ವಾರ್ಧಕ
ಹರಿ ಪೋದ ಮೇಲೆ ನಾವಿಲ್ಲಿರ್ಪುದನುಚಿತವು |
ತರಳನೆನಿಸಿದ ಪರೀಕ್ಷಿತಗೆ ಪಟ್ಟವ ಕಟ್ಟಿ |
ಸುರಲೋಕದೆಡೆಗೆ ತೆರಳುವುದುಚಿತವೆಂದೊರೆದು ಬಳಿಕ ತರಳನ ಬರಿಸುತೆ ||
ವರಸಿಂಹವಿಷ್ಟರದೊಳವನ ಕುಳ್ಳಿರಿಸುತ್ತೆ |
ನೆರೆದ ಯಾಚಕ ಜನಕೆ ಧನಕನಕಗಳನಿತ್ತು |
ಭರದಿಂದೆ ಪೊರಟನಾ ಧರ್ಮಜಂ ಸತಿ ಸಹೋದರ ಸಹಿತನಾಗಿ ಮತ್ತೆ    || ೨೮೪ ||
ಇದನರಿತು ಪುರಜನರು ಬಂದಾ ಯುಧಿಷ್ಠಿರನ |
ಪದಕೆರಗಿ ಕಂಬನಿಗಳಂ ಸುರಿಸಿ ಮರುಗುತಿರೆ |
ವಿಧವಿಧದೊಳವರ ಮನ್ನಿಸಿ ಸಮಾಧಾನಮಂ ಗೆಯ್ದು ಯಮಸುತನು ತನ್ನ ||
ಸುದತಿ ಸಹಜಾತರಿಂದೊಡಗೂಡಿ ಪೋಗುತಿರೆ |
ಬದಿಯೊಳಿರ್ದೊಂದು ಶುನಕಂ ನೆಟ್ಟನವರೊಡನೆ |
ಬೆದರದೇ ಬರುತಿರ್ದುದತಿ ಚೋದ್ಯ ರೀತಿಯಿಂದವರಿಂತು ಮುಂಬರಿದರು            || ೨೮೫ ||

ಅಂಕ ೧೬.  ಪಾಂಡವ ಸ್ವರ್ಗಾಭಿಗಮನ

ರಾಗ ಶಂಕರಾಭರಣ ಮಟ್ಟೆತಾಳ
ನಡೆದರು | ಪಾಂಡವರು ನಾಕದೆಡೆಗಾಗಿ | ನಡೆದರು || ಪಲ್ಲವಿ ||

ಬಿಡದೆ ಪರ್ವತವನ್ನು ಹತ್ತಿ | ಮತ್ತೆ |
ಕಡುಬಿಸಿಲಿನೊಳು ಮುಂದೊತ್ತಿ | ಬೇಗ |
ನಡೆದರು ಬೆದರದೆ ಬಹುದೂರ ಪರ್ಯಂತ |
ತಡೆಯದೆ ಬಳಿಕವರತ್ತಿತ್ತ ಸುತ್ತಿ || ಅನುಪಲ್ಲವಿ ||

ಸರದಿಯೊಳ್ ಮೊದಲು ಧರ್ಮಜನು | ಮತ್ತಿ |
ನ್ನೆರಡನೆಯವನು ವಾಯುಜನು | ಇಂದ್ರ |
ತರಳನು ಮೂರನೆಯವನು | ವೀರ |
ವರನಕುಲನು ಮತ್ತಿನವನು | ಐದ |
ರುರುತರ ಸುಸ್ಥಾನದೊಳು ಸಹದೇವನು |
ತೆರಳೆ ದ್ರೌಪದಿ ಹಿಂದೆ ಬಳಿಕ ಶುನಕನು       || ೨೮೬ ||

ರಾಗ ಸಾಂಗತ್ಯ ರೂಪಕತಾಳ
ಇಂತವರೈದೆ ಮುಂಬರಿದು ಪೋಗುತ್ತಿರೆ |
ಕಾಂತೆ ದ್ರೌಪದಿ ಧರೆಗೊರಗೆ ||
ಚಿಂತೆಯಿಂ ಸಹದೇವನಿದನಣ್ಣನೊಳು ಪೇಳು |
ತಿಂತೇಕಾಯ್ತೆಂದು ಕೇಳಿದನು         || ೨೮೭ ||

ರಾಗ ಭೈರವಿ ಝಂಪೆತಾಳ
ಅದಕೆ ಧರ್ಮಜನೆಂದನಿವಳು ಮದುವೆಯ ದಿವಸ |
ಮೊದಲಧಮ ಕರ್ಣನಂ ಕಂಡು ಕಡೆಗಣ್ಣ ||
ತುದಿಯೊಳೀಕ್ಷಿಸುತೊಮ್ಮೆ ಬಯಸಿದುದರಿಂದೆ ಹೀ |
ಗೊದಗಿತಿದನೆಣಿಸದೇ ನಡೆದು ಬಾ ಮುಂದೆ   || ೨೮೮ ||

ರಾಗ ಸಾಂಗತ್ಯ ರೂಪಕತಾಳ
ಮತ್ತವರಂದು ಮುಂಬರಿಯಲು ಸಹದೇವ | ಸತ್ತಿಳೆಗಾಗಿ ಬೀಳಲ್ಕೆ ||
ಕತ್ತೆತ್ತಿ ನೋಡಿದ ನಕುಲನಣ್ಣಂಗೊರೆಯುತ್ತೆ ಕೇಳಿದನು ಕಾರಣವ            || ೨೮೯ ||

ರಾಗ ಭೈರವಿ ಝಂಪೆತಾಳ
ಆಗ ಧರ್ಮಜನೆಂದನಿವನಧಿಕ ಸುeನಿ |
ಯಾಗಿ ತಾನರಿತ ವಿಷಯವನಿತರ ಜನಕೆ ||
ಬೇಗನರುಹದೆ ಮುಚ್ಚಿ ಬಚ್ಚಿಟ್ಟ ಕಾರಣದೊ |
ಳೀಗಳೀಗತಿಯಾಯ್ತು ನೀನು ನಡೆ ಮುಂದೆ   || ೨೯೦ ||

ರಾಗ ಸಾಂಗತ್ಯ ರೂಪಕತಾಳ
ಬಳಿಕವರಂದು ಮುಂದೈತರೆ ನಕುಲನು | ಘಳಿಲನೆ ಬೀಳಲು ನರನು ||
ತಳುವದಣ್ಣಂಗಿದನರುಹಲ್ಕೆ ಯೋಚಿಸು | ತಿಳೆಯಧಿಪತಿಯುಸುರಿದನು    || ೨೯೧ ||

ರಾಗ ಭೈರವಿ ಝಂಪೆತಾಳ
ಇವನು ಕೌಂತೇಯ ಮಾದ್ರೇಯರೆಂದೆಂಬ ಭೇ |
ದವನು ನಮ್ಮೊಳಗೆ ಭಾವಿಸಿದನೆಳ್ಳನಿತು ||
ಸವನಿಸಿತ್ತಿದರಿಂದೆ ಫಲವಿನಿತು ನೀನೀಗ |
ಳವಿಚಲಿತ ಚಿತ್ತನಾಗದೆ ನಡೆಯೊ ಮುಂದೆ     || ೨೯೨ ||

ರಾಗ ಸಾಂಗತ್ಯ ರೂಪಕತಾಳ
ಅಂದದನವರು ಯೋಚಿಸದೆ ಮುಂಬರಿಯಲು | ನೊಂದು ಪಾರ್ಥನು ಧರೆಗುರಳೆ ||
ಗಂಧವಾಹಾತ್ಮಜನಿದನಣ್ಣಗೊರೆಯಲಾ | ಗೆಂದನು ಧರ್ಮಾತ್ಮ ಜಾತ     || ೨೯೩ ||

ರಾಗ ಭೈರವಿ ಝಂಪೆತಾಳ
ಧರೆಯೊಳೆನ್ನನು ಗೆಲುವ ವೀರರಿಲ್ಲೆಂಬ ದು |
ರ್ಧರದ ದುರಹಂಕಾರದಿಂದೆ ಕೊನೆಗಿವನು ||
ಭರದಿಂದೆ ಬಿದ್ದನಿದನೆಣಿಸದೇ ಮುಂದೆ ನಡೆ |
ಹರಿಯ ಪಾದವನು ಭಕ್ತಿಯೊಳು ನೆನೆಯುತ್ತೆ   || ೨೯೪ ||

ರಾಗ ನಾದನಾಮಕ್ರಿಯೆ ಏಕತಾಳ
ಏತಕಿಂತು ಬಿದ್ದೆಯಯ್ಯೊ ತಮ್ಮ ತಮ್ಮಾ | ನಿನ್ನ |
ರೀತಿಯಿಂದು ತಿಳಿಯದಾಯ್ತು ತಮ್ಮ ತಮ್ಮಾ ||
ನೀತಿ ತಪ್ಪದವನು ನೀನು ತಮ್ಮ ತಮ್ಮಾ | ಹೀಗೆ |
ಮಾತನಾಡದಿರ್ಪುದೇಕೆ ತಮ್ಮ ತಮ್ಮಾ        || ೨೯೫ ||

ಮೊದಲು ಜನಿಸಿದವನು ನಾನು ತಮ್ಮ ತಮ್ಮಾ | ಜಗದೊ
ಳುದಿಸಿದವನು ಮತ್ತೆ ನೀನು ತಮ್ಮ ತಮ್ಮಾ ||
ಬದಲಿ ಹೋಯ್ತು ಮರಣದಲ್ಲಿ ತಮ್ಮ ತಮ್ಮಾ | ನಿನ್ನೊ |
ಳಿದಕೆ ಕಾರಣವನು ಕೇಳ್ವೆ ತಮ್ಮ ತಮ್ಮಾ      || ೨೯೬ ||

ಬಿಟ್ಟು ಪೋದುದೇತಕೆಂದು ತಮ್ಮ ತಮ್ಮಾ | ಪೇಳು |
ನೆಟ್ಟನೀಗಳೆನ್ನ ಕೂಡೆ ತಮ್ಮ ತಮ್ಮಾ ||
ಕೆಟ್ಟು ಹೋದೆನಯ್ಯೊ ನಾನು ತಮ್ಮ ತಮ್ಮಾ | ಕೈಯ |
ತಟ್ಟಿ ನಗುವರನ್ಯರೆನ್ನ ತಮ್ಮ ತಮ್ಮಾ           || ೨೯೭ ||

ವಾರ್ಧಕ
ಅಂದು ಲಾಕ್ಷಾಗೇಹದುರಿಯಿಂದೆ ತಪ್ಪಿಸುತೆ |
ಮಂದಮತಿಯೆನಿಸಿದ ಹಿಡಿಂಬನಂ ತರಿದು ಭರ |
ದಿಂದೆ ಬಕ ಕಿಮ್ಮಿರ ಮಾಗಧಾದ್ಯರನಿಕ್ಕಿ ದುಷ್ಟ ಕೀಚಕ ಮುಖ್ಯರ ||
ಕೊಂದಿಕ್ಕಿ ಕೌರವರನೆಲ್ಲರಂ ಯಮನ ನಿಜ |
ಮಂದಿರಕೆ ಕಳುಹುತ್ತೆ ನಮ್ಮನುರೆ ಪೊರೆದಾತ್ಮ |
ಬಂಧುವೆನಿಸಿದ ನಿನ್ನನೆಂದಿಗುಂ ತೊರೆಯೆನೆಂದಳುತೆ ಮೂರ್ಛಿತನಾದನು           || ೨೯೮ ||

ಭಾಮಿನಿ
ಒಡನೆ ಸಿದ್ಧನೆನಿಪ್ಪ ಕೃಷಿಕನು |
ತಡೆಯದಲ್ಲಿಗೆ ಬಂದು ತುಲಸಿಯ |
ಗಿಡವನೊಂದನು ತಂದು ಬುಡಮೇಲಾಗಿ ಮಾಡುತ್ತೆ ||
ಕಡೆಗೆ ಸೈಕತ ರಾಶಿಯೊಳು ನೆರೆ |
ನೆಡುತೆ ಶತರಂಧ್ರಂಗಳಿರ್ಪಾ |
ಕೊಡವ ಕೈಯೊಳು ಪಿಡಿದು ನೀರೆರೆಯುತ್ತಲಿರುತಿರ್ದ   || ೨೯೯ ||

ರಾಗ ಸಾಂಗತ್ಯ ರೂಪಕತಾಳ
ಆಗ ಧರ್ಮಜನು ಬಿದ್ದಲ್ಲಿಂದ ಮೇಲೆದ್ದು | ಬೇಗನಾತನನೀಕ್ಷಿಸುತ್ತೆ ||
ಹೀಗೇಕೆ ಮಾಡುವೆ ಬರಿದಿಂತು ದುಡಿದರೆ | ಹೇಗಯ್ಯ ಸಫಲನೆಂದೆನಿಪೆ   || ೩೦೦ ||

ಎಂದ ಮಾತನು ಕೇಳಿ ಸಿದ್ಧನು ನಿನ್ನೊಳು | ಹೊಂದಿದೆ ಗಜಗಾತ್ರದೋಷ ||
ಇಂದೆನ್ನೊಳಿಹ ದೋಷವಜಗಾತ್ರವೆನಲೆನ್ನ | ಕುಂದನೊರೆಯೆ ನೀನಯೋಗ್ಯ         || ೩೦೧ ||

ಎನೆ ಧರ್ಮಜನು ಪೇಳಿದನು ನೀನು ನುಡಿದಂಥ | ಘನದೋಷವೆನ್ನೊಳೇನಿಹುದು |
ಮನದೊಲವಿಂದೆ ಪೇಳೆನೆ ಸಿದ್ಧನೆಂದನು | ನಿನಗರಿಯದೊಡೆ ಪೇಳುವೆನು           || ೩೦೨ ||

ಸತ್ತು ಹೋದವರ ಸಮಿಪದೊಳ್ ಕುಳಿತು ನಾ | ವತ್ತೊಡೆ ಫಲವೇನು ಬರಿದೇ ||
ಹೊತ್ತು  ಹಾಳಪ್ಪುದಲ್ಲದೆ ಬದುಕುವುದೆಂತು | ಮತ್ತೆನೆ ಯಮಜ ಯೋಚಿಸುತೆ       || ೩೦೩ ||

ಇದು ಸರಿಯಹುದು ನಾನಿದನು ಯೋಚಿಸದಿಂದು | ಹದಗೆಟ್ಟು ಹಾದಿತಪ್ಪಿದೆನು ||
ಮದನನಯ್ಯನೆ ಬಂದೀ ರೂಪದಿಂದೆನ್ನ ತಿ | ದ್ದಿದನೆಂದು ಭಾವಿಪೆನಿಂದು  || ೩೦೪ ||

ಅನಿಲನಂದನನು ಮುಂಗೋಪಿಯಾಗಿರ್ದು ಮೇ | ದಿನಿಯೊಳು ಮೆರೆದುದರಿಂದೆ ||
ಕೊನೆಗಾಲದಲ್ಲಿಂತು ಮಡಿದನೆಂದೆಣಿಸುತೆ | ಮನದ ಬೇಸರವ ನೀಗಿದನು            || ೩೦೫ ||

ವಾರ್ಧಕ
ಮತ್ತೆ ಯಮನಂದನನು ಸಿದ್ಧನಂ ನೆರೆ ಮನ್ನಿ |
ಸುತ್ತೆ ಶುನಕನ ಸಹಿತ ಮುಂಬರಿಯುತಿರಲು ದಿವ |
ದತ್ತಣಿಂದೊಂದು ದಿವ್ಯ ವಿಮಾನವೈತಂದುದದರಿಂದೆ ಸುರದೂತನು ||
ಚಿತ್ತಶುದ್ಧಿಯೊಳಿಳಿದು ಬಂದು ಯಮಜಂಗೆ ಮಣಿ |
ಯುತ್ತೆ ನಿಂದಿರಲವನ ಕೂಡೆ ಧರ್ಮಜನು ನೀ |
ನಿತ್ತ ಬಂದುದಕೇನು ಕಾರಣವೆನಲ್ಕೆ ಸುರದೂತನವನೊಡನೆಂದನು        || ೩೦೬ ||

ರಾಗ ಸುರುಟಿ ಏಕತಾಳ
ಅವಧರಿಸಿಳೆಯೊಡೆಯ | ವಿಷಯವ | ವಿವರಿಸುವೆನು ಜೀಯ ||
ದಿವದರಸನು ಕೊ | ಟ್ಟವಸರದಾಜ್ಞೆಯ |
ತವೆ ಪಾಲಿಸಲೀ | ಭುವಿಗೈತಂದೆನು || ೩೦೭ ||

ಮಾನನಿಧಿಯೆ ನೀನು | ಈಗ ವಿ | ಮಾನವನೇರ್ದಿನ್ನು ||
ಸಾನಂದದೆ ಬಂ | ದಾ ನಾಕದೆ ಸು |
ಮ್ಮಾನದೊಳಿರು ದು | ಮ್ಮಾನವ ತೊರೆಯುತೆ           || ೩೦೮ ||

ಎನೆ ಧರ್ಮಜನಾಗ | ಯೋಚಿಸಿ | ವಿನಯದೆ ಬಲುಬೇಗ ||
ಶುನಕಸಹಿತ ನಾ | ನನಿಮಿಷ ನಗರಕೆ |
ಮನದೊಲವಿಂ ಬ | ರ್ಪೆನು ನಿನ್ನೊಡನೆಯೆ    || ೩೦೯ ||

ಎನಲಾ ಸುರಚರನು | ಬೇಡೈ | ಶುನಕನ ಬಿಡು ನೀನು ||
ಮನದೊಲವಿಂದೊ | ರ್ವನೆ ಬಾ ಸುರಪತಿ |
ಯನು ಕಾಣಲು ನಿನ | ಗನುಮತಿ ಇಹುದೈ    || ೩೧೦ ||

ವಾರ್ಧಕ
ಅದಕೆ ಧರ್ಮಜನೆಂದನೆನ್ನನೀವರೆಗೆ ಬಿಡ |
ದಧಿಕ ಸುಪ್ರೀತಿಯಿಂದನುಸರಿಸಿ ಬಂದಿರ್ಪ |
ಮುದಿ ನಾಯಿಯಂ ಬಿಟ್ಟು ಬರಲಾರೆನೆಂದವಂ ಮುಂದೆ ನಡೆಯಲು ಶುನಕನು ||
ಮುದದಿಂದೆ ಧರ್ಮಪುರುಷನ ರೂಪಮಂ ಧರಿಸು |
ತಿದಿರು ಬಂದೆಲೆ ಮಗನೆ ಮೆಚ್ಚಿದೆನು ಪೋಗೀಗ |
ಳಿದು ನಿನ್ನನೈದೆ ಪರಿಕಿಸಲು ಗೆಯ್ದಿಹ ಕೃತ್ಯವೆಂದು ಮರೆಯಾದನಂದು     || ೩೧೧ ||

ಭಾಮಿನಿ
ಮತ್ತೆ ಸುರಚರನೊಡನೆ ಯಮಸುತ |
ನುತ್ತಮಾಂಬರಯಾನವನು ನೆರೆ |
ಹತ್ತಿ ಮುಂಬರಿಯುತ್ತೆ ಮೊದಲಾ ಶೈಮಿನೀಶ್ವರನ ||
ಪತ್ತನಕೆ ಪೋಗುತ್ತೆ ನರಕದ |
ಹತ್ತಿರವೆ ನಡೆತರಲು ನೆರೆ ಹೇ |
ಸುತ್ತೆ ಸುರದೂತನೊಳು ಯಮನಂದನನು ಪೇಳಿದನು            || ೩೧೨ ||

ದ್ವಿಪದಿ
ಸುರಸೂತ ನೀನೇತಕೀದಾರಿಯಿಂದ |
ಕರೆತಂದುದೆಂದೊರೆಯೊ ಬೇಗ ದಯೆಯಿಂದ || ೩೧೩ ||

ನರಕಲೋಕದ ದೃಶ್ಯವನು ನೋಡಲಾರೆ |
ಕರಗುತಿದೆ ಹೃದಯವೆನ್ನದು ತಾಳಲಾರೆ       || ೩೧೪ ||

ಆವ ಪಾಪವನೆಸಗಿದೆನೊ ನೋಡಲಿದನು |
ಸಾವಧಾನದೊಳೆನ್ನೊಡನೆ ಪೇಳು ನೀನು      || ೩೧೫ ||

ಹಾದಿ ತಪ್ಪಿತೊ ನಿನಗೆ ಮೇಣಲ್ಲದಿನ್ನು |
ಬೇಧವರಿಯೆಯೊ ನಾಕ ನರಕವೆಂಬುದನು    || ೩೧೬ ||

ಈಗ ಪೇಳಿದಕೆ ಕಾರಣವನೆನೆ ಚರನು |
ಬೇಗನುಸುರಿದನೈದೆ ಧರ್ಮಜಂಗದನು        || ೩೧೭ ||

ರಾಗ ಕೇದಾರಗೌಳ ಅಷ್ಟತಾಳ
ಇದಕೆ ಕಾರಣವೆನಗರಿಯದು ಸುರಪನು | ವಿಧಿಸಿದ ಹಾದಿಯಲ್ಲಿ ||
ಮುದದಿಂದ ಕರೆತಂದೆನಿದರ ಕಾರಣವನ್ನು | ಮೊದಲಾಗಿ ತಿಳಿವೊಡೀಗ   || ೩೧೮ ||

ಇಲ್ಲೆ ಶೋಭಿಸುತಿರ್ಪುದಾ ಯಮನರಮನೆ | ಯಲ್ಲಿಗೆ ಪೋಗಿ ನೀನು ||
ಮೆಲ್ಲನಾತನ ಕೂಡೆ ಕೇಳಿದನೆಂದೆನ | ಲುಲ್ಲಾಸದಿಂ ಪೊರಟ     || ೩೧೯ ||

ಕಂದ
ಸುರಸೂತನೊಡನೆ ಯಮಜಂ |
ಭರದಿಂ ನಿಜ ಪೂಜ್ಯ ಪಿತನ ದರ್ಶನಕೆಂದಾ ||
ದರದಿಂ ಬರುತ್ತಿರ್ದಂ ಯಮ |
ಪುರದತಿ ವೈಭವವನೀಕ್ಷಿಸುತ್ತಾ ಪಥದೊಳ್   || ೩೨೦ ||

ಅಂಕ ೧೭.  ಯಮನ ಒಡ್ಡೋಲಗ

ರಾಗ ಭೈರವಿ ಝಂಪೆತಾಳ
ಇತ್ತಲಾ ಶೈಮಿನೀ ಪತ್ತನದೊಳಧಿಕ ಸಂ |
ಪತ್ತಿನಿಂ ದಿನಸುತನು ಚಿತ್ತ ಶುದ್ಧಿಯಲಿ ||
ಮಿತ್ತು ಮಸಣಿಯರ ಕರೆಸುತ್ತೆ ಹರಿಪೀಠವನು |
ಮತ್ತೆ ತಾನೇರುತ್ತಲಿತ್ತನೋಲಗವ    || ೩೨೧ ||

ಜ್ವರಮಹೋನ್ಮಾದ ಭೀಕರ ವಾತ ಕಫ ಭಗಂ |
ದರ ರಕ್ತ ಮೇಹ ದುರ್ಧರಪಿತ್ಥ ಮುಖ್ಯ ||
ವರ ರೋಗನಾಯಕರು ಸರಸದಿಂದಾ ಸಭೆಯೊ |
ಳಿರುತಿರ್ದರತಿ ಭಯಂಕರ ರೂಪಿನಿಂದೆ        || ೩೨೨ ||

ರಾಜ ಯಕ್ಷನು ಸಚಿವ ರಾಜನೆನಿಸುತೆ ಧರ್ಮ |
ರಾಜನೆಡಬದಿಯೊಳು ವಿರಾಜಿಸುತ್ತಿರಲು ||
ಸಾಜದಿಂ ಸೇನೆಗಧಿರಾಜನೆನಿಸುತೆ ಕುಷ್ಟ |
ನೋಜೆಯಿಂದಿರ್ದನತಿತೇಜದಿಂ ಮುಂದೆ      || ೩೨೩ ||

ವಂದಿಮಾಗಧರಾಗ ಬಂದು ಜಯ ಜಯವೆಂದು |
ವಂದಿಸುತೆ ಕೊಂಡಾಡಿ ನಿಂದಿರಲು ಯಮನು ||
ಚಂದದಿಂ ಕರಣಿಕನೊಳೆಂದನು ವಿಶೇಷವೇ |
ನಿಂದಿನದೆನಲ್ಕೊರೆದನಂದದಿಂದವನು          || ೩೨೪ ||

ರಾಗ ಮುಖಾರಿ ಏಕತಾಳ
ತರಣಿ ಸಂಜಾತನೆ ಕೇಳು | ವಂದಿಸುತೀಗ ||
ಳೊರೆವೆನೆಲ್ಲವನು ಕೃಪಾಳು ||
ದುರಿತವನೆಸಗುತೆ | ಧರೆಯೊಳು ಬಾಳಿದ |
ದುರುಳರು ಸತ್ತೀ | ಪುರವನು ಸೇರುತೆ |
ಮರುಗುತಲಿಹನೀ | ಗುರುತರದಿಂದೆನೆ |
ಪರಿಭಾವಿಸುತಿಂ | ತೊರೆದನು ಕಾಲನು        || ೩೨೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕರೆದು ತಾರೈ ಚಿತ್ರಗುಪ್ತನೆ | ಭರದೊಳಿಲ್ಲಿಗೆ ಮೊದಲು ಬಂದಿಹ |
ದುರುಳನನು ಬಳಿಕವನ ವಿಷಯವ | ನೊರೆಯೊ ಬೇಗ || ೩೨೬ ||

ರಾಗ ಮುಖಾರಿ ಏಕತಾಳ
ಒಡನೆಯೆ ಚಿತ್ರಗುಪ್ತಕನು | ಪಾಪಿಯ ಕಯ್ಯ |
ಪಿಡಿದೆಳೆದೊಯ್ದು ಪೇಳಿದನು ||
ಒಡೆಯನೆ ಲಾಲಿಸು | ಪೊಡವಿಯೊಳಿವನೆಡೆ |
ಬಿಡದಬಲೆಯರನು | ಕೆಡಿಸುತೆ ತನ್ನಯ |
ಮಡದಿಯನನುದಿನ | ಬಡಿ ಬಡಿಯುತೆ ಸಲೆ |
ಕಡೆಗಣಿಸಿಹನೆನ | ನುಡಿದನು ಶಮನನು       || ೩೨೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಆದೊಡಿವನನು ಪಿಡಿಯುತುಕ್ಕಿನ | ಕಾದ ಕಂಭವನಪ್ಪಿಸೆಂದೆನೆ |
ಮೋದದಿಂದಂತೆಸಗಿದನು ಮ | ರ್ಯಾದೆಯಿಂದ        || ೩೨೮ ||

ಎರಡನೆಯ ಪಾಪಿಯನು ಕರೆತಾ | ಕರಣಿಕನೆ ಬೇಗೆನಲು ಕರೆತಂ |
ದೊರೆದನಾಕೆಯ ವಿಷಯವನು ಪದ | ಕೆರಗುತವನು    || ೩೨೯ ||