ಕಂದ
ಈ ಪರಿ ಯೋಚಿಸಿ ಸಚಿವಂ |
ಸಾಫಲ್ಯವದಾಯ್ತಿಷ್ಟತೆ ಎಂದಿರಲಾಗಂ |
ಗಾಬರಿಯೊಳ್ ಬಂದಿಹನಂ |
ಆ ಭೂಮಿಪನರಿದಿದಿರ್ಗೊಳ್ಳುತತಾನೊರೆದಂ ||೩೦೦||

ರಾಗ ಕಾಂಭೋಜಿ ಝಂಪೆತಾಳ
ವಿರತಿಯಾಂತಿರುತಿರ್ಪೆ | ವಿರಚಿಸುವೆನೈತಪವ ||
ವಿರಸನಾಗದೆನೀ ಸಾ | ವಿರದೆ ಸುಖಿಯಾಗಿ ||
ವರ ಪೌರೋಹಿತ ಗಾಲ | ವರ ನೇಮದಂತೆ ಪುರ |
ವರದ ಪಟ್ಟವನಾಳು | ವರನಾಗಿವಳಿಗೆ          ||೩೦೧||

ಸುಂದರಾಂಗಿಯನಾಗ | ಗಂಧರ್ವವಿಧಿಯಿಂದ |
ಚಂದಿರಾಸ್ಯನಿಗಿತ್ತು | ಯಂದ ಗಾಲವಗೆ |
ವಂದಿಸುವೆನೈಯಾಜ್ಞೆ | ಇಂದೀವುದೆನುತ ನೃಪ |
ನಂದನಂ ದಾಟುತಲಿ | ಮುಂದೆ ವನಸಾರ್ದ  ||೩೦೨||

ಮುಂತೆ ಶಶಿಹಾಸ ನೃಪ | ನೆಂತ ನಗರದಿ ತೋರೆ |
ಕಾಂತಮಣಿಸಹನಾಗಿ | ದಂತಿಯನು ನಡೆಸಿ |
ಸಂತಸದೊಳೈತರಲು | ಮಂತ್ರಿವರ ನೋಡುತಲಿ |
ಚಿಂತಿಸಿದ ಭ್ರಮೆಗೊಂಡು | ಅಂತರದಿ ಮುಳಿದು          ||೩೦೩||

ವಾರ್ಧಕ
ಗಾಲವರ ಮತದೊಳೆನ್ನಂ ಕರೆಸದಿಂದು ಭೂ |
ಪಾಲಂ ಕುಳಿಂದತನಯಂಗಿಳೆಯನೊಪ್ಪಿಸಿವ |
ನಾಲಯಕೆ ತೆರಳಿದನೆ ಮದನನಿದ್ದೇಂಗೈದನೆಂದು ಪಲ್ಮೊರೆದು ಮಗನ |
ಮೇಲೇ ಕೋಪಿಸುತಿರ್ದನನ್ನೆಗಂ ಭ್ರಮರಾರಿ |
ಮಾಲಿನೀವೆರಸಿ ಮಾವನ ಕಾಣಲೆಂದುಶುಂ |
ಡಾಲಮಸ್ತಕದಿಂದಲಿಳಿತಂದು ಶಶಿಹಾಸನೆರಗಿದಂ ಸಚಿವನಡಿಗೆ ||೩೦೪||

ರಾಗ ಭೈರವಿ ಏಕತಾಳ
ಪರಶಿವೆಯನು ಪೂಜಿಸಲು | ನಾ | ನರುಹಿರೆ ನಿನ್ನೊಳು ಮೊದಲು ||
ಮರೆಯುತ ಮೂಢತೆಯೊಳಗೆ | ಏಂ | ಜರುಗಿದೆ ಪೇಳುವದೆನಗೆ            ||೩೦೫||

ರಾಗ ಕೇದಾರಗೌಳ ಅಷ್ಟತಾಳ
ಮದನವೈರಿಯ ಪ್ರೀತೆ | ಪದವ ಪೂಜಿಸಲು ನಾ | ಮುದದಿ ಪೋಪ ವೇಳೆಗೆ ||
ಚದುರ ಭಾವನು ತಡೆ | ಸಿದನೃಪನೆಡೆಗೈದಿ | ಪದವಿದನಾಳ್ವುದಕೆ          ||೩೦೬||

ರಾಗ ಭೈರವಿ ಏಕತಾಳ
ಕಟ್ಟಳೆಯನು ಮೀರುತಲಿ | ನೃಪ | ಪಟ್ಟವ ನಾಳ್ವುದೆನುತಲಿ |
ಕೊಟ್ಟೆಯ ಮನವ ಶಿವೆಯು | ಮುಳಿ | ಸಿಟ್ಟರಿಹಳೆ ತಾಸಿರಿಯು  ||೩೦೭||

ರಾಗ ಕೇದಾರಗೌಳ ಅಷ್ಟತಾಳ
ಅಂಗಜರಿಪು ಪ್ರಿಯೆ | ತುಂಗವಿಕ್ರಮೆಯ ಪಾ | ದಂಗಳ ಪೂಜಿಸಲು |
ಭರವಾಗದ ತೆರ | ನಂಗಯ್ಯೆ ಮುದದಿ ಭಾ | ವಂ ಗಮಿಸಿರ್ದಪನು          ||೩೦೮||

ರಾಗ ಭೈರವಿ ಏಕತಾಳ
ನಿನ್ನೊಳು ಪೇಳಿದ ಕೃತಿಗೆ | ಪರ | ರನ್ನು ಕಳುಹಿದುದು ಹೇಗೆ ||
ಚನ್ನಾಯಿತೆ ಉಸುರೆನಗೆ | ನಡೆ | ಸಿನ್ನು ರಥವನೀ ಮನೆಗೆ        ||೩೦೯||

ರಾಗ ಕೇದಾರಗೌಳ ಅಷ್ಟತಾಳ
ಇಡಳು ನಮ್ಮೊಳು ಹೆಚ್ಚು | ಕಡಿಮೆಯೆಂದೆನುತಲೆ | ನಡೆದ ಭಾವನಲ್ಲಿಗೆ ||
ನುಡಿದಡೇಂ ಫಲವಿನ್ನು | ನಡೆವೆನೆನ್ನುತಲಾಗ | ಅಡಿಯಿಟ್ಟನೈ ಮೆಲ್ಲಗೆ     ||೩೧೦||

ಭಾಮಿನಿ
ಇಂತಳಿಯ ತೆರಳಲ್ಕೆ ಸಚಿವನು |
ಚಿಂತಿಸಿದ ಪರರಳಿವ ಬಯಸಲ |
ದೆಂತಹುದು ದುರ್ಯೋಚನೆಯಲಿ ಪತಂಗನಾದೆನಲ |
ಇಂತೆನುತೆ ಪೊರಟಾಗ ಭೂತದ |
ಸಂತತಿಯ ಲೆಕ್ಕಿಸದೆ ನೀತಿಯೊಳ್ |
ಮುಂತೆ ನಡೆದನು ಚಿತೆಯ ಕಾಷ್ಠವ ಪಿಡಿದು ಬೆಳಕಿಂಗೆ ||೩೧೧||

ಕಂದ
ಚಂಡಿಯ ಭವನಂ ಸೇರುತ |
ತುಂಡಿಸಿ ಮಡಿದಿಹ ಒಂದೇ ಘಾಯದ ಸುತನಂ |
ಕಂಡತಿಶೋಕದೊಳಾಗಂ |
ಮುಂಡನು ತಳ್ಕಿಸಿ ಹಲುಬಿದ ಬಹು ಪರಿಯಿಂದಂ        ||೩೧೨||

ರಾಗ ನೀಲಾಂಬರಿ ಆದಿತಾಳ
(ಅಹುದೆಯನ್ನಯರಮಣ ಎಂಬಂತೆ)

ತರಳಾ ಏಳೇಳು ಬೇಗ | ತಾತಗೆ ಮನೋ | ಹರುಷವನೇಳಿಸೀಗ ||
ಅರಸನೆನಗೆ ಏನ | ವಿರಚಿಸವರೆದಿಹ |
ಅರುಹು ಸುಮ್ಮನೆ ಕೋಪ | ತರವಲ್ಲ ಕುಲದೀಪ         ||೩೧೩||

ತಂದಿಹನೋಲೆ ನೋಡು | ಚಂದಿರಹಾಸ | ಗಿಂದನುಜೆಯುನು ನೀಡು ||
ಬಂದಿಹ ವಿಬುಧರ | ಸಂದಣಿಯನು ದ್ರವ್ಯ |
ದಿಂದ ತಣಿಸುಬೈದೆ | ನೆಂದು ಕೋಪಿಸದಿರು  ||೩೧೪||

ಭಕ್ತನಾಗುತ ಹರಿಯ | ಶೂಲಿಯಧ್ಯಾನಾ | ಸಕ್ತನೆನಿಸಿ ತನಯ
ಶಕ್ತ ನೀನಹೆ ಜೀವ ಮುಕ್ತಿಗೆ ಅಳಿವಿದು |
ಯುಕ್ತವಲ್ಲವು ಏಳು | ಶಕ್ತಿಯನೊಲಿಸಲು        ||೩೧೫||

ರಾಗ ಆನಂದಭೈರವಿ ಏಕತಾಳ
ಹೀನನಾದೆನಯ್ಯೋ ಮಗನೇ | ಕಾಣದಾದೆನು ಪಥವನೇ ||
ಯೇನನು | ಗಯ್ಯ | ಲಿ ನಾನು        ||೩೧೬||

ನಾಗಶಯನ ಭಕ್ತನಿಗೆ | ನಾಗೈದಿರುವ ದೋಷವೆನಗೆ ||
ತಾಗಿತು | ದೆಸೆ | ಮಾಗಿತು            ||೩೧೭||

ಕಂದ ನಿನಗೆ ನವಗ್ರಹರು | ಒಂದೇ ಸಮದ ಪ್ರೀತರಹರು |
ಕೊಂದೆನು | ನಾನೇ | ಮುಂದೇನು  ||೩೧೮||

ಭಾಮಿನಿ
ಮಗನೆ ನಿನ್ನನು ಮಡುಹಿ ಜಗದೊಳು |
ಹಗೆಗೆ ಊಳಿಗವಾಗಿ ಜೀವಿಸೆ |
ನಗಜೆ ಶಿವೆ ಮತ್ತಾ ಮತಂಗರು ಸುಡಲಿ ದೇಹವಿದು ||
ಒಗೆವೆನಸುವೆಂದೆನುತ ಕೆಲಕಂ |
ಬಗಳ ಪಾಯ್ದೊಡೆಯಲ್ಕೆ ಶಿರವೆಮ |
ನಗರವನ್ನೇರಿದ ವಿರಾಗದಿ ಪೊಸತಿದೆನೆ ಜಗದೀ         ||೩೧೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ಮಡಿದಿರಲುಭಯರೂ ರವಿ | ಕತ್ತಲೆಯ ಹರಿಸಲ್ಕೆ ಧರಣಿ ಸು |
ರೋತ್ತಮರಿದರ್ಚನೆಗೆ ಸಮಯವೆ | ನುತ್ತ ಬರಲು       ||೩೨೦||

ಐದು ಮೊಗನರ್ಧಾಂಗಿ ಭವನದಿ | ಕೊಯ್ದು ತನುವನು ಪಾಯ್ದು ಕೋಪದಿ |
ಬೈದು ನುಡಿದರಿದಾರು ನೀಚರು | ಗೈದರಿಂತು           ||೩೨೧||

ನಿನ್ನೆ ಇವನಳಿಯಂಗೆ ನೃಪತಿಯು | ಕನ್ನೆ ಸಹಿತಿತ್ತಿಹನು ಪದವಿಯ |
ತನ್ನ ಸುತನೊಡನೇಕಿವನು ಮೃತಿ | ಯನ್ನು ತಳೆದ     ||೩೨೨||

ಸೂಚಿಸುವೆನಿದನರಸಗೆಂದಾ | ಲೋಚನೆಯೊಳೈದಲ್ಕೆ ನವನೃಪ |
ಚಾಚಿರಲು ಶಿರವಡಿಗೆ ಕೇಳೈ | ಪೇಚನೆಂದ    ||೩೨೩||

ಭೂತನಾಥೆಯ ಗೃಹದಿ ಸಚಿವನು | ಘಾತನಾದನು ಸುತಸಹಿತಲೆನೆ ||
ಭೀತನಾಗುತ ಪೊರಟನಾ ನೃಪ | ವ್ರಾತ ಸಹಿತ         ||೩೨೪||

ರಾಗ ಸಾಂಗತ್ಯ ರೂಪಕತಾಳ
ಇಂದುಹಾಸನು ಸರ್ವ | ಬಂಧು ಜನರ ಕೂಡಿ | ಬಂದು ಕಾಳಿಕೆಯ ಸಮ್ಮುಖಕೆ ||
ನಿಂದತಿದುಗುಡದೊ | ಳೆಂದ ತನ್ನಯ ಭಾಗ್ಯ | ನಂದಿ ಹೋದುದೆ ದೈವವಶದಿ      ||೩೨೫||

ಕಡು ಶೋಕತಾಳ್‌ವರ್ಗೆ | ನುಡಿದ ಚಿಂತಿಸದಿರಿ | ದೃಢಭಕ್ತಿ ಧ್ಯಾನಕ್ಕೀಯಭವೆ ||
ಕೊಡುವಳೀರ್ವರ ಜೀವ | ಎಡರಾಗಲಿದಕೆ ಶ್ರೀ | ಒಡೆಯನ ಸಾಲೋಕ್ಯ ಪಡೆವೆ     ||೩೨೬||

ಗೆಲುವಿನೊಳ್ ಕುಂಡದಿ | ಜ್ವಲನ ಸ್ಥಾಪನೆಗೈದು | ಬಲಿದೀಪ ಮುಂತಾಗಿ ರಚಿಸಿ ||
ತಿಲಕುಶ ಆಜ್ಯಾದಿ | ಗಳಲಿ ಹೋಮವಗಯ್ಯೆ | ಕುಳಿತನು ವಿಪ್ರರ ಬಳಸಿ  ||೩೨೭||

ವಾರ್ಧಕ
ಹೇಳಲೇನೈ ಭೂಪ ಚಂದ್ರಹಾಸಂ ಬಳಿಕ |
ಬಾಳಿಂದೆ ನಿಜದೇಹ ಮಾಂಸವಂ ಕೊಯ್‌ಕೊಯ್ದು |
ಬೀಳೆ ಪೂರ್ಣಾಹುತಿಗೆ ಶಿರವನರಿದಪೆನೆಂದು ಖಡ್ಗಮಂ ಗೋಣ್ಗೆ ಪೂಡಿ ||
ವೇಳೆಗಳೆಯದೆ ಸಮರ್ಪಣೆ ಗೈವೆಶಿರಮಿದಂ |
ಕಾಳಿ ನೀ ಲಕ್ಷ್ಮೀ ಒಪ್ಪಿಕೊಯೆಂದು ಕೂರಸಿಯ |
ಮೇಲಕೆತ್ತಲ್ ಚಂಡಿ ಶಾಂತ ರೂಪಂದೋರುತಾನಾಗಳಿಂತೆಂದಳು        ||೩೨೮||

ರಾಗ ಮಧ್ಯಮಾವತಿ ಅಷ್ಟತಾಳ
(ಆರೋ ಬಂದವರೊ ಎಂಬಂತೆ)

ಧೀರ ಕಡಿಯದಿರೊ | ಖಂಡವನೀಗ | ಧೀರ ಕಡಿಯದಿರೊ      ||ಪ||

ಧೀರ ನಿನ್ನಯ ಭಾವಭಕ್ತಿಗೆ | ಸೂರೆ ಹೋಗುತ ಸಾರಿ ಬಂದೆನು |
ಪೋರಪ್ರಾಯದಿ ತೀರಿಪೋಪಡೆ | ಕೂರಸಿಯನೀನೇರಿಸಿರ್ಪೆಯ ||ಅ.ಪ||

ವಾರಿಜಾಸನ ಭಕ್ತ ನೀನು | ಬಿಡು | ಕೂರಸಿಯನು ಪೇಳ್ವೆ ನಾನು ||
ಪಾರಮಾರ್ಥಕಿಯಾತ್ಮ ವಧೆಯಲಿ | ಘೋರಕಿಲ್ಬಿಷವಿಹುದು ಸುಮ್ಮನೆ |
ಕ್ರೂರಕಾರ್ಯವ ಗಯ್ಯುವೆಯ ಸುಕು | ಮಾರ ಯೋಚಿಸಿ ನೋಡು ಮನದಲಿ         ||೩೨೯||

ನೀತಿಬಾಹಿರ ದುಷ್ಟಾಧಮನು | ತಾಳ್ದ | ಜಾತಸಹಿತ ಮರಣವನು ||
ಭೂತಳಕೆ ಬಹುಭಾರವೀಯುವ | ಪಾತಕರೊಳತಿ ನೀಚನಾಗಿಹ |
ಯಾತಕಿವಗಳುತಿರ್ಪೆ ಸುಮ್ಮನೆ | ಖ್ಯಾತಬೇಡ್ವರವೆರಡನೀವೆನು            ||೩೩೦||

ರಾಗ ಖಮಾಚ್ ಆದಿತಾಳ (ಶ್ರೀ ಸದಾಶಿವ | ಸಾಸಿರ ನಾಮ ಎಂಬಂತೆ)
ಶ್ರೀ ಮಹೇಶ್ವರಿ | ಕಾಮರಿಪುಸತಿ | ತಾಮರಸನಯನೆ   || ಪಲ್ಲವಿ ||

ಸೋಮವದನೆಸುರ | ಸ್ತೋಮಪಾಲಕಿ ಗುಣ |
ಧಾಮೆ ದೈತ್ಯಾಂತಕಿ | ಭೀಮಪರಾಕ್ರಮೆ || ಶ್ರೀಮಹೇಶ್ವರಿ  || ಅನು ಪಲ್ಲವಿ ||

ಹೋಮದಾ | ಸಮಯದಿ ನೀ ಪೇಳಿದ | ಸಾಮದಾ | ನುಡಿಗೊಪ್ಪದಿರುವುದ |
ಕ್ಷಾಮದಾ | ಹರೆಸಾರ್ವದ ನಿನ್ನಯ | ನಾಮದಾ | ಆ ಮೋದಾ ||
ಈ ಮನುಜನಿಗೀಯೇ | ದಯದಲಿ | ಸಾಮಜಾಸ್ಯತಾಯೇ | ಭಜಕರ |
ಕಾಮಿತಾರ್ಥವನು | ಪ್ರೇಮದಿಂದ ಕೊಡು |
ವಾ ಮಹಿಮೆ ಪೊರೆ | ಕ್ಷಾಮವಿದೂರೆ | ಶ್ರೀಮಹೇಶ್ವರಿ   ||೩೩೧||

ದಾತರ | ನಾ ಕಾಣೆನು ಸಪ್ತ | ಮಾತರ | ನೀ ಕಾಯುವೆ ಭಕ್ತ
ನಾಥರ | ಮದ್ಭಾವದೊಳಿರ್ಪು | ದೀತೆರ | ಈ ತಾರಾ ||
ನಾಥದಿನಪರಿವರ | ಕಡೆವರೆ | ಗೇತರ ಜನುಮ ಬರಲದರೊಳು |
ನಾ ತಳಮಳಿಸದೆ | ದೈತ್ಯರಿಪುವ ಚರ |
ಣಾತಿಶಯದಿ ಮನ | ವಾತಿರಲೆನುತಲಿ | ಶ್ರೀಮಹೇಶ್ವರಿ           ||೩೩೨||

ದೇವಿಯೇ | ಭವವಾರಿಧಿ ಲಂಘಿಪ | ನಾವೆಯೇ | ನಿಟಿಲಾಕ್ಷಮಿಹಿರ ರಾ |
ಜೀವಿಯೇ | ತದ್ಭಕ್ತ ಜನದಿ ಸಮ | ಭಾವೆಯೇ | ಸೋವಿಯೇ ||
ಭಾವ ಮಾವರಿಂದು | ಮಡಿದಿಹ | ರಾವಕಾರಣೆಂದು | ತಿಳಿಯೆನು |
ಕಾವುದೀರ್ವರನು | ಜೀವವಿತ್ತು ಕರು |
ಣಾವಲೋಕನದೊ | ಳೀವುದು ವರವ || ಶ್ರೀಮಹೇಶ್ವರೀ ||       ||೩೩೩||

ವಾರ್ಧಕ
ನಗಜೆ ಕರುಣಿಸು ವರವನೆನೆ ದೇವಿ ಪೇಳಿದಳು |
ಮಗನೆ ತನಗಿಷ್ಟರವರಾ ಬಾಲ್ಯದಿಂದೆ ನೀ |
ನಗಧರಧ್ಯಾನ ಪರನಾಗಿರ್ಪೆ ನಿನ್ನ ಚರಿತವನೋದಿ ಕೇಳ್ವವರ್ಗೆ ||
ಮಿಗೆ ವರ್ಧಿಪುದು ಮುಕುಂದಾಭಿರತಿ ಮುಂದೆ ಕಲಿ |
ಯುಗದೊಳೆನ್ನಾಜ್ಞೆ ಯಿದು ಹರಿಭಕ್ತ ನಿನಗೆ ಬೆಳ |
ವಿಗೆಯಾಗದಿರ್ದಪುದೆ ನಿನ್ನ ವಾಂಛಿತಕಿನ್ನು ಕಡೆಯುಂಟೆ ಹೇಳೆಂದಳು     ||೩೩೪||

ಕಂದ
ಎಂದಕ್ಷಿಯ ಮುಚ್ಚಲು ಶಿವೆ
ಬಂದಿಹ ವೈಷ್ಣವ ಶಕ್ತಿಯನೀವುತಲವಗಂ |
ಮುಂದಕೆ ಜಯಿಸರಿಗಳ ನೀಂ |
ನೆಂದುಪದೇಶಿಸಿ ಮಂತ್ರವ ಮಣಿಯುತಲೊರೆದಂ       ||೩೩೫||

ರಾಗ ಸಾವೇರಿ ಏಕತಾಳ
(ನೀನೇ ದಯಾಳು ನಿರ್ಮಲಚಿತ್ತ ಎಂಬಂತೆ)

ತಾಯೆ ಪಾರ್ವತಿದೇವಿ | ಶ್ರೀಯೆ ಶಾರದೆ ಸರ್ವಾ |
ಚ್ಛಾಯೆ ವೈಷ್ಣವ ಮಹಂ | ಮಾಯೆಯೆ
ತೋಯಜಾಕ್ಷಿಯೆ ವರ | ವೀಯುತಲಹಿತ ನಿ |
ಕಾಯಕಂಜದವೋಲು | ಆಯುಧ ಪಿಡಿಸಿದೆ    ||೩೩೬||

ಆರಜೈಸೆ ವಿವೇಕ | ಕೂರಸಿಯನು ಕೊಂಡು |
ಘೋರದುರಿತದೊಳು | ಸೇರದೆ ||
ಮೂರು ದುಃಖದೊಳಾನು | ಪಾರುಗಾಣುವ ಯತ್ನ |
ದೋರಿ ಸಲಹೆಯನ್ನ || ವಾರಾಹಿ ದಯದೊಳು           ||೩೩೭||

ಮೋಕ್ಷದಾಯಕಿ ವಿರೂ | ಪಾಕ್ಷ ರಮಣಿ ಶಕ್ತೆ |
ಸಾಕ್ಷಾದ್ಭೂಮಾತೆ ಯುತ್ಪ | ಲಾಕ್ಷಿಯೆ |
ದಾಕ್ಷಾಯಣಿಯೆ ಖಲ | ಶಿಕ್ಷೆಯೆ ಕರುಣಕ |
ಟಾಕ್ಷದೊಳಗೆ ಯನ್ನ | ಪೇಕ್ಷೆಯ ಸಲಿಸಿದೆ      ||೩೩೮||

ರಾಗ ಕಾಂಭೋಜಿ ಝಂಪೆತಾಳ
ದೇವತತಿ ಭಾಪೆನಲು ದೇವದುಂದುಭಿ ಮೊಳಗೆ |
ದೇವದೇವನ ರಮಣಿ | ದೇವಿಯಡಗಿದಳು ||
ಜೀವಗಳೆದೊರಗೆ ಸಂಜೀವನದೊಳೇಳ್ವತೆರ |
ಜೀವಿಸಿದರವರು ರಾಜೀವಮುಖಿ ದಯದೆ                  ||೩೩೯||

ಕಳೆದು ಮೂರ್ಛೆಯನೇಳೆ ತಿಳಿದು ಚಂದಿರಹಾಸ |
ಭಳಿರೆಂದಪ್ಪಿದನು ಮಾತುಳ ಮೈದುನರನು ||
ತಲೆಬಾಗಿ ಸಚಿವ ತನ್ನಳಿಯನೋಳ್ ಪೇಳ್ದನೆಲೆ |
ಉಳಿಸಿದೈ ನೀನೇ ಪಿತನಲೆಯೆಂದ ತನಗೆ                 ||೩೪೦||

ಮಾಧವನ ಪದಭಕ್ತನಾದ ನಿನಗಾನು ಅಪ |
ರಾಧವನು ಗೈದಿಹೆನು ಭೇದವೆಣಿಸುತಲಿ ||
ಆದುದರಿಂದೆಮಗೆ ಸೂದನತೆ ಇನ್ನುಸುತ |
ರಾದನಮ್ಮನು ಕ್ಷಮಿಸು ನೀ ದಯದಿ ಬಿಡದೆ               ||೩೪೧||

ಭಾಮಿನಿ
ಭೂವಲಯದೊಳು ಗತಿಸಿದವರಿಗೆ |
ಜೀವ ಬರಿಸಿದರುಂಟೆ ನಿನಗೆಣೆ |
ಯಾವನಿರ್ಪನು ಯನಲು ನುಡಿದನು ಮಾವಗೊಂದಿಸುತ ||
ಕಾವನಾವನು ಕೊಲುವನಾವನು |
ಭಾವಿಸಲ್ಕದು ವಿಷ್ಣುಮಾಯವು |
ನೀವು ಪೊಗಳುವಿರ‍್ಯಾಕೆಯೆನ್ನನು ಭಜಿಸಿ ದೇವಿಯನು  ||೩೪೨||

ರಾಗ ಕೇದಾರಗೌಳ ಅಷ್ಟತಾಳ
ಪೇಳಿದೀಪರಿ ಮಾತ | ಕೇಳಿ ಮನದಿ ಮಂತ್ರಿ | ತಾಳಿರೆ ತೋಷವನೂ
ಕಾಳಿಗೊಂದಿಸಿ ಬಂಧು | ಜಾಲದೊಡನೆ ರಾಜ | ನಾಲಯವನು ಸೇರ್ದನು            ||೩೪೩||

ಬಂಧನ ಹರಿಸಿ ಕು | ಳಿಂದನ ಕರೆತಂದು | ಮುಂದೆ ಶ್ರೀದೇವಪೊರೆ
ಇಂದಿರೆಯರಸಗೋ | ವಿಂದನೆಯೆನುತವ | ಸುಂಧರೆಯಾಳುತಿರೇ          ||೩೪೪||

ಪಿರಿಯಾಕೆಯಿಂದ ಕುವರ ಮಕರಧ್ವಜ | ಕಿರಿಯ ರಾಣಿಯೊಳೊಗೆದ ||
ತರಳ ಪದ್ಮಾಕ್ಷನೆಂಬರು ಶೂರರೀರ್ವರೋಳ್  ಹರುಷದಿಂದಿರುತಿರ್ದನೂ ||೩೪೫||

ವಾರ್ಧಕ
ಬುದ್ಧಿಪೂರ್ವಕಮಿಲ್ಲದಿಹ ಬಾಲಕಂಗೆ ಪರಿ |
ಶುದ್ಧ ಸಾಲಿಗ್ರಾಮ ಶಿಲೆಯ ಸಂಸರ್ಗದಿಂ |
ದದ್ಭುತದ ಸಾಮ್ರಾಜ್ಯ ಪದವಿ ಕೈಸೇರ್ದುದೆನಲಿನ್ನು ಬೇಕೆಂದು ಬಯಸೀ ||
ಶ್ರದ್ಧೆಯೋಳ್ ಪ್ರತಿದಿನದೊಳರ್ಚಿಸುವ ನರನಾವ |
ಸಿದ್ಧಿಯಂ ಪಡೆದಪನೊ ತನಗದರ ಪುಣ್ಯದಭಿ |
ವೃದ್ಧಿಯಂ ಬಣ್ಣಿಸುವಡರಿದೆಂದು ನರಗೊರೆದ ನಾರದಂ ಭೂಪ ಕೇಳು      ||೩೪೬||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಭಾರತದ ಜೈಮಿನಿಯು ಪೇಳಿಹ | ಸಾರಮೆನಿಪಿದನೆಕ್ಷಗಾನದಿ |
ಪೂರಗೈದೆ ವಿನಾಯಕನುಮತಿ | ದೋರಿದಂತೆ                       ||೩೪೭||

ಮಾಲೆಕೊಡಲೊಳು ಶಂಭು ನಾಮವ | ತಾಳಿ ಸುತನಾಗಿರ್ಪೆ ಗಣಪಗೆ |
ಪಾಲಿಪುದು ತಪ್ಪಿರಲು ಸುಜ್ಞರು | ಲೀಲೆಯಿಂದ                       ||೩೪೮||

ಇಂದು ಸುತವಾಸರ ತ್ರಯೋದಶಿ | ದುಂದುಭಿಯ ವೈಶಾಖ ಬಹುಳದಿ |
ಚಂದದಿಂ ಪೂರ್ಣತೆಯಗೊಳಿಸಿದ | ಮಂದರಧರ                    ||೩೪೯||

ರಾಗ ಭೈರವಿ ಚಾಪುತಾಳ
ಜಯಮಂಗಲಂ ನಿತ್ಯ ಶುಭಮಂಗಲಂ     || ಪಲ್ಲವಿ ||

ನಿಗಮವನು ತಂದವಗೆ ನಗಧರಿಸಿ ನಿಂದವಗೆ |
ಜಗವನೆತ್ತಿದಗೆ ನರ | ಮೃಗಮಾದಹರಿಗೆ ||
ಮಗುವಾಗಿ ಬೇಡಿದಗೆ | ಭೃಗುರಾಮನಾದವಗೆ |
ಮಗಳನ್ಮೊದನ ತರಿದ | ಖಗಕುಲಾಧಿಪಗೇ ||
ಜಯಮಂಗಲಂ ನಿತ್ಯ ಶುಭಮಂಗಲಂ ||       ||೩೫೦||

ಬಿಲ್ಲ ಹಬ್ಬದೊಳಂದು | ಖುಲ್ಲ ಕಂಸನ ಕೊಂದು |
ಗೊಲ್ಲರನು ಕಾದ ಸಿರಿ ನಲ್ಲಕೃಷ್ಣನಿಗೇ ||
ಮೆಲ್ಲನಂಬರ ತೂರೆ | ನಲ್ಲೆಯರ ಬಳಿ ಸಾರಿ |
ಅಲ್ಲಿ ಬತ್ತಲೆಯತೋರ್ದಗೆ ಕಲ್ಕ್ಯಗೇ ||
ಜಯಮಂಗಲಂ ನಿತ್ಯ ಶುಭಮಂಗಲಂ          ||೩೫೧||

ಸಡಗರದಿ ಬಹುಲೀಲೆ | ನಡೆಸಿರುವನಿಗೆ ಮಾಲೆ |
ಕೊಡಲ ನಾರಾಯಣಗೆ | ಜಡಜನಾಭನಿಗೆ ||
ಕಡಲಬಾಲೆಯಧವಗೆ | ಬಡವರನು ಕಾವವಗೆ |
ಮೃಡಸಖಗೆ ತ್ರೈಲೋಕ್ಯ | ದೊಡೆಯ ಮಂಗಲನಿಗೆ ||
ಜಯಮಂಗಲಂ ನಿತ್ಯ ಶುಭಮಂಗಲಂ          ||೩೫೨||

ಯಕ್ಷಗಾನ ವಿಷಯೆ ಕಲ್ಯಾಣ ಮುಗಿಯಿತು.