ರಾಗ ಕಾಂಭೋಜಿ ಝಂಪೆತಾಳ
ಆದೊಡಾಲಿಪುದು ತಲೆದೋರಿದುತ್ಪಾತ ಕಾ |
ವೇದವಿದ ಕಣ್ವಮುನಿಯನ್ನು ||
ಹಾದಿಯೊಳು ನಿಲಿಸಿ ಪರಿಹಾಸವನು ಗೈದುದಿದ |
ಕಾದಿ ಕಾರಣವೆನ್ನಬಹುದು  || ೧೬೪ ||

ಇದರ ಪರಿಹಾರಕೀ ದಿನವೆ ನೀವೆಲ್ಲರತಿ |
ಮುದದಿಂದ ಧರೆಯೊಳಿರುತಿರ್ಪ ||
ಸದಮಲಮಹಾತೀರ್ಥದೊಳು ಮಿಂದು ಬಂದೊಡ |
ಪ್ಪುದು ನಮಗೆ ಸುಕ್ಷೇಮವಮಿತ       || ೧೬೫ ||

ಎಂದು ಹರಿ ನುಡಿಯಲವರೆಲ್ಲರತ್ಯಾನಂದ |
ದಿಂದ ತೀರ್ಥಾಟನಕೆ ಪೊರಟು ||
ನಿಂದಚ್ಯುತನ ಪಾದಕೆರಗುತಪ್ಪಣೆಯ ಪಡೆ |
ದಂದೆ ನಡೆದರು ಮೋದದಿಂದ        || ೧೬೬ ||

ಅಂತು ಯಾದವರೆಲ್ಲರೊಂದಾಗಿ ನಡೆಯುತ |
ತ್ಯಂತ ಶೀಘ್ರದೊಳು ಮುಂಬರಿದು ||
ಕಂತುಪಿತನನು ನೆನೆಯುತ ಪರಾಂಬುಧಿಯ ತಡಿಗೆ |
ಸಂತಸದೆ ಬಂದರವರಂದು            || ೧೬೭ ||

ಅಂದು ಕಾರ್ತಿಕ ಶುದ್ಧ ಪೌರ್ಣಮಿ ಎನುತ್ತವರು |
ಬಂದಾ ಪ್ರಭಾಸತೀರ್ಥದೊಳು ||
ಮಿಂದು ತಡಿಗಡರುತಾಯೆಡೆಯೊಳೇ ನೆಲಸಿರ |
ಲ್ಕೆಂದನಾ ಸಾಂಬನೆಲ್ಲರೊಳು         || ೧೬೮ ||

ರಾಗ ಮಧ್ಯಮಾವತಿ ತ್ರಿವುಡೆತಾಳ
ಇಂದು ಕಾರ್ತಿಕ ಪೌರ್ಣಮಿಯ ದಿನ |
ದಂದು ರಾತ್ರೆಯ ವೇಳೆಯಲಿ ನಾ |
ವಂದದಿಂದುತ್ಸವವನತಿ ಸಾ |
ನಂದದಿಂದೀಯೆಡೆಯೊಳೇ | ನಡೆಸಬೇಕು     || ೧೬೯ ||

ಅದಕ್ಕೆ ನೀವಿಂದೊಪ್ಪಿಗೆಯ ನಿ |
ತ್ತಧಿಕ ಸಹಕಾರವನ್ನು ನೀಡುವು |
ದಿದುವೆ ಮುಖ್ಯವೆನಲ್ಕೆ ಸರ್ವರು |
ಮುದದೊಳೊಪ್ಪಿಕೆ ಇತ್ತರು | ಸಹಯರಾಗಿ     || ೧೭೦ ||

ಭಾಮಿನಿ
ಮತ್ತೆ ನೃತ್ಯದ ನಾರಿಯರ ಕರೆ |
ಸುತ್ತೆ ನರ್ತನಕಾಜ್ಞೆಯನು ತಾ |
ನಿತ್ತು ಗದ ಕಾಮಾನಿರುದ್ಧ ಪ್ರಮುಖರನು ಬರಿಸಿ ||
ಚಿತ್ತಶುದ್ಧಿಯೊಳೆಯ್ದೆ ಕುಳಿತಿರೆ |
ಮತ್ತಕಾಶಿನಿಯರ್ಕಳೈತಂ |
ದುತ್ತಮದ ರೀತಿಯೊಳು ನರ್ತಿಸುತಿರ್ದರಂದೊಲಿದು   || ೧೭೧ ||

ರಾಗ ನವರೋಜು ಏಕತಾಳ
ನಲಿದರು ನಾರಿಯರಂದು | ಬಹ | ಳೊಲವಿನೊಳೆಲ್ಲರು ಬಂದು ||
ಚೆಲುವನು ಬೀರುತ | ನಲವನು ತೋರುತ |
ಗೆಲವನು ಸಾರುತ | ನೆಲವನು ಗೀರುತ        || ೧೭೨ ||

ಹುಬ್ಬನು ಹಾರಿಸುತಾಗ | ಮಹ | ದುಬ್ಬಿನೊಳೇರುತೆ ಬೇಗ ||
ಕೊಬ್ಬಿದ ನಾರಿಯ | ರಬ್ಬರಿಸುತಲಾ |
ಹಬ್ಬದ ದಿನದೊಳ | ಗುಬ್ಬುತೆ ನಲಿದರು        || ೧೭೩ ||

ಕೊರಳನು ಕೊಂಕಿಸಿ ಮತ್ತೆ | ನಿಜ | ಕರಗಳ ಡೊಂಕಿಸುತೆತ್ತೆ ||
ಸರಸದೊಳೆಲ್ಲರು | ಸುರಸುಂದರಿಯರ |
ತೆರದಿಂ ಸಭೆಯೊಳು | ನೆರೆ ನರ್ತಿಸಿದರು      || ೧೭೪ ||

ಭಾಮಿನಿ
ನಾರಿಯರು ನರ್ತಿಪುದನೀಕ್ಷಿಸಿ |
ಭೂರಿ ಸಂತೋಷದೊಳು ಸಾಂಬನು |
ಸೇರಿದವರೊಡನೆಂದ ನೀ ಕಾರ್ತಿಕಮಹೋತ್ಸವವು ||
ಮಿರಿ ವೈಭವ ಪೂರ್ಣವಪ್ಪೊಡೆ |
ಸಾರ ಮದ್ಯವ ಕುಡಿದು ಕುಣಿವುದು |
ದಾರಿಯೆನಲೊಪ್ಪಿದರು ಸರ್ವರು ನಲವಿನಿಂದಾಗ        || ೧೭೫ ||

ಭೋಗ ಷಟ್ಪದಿ
ಒಡನೆ ಮದ್ಯವನ್ನು ತರಿಸಿ |
ಕುಡಿಯುತದನು ನಲಿಯುತಿರ್ಪ |
ಜಡಜ ನೇತ್ರೆಯರಿಗೆ ಕೊಟ್ಟು ಮತ್ತೆ ಕುಡಿಯುತೆ ||
ತಡೆಯದಧಿಕ ತೋಷದಿಂದ |
ಬೆಡಗಿನಬಲೆಯರ್ಕಳೊಡನೆ |
ಸಡಗರದೊಳು ನಲಿದರಿಂತು ಮತ್ತರಾಗುತೆ   || ೧೭೬ ||

ರಾಗ ನವರೋಜು ಏಕತಾಳ
ಬೇಗನೆ ಸಾಂಬನು ಬಂದು | ಮದ |
ನಾಗಮ ಕೋವಿದೆಗಂದು ||
ರಾಗದೆ ಕೈಯನು | ಬಾಗಿಸಿ ಪಿಡಿಯು |
ತ್ತಾಗಳೆ ನಡೆದು ಸ | ರಾಗದೆ ನಲಿದನು        || ೧೭೭ ||

ಒಡನೆಯ ಸಾತ್ಯಕಿ ನಲಿದು | ಕಡು |
ಬೆಡಗಿನ ಬಾಲೆಯನೊಲಿದು ||
ಸಡಗರ ದಿಂ ಕರ | ಪಿಡಿಯುತೆ ಸಭೆಯೊಳು |
ನಡೆಸುತೆ ಕುಣಿಯಲು | ತೊಡಗಿದನಾಕ್ಷಣ     || ೧೭೮ ||

ಇವಳೆನಗೇ ಬೇಕೆಂದು | ನಿನ |
ಗವಳೇ ಸಾಕೆನುತಂದು ||
ಅವಿರಳ ರೋಷದೆ | ಜವದಿಂ ಸತ್ಯಕ |
ಕುವರನ ನೂಕುತೆ | ತಿವಿದನು ಗದನು          || ೧೭೯ ||

ವಾರ್ಧಕ
ಒಡನಿದನು ಕಂಡ ಯದುಬಲವೆರಡು ಪಾಲಾಗಿ |
ಕಡಲ ಬಳಿಯೊಳೆ ಬೆಳೆದ ಶರಕಾಂಡಮಂ ಕಿತ್ತು |
ಬಡಿದಾಡತೊಡಗಿದುದು ಕುಡಿದ ಮದ್ಯದ ಮರುಳಿನಿಂದೆ ತಮ್ಮಿರವ ಮರೆತು ||
ನಡೆದುದವರೊಳಗೆ ಭೀಕರಸಂಕುಲಾಹವಂ |
ಪೊಡವಿ ನಡುಗುವ ತೆರದೊಳಂದು ದೇವಾಸುರರು |
ಬಿಡದೆ ಪಾಲ್ಗಡಲ ತಡಿಯೊಳ್ ನಡೆಸಿದನುವರದ ರೀತಿಯಿಂ ರಂಜಿಸಿದುದು          || ೧೮೦ ||

ಭಾಮಿನಿ
ಬಿಡದೆ ಸಾಂಬನು ಮಕರಕೇತನ |
ನೊಡನೆ ಕಾಳಗವೆಸಗಿದನು ತಡೆ |
ತಡೆಯುತನಿರುದ್ಧನನು ಕೃತವರ್ಮಕನು ಮೂದಲಿಸಿ ||
ತುಡುಕಿದನು ಗದನಾಗ ಖಡುಗವ |
ಜಡಿದು ಸಾತ್ಯಕಿಯೊಡನೆ ಧುರವನು |
ನಡೆಸುತೀ ಪರಿಯಿಂದೆ ಮೂದಲಿಸುತ್ತ ಪೇಳಿದನು       || ೧೮೧ ||

ರಾಗ ಸಾವೇರಿ ಮಟ್ಟೆತಾಳ
ನಿಲ್ಲು ನಿಲ್ಲು ಸತ್ಯಕಾತ್ಮಜಾತ ಸಮರಕೆ |
ಮಲ್ಲನಾದೊಡೀಗ ಬರ್ಪುದೆನ್ನ ಸರಿಸಕೆ ||
ಬಿಲ್ಲ ಪಿಡಿದು ಬಾಣ ಬಿಡುತೆ ಬಾರೊ ಮುಂದಕೆ |
ಕೊಲ್ಲದಿರೆನು ನಿನ್ನನೀಗ ನೋಳ್ಪುದೇತಕೆ       || ೧೮೨ ||

ಬಾರದಿರೆನು ಗದನೆ ನಿನ್ನನಿಂದೆ ಕೊಲ್ವೆನು |
ಮಾರಿ ಮಸಣಿಗಳಿಗೆ ಹಬ್ಬದೂಟವೀವೆನು ||
ತೋರೊ ನಿನ್ನ ವಿಕ್ರಮವನು ಬೀರೊ ಕಡುಹನು |
ವೀರತನವ ಮೆರೆವೆನೀಗ ತರಿದು ನಿನ್ನನು      || ೧೮೩ ||

ಎಂದು ನುಡಿದು ಸತ್ಯಕಾತ್ಮಜಾತನಸಿಯನು |
ಚಂದದಿಂದ ಪಿಡಿದು ಕಡಿಯೆ ಗದನು ತಡೆದನು ||
ಮುಂದುವರಿದು ಗದೆಯನೆತ್ತಿ ಮತ್ತೆ ಬಡಿದನು |
ಕಂದಿ ಕುಂದದವರ ಸಮರವೇನ ಪೇಳ್ವೆನು    || ೧೮೪ ||

ವಾರ್ಧಕ
ಒಡನೆ ಸತ್ಯಕಸುತಂ ಕಡುಹಿನಿಂದೈತಂದು |
ಖಡುಗವನ್ನೆತ್ತುತ್ತೆ ಕಡಿದು ಗದನಂ ಧರೆಗೆ |
ಕೆಡಹಿ ಚಂಡಾಡಿದಂ ಕಡೆಗವನ ರುಂಡಮಂ ಕುಡಿದ ಮದ್ಯದ ಮದದೊಳು ||
ಹುಡಿಯೊಳವನಾ ಮುಂಡವೆಡೆಬಿಡದೆ ಹೊರಳುತಿರೆ |
ನಡೆತಂದು ಕೃತವರ್ಮನಡಿಗಡಿಗೆ ನೋಡಿ ಮುಂ |
ದಡಿಯಿಟ್ಟು ಸಾತ್ಯಕಿಯ ತುಡುಕಿ ಬಳಿಕವನೊಡನೆ ನುಡಿದನತಿ ರೋಷದಿಂದ        || ೧೮೫ ||

ರಾಗ ಮಾರವಿ ಏಕತಾಳ
ಏತಕೆ ಗದನಂ ಕೊಂದೀಪರಿಯ ವಿ | ಘಾತಕತನಗೆಯ್ದು ||
ಪಾತಕಿ ನಿನ್ನನು ಕೊಲ್ಲದೆ ಬಿಡುವೆನೆ | ಭೂತಳದೊಳಗಿಂದು      || ೧೮೬ ||

ಧುರಕೈತಂದರೆ ತರಿಯದೆ ಬಿಡುವೆನೆ | ದುರುಳನೆ ನೀನೇಕೆ ||
ಬರಿದೇ ಯುದ್ಧಕೆ ಬರುತಿರುವೆಯೊ ಹೇ | ಮರುಳನೆ ನಡೆ ಮನೆಗೆ           || ೧೮೭ ||
ಬುದ್ಧಿಯನೊರೆಯದಿರೆಲವೋ ಮೂಢನೆ | ಯುದ್ಧಕೆ ಬಾ ಮುಂದೆ ||
ಸಿದ್ಧನು ನಾನಾಗಿಹೆನೀ ಕ್ಷಣದೊಳು | ಸದ್ದಡಗಿಸದಿರೆನು            || ೧೮೮ ||

ಎಂದವನೊರೆಯುತೆ ಧನುವನು ನೆಗಹು | ತ್ತೊಂದಸ್ತ್ರವನೆಸೆಯೆ ||
ಚಂದದಿ ಸತ್ಯಕ ನಂದನನದನಾ | ನಂದದೆ ಕಡಿದಿಡಲು            || ೧೮೯ ||

ಕೃತವರ್ಮನು ರೋಷದೊಳನಲಾಸ್ತ್ರವ | ಧೃತಿಗೆಡದೆಸೆಯಲ್ಕೆ ||
ಪ್ರತಿಜಲಶರದಿಂ ತರಿಯುತೆ ಸತ್ಯಕ | ಸುತನನುವರ ಗೆಯ್ದ       || ೧೯೦ ||

ಭಾಮಿನಿ
ಬಳಿಕ ನಾನಾ ವಿಧದ ಬಾಣಾ |
ವಳಿಗಳನು ಬಿಡುತವರು ಕಾದಿದ |
ರಳವಿ ಗೆಡದತಿ ಧೈರ್ಯಮಾನಸರೆನಿಸುತಾ ಬಳಿಕ ||
ಘಳಿಲನಾ ಸಾತ್ಯಕಿಯು ಖಡ್ಗವ |
ಝಳಪಿಸುತೆ ಕೃತವರ್ಮನನು ಕಡಿ
ದಿಳೆಗೆ ಕೆಡಹಲು ಕಂಡು ಕಾಮನು ಕನಲುತಿಂತೆಂದ     || ೧೯೧ ||

ರಾಗ ಆರ್ಯಸವಾಯ್ ಏಕತಾಳ
ಎಲವೆಲವೋ ಹೇ ಧೂರ್ತನೆ ನೀನತಿ |
ಛಲದಿಂ ಕೃತವರ್ಮನ ಕೊಂದು ||
ಬಲಯುತನೆನಿಸಲು ಬಿಡುವೆನೆ ನಿನ್ನನು |
ಕೊಲದಿರನೀ ಕಾಮನು ನೋಡು      || ೧೯೨ ||

ನಿನ್ನಧಟೆನ್ನೊಳು ನಡೆಯದು ಕಾಮುಕ |
ರನ್ನೀಕ್ಷಿಸುತಾ ಎಡೆಗಾಗಿ ||
ಚೆನ್ನಾಗಿಯೆ ನಡೆ ನಿನ್ನನು ಬಿಡದೆ |
ಮನ್ನಿಸುವರು ನೋಡವರುಗಳು      || ೧೯೩ ||

ನಿನ್ನನು ಕೊಂದಾ ಮೇಲಲ್ಲಿಗೆ ಮನ |
ವನ್ನಿರಿಸುತೆ ನಾ ಪೋಗುವೆನು ||
ಪನ್ನತನಾದೊಡೆ ನಿಲ್ಲೀಕ್ಷಣಧುರ |
ಕೆನ್ನೊಡನತಿ ಧೈರ್ಯದೊಳೀಗ       || ೧೯೪ ||

ಆದೊಡೆ ನೋಡಲು ಬಹುದೆನ್ನುತೆ ಸ |
ಕ್ರೋಧದೊಳಾ ಸಾತ್ಯಕಿ ಬಿಡದೆ ||
ಮೋದಲು ಗದೆಯಿಂದದನಾ ಕಾಮನು |
ಬೀದಿಗೆ ಬಿಸುಟನು ಸೆಳೆಯುತ್ತೆ        || ೧೯೫ ||

ಒಡನೆಯೆ ಖಡುಗವ ಪಿಡಿಯುತೆ ಸಾತ್ಯಕಿ |
ನಡೆತರಲದನೀಕ್ಷಿಸಿ ಮದನ ||
ತುಡುಕುತೆ ಸೆಳೆದಾಕ್ಷಣ ಮುರಿದೆಸೆಯಲು |
ಕಡೆಗಾ ಸಾತ್ಯಕಿ ನಡೆತಂದು           || ೧೯೬ ||

ಶರಕಾಂಡವ ಕಿತ್ತದರಿಂ ಮದನನ |
ಶಿರಕೆರಗುವ ವೇಳೆಯೊಳಾಗ ||
ಸ್ಮರ ನಿನ್ನೊಂದನು ನೆರೆಕಿತ್ತದರಿಂ |
ಶಿರಕೆರಗಿದನಾ ಸಾತ್ಯಕಿಯ            || ೧೯೭ ||

ಭಾಮಿನಿ
ಇಂತವರು ಶರಕಾಂಡದಿಂ ಬಲು |
ಹಾಂತು ಬಡಿದಾಡುತ್ತೆ ಜವದಿಂ |
ದಂತಕನ ನಗರವನು ಸೇರಲ್ಕುಳಿದ ಯಾದವರು ||
ಪಂಥವಿಡಿದಲ್ಲಲ್ಲಿ ಬೆಳೆದಿ |
ರ್ಪಂಥ ಶರಕಾಂಡವನು ಕಿತ್ತ |
ತ್ಯಂತ ಭೀಕರ ಕದನವೆಸಗುತೆ ಮಡಿದರವರೆಲ್ಲ          || ೧೯೮ ||

ಅಂಕ ೧೦.  ಶ್ರೀಕೃಷ್ಣನ ಅರಣ್ಯ ಪ್ರವೇಶ

ರಾಗ ಭೈರವಿ ಝಂಪೆತಾಳ
ಇತ್ತಲಾ ದ್ವಾರಕೆಯೊಳಚ್ಯುತಂ ನಡುವಿರುಳ |
ಹೊತ್ತಿನೊಳು ಭೀಕರದ ಕನಸ ಕಂಡೆದ್ದು ||
ಹತ್ತಿರದೊಳಿರ್ಪ ಸತಿಸತ್ಯಭಾಮೆಯನು ಕರೆ |
ಯುತ್ತೆ ಪೇಳಿದನು ಬೇಸರದೊಳಿಂತೆಂದು     || ೧೯೯ ||

ಸತಿಯೆ ನಾನಿಂದಿಲ್ಲಿ ನಿದ್ರಿಸುತ್ತಿರುವಾಗ |
ಅತಿಶಯದ ಕನಸನೊಂದನು ಕಾಣುತೀಗ ||
ಮತಿವಿಕಳನಂತಾಗಿ ಮುಂದೆ ನಮಗಿನ್ನೇನು |
ಗತಿಯೆಂದು ತಿಳಿಯೆನೆನಲವಳು ಪೇಳಿದಳು  || ೨೦೦ ||

ರಾಗ ನಾದನಾಮಕ್ರಿಯೆ ಏಕತಾಳ
ಯಾವ ಕನಸ ಕಂಡಿರಿಂದು ಪ್ರಾಣಕಾಂತ | ನೀವು |
ಸಾವಧಾನದಿಂದೆ ಪೇಳಿ ಪ್ರಾಣಕಾಂತ ||
ಭಾವನವರಿಗಾಯ್ತೆ ಕಷ್ಟ ಪ್ರಾಣಕಾಂತ | ನಿಮ್ಮ |
ಮಾವನವರಿಗಾಯ್ತೆ ನಷ್ಟ ಪ್ರಾಣಕಾಂತ         || ೨೦೧ ||

ದುರುಳರಿಂದನರ್ಥ ಬಂತೋ ಪ್ರಾಣಕಾಂತ | ನಮ್ಮ |
ತರಳರಿಂಗೆ ಸೇಡು ಬಂತೊ ಪ್ರಾಣಕಾಂತ ||
ಧರೆಯ ಜನರು ಮಡಿದರೇನೊ ಪ್ರಾಣಕಾಂತ | ಕಷ್ಟ |
ಶರಧಿ ಬಂದು ಮುಸುಕಿತೇನೊ ಪ್ರಾಣಕಾಂತ || ೨೦೨ ||

ಸುಡುವ ಬೆಂಕಿ ಮುತ್ತಿತೇನೊ ಪ್ರಾಣಕಾಂತ | ನಮ್ಮ |
ಕಡಲ ಮೇರೆ ಮಿರಿತೇನೊ ಪ್ರಾಣಕಾಂತ ||
ನುಡಿವುದೆನ್ನೊಳೆಲ್ಲವನ್ನು ಪ್ರಾಣಕಾಂತ | ಎಂಬ |
ಮಡದಿಯೊಡನೆ ನುಡಿದನವಳ ಪ್ರಾಣಕಾಂತ  || ೨೦೩ ||

ರಾಗ ಸಾಂಗತ್ಯ ರೂಪಕತಾಳ
ತರುಣಿ ಕೇಳಂದು ತೀರ್ಥಾಟನೆಗೆನ್ನುತೆ |
ತೆರಳಿದ ನಮ್ಮವರೆಲ್ಲ ||
ಸುರೆಯನು ಕುಡಿಯುತೆ ಧುರದೊಳು ಮಡಿದ ಭೀ |
ಕರವಾದ ಕನಸು ಕಾಣಿಸಿತು           || ೨೦೪ ||

ಇದನು ಶೋಧಿಸಲೆಂದು ತೆರಳುವೆನಿಂದು ನಾ |
ನಧಿಕ ಶೋಕದೊಳೆನಲಾಗ ||
ಸುದತಿಯು ಮರುಗುತ್ತೆ ದೇವ ನಿಮ್ಮೊಡನೆ ನಾ |
ನದನರಿಯಲು ಬರ್ಪೆನಿಂದು           || ೨೦೫ ||

ಎಂದೆಂಬ ಸತಿಯೊಡನೆಂದನು ಹರಿಯು ನೀ |
ನಿಂದೀಗ ಬರಬೇಡ ನಮ್ಮ ||
ಮಂದಿರದೊಳು ಗಿರಿಜೆಯ ಪೂಜಾ ಸಪ್ತಾಹ |
ವಿಂದಿಹುದದನು ನೀ ನಡೆಸು          || ೨೦೬ ||

ನಿನ್ನಿಂದ ತೊಡಗಿದೀ ಪೂಜೆಯು ಮುಗಿಯುವ |
ಮುನ್ನ ಬೇರೆಡೆಗೆ ಪೋಗುವುದು ||
ಸನ್ನುತಮಲ್ತೆಂದು ತಿಳುಹುತೊಪ್ಪಿಸಿದನು |
ತನ್ನವಳನ್ನು ಶ್ರೀಪತಿಯು   || ೨೦೭ ||

ವಾರ್ಧಕ
ಹರಿಯು ನಿಜರಮಣಿಯನೊಡಂಬಡಿಸಿ ಕಾನನಕೆ |
ಬರಲು ಕೇಳಿಸಿತಭ್ರವಾಣಿಯೊಂದೆಲೆ ದೇವ |
ಪರಮತೀರ್ಥಾಟನೆಗೆ ಪೋದ ನಿನ್ನವರೆಲ್ಲ ಸುರೆ ಕುಡಿದು ಹೊಯ್ದಾಡುತೆ ||
ಶರನಿಧಿಯ ತೀರದೊಳ್ ಮಡಿದರಾ ಗಾಂಧಾರಿ |
ಯುರುತರದ ಶಾಪಪ್ರಭಾವದಿಂದೆನೆ ಕಣ್ವ |
ರೊರೆದ ತೆರನಾಯ್ತೆಂದು ನೆನೆದು ಹರಿಯೊಂದು ತರುಮೂಲದೊಳ್ ಪವಡಿಸಿದನು            || ೨೦೮ ||

ಅಂಕ ೧೧.  ಮುಸಲಾಸ್ತ್ರಪ್ರಯೋಗ

ರಾಗ ಸೌರಾಷ್ಟ್ರ ತ್ರಿವುಡೆತಾಳ
ಪರಮಕಾರ್ತಿಕ ಶುದ್ಧ ಪೌರ್ಣಮಿ |
ಮರುದಿವಸ ಜರನೆಂಬ ಬೇಡರ |
ದೊರೆಯು ತನ್ನವರೆಲ್ಲರನು ಕರೆ | ತರಿಸಿ ನುಡಿದ         || ೨೦೯ ||

ಕಾಡಿನೊಳು ಮೃಗಬಾಧೆ ಹೆಚ್ಚಿದೆ |
ಬೇಡಪಡೆಯನು ನೆರಹಿ ಬೇಟೆಯ |
ನಾಡಲಿಂದೇ ಪೋಗಬೇಕು ಸ | ಗಾಢದಿಂದ   || ೨೧೦ ||

ಆದಕಾರಣ ಪೊರಡಲೀಕ್ಷಣ |
ಮೋದದಿಂ ಶಬರಾಳಿ ಎನ್ನುತೆ |
ಸಾದರದೊಳವನೆದ್ದು ಪೊರಟನ | ದೇ ದಿನದೊಳು      || ೨೧೧ ||

ರಾಗ ಶ್ರೀರಂಜನಿ ಏಕತಾಳ
ಬೇಟೆಯಾಡುತ್ತೆ ಬಂದನಂದು | ವ್ಯಾಧಾಳಿಯೊಡೆಯ |
ಬೇಟೆಯಾಡುತ್ತೆ ಬಂದನಂದು || ಪಲ್ಲವಿ ||

ನೋಟಕೆ ಸಿಲುಕಿದ | ಕಾಟಿಗಳನು ಕಡಿ |
ದೀಟಿಯೊಳೆರಲೆಯ | ಕೂಟವ ತರಿಯುತೆ ||
ಬೇಟೆಯಾಡುತ್ತೆ ಬಂದನಂದು         || ೨೧೨ ||

ಬಲ್ಲೆಗೆ ಬಡಿ ಬಡಿ | ದಲ್ಲಿಹ ಮೃಗಗಳ |
ನೆಲ್ಲವ ತರಿಯುತ | ಗುಲ್ಲೆಬ್ಬಿಸುತಲಿ ||
ಬೇಟೆಯಾಡುತ್ತೆ ಬಂದನಂದು         || ೨೧೩ ||

ಇಕ್ಕೆಯೊಳಿರುತಿ | ರ್ಪೆಕ್ಕಲಗಳ ಕೊಂ |
ದಿಕ್ಕುತೆ ಹುಲಿಗಳ | ಸೊಕ್ಕನು ನಿಲಿಸುತೆ ||
ಬೇಟೆಯಾಡುತ್ತೆ ಬಂದನಂದು         || ೨೧೪ ||

ಭಾಮಿನಿ
ಕಾಡಿನೊಳಗಿಂತವನು ಬೇಟೆಯ |
ನಾಡುತೈತಂದೆಲ್ಲರಿಂದೊಡ |
ಗೂಡಿ ಬರುತಿರೆ ದೂರದಲಿ ಮರದೆಡೆಯೊಳಾತನಿಗೆ ||
ನಾಡೆ ಕಾಣಿಸಿತೊಂದು ಮೃಗದ ನಿ |
ಗೂಢ ಕರ್ಣದ್ವಯ ವದಕೆ ಗುರಿ |
ಮಾಡಿ ಶಬರೇಶ್ವರನು ಮುಸಲಾಸ್ತ್ರವನು ತೆಗೆದೆಚ್ಚ      || ೨೧೫ ||

ಒಡನೆ ಹಾ ಹಾ ಎಂಬ ನಾದವು |
ಬಡಿಯಿತಾತನ ಕರ್ಣವನು ನೆರೆ |
ನಡುಗುತವನಾ ದನಿಯು ಕೇಳಿಸಿದೆಡೆಗೆ ನಡೆತಂದು |
ಬಿಡದೆ ನೋಡಲು ಬಿದ್ದು ಹೊರಳುವ |
ಜಡಜನೇತ್ರನ ಕಂಡು ಪಾದಕೆ |
ಪೊಡಮಡುತೆ ಹಲವಂದದಲಿ ಹಲುಬಿದನು ಹಲುಗಿರಿದು           || ೨೧೬ ||

ರಾಗ ನೀಲಾಂಬರಿ ರೂಪಕತಾಳ
ಹರನೇ ನಾ ನಿಂತರಿಯದೆ | ಹರಿಯಂ ಘಾತಿಸಿದೆನೊ ಹಾ |
ದುರಿತವು ಬಂದೊದಗಿತೆ ಪರಿ | ಹರಿಸುವರಾರಿದನು    || ೨೧೭ ||

ಧರೆಯವರೆನ್ನೀ ಕೃತ್ಯವ | ನರಿತೊಡೆ ಬಳಿಕೇನೆಂಬರೊ |
ಪರದೊಳು ನರಕವು ದೊರಕುತೆ | ನರಳುವ ಗತಿಯಾಯ್ತೆ         || ೨೧೮ ||

ಹೇಗೀ ಪಾಪವ ನೀಗುತ | ಸಾಗಲಿ ಸದ್ಗತಿಗಯ್ಯೋ |
ಸಾಗರ ಶಯನನೆ ನೀನು ಸ | ರಾಗದೆ ಪೊರೆ ಎನ್ನ      || ೨೧೯ ||

ಭಾಮಿನಿ
ಎಂದು ಹಲವಂದದಲಿ ಹಲುಬುವ |
ಮಂದಮತಿ ಶಬರನನು ಕಾಣುತೆ |
ಮಂದರೋದ್ಧಾರಕನು ನುಡಿದನು ಬೆದರದಿರು ನಿನಗೆ ||
ಮುಂದೆ ಪಾಪವು ಸೇರದಲ್ಲದೆ |
ನಿಂದೆ ಹೊದ್ದದು ಬೆದರದಿರು ನಡೆ |
ಎಂದವನ ಕಳುಹುತ್ತೆ ತರು ಮೂಲದೊಳು ಮಲಗಿರ್ದ || ೨೨೦ ||