ಭಾಮಿನಿ
ಕುರುಕುಲಾನ್ವಯ ದೀಪ ಲಾಲಿಸು |
ತರುಣಿಯರ ಲಾಲನೆಯೊಳಾ ಹಿಮ |
ಕರನವೋಲ್ ದಿನದಿನಕೆ ಹೆಚ್ಚಿದನಧಿಕತೇಜದಲೀ ||
ಪುರವಳಯದೊಳಗಿರ್ಪ ಬಾಲರ |
ನೆರವಿಯನು ಕೂಡಾಡಿ ಮನೆ ಮನೆ |
ತಿರಿದು ಜೀವಿಸುತಿರ್ದವಿಧಿಯನು ಮೀರ್ಪರಾರೆಂದಾ                ||೭೦||

ರಾಗ ಕಾಪಿ ಅಷ್ಟತಾಳ
ದ್ವಾರದಿ ದೇಸಿಗನಾಗಿ | ನಿಂತ | ಪೋರನ ಪಾಲಿಸಿ ಭಾಗಿ |
ಕೋರುವೆನೆನಗೆ ಕಜ್ಜಾಯ ಸಕ್ಕರೆಗೊಟ್ಟು |
ಭೋರನೆ ಕಳುಹಿರಿ | ಯಾರಿಲ್ಲದಬಲನ                     ||೭೧||

ಚಿಣ್ಣನ ನುಡಿಗೆ ಬಾಲೆಯರು | ಮೋಹ | ವನ್ನು ತಾಳುತ ಮರುಗುವರು |
ಬನ್ನಬಡವಗನ್ನವಿತ್ತು ತಮ್ಮಯ ಸುತ |
ರನ್ನು ಜೊತೆಯಗೈದು | ಮನ್ನಿಸೆ ತರಳನ                 ||೭೨||

ಆಡುವ ತರುಣನ ನೋಡಿ | ತಾನು | ಜೋಡಿಗೆ ಬಹೆವೆಂದು ಬೇಡಿ ||
ಕೂಡಿ ಬಾಲರೊಳಾಡಿ ಮನೆಗೈದಿ ತೋಷದಿ |
ಲಾಡುಲಡ್ಡಿಗೆಯಿಂ ಮು | ದ್ದಾಡಿ ಭೋಜನಗೊಂಡು                  ||೭೩||

ಜೊತೆಯ ಬಾಲರನೆಲ್ಲ ಕರೆದು | ಮಂದ | ಗತಿಯೊಳು ಬರುತಿರೆ ನಲಿದು ||
ಪಥದೊಳು ಚೆಲುವ ಸಾಲಿಗ್ರಾಮವ ಕಂಡು |
ಅತಿ ತೋಷದಿಂ ಬಾಲ | ತತಿಗುಸುರಿದನಿಂತು                       ||೭೪||

ರಾಗ ಪಂತುವರಾಳಿ ಆದಿತಾಳ (ಪಾಲಿಸು ಕರುಣಾಕಟಾಕ್ಷದಿ ಎಂಬಂತೆ)
ಬಾಲರೆ ನೋಡಿರಿತ್ತ ಮೋದದಿ | ಶಿಲೆ |
ನೀಲವರ್ಣದೊಳಿದೆ ಚಂದದಿ ||
ಗೋಲಿಯಾಟಕ್ಕೆ ಅನು | ಕೂಲವಾಗಿದೆ ಮುಂದೆ || ಬಾಲರೆ                   ||೭೫||

ಬಟ್ಟೆಯೋಳ್ತಾ ಪುಣ್ಯವಶದಿಂದಾ | ಎನ್ನ |
ದೃಷ್ಟಿಗೆ ಬಂತಲ್ಲಾ ಬಲು ಚಂದಾ ||
ಬಟ್ಟಗಲ್ಲೆಂತು ವರ್ತುಳಮಾಗಿ ತೋರ್ಪುದೂ || ಬಾಲರೆ                        ||೭೬||

ಇಡುತಾಗ ಅದ ತನ್ನ ಬಾಯೊಳೂ | ಬಾಲ |
ರೊಡನರುಹಿದನಾಗ ಮುದದೊಳೂ ||
ತೊಡಗೆಯಾಟಕ್ಕೆ ಬೇಗ | ಪಡೆಕೂಡಿ ಬನ್ನಿರೀಗಾ ||ಬಾಲರೆ||                ||೭೭||

ವಾರ್ಧಕ
ಕುಂತೀಕುಮಾರವಂಶಜ ಕೇಳು ಪಟ್ಟಣದೊ
ಳಿಂತರ್ಭಕರೊಳಾಟ ನೆರೆದಿರಲು ಅರಸೆನಿಪ |
ಕುಂತಳೇಂದ್ರನ ಮಂತ್ರಿ ದುಷ್ಟಬುದ್ಧಿಯ ಸಭೆಯೊಳೊಂದಿನಂ ಒಪ್ಪಿರಲ್ಕೆ ||
ಸಂತೋಷದಿಂ ನರ್ತನಾದಿಗಾಯನಗಳಿಂ |
ಕಾಂತೆಯರಿಗುಡುಗೊರೆಯನಿತ್ತು ಮನ್ನಿಸುತಲಾ |
ನಂತರದೊಳೊರೆದು ಕಟ್ಟಳೆಯನೆಲ್ಲಾ ಪ್ರಜೆಗೆ ಚಿಂತಿಸಿದ ತನ್ನ ಮನದೀ  ||೭೮||

ರಾಗ ಕಲ್ಯಾಣಿ ಅಷ್ಟತಾಳ (ಬೆದರಲ್ಯಾತ್ಮಕ್ಕೆ ನಾರಿ ಎಂಬಂತೆ)
ಪದವಿಯು ದೊರಕಿತಲ್ಲಾ | ವಿದುಧರನ ದಯದೀ | ಪದವಿಯು ದೊರಕೀತಲ್ಲಾ
ಮುದಿನೃಪತನುಜೆಯ | ಮದುವೆಯನೆಸಗುತ |
ಪದವಿದಳಿಯಗೆಂದು | ವಿಧಿಸದಿರನಲಾ         || ಪಲ್ಲವಿ ||

ದೊರಕಿರುತ್ತಿರಲು ಪಟ್ಟಾ | ತಾ ಮರಳಲು | ತರಳ ಮದನನು ಕೆಟ್ಟಾ ||
ಹುರುಪಿನೋಳ್ ಜರೆ ನೃಪ | ಗರುಹಲು ತರಳಗೆ |
ದೊರೆಗೊಳುವದು ಸಲೆ | ಪುರವು ವಿಶಿಷ್ಟಾ                 ||೭೯||

ಪೊಡವಿಸುರರ ಕರೆಸೀ | ಪಾಯಸ ಭಕ್ಷ | ಕಡುಬು ಸಹಿತ ಬಡಿಸೀ ||
ಕೊಡಿಸುತ ದಕ್ಷಿಣೆ | ಯಡಿಗೆರಗಲು ಸುಖ |
ಬಡುವದೆಂದೆನುತಲಿ ನಡೆವರು ಪರಸೀ                     ||೮೦||

ರಾಗ ಬೇಗಡೆ ಅಷ್ಟತಾಳ (ಅರರೇ ಬಲ್ ಮೋಸವಾಯಿತೂ ಎಂಬಂತೆ)
ಎಂದು ಯೋಚನೆಬಂದು ಮನದೊಳಗೇ | ಪರಿಚಾರನಂಕರೆ |
ದೆಂದವಿಪ್ರರ ಸಂದಣಿಯ ಮನೆಗೇ ||
ಇಂದುಕರೆತಾ | ರೆಂದೆನಲ್‌ಚರ | ನಂದು ಭೂಸುರ | ವೃಂದಸಹಿತೈ |
ತಂದು ಪೇಳಲು | ವಂದಿಸುತಲಾ | ನಂದದಿಂದಕರೆ | ತಂದಬಿಡದಿಗೇ     ||೮೧||

ವಿಪ್ರ ಉಡುಪಡೆಯ ಪ್ರಕಾಶಿಕೆಗೆ | ತಾವಿಂದುಯೆಂದು ಬ |
ಹು ಪ್ರಸಿದ್ಧವು ಈ ಪೃಥ್ವಿಯೊಳಗೇ ||
ಸ್ವಪ್ರಯೋಜನ | ದ ಪ್ರಯತ್ನದೊ | ಳು ಪ್ರವರ್ತಿಸ | ಲಿ ಪ್ರದೇಶಕೇ |
ಕ್ಷಿಪ್ರದೊಳುತಾ | ವು ಪ್ರವೇಶಿಸೆ | ನಾ ಪ್ರಭುವು ಇ | ನ್ನೀ ಪ್ರಜೆಗಳಿಗೇ      ||೮೨||

ಆರು ಕರ್ಮದಿ ಸೇರಿ ಭೂಮಿಯಲೀ | ಸುರರಾಗಿ ಕಿಲ್ಬಿಷ |
ದೂರ ಮಾಡುತ ಪಾರಮಾರ್ಥದಲೀ ||
ಸಾರಿ ಮೋಕ್ಷದ | ದಾರಿಯನು ಸಂ | ಸಾರ ಬಂಧವ | ತೀರಿ ಪರಚರ |
ಣಾರವಿಂದವ | ಭೂರಿಯೂಟಕೆ | ಕೋರಿ ಧ್ಯಾನಿಸೆ | ತೋರಿತಿದಿರಲೀ      ||೮೩||

ಭಾಮಿನಿ
ಎಂದು ಅಷ್ಟಾರ್ಘ್ಯಾದಿವಿಧಿಯಿಂ |
ದಂದು ಭೋಜನಗೈಸಿ ದಕ್ಷಿಣೆ |
ಯಿಂದ ಸತ್ಕರಿಸಲ್ಕೆ ಹೊರಗೈತಂದು ಭೂಸುರರೂ |
ಚಂದದಾಸನವೇರಿ ತರಳರ
ವೃಂದವಾಟಗಳಾಡಿ ನಲಿಯುವ |
ಅಂದವನು ಪರಿಕಿಸುತ ನುಡಿದರು ಸಚಿವರೊಳು ಮುದದಿ                     ||೮೪||

ರಾಗ ಸೌರಾಷ್ಟ್ರ ಅಷ್ಟತಾಳ
ಬಾಲರ ನಡುವೆ ಸುಧಾಕರನಂತಿರ್ಪ | ಬಾಲನ್ಯಾರೈ || ನಿಂತು |
ಗೋಲಿ ಇಂದೆಲ್ಲರ ಕೂಡಿ ಕ್ರೀಡಿಸುತೀರ್ಪ | ಬಾಲನ್ಯಾರೈ                      ||೮೫||

ರಾಜಲಕ್ಷಣ ಸಾಧುಹರಿಭಕ್ತನೆನಿಸುವ | ಬಾಲನ್ಯಾರೈ || ಮುಂದೆ ||
ಮಾಜದೆ ಧರಣಿಪಾಲಕನಾಗಿ ಮೆರೆಯುವ | ಬಾಲನ್ಯಾರೈ                     ||೮೬||

ಕುಂತಳಾವನಿಪತ್ಯನೃಪಜಾತೆ ಸಹಗಂಟು | ಬಾಲನ್ಯಾರೈ || ಇನ್ನು ||
ಚಿಂತಿಸದಿವನ ಪಾಲಿಸು ಮುಂದೆ ಸುಖವುಂಟು | ಬಾಲನ್ಯಾರೈ              ||೮೭||

ವಾರ್ಧಕ
ಕ್ರೂರನಕ್ರಾಕುಲದೊಳಿಡಿದರ್ದಪೆರ್ಮಡುಗ |
ಭೀರನಿರ್ಮಲಜಲದೊಳೆಸೆವಂತೆ ಮನದೋಳ್‌ಕ |
ಠೋರತರ ಭಾವವಂ ತಳೆದು ಬಹಿರಂಗದೋಳ್ ವಿನಯಮುಳ್ಳಾತನಾಗಿ ||
ಚಾರುಲಕ್ಷಣದ ಶಿಶುವಂ ನೋಡಿ ಧರೆಯ ವೃಂ |
ದಾರಕರ ನುಡಿಗೊಪ್ಪಿದಂತಿರ್ದುಬಳಿಕಸ |
ತ್ಕಾರದಿಂದಾ ವಿಪ್ರರಂ ಕಳುಹುತಂ ದುಷ್ಟಬುದ್ಧಿ ಚಿಂತಿಸುತಿರ್ದನೂ                     ||೮೮||

ರಾಗ ಮಧುಮಾಧವಿ ಆದಿತಾಳ (ಹಂಸಕೇತನಾದಿಗಳೆಲ್ಲ ಕೇಳಿ ಎಂಬಂತೆ)
ಇಂತುಗೈದರೆ ವಿಪ್ರರು ಉರಿಯಾ |
ಸಂತೇಭೋಗವು ಪೇಳ್ವೆನು ಪರಿಯಾ  || ಪಲ್ಲವಿ ||

ಕುಂತಳಾಧೀಶನಿಂಗಾ | ದಂತಿಗಮನೆ ಭೃಂಗ |
ಕುಂತಳೆ ಜನಿಸಿರ | ಲಂತನ್ನ ಸುತಗೇ ||
ಯಂತ ನಿಶ್ಚಯದೀ ಭೂ | ಕಾಂತೆ ಸಹಿತ ಘನ |
ಸಂತಸಬಡುತಿರೆ | ಬಂತೆಲ್ಲಿಯಪಘಾತ                     ||೮೯||

ನಾನು ಯೋಚಿಪ ಕೃತ್ಯ | ಮಾನದಿರದು ಸತ್ಯ |
ಮಾನವರೊಳು ಬಾಲ | ಮಾನಿಪನರರರೇ ||
ಕಾಣದಾದೆನು ದಾರಿ | ಹಾನಿಯಪ್ಪುದೆ ವಿಪ್ರ |
ರಾನುಡಿ ಜಗದೊಳು | ಯೇನಗಯ್ಯಲಿದಕ್ಕೆ                ||೯೦||

ಬಿಟ್ಟರೆ ನಾಂ ದಯದಿ | ಕೆಟ್ಟು ಪೋಪೇಂಜವದಿ |
ಅಟ್ಟಿ ಘೋರಡವಿಯೊ | ಳಿಟ್ಟು ಖಡ್ಗದಲೀ |
ಕುಟ್ಟಿ ಕೆಡಹಿ ಬಲಿಗೊಟ್ಟರೀತಗೆ ರಾಜ |
ಪಟ್ಟವೆಲ್ಲಿದೆ ಗತಿ | ಗೆಟ್ಟು ಹೋಗುವನೀತಾ                 ||೯೧||

ಕಂದ
ಎಂದಾ ಪಶುಘಾತಕರಂ |
ಸಂದಣಿ ಸಹಿತಂ ಕರೆಸಲ್ಕವರೈದಾಗಳ್ ||
ಬಂದಿರುವೆಮ್ಮೊಳು ಕಾರ್ಯವು |
ಮುಂದರಿವಂತಾಜ್ಞೆಯನೀಯನಲವನೊರೆದಂ                        ||೯೨||

ರಾಗ ಭೈರವಿ ಝಂಪೆತಾಳ
ಧನದಾಸೆಯಿರೆ ನಿಮಗೆ | ತನಯರೊಳಗಾಡುತಿಹ |
ದಿನಮಣಿಯ ತೆರದ ಬಾಲನಲೀ ||
ಕನಿಕರವ ತೊರೆದೆತ್ತಿ | ವನಕೈದಿ ಸುರಗಿಯಲಿ |
ಹನನವನುಯೆಸಗಿ ಶೀಘ್ರದಲಿ                     ||೯೩||

ಹೊಡದ್ಹಲ್ಲುಗಳ ಕೆಡಹಿ | ಕೊಡುತಲೀತನ ಜವಗೆ |
ತಡೆಯದಿಲ್ಲಿಗೆ ಬರುತ ಮನಕೇ |
ಒಡಬಡುವ ಕುರುಹನಿ | ತ್ತಡಿಗೆರಗಲೀವೆಧನ |
ಬಿಡಿರಿ ವ್ಯಥೆಗಳ ದರಿದ್ರತೆಗೆ |                     ||೯೪||

ಬಾಲನೆಂದಿವನತನು | ಸೀಳದೈತರೆ ನಿಮಗೆ |
ಬಾಳಗೊಡುವೆನೆ ಎನ್ನ ಪುರದಿ ||
ಕಾಳು ಮಾಡದೆ ಬಿಡೆನು | ದಾಳಿಯೇತಕೆ ಬರಿದೆ |
ಯೇಳಿ ತೆರಳಿರಿ ಬಾಲನೊಡನೆ                   ||೯೫||

ವಾರ್ಧಕ
ಕಾಳರಕ್ಕಸರಂದು ಪ್ರಹ್ಲಾದನಂಪಿಡಿದ |
ವೋಲುಮಂತ್ರೀಶನಾಜ್ಞೆಯಗೊಂಡು ಪಾಪಿಗಳು |
ಬಾಲರೊಡನಾಡ್ವನಂ ಪೆಗಲೊಳೇರಿಸಿ ವನಕೆ  ಒಯ್ಯುತಿರೆ ಬಾಲನಾಗಾ ||
ಘೋಳಿಡುತ ಹರಿಕೃಷ್ಣ ಕೇಶವಾಚ್ಯುತಯೆನಲು |
ಖೂಳರಿಂಗಿಹುದೆ ದಯ ವನದಿಭೋಜನಮಿಹುದು |
ತಾಳೆನುತೆ ಪುಸಿಮಾತನಂ ಪೇಳಿ ಪೋಪರೊಳು ಭಾಳಮಂ ನೋಡಿ ಒರೆದ         ||೯೬||

ರಾಗ ನೀಲಾಂಬರಿ ಮಟ್ಟೆತಾಳ
ಸುಳ್ಳನು ಪೇಳುತ ಕಾಡಿಗೆ | ಕೊಲ್ಲಲು ಒಯ್ವಿರಿ ನೀತಿಯು
ಇಲ್ಲದೆ ನಿಮ್ಮಯ ಬಾಲರ | ತಳ್ಳಿಗೆ ಬಂದಿಹೆನೇ                      ||೯೭||

ಸಾಣೆಯ ಕೂರಸಿಯಿಂದಲಿ | ಪ್ರಾಣದಹಾನಿಯ ಗೈವರು |
ಕಾಣೆನುಪಾಯವ ಭಕ್ತರ | ಧೀನನೆ ಸಲಹೆನ್ನಾ                        ||೯೮||

ಕರಿವರದನೆ ಹರಿಮಾಧವ | ಸಿರಿಯರಸನೆ ಪರಿಪಾಲಿಸು |
ಕರುಣವ ತೋರದೀ ಖಡುಗದಿ | ಶಿರವರಿವರು ಬಿಡದೆ              ||೯೯||

ಸ್ಫುಟನುಡಿಯೊಳು ತವನಾಮವ | ಪಠಿಸದೆ ಯಮನನು ಕಾಂಬೆನು |
ವಟುವೆನುತೆನ್ನನು ಬಿಡುವರೆ | ಕಟುಕರು ಕರುಣದೊಳು                        ||೧೦೦||

ಬಿಂಕದಿ ಪಿಡಿದೆನ್ನನು ಭರ | ದಿಂ ಕಡಿವರ್ಖಡುಗದಿ ಶಿರ ||
ಶಂಕರ ಸಖ ಮಮತೆಯೊಳೀ | ಕಿಂಕರನನು ಸಲಹೋ                        ||೧೦೧||

ರಾಗ ಪಂತುವರಾಳಿ ಏಕತಾಳ (ಯಾರ್ಮ್ಯಾಪೋರೀ ವಿಪಿನ ಎಂಬಂತೆ)
ಬಿಡದೇ ಪೊರೆಯೋ ದೇವಾಯೆಂಬ | ಹುಡುಗನನ್ನು ಕಂಡು |
ಖಡುಗವಿಳಿಸಿ ನಿಂತು ತಮ್ಮೊಳು | ನುಡಿದರ್ಮೋಹಗೊಂಡು                  ||೧೦೨||

ಯೇಟೇ ಲಾಭಗಳ್ ಹೋದರು ಈ ಗೋ | ಳಾಟವು ಬೇಡವೆಂದು ||
ಈಟೀ ಬಿಸುಟು ಖೂಳ ಮಂತ್ರಿಯ | ಕಾಟಕೆ ಬೈದರಂದು                      ||೧೦೩||

ಬರಿ ಮಾತಿರ್ಕಾತರಳನ ಚರಣದಿ | ಬೆರಳೊಂದಿರುವುದು ಜಾಸ್ತಿ ||
ಕುರುಹಿಗೆ ಕೊರೆದು ತೋರೆ ಇನಾಮಿಗೆ | ಸೆರಗ ನೆಲದೋಳ್ ಹಾಸ್ತಿ       ||೧೦೪||

ಬಿಟ್ಟಾ ಬಾಲನ ಮಂತ್ರಿಯ ಚರಣಕೆ | ಥಟ್ಟನೆಯೆರಗಲಾಗಾ ||
ಬೆಟ್ಟಾ ತೋರುತ ಕೋರಲು ಧನುವನು | ಕೊಟ್ಟು ಕಳುಹಿದನಾಗಾ                      ||೧೦೫||

ಭಾಮಿನಿ
ಘೋರವಿಪಿನದೊಳಿತ್ತ ಬಾಲನು |
ಚೀರುತೆಂದನು ಯೇನಿದಕಟಾ |
ಮಾರಮಣ ದಯದೋರಿ ಸಲಹೈ ಶರಣರಕ್ಷಕನೇ ||
ಸೇರಿ ಜೊತೆಯನು ತೋಷದಿಂದಲಿ |
ಕ್ಷೀರ ಪಾಲೋಗರವ ಸವಿವುತ |
ಭೂರಿಯಾಟಗಳಾಡ್ವ ತೆರನನುಗಯ್ಯೊ ಮುರಹರನೇ               ||೧೦೬||

ರಾಗ ನೀಲಾಂಬರಿ ಏಕತಾಳ (ಅಕಟಕಟಾ ರಣಧೀರಾ ಎಂಬಂತೆ)
ಶ್ರೀಲಕುಮಿಪತಿ ಮೊರೆಯ | ಲಾಲಿಸದೆ ಇರುತಿಹೆಯ |
ಪಾಲಿಪರ‍್ಯಾರಿಹರೆನಗೇ | ಪೇಳೆಲೋ ನೀದಯದೊಳಗೇ                       ||೧೦೭||

ತರಳರೊಳಾಡುತ ಇರಲು | ತೊರೆಸುತ ಇಲ್ಲಿಗೆ ತರಲು ||
ದುರುಳರಿಗೇನೆಸಗಿರುವೆ | ಬೆರಳನುಕೊಯ್ವುದು ತರವೆ                        ||೧೦೮||

ಹಸಿವನು ತಾಳುವದೆಂತು | ಬಿಸಿಲಿನೊಳಿರ್ಪೆನು ಇಂತು ||
ಅಶನವನೀವರ ಕಾಣೆ | ಪಸರಿಸುತಿರ್ಪುದು ಬೇನೆ                    ||೧೦೯||

ಆಡುವ ಬಾಲರು ಮರವು | ಕಾಡಿದು ನನ್ನಯ ಗ್ರಹವು ||
ಓಡುತಲಿರ್ಪುದು ಮೃಗವು | ನೋಡಲು ತೋರ್ಪುದು ಭಯವು               ||೧೧೦||

ವಾರ್ಧಕ
ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ |
ಪಸುಳೆ ಹರಿಹರಿಯಂದೊರಲ್ದಳುತಿರಲ್‌ಕಣ್ಣೊ |
ಳೊಸರ್ವ ಭಾಷ್ಪಂಗಳಿಂ ಮಿಂದವಂ ಕಡುಗಷ್ಟದಿಂ ನೊಂದು ಬೆಂಡಾಗುತ ||
ಹಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ |
ರಿಸುವರಂ ಕಾಣದಾ ಬಾಲ ಚಿಂತಿಸುತಿರಲ್ |
ದಶರೂಪಕಾಯದಿರ್ಪನೆ ವ್ಯಾಧಪತಿಮನವ ಮಾಡಿದಂ ಬೇಟೆಗಂದು       ||೧೧೧||

ರಾಗ ಸೌರಾಷ್ಟ್ರ ಮಟ್ಟೆತಾಳ (ನಡೆಯಲೋ ಮುರಾರಿ ಸುಖದೊಳೂ ಎಂಬಂತೆ)
ಬಂದನಾ ಕುಳಿಂದ ಬೇಟೆಗೆ | ಚಂದನಾವತೀಶ ಬೇಗ |
ಬಂದನಾ ಕುಳಿಂದ ಬೇಟೆಗೇ   || ಪಲ್ಲವಿ ||

ಇಂದುಮಾರಮಂದ ಗಂಧವ | ಅಂದವರಿಯ
ಲೆಂದು ನಾರಿವೃಂದದಿಂದವ |
ಬಂದು ಹಂದಿಗಳನು ನಾಯಿ | ಯಿಂದ ಕೊಂದು ಮಂದಿಯೊಡನೆ |
ಮುಂದ ಮುಂದಕೈದಿ ಮೃಗವ | ತಂದು ತಂದು ನೂಕೆ ಬಲೆಗೆ || ಬಂದನಾ           ||೧೧೨||

ಕಡಿದು ಕಡವ ಝಡಿದು ಸಿಂಗವ | ಕೆಡಹಿ ಕರದಿ |
ಪಿಡಿದು ನಡುವ ಕೊಡಹಿ ಮಂಗವ |
ನಡೆದ ತಡೆಯುತಡಚಿ ಕರಿಯ | ನಿಡದೆ ಪೊಡೆಯುತಡಗಿದರಿಯ |
ಬಿಡದೆ ಮಡುಹಿ ಗಿಡದೊಳಿರುವ | ಗಿಡಗ ಪಡೆಯ ಪೊಡವಿಗಿಡುತ || ಬಂದನಾ      ||೧೧೩||

ಹರಿಣವನ್ನು ತರಿಯಲೆನ್ನತ | ತುರಗವೇರಿ |
ತೆರಳುತಾ ಕುಳಿಂದ ಬೆರಸುತಾ |
ತ್ವರದಿ ಪೋಗಿ ಹರಿಯ ಜಪಿಸು | ತಿರುವ ತರಳನಿರವ ನೋಡಿ |
ಹರುಷ ಧರಿಸಿ ಸರಿಸಕೈದಿ | ವರಿಸಿ ರುಧಿರ ವರೆದನಾಗಾ || ಬಂದನಾ     ||೧೧೪||

ರಾಗ ಕೇದಾರಗೌಳ ಅಷ್ಟತಾಳ
ಕಾಮ ಸುಂದರ ಸಮ | ಕೋಮಲಾಂಗನೆ ಪೆತ್ತ | ಸಾಮಜಗಾಮಿನಿಯ |
ನಾಮವಾವುದು ಪಡೆ | ದಾಮಹಿಮನದಾವ | ಭೂಮಿಯನಾಳ್ಪನಯ್ಯಾ    ||೧೧೫||

ರಾಗ ತೋಡಿ ಆದಿತಾಳ
ಸರಸಿಜಭವಾಂಡ ಪುರವು | ಸಿರಿಯು ಮಾತೆ ಹರಿಯು ತಾತ |
ಹೊರತು ಮಾತಾಪಿತರ ಕಾಣೆ | ಪುರವ ಬರವಾ ಪೇಳು ನೀನೇ |

ರಾಗ ಕೇದಾರಗೌಳ ಅಷ್ಟತಾಳ
ಕಂದ ಕೇಳೆಲೋ ನಾನು | ಚಂದನವತಿ ನೃಪ | ಬಂದಿಪೆ ಬೇಟೆಗೆಂದು ||
ತಂದು ಪಾದವ ಬೆರ | ಳೊಂದ ಛೇದಿಸಿದನಾ | ರೆಂದು ನೀ ಪೇಳು ಇಂದು           ||೧೧೬||

ರಾಗ ತೋಡಿ ಆದಿತಾಳ
ತರಳರೊಡನೆ ಪುರದೊಳಾಡು | ತ್ತಿರಲು ಕರಿಯಮಯ್ಯ ಮನುಜ |
ರಿರದೆ ಕರೆದು ತಂದೀಚರಣ | ತರಿದು ನಡೆದರಿಂದಿಲ್ಲಶನ |                    ||೧೧೭||

ರಾಗ ಕೇದಾರಗೌಳ ಅಷ್ಟತಾಳ
ಸುತಹೀನೆಯನುತೆನ್ನ | ಸತಿ ಚಿಂತಿಪಳು ವಂಶ | ರತುನ ವಾಗಿರ್ಪೆ ನೀನೇ |
ವ್ಯಥಿಸದಿರೆಲವೋ ಶ್ರೀ | ಪತಿ ರಕ್ಷಿಪನು ನಿನ್ನ | ಹಿತದಿ ಬಾರೆನ್ನೊಡನೇ     ||೧೧೮||

ರಾಗ ತೋಡಿ ಆದಿತಾಳ
ಕಡಿಯ ಬಾಧೆ ತಡೆಯದವನು | ನಡೆವುದೆಂತು ಅಡಿಯನಿಡುತ |
ಪಿಡಿದು ಕರವ ರಕ್ಷಿಸೆನುತ | ಹುಡುಗನೊರೆಯೆ ಪಿಡಿದನೀತ ||                ||೧೧೯||

ರಾಗ ಕೇದಾರಗೌಳ ಅಷ್ಟತಾಳ
ಭರದಿ ಬಾಲನ ಕೂಡಿ | ತುರಗವನಡರುತ್ತ | ಕೊರಡಿಂದ ಸೂಚಿಸಲು ||
ಅರೆನಿಮಿಷದಿವಾಜಿ | ತೆರಳಿ ಸೈನ್ಯವ ಸೇರೆ | ಒರೆದನು ಕಾಂತೆಯೊಳು   ||೧೨೦||