ಭಾಮಿನಿ
ಉಳಿದೆನಿಂದಿಗೆನುತ್ತಲಾ ಗೋ |
ವಳನು ನಡುಗುತ್ತಳುತ ಮೈಯಿಂ |
ದಿಳಿವ ರಕುತವ ಬಳಿವುತಯ್ದಿದನೊಡೆಯನಿದ್ದೆಡೆಗೆ ||
ಬಳಿಕಲಿತ್ತಲು ಭದ್ರಪೀಠದಿ |
ಗೆಲವಿನಲಿ ಗಣಿಕಾಸಮೂಹದ |
ಬಳಸಿನಲಿ ಮೆರೆದಿರಲು ಕಂಡನು ಗೋಪನುತ್ತರನ || || ೨೮೭ ||
ಕಂದ
ಕಂಡಾ ಧರಣಿಪಸುತಗಂ |
ಮಂಡೆಯನುಂ ಮಣಿಯಲವನ ಮುಖದಂಗವನುಂ ||
ಕಂಡುತ್ತರನಾ ಸತಿಯರ |
ತಂಡವನೀಕ್ಷಿಸುತಲೆಂದನಾ ಗೋಪನೊಳಂ || ೨೮೮ ||
ರಾಗ ಕಾಂಭೋಜಿ ಝಂಪೆತಾಳ
ಎಲವೊ ಡಗೆಯಿಂದೇಕೆ ಬಂದೆ ಮೂಗಿನ ಮೇಲೆ | ಬಿಳುಪಾಗಿ ತೋರುವುದಿದೇನು ||
ಕಲಹದಲಿ ನಿನ್ನೆ ಮತ್ಪಿತ ಗೆಲಿದುದೇನಾಯ್ತು | ತಿಳುಪಂಜಬೇಡೆನಲುಸಿರ್ದ || ೨೮೯ ||
ಜೀಯ ಬಂದಿದೆ ಕೌರವೇಶ್ವರನ ಸೈನ್ಯ ಸಮು | ದಾಯವದು ಬಡಗು ದಿಕ್ಕಿನಲಿ |
ನೋಯಿಸಿದರೆಮ್ಮ ತುರುಗಳನು ಕೋಳ್ವಿಡಿದರವ | ರಾಯುಧವ ನೋಡಲರಿದೆಮಗೆ || ೨೯೦ ||
ಎತ್ತ ನೋಡಿದರು ಗಜ ಹಯ ರಥ ಪದಾತಿಗಳ | ಮೊತ್ತವಲ್ಲದೆ ಬೇರೆ ಕಾಣೆ |
ಬಿತ್ತರಿಸಲಿನ್ನೇನು ಕರೆ ದೊರೆಯ ಕದನಕೆನು | ತಿತ್ತ ಕಳುಹಿದರೆನ್ನನುಳುಹಿ || ೨೯೧ ||
ಬಲವೆನಿತು ಬಂದಡದು ನಿಮಗೆ ದೊಡ್ಡಿತೆ ನಿನ್ನೆ | ಕಲಹದಲಿ ಮುರಿದೋಡಿದವರು |
ನಿಲುವುದರಿದಿನ್ನೇಕೆ ತಳುವ ಮಾಡದೆ ಏಳು | ಬಲ ಸಹಿತಲನುವರಕೆ ಭರದಿ || ೨೯೨ ||
ಕಂದ
ಎನಲುಬ್ಬುತಲುತ್ತರನುಂ |
ಮನದೊಳು ತಾಂ ಧೀರನೆಂಬಹಂಕೃತಿಯಿದಂ ||
ಕೊನೆಮೀಸೆಯನುಂ ತಿರುಹುತೆ |
ವನಿತೆಯರಂ ನೋಡಿ ನಗುತಲಿಂತೆಂದನವಂ || ೨೯೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭಳಿರೆ ಕೌರವ ಪಾಂಡುಸುತರನು | ಹಳುವಕಟ್ಟಿದೆನೆಂಬ ಹಮ್ಮಿಲಿ |
ಕಲಹಕಂಗಯ್ಸಿದನು ತನ್ನಲಿ | ಗೆಲುವೆನೆಂದು || ೨೯೪ ||
ಬಡನೃಪಾಲರ ಬಡಿದು ಕೆಡಹಿದ | ಕಡುಹನೆನ್ನಲಿ ತೋರಬಂದನು |
ಕಡೆಯ ಮಾತೇನಿನ್ನು ಕೆಟ್ಟನು | ಪಡೆಯು ಸಹಿತ || ೨೯೫ ||
ತುರುವ ಸೆರೆವಿಡಿದಧಮನನು ಹೊ | ಯ್ದೊರಸಿ ಮರಳಿಚಿ ಗೋವುಗಳನಿಭ |
ಪುರಕೆ ಧಾಳಿಯನಿಡುವೆ ಕೊಂಬೆನು | ಧರೆಯನವನ || ೨೯೬ ||
ಮರುಳರೈ ಕೌರವರು ತನ್ನಯ | ಪರಿಯನರಿಯದೆ ಕೆಣಕಿದರು ಬಲ |
ವೆರಸಿ ಮರಣವು ದೊರಕಿತಾ ನರ | ಕುರಿಗಳಿಂಗೆ || ೨೯೭ ||
ಕಾದುವೆನು ಯಾರೊಡನೆ ಯೌವನ | ಮಾದವರು ಕುಲವಿಲ್ಲದವದಿರು |
ಭೂದಿವಿಜರಲ್ಲದೆ ಪರಾಕ್ರಮಿ | ಯಾದ ಭಟರ ||೨೯೮||
ಕಾಣೆನಾತನ ಬಲದೊಳಗೆ ಮ | ತ್ತೇನು ಧೈರ್ಯದಿ ಬಂದನೆನುತಲಿ |
ಮಾನಿನಿಯರನು ನೋಡುತೆಂದಸು | ಮ್ಮಾನದಿಂದ ||೨೯೯||
ರಾಗ ಕಾಪಿ ಅಷ್ಟತಾಳ
ಕುರುರಾಯ ಮರುಳಾದ ಸಿದ್ಧ | ತನ್ನ | ಶಿರವನೆನ್ನಂಬಿಗೆ ಮಾರಿದ ಬದ್ಧ || ಕುರುರಾಯ ||ಪಲ್ಲವಿ||
ದೊರೆಗಳ ನಡತೆ ಈ ಪರಿಯೆ | ಬಂದು | ತುರುಗಳ ಪಿಡಿವುದು ಭಟರಿಗೆ ಸರಿಯೆ |
ದುರುಳತನವನು ಮಾಡಿದನು | ಇನ್ನು | ತರಿದು ಹಾಯ್ಕದೆ ಪೋಗಲೀವೆನೆ ನಾನು || ಕುರುರಾಯ || ೩೦೦ ||
ತೋಡುವೆನವನ ಕರುಳನು | ಇನ್ನು | ನೋಡಬಹುದು ಎನ್ನುತಾ ಸೂಳೆಯರನು |
ನೋಡುತುತ್ತರನು ಇಂತೆಂದ | ಬೇಕು | ಬೇಡೆಂಬರಿಲ್ಲದೆ ನೆಣಗೊಬ್ಬಿನಿಂದ || ಕುರುರಾಯ || ೩೦೧ ||
ಫಲವೇನು ಬಾಯೊಳಾಡಿದರೆ | ನಿನ್ನೆ | ಕಲಹದಿ ಸಾರಥಿ ಮಡಿದನಲ್ಲದಿರೆ ||
ಹುಲು ನೃಪಾಲರಿಗಂಜೆ ನಾನು | ತನ್ನ | ಬಲುಮೆಗೆ ತಕ್ಕ ಸೂತನ ಕಾಣೆನಿನ್ನು || ಕುರುರಾಯ || ೩೦೨ ||
ಸೂತನ ಶಿವ ಕೊಟ್ಟರಿಂದು | ವೈರಿ | ವ್ರಾತವ ಗೋಳುಗುಟ್ಟಿಸುವೆ ತಾನೆಂದು |
ಜಾತಿಪೆಣ್ಣುಗಳನೀಕ್ಷಿಸುತ | ಭೂ | ನಾಥನಣುಗ ಖಡ್ಗವನು ಝಳಪಿಸುತ || ಕುರುರಾಯ || ೩೦೩ ||
ಕಂದ
ಎಂದಾ ಕುವರಂ ಬಾಯಿಗೆ |
ಬಂದಂದದಿ ಗಳಹುತಿಹುದನುಂ ಕಲಿಪಾರ್ಥಂ ||
ನಿಂದಾಲಿಸುತಂ ನಸುನಗೆ |
ಯಿಂದಾ ದ್ರೌಪದಿಯನಯ್ದೆ ಕರೆದಿಂತೆಂದಂ || ೩೦೪ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಡದಿ ಕೇಳೆಮ್ಮುವನು ತಿಳಿಯಲು | ಪಡೆವರಸಿ ಬಂದಿಹನು ಕೌರವ |
ನಡುಗಲೇಕವಗಿನ್ನು ಸರಿಯಿತು | ನುಡಿದ ವರುಷ || ೩೦೫ ||
ಧುರಕೆ ತಾನಯ್ದುವೆನು ನೀನು | ತ್ತರೆಯೊಡನೆ ಪೇಳೀ ಬೃಹನ್ನಳೆ |
ನರನ ಸಾರಥಿಯೆಂದು ತನ್ನನು | ಕರೆಸು ಬೇಗ || ೩೦೬ ||
ಎನಲು ದ್ರುಪದಜೆ ಕೇಳ್ದು ಮತ್ಸ್ಯನ | ತನುಜೆಗುಸಿರಿದಳೀ ಬೃಹನ್ನಳೆ |
ಘನ ಪರಾಕ್ರಮಿ ನರನ ಸಾರಥಿ | ಯೆನಲಿಕಂದು || ೩೦೭ ||
ಕೇಳಿ ಹರುಷಿತೆಯಾಗಿ ಮತ್ತಾ | ಬಾಲೆ ತಾನಯ್ತಂದಳಗ್ರಜ |
ನೋಲಗಕೆ ಬಂದೆಂದಳಣ್ಣನ | ಕಾಲಿಗೆರಗಿ || ೩೦೮ ||
ರಾಗ ಕೇದಾರಗೌಳ ಅಷ್ಟತಾಳ
ಹರುಷದಿ ಕೇಳಣ್ಣ ಸುರಪನ ವನವನ್ನು | ಉರುಹುವ ವೇಳೆಯಲಿ |
ನರಗೆ ಸಾರಥಿಯಾದನಂತೆ ಬೃಹನ್ನಳೆ | ಪರಮ ಸಾಹಸಿಕನಂತೆ || ೩೦೯ ||
ಎನಲುಬ್ಬುತೆಂದ ಎನ್ನನುಜೆ ಶಾಭಾಸೆನ್ನ | ಘನ ನಿನ್ನಿಂದುಳಿಯಿತಿನ್ನು |
ನಿನಗೆ ಪೇಳ್ದವರ್ಯಾರು ಕರೆತಾರಾತನ ನೀನೆ | ವನಿತೆ ಪೋಗೆನೆ ಕೇಳುತ || ೩೧೦ ||
ಬಂದುಳುತ್ತರೆನೋಳ್ಪ ಮಂದಿಯಿಟ್ಟಡೆಯಾಗೆ | ಕಂದರ್ಪನಾನೆಯಂತೆ ||
ಅಂದುಗೆಗಳು ಝಣರೆನೆ ಪಾರ್ಥನೆಡೆಗೆ ಸಾ | ನಂದದಿ ವೇಗದಲಿ || ೩೧೧ ||
ಬರವ ಕಾಣುತ ಫಲುಗುಣ ಹರುಷದಿ ಹಿಗ್ಗಿ | ಕರೆದು ಮತ್ಸ್ಯನ ಸುತೆಯ |
ತರುಣಿ ನೀ ಭರದೊಳೇತಕೆ ಬಂದೆಯೆನೆ ಪಾದ | ಕೆರಗುತಿಂತೆಂದಳಾಗ || ೩೧೨ ||
ರಾಗ ಮಾರವಿ ಏಕತಾಳ
ಕೇಳು ಬೃಹನ್ನಳೆ ಬಡಗಲು ಕುರುಭೂ | ಪಾಲನು ಪಡೆವೆರಸಿ |
ದಾಳಿಯೊಳಯ್ತಂದು ಲಕ್ಷ ಪಶುಗಳನು | ಕೋಳುವಿಡಿದನಂತೆ || ೩೧೩ ||
ತಡೆದು ಮರಳಿಚುವರಣ್ಣನ ಸಾರಥಿ | ಮಡಿದ ನಿನ್ನಿನ ಧುರದಿ ||
ನುಡಿಯ ಕೇಳಿದೆ ನೀನು ನರನ ಸಾರಥಿಯೆಂದು | ನಡೆತಂದೆನು ಬಳಿಗೆ || ೩೧೪ ||
ಇನ್ನೇನೆಂಬೆನದೆನ್ನಯ ಮಾತನು | ಮನ್ನಿಸೆನುತ ನಮಿಸೆ |
ಕನ್ನೆಯೇಳೇಳ್ ನಿನ್ನ ಮಾತನು ಮೀರ್ವೆನೆ | ಮುನ್ನವೆ ತಾ ಬಹೆನು || ೩೧೫ ||
ನಡೆ ನೀ ಮುಂದೆನುತವಳನು ಕಳುಹಿ ಮ | ತ್ತೊಡನೆ ತಾನಯ್ತರಲು ||
ಪೊಡವಿಪ ಮತ್ಸ್ಯನಣುಗ ಕಾಣುತವನೊಳು | ನುಡಿದನು ಗರ್ವದೊಳು || ೩೧೬ ||
ರಾಗ ಭೈರವಿ ಝಂಪೆತಾಳ
ಭಳಿರೆ ಬಂದೈ ಬೃಹ | ನ್ನಳೆ ಕೇಳು ತನಗಿಂದು |
ಕಲಹ ದೊರಕಿದುದು ವೆ | ಗ್ಗಳೆಯರೊಡನೆಂದು || ೩೧೭ ||
ಅಳಿದನೈ ಸೂತ ನೀ | ತಳೆದು ಸಾರಥಿತನವ |
ನುಳಿಸೆನ್ನ ನಿನ್ನ ಧುರ | ದಲಿ ಮೆಚ್ಚಿಸುವೆನು || ೩೧೮ ||
ಎನಲು ನಗುತೆಂದನೆಲೆ | ಜನಪಸುತ ಕೇಳ್ ಭರತ |
ದನುಭವದೊಳಿಹೆನು ಮರೆ | ತೆನು ಸೂತತನವ || ೩೧೯ ||
ವೈರಿಗಳು ಭೀಷ್ಮಾದಿ | ವೀರರವರಿದಿರೆನ್ನ |
ಸಾರಥ್ಯವಹುದೆ ರಣ | ಸೂರೆಯಲ್ಲೆನಲು || ೩೨೦ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಲೆ ಬೃಹನ್ನಳೆಯೇಕೆ ಬೆದರುವೆ | ಮುಳಿದು ಪಗೆಗಳದೇನ ಮಾಳ್ಪರು |
ನಿಲುವೆ ತಾನ್ಯಾರೆಂಬುದನು ನೀ | ತಿಳಿಯದಾದೆ || ೩೨೧ ||
ತಾನರಿಯದವನೇ ನದೀಸುತ | ಭಾನುಜಾದ್ಯರ ಪೇಳದಿರು ಮ |
ತ್ತಾ ನಪುಂಸಕರಿಂದಲಾಗುವು | ದೇನು ನಮಗೆ || ೩೨೨ ||
ಎಂದುದನು ಕೇಳ್ದಹುದಲೇ ನೀ | ನೆಂದೆ ಹರೆಯಕೆ ತಕ್ಕ ನುಡಿಯನು |
ಸ್ಯಂದನವ ತರಿಸಾದಡೆನೆ ಕೇ | ಳ್ದಂದು ಭರದಿ || ೩೨೩ ||
ಭಾಮಿನಿ
ಅರಸ ಕೇಳುತ್ತರನು ರಥವನು |
ತರಿಸೆ ಕಾಣುತ ನರನು ತನ್ನಯ |
ತ್ವರಿತಕೊದಗುವ ಕುದುರೆಗಳ ತಾನಾಯ್ದು ಲಾಯದಲಿ ||
ಭರದಿ ತೇರ್ಗಳವಡಿಸೆ ಕಂಡಾ |
ತರಳನತಿ ತೋಷದಲಿ ದಿವ್ಯಾ |
ಭರಣಭೂಷಿತನಾಗಿ ಕೊಟ್ಟನು ಕವಚವನು ನರಗೆ || ೩೨೪ ||
ಕಂದ
ಇತ್ತಂಗಿಕೆಯಂ ಕೊಂಡದ |
ನತ್ತಿತ್ತಲು ಮಗುಚುತರ್ಜುನಂ ತೊಡೆ ಕಂಡಾ ||
ವೃತ್ತಸ್ತನೆಯರು ನಗುತಂ |
ಉತ್ತರನಂ ನೋಡುತೆಂದರತಿ ಮುದದಿಂದಂ || ೩೨೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅಂಗಿಕೆಯ ತೊಡಲರಿಯದವ ರಣ | ರಂಗಕಿವ ಸಾರಥಿಯೆ ಪಗೆಗಳ |
ಸಂಗರಕೆ ಲೇಸಾದುದೀತನ | ಸಂಗ ನಿನಗೆ || ೩೨೬ ||
ಎಂದ ಮಾತನು ಕೇಳುತರ್ಜುನ | ನಂದು ನಾಚಿದ ತೆರದಿ ಬಾಗಿರೆ |
ಬಂದು ಮತ್ಸ್ಯಕುಮಾರನದಕೇ | ನೆಂದು ತಾನೇ || ೩೨೭ ||
ತೊಡಿಸಿದನು ಕವಚವನು ನರಗವ | ನೊಡನೆ ರಥವೇರಿದನು ತಾನತಿ |
ಸಡಗರವ ಪೊಗಳಿಕೆಯ ಪಾಠಕ | ಗಡಣದಿಂದ || ೩೨೮ ||
ಧರಣಿಯದುರುವ ವಾದ್ಯಘೋಷದಿ | ಧುರಕೆ ಪೋಪಣ್ಣನನು ಕಂಡು |
ತ್ತರೆಯು ನಗುತಿಂತೆಂದಳುಬ್ಬುತ | ನರನೊಳಂದು || ೩೨೯ ||
ಎಲೆ ಬೃಹನ್ನಳೆ ಕೇಳು ಪಗೆಗಳ | ಗೆಲುವ ಕಲಹದೊಳಣ್ಣ ನೀನಾ |
ಬಲುತರದ ಭೂಷಣವ ತಾರೆನೆ | ಕಳಕಳಿಸುತ || ೩೩೦ ||
ಭಾಮಿನಿ
ತರುವೆನೆನುತಾ ಸತಿಗೆ ಪೇಳಿದು |
ನರನು ನಗುತ ವರೂಥವನು ತ |
ತ್ಪುರುವ ಪೊರಡಿಸಿ ನೂಕಿದನು ತೇಜಿಗಳನಬ್ಬರಿಸಿ ||
ನೆರೆದ ಬಲ ಕಂಡೇನಿದಿವಹೊಸ |
ಪರಿಯ ಸೂತನಲಾ ಎನುತ ಪಿಂ |
ತಿರಲು ರಥವನು ಹಾರಿಸಿದನನಿಲನನು ಪಿಂದುಳುಹಿ || ೩೩೧ ||
ರಾಗ ಮಾರವಿ ಏಕತಾಳ
ಧರಣಿಯನೊದೆದು | ಪ್ಪರಿಸುವ ಹಯಗಳ | ಖುರದ ಹೊಯ್ಲಿಗಿಳೆ |
ಬಿರಿಯೆ ಧೂಳ್ಗಳಂ | ಬರಕಡರುತ್ತತಿ | ಭರದೊಳು ರಥವನು |
ಹರಿಸಿದ ಅರಿಮೋ | ಹರಕೆ ವಿಜಯನು | ಸೂಠಿಯಿಂದ || ೩೩೨ ||
ಕಾಣುತ ಕೌರವ | ಸೇನೆಯನುತ್ತರ | ಏನಿದು ಗರಳಂ |
ಭೋನಿಧಿಯಂದದಿ | ಸೈನಿಕವಿರುವುದಿ | ದೇನದ್ಭುತವೆನು |
ತಾ ನರಗೆಂದನು | ತಾ ನಡನಡುಗಿ | ಭೀತಿಯಿಂದ || ೩೩೩ ||
ಎಲೆಲೆ ಬೃಹನ್ನಳೆ | ಕೊಲುವೆಯೇಕೆನ್ನನು | ಕಲಹಕೆ ಬಂದಿದೆ |
ಜಲಧಿಯ ತೆರದಲಿ | ಬಲವಿನಿತಿದಿರಾಗೆ | ನಿಲುವ ಮಾತೆಲ್ಲಿ ಕಂ |
ಗಳು ನಿನಗಿಲ್ಲವೆ | ತಿಳಿಯದಿದೇಕೈ | ಮರುಳೆ ನೀನು || ೩೩೪ ||
ಎಲ್ಲಿ ನೋಡಿದರೆದೆ | ತಲ್ಲಣಿಪುದು ರಣ | ಮಲ್ಲಸುಯೋಧನ |
ನಲ್ಲದಿನ್ನುಂಟೇ | ನಿಲ್ಲು ರಥವನಿ | ನ್ನೆಲ್ಲಿಗೆ ನಡೆಸುವೆ |
ಇಲ್ಲವೆ ಕರುಣವೆ | ನ್ನಲ್ಲಿಷ್ಟು ನಿನಗೆ | ತರವೆ ನೋಡೆ || ೩೩೫ ||
ರಾಗ ಕಾಂಭೋಜಿ ಝಂಪೆತಾಳ
ಎನಲೆಂದನೆಲೆ ಮತ್ಸ್ಯನಣುಗ ಕೇಳ್ ಕ್ಷತ್ರಿಯರೊಳ್ | ಜನಿಸಿ ಸಂಗರಕಂಜಬಹುದೆ |
ವನಿತೆಯರ ಮುಂದುಬ್ಬಿದಂತಲ್ಲ ಪಿಡಿ ಧನುವ | ನೆನುತ ಮುಂದರಿಸಿದನು ರಥವ || ೩೩೬ ||
ಎಲೆ ಪಾಪಿ ಸೂತ ಗಂಟಲ ಕೊಯ್ವೆಯೇಕೆ ಹೆ | ಬ್ಬುಲಿಯ ಹಿಂಡನು ಮುದದಿ ಪೊಗುವ ||
ಎಳೆಗರುವಿನಂತಾದೆ ಉಳಿಸೆನ್ನ ನಿನ್ನ ನಾವ್ | ಸಲಹಿದುದ ಮರೆತೆಯೇನಯ್ಯ || ೩೩೭ ||
ಎಂದುದನು ಕೇಳ್ದು ನಗುತಂದು ನರನಾ ರಥವ | ಮುಂದೆ ಪತ್ತಡಿಯನಯ್ದಿಸಲು |
ಕೊಂದನೀ ಘಾತಕಿಯೆನುತ ಮೇಲ್ಸೆರಗ ಬಿಗಿದು | ಹಿಂದೆ ಧುಮ್ಮಿಕ್ಕುತೋಡಿದನು || ೩೩೮ ||
ಭಾಮಿನಿ
ಧರೆಗೆ ಪಾಯ್ದೋಡುವನ ಕಾಣುತ |
ಕುರುಪತಿಯ ಭಟರತ್ತ ನಗುತಿರೆ |
ಸುರಪಸುತನಾ ಕ್ಷಣದಿ ಬೆಂಬತ್ತಿದನು ಮತ್ಸ್ಯಜನ ||
ಭರದೊಳೆರಡೈವತ್ತು ಹೆಜ್ಜೆಯ |
ಹರಿದು ಪಿಡಿಯಲು ನಡನಡುಗಿ ಹಲು |
ಗಿರಿವುತುಳಿಸೆಂದೆರಗಿದುತ್ತರನೊಡನೆ ನರ ನುಡಿದ || ೩೩೯ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ನರಗುರಿಯೆ ಪಾರುವೆಯದೆಲ್ಲಿಗೆ | ಶಿರವನರಿವೆನು ಪೋದರೆಲವೋ |
ದೊರೆ ಕುಮಾರಕನಂಜಬಹುದೇ | ಧುರಕೆ ನೀನು || ೩೪೦ ||
ನೋಡು ನಾವು ನಪುಂಸರಾದರು | ಹೇಡಿತನ ನಮಗುಂಟೆ ಸತಿಯರೊ |
ಳಾಡಿದೈ ಹೆಮ್ಮೆಯಲಿ ಮತ್ತಿ | ನ್ನೋಡಲೇಕೆ || ೩೪೧ ||
ನೀನು ಬಲು ಭಟನಹೆ ಬೃಹನ್ನಳೆ | ತಾ ನಪುಂಸಕನೈಸೆ ತನ್ನಯ |
ಪ್ರಾಣಗೊಂಬೆಯದೇಕೆ ಕಂಗಳು | ಕಾಣವೇನೈ || ೩೪೨ ||
ಒಡೆಯರಲ್ಲವೆ ನಿಮಗೆ ನಾವ್ ನ | ಮ್ಮೊಡನೆ ಘಾತಕತನವೆ ನೀನೇ |
ಕಡಿವೆಯೆನ್ನಯ ಕೊರಳನೇತಕೆ | ಬಿಡು ಬಿಡೆನಲು || ೩೪೩ ||
ನರ ನುಡಿದನೆಲೆ ಕುವರ ರಣದಲಿ | ಹರಣವಳಿದರೆ ಸುರರ ಸತಿಯರು |
ದೊರಕುವರು ಇಂದ್ರಾದಿಭೋಗವು | ಬರುವುದೆನಲು || ೩೪೪ ||
ಮರುಳು ಸಾರಥಿ ಬಿಡು ಬಿಡೆನ್ನನು | ಹರಣವುಳಿದರೆ ಸಾಕು ನಮ್ಮಯ |
ದೊರೆತನವು ನಮ್ಮರಮನೆಯ ಸತಿ | ಯರುಗಳೆನಗೆ || ೩೪೫ ||
ವಾರ್ಧಕ
ಎನಲೆಂದನೆಲೆ ಕುವರ ಲಾಲಿಸೈ ನಿಲುವೆ ನಾ |
ನನುವರಕ್ಕಂಜದಿರು ನೀನೆ ಸಾರಥಿತನವ |
ನನುಕರಿಪುದೆನೆ ಕೇಳುತವನೆಂದನೆಲೆ ಬೃಹನ್ನಳೆ ಕೇಳ್ದೆ ಪೊಸ ಕಥೆಯನು ||
ಜನಪಸುತನೆನಗಳವಡದ ಧುರಂ ತೀರುವುದೆ |
ನಿನಗೆನಲ್ ಮರುಳೆ ನೋಡಾದಡೆನುತರ್ಜುನಂ |
ಘನ ಪರಾಕ್ರಮದಿಂದಲಾತನಂ ತಂದಾ ವರೂಥಮನ್ನಡರಿಸಿದನು || ೩೪೬ ||
ಕಂದ
ಎಂದುತ್ತರಗತಿ ಧೈರ್ಯವ |
ನಂದದಿ ಪೇಳ್ದಸ್ತ್ರವಿಹ ಶಮೀಮರದೆಡೆಗಂ ||
ಬಂದಾ ರಥದಿಂದಿಳಿದೈ |
ತಂದರ್ಜುನ ಮತ್ಸ್ಯಜಾತನೊಡನಿಂತೆಂದಂ || ೩೪೭ ||
ರಾಗ ಕೇದಾರಗೌಳ ಅಷ್ಟತಾಳ
ಧರಣಿಪಸುತ ಕೇಳು ಮರದೊಳಿರ್ಪುದು ಪಾಂಡ | ವರು ಪಿಡಿದಸ್ತ್ರಂಗಳು ||
ಭರದಿ ನೀನೇರ್ದದನೆನಗೀವುದೆನೆ ಕೇಳಿ | ಮರಳಿ ಮತ್ತವನೆಂದನು || ೩೪೮ ||
ಅರಸು ಮಕ್ಕಳು ನಾವು ಮರವನೇರೆವು ಮೇಲೆ | ಪರಿಕಿಸೆ ಶವವಿರ್ಪುದು ||
ಕರದಿ ಮುಟ್ಟೆವು ನೀನು ಮರುಳಾದೆ ಶಸ್ತ್ರವೆ | ಲ್ಲಿರುವುದೆನಲು ಪೇಳ್ದನು || ೩೪೯ ||
ಶವವಲ್ಲ ಕೇಳು ಚರ್ಮದಿ ಸುತ್ತಿದಾಯುಧ | ವವು ತಾರೆಂದೆನೆ ಲಾಲಿಸಿ ||
ಕುವರನಾ ಮರವೇರ್ದು ಪರಿಕಿಸಿ ಬಿಗಿದ ಚ | ರ್ಮವ ಬಿಚ್ಚಿ ಕಂಡಂಜುತ || ೩೫೦ ||
ಅರರೆ ಸಾರಥಿ ಕಣ್ಣಿಕ್ಕಲು ತೀರದೆನಗೆ ದ | ಳ್ಳುರಿಯಂತೆ ಸುಡುತಿದೆನ್ನ |
ಧರೆಗಿಳಿಸೆನಲೆಂದ ನರನ ನೆನೆದು ತೆಗೆ | ಬರುವುದೆನುತ ಪಾರ್ಥನು || ೩೫೧ ||
ಎಂದುದ ಕೇಳ್ದಿಂದ್ರನಂದನನನು ನೆನೆ | ದಂದುತ್ತರನು ಸತ್ತ್ವದಿ |
ಒಂದೊಂದಾಯುಧಗಳ ತೆಗೆದಿತ್ತನಾ ಮರ | ದಿಂದ ಲೆಕ್ಕಿಸಿ ಪಾರ್ಥಗೆ || ೩೫೨ ||
ಕಂದ
ಮರದಿಂದೀ ಪರಿಯಿಂದು |
ತ್ತರನು ಸಕಲ ಶಸ್ತ್ರಮಂ ತೆಗೆದಿತ್ತುಂ ||
ಭರದಿಂದುಸಿರಿಕ್ಕುತೆ ತಾಂ |
ಧರೆಗಿಳಿದನುಳಿದೆನಿಂದಿಂಗೆನುತಿಂತೆಂದಂ || ೩೫೩ ||
Leave A Comment