ರಾಗ ಭೈರವಿ ಝಂಪೆತಾಳ

ಚರರು ಲಾಲಿಸಿರೆನ್ನ | ದುರುಳ ಪಿಡಿದೆಳೆಯೆ ಕಂ |
ಡರಿತರೆನ್ನವರುಬಡಿ | ದುರುಳಿಚಿದರವನ || ೨೨೦ ||

ಪೋಗಿ ನೋಡುವುದೆನಲು | ಬೇಗಲವದಿರು ಬಂದು |
ನೀಗಿದುಸಿರಿನ ಖಳನ | ನಾಗಲೀಕ್ಷಿಸುತ || ೨೨೧ ||

ಭರದೊಳಯ್ತಂದವನ | ಕಿರಿಯರೊಳು ಪೇಳೆ ಬಂ |
ದಿರದೆ ನೂರೈವರುರೆ | ಮರುಗಿ ಬಾಯ್ ಬಿಡುತ  || ೨೨೨ ||

ಬಂದು ತಮ್ಮಗ್ರಜನ | ಹೊಂದಿದಸುವಿನ ಶವದೊ |
ಳಂದು ಬಿದ್ದುರುಳಿ ಗೋ | ಳೆಂದೊರಲುತಿರಲು || ೨೨೩ ||

ತರುಣಿ ದೂರದಿ ನಿಂತು | ಹರುಷಿಸಲು ಕಂಡಿವರು |
ಮರಣವಿವಳಿಂದಿವಗೆ | ದೊರಕಿತೆಂದರಿತು || ೨೨೪ ||

ವಾರ್ಧಕ

ಇವಳಿಂದ ಮರಣವಾಯ್ತೆಮ್ಮಣ್ಣಗಯ್ಸೆ ನಾ |
ವಿವಳನೀ ಶವದೊಡನೆ ಸುಡುವೆವೆನುತವದಿರಂ |
ದವನೀಶನೊಳ್ ನೇಮಗೊಂಡಧಿಕ ಕೋಪದಿಂದಾಕೆಯಂ ಪಿಡಿದು ತಂದು ||
ಯುವತಿ ನಗುಯೆನುತಲಾ ಖಳವೆಣನಕಾಲ್ದೆಸೆಯೊ
ಳವಳಂಬಿಗಿಸಲರ್ಧರಾತ್ರೆಯೊಳ್ ಕೂಗುತಾ |
ಹವಸಮರ್ಥರಹ ಗಂಧರ್ವರಿರೆ ಕಾವರಿಲ್ಲೆನಲು ಕೇಳಿದ ಭೀಮನೂ || || ೨೨೫ ||

ರಾಗ ಮಾರವಿ ಏಕತಾಳ

ಕೇಳುತ ಭೀಮನು ಬಾಲಕಿಯಳಲನು | ಖೂಳರಿಂಗೆ ತುದಿಗಾಲ ಬಂದುದೊ ಎನು |
ತಾಲೋಚಿಸುತಲಿ ಕಾಳಮೂಳರ ಯಮ | ನಾಳಿಗೊಪ್ಪಿಸುವೆನೀ ವೇಳೆಯೊಳೆನುತ || ಬಂದನಾಗ || ೨೨೬ ||

ಬರುತೊಂದು ಮಹಾ ಮರವನು ಕಾಣುತ | ಮುರಿದದ ಕೊಂಡಬ್ಬರಿಸುವ ಮೂರ್ಖರ |
ನೆರವಿಯ ಹೊಯ್ವೆನುತುರವಣಿಸುತಲಾ | ದುರುಳರ ತಂಡವ ಧರೆಗುರುಳಿಸಿದ || ಕೋಪದಿಂದ || ೨೨೭ ||

ಅರರೆ ಗಂಧರ್ವರ ತರುಣಿಯಿವಳ ಬಿಡು | ದುರಕೆ ಬಂದರಿವಳೆರೆಯರು ತಮ್ಮಲಿ |
ಹರಿಯದೆನುತ ಪಾಯ್ವರ ಕಂಡನಿಲಜ | ಮರದಿಂ ಪೊಯ್ದನಿಬರನೊರಗಿಸಿದನು || ಖಾತಿಯಿಂದ || ೨೨೮ ||

ಭಾಮಿನಿ

ಮರುತಸುತನೀ ತೆರದಿ ನೂರೈ |
ವರನು ಬಿಡದುರುಳಿಚಿದು ಮಿಣ್ಣನೆ |
ಮರಳಿ ತಾನಯ್ತಂದು ಪೊಕ್ಕನು ಪಾಕಮಂದಿರವ ||
ತರುಣಿಯಿತ್ತಲು ಮಿಂದು ನಗುತು |
ಬ್ಬರದ ಹರುಷದಿ ಬಂದಳೊಯ್ಯನೆ |
ಗುರುಕುಚದ ಭಾರದಲಿ  ಬಡ ನಡು ಬಳುಕೆ ನಲವಿನಲಿ || ೨೨೯ ||

ರಾಗ ಕೇದಾರಗೌಳ ಅಷ್ಟತಾಳ

ಲಲನೆಯೀ ತೆರದೊಳು ಬರುತ ಕಂಡಳು ಪಾಕ | ನಿಲಯದಿ ಭೀಮನನು |
ಬಲು ಧೀರ ಗಂಧರ್ವರಿಗೆ ನಮೋ ಎಂದಳು | ತಳಿವಾಗಿಲಲಿ ತೋಷದಿ || ೨೩೦ ||

ತರುಣಿಯೀ ತೆರದಿ ಮಂದಿರಕಯ್ದಲಿತ್ತಲು | ತರಣಿಯಂಬರಕಡರೆ |
ದುರುಳನ ಮರಣವಾರ್ತೆಯು ಗುಜುಗುಜಿಸಿತು | ಪುರದೊಳೆಲ್ಲರ ಬಾಯೊಳು || ೨೩೧ ||

ಧರಣಿಪ ಮತ್ಸ್ಯನೀ ಸುದ್ದಿಯ ಕೇಳುತ್ತ | ಮರುಗುತ್ತ ಮನದಿ ತನ್ನ |
ತರುಣಿಯ ಕರೆದೆಂದನೆಲೆ ನೀರೆ ಪೊರಡಿಸು | ದುರುಳೆ ಸೈರಂಧ್ರಿಯನು || ೨೩೨ ||

ವರನ ಮಾತನು ಕೇಳುತ್ತನುಜಾದಿಗಳಲುತ್ತ | ಕರೆದು ಸೈರಂಧ್ರಿಯನು |
ಅರುಹಿದಳೆಲೆ ಮಹೋತ್ತಮೆ ಕೇಳು ನಿನ್ನೊಳು | ಒರೆಯಲಂಜುವೆವು ನಾವು || ೨೩೩ ||

ಕರವ ಮುಗಿವೆ ನಮ್ಮ ಹರಣವನುಳುಹಿದು | ತೆರಳು ನಿನ್ನಯ ಠಾವಿಗೆ |
ಸರಸಿಜಾಂಬಕಿ ನಿಲ್ಲದಿರು ನಡೆಯೆನೆ ಕೇಳಿ | ಮರಳಿ ದ್ರೌಪದಿ ಪೇಳ್ದಳು || ೨೩೪ ||

ರಾಗ ಕೇದಾರಗೌಳ ಝಂಪೆತಾಳ

ಏಕೆನ್ನ ಜರೆವೆ ದೇವಿ | ನಿಮ್ಮನುಜ | ತಾ ಖೂಳನಧಮಜೀವಿ |
ಕಾಕುತನವನು ಮಾಡಿದ | ಅದರಿಂದ | ನಾಕದವರನು ಕೂಡಿದ || ೨೩೫ ||

ಒರೆದೆ ನಾ ಮೊದಲೆ ನಿಮಗೆ | ಎನ್ನಕಾಂ | ತರು ಧೀರರೆನುತಲವಗೆ |
ಅರುಹಿ ಕಂಡರು ತನ್ನಲಿ | ಪಾತಕವು | ಹೊರದು ಮುನಿಯೆವು ನಿಮ್ಮಲಿ || ೨೩೬ ||

ಎನಲೆಂದಳೆಲಗೆ ನಿನ್ನ | ನೋಡಿದರೆ | ಮನಕೆ ಭಯವಹುದು ಮುನ್ನ |
ಮನೆಯೊಳಿರಬೇಡ ನೀನು | ಸಾಕಿನಿತು | ವನಿತೆ ನಡೆ ಪೋಗು ನೀನು || ೨೩೭ ||

ಅವನೀಶನರಸಿ ಕೇಳು | ಹದಿಮೂರು | ದಿವಸವಿಹೆವೀ ಎಡೆಯೊಳು |
ತವಕದಲಿ ನಮ್ಮ ನೀವು | ನೂಕಿಸಿದ | ರವಧಿಯೊಳು ಪೋಗೆವಾವು || ೨೩೮ ||

ಮುಂದೆ ನೀವೇ ನನ್ನನು | ಇರು ಎಂದ | ಡೊಂದು ದಿನವಿರೆನು ನಾನು |
ಚಂದವಹುದಿನ್ನು ನಿಮಗೆ | ಬೆದರದಿರಿ | ಎಂದು ತೆರಳಿದಳು ಮನೆಗೆ ||೨೩೯||

ಭಾಮಿನಿ

ಎಲೆ ಧರಾಧಿಪ ಕೇಳು ಕೀಚಕ |
ನಳಿದನೀ ಪರಿಯಿಂದ ಭೀಮನ |
ಕಲಹದಲಿ ಸಂಶಯ ನಿವೃತ್ತಿಯದಾಯ್ತೆ ನಿನಗೆನಲು ||
ತಿಳಿದೆನೀ ಪರಿಯಂತವೆಲೆ ಮುನಿ |
ತಿಲಕ ಮುಂದಣ ಕಥೆಯ ಪೇಳಿದು |
ಸಲಹು ತನ್ನನೆನುತ್ತ ಪದಕೆರಗಿದನು ಧರಣೀಶ || ೨೪೦ ||

ಮೊದಲನೆಯ ಸಂಧಿ ಕೀಚಕವಧೆ ಮುಗಿದುದು

* * *

 


ಎರಡನೆಯ ಸಂಧಿ : ಉತ್ತರಗೋಗ್ರಹಣ

ವಾರ್ಧಕ

ಧರಣೀಶ ಜನಮೇಜಯಕ್ಷಿತಿಪ ಲಾಲಿಸೀ |
ಪರಿಯಿಂದಲವರಿರ್ದರಿತ್ತಲುಂ ಹಸ್ತಿನಾ |
ಪುರವರದೊಳಂ ಕೌರವಂ ಪಾಂಡವರನರಸಿ ತಿಳಿದು ತನಗೊರೆವುದೆಂದು ||
ಚರರನಟ್ಟಿದಲವದಿರುಂ ಧರೆಯನುಂ ತೊಳಲಿ |
ಅರಿಯದಾ ಕೌಂತೇಯರಿರವನಯ್ತಂದು ತ |
ಮ್ಮರಸನೊಡ್ಡೋಲಗಂಗೊಟ್ಟೊಪ್ಪಿರಲ್ ಕಂಡು ಕಾಲ್ಗೆರಗುತಿಂತೆಂದರು || ೨೪೧ ||

ರಾಗ ಕಲ್ಯಾಣಿ ಆದಿತಾಳ

ಕುರುಭೂಪ ಲಾಲಿಸಯ್ಯ | ನಾವೆಂಬುದಿ | ನ್ನರಿಕೆಯಾಗಿರಲಿ ಜೀಯ |
ಧರಣಿಯೊಳಿಲ್ಲ ಪಾಂಡವರು | ಹುಸಿ ನುಡಿಯ ನಾ |
ವರುಹೆವು ತಿರೆಯೆಲ್ಲ | ತಿರುಗಿ ನೋಡಿದೆವಯ್ಯ || ಕುರುಭೂಪ || || ೨೪೨ ||

ಸುರಲೋಕದೊಳಗಿಹರೊ | ಮತ್ತಲ್ಲದೆ | ಉರಗನೂರೊಳಗಿಹರೊ |
ಅರಿಯೆವು ನಾವಿನ್ನಂ | ತಿರಲರಿಗಳ ಮಾತು |
ಧೊರೆಯೆ ಕೇಳೊಂದ್ಹೊಸ | ಪರಿ ವಾರ್ತೆ ಕೇಳ್ದೆವು || ಕುರುಭೂಪ || || ೨೪೩ ||

ಗಂಧರ್ವವಧುವೋರ್ವಳು | ಮತ್ಸ್ಯನ ಸತಿ | ಪೊಂದಿ ಸೇವಿಸುತಿರಲು |
ಬಂದು ಕೀಚಕ ಪಿಡಿ | ದೆಳೆಯವಳೆರೆಯರು |
ಕೊಂದರಾತನನು ತ | ಮ್ಮಂದಿರು ಸಹವಾಗಿ || ಕುರುಭೂಪ ||  || ೨೪೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪತಿ ಚರರೆಂದುದನು ಕೇ | ಳ್ದರಿತನಿದು ಪಾಂಡವರ ವೇಷದ |
ಪರಿಯೆನುತ ಕರ್ಣಾದಿ ಸುಭಟರ | ಕರೆದುಸಿರ್ದ || ೨೪೫ ||

ಧುರಸುಭಾಗ್ಯರು ಕೇಳಿ ಪಾಂಡವ | ರಿರುವರಾ ಠಾವಿನಲಿ ಸೇವಿಪ |
ತರುಣಿ ದ್ರೌಪದಿ ಕೀಚಕನ ಶಿರ | ವರಿದ ಭೀಮ || ೨೪೬ ||

ನುಡಿಯಿದಕೊ ಹುಸಿಯಲ್ಲ ವೈರಿಗ | ಳಡಗಿಹರು ನಾವಿನ್ನು ಕುಳಿತಿರೆ |
ಕೆಡುವುದೆಮ್ಮಯ ಭಾಷೆ ಸೈನ್ಯವು | ನಡೆಯಲಿನ್ನು  || ೨೪೭ ||

ಭರದಿ ನಡೆದಾ ಮತ್ಸ್ಯಭೂಪನ | ತುರುಗಳನು ಸೆರೆವಿಡಿಯಲಾಳ್ದನ |
ಹರಿಬಕೋಸುಗ ತೆರಳಿ ನಮ್ಮೊಳು | ಧುರಕೆ ಬಹರು || ೨೪೮ ||

ವರುಷದವಧಿಯೊಳವರನೀಕ್ಷಿಸಿ | ಮರಳಿ ವನಕಟ್ಟುವೆನು ಹದಿಮೂರ್ |
ವರುಷವೆಂದೆನೆ ಭೂಪಗಹುದೆಂ | ದರು ಸುಭಟರು || ೨೪೯ ||

ವಾರ್ಧಕ

ಧರಣಿಪತಿಯೆಂದುದಂ ಕೇಳ್ದಾ ಸುಶರ್ಮನೆಂ |
ಬುರು ಪರಾಕ್ರಮಿಯೆಂದನೆಲೆ ಭೂಪ ಕೇಳ್ ಭೀಷ್ಮ |
ಗುರು ಕೃಪಾದ್ಯರ ಮತವನರಿದು ಎಸಗಲು ಕಾರ್ಯವಹುದೆನಲ್ ಕೇಳುತಂದು ||
ಕುರುರಾಯನವರ್ಗಳಿಂಗೆರಗುತೊಡಬಡಿಸಿ ಮ |
ತ್ತಿರದೆ ಭೀಷ್ಮಾದಿಗಳನೊಡಗೊಂಡು ಸೈನ್ಯಮಂ |
ಬರಿಸಿ ಏಕಾದಶಕ್ಷೌಹಿಣಿಯನುಂ ನೆರಹಿ ಪೊರವಂಟನಿಭಪುರವನುಂ || ೨೫೦ ||

ರಾಗ ಮಾರವಿ ಏಕತಾಳ

ಕುರುಪತಿಯಿಂತೀ  | ಪರಿಯಲಿ ಗಜರಥ |
ತುರಗ ಪದಾತಿಯು | ಭರದಿ ನಡೆಯುತಿರೆ |
ಧರಣಿಯದುರಿತಂ | ಬರ ಬಿರಿಯಿತು ದಿ |
ಕ್ಕರಿಗಳೊದರಿದವು | ಭರಿತ ಭರದಲಿ || ನಡೆದರಾಗ || ೨೫೧ ||

ಪರಶು ಭುಸುಂಡಿ ತೋ | ಮರವಸಿ ಕುಂತ ಮು |
ದ್ಗರ ಪಟ್ಟಿಸ ಗದೆ | ಪರಿಘವು ಧನು ಶರ |
ಉರುತರಾಯುಧಗಳ | ಧರಿಸಿಯಾರ್ಭಟಿಸುತ |
ಮೊರೆವುತ ಗಜರಿ ಬೊ | ಬ್ಬಿರಿವುತ ಭಟರು || ಬಂದರಾಗ || ೨೫೨ ||

ಭರದಿಂ ಬಂದಾ | ಧರಣಿಪ ಮತ್ಸ್ಯನ |
ಧರೆಯಂ ಕಾಣುತ | ಕುರುಪತಿ ಸೈನ್ಯವ |
ನೆರಡು ಮಾಡಿ ಬೊ | ಬ್ಬಿರಿದು ಸುಶರ್ಮನ |
ಕರೆದಟ್ಟಿದ ಬಲ | ವೆರಸಿದ ಕ್ಷಣಕೆ || ಏನನೆಂಬೆ || ೨೫೩ ||

ಆಳ್ದನ ನೇಮವ | ತಾಳ್ದತಿ ಗರ್ವವ |
ನಾಲ್ದೆಸೆ ಕಂಪಿಸ | ಲೂಳ್ದು ಕಿಡಿಯ ಖತಿ |
ಯೋಳ್ ದಕ್ಷಿಣ ದೆಸೆ | ಗಾಳ್ ಮರೆಯಲು ಭರ |
ದೋಳ್ದಾಳಿಯಲಿ ಕಾಳಗಕೆನುತಲೆ | ನಡೆದರಾಗ  || ೨೫೪ ||

ಕರಿ ಹಯ ರಥ ಪದ | ಚರಸಂಕುಲ ಸಹಿ |
ತುರವಣಿಸುತಲ | ಬ್ಬರಿಸಿ ವಿರಾಟನ |
ತುರುಗಳ ಸೆರೆವಿಡಿ | ದಿರದೆ ಗೋಪಾಲರ |
ನೆರವಿಯ ಸದೆಬಡೆ | ದುರುಳಿಚಿ ಧರೆಗೆ | ಕೋಪದಿಂದ || ೨೫೫ ||

ಭಾಮಿನಿ

ಅರಸ ಕೇಳಿಂತಾ ಸುಶರ್ಮನು |
ಸುರಭಿ ಗೋವ್ಗಳ ಸೆರೆವಿಡಿಯೆ ಕಂ |
ಡರಿತು ಕಂಗೆಡುವಧಟ ಗೋಪಾಲಕರನೀಕ್ಷಿಸುತ ||
ನೊರಜುಗಳಿಗಂಜುವುದೆ ಗಿರಿ ಫಡ |
ಮರುಳೆ ಹೋಗೆನುತಾ ಸುಶರ್ಮನು |
ಶಿರವನಂಬರಕಡರಲೆಚ್ಚನು ಗೋಪಸಂಕುಲವ || ೨೫೬ ||

ಕಂದ

ಸರಳಿರಿತಕೆ ನಿಲಲಾರದೆ |
ತುರುಗಾವಲೊಳಿಹ ಸುಭಟರು ಬೆದರುತ ಭರದಿಂ ||
ಧರಣಿಪ ಮತ್ಸ್ಯನ ಬಳಿಗಂ |
ಪರಿತದಾಂಗ ನೃಪತಿಗೆಂದರು ಭೀತಿಯೊಳಂ || ೨೫೭ ||

ರಾಗ ಮುಖಾರಿ ಆದಿತಾಳ

ಧರಣೀಶ ಲಾಲಿಸೆಮ್ಮ ಮಾತ | ಲೋಕಪ್ರಖ್ಯಾತ || ಧರಣೀಶ    || ಪಲ್ಲವಿ ||

ಅರುಹಲಂಜುವೆವು ಕೇಳಯ್ಯ | ಬಂದಿದೆ ಸಪ್ತ | ಶರಧಿಯಂದದಿ ಸೈನ್ಯ ಜೀಯ |
ಒರೆಯಲಿನ್ನೇನೆಮ್ಮ | ನುರುಳಿಚಿ ಭರದಿಂ | ದರುವತ್ತು ಸಾವಿರ | ತುರುಗಳನವದಿರು |
ಸೆರೆವಿಡಿದೊಯ್ದರು | ಧೊರೆ ಯಾರೆಂಬುದ | ನರಿಯೆವುನಾವೆಂ | ದೆರಗಿದರಂದು || ಧರಣೀಶ || ೨೫೮ ||

ರಾಗ ಭೈರವಿ ಝಂಪೆತಾಳ

ಎಂದ ಮಾತನು ಕೇಳು | ತಂದು ಮನದಿ ವಿರಾಟ |
ನೊಂದು ಕೀಚಕನಳಿದ | ನೆಂದು ಕೆಲ ಬಲನ || ೨೫೯ ||

ಪರಿಕಿಸಲು ಕಂಡು ಬೊ | ಬ್ಬಿರಿದು ಭಟರೆಂದರೆಲೆ |
ಧರಣೀಶ ಕಳುಹೆಮ್ಮ | ಧುರಕೆ ಬೇಗೆನುತ || ೨೬೦ ||

ರಾವುತರು ಜೋದರರು | ಸಾವಂತಮನ್ನೆಯರು |
ತೀವಿದುರು ನಿಸ್ಸಾಳ | ರಾವದಿಂ ಭರದಿ || ೨೬೧ ||

ಧುರಕೆ ನಡೆಯಲು ಯುಧಿ | ಷ್ಠಿರನಿತ್ತಲನುಜರನು |
ಕರೆದು ಪೇಳಿದನೋರ್ವರರಿಯದಂದದಲಿ || ೨೬೨ ||

ವಾರ್ಧಕ

ಅನುಜರಾಲಿಸಿರೆಮ್ಮನರಿಯಲೋಸುಗವೆ ಕುರು |
ಜನಪನಯ್ತಂದವಂ ನಾವಿನ್ನು ಸುಮ್ಮನಿಹು |
ದನುಚಿತಂ ನಾಂ ಪೋಪೆನೊಡನೆ ನೀ ಬಂದಿರುವುದೆಂದನಿಲಜಗೆ  ಸೂಚಿಸಿ ||
ವಿನಯದಿಂ ತಾ ಭೂಪನೊಡನೆ ರಥವೇರಿ ಬರ |
ಲನಿತರೊಳು ಕದನಕುರವಣಿಸಿ ತಾ ಮತ್ಸ್ಯನೃಪ |
ಕನಲಿ ಕೋಲ್ಗರೆವುತ್ತಯ್ತರೆ ಸುಶರ್ಮಂ ಕಾಣುತಲೆ ತಿರುಗಿದಂ ಖತಿಯೊಳು || ೨೬೩ ||

ರಾಗ ಶಂಕರಾಭರಣ ಮಟ್ಟೆತಾಳ

ತಿರುಗುತಾ ಸುಶರ್ಮ ಕೋಪದಲಿ ಶರೌಘವ |
ಸುರಿದು ಶಿರವ ತರಿದನಂದು ಪರಬಲೌಘವ ||
ಧರಣಿಪತಿ ವಿರಾಟನವದಿರುಬ್ಬಿ ಖತಿಯೊಳು |
ಧುರಕೆ ನಿಂದರರಿವರೂಥಿನಿಯೊಳು ಬಲದೊಳು || ೨೬೪ ||

ಕುರುನೃಪಾಲನಾಳ್ಗಳಿರದೆ ನಿಖಿಳ ಶಸ್ತ್ರದಿ |
ತರಿತರಾರ್ದು ಪೊಕ್ಕರಾ ವಿರಾಟಸೈನ್ಯದಿ |
ಮುರಿದು ಮತ್ಸ್ಯನವರುಕೆದರೆ ಕೆಂಡ ಮೈಯಲಿ |
ಹರಿವುದನ್ನು ಕಂಡು ತನ್ನ ರಥವ ಖತಿಯಲಿ || ೨೬೫ ||

ನೂಕಿ ಮುಂದೆ ನಡೆಸಿ ವೈರಿಭಟರ ಶಿರವನು |
ನಾಕಕಡರಲೆಸೆವುತಿರ್ದನತಿ ಬಲಾಢ್ಯನು |
ನಾಕು ಮೈಯೊಳೌಕುವಾನೆ ಕುದುರೆ ತೇರ್ಗಳ |
ಸೋಕಗೊಡದೆ ತರಿದು ಪೊರಡಿಸಿದನುಸಿರ್ಗಳ || ೨೬೬ ||

ಧುರಸುಭಾಗ್ಯರೆಸುಗೆಗಾನಲಾರದವದಿರು |
ಸುರಿವ ಕರುಳನೊತ್ತಿ ಪಿಡಿದು ಮರಳಿ ಪೊಯ್ದರು |
ಮುರಿದು ಬರುವ ಬಲವ ಕಾಣುತಾ ಸುಶರ್ಮನು |
ಕರದೊಳಭಯ ಕೊಡುತೆ ತಾನೆ ಧುರಕೆ ನಿಂತನು || ೨೬೭ ||

ಫಡ ವಿರಾಟ ಭಳಿರೆ ಧನುವ ಪಿಡಿಯಲರಿತಿಹೆ |
ಪಡೆ ಬೆದರ್ದರುಬ್ಬಬೇಡ ನಿಲ್ಲುತಾನಿಹೆ |
ಕಡಿವೆ ನಿನ್ನ ಮೊದಲು ಮತ್ತೆ ಮುರಿವೆ ಬಲವನು |
ಮೃಡನು ಬಂದು ಬೇಡಿಕೊಳಲು ಬಿಡೆನು ತುರುವನು || ೨೬೮ ||

ಎನುತಲಾರ್ದು ಬಾಣವೃಷ್ಟಿಗರೆಯೆ ಕಾಣುತ |
ಜನಪ ವಿಧವಿಧಸ್ತ್ರದಿಂದಲೆಚ್ಚ ಗಜರುತ |
ಕನಲುತಾ ಸುಶರ್ಮ ಮತ್ಸ್ಯನೇರ್ದ ರಥವನು |
ಕಿನಿಸಿನಿಂದ ತರಿದು ಕಡಿದ ಕರದ ಧನುವನು || ೨೬೯ ||

ಭಾಮಿನಿ

ಮುರಿಯೆ ಧನು ಖಡ್ಗಾದಿ ಶಸ್ತ್ರದೊ |
ಳುರುಬುವರಸನ ಕಂಡು ಕದನದಿ |
ಜರಿದನಿವನಿನ್ನೇಕೆ ತಡವೆನುತಾ ಸುಶರ್ಮಕನು ||
ಉರವಣಿಸಿ ಪಿಡಿದೆಂದ ನೆಲವೋ |
ತಿರುಕುಳನೆ ನಿನಗೇಕೆ ಕೀಚಕ |
ಮುರಿದ ಮೇಲ್ ಧುರವೆಂಬ ನುಡಿಕೇಳಿಸಿತು ಧರ್ಮಜಗೆ || ೨೭೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲೆ ಮರುತಸುತ ಕೇಳು ವೈರಿಗ | ಳೊಳಗೆ ಸಿಲುಕಿಹ ಮತ್ಸ್ಯನೃಪತ |
ದ್ಬಲವನಾಯಕವಾಯ್ತು ಬಿಡಿಸಾ | ಬಲುಭುಜನನು || ೨೭೧ ||

ಎನೆ ಹಸಾದವೆನುತ್ತಲಾಶುಗ | ತನುಜನಾಲದ ಮರವ ಕಂಡೆಂ |
ದನು ಯುಧಿಷ್ಠೀರ ಕೇಳು ಮತ್ತೀ | ಬಿನುಗರನ್ನು || ೨೭೨ ||

ಈ ಮಹಾಮರದಿಂದ ಬಡಿವೆನು | ಸಾಮಜಾಶ್ವ ವರೂಥಗಳು ಸಹಿ |
ತೀ ಮದಾಂಧರನೆನಲುಸಿರ್ದನು | ಭೂಮಿಪಾಲ || ೨೭೩ ||

ಮರನ ಮುರಿವ ಬಲಾಢ್ಯ ಭೀಮನೆ | ಹೊರತು ಬೇರಿಲ್ಲೋರ್ವನೆಂಬುದ |
ನರಿತಿಹರು ಬಹಿರಂಗವಹುದೀ | ತರುವಿನಿಂದ || ೨೭೪ ||

ರಾಗ ಶಂಕರಾಭರಣ ಮಟ್ಟೆತಾಳ

ಪೇಳ್ದ ಮಾತನು | ಕೇಳ್ದು ಭೀಮನು ||
ತಾಳ್ದು ಖತಿಯ ಮುಂದೆ ನಡೆದು | ಸೀಳ್ದು ಗಜವನು || ೨೭೫ ||

ಬಡಿದು ರಥವನು | ಕೆಡೆದು ಹಯವನು ||
ಕಡುಗಿ ತಡೆವ ಭಟರನೊದೆದು | ಘುಡುಘುಡಿಸಿದನು || ೨೭೬ ||

ಫಡ ಫಡೆನುತಲಿ | ನಡೆದು ಭರದಲಿ ||
ತಡೆದು ತಾ ಸುಶರ್ಮಕನನು | ಬಿಡಿಸಿ ನೃಪನನು  || ೨೭೭ ||

ತುಡುಕಿ ಪಗೆಯನು | ಪಿಡಿದು ತಂದನು ||
ಪೊಡವಿಪತಿ ವಿರಾಟ ತೋಷ | ಬಡುತಲೆಂದನು || ೨೭೮ ||

ಭಾಮಿನಿ

ಭಳಿರೆ ವಲಲನೆ ಭಾಪು ವೀರನೆ |
ಸಲಹಿದೈ ತನ್ನಸುವನೆನುತಾ |
ಬಲುಭುಜನು ಮನ್ನಿಸುತಲವ ಸಹಿತಾ ಸುಶರ್ಮಕನ ||
ಎಳೆದು ತರೆ ನಿಜರಥಕೆ ಕಂಕನು |
ತಿಳುಪಿ ನೀತಿಯನವನ ಬಿಡಿಸಲು |
ಬಳಿಕಲಿತ್ತಲು ಮತ್ಸ್ಯ ತಿರುಗಿದ ತುರುವ ಮರಳಿಚುತ || ೨೭೯ ||

ಒಡೆಯನನು ಕಾಣುತ್ತ ಗೋವುಗ | ಳೊಡನೆ ತೋಷಂಬಡೆದು ಪಾದದಿ |
ಪೊಡವಿಯನು ಕೆದರುತ್ತ ಹೂಂಕರಿಸುತ್ತ ಕುಣಿಕುಣಿದು |
ನಡೆವುತಿರೆ ಕೆಂಧೂಳ್ಗಳಂಬರ | ಕಡರೆ ಮತ್ಸ್ಯನು ನಗುತ ತನ್ನಯ |
ಪಡೆವೆರಸುತಯ್ತಂದನೊದರುವ ವಾದ್ಯ ಘೋಷದಲಿ || ೨೮೦ ||

ವಾರ್ಧಕ

ನಿಜವನರಿಯಿಸದಾ ದಿನಕೆ ಪಾಂಡುನಂದನರ್ |
ವಿಜಯಿಗಳು ತಾವಾದರಿತ್ತಲು ಸುಶರ್ಮಕಂ |
ಗಜಬಜಿಸುತತ್ತಲುಂ ತಿರುಗಿ ಪಾಳೆಯದೊಡನೆ ಪೊಕ್ಕನಾ ನೃಪಬಲವನು ||
ಗಜರುತಾ ಕೌರವಂ ಕೋಪಿಸಲ್ ಬೆದರುತಂ |
ಬುಜಸಖನು ತಾನಪರಜಲಧಿಗಿಳಿದಿರಲು ಬಲು |
ಭುಜ ಪಾರ್ಥನನುವರಂ ತನಗೇಕೆ ಭಯಮೆನುತಡರ್ದನುದಯಾಚಲವನು || ೨೮೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತರಣಿಯುದಯದೊಳೆದ್ದು ಕೌರವ | ಧರಣಿಪತಿ ಕೋಪದಲಿ ಗಂಗಾ |
ತರಳ ಗುರು ಕರ್ಣಾದಿ ಸುಭಟರ | ಕರೆದುಸಿರ್ದ || ೨೮೨ ||

ಕೇಳಿ ಭಟರು ವಿರಾಟ ನಮ್ಮಯ | ಮೇಲೆ ಬಂದನು ಪೂತು ಮಝ ಬಿ |
ಲ್ಲಾಳಹನು ತಪ್ಪಲ್ಲ ನೀವಿ | ನ್ನೇಳಿ ಭರದಿ || ೨೮೩ ||

ಉತ್ತರದ ದಿಶೆಯೊಳಗೆ ತುರುಗಳ | ಮೊತ್ತವನು ಸೆರೆವಿಡಿದು ತಹುದೆನೆ |
ಪತ್ತಿಹಯಸಂಕುಲದಿ ನಡೆದರು | ಮತ್ತೆ ಭಟರು || ೨೮೪ ||

ರಾಗ ಭೈರವಿ ತ್ರಿವುಡೆತಾಳ

ಬರುತ ಕರ್ಣಾದ್ಯಖಿಳ ಸುಭಟರು | ಧರಣಿಪಾಲ ವಿರಾಟಭೂಪನ |
ತುರುಗಳನು ಸೆರೆವಿಡಿಯೆ ಕಾಣುತ | ತರುಬಿದರು ಗೋಪಾಲಕರು ಬಿಡು |
ಸರಳಗರೆವುದ ಕಂಡು ಭೀಷ್ಮಾ | ದ್ಯುರು ಭಟರು ತದ್ಗೋಪನೆರವಿಯ |
ಶಿರವನಂಬರ ಕಡರಲೆಸೆವುತ | ಬರಲು ತೆಗೆದೋಡಿದರು ಗೋವಳ |
ರೇನನೆಂಬೆ | ನಾನಿ | ನ್ನೇನನೆಂಬೆ || ೨೮೫ ||

ತುರುಗಳನು ಬಿಟ್ಟೋಡುವವದಿರ | ಕುರುಪತಿಯ ಭಟರೀಕ್ಷಿಸುತ ಮ |
ತ್ತುರವಣಿಸಿ ಗೋಪಾಲನೋರ್ವನ | ಭರದಿ ಪಿಡಿದತಿ ರೋಷದಿಂದಲಿ |
ಬರೆದು ಸುಣ್ಣವನವನ ಮೂಗಿಗೆ | ಕರೆದು ಪೇಳಿದರೆಲವೊ ನಿಮ್ಮಯ |
ದೊರೆಯ ಕದನಕೆ ಕರೆದು ತಾ  ಹೋ | ಗಿರದೆಯೆನುತಟ್ಟಿದರು ಸಾಹಸ |
ವೇನನೆಂಬೆ | ನಾನಿ | ನ್ನೇನನೆಂಬೆ  || ೨೮೬ ||