ಭಾಮಿನಿ
ಸುಮನಸಾಧಿಪನಾಳ್ವವನವದು |
ಸಮವಹುದೆ ನಂದನವಿದಕೆ ನಾ |
ನಮಿತತೋಷವ ತಳೆದೆನೆಂದರಸಿದನು ವಾರಿಯನು ||
ಕಮಲಹಂಸಾದಿಗಳ ಸಂಗದೊ |
ಳಮಲವಾಗಿರುತಿರ್ಪ ಸರಸಿಯ |
ಹಿಮಕರಾಸನು ನೋಡಿ ವಿವರಿಸುತಿರ್ದ ಮನದಿರವ ||೧೭೮||
ರಾಗ ಯಮುನಾ ಕಲ್ಯಾಣಿ ಅಷ್ಟತಾಳ
(ಅಮಮಾಯೇನ್ ಬೆಡಗುಗಾರ್ತಿಯೊ ಕನ್ಯೆ ಎಂಬಂತೆ)
ಅಹಹಾ ಯೇನ್ ಸೊಗಸುದೋರುವುದಿಲ್ಲಿ | ನೇತ್ರ |
ಸಹ ಹರುಷವ ತಾಳ್ವ ತೆರದಲ್ಲಿ || ಪಲ್ಲವಿ ||
ವಾರಿ ಕನ್ನಡಿಯಂತೆ ಹೊಳಪಿಂದ | ಕಣ್ಗೆ |
ತೋರಿ ರಾಜಿಪುದೆಂತು ಬಲು ಚಂದ ||
ನೀರಾನೆ ಶಕುಲಿದರ್ಧುರದಿಂದ | ತಾನು
ಭೂರಿನಿರ್ಮಲವಾದುದೊಲವಿಂದ ||೧೭೯||
ನಳಿನ ಪ್ರಫುಲ್ಲಮಾಗಿರೆ ನೋಡಿ | ಕೋಕ |
ಜಲದೊಳೆ ಹಂಸಗಳ್ ಪಡೆಗೂಡಿ ||
ಸುಳಿದಾಡುತ್ತಿರೆ ಸ್ವೇದವನು ಬಿಟ್ಟು | ಕರ |
ದಳಿಯಮನ್ನಿಪುದೇಕೆ ಮಧುಗೊಟ್ಟು || ||೧೮೦||
ಕಡುಚೋದ್ಯವರರೆ ಮಂಟಪದಂತೆ | ಸುಮ |
ವಿಡಿದರ್ದಗಿಡವು ತೋರುತ ಮುಂತೆ ||
ದಡವ ಶೃಂಗರಿಸಿರ್ಪುದೆನುತಾಗ | ತನ್ನ |
ತೊಡಿಗೆಯ ಕಳಚಿ ಮಿಂದನು ಬೇಗ ||೧೮೧||
ವಾರ್ಧಕ
ರಾಜೀವಮಾದಿಯಾದಲರ್ಗಳಂ ತಂದುಹರಿ |
ಪೂಜೆಯಂ ಮಾಡಿ ತಾತಂದ ಪಾಥೇಯಮಂ |
ಭೋಜನಂಗೈದು ವಿಶ್ರಮಕಾಗಿ ತಳಿತ ಮಾಮರದ ನೆಳಲಂ ಸಾರ್ದನು ||
ಆ ಜಾಗದೊಳ್ ತಳಿರಪಾಸಿ ಮಲಗಿರಲೊಯ್ಯ |
ನೇ ಜಾಗರವತೊರೆದು ನಿದ್ರಾಂಗನೆಯ ಸೇರೆ |
ಸೋಜಿಗವಿದೆಂಬಂತೆ ಹಂಸತಲ್ಪವದಾಯ್ತು ರಾಜೋಪವನ ತರಳಗೆ ||೧೮೨||
ಭಾಮಿನಿ
ಕುಂತಿಸುತ ಪೌತ್ರಜನೆ ಕೇಳೆಲೊ |
ಇಂತು ಮಲಗಿರುತ್ತಿರ್ಪ ಸಮಯದಿ |
ಕುಂತಳೇಂದ್ರನಜಾತೆ ಚಂಪಕಮಾಲಿನಿಗೆ ಸಖಿಯು |
ಸಂತತಂ ಮಂತ್ರಿಸುತೆಯಾಗಿರ |
ಲಂತರಿಸದಿವರೀರ್ವರಲ್ಲಿ ವ |
ಸಂತಕಾಲದಿ ವಾರಿ ಕೇಳಿಗೆ ಸಖಿಸಹಿತ ಪೊರಡೆ ||೧೮೩||
ರಾಗ ಬೇಗಡೆ ತ್ರಿವುಡೆತಾಳ
(ಸತಿಶಿರೋಮಣಿ ಪ್ರಭಾವತಿ ಎಂಬಂತೆ)
ಜಲಕೇಳಿಗೆನುತ ಬಂದರು ಕೋಮಲೆಯರು |
ಕಲಹಂಸನಡೆಯಿಂದ ಉರಗವೇಣಿಯರು |
ಕುಲಿಶಾಭ ರದನೆಯರ್ ಜಲಜಗಂಧಿಯರು |
ಅಳಿಕುಂತಳೆಯರು ಕಾಯಜನ ರನ್ನೆಯರು ||
ತಳಿರಡಿಯ ಕೆಂದುಟಿಯ ಬೆಳಗಾಯ್ |
ಮೊಲೆಯ ನೈದಿಲೆಗಣ್ಣವರ ಕೋ |
ಗಿಲೆಯಸ್ವರ ಶುಕನುಡಿಯ ನವಿಲ್ ನಡೆ |
ಕಲಭಮದಯಾನೆಯರು ಜೊತೆಯೊಳು ||
ಸಲಿಲದೆಡೆಗೆಬಂದರೆಲ್ಲರು | ಜಲಕೇಳಿಗೆಂದು |
ಸಲಿಲದೆಡೆಗೆ ಬಂದರೆಲ್ಲರು ||೧೮೪||
ರಾಗ ಪುನ್ನಾಗ ಅಷ್ಟತಾಳ
(ಕೇಳೋ ದಾನವಕುಲಮೌಳಿಮಾನಿತನೆ ಎಂಬಂತೆ)
ತರಳೆಯರೊಡಗೂಡಿ | ಬರುತಿರೆ ವನದಿ ||
ಸರಸಿಯೊಂದನು ನೋಡಿ | ಪಿರಿದೂ ಸಂತಸದಿ ||೧೮೫||
ನಳಿನನೇತ್ರೆಯರೆಲ್ಲ | ಕೊಳದೊಳಗಿಳಿದು |
ತೊಳಕಿಜಲವನಾಗ | ಸೊಗಸಿನೊಳ್ ನಲಿದೂ ||೧೮೬||
ಮದಗಜ ವ್ರಜದಂತೆ | ಕದಡುತ್ತ ಮುದದಿ |
ಮದನ ಸುಂದರಿಯ | ರಾಡಿದರಿಂತು ನದದಿ ||೧೮೭||
ರಾಗ ಘಂಟಾರವ ಆದಿತಾಳ (ಲಲನೆ ಕೇಳೆಲೆ ನಿನ್ನ ಎಂಬಂತೆ)
ಹರಿಣನೇತ್ರೆಯರೆಲ್ಲಾ | ಪರಿಪರಿ ಕ್ರೀಡಿಸಿ |
ಸರಸಿದಂಡೆಯ ಸಾರಿ | ವರಿಸಿಯಂಗವನು ||೧೮೮||
ಧರಿಸಿ ನೂತನ ವಸ್ತ್ರ | ನಿರಿವಿಡಿದುಟ್ಟಾಗ |
ಕುರುಳ ತಿದ್ದುತ ಫಣೆ | ಗಿರಿಸಿ ಕುಂಕುಮವ ||೧೮೯||
ಮುದದಿ ಚಿನ್ನವ ತೊಟ್ಟು | ಮಧುವ ಜಿಹ್ವೆಯೊಳಿಟ್ಟು |
ವಿಧುಮುಖಿಯರು ವಟ್ಟು | ವದಗಿನೊಳ್ ಪೊರಟು ||೧೯೦||
ವಿಧವಿಧ ಸುಮಗಳ | ಚದುರೆಯರ್ ಸೂಡುತ್ತ |
ಪದುಮಾಕ್ಷಿಯರು ನಂದ | ನದಿ ಪೋದರ್ ನಗುತ ||೧೯೧||
ಬಳಿಕೋರ್ವರೋರ್ವರು | ನಲವಿಂದ ಪಾಡುತ್ತ |
ಅಲರುಗಳ್ ಮುರಿಯುತ್ತ | ಚರಿಸೆಯಗಲುತ್ತ ||೧೯೨||
ಲಲಿತಚಂಪಕನಾಸೆ | ಖಲಮಂತ್ರಿಜಾತೆಯು |
ನೆಳಲೊಳಿರ್ಪನ ನೋಡಿ | ಗೆಲುವಿಂದ ಪ್ರಹುಡಿ ||೧೯೩||
ವಾರ್ಧಕ
ತೋಳತಲೆದಿಂಬಿಗನ ತಳಿರ್ರ್ಹಸೆಯ ಮೇಲೆ ತಂ |
ಗಾಳಿಗೊಡ್ಡಿದ ಮಯ್ಯ ಸೊಗಸಿಂದೆ ಮರದು ನಿ |
ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರೆಗಾಗುತೆ |
ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದಡಂ |
ಲೋಲಲೋಚನೆಗೆ ಪಾಸಟಿಯಹರೆ ತನ್ನವರು |
ಸೋಲದವರ್ಯಾರೆಂಬ ತೆರನಿರ್ಪನಾರಿ | ಮ್ಮರಿಯೆನೈ ತಿಳಿವೆನೆಂದು ||೧೯೪||
ರಾಗ ಬೇಗಡೆ ಏಕತಾಳ
(ಯೇನಿದೂ ನಿಮ್ಮಲ್ಲಿ ಸಂವಾದ ಎಂಬಂತೆ)
ಚಿತ್ತಜನುತಾ ಕತ್ತಿಯನು ಧರಿಸಿ | ಸುತ್ತಿರುಗಿ ಮೂರು ಜ |
ಗತ್ತು ಯವ್ವನ ಪೊತ್ತವನ ಬೆರಸಿ ||
ಕತ್ತರಿಸಿ ದಣಿಯುತ್ತ ಗಮನಿಸಿದನಿತ್ತ ಖರೆಯದೆ ಯತ್ತಿಗೊಲಿದಡ |
ರುತ್ತಿಹನ ಶಿರ ಕುತ್ತಿಯಲಗೆ ತುತ್ತೆನೆಸಿ ಕಲೆಯೆತ್ತಿಹನೆ ಪುಸಿ ||೧೯೫||
ಅಂತರಿಕ್ಷದಿ ಸಂತತವು ನಡೆದು | ತಾ ಭೂರಿಶ್ರಮವ |
ನಾಂತು ಭೂಮಿಗೆ ಸಂತಸದೊಳಿಳಿದು ||
ಇಂತು ಮಲಗಿಹನೆಂತೆನಲು ಸರಿ | ಯಂತಹದು ಹಿಮನೆಂತ ನುಡಿವರು |
ಅಂತಿರಲಿ ಮೃಗದಂತೆಸವ ಕಲೆ | ಯಂತೊರೆಯಮಲೆ ಭ್ರಾಂತಿಗೊಳಿಪುದು ||೧೯೬||
ಸುರರೊಳಾವನೊ ಗರುಡಗುಹ್ಯಕನೊ | ಅಲ್ಲದಡೆ ಮತ್ತಾ
ಸುರಪಜಾತನೊ ವರ ದಿವಾಕರನೊ ||
ಮರುಳು ನಾನಹೆ ಧರಣಿಗೇತಕೆ | ಬರುವರೋರ್ವರೆ ಸುರರು ಸೂರಿಯ
ಚರಿಪನಭ್ರದಿ ಸ್ಮರನ ಹರನುದ್ಧರಿಸಿದನೊ ಚಂದಿರನೊ ಈತನು ||೧೯೭||
ಕಂದ
ಪರರಂ ಪೀಡಿಪ ಕ್ರೂರರ್ |
ಮರಣವ ಪಡೆಯರು ಸರ್ವಥಾ ನಿಶ್ಚಯ ಜಗದೊಳ್ ||
ಒರೆಯದ ಸೋಜಿಗಮನ್ನಾರ್ |
ಅರುಹುವರೆನ್ನುತೆ ವಾರಣನಡೆ ಬಿಸುಸುಯ್ದಳ್ ||೧೯೮||
ರಾಗ ಹಿಂದೂಸ್ಥಾನಿ ಕಾಪಿ ರೂಪಕತಾಳ
(ಸರಿಯಾದೀ ತರುಣಿಮಣಿಗೆ ಎಂಬಂತೆ)
ಹರನ ಫಣೆಯ ಕಿರಣದೆಡೆಯೊ | ಳಿರುತಹರಣ ಪೊರೆದರಿಹರೆ |
ಕರಿಸಿನಿಟಿಲದುರಿಯೊಳ್ ಜೀವ | ತೊರೆದು ಮರಳಿ ಬರುವದಿಹುದೇ ||೧೯೯||
ಸರ್ಪನಧರ ಪೊಕ್ಕು ತಿರುಗಿ | ಬರ್ಪರಿಹರೆ ನೋಡೆಯನಿಲ |
ದರ್ಪಕಂ ಚಂದ್ರಮರುಬದುಕಿ | ತೋರ್ಪರಮಮ ಚೋದ್ಯ ಜಗದೀ ||೨೦೦||
ಕೊಲುತ ಹರನು ಮೆಲುತಪಾವು | ಸಲಹಿಕೋಮಲೆಯರ ಕೊಲೆಯ |
ಗೊಳಿಸೆ ಕರುಣದಿಂದ ಶಿವನ | ತಲೆಯ ತೊರೆದನಾಗ ವಿಧುವು ||೨೦೧||
ರಾಗ ಸಾರಂಗ ಅಷ್ಟತಾಳ
(ಕೇಳಿತ್ತಾ ಧರಣೀಪಾಲ ಎಂಬಂತೆ)
ಒರೆಯಲೆಂತೀ ಹದನ | ರೂಪವ ನೋಡಿ | ಮರುಳಾದೆನೈ ಇವನ ||
ಸರಿಹೋಲಿಸಿದೆ ಸ್ಮರಶರ ಚಂದ್ರ ಪವನಂಗೆ
ನರನಲ್ಲದಿರನೀತ | ಪರಮ ಸುಂದರ ಖ್ಯಾತ ||೨೦೨||
ಜಲಜಾಸ್ತ್ರ ಕಾರ್ಮುಕದಿ | ಮಾರ್ಗಂವಿಟ್ಟ | ಬಲಹೀನೆಯಂ ಧುರದಿ ||
ಕೊಲದಂತೆಯನ್ನ ಬೆಂಬಲಕಾಗಿ ಚಲುವನ
ಜಲರುಹೋದ್ಭವ ಗೈದು | ಕಳುಹಿದ ಕರುಣದಿ ||೨೦೩||
ಪೂಗೋಲನುರು ಬಾಧೆಗೆ | ಬೆಚ್ಚುತಲಂದು | ಪೋಗಲಾತನ ಬಳಿಗೆ ||
ಆಗ ನಾಚುತ ಹಿಂದಕ್ಕಾಗಿ ಬರುವಳೊಮ್ಮೆ
ಹೇಗೆ ತಾಳುವೆನೆಂದು | ಬೇಗ ಸಾರುವಳೊಮ್ಮೆ ||೨೦೪||
ನೆರೆಯಲೆತ್ನವೆನೆಂದು | ಎಣಿಸಿ ಕಾಲ | ಸರಿಯಲ್ಲವೆನುತ ನೊಂದು ||
ಸೆರಗಿನೋಳ್ ತಾತನು | ಬರೆದ ಲೇಖನ ನೋಡಿ |
ಪರಿಕಿಸುತವಳಾಗ | ಬೆರಗಾಗಿ ವಾಚಿಸಿ ||೨೦೫||
ವಾರ್ಧಕ
ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು |
ಪ್ರೇಮದಿಂ ತನ್ನ ಸುತ ಮದನಂಗೆ ಮಿಗೆ ಪರಸಿ |
ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ ||
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ |
ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ |
ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು ||೨೦೬||
ಭಾಮಿನಿ
ಹೊತ್ತುಗಳೆಯದೆ ಖಳನಿವನ ಕುಲ |
ವಿತ್ತ ವಿದ್ಯಾವಯಸು ನೀ ನೋ |
ಡುತ್ತಿರದೆ ಕೊಡು ವಿಷವ ಮೋಹಿಸುವಂತೆ ಬಾಲಕಗೆ ||
ಉತ್ತರರೋತ್ತರವಹುದೆನುತಲಿರೆ |
ಮತ್ತಕಾಶಿನಿ ಲಿಪಿಯ ನೋಡುತ |
ಚಿತ್ತದಲಿ ಬೇರೊಂದ ನೆನೆದಳು ವಿಧಿ ವಶದಿ ತರಳೆ ||೨೦೭||
ರಾಗ ಮುಖಾರಿ ಆದಿತಾಳ
(ಸುರನದೀಜಾತ ಲಾಲಿಸಯ್ಯ ಎಂಬಂತೆ)
ಅರರೇ ತಪ್ಪಿಹುದೊಂದಕ್ಷರದೀ | ಕರ ರಾಪಿನ ಭರದೀ |
ಅರರೇ ತಪ್ಪಿಹುದೊಂದಕ್ಷರದೀ || ಪಲ್ಲವಿ ||
ಸುರನರೋರಗರಿಂಥ ಸೊಬಗ | ಧರಿಸಿರ್ಪರೆ ಭುಜಗಾ |
ಭರಣಾದ್ರಿಯಾದಿ ಸುಂದರ ಪೂಗ ||
ಸರಿ ಬರುವುದೆ ಸ್ಮರ | ಶರವದನೆಗೆ ಸುರ |
ತರುಣಿಯರೊಳು ಮನ | ವಿರಿಸಲಿವನು ಸುತೆ |
ಗ್ವರನಿರುವನೆ ಇವ | ನ್ಹೊರತೆನುತಲಿ ಪಿತ |
ಪರಿಪರಿ ಭ್ರಮಿಸುತ | ಬರೆದಿಹ ಪ್ರೇಮದಿ ||೨೦೮||
ವಿಷಯೆ ವರಿಪುದೆಂಬ ಭಾವ | ವಿಷವಾಗಿದೆ ದೋಷ |
ಎಸಗೆ ಗೈಯ್ಯುವೆ ಯತ್ನವಹವ್ವಾ ||
ವ್ಯಸನವಿದೇತಕೆ | ಉಸುರುವುದಾರಿಗೆ
ವಿಷಯವ ತಿದ್ದುತ | ಹೊಸತನ ಗೈಯ್ಯಲು |
ನಸುನಗೆಯಿಂದಿಹ | ಶಶಿಸಮರೂಪನು |
ವಶವೆನಗಾಗುವ ಪಶುಪತಿದಯದೀ || ||೨೦೯||
ಎಂದಾಗ ನಖದೊಳದರ ತಿದ್ದೀ | ಕಂಚುಕದ ತುದಿಗೆ |
ಬಂಧಿಸಿ ಹರುಷ ನಿಧಿಯೊಳದ್ದಿ |
ಸುಂದರ ತವ ಮುಖ | ಎಂದಿಗೆ ತೋರುವೆ
ಎಂದೆನುತಲಿ ಸುಮ | ಗಂಧಿನಿ ಸಖಿಯರ |
ವೃಂದವ ಸೇರುತ | ನಿಂದಿರೆಸುಮ್ಮನೆ |
ಚಂದಿರವದನೆಯ | ರೆಂದರು ಮುದದೀ ||೨೧೦||
ರಾಗ ಕಲ್ಯಾಣಿ ಏಕತಾಳ
(ಯಾತಕಿಂಥ ಬುದ್ಧಿ ಬಂತು ಎಂಬಂತೆ)
ಎತ್ತ ಪೋಗಿ ಬಂದೆ ಹೀಗೆ | ಮಿತ್ರೆ ಪೇಳೂ || ಕೋಮ |
ಲುತ್ತಮಾಸ್ಯ ಕಂದಿತ್ಯಾಕೆ | ಮಿತ್ರೆ ಪೇಳು ||೨೧೧||
ಯಾತಕಿಂತು ಮೌನ ಸುಗುಣೆ | ಮಿತ್ರೆ ಪೇಳೂ || ಮತ್ತಾ |
ವಾತ ಕಂಪ ಬೀರದಿರನೆ | ಮಿತ್ರೆ ಪೇಳು ||೨೧೨||
ತೋಷವಿಹುದು ಕ್ಲೇಶದಲ್ಲೇ | ಮಿತ್ರೆ ಪೇಳು || ನಿನ್ನಾ |
ವೇಷಬೇರಾಗಿಹುದು ಬಲ್ಲೆ | ಮಿತ್ರೆ ಪೇಳು ||೨೧೩||
ರಾಗ ಪಂಚಘಾತ ಮಟ್ಟೆತಾಳ
(ತಾತ ಫಲುಗುಣ ಎಂಬಂತೆ)
ಸಾಕು ನಿಮ್ಮಯ ಈ ಕುಚೇಷ್ಟೆಯು |
ಟೀಕೆಯಾದುದು ಯಾಕೆ ಪೇಳ್ವುದು ||೨೧೪||
ಶುಕ ಸುಭಾಷಿಣಿ ಸತಿ ಶಿರೋಮಣಿ |
ಅಕಲು ದೋರದೆ ಮುಖವು ಬಾಡಿದೆ ||೨೧೫||
ಖಗನ ತಾಪದಿ ಮೊಗವು ಬಾಡಿದೀ |
ಬಗೆಗೆ ಮಾತಿದು ಸೊಗಸು ದೋರದು ||೨೧೬||
ಲಘುವನೀವಳು ಅಘವಿನಾಶಳು |
ವಿಘಟದೋರಳು ಮಘವ ಪಾಲಳೂ ||೨೧೭||
ಕಂದ
ಈ ಚದುರೆಯು ನಿಜಭಾವವ |
ತಾ ಚದರುವಳೆನುತಾವ್ ದೂರೆ ಉದಯದೋಳ್ ||
ಮಾಜದೆ ನೀ ಸಲಹಿವಳಂ |
ಯೇ ಝಷಕೇತಾರಿಯ ಪ್ರೀತೆಯೆ ನಮಿಪೆವು ನಿನ್ನಂ ||೨೧೮||
ರಾಗ ಸಾಂಗತ್ಯ ರೂಪಕತಾಳ
ಸರಸಿಜಮುಖಿಯರು ನೆರೆದೆಲ್ಲರೊಂದಾಗಿ | ಸರಸವಾಡುತಲಿರಲಂದು ||
ಪರಿಕಿಸಿ ನಭಭ್ರಮರಾರಿ ಮಾಲಿನಿ ಪೇಳ್ದ | ಳರರೆ ವೇಳೆಯಾಯಿತೆಂದು ||೨೧೯||
ಮದಗಜಯಾನೆ ಮಂದಿರಕೈದಿ ಸಖಿಯರ | ಮುದದಿಂದ ಮನ್ನಿಸಿ ಕಳುಹೆ ||
ಸುದತಿ ಶಿಖಾಮಣಿ ವಿಷಯೆ ಮಂದಿರ ಸಾರೆ | ಮದನಾಸ್ತ್ರದಿಂದ ಸುಟ್ಟುರುಹೆ ||೨೨೦||
ಈ ಮಹಾತಾಪ ಸೈರಿಸಲಪಾಯವಿರದೇಳು | ಮಾಳಿಗೆಯನು ಸೇರುತಲಿ ||
ಕಾಮಸನ್ನಿಭರೂಪ ಬರುವ ಮಾರ್ಗವ ನೋಡಿ | ಕಾಮಿನಿಯಿರೆ ನಿರೀಕ್ಷೆಯಲಿ ||೨೨೧||
ಸರಸದೊಳ್ ಕಾಮಿನಿಯು ಪೇಳ್ದಳು ತಾಯೆ | ಪರಮಪಾವನೆ ಲೋಕಮಾತೆ |
ಕರಗಿಸಬೇಡಮ್ಮ ಸಖಿಯಭೀಷ್ಟವನೀಯೆ | ಎರಗಿ ವಂದಿಪೆ ಗಿರಿಜಾತೆ ||೨೨೨||
ಸಲಹಿದ ಗಿಳಿಯ ನೋಡಲು ಉಣ್ಣದಿರ್ಪಳು | ಒಲಿದು ಮಾತಾಡಳೆಮ್ಮೊಡನೆ ||
ಖಳ ಶಂಬರಾರಿ ಇಂತೆಸಗಿರ್ಪ ಶಿವೆ ನೀನು | ಮುಳಿಯಲು ದುಷ್ಟನು ಕೆಡನೆ ||೨೨೩||
ವಾರ್ಧಕ
ವಿಜಯ ಮೊಮ್ಮಜ ಕೇಳ್ವುದೈ ಚಂದ್ರಹಾಸನಂ |
ಬುಜಮಿತ್ರನಪರಾಹ್ನಕೈದಲ್ಕೆ ನಿದ್ರೆಯಂ |
ತ್ಯಜಿಸಿ ಮೊಗದೊಳೆದು ಮುಕ್ಕುಳಿಸಿ ಕರ್ಪುರ ವೀಳೆಯಂಗೊಂಡು ಬಳಿಕ ಬಿಗಿಸಿ ||
ನಿಜವಾಜಿಯಂ ಬಂದಡರ್ದನುಚರರ್ವೆರಸಿ |
ರುಜುವಾದ ಶಕುನಂಗಳಂ ಕಾಣುತೊಲಿದುಪೌ |
ರಜನಮಿವನಾರೆಂದು ಕೇಳುತಿರೆ ನಗರಮಂ ಪೊಕ್ಕು ನಡೆತರುತಿರ್ದನು ||೨೨೪||
ರಾಗ ಭೈರವಿ ಝಂಪೆತಾಳ
ಆ ಸಮಯದೊಳಗೆ ರಾಜಾಸನದಿ ಮದನನೆಂ |
ಬಾ ಸುಗುಣನೇರಿರಲು ವಾಸವನ ತೆರದಿ ||
ದಾಸಿಯರು ಚಾಮರವ ಬೀಸುತಿರೆ ಧಾರುಣಿಸು |
ವಾಸಿನಿಯರ್ ಗಾಯನದಿ ತೋಷಗೊಳಿಸಿದರು ||೨೨೫||
ಆ ಮದನ ಗೈದಿರುವ ನೇಮದೊಳು ಕೋಶಪತಿ |
ತಾ ಮುದದಿ ಮನ್ನಿಸಿದ ಕಾಮಿನಿಯರೊಲಿಯೆ |
ಭೂಮಿಸುರರೆಲ್ಲರನು ಹೇಮದಲಿ ಸತ್ಕರಿಸೆ |
ಸ್ವಾಮಿಯೆನುತೋರ್ವ ಚರನಾ ಮಹಿಮಗೊರೆದ ||೨೨೬||
ಜೀಯ ತವ ತಾತನ ವಿಧೇಯ ಹೊರಬಾಗಿಲೊಳು |
ಕಾಯುವನು ಅಪ್ಪಣೆಯನೀಯುವೆನು ಅವಗೆ ||
ತಾ ಯೆನಗೆ ಧನವಗಾಂ ಜೀಯ ಕೊಳೆಯೆನಲಾಗ |
ಪ್ರೀಯದೊಳು ಪೀಠವನು ತಾ ಇಳಿದು ನಡೆದ ||೨೨೭||
ರಾಗ ಕೇದಾರಗೌಳ ಅಷ್ಟತಾಳ
ತ್ವರಿತದಿ ನಡೆತಂದು ಹೊರಬಾಗಿಲೊಳಗಿರ್ಪ | ವರ ಚಂದ್ರಹಾಸನನು ||
ಕರವಿಡಿಯುತಲಿ ಸತ್ಕರಿಸಿ ತಾ ಕರೆದೊಯ್ದು | ಹರುಷದೊಳಿಂತೆಂದನು ||೨೨೮||
ನಿತ್ಯ ಸೌಖ್ಯವ ಪಡೆದಿರ್ಪರೆ ಪ್ರಜೆ ಜನ | ಸ್ತುತ್ಯ ಕುಳಿಂದಕನು ||
ಸತ್ಯ ಸುಗುಣ ಕಾಂತಾಮಣಿ ಸರ್ವರು | ಅತ್ಯಂತ ಕ್ಷೇಮಿಗಳೆ ||೨೨೯||
ಚರಣ ದರ್ಶನವಾವ ಪರಿಗಾದುದೆನುತಲಿ | ಅರಿಯೆನೆನಲ್ಕೀತನು ||
ಭರದಿ ಲೇಖನವಿತ್ತ ವೊರೆದೆಲ್ಲ ವಿವರಿಸಿ | ತೆರೆದು ವಾಚಿಸು ಎಂದನು ||೨೩೦||
ಎದ್ದಾಗ ಶಶಿಹಾಸನನು ಪ್ರೀತಿಯಿಂದಲಿ | ಗದ್ದುಗೆಯನು ಏರಿಸಿ ||
ಸದ್ದುಗಯ್ಯದೆ ಗೌಪ್ಯದೊಳುಕೋಣೆಯಂ ಸೇರಿ | ಮುದ್ರೆಯೊಡೆದು ವಾಚಿಸಿ ||೨೩೧||
ವಾರ್ಧಕ
ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ |
ದೀಸು ವಕ್ಕಣೆಗಳ್ ಮಹಾಹಿತಂ ತನಗೀತ
ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯವಿದು ||
ಮೋಸವೆ ಕುಲಾಚಾರ ಗತಿಯಾನಾರೈವಡೆ ವಿ |
ಲಾಸದಿಂ ವಿಷಯೆ ಮೋಹಿಸುವಂತೆ ಕೊಡುವೆನಿದ |
ಕೋಸರಿಸಲ್ಯಾಕೆ ತಂಗಿಗೆ ತಕ್ಕವರನೀತನೆಂದು ಮದನಂ ತಿಳಿದನು ||೨೩೨||
ರಾಗ ಮಾರವಿ ಏಕತಾಳ (ಬಡವರು ನಾದೈನೀವೇ ಎಂಬಂತೆ)
ಅನುಜೆಗಿವನು ಸಮ | ನೆನಿಸುವ ವರನಹ | ಮನುಮಥಪ್ರತಿರೂಪ ||
ಘನಮಹಿಮನು ಇವ | ನನು ಪೊಗಳಲಹುದೆ | ಅನುಜೆಯನೀಯುವೆನು ||೨೩೩||
ಪೊಡವಿ ಸುರರಕರೆ | ಸಡಿಗೆರಗುತಲವ | ನುಡಿದನು ಮೋದದೊಳು ||
ಕೊಡುವೆನಿವಗನುಜೆ | ಹುಡುಗರುಭಯರಿಗೆ | ಉಡುಬಲವಿಂದಿಹುದೆ ||೨೩೪||
ಭೂಸುರನಿಕರ ಉ | ಲ್ಲಾಸದಿ ನಲಿಯುತ | ರಾಶಿಕೂಟವ ನೋಡಿ ||
ಹೇಸುಗುಣನೆ ಶಶಿಹಾಸಗೆ ವಿಷಯಗೆ | ಲೇಸು ದಿನವೆ ಇಂದು ||೨೩೫||
ರಾಗ ಶಂಕರಾಭರಣ ತ್ರಿವುಡೆ ತಾಳ
ಮಂಗಲವು ದೋರುವುದೆನುತ ಮದ | ನಂಗರುಹೆ ತೋಷಿಸುತ ಪುರವನು |
ಶೃಂಗರಿಸಿ ತೋರಣದಿ ಹೊಡೆಸುತ | ಡಂಗುರವನು ||೨೩೬||
ಜನನಿ ತಾರಾಕ್ಷಿಯನು ಕರೆಸುತ | ಮಣಿದು ಪೇಳಿದನೀತಗನುಜೆಯ |
ಜನಪನಾಜ್ಞೆಯೋಳಿವೆ ತವಕ್ರಮ | ಕ್ಷಣದಿ ಗೈಸು ||೨೩೭||
ಕಂದನರುಹಿದ ನುಡಿಯ ಕೇಳ್ದವ | ಳಂದು ಸತಿಯರ ವೆರಸಿ ತಮ್ಮಯ |
ದಂದುಗದೊಳಿರಲಾಗ ವಿಷಯೆಗೆ | ಯಂದಳ್ ಸಖಿಯು ||೨೩೮||
ಇಂದುವದನೆಯೆ ನಿನ್ನ ಬಯಕೆಯ | ಇಂದು ಮದನನು ತೀರಿಪನು ವರ |
ಇಂದುಹಾಸನುರೂಪಿನೊಳಗವ | ಇಂದಿರೆಯಜ ||೨೩೯||
Leave A Comment