ರಾಗ ಮುಖಾರಿ ಏಕತಾಳ
ಸುದತಿ ಮೇಧಾವಿನಿ | ಮೃದು ಮಧುಭಾಷಿಣಿ | ವಿಧುಮುಖಿ ನೋಡಿತ್ತ ||
ಸದಮಲ ಶ್ರೀಹರಿ | ಪದಸೇವಕನನ್ನು | ಪದುಮಾಂಬಕನಿತ್ತ                   ||೧೨೧||

ಹರಿಣಮೃಗವ ತರಿ | ದೊರಸಲು ತೆರಳುತ | ತರಳನಿರವ ಕಂಡು ||
ಪರಸುತಲೆಮಗಿವ | ತರಳನೆಂದೆನುತಲಿ | ಮರಳಿದೆ ಮುದಗೊಂಡು       ||೧೨೨||

ಇನಿಯನೆ ಲಾಲಿಸು | ಚಿನುಮಯ ನೆಮ್ಮಯ | ಘನಚಿಂತೆಯ ನೋಡಿ ||
ತನಯನ ಇತ್ತಿಹ | ಕನಕಾಭರಣಕೆ | ಮನವನೀಗ ಮಾಡಿ                      ||೧೨೩||

ನಿನ್ನಯ ಸುಕೃತವ | ಬಣ್ಣಿಸಲಸದಳ | ಪನ್ನಗನಿಭವೇಣಿ ||
ಚಿಣ್ಣನ ತನುವಿನ | ಬಣ್ಣಕೆಸರಿಸಮ | ಪೆನ್ನಿಪುದೇ ಮಿಸುನಿ                      ||೧೨೪||

ಭಾಮಿನಿ
ವನಜಮುಖಿ ತೋಷದೊಳು ಒಣಗಿದ |
ಕೊಣದಿ ಜಲಮಾದಂತೆ ಕತ್ತಲೆ |
ಮನೆಗೆ ಮಣಿದೀಪಾದ ತೆರದಿಂ ದಾನವಾಂತಕನು ||
ಮನವೊಲಿದು ದಯಗೈದನಿಂದಿಗೆ |
ಮುಣುಗಿದುದು ಮಮಬಂಜೆತನ ಕುವ |
ರನಿಗೆ ಕನಕಾಭರಣ ರಚಿಸೆಂದರಸಗರುಹಿದಳು                       ||೧೨೫||

ರಾಗ ಕಾಂಭೋಜಿ ಝಂಪೆತಾಳ
ಮಡದಿಯಳ ನುಡಿಗೊಪ್ಪಿ | ಎಡಬಲದೊಳಿಹ ತನ್ನ |
ಪಡೆಗೂಡಿಸಡಗರದಿ | ನಡೆತರುತಪುರಕೇ ||
ಹೊಡಿಸುತಲಿ ಡಂಗುರವ | ನಿಡಿಸಿ ತೋರಣ ಹೊರಗೆ |
ನುಡಿಸಿ ಕಾಳೆಯಕರಸಿ | ಪೊಡವಿ ವಿಬುಧರನೂ                      ||೧೨೬||

ಕನಕಪೀಠವನಿಡುತ | ಮಣಿದು ಕುಳ್ಳಿರಿಸುತಲೀ |
ಮನದ ತೋಷದೊಳೊರೆದ | ಘನಮಹಿಮರೊಡನೇ ||
ವನಕೆ ಪೋದೆನುಜವದಿ | ಹನನಗೈಯಲು ಮೃಗವ |
ಜನುಮದ್ರುಮ ಫಲವಾಯ್ತು | ತರಳನಿವದೊರಕೀ                   ||೧೨೭||

ತೊಲಗಿತೆನ್ನಯ ವ್ಯಸನ | ಚೆಲುವನಾಮವನಿವಗೆ
ಒಲಿದಿರಿಸಿರೈ ವಿಪ್ರ |  ರಲಗಿಸುತ ಬೆರಳಾ ||
ತಿಳಿದೆವೈ ಗಣಿತದೊಳು | ಜಲಜರಿಪುವನು ನೋಡಿ |
ಕಳಕಳಿಸಿ ನಗುತೀರ್ಪ | ಸಲುವುದದೆ ಪೆಸರು             ||೧೨೮||

ಚಂದ್ರಹಾಸನು ಎನುತ |  ನೀಂ ಧೃಡದಿ ಕರೆಯೂರ್ವಿ
ಗಿಂದ್ರನಾಗುವ ಹರಿಗೆ | ತಾಂ ಧ್ರುವನ ತೆರದೀ ||
ಚಂದ್ರರವಿಗಳ ಕೀರ್ತಿ |  ಮಂದಗೈಯ್ಯುತ ಮೆರೆಯು
ವಂ ದುಷ್ಟಕರಿನೃಪ ಮೃ | ಗೇಂದ್ರನಿವನೆನಿಸೀ             ||೧೨೯||

ಭಾಮಿನಿ
ಲಕ್ಷಣದೊಳೆಸೆಯುವ ಕುಮಾರನಿ
ಗಕ್ಷರವಬರೆದೋದಿಸಲು ಹರಿ |
ಪಕ್ಷಿವಾಹನ ಎನುತಿರಲ್ಕವ ರೋಷದೊಳ್ ಗುರುವೂ ||
ಅಕ್ಷಿದೆರದ್ವಾಚಿಸೆನೆ ತರಳನು |
ಲಕ್ಷಿಸದೆ ಶ್ರೀಪತಿಯ ಧ್ಯಾನಿಸೆ |
ತಕ್ಷಣದಿ ನಡೆತಂದವನ ತಾತಂಗೆ ವಿವರಿಸಿದ             ||೧೩೦||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಚಿತ್ತವಿಸು ಶಬರೇಶ ಶ್ರೀಗಣ | ವೆತ್ತಿ ಸೂಚಿಸಿ ಇಡದೆ ತಾ ಮನ |
ಚಿತ್ತಜನ ಪಿತನೆಂದು ವಾಚಿಪ | ನಿತ್ಯಬಾಲಾ              ||೧೩೧||

ಎಂದಮಾತನು ಕೇಳಿ ನುಡಿದ ಕು | ಳಿಂದತಾ ಹರಿಭಕ್ತನಿವನದ |
ರಿಂದ ಶಿಕ್ಷೆಯು ಸಲದು ಶ್ರೀಗೋ | ವಿಂದ ಕಾವಾ                     ||೧೩೨||

ಎನುತಲುಪನಯನಾದಿ ಕಾರ್ಯವ | ತನಯನಿಗೆ ರಚಿಸಲ್ಕೆ ಹರಿದಿನ |
ವನು ಬಹಳ ಭಕ್ತಿಯಲಿಗೈವುತ | ದಿನವನೂಕೆ             ||೧೩೩||

ಕೆಲವು ಕಾಲಾಂತರದಿ ತರಳಗೆ | ಕಳೆಯೆ ಷೋಡಶ ವರುಷವಂದಿನ |
ಬಿಲು ಶರವ ಹಿಡಿದಾಗ ತಾತನ | ಬಳಿಯ ಸಾರ್ದ                   ||೧೩೪||

ರಾಗ ಸುರಟಿ ಏಕತಾಳ
ಧರಣಿಪ ಹರುಷದೊಳೂ | ಸಭೆಯನು | ನೆರಹಿರೆ ವಿಭವದೊಳು ||
ತರಳನು ಭರದೊಳು | ಎರಗುತಲರಸಗೆ ||
ಪೊರಟನು ಪರನೃಪ | ರರಿಯಲು ಧುರದೊಳು                       ||೧೩೫||

ಕೂಡುತ ಸೈನ್ಯಗಳ | ರಿಪುಗಳ | ನಾಡಿನ ವಸ್ತುಗಳ ||
ಪೂಡಿಸಿ ರಥದೊಳು | ಗಾಢದಿ ಮರಳುತ |
ನೋಡುತ ಜನಕನ | ಜೋಡಿಸಿ ಕರಗಳ                    ||೧೩೬||

ತನಯನ ಸಾಹಸಕೆ | ಪೇಳಿದ | ಇನಿತಿದೆಯನ್ನೆಣಿಕೆ ||
ಜನಪತಿತನವನು | ನಿನಗನುಕರಿಸುವೆ |
ನೆನತಲಿ ಬುಧರನು | ವಿನಯದಿ ಕರಸುತ                  ||೧೩೭||

ಬಳಗವ ಕೂಡುತಲಿ | ಶುಭಮಂ | ಗಲ ಸುಮುಹೂರ್ತದಲಿ ||
ನೆಲನಾಧಿಪತ್ಯವ | ವಲವಿನೊಳೀಯಲು |
ಕುಲದೀಪನುಗೆಲ | ವಿಲಿ ನಲಿದಿರ್ದನು                       ||೧೩೮||

ರಾಗ ಸಾಂಗತ್ಯ ರೂಪಕತಾಳ
ಕುಶಲದಿ ಜನಪತಿತ್ವವ ತಾಳಿ ಶಶಿಹಾಸ | ವಸುಧೆಯ ಸಲಹುತ್ತಲಿರಲು |
ದಶಮಿ ಇಂದೆನುತುತ್ಸಾಹದೊಳಿರ್ದು ನಿಶೆಯೊಳು | ಅಶನವ ತೊರೆದು ಭಕ್ತಿಯೊಳು           ||೧೩೯||

ಉದಯಿಸೆ ಖದ್ಯೋತ ಹೊರದೆಗೆಯುತ ವೃತ್ತ | ಸದಮಲ ಸಾಲಿಗ್ರಾಮವನು ||
ಮುದದೊಳಗಭಿಷೇಕ ಗಂಧಾಕ್ಷತೆಗಳಿಂದ | ವಿಧವಿಧ ಪೂ ದುರ್ವಾರ್ಚನೆಯ         ||೧೪೦||

ಎಸಗಿ ನೈವೇದ್ಯ ಮಂಗಳ ನೀರಾಜನ ಮಂತ್ರ | ಕುಸುಮವನರ್ಪಿಸಿ ಬಳಿಕ ||
ಅಸಮಗುಣಾಢ್ಯನು ಎರಗಿ ತೀರ್ಥವಗೊಂಡು | ನಿಶಿಯೊಳು ಗೈದು ಜಾಗರವ        ||೧೪೧||

ಮರುದಿನ ದ್ವಾದಶಿಯೊಳು ಪಾರಣೆಯಗೈದು | ಪುರಜನರ್ಗೂಡಿ ಭುಂಜಿಸುತಾ ||
ನೆರವೇರಿಸುವದೇಕಾದಶಿ ವ್ರತ ನಮ್ಮಯ | ನೆರೆಜನರೆಂದು ನೇಮಿಸಿದ    ||೧೪೨||

ರಾಗ ಶಂಕರಾಭರಣ ತ್ರಿವುಡೆತಾಳ
ಈತೆರದೊಳಿರುತಿರೆ ಕುಳಿಂದಕ | ಜಾತನೊಡನರುಹಿದನು ಮಗನೇ |
ಖ್ಯಾತ ಕುಂತಳನೃಪ ನೀ ನಗರಕೆ | ನಾಥನೆನಿಸಿ                     ||೧೪೩||

ಪಾಲಿಸುತ್ತಿರಲೆನಗೆ ರಾಜ್ಯವ | ಶೀಲತಾ ಕರುಣಿಸಿದನದರಿಂ |
ಕಾಲಕಾಲಕು ಸಲುವುದೈಕರ | ಬಾಲ ಕೇಳು               ||೧೪೪||

ಜರೆಯಡಸಲಾಮಾತ್ಯನಿಗೆಪುರ | ದೊರೆತನವನಿತ್ತಿಹನು ಕಪ್ಪವ |
ತೆರುವುದಾತಗೆ ಗಾಲವಗೆ ನೃಪ | ನರಸಿಗೆಂದ                        ||೧೪೫||

ವಾರ್ಧಕ
ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ |
ಪತಿಗೆ ಮಹಿಷಿಗೆ ಮಂತ್ರಿದುಷ್ಟಬುದ್ಧಿಗೆ ಪುರೋ |
ಹಿತಗಾಲವಂಗೆ ಸಲಿಸುವರೆ ಧನವನದ ಸಂಗಡಕೆ ತಾನಾಹವದೊಳು ||
ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನಂ |
ಕಿತದಿಂದೆ ಕಟ್ಟಿ ಶಕಟೋಷ್ಟ್ರಕರಿವಾಜಿಗಳ್ |
ಶತಸಂಖ್ಯೆಯಿಂದ ಕಳುಹಿದನಾಪ್ತರಂ ಕೂಡಿ ಕೊಟ್ಟು ಕುಂತಳನಗರಿಗೆ     ||೧೪೬||

ಕಂದ
ತಟನಿಯೊಳು ಸ್ನಾನಗೈದಾ |
ನಿಟಿಲಾಂಬಕ ಸಖನಂ ಧ್ಯಾನಿಸುತವರಾಗಳ್ |
ಉಡುಪತಿಹಾಸನ ನೇಮದಿ |
ದೃಢಭಕ್ತಿಯನಿಟ್ಟಾ ನಿಶಿಯೊಳ್ ಸೇರಿದರರಮನೆಯಂ              ||೧೪೭||

ರಾಗ ಭೈರವಿ ಅಷ್ಟತಾಳ
ಮಿಹಿರನುದಿಸೆ ಸಭೆಗೈವುತ್ತಾ | ರಾತ್ರಿ | ಯಹಿವರ್ಜಿತನಾದೆನೆನ್ನುತ್ತಾ ||
ಬಹುತೋಷಗೊಳೆ ದ್ವಾರಪಾಲನೂ | ಬೇಡು | ತ್ತಿಹರು ಅಪ್ಪಣೆಯೀರ್ವರೆಂದನೂ    ||೧೪೮||

ಕೊಡಲು ಆಜ್ಞೆಯ ಚಾರ ಮರಳುತ್ತಾ | ದ್ವಾರ | ಬಿಡಲಾಗ ಸಭೆಯನ್ನು ಸೇರುತ್ತಾ ||
ಕೆಡಹಿ ಮಂಡೆಯ ಮಂತ್ರಿಪಾದದಿ | ಗಂಟ | ನಿಡುತ ಪೇಳ್ದರು ಬಹು ಮೋದದಿ       ||೧೪೯||

ದೊರೆಕುಳಿಂದಜನೀ ಪಟ್ಟವ | ನಾಳು | ತ್ತಿರಲು ಇತ್ತಿಹನು ವಿಶಿಷ್ಟವ ||
ಕರ ಮಿಕ್ಕದನರಾಣಿ ಗಾಲವ | ರಿಂಗೆ ತೆರುತಗೊಂಬುದು ಸಮಭಾಗವ     ||೧೫೦||

ವಾರ್ಧಕ
ಏನಿದೆತ್ತಣಕೌತುಕದ ನುಡಿ ಕುಳಿಂದಂಗೆ |
ಸೂನುಜನಿಸಿರ್ದಪನೆ ಬಂಜೆಯಾಗಿಹಳವನ |
ಮಾನಿನಿ ವಿಚಿತ್ರಮೆನಲಾಚರರ್ ಜೀಯ ಪುಸಿಯಲ್ಲವಂ ಬೇಟೆಗೈಯ್ಯೆ |
ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ |
ಧಾನಮಿರೆ ಕಂಡೆತ್ತಿಕೊಂಡು ಬಂದಾತ್ಮಜ ವಿ |
ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು      ||೧೫೧||

ಭಾಮಿನಿ
ಕೇಳಿ ವಿಸ್ಮಿತನಾಗಿ ಸಚಿವನು |
ಪಾಳಡವಿಯಲಿ ಕೊಲ್ಲೆ ಪಸುಳೆಯ |
ಹೇಳಿದರೆ ಚಾಂಡಾಲರೀಪರಿ ಗೈದರೇಯೆನುತ |
ತಾಳಿ ದ್ವೇಷವ ಚಿತ್ತದೊಳು ಕರು |
ಣಾಳುಗಳ ತೆರನಂತೆ ಮನ್ನಿಸಿ |
ಏಳಿ ಭೋಜನಕೆನಲು ಒಲ್ಲೆವೆನಲ್ಕೆ ರೋಷದೊಳು                   ||೧೫೨||

ರಾಗ ಭೈರವಿ ಏಕತಾಳ
ತುಚ್ಛವೆ ನಮ್ಮಯ ವರ್ಣ | ನಿಮ್ಮ | ಹುಚ್ಚ ಬಿಡಿಸುವೆನು ಪೂರ್ಣ |
ಹೆಚ್ಚಿದಿರೈ ಗರ್ವದಲೀ | ತಲೆ | ಗೊಚ್ಚುವೆನೈ ಖಡ್ಗದಲೀ                        ||೧೫೩||

ಭಂಗಿಪೆನೈ ಜಪಸರವ | ಬೆಳ | ತಿಂಗಳು ಹೋಲುವ ಗೊಳವ |
ಅಂಗದ ಬೂದಿಯನೊರೆಸಿ | ತು | ರಂಗದೊಳಿಕ್ಕುವೆಯಳಸಿ                  ||೧೫೪||

ಮೂಢ ಕುಳಿಂದಕ ಬಂದು | ದಯ | ಮಾಡೆಂದೊರೆಯಲಿಕಂದು |
ನೋಡುವೆನಯ್ಯ ಕಡೆಗೆ | ಎಂ | ದಾಡಲ್ ಚಾರರು ನಡುಗೆ                   ||೧೫೫||

ರಾಗ ಕಲ್ಯಾಣಿ ಅಷ್ಟತಾಳ (ಇವಳ್ಯಾವ ಲೋಕದ ಸತಿಯೋ ಎಂಬಂತೆ)
ಕರವ ಜೋಡಿಸಿ ನಿಂತರೆಲ್ಲಾ | ಪೇಳ್ದ | ರಿರಿಸದೆ ಖತಿಯ ಲಾಲಿಪುದೆಮ್ಮ ಸೊಲ್ಲ ||
ಹರಿದಿನವಾದ ಕಾರಣದೀ | ಊಟ | ತೊರೆದೆವಲ್ಲದೆ ಬೇರೆ ಇಲ್ಲೆಮ್ಮ ಮನದೀ         ||೧೫೬||

ಮೃಷ್ಟಾನ್ನ ಭುಜಿಸಲೀ ದಿನದೀ | ವ್ರತ | ಭ್ರಷ್ಟರೆಂದೆನುತ ನೂಕುವರು ನರಕದೀ |
ಕಷ್ಟಕಂಜುವೆವು ನಾಳೆಯೊಳು | ನಿನ್ನ | ಇಷ್ಟವ ಸಲಿಸಿ ಪೋಗುವೆವು ಪ್ರೀತಿಯೊಳು ||೧೫೭||

ಎನಲೊಪ್ಪಿ ಮಂತ್ರಿ ಮನ್ನಿಸುತ | ಮರು | ದಿನದಿ ಭೋಜನಗೈಸಿ ಮರಳಿಸಲಿತ್ತ |
ಕಿನಿಸಿನಿಂ ಚಂದನಾವತಿಗೆ | ಪೋಗ | ಲನುಗೆಯ್ಯೆ ಜಾತೆ ವಿಷಯೆ ಬಂದು ಎರಗೆ    ||೧೫೮||

ರಾಗ ಜಂಜೂಟಿ ಅಷ್ಟತಾಳ
ತಂದೆ ಕೇಳೆನ್ನ ಬಿನ್ನಪವ | ನೀನು | ನಂದನದೊಳ್ ಪೊಯ್ದು ಜಲವ |
ಚಂದದಿ ಪೊಗೆದ ಚೂತದ ಲತೆ ಪೂತುದು |
ಮುಂದಿನ್ಯೋಚನೆ ಎಸಗದೇತಕೆ | ನಿಂದಿರುವೆಯೈ ತಿಳಿದಿರ್ಪೆಯ                       ||೧೫೯||

ಕೋಗಿಲೆ ಸ್ವರ ಕೀರ ನುಡಿಯ | ಕೇಳು | ತ್ತಾಗಳರಿತು ಜಾತೆ ಬಗೆಯ ||
ತಾಗಿದನಂಗನ ಶರವ ಮರ್ದಿಪಡೆ ಸ |
ರಾಗದಿಂ ಪರಿಣಯವನೆಸಗುವೆ | ನೀಗಿ ಕಳೆ ವಿರಹವನು ತೋಷದಿ         ||೧೬೦||

ವ್ಯಥಿಸದಿರಹುದು ಶೀಘ್ರದೊಳು | ಎಂದು |
ಸುತೆಯ ಮನ್ನಿಸುತ ಬಾಲನೊಳು | ಚತುರೆಯಿಂದಿರ್ಪುವೆಂದಾಗೆ ಚಂದನಾ |
ವತಿಯ ಸೇರಲು ತಿಳಿದು ವ್ಯಾಧರ | ಪತಿಗೆ ಚರನೈತಂದು ನುಡಿದನು     ||೧೬೧||

ವಾರ್ಧಕ
ರಿಪುಮಥನ ಕೇಳ್ ಕುಳಿಂದಂ ಬಹಳ ವೈಭವದೊ |
ಳುಪಚರಿಸಿ ತನ್ನ ನಂದನ ಚಂದ್ರಹಾಸನಂ |
ವಿಪುಲಪರಿತೋಷದಿಂದೊಡೆಯರಿಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ ||
ವಿಪಿನದೊಳ್‌ತನಗೀ ಕುಮಾರಕಂ ಮುಂಗೈದ |
ತಪದ ಫಲದಿಂ ತಾನೆ ದೊರೆಗೊಂಡನೀತನಂ |
ಕೃಪೆಯಿಂದ ನೀವೆ ಪಾಲಿಸಪೇಳ್ವುದೆಂದು ನಿಜಪತಿಗೆ ಕೈವರ್ತಿಸಿದನು     ||೧೬೨||

ರಾಗ ಭೈರವಿ ಝಂಪೆತಾಳ
ಮಧುರೋಕ್ತಿಯಂ ಬಹಳ | ಮುದಗೊಂಡ ತೆರನಂತೆ |
ವಿಧುಹಾಸನನು ನೋಡೆ | ಹೃದಯಾಗ್ನಿಯುದಿಸೀ |
ಅಧಮ ಚಾಂಡಾಲರವ | ರೊದಗಿಸಿದರೀ ತಾಪ |
ನಿಧನಗೆಯ್ಯಲೆಂತು | ಬುಧರೆಂದ ನುಡಿಯ                 ||೧೬೩||

ಧರಣಿಸುರರೆಂದ ನುಡಿ | ಗೆರಡುಹುದೆ ಬಾಲನಿವ |
ಮೆರೆಯುವನು ಸುತನಿಂಗೆ | ಅರಿಯೆನಿಸಿ ಜಗದಿ |
ಬರಿಯ ಬೆದರಿಕೆಗೆ ಹಿಂ | ಜರಿಯುವನೆ ಬಲಯುತನು |
ಗರಳವನು ಊಡಿ ಯಮಪುರಕೆ ಕಳುಹುವೆನು                        ||೧೬೪||

ಮಾಡುತೀಪರಿ ಕೃತಕವಾಡಿದ ಕುಳಿಂದಕಗೆ |
ಮೂಡಿತುತ್ಸಹ ಇವನ ನೋಡಿ ಮನದೊಳಗೆ |
ಜೋಡಿರದು ಇವಗೆಂದು | ಗಾಢದೊಳಗವನ ಮು |
ದ್ದಾಡಿಯರುಹಿದನಿತ್ತು | ಗೂಢಲಿಖಿತವನು                  ||೧೬೫||

ರಾಗ ಶಂಕರಾಭರಣ ಅಷ್ಟತಾಳ
ಕೇಳಯ್ಯಾ | ಪೇಳ್ವೆ | ಕೇಳಯ್ಯಾ   || ಪಲ್ಲವಿ ||

ಕೇಳಯ್ಯಾ ಪೇಳ್ವೆ ಚಂದಿರಹಾಸ ಪರಿಯ |
ಪೇಳದನ್ಯರಿಗೆ ನೀ ಗೈವುದೀಕೃತಿಯ | ಕೇಳಯ್ಯಾ ||  || ಅನು ಪಲ್ಲವಿ ||

ಗುಟ್ಟಾಗಿ ಕೊಡುವೆ ಲಿಖಿತಮಿದ ಪಿಡಿದು
ಥಟ್ಟನೆ ಪೊರಟು ಕುಂತಳಕೆ ಪೋಗುವುದು ||
ಪಟ್ಟಿದೊಳಿಹ ಮದನನ ಮಾತ್ರ ಕರೆದು |
ಕೊಟ್ಟು ಬಾ ನಿನಗೆ ಮುಂದಕೆ ತೋಷವಹುದು                        ||೧೬೬||

ದೊರೆಯುವುದಯ್ಯಾ ಮಂಗಲವು ಸರ್ವರಿಗೆ |
ಚರರ ನಾಲ್ವರ ಕೂಡಿ ತೆರಳೆಮ್ಮ ಪುರಿಗೆ |
ಬರಿದೆ ಕಾಲವ ಕಳೆಯುವುದೇನು ಹೀಗೆ |
ತುರಗವನಡರಿ ಬಿಜಯಗಯ್ಯೋ ಬೇಗೆ                      ||೧೬೭||

ಎನಲಾಜ್ಞೆಗೊಪ್ಪಿ ಮಂತ್ರಿಗೆ ಪೊಡಮಡುತ |
ಜನಕನಿಗೆರಗಿ ನೇಮಗೊಂಡು ಮತ್ತಾ ||
ಜನನಿಗೊಂದಿಸಿ ನೇಮವೀಯುವದೆನುತ |
ವಿನಯದೋಳ್ ಬೇಡ ಬಾಲಗೆ ಪೇಳ್ದಳಿನಿತ               ||೧೬೮||

ವಾರ್ಧಕ
ಲೇಸು ಕಂದನೆ ಪೋಪುದೈ ಸಂತತಂ ನಿನ್ನ |
ವಾಸುದೇವಂ ಕಾಯಲನುಕೂಲೆಯಾಗಿಹ ವ |
ಧೂಸಮನ್ವಿತನಾಗಿ ರಾಜ್ಯಮಂ ಪಡೆಯೆಂದು ಪರಸಿ ಬೀಳ್ಕೊಡುತಲಂದು ||
ಸೇಸೆ ತಳಿದಾರತಿಯನೆತ್ತಿ ತಿಲಕವ ತಿದ್ದ |
ಲಾಸಮಯದೋಳ್ ನಾಲ್ವರನುಚರರ್ಗೂಡಿ ಶಶಿ |
ಹಾಸಮಾರ್ಗದಿ ಬರುತ ಕಂಡನೈ ಶುಭಶಕುನ ನೂತನ ವಧೂವರರನು  ||೧೬೯||

ರಾಗ ಸೌರಾಷ್ಟ್ರ ತ್ರಿವುಡೆತಾಳ
ತರುಣಿಯರು ಪೂಸರವನೀಯಲು | ಧರಿಸಿ ಕಂಠದಿ ತೆರಳಿ ಮುಂದಕೆ |
ಧರಣಿಸುರರೀರ್ವರಿಗೆ ಮಣಿಯುತ | ಹರುಷ ತಾಳ್ದು                 ||೧೭೦||

ಶಕುನ ಶುಭಮಾಗಿಹುದು ಮುಂದಕೆ | ಸಕಲ ಸಿದ್ಧಿಯಹುದಹುದು ಎನುತಾ |
ವಿಕಸಿತಾಂಬುಜವದನ ಪರಿಚಾ | ರಕರ ಕೂಡಿ                        ||೧೭೧||

ಮುಂಬರಿದು ಬರುತಿಲು ಕುಂತಳ | ವೆಂಬ ನಗರೋದ್ಯಾನವನವಿದಿ |
ರ್ಗೊಂಬ ತೆರನಿರುತಿರಲು ನೋಡಿದ | ನಂಬರವನು                ||೧೭೨||

ತರಣಿ ನಡುನಭಕೇರಲೀಪರಿ | ಚರರ ನಿಲಿಸುತ ಹರಿಯ ಬೇಹಿಗೆ
ತೆರಳಿದನು ಉಪವನದೊಳರಸುತ | ಸರಸಿಯಿರವ                 ||೧೭೩||

ಭಾಮಿನಿ
ನೋಡಿ ವಿಸ್ಮಿತನಾಗಿ ಉಪವನ |
ರೂಢಿಯೊಳು ಮಿಗಿಲೆನಿಪುದಮಮಾ
ವೋಡದಿಹ ಮಂದಾನಿಲನು ತಾ ನೋಡುವರೆ ಸೊಬಗ |
ಪಾಡಹನೆ ತಾನೆನುತ ಮುಂದಕೆ |
ಮಾಡಿ ಮನನಾಲ್ದೆಸೆಯ ತರುವಿನೊ |
ಳಾಡುತಿಹ ಕಲಕೀರವಾಣಿಯ ಕೇಳಿ ಸಂತಸದಿ                       ||೧೭೪||

ರಾಗ ಕಾಂಭೋಜಿ ತಾಳ
(ಏನನುಸುರಲಿ ಮಾನಿನಿಯಚಲು | ವಾನನದ ಪರಿಗೆ ಎಂಬಂತೆ)

ಭಾರಿ ಸಂಭ್ರಮ | ದೋರುವುಪವನ | ನಾರಿಯಳ ಬಗೆಗೆ || ಬಣ್ಣಿಸಿ |
ತೀರ ನಭದಾ | ಕಾರದುಡಿಗೆಯ | ಬೀರಿಹಳು ಧರೆಗೆ |  ಯೆನುತಾ
ತಾರೆಯೊಲ್ ಸುಮ | ಭೂರಿಯುದುರುತ | ಧಾರುಣಿಯ ಬೆಳೆಗೆ | ಪ್ರತಿನಭ |
ದೋರೆನೆಂದೆಲೆ | ಯೇರಿಸಿಹಳು ಮ | ಹೀರುಹಗಳ್ ಹೆಗೆಗೆ || ಬಳಿಕಾ ||
ಬೇರೆ ಸುಮಗಳ  | ನಾರಿ ಧರಿಸಲು | ನೀರೆ ಪುಷ್ಟಿಣಿ | ದೂರಿರೆನುತಾ ||
ಸೂರಿಯನಕರ | ಸಾರಲೊಂದೆಸೆ | ಆರಡಿಯು ತಾ | ಸೇರಿತಿಲ್ಲಿಗೆ           ||೧೭೫||

ಸಾಧುಮೃಗಗಳು | ವ್ಯಾಧರಟ್ಟುಳಿ | ಬಾಧೆಗಳುಕುತಲೀ | ಮಾತೆಯ |
ಆದರಣೆಯೊಳು | ಮೋದಗೊಳಲನು | ವಾದವೆನ್ನುತಲೀ | ಪಕ್ವಸು |
ಸ್ವಾದು ಫಲಗಳು | ಪೋದವೆನುತಲಿ | ಪಾದಪಂಗಳಲೀ | ಖಗಗಳು
ರೋದಿಸಲು ಶುಕ | ವಾದಿಪುದವಿರ | ಳಾದ ಶಬ್ದದಲೀ ಕೋಗಿಲೆ ||
ಯೂದುತಿಹ ಶೃತಿ | ನಾದಕಿವಿ ಗಾ | ಲ್ಹಾದಮೀಯುವ | ಧೀದರೆಗೆ ಸಿರಿ |
ಪಾದವನತಾ | ನಾದಳಿಗೆ ಧೊರೆ | ಯಾದವನು ಸುಕೃ | ತೋದಯನಲೈ ||೧೭೬||

ಕುಂದಚಂಪಕ | ಮಂದರದಸುವ | ಗಂಧಜನರುಗಳಾ | ಧರೆಯೊಳಾ |
ನಂದಗೊಳಿಸುವ | ದೆಂದು ಅರುವಿಗೆ | ತಂದ ರೋಷದೊಳಾ | ಭೋಗಿಯ |
ವೃಂದಕುಣಿಯುವ | ವೆಂದುಯೆಣಿಸುತ | ಕುಂದಿ ಮುಡಿವಾಳಾ | ಶೀತಳ |
ಚಂದನವುಕಿರಿ | ಗಂಧಸಹಿತ್ವಲ | ನಿಂದ ಬೇರುಗಳ | ಬೆಳೆಸುತ ||
ಗಂಧವಾಹನ | ತಿಂದುಸುಖಿಪರಾ | ನಂದಗೊಳಿಸುವ | ದೆಂದು ಮನವನು |
ತಂದಿಹವುನಿಜ | ವೆಂದು ತಿಳಿಯುತ | ಲಂದುಗಮಿಸಿದ | ಮುಂದೆ ವನದೊಳು       ||೧೭೭||