ಶಾರ್ದೂಲವಿಕ್ರೀಡಿತ ವೃತ್ತ
ರಾಕೇಂದೂವದನಂ ಸಮುದ್ರ ಭವನಂ ಲೋಕೇಶ್ವರಂ ಮಾಧವಂ |
ನಾಕೇಶ್ಯಾದ್ಯಮರಾರಿವಂದಿತಪದಂ ಖದ್ಯೋತಕೋಟಿಪ್ರಭಂ |
ಶ್ರೀಕಾಂತಂ ಕರುಣಾಕರಂ ವಿಧಿಪಿತಂ ಕಾಕಾರಿವಿಪ್ರಪ್ರಿಯಂ |
ಸಾಕಾರಂ ವರನೀಲಲೋಹಿತಸಖಂ ಧ್ಯಾಯಾಮಿ ದಾಮೋದರಂ                       ||೧||

ರಾಗ ನಾಟಿ ಝಂಪೆತಾಳ
ಜಯತು ಸರಸಿಜನೇತ್ರ | ಜಯತು ಪರಶಿವ ಪುತ್ರ |
ಜಯತು ಶರಣರ ಮಿತ್ರ | ಜಯತು ಕರಿವಕ್ತ್ರಾ ||
ಜಯತು ಜಯ ಜಯತೂ               ||೨||

ತರಣಿಕೋಟಿ ಪ್ರಕಾಶ | ದುರಿತವಿಘ್ನವಿನಾಶ |
ಕರದಿ ಪರಶೂಪಾಶ | ವರದಾಗಣೇಶಾ ||
ಜಯ ಜಯತು ಜಯತೂ               ||೩||

ಹಾರ ಕೊಡಲಿನಮುತ್ತ | ನೀರಗಿರಿಸುತೆ ಪೆತ್ತ ||
ಧೀರಯೆನಗೊಲಿದಿತ್ತ | ಬೀರುತವ ಚಿತ್ತಾ ||
ಜಯತು ಜಯತು ಜಯತೂ                       ||೪||

ಭಾಮಿನಿ
ಕ್ಷೀರಸಾಗರಜಾತೆಗೊಂದಿಸಿ |
ವಾರಿಜೋದ್ಭವ ಸತಿಗೆರಗಿಭವ |
ನಾರಿಗಭಿನಮಿಸುತ್ತ ತ್ರೈಮೂರ್ತಿಗಳ ಧ್ಯಾನಿಸುತಾ ||
ನಾರದಾದಿ ಮುನೀಶ ಸುಮನಸ |
ವಾರಕಾನತನಾಗಿ ಗುರುಚರ |
ಣಾರವಿಂದಕೆ ಮಣಿದು ಪಿರಿಯರ ನೆನೆದು ಶರಣೆನುತೆ              ||೫||

ದ್ವಿಪದಿ
ಪೂರ್ವ ಕವಿಗಳ ನೆನೆದು ಭಕುತಿಪರನಾಗಿ ||
ಊರ್ವಿಯೊಳಗೆಸೆವ ಕವಿನಿಪುಣರಿಗೆ ಬಾಗಿ                 ||೬||

ಒಂದು ದಿನ ವಿಷಯೆ ಜಲಕೇಳಿಗೆಂದೆನುತಾ ||
ಬಂದು ರಮಣನ ಲಾಭಗೈದ ಕಥೆ ಸಹಿತಾ                ||೭||

ಪರಮ ಜೈಮಿನಿ ವಿರಳವಾಗಿ ಭಾರತದಿ ||
ಬರೆದಿರ್ಪ ಶಶಿಹಾಸ ಚರಿತವನು ಮುದದಿ                  ||೮||

ಸಿದ್ಧಿಗಣಪನ ಪೂರ್ಣ ಕೃಪೆಯೊಳಾನೊರೆದೆ ||
ತಿದ್ದಿ ವಾಚಿಪುದಿದನು ಸುಮತಿಗಳು ಬಿಡದೆ                 ||೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಸಿಂಧುತನಯನ ಮೊಮ್ಮ ಮೊಮ್ಮ ಮ | ದಾಂಧರಿಪುಮರ್ದನ ಪರೀಕ್ಷಿತ |
ನಂದನಗೆ ಭಾರತವ ಜೈಮಿನಿ | ಚಂದದಿಂದಾ                        ||೧೦||

ಕಥಿಸುತಿರೆ ಜನಮೇಜಯಾಖ್ಯನು | ಮತಿಗೆಡದೆ ಅವ ಸ್ತಬ್ಧನಾಗಿರೆ |
ಯತಿವರೇಣ್ಯನಿದೇನೆನಲು ಜನ | ಪತಿಯುಸುರ್ದಾ                 ||೧೧||

ಗೋತ್ರವಧೆ ಕಿಲ್ಬಿಷದ ಛೇದಕೆ | ಭ್ರಾತೃಸಹಿತಶ್ವವನು ಬಿಡಲಾ |
ವೃತ್ರಹಾಸುತ ಕಪ್ಪಕೆನುತಲೆ | ಯಾತ್ರೆಗೈಯ್ಯೇ                      ||೧೨||

ಹರಿತರಲು ಸೌರಾಷ್ಟ್ರ ನಗರಿಗೆ | ಹರಿಯೊಳಾಹರಿತನಯ ಕಾಯಲ್ |
ಹರಿಯುಹರಿಸಲು ಧುರವ ಕರಸಹ | ಬರಲು ಭೂಪಾ               ||೧೩||

ಹರಿಯು ಹರಿತಂದೆಡೆಗೆ  ಮೇಲ್ ಹರಿ | ಮರುಗೆ ಹರಿಕೇತುಗೆ ತತುಕ್ಷಣ |
ಹರಿಶಯನಸುತ ಪುತ್ರ ಪೇಳಿದ | ಪರಿಯೊಳೀಗಾ                    ||೧೪|

ಕಂಸಶಾಸನಭಕ್ತನಾದ ಹಿ | ಮಾಂಶು ಹಾಸನು ಜನಿಸಿ ರಾಜ್ಯ |
ಭ್ರಂಶವಾಯ್ತೆಂಬಾ ಕಥೆಯೊಳ್ಮನೆ | ದಂಶವಿಹುದೂ                  ||೧೫||

ಸಂಶಯವು ಬಿಡುವಂತದರ ಸಾ | ರಾಂಶವೆಲ್ಲವವರಗಯ್ಯೆ |
ವಂಶಗೇಡಿಯು ದುಷ್ಟಬುದ್ಧಿ ಪ್ರ | ಸಂಶೆಗೂಡೀ                        ||೧೬||

ಕುಸುಮ ಶರತಾಪದೊಳು ಬಾಲಗೆ | ವಿಷಯೆ ದೊರಕಿದಳೆಂತು ಬಳಿಕಾ |
ವಸುಧೆಗಧಿಪತಿಯಾಗಿ ಕಾಳಿಯೊ | ಲಿಸಿದನೆಂತೂ                   ||೧೭||

ವಿವರಿಸಲು ಬೇಕೆಂದು ವರ ಪದ | ಕುವಲಯದಿ ಕೆಡದಿರ್ದ ಭೂಪನ |
ಸವಿನುಡಿದು ತಕ್ಕೈಸಿ ವ್ಯಸನವ | ಸವರಿಸುರ್ದಾ                     ||೧೮||

ರಾಗ ಕಾಂಭೋಜಿ ಝಂಪೆತಾಳ
ಧಾರುಣೀಪತಿ ಕೇಳು | ಕೇರಳಾಧಿಪ ತಾನು |
ದಾರಗುಣ ಮೇಧಾವಿ | ಶೂರನೊಂದಿನದೀ ||
ಸೇರಿ ಸಭೆಯೊಳ್ ತನ್ನ | ವೀರ ಮಂತ್ರಿಯ ನೋಡಿ |
ಸಾರತರ ಕ್ಲೇಶವಿ | ಸ್ತಾರದಲಿ ಪೇಳ್ದಾ                       ||೧೯||

ಪುತ್ರನಿಲ್ಲದ ಮನುಜ | ನುತ್ಕೃಷ್ಟನಹನೆ ಸುರ |
ಶತ್ರುವಲ್ಲವೆ ಬರಿದೆ | ಧಾತ್ರಿಪತಿಯೆನಿಸೀ ||
ಚಿತ್ರಗುಪ್ತರ ಪರಮ | ಮಿತ್ರನಲ್ಲದೆ ಕಮಲ |
ಪತ್ರಾಕ್ಷಸಖನಹನೆ | ಗೋತ್ರರಿಪುವವನೂ                  ||೨೦||

ಅಜನೃಪಾಲನಸುತನು | ಕುಜನನಾದನೆ ಸುತರ |
ತ್ಯಜಿಸದಿರು ಅಂತ್ಯದಲಿ | ನಿಜಪದವಿ ಗಳಿಸೀ ||
ದ್ವಿಜಗಮನ ಚರಣಪಂ | ಕಜಭ್ರಮರವೆನಿಸಿರ್ಪ |
ರುಜುಸುತರ ದರ್ಶನವೆ | ವಿಜಯವೀಭವಕೆ                ||೨೧||

ವಾರ್ಧಕ
ಎನಗೆ ಪುತ್ರೋತ್ಸವಂ ಎಂದಹುದೊ ತಕ್ಷಣದಿ |
ಘನತರದ ಸತ್ರಾದಿದೇವ ಮಂದಿರಗಳಿಂ |
ಮನದೊಳಿಹ ತೆರಗೈದು ತೆಗೆಸಿ ಕಾರಾಗೃಹಂ ಕರೆಸಿ ಭೂಸುರನಿಕರಕೆ ||
ಅನುಸರಿಸು ವಸ್ತು ನೂರೊಂದು ಬಳ್ಳದ ಮುತ್ತ |
ನನುಪಮ ಸುವರ್ಣ ಶತಭಾರ ಮುನ್ನೂರು ಕಾಂ |
ಚನವಿಭೂಷಿತ ಸುರಭಿಗಳನು ಮನ್ನಿಸುವೆನಾನಖಿಲಯಾಚಕವರ್ಗವಾ     ||೨೨||

ಕಂದ
ಈತನ ನುಡಿಯಾಲಿಸಿ ಸಿರಿ |
ನಾಥನು ತನಯಂಗೆಚ್ಚರಿಸಲ್ ಶೀಲೆಯು |
ಮೋದದಿ ಧರಿಸಿದ ಗರ್ಭದ |
ಬಾಧಕಮಂತಾಳದೆ ಸಖಿಗೊರೆದಳ್ ಇರಮಂ                        ||೨೩||

ರಾಗ ನೀಲಾಂಬರಿ ಮಟ್ಟೆತಾಳ
ಸುತರುಗಳಿಲ್ಲದ ಜನ್ಮಕೆ | ಗತಿ ದೊರಕದೆನುತ್ತಲಿ ಭೂ |
ಪತಿಯೊಳು ಬೆರೆದುದರಿಂದಾ | ಗತಿ ತೀರಿತು ಸುಗುಣೀ                        ||೨೪||

ಒಡಲೋಳೊಂದೆಡೆ ಪಿಡಿವುದು | ತೊಡೆಯೋಳ್ ನಾಡಿಗಳೆಳೆವುದು |
ಜಡಜಾಕ್ಷಿಯೆ ಪಿಡಿಯೆನ್ನನು | ನಡುತುಂಡಿಸುತಿಹುದೂ              ||೨೫||

ಸರಸಿಜೋದ್ಭವನೆಸಗಿದ | ಉರುತರ ಕಷ್ಟವನ್ಯಾರದು |
ಹರಿಪರು ಸುಮ್ಮನೆ ಮರುಗೀ | ಮರುಳೆಯು ಆದೆನೆಲಾ                       ||೨೬|

ಭಾಮಿನಿ
ಆರು ಸಲಹುವರೆಂದು ಮರುಗುವ |
ಚಾರುವದನೆಗೆ ದುರ್ಮುಹೂರ್ತದಿ |
ತಾರಮೂಲಾರಿಷ್ಟ ಭಾಗದಿ ಜನಿಸಿದನು ಕುವರಾ ||
ಆರು ಬೆರಳಡಿಯಿಂದ ಧರೆಯನು |
ತೂರುತಿರಲಾ ಸೂಲಗಿತ್ತಿಯರ್ |
ದೂರಿದರು ನೃಪಗಿದನು ತಕ್ಷಣ ಕರೆಸಿದನು ಬುಧರಾ                ||೨೭||

ವಾರ್ಧಕ
ಕನಕವಸನಾಭರಣ ಗೋಮಹಿಷಿಯಜಗಳಿಂ |
ಮಿನುಪನವರತ್ನ ಧಾರುಣಿ ಪಾತ್ರಫಲಗಳಿಂ |
ಧನಧಾನ್ಯ ಕೃಷ್ಣಾಜಿನ ವಸ್ತು ವ್ಯಜನದಿಂ ಗಂಧಚಂದನಗಳಿಂದೇ ||
ಜನಪ ಬುಧ ಸಂತತಿಯ ದಾನಧರ್ಮದಿ ತಣಿಸಿ ||
ಘನಬಂಧನದೊಳಿರ್ದಸೆರೆಯಾಳ್ಗಳಂ ಬಿಡಿಸಿ |
ಅನುಪಮದ ವಿಪ್ರರೋಳ್ ಜನ್ಮ ಲಿಖಿತಂಬರೆಸಿ ಎರಗಿದಂ ಫಲವ ಬಯಸೀ          ||೨೮||

ರಾಗ ಪುನ್ನಾಗ ಆದಿತಾಳ (ಪಾಲಿಸೋ ಪಾವನ ಚರಿತ ಎಂಬಂತೆ)
ಛಾದಸರಾಗ ಕೈಪಲ್ಲವಮಡಿದೂ || ಮೋದವಗೊಳ್ಳದೆ ಪೇಳ್ದರು ತಿಳಿದೂ || ಪಲ್ಲವಿ ||

ಹೇಧರಣಿಪ ಜಿಂಹೆ ಸೇರಿದೆ ಒಂದೇ ||
ಆದರಿಸುವದೆಂತೈ ಕೇಳ್ದರೆ ಮುಂದೆ              ||೩೦||

ತಾರಾಮೂಲಾರಿಷ್ಟ ಭಾಗದಿ ಶುಭವೂ ||
ದೋರದು ನಿನಗಿದೆ ಶೀಘ್ರದಿ ಮೃತಿಯು                    ||೩೧||

ವೀರರೀರಾಜ್ಯವ ಕೊಂಬರು ಧುರದೀ |
ದಾರಿಯ ಕಾಣೆವು ಪಾರಹ ತೆರದೀ               ||೩೨||

ತಟ್ಟನೆ ಭೂಸುರನಿಕರಕೆ ದಾನಾ ||
ಕೊಟ್ಟರೆ ಶಾಂತಿಯಿಂದಾಹುದೈಶಮನಾ                   ||೩೩||

ಭಟ್ಟರನೆಲ್ಲರ ಕರೆಸುವುದೀಗಾ ||
ಗಟ್ಟಿಯ ಮಾಳ್ಪೆವು ಅವನಿಯ ಭೋಗಾ                     ||೩೪||

ಭಾಮಿನಿ
ಪಾರ್ವರಿಂತೆನುತಿರಲು ಧರಣಿಪ |
ನೂರ್ವಿಗೊರಗಿರಲಾಗ ಪ್ರಜೆಗಳು |
ಚೀರ್ವಧ್ವನಿಗೇಳುತ್ತ ಪದ್ಮಪುರಾಧಿಪತಿತನಯಾ ||
ಸಾರ್ವಜನಸಹಿತೈದೆ ಕೇರಳ |
ದೋರ್ವಚರಗಂ ಬರೆದು ಸುಣ್ಣವ |
ದೂರ್ವುದೆಂದಟ್ಟಿದ ರಣಾಗ್ರಕೆ ತೆರಳಿ ಬಹುದೆನುತಾ                 ||೩೫||

ರಾಗ ಲಾವಣಿ ಏಕತಾಳ (ಆರೆಲೆ ಹುಡುಗಿ ಎಂಬಂತೆ)
ಆಗದಾಗದು ನೃಪತಿ | ಬಾಗಿಲೊಳಿರುವ ವೃತ್ತಿ ||
ಸಾಗದೆಮ್ಮೊಳು ಬಹುಭೀತಿ || ಹೋಗುವೆವೀಗಾ | ಸಾಗದೆಮ್ಮೊಳು ಬಹುಭೀತೀ     ||೩೬||

ಮದಮುಖರಾಜರಿಂದು | ಕುದುರೆ ಸಹಿತ ಬಂದು |
ಒದೆದೆಮ್ಮ ನೂಕಿದರೂ | ಸದೆದು ಮತ್ತೆ | ಒದೆದೆಮ್ಮ ನೂಕಿದರೂ                       ||೩೭||

ರಟ್ಟೆಯ ಕಟ್ಟಿ ಜೂಟ | ಮೆಟ್ಟಿಕೊಟ್ಟರು ಲಾಟ |
ಇಬ್ಬರು ನೀಟ ಗೀಟಾ | ಮೂಗಿನ ಮೇಲೆ | ಇಟ್ಟರು ನೀಟ ಗೀಟಾ                        ||೩೮||

ರಾಗ ಮಾರವಿ ಏಕತಾಳ
ಚಾರರ ನುಡಿಯನು ಕೇಳುತ ನೇತ್ರದಿ | ಸೋರಿಸುತುರಿಗಿಡಿಯಾ ||
ಚೋರರಸೀಳ್ವೆನು ಕಡಿದೊಟ್ಟೆಲ್ಲರ | ತೋರಿಸುವೆನು ವಿಜಯಾ               ||೩೯||

ಸತ್ಯವು ಭೂಸುರರೆಂದಾ ನುಡಿಯದು | ಮಿಥ್ಯವಹುದೆ ಧುರವಾ |
ಮೃತ್ಯುವು ತಂದಿದೆ | ಕ್ಷತ್ರಿಯ ಧರ್ಮದಿ | ಹತ್ತುವೆ ಸುರಪುರವಾ             ||೪೦||

ಸಿದ್ಧವ ಮಾಡೈ ಸಚಿವನೆ ಸೈನ್ಯವ | ಯುದ್ಧಕೆ ಬಹುತ್ವರದೀ ||
ಸದ್ದಡಗಿಸುತಲಿ ಬದ್ಧeನರ | ಹೊದ್ದಿಪೆ ಜವಪುರದೀ                  ||೪೧||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಥಟ್ಟನಸ್ತ್ರವ ಪಿಡಿದು ಕರಿಗಳ | ಬಿಟ್ಟು ರಥವನು ಏರಿ ಕುದುರೆಯ |
ಕಟ್ಟಿ ಮುಂದಕೆ ತೆರಳಿ ದರುಶನ | ಗೊಟ್ಟು ಪೇಳ್ದ                     ||೪೨||

ಹೇಳು ನಿನ್ನಭಿಧಾನ ಸುಮ್ಮನೆ | ಕಾಳಗವ ಬಯಸಿರ್ಪುದೇನಿದು |
ಖೂಳ ನಿನ್ನಸುವಪ್ಪಿಸುವೆನಾ | ಕಾಲನಿಂಗೇ                ||೪೩||

ಕನ್ನೇಯೀವೆಯ ಪೆಸರು ಮಾರ್ತಾಂ | ಡೆನ್ನುವರು ಕಾಳಗದೊಳೀಪುರ |
ವೆನ್ನದೆನಿಸಲು ಬಂದೆ ಕೊಲ್ಲುತ | ನಿನ್ನನೀಗಾ              ||೪೪||

ರಾಗ ಘಂಟಾರವ ಅಷ್ಟತಾಳ
ಕೇಳುತೆದ್ದನು ರೋಷದಿ ಭೂಪಾಲ |
ಕಾಲಭೈರವನಂತೆ ಘರ್ಜಿಸಿ | ಕೀಲಿಸಿದ ಶರವಂದನೂ             ||೪೫||

ಕಿಚ್ಚಿನಂದದಿ ಬರುತಿಹ ಶರವನ್ನು |
ನುಚ್ಚುನುರಿಯನು ಮಾಡಿ ಮರುಶರ | ವೆಚ್ಚನಾಕ್ಷಣ ಭೂಪಗೇ                ||೪೬||

ಕಡಿಯುತಸ್ತ್ರವ ಪ್ರತಿಬಾಣದೊಳು ರಿಪು |
ಪಡೆಯ ಮುಸುಕಿದನೇನನೆಂಬೆನು | ಕಡುಪರಾಕ್ರಮದಿಂದಲೀ                ||೪೭||

ವಾರ್ಧಕ
ಚೀರಿತು ತುರಂಗಮಂ ಶರಘಾತದಿಂಸೇನೆ |
ಕಾರಿದುದು ರುಧಿರಮಂ ಭುವಿಯಿಂದ ಸ್ಯಂದನಂ |
ಹಾರಿ ಗಗನಾಂತರಕೆ ಧಾತ್ರಿಯೊಳ್ ಬೀಳೆಯಮನೂರ ಸೇರಿದ ಸೂತನೂ ||
ವೀರಮಾರ್ತಾಂಡ ಮೂರ್ಛಿಸಲೊರೆದ ಮೇಧಾವಿ |
ತೋರೆಲವೋ ನಿನ್ನ ಕೈಚಳಕ ಮಂಬರಿದೆ ಧುರ |
ಧೀರರೊಳ್ಕಾದಲ್ಕೆ ನಗದಿಹರೆ ರಥದೊಳಗೆ ಹೊರಳುವುದು ಥರವೆ ನಿನಗೆ ||೪೮||

ಕಂದ
ಶರದಿಂ ಮೂರ್ಛಿಸಿ ರಥದೋಳ್ |
ಒರಗಿರೆಯೆಚ್ಚರುತತಿಧೈರ್ಯದೊಳಿರುತಾಗಳ್ |
ಕರದೋಳ್ ಚಾಪವ ಧರಿಸುತ |
ಸುರಿಸುತೆ ಶಿಲಿಮುಖ ಮಳೆಯನ್ನೊರೆದನು ರವದಿಂ                ||೪೯||

ರಾಗ ಭೈರವಿ ಅಷ್ಟತಾಳ
ಒಮ್ಮೆಯನ್ನನು ಧುರದೀ | ಗೆದ್ದಿಹೆನೆಂಬ | ಹಮ್ಮಿನಲಿರ್ಪೆ ಭರದಿ ||
ನಮ್ಮೊಳು ಬವರದಿ ಹಳಚಿ ಬಾಳಿದರುಂಟೆ | ಬೊಮ್ಮ ಶರದಘಾತದೀ      ||೫೦||

ಎಂದು ಚಾಪದೊಳು ಶರವ | ಬೇಗದೊಳಿಟ್ಟು ||
ಮುಂದೆ ಹಾರಿಸಲು ಶೂರಾ | ಇಂದಿರೆಯರಸನ ವಿಶಿಖದಿ ಕಡಿದವ | ನಿಂದಿಸುತಿರೆ ಭೂವರಾ||೫೧||

ಮೂಢ ನಿನ್ನನು ಗೆಲ್ಲುವಾ | ಮೋಡಿಯ ಬಲ್ಲೆ | ನೋಡು ಭೈರವಶರ ||
ಹೂಡಿಹೆನೆನುತೆಸೆಯಲು ಭೂಪನರಸಿದ | ಗಾಢದಿ ಸುರಪುರವ              ||೫೨|

ರಾಗ ಕೇದಾರಗೌಳ ಅಷ್ಟತಾಳ
ಧರಣಿಪಾಲಕನನ್ನು | ತರಿದು ಶೈಮಿನಿಪುರ |
ವರಕೈಸಿ ತಾನು ಬೇಗಾ ||
ಹರಿತಂದು ನೃಪನಮಂ | ದಿರದಿ ವಾಸವಗೆಯ್ಯೆ |
ಮರುಗುತ್ತ ಶೀಲೆಯಾಗಾ               ||೫೩||

ಕರೆದೋರ್ವ ಮುದಿದೂತಿ | ಗೊರೆದಳೆನ್ನಯ ಚಿಕ್ಕ |
ತರುಣನ ಕೊಂಡು ನೀನೂ ||
ಪರಿಪಾಲಿಸುವುದೀತ | ತರಳನಾಗಿಹ ನಿಂಗೆ |
ತೆರೆಯದೆ ಕಾಯೆ ಇನ್ನೂ                ||೫೪||

ಎಂದಾeಪಿಸುತಲಿ | ನಂದನನನು ಬಿಟ್ಟು |
ಮುಂದೈದಿ ಕಾಳಗದೀ ||
ಹೊಂದಿದೆ ರಮಣ ಹ್ಯಾ | ಗೆಂದು ಚಿಂತಿಸಿದಳು |
ನಿಂದೊಡಲತಾಪದೀ                    ||೫೫||

ರಾಗ ಸಾವೇರಿ ಆದಿತಾಳ
ಉಡುರಾಜನಂತಾಮೊಗಾ | ಕಂದಿಹುದ್ಯಾಕೆ |
ನುಡಿಯೇಳು ಕಾಂತಾ ಬೇಗಾ ||
ಪಡೆಯನೇ ರಾಜ್ಯಭೋಗಾ | ಕೈಗೊಂಡು ಬಹು |
ಸಡಗರದೋರು ಈಗಾ                  ||೫೬||

ಎಂತಳಿದೆಯೋ ಭೂವರಾ | ರಣದಿ ಬಲ |
ವಂತರೊಳಗೆ ನೀಶೂರಾ ||
ಚಿಂತಿಸುತಿಹ ಜನರಾ | ಪಾಲಿಸದಿರೆ |
ಎಂತುಳಿಯುವುದೆ ಶಿರಾ                ||೫೭||

ಕಂದನ ಬಯಸಿ ಇಂತೂ | ವೈರಾಗ್ಯವೇನೂ |
ಬಂದಿಹನಿದಕೋ ಮುಂತೂ ||
ಚಂದಿರವದನನಿಂತೂ | ಮಾತಾಡದಿರೆ |
ಮುಂದೆ ಜೀವಿಸುವುದೆಂತೂ                       ||೫೮||

ಭಾಮಿನಿ
ಹಲುಬೆ ಬಹುಪರಿ ಮರುಳರಂದದಿ |
ಅಲೆಯದಿರೆ ಭೂಪಾಲನಕ್ಷಿಯು |
ವಲಿದ ಸುರಕಾಂತೆಯರ ಸೊಬಗಿಂಗೆನುತ ನಿಶ್ಚೈಸೀ ||
ಜ್ವಲನ ರಥಮಂಯೇರಿ ಪತಿಯೊಳು |
ಛಲದಿ ಬೆನ್ನಟ್ಟಿದಳು ಕಾಮುಕ |
ಲಲನೆಯರ ಜೊತೆಗೊಡದೆ ಕೇಳ್ ಸಹಗಮನ ಮಾರ್ಗದಲೀ                 ||೫೯||

ರಾಗ ಮಧುಮಾಧವಿ ತ್ರಿವುಡೆತಾಳ
ಸುದ್ದಿಗೊಡಿಸದೆ ಅರಿನೃಪಾಲಗೆ | ವೃದ್ಧೆ ತರಳನು ಸಹಿತ ಕುಂತಳ |
ಕೆದ್ದುಗಮಿಸಲ್ ಬಳಲಿ ಭುವಿಯೊಳು | ಬಿದ್ದು ಅಳುತಾ               ||೬೦||

ಇಡಲು ತೊಟ್ಟಿಲೆಲ್ಲಿಹುದು ಬಾಲಗೆ | ತೊಡಿಗೆಯೆಲ್ಲಿದೆ ನಿಳಯವಿಲ್ಲವು |
ಬಿಡದೆರೆಯೆನೀರ್ಗುಡಿಯೆ ಕ್ಷೀರವ | ಕೊಡುವೆನೆಂತೂ                ||೬೧||

ಧರಣಿಪತಿ ಮೇಧಾವಿ ಸತಿಸಹ | ಪರಕೆಯೊಳು ಪಡೆದೀಗ ನಿನ್ನನು |
ಪರಿಕಿಸದೆ ನಾಕದೊಳು ಸೇರ್ದರು | ಜರಡೆಗಿತ್ತು                     ||೬೨||

ಬಾಲಲೀಲೆಯ ನೋಡಿ ಹಿಗ್ಗುತ | ಲಾಲನೆಗಳಿಲ್ಲೆಂದು ಚಿಂತಿಸಿ |
ಪಾಲುಬೆಣ್ಣೆಯ ಬೇಡಿ ಚಿಣ್ಣನ | ಪಾಲಿಸಿದಳೂ ||                      ||೬೩||

ಶೀಲ ನಡೆ ನುಡಿಗಲಿಯೆ ಬಾಲನು | ಮೇಲೆ ರುಜೆ ಬಂದಡಸಿ ಜರಡೆಯು |
ಕಾಲನೆಡೆಗೈದಿರಲು ಪಸುಳೆಯು | ಘೋಳಿಡುತಲೀ ||              ||೬೪||

ರಾಗ ನವರೋಜು ಏಕತಾಳ
ಯೇಳವ್ವಾ ಮಲಗುವುದೇ | ಹಸು |
ಬಹಳವಾಗಿಯೆ ದಣಿದೇ ||
ಬಾಳೆಖರ್ಜೂರ ಕಿ | ತ್ತಳೆದ್ರಾಕ್ಷೆಫಲವು ಸೀ
ಯಾಳವನ್ನಿತ್ತೆನ್ನ | ಪಾಲಿಸು ದಯದೊಳು                  ||೬೫||

ಯಾತಕೆ ಮೌನದೊಳಿರುವೇ | ಕಡು |
ಭೀತಿಯ ನಾ ತಳೆದಿರುವೇ ||
ಕೂತು ಮುದ್ದಿಸುತೆನ್ನ | ಮಾತನಾಡಿಸು ತಾಯೆ |
ರೀತಿಯಲ್ಲವು ಸುಮ್ಮ | ನೇತರ ಮುನಿಸಿದು               ||೬೬||

ರಾಗ ಕಲ್ಯಾಣಿ ಆದಿತಾಳ (ಧಾಟಿ : ಹಿಡಿದ ವ್ರತವಾ ಬಿಡೆನು ಎಂಬಂತೆ)
ತೊಡುವಿಗೀಯದಿರುವೆಯೆನ್ನುತ್ತಾ | ಮಲಗಿಹಳೆಂದು |
ಪಿಡಿದು ಕಯ್ಯನಾಗಯಳೆಯುತ್ತಾ ||
ಕೊಡುಕೊಡೆಂದು ಛಲವದೋರುತ್ತಾ | ಕಂಬನಿದುಂಬಿ |
ಕೆಡಹಿಶವದ ಮೇಲೆ ಬೀಳುತ್ತಾ                    ||೬೭||

ಅಳುತ ಹಟದೋಳೀರ್ಪಬಾಲನಾ | ಪುಷ್ಕರಣೆಗೈವ |
ಲಲನೆ ವ್ಯೂಹ ಪಿಡಿಯುತೀತನಾ ||
ಎಲವೋ ಮುಟ್ಟಬೇಡ ಶವವನ್ನೂ | ಬಾ ಎಂದು ಕರದಿ |
ಜಲವಪೊಯ್ದಾಮೇಲೆ ಅವನನ್ನು                  ||೬೮||

ಮುಟ್ಟಿಕಟಿಯೊಳಿಡುತ ಒಯ್ದರೂ | ಬಾಲನಕ್ಷುಧೆಗೆ |
ಕೊಟ್ಟು ಗೋಕ್ಷೀರವನು ಪೊರೆದರೂ ||
ಪುಟ್ಟ ತರುಣ ಸುಗುಣನೆಂಬರೂ | ಪೊಂದುಡಿಗೆಯನ್ನು |
ಇಟ್ಟು ಸೊಬಗ ನೋಡಿ ನಲಿದರೂ               ||೬೯||