ಕಂದ

ಈ ಪರಿಯಿಂದಾ ಸೈನ್ಯವ |
ನಾ ಪಾರ್ಥಂ ಸವರಿದುದನು ತಾ ಕಾಣುತ್ತಂ ||
ಕೋಪದೊಳಶ್ವತ್ಥಾಮಂ |
ತಾ ಪಂಥದಿ ಬಂದು ಮತ್ತಿನಜಾತಂಗೆಂದಂ || ೪೧೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಕರ್ಣ ಮಹಾಪರಾಕ್ರಮಿ | ನೀನಿರಲು ಕೌರವನ ಸೈನ್ಯಕೆ |
ಹಾನಿಯುಂಟೇ ಎಂದು ಕೇಳ್ದ ನಿ | ಧಾನದಿಂದ || ೪೧೪ ||

ತುರುವ ಮರಳಿಚಿದನು ಬಲೌಘವ | ನರಿದ ಪಾರ್ಥನು ಬಿಟ್ಟೆ ಯಾತಕೆ |
ದೊರೆಯಲಾ ಕೌರವನು ನೀ ನಿ | ಷ್ಕರುಣಿಯಾದೈ || ೪೧೫ ||

ಧುರದೊಳರಿಗಳನೆಲ್ಲನೀಕ್ಷಣ | ಭರದಿ ಸವರುವೆನೆಂದೆನುತ್ತಲು |
ಬ್ಬರದ ಮಾತಿನ ಮೇಲೆ ಬಾಚಿದೆ | ಸರುವವನ್ನು || ೪೧೬ ||

ನಾಯ್ಗಳಂದದಿ ನೀನು ಸುಮ್ಮನೆ | ಬಾಯ್ಗೆ  ಬಂದುದ ಬಗುಳಿದೆಯಲಾ |
ಸೂರ್ಯನಾತ್ಮಜ ಕರ್ಣ ನೀನೇ | ಶೌರ್ಯನಹುದೋ || ೪೧೭ ||

ಭಾಮಿನಿ

ಗುರುತನುಜನೆಂದುದನು ಕೇಳುತ |
ತರಣಿಜಾತನು ಕೋಪದಿಂದಾ |
ಶರಧನುವ ಪಿಡಿದಾಗ ನಿಂದನು ಸಿಂಹನಾದದಲಿ ||
ಸುರಪಜಾತನೆ ನಿಲು ನಿಲಿತ್ತಲು |
ಗುರುನದೀಜರೊಳ್ ಸಮರವ್ಯಾತಕೆ |
ಶಿರವನರಿವೆನು ನಿನ್ನ ನೀ ಕ್ಷಣವೆನಲು ನರನುಡಿದ || ೪೧೮ ||

ರಾಗ ಶಂಕರಾಭರಣ ಮಟ್ಟೆತಾಳ

ಶಿರವನರಿವೆ ಕರ್ಣ ನೀನು | ಕುರುನೃಪಾಲ ಸೈನ್ಯದೊಳಗೆ |
ಧುರಸಮರ್ಥನಹುದೊ ನಿನ್ನ | ಶಿರವನೀ ಕ್ಷಣ
ಬಲಿಯ ಕೊಡುವೆ ಭೂತಗಣಕೆ | ತಳುವದೀಗ ನಿಲ್ಲು ರಣದೊ |
ಳಳುಕದೋಡದಿಹುದು ಪಿಂತೆ | ಕಲಿತ ವಿದ್ಯದಿ || ೪೧೯ ||

ಎನಲು ಕೇಳುತಾಗ ಕರ್ಣ | ಧನುವನೊದರಿಸುತ್ತ ನರನೊ |
ಳನುವರಕ್ಕೆನಿಂದು ನುಡಿದ | ಕಿನಿಸಿನಿಂದಲಿ
ಮನದಿ ಪಾರ್ಥ ಬೆಚ್ಚಬೇಡ | ದಿನಪಜಾತ ಬಂದೆ ನಾನು |
ಕಣೆಯ ಕಳುಹು ನಿಲ್ಲೆನುತ್ತ | ಕನಲುತೆಚ್ಚನು  || ೪೨೦ ||

ಎಚ್ಚಶರವ ನರನು ನಡುವೆ | ಕೊಚ್ಚಿ ಕರ್ಣಗೆಸೆಯೆ ಸರಳು |
ಮುಚ್ಚಿಕೊಂಡನವನು ತನುವ | ಬೆಚ್ಚದಿರೆನೆ ||
ಚುಚ್ಚಿ ರುಧಿರಸಹಿತ ಕರುಳ | ಕಚ್ಚಿ ಪಾಯ್ದ ಸರಳುಗಳನು |
ಬಿಚ್ಚಿ ಕಂಗಳರುಣ ಕಾರು | ತಚ್ಚರೀಯೊಳು  || ೪೨೧ ||

ಕೆರಳಿ ಕರ್ಣನವನ ಶರವ | ತರಿವುತೆಸೆಯೆ ಪಾರ್ಥನೆಂಬ |
ತರಣಿಬಿಂಬವಡಗಿತವನ | ಸರಳಮೋಡದಿ |
ಭರದಿ ಮುಗಿಲನೊಡೆವುತೇಳ್ವ | ಸರಸಿಜಾಪ್ತನಂತೆ ಪಗೆಯ |
ಶರವನೊರಸಿ ಪಾರ್ಥನೆಚ್ಚ | ನುರು ಮಹಾಸ್ತ್ರದಿ || ೪೨೨ ||

ತರಣಿಬಿಂಬ ಒಡೆವ ತೆರದಿ | ಭರದಿ ಬಂದುದಾಗ ಕರ್ಣ |
ಇರುವೆಯಂದದಿಂದ ಮೈ | ಯುರಿಸಿ ಕೀಲಿಸಿ |
ಸುರಪಜಾತನೆಚ್ಚ ಶರವ | ತರಣಿಜಾತ ಖಂಡಿಸಿ ಮ |
ತ್ತಿರದೆ ಶರವನೆಚ್ಚು ಫಲುಗು | ಣನ್ನ ಮುಸುಕಿದ  || ೪೨೩ ||

ದುರಿಯೋಧನನು ಕಂಡ ಭಳಿರೆ | ತರಣಿಜಾತ ಮಡಿದನೆಂದು |
ಒರೆದ ಭಟನದಾವ ಬಾಯ | ನಿರದೆ ಹೊಯ್ಸೆನೆ
ಧುರಸಮರ್ಥನಾಗ ಬಹಳ | ಶರವನೆಲ್ಲ ತರಿದು ಮತ್ತೆ |
ಧನುವ ಕೊಂಡು ಪಾರ್ಥನೆಚ್ಚ | ನುರುಮಹಾಸ್ತ್ರವ || ೪೨೪ ||

ತುರಗವಳಿದು ವರ ವರೂಥ | ಮುರಿದು ಚಾಪವುಡಿದು ಮೌನ |
ವೆರೆಸಿ ವಿರಥನಾಗೆ ಕರ್ಣ | ತಿರುಗೆ ಕಾಣುತ
ಗುರುತನೂಜನದನು ಕಂಡು | ಜರೆದು ನುಡಿದನೆಲವೊ ಕರ್ಣ
ಧುರದಿಕಾದಿ ಪಾಯ್ವೆ ಸಮರ | ಸಹಸಿಯಹುದೆಲೈ || ೪೨೫ ||

ಭಾಮಿನಿ

ಗುರುಸುತನು ತಾನೀ ಪರಿಯೊಳಾ |
ತರಣಿಜಾತನ ಜರೆಯೆ ಕಾಣುತ |
ಗಿರಿಜೆಧವಸುತನಾಗ ನಿಂದನು ಸಮರಕನುವಾಗಿ ||
ಧುರದೊಳಗೆ ನಾವ್ ಕಾದುವರೆ ವಿ |
ಪ್ರರಿಗಧಟುತನವೆಲ್ಲಿಹುದು ನೀ |
ತರಣಿರಜನ ಗೆಲಿದಾ ಪರಾಕ್ರಮವೊಡನೆ ತೋರೆಂದ || ೪೨೬ ||

ರಾಗ ಭೈರವಿ ಮಟ್ಟೆತಾಳ

ವಂದನಂ ಬಿನ್ನಹ ಮಾಳ್ಪೆ | ಇಂದು ನಿಮ್ಮೊಳು ||
ನಿಂದು ಕಾದಿ ಧುರದಿ ನಿಮ್ಮ | ಜೈಸಲಾಪೆನೆ      || ಪ ||

ಧುರದೊಳ್ ನಿಮ್ಮ ವಿಶಿಖಗಳನು | ಆನಲಾಪೆನೆ ||
ಕರುಣದಿಂದ ರಕ್ಷಿಸೆಂ | ದೆನುತಲೆಚ್ಚನು || ೪೨೭ ||

ಎಚ್ಚ ಶರವನಾಗ ದ್ರೋಣ | ಕೊಚ್ಚಿ ಬಿಸುಟನು ||
ಮತ್ತೆ ಪಾರ್ಥಗೊಂದು ಶರವ | ನೆಚ್ಚ ದ್ರೋಣನು || ೪೨೮ ||

ಸುರಪಜಾತನದರಕಂಡು | ಭೇದಿಸಿದನು ||
(ನರನು ನಗುತಲೊಂದು ಶರದಿ | ಸಾರಥಿಯನು ||)
ಭರದಿನೋಯಿಸಲ್ಕೆ ತೆರಳ್ದ | ಗರಡಿಯಧಿಪನು ||
ತಂದೆ ಸೋತುದನ್ನು ಕಂಡು | ಕಂದ ಕೋಪದಿ |
ನಿಂದು ನುಡಿದನಾಗ ಇಂದ್ರ | ಸುತಗೆ ಗಾತದಿ || ೪೨೯ ||

ಭಾಮಿನಿ

ಧುರದಿ ತಾತನ ಗೆಲಿದೆ ತರಣಿಜ |
ಚರರ ಸವರಿದೆ ತನ್ನೊಳಿದಿರಾ |
ಗಿರದೆಯೆನುತತಿ ಖಾತಿಯಿಂದಸ್ತ್ರವನು ಗುರುಸುತನು ||
ತರಣಿಜಾತನ ತನುಜನನು ಜನ |
ಭರದಿ ಭೇದಿಸೆ ಧನುವಿಡಿದು ಉರು |
ತರದ ಶರವನು ಕಂಡು ಫಲುಗುಣನೆಚ್ಚ ಪ್ರತ್ಯಸ್ತ್ರ || ೪೩೦ ||

ರಾಗ ಪಂತುವರಾಳಿ ಮಟ್ಟೆತಾಳ

ಸುರಪಸುತನ ಶರವನಾಗ ಕೋಪದಿಂದಲೆ |
ಭರದಿ ಸೇದಿ ಶರವನೆಚ್ಚ ಗುರುತನೂಜನು || ೪೩೧ ||

ಭರದಿ ಖಂಡಿಸಿದನು ಸವ್ಯಸಾಚಿ ರೋಷದಿ |
ಸುರರು ಮೆಚ್ಚಲಾಗಸದಿ ಕಾದಿದರು ರೋಷದಿ || ೪೩೨ ||

ಸರಳು ಸೇರೆ ಗುರುತನೂಜನಾಗ ಮೌನದಿ |
ತಿರುಗೆ ಕಂಡು ಕೃಪನು ನಿಂದ ಮನದ ಹರುಷದಿ || ೪೩೩ ||

ಗುರು ತನುಜನ ಗೆಲಿದೆನೆಂದು ಹರುಷ ಬೇಡೆಲಾ |
ಧುರದಿ ಧೀರನಾದರೆನ್ನ ಇದಿರು ನಿಲ್ಲೆಲಾ || ೪೩೪ ||

ನೀವು ಗುರುಗಳ್ ನಿಮ್ಮೊಳಾನು ಆನಲಾಪೆನೆ |
ಕಾವುದೆನ್ನನೆಂದೆನುತ್ತ ನಗುತಲೆಚ್ಚನು || ೪೩೫ ||

ಎಚ್ಚ ಶರವ ಖಂಡಿಸಿದನು ಕೃಪನು ನಗುತಲೆ |
ಮುಚ್ಚಿದನು ಶರೌಘದಿಂದ ನರನನಾಗಳೆ || ೪೩೬ ||

ಕೆರಳಿ ವಿಜಯನರ್ಧಚಂದ್ರ ಶರದೊಳವನನು |
ವರವರೂಥ ಹಯವ ಕರದ ಧನುವ ಕಡಿದನು || ೪೩೭ ||

ಭಾಮಿನಿ

ಧರಣಿಪತಿ ಕೇಳಿಂತು ಕೃಪನನು |
ವಿರಥನಂ ಮಾಡುತಿರೆ ಮೌನದಿ |
ಸುರಪಸುತನಾ ಧುರದಿ ಪಾಯ್ದುದು ಸೇನೆ ನಿಮಿಷದಲಿ ||
ವರನದೀಜನು ಬಂದು ಪಾರ್ಥನ |
ನುರವಣೆಯ ತಡೆದಾಗ ಸೈನಿಕ |
ವೆರಸಿ ಬೆಂಬಲವಾಗೆ ಭೀಷ್ಮನು ನುಡಿದ ಫಲುಗುಣಗೆ || ೪೩೮ ||

ಕಂದ

ಅಕ್ಷೌಹಿಣಿ ಬಲವಳಿದುದ |
ನೀಕ್ಷಿಸುತತಿರಥರ ಮನದ ದುಗುಡವನಾಗಳ್ ||
ರಕ್ಷಿಸಬೇಕೆನುತಲಿ ಫಾ |
ಲಾಕ್ಷನ ತೆರದೊಳ್ ಭೀಷ್ಮಂ ನರನೊಡನೆಂದಂ || ೪೩೯ ||

ರಾಗ ಮಾರವಿ ಅಷ್ಟತಾಳ

ಭಳಿರೆ ಪಾರ್ಥನಹುದೊ ಲೋಕ | ದೊಳಗೆ ಖ್ಯಾತನಾದೆ ಕಂದ |
ಕಲಹದಲ್ಲಿ ಗುರುಮುಖ್ಯರನು | ಗೆಲಿದೆ ಇನ್ನೇನು || ೪೪೦ ||

ಕಿರಿದು ಸತ್ತ್ವದವರು ನಾವು | ಪರಿಕಿಸೆಮ್ಮಸರಳನೆಂದು |
ಸರಳ ವೃಷ್ಟಿಗರೆದನೆಂಬಂ | ತಿರದೆ ಭೀಷ್ಮನು || ೪೪೧ ||

ತರಿದು ಪಾರ್ಥನಾಗಳೆಂದ | ಧುರಕೆ ನಿಮ್ಮೊಳಾಳೆ ನಾನು |
ಕರುಣವೊಂದಿದ್ದರೆ ನಮಗೆ | ಸರಿಯು ಬಪ್ಪುದು  || ೪೪೨ ||

ಚರಣಕೆರಗುತಾಗ ಪಾರ್ಥ | ಶರಧನುಗಳ ಪಿಡಿದುಕೊಂಡ |
ಸರಳನೆಸೆದ ಭೀಷ್ಮನಂಗ | ಕಿರದೆ ನಗುತಲೆ || ೪೪೩ ||

ವಾರ್ಧಕ

ಸುರಪನಂದನನೆಚ್ಚ ಬಾಣಮಂ ತರಿದು ಮ |
ತ್ತಿರದೆ ಗಾಂಗೇಯನುತ್ತರಗೆರಡು ಶರವೆಸೆದು |
ವರಕಪಿವರಂಗೈದು ಶರವೆಚ್ಚು ಚೂಣಿಯೊಳ್ ಕಿನಿಸಿನಿಂದಾಕ್ಷಣದೊಳು ||
ನರನ ಕವಚವ ಮೂರು ಬಾಣದಿಂ ತರಿಯೆ ಕಪಿ |
ವರನು ನೆನೆದಂ ರಾವಣೇಶ್ವರನ ಹಾಯೆಂದು |
ತ್ತರ ಮೂರ್ಛೆಯೊಳಗಿದ್ದನದ ಕಂಡು ಫಲುಗುಣಂ ಸೆರಗಿನಿಂದಲಿ ಬೀಸಿಯೆ || ೪೪೪ ||

ಭರದಿ ಮೂಗಿನ ಬೆರಳನಾಡಿಸುತ್ತಲೆ ಪಾರ್ಥ |
ವರ ಮತ್ಸ್ಯಕುವರನನ್ನೆತ್ತಿ ತಾನೆಂದನೆಲೆ |
ತರಳ ಸರಳೊಂದು ನಿನ್ನಯ ಮೈಯೊಳ್ ನಾಟಿದಲ್ಲದೆ ಮೂರ್ಛೆಯೊಳ್ ಬಿದ್ದೆಯ ||
ಧುರದಸ್ತ್ರ ಬಪ್ಪುದಂ ಕಂಡು ಕಣ್ಣೊಡೆದು ನಾ |
ಧರೆಯೊಳುಂ ಬಿದ್ದೆನೈ ಕೊಂಬೆ ನೀನೆನ್ನ ನೆಂ |
ದರೆ ಪಾರ್ಥ ಸಂತಯ್ಸಿ ಮತ್ತಿರದೆ ರಥವೇರಿ ಧನುಶರವ ಝೇಗೈದನು || ೪೪೫ ||

ರಾಗ ಶಂಕರಾಭರಣ ಮಟ್ಟೆತಾಳ

ನಿಂದು ರೋಷದಿಂದಲೀರೈದು ಶರವನು |
ಗಂಗೆಸುತನ ಸಮ್ಮುಖಕ್ಕೆಸೆದ ನಾತನು || ೪೪೬ ||

ನೊಂದು ಮುಂದುಗೆಟ್ಟ ಭೀಷ್ಮನಾಗ ಖತಿಯೊಳು |
ನಿಂದು ಆರು ಶರವನೆಚ್ಚು ಖಂಡಿಸಿದನು || ೪೪೭ ||

ಭರದೊಳಂಬುವೈದಿ ನರನ ಫಣೆಗೆ ನಾಂಟಲು |
ದುರುದುರಿಸಿ ರಕ್ತದರುಣಮಯವದಾಗಲು || ೪೪೮ ||

ನೊಂದು ಪಾರ್ಥನೆಚ್ಚನಾಗ ಮಹಾಶರವನು |
ಕಂಡು ಭೀಷ್ಮ ಕೋಪದಿಂದ ಖಂಡಿಸಿದನು || ೪೪೯ ||

ಸುರಪಜಾತನೆಚ್ಚನಾಗ ಅಗ್ನಿಶರವನು |
ಸುರನದೀಜ ವರುಣಬಾಣ ಪಸರಿಸಿದನು || ೪೫೦ ||

ರೋಷದಿಂದಲಾಗ ಬಹಳ ಶಸ್ತ್ರವೆಸೆದನು |
ಗಾಸಿ ಮಾಡಿ ಛೇದಿಸಿದನಾಗ ಭೀಷ್ಮನು || ೪೫೧ ||

ವಾರ್ಧಕ

ಸರಳಿರಿತಘಾತಿಯಿಂದುರೆ ನೊಂದು ಭೀತಿಯಿಂ |
ತರಹರಿಸಿದುತ್ತರಂ ಬಸಿದು ಮೈನೆತ್ತರಂ |
ಪಿರಿದಾಗಿ ಬೆದರಿದಂ ಮೇಲೆ ಕಪಿಯೊರಲಿದಂ ನದೀಜಾರ್ಜುನರ ಧುರದೊಳು ||
ಮರಳಿ ಘನ ಕೋಪದಿಂ ಗಾಂಡೀವಚಾಪದಿಂ |
ಶರವನೆಸೆದಂ ನರಂ ಪೊಸತಾದುದೀ ಧುರಂ |
ಪರಿಕಿಸುವಡರಿಯದಾ ಮೂಜಗಂ ತಲ್ಲಣಿಸೆ ಅಮರಪತಿ ನಸುನಗುತಲೆ || ೪೫೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿರೈ ದಿಗುಪಾಲಕರು ಗಾಂ | ಗೇಯ ಫಲುಗುಣರುಗಳ ಧುರವನು |
ಧೀರರಿವರೆಂದೆನುತ ಸುರಪತಿ | ನುಡಿದನಾಗ || ೪೫೩ ||

ಈತಗಳು ಮುನ್ನುದಿಸೆ ಧರೆಯಲಿ | ಸೀತೆ ವನದಲಿ ನವೆಯುತಿರ್ದಳೆ |
ಭೂತಳವ ಖಳ ಕೊಂಡುಪೋಪನೆ | ಎನಲು ಸುರರು || ೪೫೪ ||

ಇತ್ತ ಫಲುಗುಣ ನಗುತಲೆಂದನು | ಉತ್ತರನೆ ಕೇಳೆಲವೊ ಭೀಷ್ಮನು |
ಕಾರ್ತವೀರ್ಯಾರಿಯನುಗೆಲಿದಸ | ಮರ್ಥನಿವನು  || ೪೫೫ ||

ಮುನಿದು ಮಲೆತರೆ ಧುರದೊಳಿವನನು | ಗೆಲುವ ಬಗೆಯೆನಗಿಲ್ಲ ಈತನು |
ಕರುಣದಲಿ ಕಾದಿದನು ಎಂದೆನು | ತಿರಲಿಕಾಗ || ೪೫೬ ||

ರಾಗ ಭೈರವಿ ಏಕತಾಳ

ಸುರರಚ್ಚರಿಪಡುತಿರಲು | ಧುರ | ಸರಿಸಮನಾಗುತ ಬರಲು |
ಭರದಿಂ ಪತ್ತಂಬಿನಲಿ | ನರ | ನಿರದೆಚ್ಚನು ಕೋಪದಲಿ || ೪೫೭ ||

ಶರಹತಿಯಿಂದೆದೆ ಬಿರಿಯೆ | ಕಣ್ | ತಿರುಗಿ ಭೀಷ್ಮನು ಮೈ ಮರೆಯೆ |
ಪರಿಕಿಸಿ ಬಲ ಮೊರೆಯಿಡಲು | ಕೇ | ಳ್ದರಸನು ತಾನೆ ಭರದೊಳು || ೪೫೮ ||

ನಡೆದು ಧುರಕೆ ಪಾರ್ಥನಲಿ | ತಾ | ನುಡಿದನು ಘನ ಗರ್ವದಲಿ |
ಫಡ ಫಡ ನರ ಮೈದೋರು | ಬಿಲ್ | ಪಿಡಿ ಕೈ ಚಳಕವ ತೋರು || ೪೫೯ ||

ಅಡವಿಯಲ್ಲದೆ ನಿಮಗಿನ್ನು | ನಾ | ಕೊಡುವೆ ಸಮರಭೂಮಿಯನು |
ಬಿಡು ಬಾಣವನೆಂದೆನುತ | ನೃಪ | ನುಡಿಯಲು ನರ ನಸುನಗತ || ೪೬೦ ||

ನಿಲು ನಿಲು ಕುರುಪತಿ ನೀನು | ಕರೆ | ಕಲಿಕೆಯ ಜೂಜಿನವರನು |
ಕಲಹದಿ ನಿನ್ನುದರವನು | ಬಗಿ | ದಿಳೆಯಾಳುವೆ ನೋಡಾನು  || ೪೬೧ ||

ಎನುತೆರಡಂಬಿಲಿ ನೃಪನ | ಉರ | ವನು ಕೀಲಿಸಲಿಂದ್ರಜನ ||
ಮೊನೆಗಣೆಗರಸ ಮೈ ಮರೆದ | ತೇ | ರನು ಸಾರಥಿ ತೊಲಗಿಸಿದ || ೪೬೨ ||

ವಾರ್ಧಕ

ಮರಳಿದ ವರೂಥಮಂ ಪರಿಕಿಸಿ ಧನಂಜಯಂ |
ಜರೆಯೆ ಕೇಳ್ದಾ ನೃಪಂ ತಿರುಗಿದಂ ಕೋಪದಿಂ |
ಭರದಿ ಕೂಡಿತು ಮತ್ತೆ ಶರಧಿಗೆಣೆಯೆನೆ ಬಲಂ ಮೊರೆಯೆ ಬಹು ವಾದ್ಯಂಗಳು ||
ಗುರು ಭೀಷ್ಮ ಕೃಪ ಕರ್ಣರುರುತರಾಸ್ತ್ರಂಗಳಿಂ |
ನರನ ರಥಮಂ ಮುಸುಕೆ ತರಿವುತ ಶರಂಗಳಿಂ |
ಕೆರಳಿ ಸಮ್ಮೋಹನಾಸ್ತ್ರವ ತೆಗೆದು ವೈರಿಮೋಹರಕೆಚ್ಚನಾ ಪಾರ್ಥನು || ೪೬೩ ||

ರಾಗ ಭೈರವಿ ತ್ರಿವುಡೆತಾಳ

ಎಸೆಯೆ ಸಮ್ಮೋಹನದ ಶರವನು | ಪಸರಿಸಿತು ಪರಸೈನ್ಯದಲಿ ಭಟ |
ರುಸಿರಿಡುತಲೊರಲುತ್ತ ನಿದ್ರೆಯ | ಮುಸುಕಿನಲಿ ಮೈಮರೆದು ಗಜಹಯ |
ವಿಸರಸಹಿತೊರಗಿದರದೇಂ ಸಾ | ಹಸಿಯೊ ಪಾರ್ಥನೆನುತ್ತ ಸುರಪತಿ |
ಹೊಸಹರೆಯದಬಲೆಯರ ಕರದಿಂ | ಕುಸುಮವೃಷ್ಟಿಯ ಕರೆದರಾಲಿಸು |
ಭೂಪ ನೀನು | ನರನ ಪ್ರ | ತಾಪವನ್ನು || ೪೬೪ ||

ಬಲು ಭಟರು ಸಹ ಮಲಗೆ ಕಾಣುತ | ಫಲುಗುಣನು ಮತ್ಸ್ಯಜನೊಳವದಿರ |
ಸುಲಲಿತಾಭರಣಗಳ ತೆಗೆಯೆನೆ | ಇಳಿದು ರಥದಿಂ ಕೌರವಾದ್ಯರ |
ತಲೆಯ ಮುಕುಟವ ಕೊಂಡು ಭೂಷಣ | ಗಳನು ತೆಗೆದವನಡರೆ ತೇರನು |
ಬಳಿಕ ತಮ್ಮಾಯುಧವ ಮುನ್ನಿನ | ವೊಲು ಮರದೊಳಿರಿಸಿದ ವಿಜಯ ಕೇಳ್ |
ಭೂಪ ನೀನು | ನರನ ಪ್ರ | ತಾಪವನ್ನು || ೪೬೫ ||

ವಾರ್ಧಕ

ಎಲೆ ಭೂಪ ಲಾಲಿಸೈ ಪಾರ್ಥಂ ಮಹಾರಥವ |
ನಿಳಿದು ಮುನ್ನಯ್ತಂದ ರಥಮೇರ್ದು ತಿರುಗಿದಂ |
ಬಳಿಕಿತ್ತಲೆದ್ದು ಕೌರವ ಮಾನಭಂಗದಿಂ ಮರಳಿದಂ ನಿಜನಗರಿಗೆ ||
ಫಲುಗುಣಂ ಬರುತೆಂದನುತ್ತರನೊಳರಿಗಳಂ |
ಗೆಲಿದೆನೆಂದಟ್ಟು ದೂತರನಯ್ಯನೆಡೆಗೆಮ್ಮ |
ತಿಳುಹದಿರೆನಲ್ ಮರುಗುತವನುಸಿರ್ದಡಾಂ ಪೇಳ್ವೆನೆನಲಟ್ಟಿದಂ ಭಟರನು || ೪೬೬ ||

ಇಳೆಯಧಿಪ ಮತ್ಸ್ಯನಿತ್ತಂ ಮನೆಗೆ ಬಂದು ಬಲು |
ಗಲಹವಾರ್ತೆಯನರಿತು ಸುತನ ಯೋಚಿಸುತಿರಲ್ |
ಗೆಲಿದರಿಗಳನ್ನುತ್ತರಂ ಬರ್ಪ ನೀನಿದಿರ್ ಕೊಳಲೇಳೆಂದುಸಿರೆ ಚರರು ||
ನಲಿದು ಮತ್ತಾನೃಪಂ ಕಂಕನೊಳ್ ದ್ಯೂತದಿಂ |
ಕುಳಿತಣುಗನರಿಗಳಂ ಗೆಲಿದನೆನೆ ಸೂತನಿಂ |
ಗೆಲವಾಯಿತೆಂದಿವಂ ವಾದಿಸಲ್ ನೃಪತಿ ಕನಕದ ಸಾರಿಯಿಂದಿಟ್ಟನು || ೪೬೭ ||

ಪಣೆಯೊಡೆದು ಸುರಿವ ರುಧಿರಕೆ ಕರವನೊಡ್ಡಿ ಯಮ |
ತನುಜನಿನಿಯಳನೀಕ್ಷಿಸಲ್ಕೆ ಸೆರಗಿಂದಲಾ |
ವನಿತೆ ನೃಪತಿಯ ಲಲಾಟವನೊತ್ತಿ ಶೋಣಿತಂ ಧರೆ ಗಿಳಿಯದಂತೆ ಪಿಡಿಯೆ ||
ಮನದಿ ಮತ್ಸ್ಯಂ ಸಂಶಯದೊಳಗಿರಲಿತ್ತಲುಂ |
ತನುಜನೈತಹ ವಾದ್ಯಘೋಷಮಂ  ಕೇಳ್ದು ಮ |
ತ್ತಣುಗನಂ ಕಾಂಬ ಕಡುತವಕದಿಂದಂ ಮರೆದನಾಗಲಾ ಸಂಶಯವನು || ೪೬೮ ||

ಅರಸ ಕೇಳಿತ್ತಲುತ್ತರನಧಿಕ ದುಗುಡದಿಂ |
ದರಮನೆಗೆ ಬರೆ ಕಂಡು ಮತ್ಸ್ಯನತಿ ತೋಷದಿಂ |
ಧುರದಿ ಭೀಷ್ಮಾದ್ಯರಂ ಗೆಲಿದೆಯೇನೆನೆ ತೋರ್ಪೆ ಗೆಲಿದವನನುದಯಕೆನುತ ||
ತರಳನಾಲಯಕಯ್ದಲಾ ದಿನಂ ಪಾಂಡವರು |
ಹರುಷದಿಂದಿರ್ದುದಯದೊಳ್ ತಮ್ಮ ನಿಜವನುಂ |
ಧರಣಿಪ ವಿರಾಟನಿಗೆ ತೋರಿಸಿಯೆ ಸಂತೋಷಜಲಧಿಯೊಳು ಮುಳುಗಿಸಿದರು || ೪೬೯ ||

ಮತ್ತೆ ಮುರರಿಪುವಂ ಬರಿಸಿ ತತ್ಪುರಕೆ ಮತ್ಸ್ಯ |
ನಿತ್ತಣುಗೆಯಂ ಪಾರ್ಥಸುತಗೆ ಸತಿಯೆನಿಸಿ ಪುರು |
ಷೋತ್ತಮನ ಕರುಣದಿಂದಾ ನಗರದೊಳ್ ಪಾಂಡುಸುತರಿರ್ದರನುವರವನು ||
ಚಿತ್ತದೊಳ್ ಬಯಸುತೆಲೆ ಜನಮೇಜಯನೆ ಲಾಲಿ |
ಸುತ್ತಮರ ಚರಿತೆಯಂ ಪೇಳ್ದೆ ನಾ ನಿನಗೆ ಮನ |
ವಿತ್ತು ಕೇಳುವ ಪುರುಷರನು ಪೊರೆವನನುದಿನಂ ಸತ್ಯಭಾಮಾರಮಣನು || ೪೭೦ ||

ಇಂತಾ ನೃಪಂಗೆ ವೈಶಂಪಾಯಮುನಿವರಂ |
ಸಂತೋಷದಿಂದೊರೆದ ಕಥನವಧರಾಮರರ |
ಸಂತತಿಯೊಳುದಯಿಸಿ ಪೆಸರ್ವಡೆದ ರಾಮಾತ್ಮಜಂ ವಿಷ್ಣುವೆಂಬಣುಗನು ||
ಕಂತುಸಂಹಾರನಂ ನೆನೆದೆಕ್ಷಗಾನದೊಳ್ |
ತಾಂ ತವಕದಿಂದುಸಿರ್ದಮರಚರಿತವ ಕೇಳ್ದ |
ವಂ ತಿಳಿಯದವನೆಂದು ಜರೆಯದೀ ಪುಣ್ಯ ಕಥೆಯಂ ಲಾಲಿಪುದು ಸುಜನರು || ೪೭೧ ||

ಕಂದ

ಅಜವಿನುತಂ ಸುಜನನುತಂ |
ಭುಜಗಾಭರಣಂ ಸುರೇಶವಂದಿತಚರಣಂ ||
ಅಜಪುರವಾಸಂ ಈಶಂ |
ಗಜಚರ್ಮಾಂಬರನೆ ಹರನೆ ರಕ್ಷಿಸು ಎಮ್ಮಂ || ೪೭೨ ||

ರಾಗ ಸೌರಾಷ್ಟ್ರ ಏಕತಾಳ

ಮಂಗಳಂ ಜಯ ಮಂಗಳಂ     || ಪಲ್ಲವಿ ||

ಸುರನುತಚರಣಗೆ ಪುರಹರಗೆ | ಕರುಣಾಕರನಿಗೆ ಶಂಕರಗೆ ||
ಮುರಹರಮಿತ್ರಗೆ ಮನುಮುನಿಸ್ತೋತ್ರಗೆ | ಪರಮೇಶಗೆ ಫಾಲಾಕ್ಷನಿಗೆ || ಮಂಗಳಂ || ೪೭೩ ||

ಇಂದುಧರಗೆ ಕಾಲಾಂತಕಗೆ | ಕಂದುಗೊರಳನಿಗೆ ನಿರ್ಮಲಗೆ |
ಕಂದರ್ಪಾರಿಗೆ ಕಪಾಲಧರನಿಗೆ ನಂದಿವಾಹನಗೆ ದಿಗಂಬರಗೆ || ಮಂಗಳಂ || ೪೭೪ ||

ಉರಗಕುಂಡಲಧಾರಗೆ ಶಿವಗೆ | ಭರಿತವಿನೋದಗೆ ಭರ್ಗನಿಗೆ |
ಸರಸಿಜಭವನಪುರವಾಸಗೆ ಈಶಗೆ | ಗಿರಿಜೇಶನಿಗೆ ಮಹಲಿಂಗನಿಗೆ || ಮಂಗಳಂ || ೪೭೫ ||

ಎರಡನೆಯ ಸಂಧಿ ಉತ್ತರಗೋಗ್ರಹಣ ಮುಗಿದುದು
ಯಕ್ಷಗಾನ ವಿರಾಟಪರ್ವ ಮುಗಿದುದು