ರಾಗ ಮುಖಾರಿ ಏಕತಾಳ
ಇವಳು ತನ್ನಿನಿಯನ ಕೊಂದು | ಮಕ್ಕಳನೆಲ್ಲ |
ಜವನೆಡಗಟ್ಟುತೆ ನಿಂದು ||
ಜವದಿಂದುಪಪತಿ | ಭವನವ ಸೇರುತೆ |
ಭುವನದೊಳನ್ಯಾ | ಯವ ನೆಸಗುತಲ |
ತ್ಯವಿನಯಯುತೆಯಹ | ಯುವತಿಯೆನಲು ತ |
ನ್ನವರನು ನೋಡುತೆ | ರವಿಸುತನೆಂದನು     || ೩೩೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಿಡದಿರೀಕೆಯನೀಗ ಬಂಧಿಸಿ | ಪಿಡಿದು ತಪ್ತ ಮಹಾಕಟಾಹಕೆ |
ಕೆಡಹಿರೆನೆ ನೂಕಿದರು ಚಾರರು | ತಡೆಯದಂದು         || ೩೩೧ ||

ಮೂರನೆಯ ಧೂರ್ತನನು ಬರಿಸುತೆ | ತೋರಿಸೆನಗೊಂದೊರೆದ ಸೂರ್ಯ ಕು |
ಮಾರಕಗೆ ಕರಣಿಕನು ತೋರಿ ವಿ | ಚಾರ ಒರೆದ         || ೩೩೨ ||

ರಾಗ ಮುಖಾರಿ ಏಕತಾಳ
ಧರಣಿಯೊಳಿವನನ್ಯಾಯವನು | ಗೆಯ್ದಿಹ ವೈಶ್ಯ |
ವರನೆಂದೆನುವ ವಿಖ್ಯಾತಿಯನು ||
ಧರಿಸುತ ಧರ್ಮದ | ಪರಮಾವಧಿಯನು |
ನಿರತವು ಪೊಂದುತೆ | ನರರನು ಸೋಲಿಸಿ |
ಸಿರಿಯನ್ನಾರ್ಜಿಸಿ | ಮೆರೆದಿರುವತಿ ನಿ |
ಷ್ಕರುಣಿಯ ನೋಡೆನೆ ತರಣಿಜನೊರೆದನು    || ೩೩೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಈತನನು ಬಡಿಬಡಿದು ಬಳಿಕಾ | ಶಾತಕುಂಭದ ಶೂಲಕಿಕ್ಕೆನೆ |
ದೂತರಂತೆಯೆ ಗೆಯ್ದರತಿ ನಿ | ರ್ಭೀತಿಯಿಂದ || ೩೩೪ ||

ಬಳಿಕ ನಾಲ್ಕನೆಯಾತನನು ಪಿಡಿ | ದೆಳೆದು ತಾರೆಂದೆನುವ ವೇಳೆಯೊ |
ಳೊಳಗೆ ಬಂದೆರಗಿದನು ಯಮಜನು | ಘಳಿಲನಾಗ     || ೩೩೫ ||

ಒಡನೆ ಯಮನಾತ್ಮಜನ ಪರಸುತೆ | ನುಡಿದನೆಲೆ ನಂದನನೆ ನೀನೆ |
ನ್ನೆಡೆಗೆ ಬಂದುದರಿಂದ ತೋಷವ | ಪಡೆದೆ ನಾನು       || ೩೩೬ ||

ಏತಕಿಲ್ಲಿಗೆ ಬಂದು ನೀನತಿ | ಕಾತರದೊಳಿರುತಿರ್ಪೆ ಪೇಳೆನೆ |
ಸಾತಿಶಯದಿಂದೆರಗಿ ನುಡಿದನ | ಜಾತವೈರಿ || ೩೩೭ ||

ರಾಗ ಸಾಂಗತ್ಯ ರೂಪಕತಾಳ
ಪಿತನೆ ಕೇಳೆನ್ನನೀ ನಾಕಕ್ಕೆ ಕರೆದುಕೊಂ | ಡತಿಶಯದಿಂ ಬರ್ಪ ವೇಳೆ ||
ಚಿತೆಯಿವ ನರಕದ ಹಾದಿಯಿಂದಲೆ ಸುರ | ಪತಿ ಬರಿಸಿದನೇಕೊ ತಿಳಿಯೆ || ೩೩೮ ||

ಅದನರಿಯುವ ಬಯಕೆಯೊಳಿಲ್ಲಿಗೈತಂದೆ | ನಿದನೆನಗರುಹುತೀ ಕ್ಷಣವೇ ||
ಮುದವೀಯಬೇಕೆಂದು ಮಣಿದ ನಂದನನಿಗೆ | ಸದಮಲ ಯಮನುಸುರಿದನು        || ೩೩೯ ||

ತರಳನೆ ನೀನಂದು ಭಾರತಾಹವದೊಳು | ಗುರುಕುಂಭ ಸಂಭವನನ್ನು ||
ತರಿವ ವೇಳೆಯೊಳರಿಯದೆ ಸುಳ್ಳನೊಂದನು | ನೆರೆಯೊರೆದುದರಿಂದ ಹೀಗೆ          || ೩೪೦ ||

ನರಕ ದರ್ಶನವಾಗಿ ನಿಷ್ಪಾಪಿಯೆನಿಸಿದೆ | ತೆರಳಿನ್ನು ನಾಕಲೋಕಕ್ಕೆ ||
ಸುರರಲ್ಲಿ ನಿನ್ನನು ಸುಸ್ವಾಗತಿಸುವರು | ಸುರಪನು ಸನ್ಮಾನಿಸುವನು       || ೩೪೧ ||

ಸುರಧರ್ಮ ಪೀಠವು ನಿನಗೆ ಸುಸ್ಥಿರವಾಗಿ | ದೊರಕುತೆ ಸುಖದಿಂದ ನೀನು ||
ಮೆರೆದಲ್ಲಿ ಬಾಳೆಂದು ಪರಸುತ್ತೆ ಯಮನಂದು | ತರಳನ ಕಳುಹಿದನಾಗ  || ೩೪೨ ||

ವಾರ್ಧಕ
ಸುರದೂತನೊಡನೆ ಪೊರಟಲ್ಲಿಂದೆ ಧರ್ಮಜಂ |
ವರವಿಮಾನವನೇರಿ ಶೈಮಿನೀ ನಗರಮಂ |
ನೆರೆನೋಡಿದಾ ಬಳಿಕ ಮುಂಬರಿದು ಬಂದು ಬಳಿಕುಳಿದ  ದಿಕ್ಪತಿಗಳಿಗಿರ್ಪ ||
ವರಮಹಾನಗರಂಗಳೆಲ್ಲಮಂ ಪರಿಕಿಸುತೆ |
ಪರಿತೋಷವಾಂತೆಯ್ದೆ ತೆರಳಿ ಮತ್ತಲ್ಲಿಂದೆ |
ಸುರಪತಿಯ ಭವನದೆಡೆಗಾಗಿ ಬರುತಿರ್ದನಂದಧಿಕ ಸಂತೋಷದಿಂದೆ     || ೩೪೩ ||

ಅಂಕ ೧೮.  ಸುಧರ್ಮಸಭೆಯ ಸನ್ಮಾನ ಸಮಾರಂಭ

ರಾಗ ಕಾಂಭೋಜಿ ಝಂಪೆತಾಳ
ಒಂದು ದಿನ ಸುರಪತಿಯು ಸಕಲ ನಿರ್ಜರಗರುಡ |
ಗಂಧರ್ವಮುಖ್ಯರಂ ಬರಿಸಿ ||
ಚಂದದಿಂದೋಲಗವನಿತ್ತಿರಲು ಸಭಿಕರೈ |
ತಂದು ಕುಳ್ಳಿರ್ದರಂದಲ್ಲಿ    || ೩೪೪ ||

ವರುಣ ವಾಯು ಕುಬೇರ ಮುಖ್ಯದಿಕ್ಪತಿಗಳತಿ |
ಸರಸದಿಂ ಬಂದು ನೆರೆದಿರಲು ||
ಪರಮಕವಿಗಮಕಿಗಾಯಕನರ್ತಕಿಯರು ಬಂ |
ದುರೆ ವಿರಾಜಿಸುತಿರ್ದರಲ್ಲಿ  || ೩೪೫ ||

ವರರಂಭೆಮೇನಕೆತಿಲೋತ್ತಮೆಯರೈತಂದು |
ಭರದಿಂದೆ ನರ್ತನವ ಗೆಯ್ಯೆ ||
ಸುರವಂದಿಮಾಗಧರು ಹರುಷದಿಂದೆಡಬಲದೊ |
ಳಿರುತೆ ಸುರಪತಿಯ ಪೊಗಳಿದರು   || ೩೪೬ ||

ಆಗಳಾ ಸಭೆಗೋರ್ವ ದೂತನೈತಂದು ಶಿರ |
ಬಾಗಿ ಸುರಪತಿಯಡಿಗೆ ಮಣಿದು ||
ಬೇಗನೆ ಬಿನ್ನವಿಸಿದನು ವಿನಯದಿಂದೆ ಸರಿ |
ಯಾಗಿ ಸರ್ವರು ಕೇಳುವಂತೆ          || ೩೪೭ ||

ರಾಗ ಸಾರಂಗ ಅಷ್ಟತಾಳ
ಅವಧರಿಸೆನ್ನೊಡೆಯ | ವಂದಿಸಿ ನಾನು | ವಿವರಿಸುವೀ ವಿಷಯ ||
ದಿವದ ಬಾಗಿಲಿನೊಳು | ಸವಿನಯದಿಂದೆ ನಿ |
ನ್ನವಸರದಾಜ್ಞೆಯ | ತವೆ ಪಾಲಿಸುತಲಿರ್ದೆ    || ೩೪೮ ||

ಆ ವೇಳೆಯೊಳು ಬಂತಯ್ಯ | ಧರ್ಮಜನಿರು | ವಾ ವಿಮಾನವು ಹೇ ಜೀಯ ||
ನಾವೀಗ ಪೋಗುತೆ | ಸಾವಧಾನದೆ ಬಂದ |
ಕೋವಿದ ಯಮಜನ | ನೋಡಿ ಸ್ವಾಗತಿಪುದು || ೩೪೯ ||

ಭಾಮಿನಿ
ಎಂದೊರೆದ ಚಾರಕನ ನುಡಿಯನು |
ಚಂದದಿಂದಾಲಿಸಿದ ಮಘವನು |
ವೃಂದ ವೃಂದಾರಕರ ನೆರಹುತೆ ವೈಭವದೊಳಂದು ||
ಬಂದು ಯಮತನಯನನು ಬಹು ಮುದ |
ದಿಂದೆ ಸತ್ಕರಿಸುತ್ತೆ ಶೋಭಿಸು |
ವಂದಣವನೇರಿಸುತೆ ಮೆರವಣಿಗೆಯಲಿ ಕರೆತಂದ        || ೩೫೦ ||

ರಾಗ ಸಾಂಗತ್ಯ ರೂಪಕತಾಳ
ಕರೆತಂದು ಮತ್ತೆ ಸುಪೀಠದೊಳವನ ನಾ |
ದರದಿಂದೆ ಕುಳ್ಳಿರಿಸುತ್ತೆ ||
ಸುರಪನು ಸಭೆಯೊಳು ಸೇರಿದ ಸರ್ವರೊ |
ಳೊರೆದನು ಸಂತೋಷದಿಂದೆ         || ೩೫೧ ||

ಸುರರೆಲ್ಲ ಕೇಳಿರೀ ಧರ್ಮಸಂಜಾತನು |
ವರಶಶಿವಂಶದೊಳುದಿಸಿ ||
ಪರಮ ಧಾರ್ಮಿಕ ಸತ್ಯಸಂಧನೆಂದೆನಿಸುತ್ತೆ |
ಪರಮಾತ್ಮ ಭಕ್ತನಾಗಿಹನು || ೩೫೨ ||

ಧರೆಯೊಳೀವರೆಗಿವನನೃತವನೊರೆಯದ |
ವರ ನೃಪನೆಂದೆನಿಸುತ್ತೆ ||
ಮೆರೆದುದಲ್ಲದಜಾತಶತ್ರುವೆಂದೆನಿಸುತು |
ರ್ವರೆಯೊಳು ಬಾಳಿದ ಮಹಿಮ       || ೩೫೩ ||

ಆದಕಾರಣ ನಾನು ಸುರ ವಿಮಾನವನು ಮ |
ತ್ತಾದರದೊಳು ಕಳುಹುತ್ತೆ ||
ಮೋದದಿಂದಿಲ್ಲಿಗೆ ಬರಿಸುತೀ ದಿನ ನಮ್ಮ |
ವೇದಿಕೆಯೊಳು ಕುಳ್ಳಿರಿಸಿದೆ            || ೩೫೪ ||

ಧರೆಯೊಳು ಸಾಯದಿಲ್ಲಿಗೆ ದೇಹ ಸಹಿತಿಂತು |
ಬರುವ ಯೋಗ್ಯತೆಯನು ಪಡೆದ ||
ಪರಮ ಪುಣ್ಯಾತ್ಮರೀವರೆಗಿಲ್ಲದುದರಿಂದೆ |
ಕರೆತಂದು ಗೌರವಿಸಿದೆನು  || ೩೫೫ ||

ಇನ್ನೀತನಿಗೆ ನಮ್ಮ ಧರ್ಮಾಧಿಕಾರದ |
ಸನ್ನುತ ಪಟ್ಟವ ಕಟ್ಟಿ |
ಮನ್ನಿಸಿ ನಾಕದತ್ಯುನ್ನತ ಸುಸ್ಥಾನ |
ವನ್ನೀವೆನೀಗ ನಾನೊಲಿದು || ೩೫೬ ||

ಇಂತೊರೆಯುತೆ ಧರ್ಮಪೀಠದೊಳಾತನ |
ನಂತರಿಸದೆ ಕುಳ್ಳಿರಿಸುತೆ ||
ಸಂತಸದೊಳು ಸುರಸುದತಿಯರಿಂದೆ ಸ |
ಮಂತಾರತಿಯ ಬೆಳಗಿಸಿದ            || ೩೫೭ ||

ಸುರದುಂದುಭಿಯು ಮೊಳಗಿತು ಸುಮವರ್ಷವು |
ಸುರಿಯಿತು ಸುರರೆಲ್ಲರಾಗ ||
ಕರವೆತ್ತಿ ಜಯ ಜಯವೆನಲು ನಾರಿಯರೆತ್ತಿ |
ದರು ಮಂಗಲಾರತಿಯನ್ನು || ೩೫೮ ||

ವಾರ್ಧಕ
ಆಗವನ ಸತಿ ಸೋದರರ್ಕಳೈತಂದವಗೆ |
ಬಾಗಿ ವಂದಿಸಲವರ ಮನ್ನಿಸುತೆ ಬಳಿಕ ಶತ |
ಯಾಗಮಂಗೆಯ್ದ ದೇವೇಂದ್ರನಾಸ್ಥಾನದೊಳು ಧರ್ಮಾಧಿಕಾರಿಯೆನಿಸಿ ||
ನಾಗಸುರಗರುಡ ಗಂಧರ್ವರಿಂದನುದಿನ ಸ |
ರಾಗದಿಂ ಸೇವೆಯಂ ಸ್ವೀಕರಿಸಿ ಬಳಿಕ ಸುಖ |
ಸಾಗರದೊಳೋಲಾಡುತಿರಲಾಯ್ತು ಧರಣಿಯೊಳ್ ಭದ್ರಂ ಶುಭಂ ಮಂಗಲಂ        || ೩೫೯ ||

ಅಂಕ ೧೯.  ಮಂಗಲಾಚರಣೆ

ರಾಗ ಮೋಹನ ಆದಿತಾಳ
ಮಂಗಲಂ ಜಯ ಮಂಗಲಂ || ಪಲ್ಲ ||

ಮಂಗಲ ಮನುಮುನಿಪಾಲನಿಗೆ | ಜಯ |
ಮಂಗಲ ಸುಗುಣ ಸುಶೀಲನಿಗೆ ||
ಮಂಗಲ ವರಗೋಪಾಲನಿಗೆ | ಶುಭ |
ಮಂಗಲ ರಾಕ್ಷಸಕಾಲನಿಗೆ ||
ಮಂಗಲಂ ಜಯ ಮಂಗಲಂ           || ೩೬೦ ||

ಮಂಗಲ ದುರಿತ ನಿವಾರಕಗೆ | ಜಯ |
ಮಂಗಲ ಭಕ್ತೋದ್ಧಾರಕಗೆ ||
ಮಂಗಲ ಭಯ ಪರಿಹಾರಕಗೇ | ಶುಭ |
ಮಂಗಲ ಮಧುಸಂಹಾರಕಗೆ ||
ಮಂಗಲಂ ಜಯ ಮಂಗಲಂ           || ೩೬೧ ||

ಮಂಗಲ ನಂದನ ಕಂದನಿಗೆ | ಜಯ |
ಮಂಗಲ ಭಕ್ತಾನಂದನಿಗೆ ||
ಮಂಗಲ ಸುಗುಣ ಮುಕುಂದನಿಗೆ || ಶುಭ |
ಮಂಗಲ ಜಯ ಗೋವಿಂದನಿಗೆ | ಮಂಗಲಂ ಜಯ ಮಂಗಲಂ   || ೩೬೨ ||

ಯಕ್ಷಗಾನ ಶ್ರೀಕೃಷ್ಣಪರಂಧಾಮ ಮುಗಿದುದು