿನ್ನಿಷ್ಟವನು ನಡೆ |
ಯಳಲದಿರ್ ನಾವ್ ಭೀತರಣ್ಣಗೆ | ಜಲಜಗಂಧಿ || ೧೬೮ ||
ಕಂದ
ಎಂದಾ ಭೀಮಂ ಚಿತ್ತದಿ |
ನೊಂದೀ ತೆರದಿಂ ಪರಸ್ಪರದೊಳೆನೆ ಕೇಳ್ದುಂ ||
ಚಂದಿರಮುಖಿಯಂದುಂ ಬೆದೆ |
ಬೆಂದಳುತೆಂದಳು ಮನದೊಳಿರ್ದುದ ಶೋಕದೊಳಂ || ೧೬೯ ||
ರಾಗ ನೀಲಾಂಬರಿ ರೂಪಕತಾಳ
ಶಿವ ಶಿವ ಪೂರ್ವಜನ್ಮದೊಳು ನಾನೇನು ಪಾ | ಪವ ಮಾಡಿದೆನೊ ತನಗಿಂದು |
ಬವಣೆಯಾಯ್ತೀ ಪುರುಷರಿಗೆ ತಾ ಸತಿಯಾದ | ದಿವಸಾರಭ್ಯವೀವರೆಗೆ || ೧೭೦ ||
ಧರೆಯೊಳೊರ್ವಳಿಗೊರ್ವ ಪುರುಷನಾದರು ತನ್ನ | ತರುಣಿಯ ನಾರೈವನವಳ |
ಹರಿಬವ ಕಂಡರೆ ಹರಣವನಿತ್ತಾದ | ರರಸಿಯ ಸಲಹುವ ಜಗದಿ || ೧೭೧ ||
ಪತಿಗಳೈವರು ತನಗಿಹರೊರ್ವರೊರ್ವರ | ಪ್ರತಿಮ ಸಾಹಸರು ನೋಡುವರೆ |
ಸತಿಯಳೊರ್ವಳ ಸಲಹದ ನಾಣಗೇಡಿಗಳ್ | ಕ್ಷಿತಿಯೊಳಿನ್ನುಂಟೆ ಇಂಥವರು || ೧೭೨ ||
ಮೊದಲೊಂದು ಬಾರಿ ಕೌರವರು ಮಾನವ ಕೊಂಡ | ರೊದೆದನಿಂದೀ ಪಾಪಿ ಖಳನು |
ಬದಲು ಮಾತಿನ್ನೇನು ತುದಿಗಾಲ ಬಂತೆನ | ಗಿದು ಸಿದ್ಧ ಕೊಲುವಿರಿ ನೀವು || ೧೭೩ ||
ರಾಗ ಮುಖಾರಿ ಅಷ್ಟತಾಳ
ಮಾನಿನಿಯಳಲದಿರೆ | ಮಾನವ ಸುರ | ದಾನವರೊಳಗೆ ನೀರೆ |
ತಾನಾರೆನ್ನಯ ಮಾನ | ವನು ಕಳೆವಾತನ | ಪೆಸರದೇನುಂಟು ಪೇಳೆ | || ೧೭೪ ||
ಈ ಷಂಡರೊಡನೆ ನಾನು | ಪುಟ್ಟಿದ ಮೇಲೆ | ಮೀಸೆಯುಳ್ಳವನೆ ಇನ್ನು |
ರೋಷವಿಲ್ಲೆನಗೆ ನೀ | ಮನಕೆ ಬಂದುದ ಪೇಳು | ಈಸೊಂದು ಬೆದರದಿರೆ || ೧೭೫ ||
ಲಲನೆ ನೀನರಿಯೆಯೇನೆ | ಎನ್ನಯ ಭುಜ | ಬಲವ ನೀನೆಂಬುದೇನೆ ||
ಕೊಲುವೆ ಪಾಪಿಗಳನೆಂ | ದರೆ ಬಿಡನಣ್ಣನು | ಸಿಲುಕಿಹೆನವನಾಜ್ಞೆಗೆ || ೧೭೬ ||
ಮಿಕ್ಕ ಗಂಡರಿಗುಸಿರು | ನಿನ್ನಯ ಮನ | ದಕ್ಕರೆ ಸಲಿಸುವರು ||
ಸಿಕ್ಕೆವು ನಾವಿಂಥಾ | ನಾಣ್ಗೇಡಿಗಳಿಗೆ ನೀ | ದುಃಖಿಸಬೇಡವಿಲ್ಲಿ || ೧೭೭ ||
ಇಂದಿನಾರಭ್ಯವಿನ್ನು | ಕಾಂತರುನಾಲ್ವ | ರೆಂದು ಭಾವಿಸಿಕೊ ನೀನು |
ಮಂದಗಮನೆ ನಿನ್ನ | ದಂದುಗವನು ಬಿಟ್ಟೆ | ನೆಂದಿಗು ಮುಂದೆ ನಾನು || ೧೭೮ ||
ಭಾಮಿನಿ
ಕಲಿ ಮರುತ್ಸುತನಿಂತೆನಲಿಕಾ |
ಲಲನೆ ದುಃಖಂಬಡುತ ಬಿಸಿಲಿನ |
ಜಳಕೆ ಬಾಡಿದ ಬಳ್ಳಿಯಂದದಿ ಬಳುಕುತಡಿಗಡಿಗೆ ||
ಬಳಲುತೊಯ್ಯನೆ ಕೊರಳ ಸೆರೆಬಿಗಿ |
ದೊಳಸರಿಯೆ ಮಾತುಗಳು ತನ್ನೊಳು |
ಹಲವು ಹಂಬಲಿಸುತ್ತ ಮರುಗುತ್ತೆಂದಳಬುಜಾಕ್ಷಿ || ೧೭೯ ||
ರಾಗ ಯರಕಲ ಕಾಂಭೋಜಿ ಆದಿತಾಳ
ಯಾರಿಗುಸಿರುವೆನು | ಈ ಶೋಕವ | ನಾರು ಕೇಳುವರಿನ್ನು |
ಯಾರ ನಾನು ಪೂರ್ವಜನ್ಮದಿ | ಭೂರಿ ಭಂಗವ ಪಡಿಸಿದೆನೊ | ಇ |
ನ್ನಾರು ಮುನ್ನೆನ್ನಂತೆ ನವೆದರು ನಾರಿಯರೊಳೆನಗೇನು ಗತಿಯೊ || ಯಾರಿಗುಸಿರುವೆನು || ೧೮೦ ||
ಧರಣಿಪ ದ್ರುಪದನಲ್ಲಿ | ಜನಿಸಿ ಮತ್ತೆ | ಸುರನರೋರಗರಿಂದಲಿ |
ಧುರದಿ ಸೋಲದಧಟ್ಟರಿಂಗೇ | ತರುಣಿಯಾಗೀ ಮತ್ಸ್ಯಭೂಪನ |
ಅರಸಿ ಸೇವೆಗೆ ದೊರಕಿ ದಾಸಿಯ | ತೆರದೊಳಾಕೆಯ ಕಾಲನೊತ್ತುವ |
ಪರಿಗೆ ಸಂದೆನುಯಿವದಿರಿಂಥಾ | ವರರು ಬೇಡಿನ್ನೇಸು ಜನ್ಮಾಂ |
ತರಕೆನುತೆ ಮತ್ತವನೊಳೆಂದಳು || ಯಾರಿಗುಸಿರುವೆನು | || ೧೮೧ ||
ಪಗೆಗೆ ರಾಜ್ಯವನಿತ್ತಿರಿ | ಭಂಗಕೆ ನಿಮ್ಮ | ಪೆಗಲನಿತ್ತಾನುವಿರಿ |
ಮಿಗಿಲ ಮಾತಿನ್ನೇತಕೆನ್ನನು | ಮುಗಿಸಲೋಸುಗವೀಗ ನಿಮ್ಮಯ
ಬಗೆಯಲೀ ಧರ್ಮದಲಿ ಸಿಲುಕಿದ | ಮುಗುದೆಯೊರ್ವಳ ತೀರ್ಚಿದಿರಿ ಈ |
ವಿಗಡತನವಾರ್ಗುಂಟು ಪೇಳಾ |ಶುಗತನುಜ ತನಗಿತ್ತೆಯಾ ಸಾ |
ವಿಗೆ ನಿರೂಪವನಕಟಕಟ ಇ || ನ್ನ್ಯಾರಿ ಗುಸಿರುವೆನು || ೧೮೨ ||
ಭಾಮಿನಿ
ಎರೆಯ ಕೇಳೈ ಎನ್ನ ಮರಣವು |
ಹರುಷವಾಯಿತೆ ನಿನಗೆ ನೀವಿ |
ನ್ನರಸನಾಜ್ಞೆಯ ಮೀರದಿಹುದಯ್ವರುಗಳೊಂದಾಗಿ ||
ಹರ ಹರಾ ತಾನೇಕೆ ನಿಮ್ಮಯ |
ತರುಣಿಯಾದೆನೊ ಭೀಮ ಕೊಡಿಸೈ |
ಮರಣಕಪ್ಪಣೆಯೆನುತಲೆರಗಿದಳಾಗ ಕಮಲಾಕ್ಷಿ || ೧೮೩ ||
ರಾಗ ಭೈರವಿ ಝಂಪೆತಾಳ
ಎನಲು ಕೇಳುತ ಭೀಮ | ಮನಮರುಗುತಯ್ದೆ ಕಂ |
ಬನಿದುಂಬಿ ಕರೆದನಾ | ವನಜಲೋಚನೆಯ || ೧೮೪ ||
ತರುಣಿಯಳ ಕಣ್ಣೀರ | ನೊರೆಸಿ ಮೊಗವನು ತನ್ನ |
ಕರದಿಂದ ತೊಡಸಿದನು | ಕುರುಳ ನೇವರಿಸಿ || ೧೮೫ ||
ಕನ್ನೆ ನೀನಳಲದಿರು | ಇನ್ನು ಸಂತಸ ತಾಳು |
ನಿನ್ನಾಣೆ ಮೀರ್ದೆ ನಾ | ನಣ್ಣನಾಜ್ಞೆಯನು || ೧೮೬ ||
ಬಡಿವೆ ಕೀಚಕಕುಲವ | ತಡೆದರೆ ವಿರಾಟನನು |
ಕೆಡೆದು ಹರಹುವೆನವನ | ಪಡೆಸಹಿತ ಭರದಿ || ೧೮೭ ||
ಅರಿತರಾದರೆ ಕೌರ | ವರ ತರಿವೆನಲ್ಲೆಂದ |
ಡುರುಹುವೆನು ನಾಕವನು | ತೊರೆದೆ ನೀತಿಯನು || ೧೮೮ ||
ವಾರ್ಧಕ
ತರುಣಿ ಬಿಡು ಶೋಕಮಂ ಮೃಗರಾಜವನಿತೆಯಂ |
ನರಿ ಕೆಣಕಿ ಬದುಕುವುದೆ ನೋಡೆನ್ನ ಸಾಹಸಂ |
ಮರುಗದಿರ್ ಮುಳಿದೆನಾದರೆ ಬಗೆಯೆನಗ್ರಜನ ಧರ್ಮಗಿರ್ಮಂಗಳನ್ನು ||
ತೆರಳಿ ನೀನಾ ಖೂಳನೆಡೆಗೆ ನಾಟಕದ ಮಂ |
ದಿರಕೆ ಬಾರೆಂದು ಸೂಚನೆ ಪೇಳ್ದಡಾನೊರ್ವ |
ರರಿಯದಂದದೊಳೈದಿ ಖಳನ ಬಸಿರಂ ಬಗಿವೆನಂಜದಿರ್ ನಡೆಯೆಂದನು || ೧೮೯ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ಇಂತೆಂದ ಮಾತನು ಕೇಳುತ್ತ | ಗುಣ | ವಂತೆ ದ್ರೌಪದಿ ತೋಷ ತಾಳುತ್ತ ||
ಚಿಂತೆಯ ಬಿಡಿಸಿದ ಭೀಮನು | ತನ | ಗಿಂಥಾ ಮೋಹದ ಕಾಂತರ್ ಯಾರಿನ್ನು || ೧೯೦ ||
ಎಂದು ಬೇಗದಿ ಪೊರಮಟ್ಟಳು | ತಾನು | ಬಂದು ಮನೆಗೆ ರಾತ್ರಿ ಕಳೆದಳು ||
ವೃಂದಾರಕಾಧಿಪದೆಸೆಯೊಳು | ಅರ | ವಿಂದಾಪ್ತ ಭರದಿಂದುದಯಿಸಲು || ೧೯೧ ||
ದುರುಳ ಕೀಚಕನು ಆ ದಿವಸದಿ | ಕಂ | ಡರವಿಂದಾಕ್ಷಿಯನು ಸಂತಾಪದಿ ||
ಕರವ ಪಿಡಿಯಲಂಜಿ ನುಡಿದನು | ನೀರೆ | ಕರುಣವಿಲ್ಲೆನ್ನೊಳು ನಿನಗಿನ್ನು || ೧೯೨ ||
ಇರುಳೊಂದು ಯುಗವಾಗಿ ಕಳೆದೆನು | ಪಾಪಿ | ಸ್ಮರನು ಅಂತಕನಾಗಿ ಕೊಲುವನು ||
ತರುಣಿ ನೀನೇ ಬಲ್ಲೆ ಇನ್ನೇನು | ಸಲಹು | ಹರಣವೆನುತ ಕೈಯ ಮುಗಿದನು || ೧೯೩ ||
ಎಲೆ ಪಾಪಿ ಕೆಡಬೇಡ ಸಾರಿದೆ | ನಿನ್ನ | ತಲೆಯನೆನ್ನವರಿಗೆ ಮಾರಿದೆ ||
ನೆಲನಿಂಥಾ ಪಾಪಿಯ ಹೊರುವುದೆ | ಪರ | ಲಲನೆಗಳುಪಿ ಕೀರ್ತಿ ಇರುವುದೆ || ೧೯೪ ||
ಭಾಮಿನಿ
ಎಲವೊ ಪಾತಕಿ ಕೇಳು ನಿನ್ನಯ |
ಕುಲವ ತೀರ್ಚಿದೆಯಾದಡಾಗಲಿ |
ಗಳಹದಿರು ನೀನಿನ್ನು ರಾತ್ರಿಯೊಳೊರ್ವರರಿಯದೊಲು ||
ಘಳಿಲನಯ್ತಹೆ ನಾನು ನಾಟ್ಯದ |
ನಿಳೆಯಕಲ್ಲಿರು ನೀನು ತನ್ನವ |
ರುಳಿಸರರಿತರೆ ನಿನ್ನ ಮಂದಿರಕೈದು ಬೇಗದಲಿ || ೧೯೫ ||
ಕಂದ
ಇಂತೆನೆ ಕೇಳ್ದಾ ದುರುಳಂ |
ಸಂತಸವೆತ್ತಯ್ದಿದ ತಾ ಮಂದಿರಕಾಗಲ್ ||
ಕಾಂತಾಮಣಿಯಿತ್ತಂ ಮನೆ |
ಗಂ ತಾಂ ಬಂದಿರಲುಮಸ್ತಮಿಸಿದಂ ತಪನಂ || || ೧೯೬ ||
ವಾರ್ಧಕ
ತರಣಿಯೀ ತೆರದೊಳಂ ಶರಧಿಗಿಳಿಯಲ್ ಕಾಣು |
ತಿರದೈವರರಸಿಯುಂ ಹರುಷದಿಂದೆದ್ದುಮತಿ |
ಭರದಿಂದ ಚರಣನೂಪುರ ಝಣತ್ಕಾರದಿಂ ಮಿರುಪ ಕೋಮಲಕಾಯದ ||
ಪರಿಮಳಕೆ ಮರುಳಾಗಿ ಬರುವ ಭ್ರಮರಂಗಳಿಂ |
ಕಿರುನಗೆಯ ಸುರುಚಿರಂ ಧರೆಯನಾವರಿಸಲಾ |
ಕರಿಗಮನೆ ಮರುತಸುತನಿರುವಲ್ಲಿಗಯ್ತಂದಳರಸಂಚೆಯಾನದಿಂದ || ೧೯೭ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದು ಭೀಮನಿಗೆರಗಿ ನುಡಿದಳು | ಮಂದಮತಿಗಾನೆಂದೆ ನಾಟ್ಯದ |
ಮಂದಿರದೊಳಿಹುದೆಂದು ನೀ ಪೇ | ಳ್ದಂದದಿಂದ || ೧೯೮ ||
ಎರೆಯ ಕೇಳಿನ್ನೇಕೆ ಕುಳಿತಿಹೆ | ದುರುಳನುರವನು ಬಗಿದು ಕರುಳನು |
ಮರುಳುಗಳಿಗುಣಲಿಕ್ಕಿ ದಯೆಯಿಂ | ಪೊರೆವುದೆನ್ನ || ೧೯೯ ||
ಎನಲು ಕೇಳುತಲೆದ್ದು ಭೀಮನು | ಘನಮದಾಂಧನ ಕೊಲುವೆನೆಂದಾ |
ಮನದಿ ಕಟಿಯನು ಬಿಗಿಯೆ ಕಂಡಾ | ವನಜಗಂಧಿ || ೨೦೦ ||
ತಲೆಯ ಬೈತಲೆಯಿಂದ ಬಾಚಿದು | ಲಲನೆಯಂದವ ಮಾಡಿ ವರನನು |
ಖಳನ ಜಯಿಸೆಂದೆನುತ ಪಣೆಯೊಳು | ತಿಲಕವಿಡಲು || ೨೦೧ ||
ಕಂದ
ಇಂತುಸಿರಿದ ಭಾಮಿನಿಯಂ |
ಸಂತಸದಿಂದಪ್ಪಿ ನೀ ತೆರಳು ಮನೆಗೆನುತಂ ||
ತಾಂ ತಳುವದೆ ಭೀಮ ಬಂ |
ದಂತರಿಸದೆ ಪೊಕ್ಕನು ನೃತ್ಯಮಂದಿರಮಂ || ೨೦೨ ||
ರಾಗ ಕಾಂಭೋಜಿ ಝಂಪೆತಾಳ
ಅರಸ ಕೇಳಿತ್ತ ಕೀಚಕನು ತನ್ನಯ ಗೃಹದಿ | ಹರುಷದಿಂದೆದ್ದು ನಿಶಿಯೊಳಗೆ |
ಪರಿಪರಿಯಲಂಕಾರದಿಂ ರಾಜಿಸುತ ಬಂದ | ತಿರುಹುತ್ತ ಖಡ್ಗವನು ಭರದಿ || ೨೦೩ ||
ಜನರನುಳಿದೊರ್ವನಯ್ತಂದ ಬಯಸಿದು ಕೃತಾಂ | ತನ ಬಾಯ ಹೋಗುವಂತೆ ಮುದದಿ |
ಅನುಮಾನಿಸದೆ ಪೊಕ್ಕನಾ ನಾಟ್ಯನಿಲಯವನು | ಘನ ಮದಾಂಧತೆಯಿಂದಲಾಗ || ೨೦೪ ||
ಬಂದು ಮಣಿಪರಿಯಂಕದೆಡೆಗೆ ನುಡಿಸಿದನೆಲಗೆ | ಇಂದುಮುಖಿ ಬಗೆಬಗೆಯ ಸುಮವ |
ತಂದೆನಿದೊ ಗಂಧ ಕಸ್ತೂರಿಗಳ ಸಹಿತ ಕೊ | ಳ್ಳೆಂದು ಮತ್ತಿಂತೆಂದನಾಗ || ೨೦೫ ||
ತರುಣಿ ಕೇಳೆನ್ನಂಥ ಪುರುಷರಿನ್ನುಂಟೆ ಸರ | ಸಿರುಹಭವ ನಿರ್ಮಿಸಿದ ಜಗದಿ |
ಸುರರ ಪಿರಿಯರ ಮಿಕ್ಕ ನರರು ಪಾಡಲ್ಲೆನಗೆ | ಸರಿ ನಿನಗೆ ತಾನಲ್ಲದಿಲ್ಲ || ೨೦೬ ||
ನಿನ್ನಾಣೆ ಪುಸಿಯದಿರು ಎನ್ನ ಪೋಲುವ ಚೆಲುವ | ರನ್ನು ನೀ ಕಂಡರಿವೆಯೇನೆ |
ನಿನ್ನಂದದಬಲೆಯರು ಎನ್ನನೇ ಬಯಸುವರು | ಎನ್ನಲನಿಲಜನೆಂದನಾಗ || ೨೦೭ ||
ರಾಗ ಸಾವೇರಿ ರೂಪಕತಾಳ
ಎಲವೊ ಕೀಚಕ ಕೇಳು | ಚೆಲುವ ನೀನಹುದೆಂದು |
ಒಲಿದು ಬಂದೆನು ನಾನು | ಬಲು ಧೀರನೆಂದು || ೨೦೮ ||
ಉಳಿದ ನಾರಿಯರಂದ | ವಲ್ಲೆನ್ನ ಬಗೆ ಬೇರೆ |
ಇಳೆಯೊಳೆನಗೆ ಸೋಲ | ದವರಿಲ್ಲ ನರರು || ೨೦೯ ||
ಹಲವು ಮಾತೇನು ನಿನ | ಗೆಣೆ ನಾನು ನೋಡರೆ |
ಗಳಿಗೆ ತೋರುವೆನೆನ್ನ | ಲಲನೆಯಂದವನು || ೨೧೦ ||
ಎನಲು ಕೀಚಕನುಬ್ಬಿ | ವನಿತೆ ಬಾರೆಂದು ಭೀ |
ಮನ ಮೈಯ ತಡವರಿಸೆ | ಸ್ತನವಿಲ್ಲದಿರಲು || ೨೧೧ ||
ಮನದಿ ಬೆಚ್ಚುತಲೆಂದ | ನೆಲೆ ನೀರೆಕೋಮಲ |
ತನುವೇಕೆ ಕಲ್ಲಂತಾ | ಯ್ತೆನಲೆಂದ ನಗುತ || ೨೧೨ ||
ಕಂದ
ಎಲೆ ಖೂಳನೆ ಕೇಳ್ ಪರಸತಿ |
ಗಳುಪಿದ ಪಾತಕಿಗಳಿಗಮೃತವು ವಿಷಮಕ್ಕುಂ ||
ಬಲುಕರ್ಕಶಮಕ್ಕುಂಕೋ |
ಮಲವೆನುತೆದ್ದೊಡನೆ ತುಡುಕಿದಂ ಮುಂದಲೆಯಂ || ೨೧೩ ||
ರಾಗ ಶಂಕರಾಭರಣ ಮಟ್ಟೆತಾಳ
ಮುಂದಲೆಯನು ಪವನತನುಜ ಪಿಡಿಯಲಾತನು |
ನಿಂದು ಚಪಳೆ ಫಡ ಫಡೆನುತ ಕರವ ಪಿಡಿದನು ||
ಮಂದಮತಿಯನೆಲ್ಲಿ ಬಿಡುವೆನೆಂಮ ಭೀಮನು |
ಹೊಂದಿ ಬದಿಯ ಬಡಿದು ಪಿಡಿದನವನ ತುರುಬನು || ೨೧೪ ||
ತುರುಬು ಹಿಡಿಯಲುರುಬಿ ಭಯದೊಳಾ ದುರಾತ್ಮನು |
ತರುಣಿಯಲ್ಲ ಕಪಟವೆಂದರಿದು ಖತಿಯನು ||
ಧರಿಸಿ ಪೊಕ್ಕು ಭೀಮನೊಡನೆ ಧಡ ಧಡೆನುತಲಿ |
ಭರದಿ ಹೊಡೆವುತಿರಲು ಧಪ್ಪು ಧಿಪ್ಪೆನುತ್ತಲಿ || ೨೧೫ ||
ಸರಸಿಜಾಕ್ಷಿ ದ್ರುಪದತನುಜೆ ನಿಂದು ದೂರದಿ |
ಭರದಿ ತಿವಿಗಳನ್ನು ಕೇಳುತಿರಲು ತೋಷದಿ ||
ದುರುಳನಿತ್ತ ಸತ್ತ್ವದಿಂದ ಮರುತಸುತನನು |
ಉರವ ತಿವಿಯೆ ಮಂಡಿಯಿಂದ ತರಹರಿಸಿದನು || ೨೧೬ ||
ಭರಿತರೋಷನಾಗಿ ಭೀಮನೌಡುಗಚ್ಚುತ |
ಉರಿಯನುಗುಳುತೆದ್ದು ಮುಷ್ಟಿಯಿಂದ ಗಜರುತ ||
ದುರುಳ ಕೆಡೆಯೆನುತ್ತ ಭಾರಿ ಬಾಹುಬಲದಲಿ |
ಉರವ ತಿವಿಯೆ ಸಿಡಿಲು ಗಿರಿಗೆ ಬಡಿದ ತೆರದಲಿ || ೨೧೭ ||
ಭಾಮಿನಿ
ಕರಹತಿಗೆ ಕೀಚಕನ ತನು ಜ |
ಜ್ಝರಿತವಾದುದು ಕರುಳನುಗುಳುತ |
ಧರೆಗುರುಳೆ ಕಂಡನಿಲಸುತ ಮುದುಡಿಸಿದ ಖಳವೆಣನ ||
ಕರೆದು ತರುಣಿಗೆ ತೋರಿಸಲು ಬಂ |
ದಿರದೆ ಬಿಗಿಯಪ್ಪಿದಳು ಕಾಂತನ |
ಹರುಷದಲಿ ಹಿಗ್ಗುತ್ತ ಮುಂಡಾಡಿದಳು ಮುದ್ದಿಸುತ || || ೨೧೮ ||
ಕಂದ
ಬಿಗಿಯಪ್ಪಿದ ಸತಿಯಂ ಕಂ |
ಡೊಗುಮಿಗೆಯಾನಂದದಿಂದೆ ನಡೆ ಮನೆಗೆನುತಂ ||
ನಗುತಾ ಭೀಮಂ ತಿರುಗಲ್ |
ಮುಗುದೆಯುಮಾ ಗರಡಿಯ ಕಾವಲವರೊಳೆಂದಳ್ || ೨೧೯ ||
Leave A Comment