ರಾಗ ಮಧುಮಾಧವಿ ತ್ರಿವುಡೆತಾಳ

ಏನು ಸಾರಥಿ ಚಾಪವಿದನಾ | ನಾನಲಾಪೆನೆ ಭಳಿರೆ ಧನುವಿದು |
ತಾನದಾರದೊ ಪಿಡಿವವನ ತೋ | ಳೇನು ಸತ್ವವೋ ಶಿವಯೆನೆ || ೩೫೪ ||

ನರ ನುಡಿದನೆಲೆ ಕುವರ ಕೇಳೈ | ಧುರವಿಜಯ ಪಾರ್ಥನದು ಧನುವಿದು |
ಸುರನರೋರಗರಿಂಗೆ ಮಣಿಯದು | ಧುರದೊಳೆಂದುತ್ತರನೊಳು || ೩೫೫ ||

ಭಾಮಿನಿ

ಕೇಳಿ ಮತ್ತೆಂದನು ಬೃಹನ್ನಳೆ |
ಪೇಳು ತನಗುಳಿದಸ್ತ್ರ ವಹ್ನಿ |
ಜ್ವಾಲೆಯಂದದಿ ತೋರ್ಪುದಾರದೆನುತ್ತಲಾ ಕುವರ ||
ಕೇಳಲರ್ಜುನ ನಗುತಲಾಯುಧ |
ಜಾಲವನು ವಿಂಗಡಿಸಿ ಧರ್ಮನೃ |
ಪಾಲಚಾಪವ ಭೀಮಸೇನನ ಗದೆಯಿದೇಯೆನುತ  || ೩೫೬ ||

ವೀರ ಸಹದೇವನದು ಧನುವಿದು | ಧೀರನದು ಕೋದಂಡ ನಕುಲನ |
ವೀರಸುರಪನ ಸೂನು ಶಸ್ತ್ರಾಸ್ತ್ರಗಳ ನೋಡೆಂದು ||
ಬೇರೆ ಬೇರೆಲ್ಲವನು ವಿವರಿಸಿ | ತೋರೆ ಬೆರಗಾಗುತ್ತ ಮತ್ಸ್ಯಜ |
ವೀರನಹುದೆಂದೆನುತನಿಶ್ಚಯದಿಂದಲಿಂತೆಂದ || ೩೫೭ ||

ರಾಗ ಮಧುಮಾಧವಿ ಆದಿತಾಳ

ಆರೊ ಸಾರಥಿ ನೀನು ಪೇಳಿನ್ನು ತನಗೆ |
ಶೂರ ನೀನಹುದೆಣೆಗಾಣೆ ನಾ ನಿನಗೆ     || ಪಲ್ಲವಿ ||

ಧುರಧೀರರಹ ಪಾಂಡವರ ಶಸ್ತ್ರಗಳನು |
ಅರಿವೆಯೆಂತೈ ನೀನು ಮರೆಯೊಳಿರ್ಪುದನು ||
ಸರಿಯಿಲ್ಲ ನಿನಗೆ ನೀನಾರೆಂಬ ನಿಜವ |
ಅರುಹೆನಲವಗೆಂದ ನರನು ತಮ್ಮೊಳವ || ೩೫೮ ||

ಆದರಾಲಿಸು ಮತ್ಸ್ಯಜನೆ ಪಾರ್ಥ ತಾನು |
ಸಾಧುವಾಗಿಹ ಕಂಕನವನೆ ಧರ್ಮಜನು |
ಕಾದಿ ಕೀಚಕನ ಕೊಂದವ ಭೀಮ ತಾನು |
ಹೋದ ಮಾನವ ನಿನ್ನೆ ಉಳುಹಿದನವನು || ೩೫೯ ||

ತುರಗರಕ್ಷಕನಾತ ನಕುಲನೆಂಬವನು |
ತುರುವ ಸಲಹುವಾತ ಸಹದೇವನವನು |
ತರುಣಿ ಸೈರಂಧ್ರಿಯಾದವಳೈವರರಸಿ |
ಕುರುರಾಯ ನಮಗಾಗಿ ಬಂದ ಬಲವೆರಸಿ || ೩೬೦ ||

ವರುಷವಜ್ಞಾತವೆನ್ನುವ ಭಾಷೆ ನಮಗೆ |
ಹರಿಯ ಕರುಣದಿಂದ ಕಳೆದೆವೀ ನೆಲೆಗೆ |
ಸರಿಯಾಯ್ತು ನುಡಿದ ವತ್ಸರ ನಿಮ್ಮ ಪುರದಿ |
ಧುರಕೆ ತಾನಯ್ದುವೆನೆನೆ ಕೇಳಿ ಭರದಿ || ೩೬೧ ||

ಹರ ಹರ ಎನುತಲುತ್ತರನು ಭೀತಿಯಲಿ |
ಶಿರವ ಚಾಚಿದನಂದು ನರನ ಪಾದದಲಿ ||
ಕರವ ಮುಗಿವೆ ನಾನು ಜರೆದೆ ನಿನ್ನುವನು |
ಮರೆದು ರಕ್ಷಿಸೆನುತ್ತ ಮಗುಳೆರಗಿದನು || ೩೬೨ ||

ಎರಗಿದುತ್ತರನನು ಪಿಡಿದೆತ್ತಿ ನರನು |
ತರಳ ನಿನ್ನೊಳು ಮುನಿಸಿಲ್ಲೆನುತ ಪೇಳಿದನು ||
ಅರುಹೆ ಕೇಳುತ ಮತ್ಸ್ಯಜಾತನಾ ಕ್ಷಣದಿ |
ಕರವ ಮುಗಿವುತೆಂದ ನರಗಂದು ಭರದಿ || ೩೬೩ ||

ಕುವರನ ಬಿನ್ನಹವನು ಲಾಲಿಸಯ್ಯ |
ವಿವರವಿಂದೆನಗೆ ದಶನಾಮ ಪೇಳಯ್ಯ ||
ಎನಲು ಕೇಳುತಲೆಂದ ನರ ಸವ್ಯಸಾಚಿ |
ವರಪಾರ್ಥ ಫಲ್ಗುಣರ್ಜುನ ಧನಂಜಯನು || ೩೬೪ ||

ಕಿರೀಟಿ ಸಿತವಾಹನ ಬೀಭತ್ಸು ಜಿಷ್ಣು |
ಸುರಪನಸುತ ವಿಜಯ  ಮತ್ತವೆಂದೆನುತ ||
ಕೇಳಿ ಹರುಷಿತನಾಗುತಾಗ ಮತ್ಸ್ಯಜನು |
ಕಾಲಿಗೆರಗಿದನಂದು ಸಂತಸದಿಂದವನು || ೩೬೫ ||

ವಾರ್ಧಕ

ಎರಗಿದುತ್ತರನಂ ನಿರೀಕ್ಷಿತಲರ್ಜುನಂ |
ತರಳ ನೀನಂಜಬೇಡೆನುತವನನುಪಚರಿಸಿ |
ತರೆವೆಣ್ಣುತನವನುಂ ತ್ಯಜಿಸಿ ಪುರುಷಾಂಗಮಂ ತಳೆದಾಗ ಮತಿಧೃತಿಯೊಳು ||
ಭರದಿಂದ ತನ್ನ ಮುನ್ನಿನ ರಥಕಡರ್ದು ಕಪಿ |
ವರನನುಂ ನೆನೆಯಲವ ಮಂಡಿಸೆ ಧ್ವಜಾಗ್ರದೊಳ್ |
ಧುರಕೆ ತಾಂ ಧನುವನೊದರಿಸುತಲಯ್ತಂದನುತ್ತರನ ಸೂತತ್ವದಿಂದ || ೩೬೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕರದ ಬಿಲುರವ ದೇವದತ್ತದ | ವರ ನಿನಾದದ ಆರ್ಭಟೆಯು ಸಹಿ |
ತಿರದೆ ಮೊಳಗಿದವಮಮ ಸಿಡಿಲಿನ | ಗರುಡಿಯೆನಲು || ೩೬೭ ||

ಕುರುಪತಿಯ ಭಟರೀಕ್ಷಿಸುತ ತರ | ಹರಿಸಿ ಭೀತಿಯೊಳಿರಲಿಕಿತ್ತಲು |
ತಿರುಗಿ ಬಿದ್ದನು ರಥದ ಮೇಲು | ತ್ತರನು ಭರದಿ || ೩೬೮ ||

ಆತನನು ಬೋಳಯ್ಸಿ ನರ ನಿ | ರ್ಭೀತಿಯೊಳಗಾ ರಥವ ಕೌರವ |
ಚಾತುರಂಗದ ಮೇಲೆ ನೂಕಿದ | ತಾ ತವಕದಿ || ೩೬೯ ||

ವರವರೂಥವ ಕಂಡು ಪಾರ್ಥನು | ಧುರಕೆ ಬಂದನೆನುತ್ತ ಭಯದಿಂ |
ದಿರದೆ ಗಂಗಾತನುಜಗೆಂದನು | ಗರಡಿಯಧಿಪ || ೩೭೦ ||

ನೋಡು ಭೀಷ್ಮನೆ ಧುರಕೆ ಮತ್ಸ್ಯಜ | ಗೂಡಿ ಬಂದನು ಪಾರ್ಥ ನಾವಿ |
ನ್ನಾಡಲೇಕವಗಾಯಿತರಿಗಳೊ | ಳಾಡಿದವಧಿ || ೩೭೧ ||

ಭಾಮಿನಿ

ಧುರವಿಜಯ ನೀನೀಕ್ಷಿಸಾತನ |
ಕರದ ಕಾರ್ಮುಕವನ್ನು ಶಂಖದ |
ಭರಿತ ನಾದವನಾ ರಥಾಗ್ರದಿ ಕುಳಿತ ಕಪಿವರನ ||
ಹರಿನಿನಾದದ ರವದ ಬೊಬ್ಬೆಗೆ |
ಇರದೆ ಬೆದರುವುದೆಮ್ಮ ಬಲವಿದು |
ಧುರವಿಜಯನಹುದೆಂದು ಪೊಗಳಲು ಕರ್ಣ ಖಾತಿಯಲಿ || ೩೭೨ ||

ರಾಗ ಭೈರವಿ ಅಷ್ಟತಾಳ

ರಣದಿ ನಿಂತರಿಗಳನ್ನು | ಪೊಗಳ್ವುದು | ಗುಣ ನಿಮ್ಮ ಬಳಗಕಿನ್ನು |
ಉಣುವಿರಿ ಕೌರವನೊಡವೆಯನಾತಗೆ | ದಣುವನೆ ಬಯಸುವಿರಿ || ೩೭೩ ||

ಧುರಕೆ ತಾನಿಹೆ ಪಾರ್ಥನ | ಲೆಕ್ಕಿಸುವೆನೆ | ಕರೆಸು ಭಾರ್ಗವರಾಮನ |
ಸರಿವೆನೆ ಹಿಂದಕ್ಕಂತಿರಲಿ ನಿಮ್ಮೊಡನೇನೆಂ | ದರಸನಿಂಗಿಂತೆಂದನು || ೩೭೪ ||

ಭೂಪ ನೀ ಲಾಲಿಸಿನ್ನು | ನಂಬದಿರಿಂಥ | ಕಾಪುರುಷರ ಮಾತನು ||
ಈ ಪಾರ್ಥನನೊರಗಿಸುವೆನೆಂದೆನೆ ಕೇಳಿ | ಕೋಪದಿ ಕೃಪನೆಂದನು || ೩೭೫ ||

ಅವನೀಶ ಕೇಳು ನೀನು | ರಾಧೆಯ ಮಗ | ನಿವ ಬಗುಳಿದರಿಂದೇನು |
ಬವರದಿ ಪಾರ್ಥಗಿದಿರು ನಿಲುವಧಟರು | ಭುವಿಯೊಳಗಿಲ್ಲವಯ್ಯ  || ೩೭೬ ||

ಹರನೊಳು ಕಾದಿದನು | ಹಿರಣ್ಯಕ | ಪುರದ ದೈತ್ಯರ  ಕೊಂದನು ||
ಅರಸುಗಳಿಗೆ ಮಣಿಯದ ಕೋದಂಡವ ನಿನ್ನಿ | ದಿರಲಿ ಮುರಿದನಲ್ಲಯ್ಯ || ೩೭೭ ||

ರಾಗ ಕಾಂಭೋಜಿ ಝಂಪೆತಾಳ

ಇಂತರಸಗುಸಿರಿ ಮತ್ತಿನಜನೊಳು ಪೇಳ್ದನೆಲೆ | ಭ್ರಾಂತ ಕೇಳ್ ನಿನ್ನ ಪೆಸರೇನು ||
ಬಂತು ನಿನಗಿಷ್ಟು  ಕೌರವ ಸಲುಗೆಗೊಟ್ಟುದಕೆ | ಇಂತೆನಲು ಕರ್ಣಕೋಪದಲಿ || ೩೭೮ ||

ಎಂದನೆಲೆ ಕೃಪ ಕೇಳು ಬರಲಿ ಸಮರಕೆ ಭರ್ಗ | ನೊಂದುಬಾರಿಗೆ ನಿಲುವೆ ನಾನು ||
ಇಂದಿಗೀ ನರ ನಿಮಗೆ ಘನವಾಗಿಹನು ಸುಭಟ | ರಂದವನು ತಿಳಿಯಿರೈ ನೀವು || ೩೭೬ ||

ಹಾರುವರು ನೀವು ನಿಮ್ಮಧಟು ಬಹು ಶ್ರುತಿ ಶಾಸ್ತ್ರ | ಸಾರದೊಳಗಲ್ಲದೀ ಧುರದಿ ||
ಧೀರತನ ನಿಮಗೆಲ್ಲಿಹುದು ನೀವು ನಿಲ್ಲುವರೆ | ಪೌರಾಣವಲ್ಲವಿದು ರಣವು || ೩೮೦ ||

ಎಂಬುದಿನ್ನೇನು ಕೌರವನ ಮಂದಿರದಿ ಧನ | ವಂ ಬಾಚಿದಿರಿ ಬಗೆಬಗೆಯಲಿ |
ಗಂಭೀರದಿಂ ಡೊಳ್ಳ ತುಂಬುವಂದದಿ ತಿರುಗು | ತುಂಬ ಸೊಗಸಲ್ಲವಿದು ಸಮರ || ೩೮೧ ||

ಹಣೆಗೆ ಬೂದಿಯ ಬಡಿದು ಬೆರಳ್ಗೆ ದರ್ಭೆಯ ಬಿಗಿದು | ಘನತರದ ಡೊಳ್ಳ ತೋರಿಸುತ |
ಉಣಲು ಬಲ್ಲಿರಿ ಹೊರತು ಬೇರೇನ ಕಾಣೆ ನಾ | ರಣವಿಚಾರವಿದೇಕೆ ನಿಮಗೆ || ೩೮೨ ||

ಕಂದ

ಎಂದಾ ಕರ್ಣಂ ಗುರು ಕೃಪ |
ರಂ ದೂಷಿಸಿ ನುಡಿಯಲ್ ಕೇಳುತಲಾಯೆಡೆಗಂ ||
ಬಂದಶ್ವತ್ಥಾಮನು ಖತಿ |
ಯಿಂದೆಂದಂ ತರಣಿತನಯನೊಡನತಿ ಭರದಿಂ || ೩೮೩ ||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಸೂತನಣುಗ ಬಗುಳ್ವೆ ಏಕೆ ಗರ್ವದಿ |
ತಲೆಯು ಬೆಳೆಯಿತೀಗ ನಿನಗೆ ಧೊರೆಯ ಪ್ರೇಮದಿ ||
ಸಲುಗೆಯಿಂದ ಗುರುಗಳನ್ನು ಜರೆದು ಪೇಳಿದೆ |
ಕುಲಕೆ ತಕ್ಕ ಮಾತನೆಂದೆ ಭಳಿರೆ ಮೆಚ್ಚಿದೆ || ೩೮೪ ||

ನಾವು ವಿಪ್ರರಹೆವು ಸಹಜ ನಮ್ಮ ಜರೆದೆಲಾ |
ಯಾವ ದೊರೆಕುಮಾರ ನೀನು ಎನಗೆ ಪೇಳೆಲಾ |
ಭೂವರೇಣ್ಯನನ್ನು ಪಿಡಿಯೆ ಚಿತ್ರಸೇನನು |
ಯಾವನಯ್ಯ ಬಿಡಿಸಿದಾತ ನಮ್ಮ ದೊರೆಯನು || ೩೮೫ ||

ಗುರುಗಳನ್ನು ಜರೆದೆ ಪಾಪಿ ನಿನ್ನ ಶಿರವನು |
ತರಿವೆನೆನುತಲುಗಿದನಸಿಯ ಗುರುತನೂಜನು ||
ತರಣಿಜಾತ ಕಂಡು ತೆಗೆದನುರುಕಠಾರಿಯ |
ಭರದೊಳಾತನಿದಿರು ನಿಂದ ಧರಿಸಿ ಖಾತಿಯ || ೩೮೬ ||

ಭಾಮಿನಿ

ಅರಸ ಕೇಳೀ ಪರಿಯ ಕಾಣುತ |
ಕುರುನೃಪಾಲನು ಬಂದು ಭಟರಿ |
ಬ್ಬರ ನಡುವೆ  ನಿಂದೆಂದನೇಕೀ ಕಲಹ ನಿಮ್ಮೊಳಗೆ ||
ಧುರಕೆಬಂದಿಹ ಪಾರ್ಥನಿದಿರಲಿ |
ಮೆರೆಸಿ ನಿಮ್ಮ ಪರಾಕ್ರಮವನೆಂ |
ದರಸನವದಿರ ನಿಲಿಸಿ ಗಂಗಾಸುತನೊಳಿಂತೆಂದ || ||೩೮೭||

ರಾಗ ಕೇದಾರಗೌಳ ಝಂಪೆತಾಳ

ಕೇಳಿ ಭೀಷ್ಮರು ಬಂದವ | ನರನಾದ | ರಾಳಿಸುವೆನಿನ್ನು ವನವ ||
ಮೇಲಿಹುದು ಪೇಳಿದವಧಿ | ಬಂದನಿವ ಕಾಳಗಕೆ ಘನಗರ್ವದಿ || ೩೮೮ ||

ಕಡೆಗೆ ಸತ್ಯವನುಳಿದರು | ಪಾಂಡವರು | ಪೊಡವಿಯಾಸೆಯ ತೊರೆದರು |
ನುಡಿದ ವರುಷದೊಳಿವರನು | ಕಂಡು ಮ | ತ್ತಡವಿಗಟ್ಟುವೆನು ನಾನು || ೩೮೯ ||

ಎನಲೆಂದನೆಲೆ ಪೌತ್ರನೆ | ಪಾಂಡವರ | ಜನಪ ಸತ್ಯವ ಮರೆವನೆ ||
ಎನಿತು ನೀನೆಂದರೇನು | ಆಯ್ತವರಿ | ಗಿನಿತರೊಳಗವಧಿಯಿನ್ನು || ೩೯೦ ||

ಅವರಿಂದ ಕೊರತೆಯಿಲ್ಲ | ನೀ ನಿನ್ನ | ಕವಲು ಮನವನು ಬಿಡುವೆಲಾ ||
ನವೆದರೀ ದಿನದವರೆಗೆ | ಇನ್ನಾದರವನಿಯನು ಕೊಡಿಸವರಿಗೆ || ೩೯೧ ||

ಏಕೆ ಹಗೆತನವವರಲಿ | ಜಯ ನಮಗೆ | ಸೋಕಲರಿದವರಿದಿರಲಿ ||
ಸಾಕು ಧುರ ವಿಹಿತವಲ್ಲ | ನರ ಕೊಲಲು | ಬೇಕು ಬೇಡೆಂಬರಿಲ್ಲ || ೩೯೨ ||

ಭಾಮಿನಿ

ಎಂದು ಪೇಳಿದ ಮುತ್ತಯನ ನುಡಿ |
ಯಂದವನು ಕೇಳುತ್ತ ಕುರುಪತಿ |
ನೊಂದು ಸುಯ್ವುತಲಕಟ ಬಾಳ್ವೆನೆ ನಿಮ್ಮ ನಿರ್ದಯದಿ ||
ಮುಂದೆ ನೀವೇ ಬಲ್ಲಿರೆನುತ ವ |
ಸುಂಧರಾಪತಿ ಮತ್ತೆ ಮಣಿಯಲಿ |
ಕೆಂದ ಭೀಷ್ಮನು ತುರುಸಹಿತ ನೀನಯ್ದು ಪುರಕೆನುತ || ೩೯೩ ||

ಕಂದ

ಎಂದಾ ಕೌರವನಂ ಪಶು |
ವೃಂದವನೊಡಗೊಂಡು ನೀ ತೆರಳ್ ಮನೆಗೆನುತಂ ||
ಮುಂದಟ್ಟಿಯೆ ತಾ ಧುರಕಂ |
ನಿಂದಿರೆ ಕಂಡುತ್ತರನೊಳುಸಿರ್ದಂ ಪಾರ್ಥಂ || ೩೯೪ ||

ರಾಗ ಶಂಕರಾಭರಣ ರೂಪಕತಾಳ

ನೋಡು ಮತ್ಸ್ಯಜಾತ ಭೀಷ್ಮ | ಮಾಡಿದೆತ್ನ ನಮಗೆ ಲೇಸು |
ರೂಢಿಪಾಲ ಕೋಳುಗೊಂಡು | ಓಡುತಿಹನಲೈ |
ಆಡಲವಧಿಯಿಲ್ಲ ತಿರುಹು | ಗಾಢ ರಥವನವನ ಕರುಳ |
ತೋಡಿ ತರುವ ಮರಳಿಚುವೆನು | ಹೇಡಿಗೊಳದಿರು || ೩೯೫ ||

ಎಂದ ಮಾತ ಕೇಳ್ದು ಹಯವ | ನಂದು ನೂಕೆ ಪೊಯ್ದುವಮಮ |
ನಿಂದ ಭಟರಗಣಿಸದಾರ್ದು | ಮುಂದೆ ನಿಗುಚುತ |
ಪಿಂದಕೇಕೆ ಪಾಯ್ವೆನೃಪತಿ | ನಿಂದು ನೋಡು ನೋಡು ಪಾರ್ಥ |
ಬಂದ ಕುರುಕುಲಾದ್ರಿವಜ್ರ | ನೆಂದನುತ್ತರ || ೩೯೬ ||

ಎನಲು ಭಟರು ಕೇಳುತರರೆ | ಜನಪನೆದುರು ನಡೆವ ಪಾರ್ಥ |
ನೆನುತ ಮುತ್ತಿಕೊಂಡರಾಗ | ಇನಸುತಾದ್ಯರು ||
ಕಿನಿಸಿನಿಂದ ವಿಜಯನವರ | ಧನುರಥಾಶ್ವ ಸಹಿತ ತರಿದು |
ಜನಪನೊಡನೆ ನುಡಿದ ತನ್ನ | ಮನದೊಳುಬ್ಬುತ || ೩೯೭ ||

ಅರಸ ಬಂದೆ ಪಾರ್ಥ ನಾನು | ಕರೆಸು ಜೂಜಿನವರನೆನುತ |
ಜರೆವುತವನ ಬಲವ ತರಿದ | ನುರು ಮಹಾಸ್ತ್ರದಿ ||
ಶರವಿಘಾತಕೊರಲಿ ಭಟರು | ಹರಣವುಳಿಯೆ ಸಾಕೆನುತ್ತ |
ತುರುಗಳನ್ನು ಬಿಟ್ಟು ಪಾರ್ದರಿರದೆ ಭಯದಲಿ || ೩೯೮ ||

ಭಾಮಿನಿ

ತುರುಗಳನು ಬಿಟ್ಟೋಡುವವದಿರ |
ಪರಿಕಿಸುತ ಗೋವಳರು ವೇಗದಿ |
ಕರೆದು ಸನ್ನೆಯೊಳಿರದೆ ತಿರುಗಿಸಿದರು ಪಶುವ್ರಜವ ||
ಪುರಕೆ ಮುಖವಾಗುತ್ತ ಕೆಚ್ಚಲ |
ಭರದೊಳೋಲಾಡುತ್ತ ನಡೆದಾ |
ತುರುಗಳನು ಕಾಣುತ್ತಲುತ್ತರತೋಷಮನನಾದ || ೩೯೯ ||

ಕಂದ

ತುರುಗಳ ಮರಳಿಚಿ ಪಾರ್ಥನು |
ಶರಸಂಧಾನವ ಗೆಯ್ದು ಗಾಂಡೀವದೊಳಂ ||
ಧುರಲಂಪಟರಿದಿರು ಬರಲೆನು |
ತುರವಣಿಸಲು ಕೇಳ್ದಾ ಕೌರವನಿಂತೆಂದಂ || ೪೦೦ ||

ರಾಗ ಶಂಕರಾಭರಣ ಮಟ್ಟೆತಾಳ

ಎಂದ ನರನ ನುಡಿಯ ಕೇಳಿ ಕುರುಕುಲೇಶನು |
ನೊಂದು ಮನದಿ ಸುಯ್ದು ಭಟರನಂದು ಜರೆದನು |
ಬಂದು ಮಹಾರಥರು ರೋಷದಿಂದ ಪಾರ್ಥನ |
ಮುಂದೆ ನಿಂದು ಕೋಲಮಳೆಯ ಕರೆದರಾ ಕ್ಷಣ || ೪೦೧ ||

ಬರುವ ಶರವ ತರಿದು ನರನು ಮರಳಿ ಶರವನು |
ಧರಣಿ ಯಾವುದಭ್ರವಾವುದೆನಲು ಸುರಿದನು |
ಮುರಿದು ಶಕುನಿ ಮತ್ತೆ ಸೈಂಧವಾದಿ ವೀರರು |
ಧರಣಿಗುರುಳೆ ಕಂಡು ಕೆರಳಿ ತರಣಿಜಾದ್ಯರು || ೪೦೨ ||

ಮರಳಿ ಮರಳಿ ಮೇಲೆ ಕವಿವ ಸೈನ್ಯ ಶರಧಿಯ |
ಸರಳ ವಡಬಗಿತ್ತನಾಗ ಬಿಡಿಸಿ ಭೀತಿಯ ||
ಕರಿ ವರೂಥ ತುರಗ ಪಾದಚರರ ಬಲವನು |
ಧರಣಿ ರಕ್ತಮಯವದಾಗೆ ತರಿದು ಬಿಸುಟನು || ೪೦೩ ||

ಕರಿ ವರೂಥ ತುರಗ ಪತ್ತಿವೆರಸಿ ಭರದಲಿ |
ಸುರಪಸುತನ ಮುತ್ತಿಕೊಂಡರಧಿಕ ಖತಿಯಲಿ |
ಬರುವ ಬಲವ ಕಂಡು ಪಾರ್ಥನುಬ್ಬಿ ತೋಷದಿ |
ಶಿರವನಭ್ರಕಡರಲೆಚ್ಚ ಮತ್ತೆ ರೋಷದಿ || ೪೦೪ ||

ವಾರ್ಧಕ

ಶರದಿರಿತಕುಡಿದಿರ್ಪ ಶಿರಗಳಿಂ ಕರಗಳಿಂ |
ಧರಣಿಯೊಳು ಪೊರಳುತಿಹ ರುಂಡದಿಂ ಮುಂಡದಿಂ |
ಧುರದೊಳುಂ ಮುರಿವ ರಥಚಯಗಳಿಂ ಹಯಗಳಿಂದರುಣಜಲಶರಧಿಯಿಂದ ||
ಪರಿದೊಗುವ ನೆತ್ತರಲಿ ಕೊರಳ್ಗಳಿಂ ಕರುಳ್ಗಳಿಂ |
ಸುರಪನಂದನನ ಗಾಂಡೀವದಿಂ ರಾವದಿಂ |
ಪೊರಟರಿಗಳಸುಗೊಂಬ ಸರಳ್ಗಳಿಂ ಮರುಳ್ಗಳಿಂ ಮೆರೆದುದಾ ಸಮರಭೂಮಿ || ೪೦೫ ||

ಸರಳಿರಿತದಿಂ ನೊಂದು ಸೇನೆ ಜಾಲ್ವರಿಯಲುಂ |
ಕುರುಭೂಪನದ ಕಂಡು ಭರದಿಂದಲೈತಂದು |
ಗುರುನದೀಜರ ಬಳಿಗೆ ತುರುಗಳಂ ಬಿಟ್ಟು ತಾ ನಡೆತಂದನುಂ ಮೌನದಿ ||
ಸುರಪಸುತನಾಜ್ಞೆಯಿಂದಾಗ ಗೋವ್ಗಳು ಪುರಕೆ |
ತೆರಳಿದವು ಹರುಷದಿಂದಿತ್ತಲಾ ಫಲುಗುಣಂ |
ಧುರಕಿದಿರು ನಿಲುವ ವೀರರು ಬಪ್ಪುದೆಂದೆನುತ ತಾ ನುಡಿದ ನಸುನಗುತಲೆ || ೪೦೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದ ನುಡಿಯನು ಕೇಳುತಲೆ ಭಟ | ವೃಂದ ಕೋಪದೊಳೆದ್ದು | ಕುರು ಭೂ |
ಮೀಂದ್ರನಿಂಗೆರಗುತ್ತ ನರನಿದಿ | ರ್ನಿಂದು ಭರದಿ || ೪೦೭ ||

ತುರುಗಳನು ತೆರಳಿಚಿದೆನೆನುತವೆ | ಭರದೊಳ್ ನೀ ಹಿಗ್ಗದಿರು ನಿನ್ನಯ |
ಶರವ ತರಿವೆವು ನಾವು ನಮ್ಮೊಳು | ಧುರವು ಬೇಡ || ೪೦೮ ||

ಸುರುಚಿರದ ಚಾಣಾಕ್ಷ ಹೆಂಗುಸ | ನಿರುಳು ಕದ್ದೊಡೆ ಧೀರತನವೇ |
ಗೊರವನೊಳು ಕಾದಿದರೆ ಸಮರದಿ | ವೀರನಹುದೆ || ೪೦೯ ||

ಕುರುನೃಪಾಲನ ಭಟರು ನಮ್ಮನು | ಧುರದಿ ಸೋಲಿಸು ಎನಲು ಕೇಳುತ |
ಸುರಪಸುತ ನಸುನಗುತಲೆಂದನು | ಚರರಿಗಂದು || ೪೧೦ ||

ನೀವು ವೀರರು ಸಮರದೊಳು ಇ | ನ್ನಾವ್ ನಪುಂಸರು ಧುರದೊಳೆಮ್ಮಯ |
ಭಾವವನು ತಾಳ್ಯೆನುತಲೆಚ್ಚನು | ತೀವಿದಲಗ || ೪೧೧ ||

ವಾರ್ಧಕ

ಸರಳಿರಿತದಿಂ ಭಟರು ಧರಣಿಯಲಿ ಕೆಡಹೆ ಮ |
ತ್ತಿರದೆ ಸೈಂಧವ ಶಲ್ಯನೊಡನೈದು ಸಾವಿರವ |
ತರಣಿಜಾತನೊಳೆಂಟು ಸಾವಿರವ ಕೆಡಹಿದಂ ಗುರು ನದೀಜರ ಬಳಿಯೊಳು ||
ಧುರದಿಂ ಸಹಸ್ರಂಗಳಿಂ ಕೆಡಹಿ ಗುರುಸುತನ |
ಕರದ ಧನುವಂ ಕೆಡಹಿ ದುರ್ಯೋಧನಾದಿಗಳೊ |
ಳರಸುಬಲದೊಳು ಹತ್ತು ಸಾವಿರವ ಕೆಡಹಿದಂ ಸುರಪಸುತನುಂ ರಣದಲಿ || ೪೧೨ ||