ಕಂದ
ಆಗಳ್ ಕುಂತೀದೇವಿ ಸ |
ರಾಗದೊಳಾಯೆಡೆಗೆ ಬಂದು ನಿಜನಂದನನಂ ||
ಬೇಗನೆ ಕರೆಯುತೆ ದುಃಖವ |
ನೀಗುವವೋಲ್ ನುಡಿದಳಧಿಕ ಸಂತೃಪ್ತತೆಯಿಂ          || ೫೫ ||

ರಾಗ ಮಾಧ್ಯಮಾವತಿ ತ್ರಿವುಡೆತಾಳ
ತನುಜ ತಡೆಯದಿರಿವರನೀಗಳೆ | ವನಕೆ ಕಳುಹುವುದುಚಿತ ಮುಪ್ಪಿನ |
ದಿನವು ಬರೆ ಮುನಿವೃತ್ತಿಯನುಚಿತ | ವೆನಿಸದಿದು ಸದ್ಧರ್ಮವು || ಕ್ಷತ್ರಿಯರಿಗೆ         || ೫೬ ||

ಧರಣಿಪಗೆ ಸಮರದಲಿ ಮರಣವು | ದೊರಕದೊಡೆ ಮುಪ್ಪಿನಲಿ ರಾಜ್ಯವ |
ತೊರೆದು ಕಾನನಕೈದಿ ತಪದಾ | ಚರಣೆಯಿಂ ಸದ್ಗತಿಯನು || ಸೇರಬೇಕು            || ೫೭ ||

ಆದಕಾರಣ ನೀನು ತಡೆಯದಿ | ರೀದಿನವೆ ಕಾನನಕೆ ಕಳುಹು ವಿ |
ಷಾದಿಸದಿರಿವರೊಡನೆ ಪೋಪೆನು | ಸಾದರದೊಳಾನೀಗಲೇ || ಕಾನನಕ್ಕೆ || ೫೮ ||

ಆನಿವರ ಸೇವೆಯನು ಗೆಯ್ವೆನು | ಸಾನುರಾಗದೊಳತ್ತೆ ಮಾವ ಸ |
ಮಾನರೆಂದೇ ಭಾವಿಸುತ್ತಾ | ಕಾನನದೊಳಿನ್ನನುದಿನ || ಭಕ್ತಿಯಿಂದ        || ೫೯ ||

ಭಾಮಿನಿ
ಮಾತೆಯೆನುವುದನಾಲಿಸುತೆ ಯಮ |
ಜಾತನೆಡವಿದ ಕಾಲಿಗೊನಕೆಯ |
ಘಾತವಾಯ್ತೆನಗೆನುತೆ ಮರುಗುತ್ತಿರ್ಪ ವಿಷಯವನು ||
ವಾತಸಂಭವ ಮುಖ್ಯರರಿಯುತೆ |
ಕಾತರದೊಳೈತಂದು ಬಹು ಸಂ |
ಪ್ರೀತಿಯಿಂ ಮಣಿಯುತ್ತೆ ಬಿನ್ನವಿಸಿದರು ಭಕ್ತಿಯಲಿ        || ೬೦ ||

ರಾಗ ನವರೋಜು ಏಕತಾಳ
ಬೇಡಮ್ಮ ಪೋಗದಿರು | ದಯ | ಮಾಡಮ್ಮಾ ತೊರೆಯದಿರು ||
ಕಾಡಿಗೆ ಪೋದೊಡೆ | ಗಾಢದ ದುಃಖವು |
ಕಾಡುವುದೆಮ್ಮನು | ನಾಡಿನೊಳನುದಿನ        || ೬೧ ||

ನಿನ್ನನು ನಾವುಳಿದಿಲ್ಲಿ | ಬಹು | ಖಿನ್ನತೆಯಿಂ ಬಾಳ್ವಲ್ಲಿ ||
ಬನ್ನವು ಬಹುದಿನ | ಕಿನ್ನೇಂಗೈವೆವು |
ಬಿನ್ನಪವನು ಕೇ | ಳ್ದಿನ್ನೆಮ್ಮನು ಪೊರೆ            || ೬೨ ||

ಧುರದೊಳು ನಮ್ಮರಿಗಳನು | ತರಿ | ತರಿದಿನ್ನೀ ರಾಜ್ಯವನು ||
ಹರುಷದೊಳಾಳುವ | ತರಳರ ಸುಖವನು |
ಪರಿಕಿಸದೀಪರಿ | ತೆರಳುವುದುಚಿತವೆ            || ೬೩ ||

ಬಿಟ್ಟೊಡೆ ನಿನ್ನನು ನಾವು | ಕಂ | ಗೆಟ್ಟವರಂತಾಗುವೆವು ||
ತಟ್ಟನೆ ನೀ ದಯೆ | ಯಿಟ್ಟೆಂದಿನ ವೊಲು |
ನೆಟ್ಟನೆ ನಮ್ಮೊಡ | ನೊಟ್ಟಿಗೆ ಬಾಳೌ            || ೬೪ ||

ಕಂದ
ಇಂತವರಳುತಿರಲಲ್ಲಿಗೆ |
ಸಂತಸದಿಂ ಬಂದರಮಲ ವೇದವ್ಯಾಸರ್ ||
ಚಿಂತೆಯನುಳಿದೆಲ್ಲರ್ ಪದ |
ಕಂತರಿಸದೆ ಮಣಿಯೆ ಪರಸಿ ನುಡಿದರ್ ಮುನಿಪರ್     || ೬೫ ||

ರಾಗ ಸಾಂಗತ್ಯ ರೂಪಕತಾಳ
ನಾನಿಂದು ನಿಮ್ಮ ಸಮಸ್ಯೆಯನರಿತು ಪ್ರ |
ಧಾನವಿದೆಂದರಿಯುತ್ತೆ ||
ಸಾನಂದದಿಂದೆ ಬಂದೆನು ಬರಿದೇತಕೆ |
ಮ್ಲಾನವದನರಾದಿರಿದಕೆ     || ೬೬ ||

ನಡೆಯಲಿ ಧೃತರಾಷ್ಟ್ರ ಗಾಂಧಾರಿ ಕುಂತಿಗ |
ಳಡವಿಗೆ ಮತ್ತವರೊಡನೆ ||
ತಡೆಯದೆ ಪೋಗಲಿ ವಿದುರ ಸಂಜಯರು ಮುಂ |
ದಡಿಯಿಡುತಮಲ ಕಾನನಕೆ            || ೬೭ ||

ಮುಂದೆ ಪೋಗುವ ವೇಳೆ ಶತಯೂಪನಾಶ್ರಮ |
ವಂದದಿಂ ತೋರ್ಪುದಿಂತಿದನು ||
ಚಂದದಿಂ ಪೊಕ್ಕು ಸನ್ಯಾಸವ ಕೈಕೊಂಡು |
ಮಂದಾಕಿನಿಯ ಬಳಿವಿಡಿದು           || ೬೮ ||

ಪರಮಪಾವನ ಗಂಗಾ ಮೂಲಕ್ಕೆ ತೆರಳುತೆ |
ಹರಿಯನು ಭಕ್ತಿಯಿಂ ಭಜಿಸಿ ||
ವರಮೋಕ್ಷ ಪದವಿಯ ಪಡೆವುದೆಂದವರನು |
ಪರಸುತ್ತೆ ಮುನಿ ಪೋದನಂದು       || ೬೯ ||

ವಾರ್ಧಕ
ಮತ್ತೆ ಮುನಿಯೊರೆದಂತೆ ಧರ್ಮಸುತನೊಪ್ಪಿಗೆಯ |
ನಿತ್ತ ಬಳಿಕಂಧ ನೃಪನಧಿಕ ದಾನಂಗಳಂ |
ಚಿತ್ತ ಶುದ್ಧಿಯೊಳಿತ್ತು ಯಾಗಯಜ್ಞಂಗಳಂ ಗೆಯ್ದು ಜಪತಪವೆಸಗುತೆ ||
ಚಿತ್ತಜಾಂತಕನ ಪೂಜಿಸಿ ಸರ್ವರನು ತನ್ನ |
ಹತ್ತಿರಕೆ ಕರೆದು ಮನ್ನಿಸಿ ಪೊರಟನಂದು ವನ |
ದತ್ತ ನಿಜ ಸತಿಸಹಿತ ಕುಂತಿಸಂಜಯ ವಿದುರ ಮುಖ್ಯರಿಂದೊಡಗೂಡುತೇ           || ೭೦ ||

ಕಂದ
ಇಂತವರೆಲ್ಲರ್ ಪೊರಟ |
ತ್ಯಂತ ಮಹಾ ಘೋರ ಗಹನದೊಳ್ ನಡೆಯುತ್ತಂ ||
ಸಂತಂ ಶತಯೂಪನ ವಿಪಿ |
ನಾಂತರಮಂ ಪುಡುಕುತೈದಿದರ್ ನಿರ್ಭಯದಿಂ          || ೭೧ ||

ಅಂಕ ೪.  ಸನ್ಯಾಸ ಸ್ವೀಕಾರ

ರಾಗ ಭೈರವಿ ಝಂಪೆತಾಳ
ಇತ್ತ ಶತಯೂಪನಮಲಾಶ್ರಮದೊಳಿರ್ದು ಮುನಿ |
ವೃತ್ತಿಯಿಂ ತಪವನೆಸಗುತ್ತೆ ಭಕ್ತಿಯೊಳು ||
ಚಿತ್ತಜಾಂತಕನ ಪದಪದ್ಮವನು ನೆನೆನೆನೆದು |
ಹೃತ್ತಿಮಿರವನು ನೀಗಿ ಮಹಿಮನೆನಿಸಿರ್ದ       || ೭೨ ||

ಆ ಮುನಿಯ ಮಹಿಮೆಯಿಂ ಗಿಳಿ ಗಿಡುಗಗಳು ಬಹಳ |
ಸಾಮರಸ್ಯದೊಳಿರ್ಪವಹಿಮುಂಗುಸಿಗಳು ||
ಪ್ರೇಮದಿಂದಿಹವು ಹುಲಿ ಹುಲ್ಲೆಗಳು ಜೊತೆಯಿಂದ |
ರಾಮಣೀಯಕ ವನದೊಳಲೆಯುತಿರುತಿಹವು  || ೭೩ ||

ವೇದವನು ಗಿಳಿಗಳುಚ್ಚರಿಸುತ್ತೆ ಸಂಗೀತ |
ನಾದವನು ಕೋಗಿಲೆಗಳೈದೆ ಗೆಯ್ಯುತ್ತೆ |
ಸಾಧುಸಂತರ್ಗೆ ಕಪಿಗಳು ಫಲವನೀಯುತ್ತೆ |
ಸಾದರದೊಳಿಹವು ಪುಣ್ಯಾಶ್ರಮದೊಳಲ್ಲಿ       || ೭೪ ||

ಜಡಿಮಳೆಯ ಭಯವಿಲ್ಲ ಸುಳಿಗಾಳಿ ಇರದು ಬರ |
ಸಿಡಿಲುಮಿಂಚುಗಳ ಭಯವೆಂಬುದಿನಿತಿಲ್ಲ ||
ಧಡಿಗ ದಾನವರ ಸುಳಿವಿರದು ದುರ್ಮೃಗಕುಲದ |
ತೊಡಕಿರದು ಶತಯೂಪನಮಲಾಶ್ರಮದೊಳು           || ೭೫ ||

ಇಂತೆಸೆಯುವಮಲಾಶ್ರಮದೊಳಿರ್ಪ ವಟುಗಳಿಗೆ |
ಸಂತಸದೊಳೊರ್ಮೆ ವೇದವನು ಕಲಿಸುತ್ತೆ ||
ಶಾಂತಮಾನಸನಾಗಿ ಶತಯೂಪನಿರಲು ಭೂ |
ಕಾಂತ ಧೃತರಾಷ್ಟ್ರನೈತಂದು ವಂದಿಸಿದ       || ೭೬ ||

ರಾಗ ಕೇದಾರಗೌಳ ಅಷ್ಟತಾಳ
ಬಂದು ವಂದಿಸಿ ನಿಂದ ಭೂಪನ ಮನ್ನಿಸು |
ತೆಂದನು ಶತಯೂಪನು ||
ಚಂದವಾಯ್ತಯ್ಯ ನೀವಿಂದು ಬಂದುದು ನಡೆ |
ತಂದ ಕಾರಣವರುಹು       || ೭೭ ||

ಎನಲಂಧಭೂಪನು ಮಣಿಯುತೆ ನುಡಿದನು |
ಘನಮಹಿಮನೆ ನಾವೀಗ ||
ವನಕೆ ವೈರಾಗ್ಯದಿಂ ಬಂದಿಹೆನಿವರೆನ್ನ |
ಮನೆಯವರಾತ್ಮೀಯರು     || ೭೮ ||

ಆ ನಾಗ ನಗರದ ದೊರೆಯು ನಾನಿವಳೆನ್ನ |
ಮಾನಿನಿ ಎಮ್ಮೊಡನೆ ||
ಸಾನಂದದಿಂದೆ ಸಂಜಯ ಕುಂತಿ ವಿದುರರೀ |
ಕಾನನಕೈತಂದರು           || ೭೯ ||

ನೀಡಬೇಕೆಮಗೆ ಸನ್ಯಾಸದೀಕ್ಷೆಯನೆಂದು |
ಬೇಡುವ ಭೂಮಿಪನ ||
ನೋಡಿ ಸಂತೋಷದಿಂದಭಯವನೀಯುತ್ತೆ |
ನಾಡೊಡೆಯನೊಳೆಂದನು || ೮೦ ||

ವಾರ್ಧಕ
ನಿನ್ನ ಮನದಭಿಲಾಷೆಯಂತೆ ನಿನ್ನೊಡನೀಗ |
ಭಿನ್ನಭೇದವನಿರಿಸದೈತಂದ ಸಕಲರಿಂ |
ಗೆನ್ನ ದಳನಿಳಯದೊಳ್ ಸನ್ಯಾಸದೀಕ್ಷೆಯನ್ನೀವೆನೆಂದೊರೆದು ಬಳಿಕ ||
ಸನ್ನುತ ತಪೋಧನಂ ವಿಧಿವಿಹಿತ ಮಾರ್ಗದಿಂ |
ಮನ್ನಿಸುತೆ ಮತ್ತೆ ದೀಕ್ಷೆಯನಿತ್ತ ಬಳಿಕವರ್ |
ಮುನ್ನಡೆದರಲ್ಲಿಂದ ಪರಮಗಂಗಾಮೂಲದೆಡೆಗೆ ತಪವೆಸಗಲೆನುತೆ         || ೮೧ ||

ಅಂಕ ೫  ಧೃತರಾಷ್ಟ್ರಾದಿಗಳ ದುರ್ಮರಣ

ರಾಗ ಭೈರವಿ ಝಂಪೆತಾಳ
ಇತ್ತ ಗಜನಗರಿಯೊಳು ಯಮಧರ್ಮತನಯನ |
ತ್ಯುತ್ತಮದೊಳಿಳೆಯ ನಾಳುತ್ತಿರ್ದು ತನ್ನ ||
ಹತ್ತಿರಕೆ ನಿಜಸಹೋದರ ವರ್ಗವನು ಬರಿಸಿ |
ಮತ್ತೆ ಪೇಳಿದನು ನಿಜಮನದ ಮರುಕವನು    || ೮೨ ||

ವರಸಹೋದರರೆಲ್ಲರಾಲಿಪುದು ಕಾನನಕೆ |
ಹಿರಿಯಯ್ಯನವರು ತೆರಳುತೆ ಕಳೆಯಿತೀಗ ||
ವರುಷವೆಂಟೀವರೆಗೆ ನಾವವರ ಸಂಗತಿಯ |
ನರಿಯದಿಹೆವಿದರಿಂದ ಮನಕೆ ಬೇಸರವು       || ೮೩ ||

ಹೇಗವರ ಸಂಗತಿಯನರಿಯಬಹುದೆಮಗೆ ಬಂ |
ದೀಗದನು ತಿಳಿಸುವವರಾರಿಹರೆನುತ್ತೆ ||
ಕೂಗುವಗ್ರಜನ ದುಸ್ಥಿತಿಯನೀಕ್ಷಿಸಿ ಮತ್ತೆ |
ಬೇಗನೆರಗುತ್ತೆ ಭೀಮನು ನುಡಿದನಾಗ         || ೮೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇದಕೆ ನೀನಿಂತೇಕೆ ಬರಿದೇ | ಮುದವನುಳಿದಳುತಿರ್ಪೆ ನಿನಗೀ |
ಹದನನರಿದರುಹುವೆನು ಬೇಗನೆ | ಸದಮಲಾತ್ಮಾ      || ೮೫ ||

ಈಗಲೇ ನಾನಯ್ದಿ ಹಿರಿಯರು | ಹೇಗಿಹರು ಕಾನನದೊಳೆಂದರಿ |
ತಾಗಮಿಸುವೆನು ನೀಡನುಜ್ಞೆಯ | ಬೇಗನೆನಗೆ            || ೮೬ ||

ಒಡನೆ ಪಾರ್ಥನು ಬಂದು ಪಾದಕೆ | ಪೊಡಮಡುತೆ ನೀಡಪ್ಪಣೆಯ ನಿಂ |
ದಡವಿಗೆಯ್ದುತೆ ತಿಳಿದು ಬಪ್ಪೆನು | ತಡೆಯದೀಗ          || ೮೭ ||

ಬರಿದೆ ಮರುಗದಿರಣ್ಣ ನಾನೇ | ತೆರಳಿ ಜನನೀಜನಕರಿರವನು |
ಪರಿಕಿಸುತೆ ಮುಂದಾಗಿ ಬರ್ಪೆನು | ಭರದೊಳೀಗ        || ೮೮ ||

ಒಡನೆ ಯಮಳರು ಬಂದು ಯಮಸುತ | ನಡಿಗಳಿಗೆ ವಂದಿಸುತನುಜ್ಞೆಯ |
ಕೊಡುಕೊಡೆನೆ ನಾರದರು ಬಂದರು | ತಡೆಯದಾಗ    || ೮೯ ||

ರಾಗ ಕೇದಾರಗೌಳ ಅಷ್ಟತಾಳ
ದೂರದಿಂದಲೆ ಹರಿನಾಮವ ಪಾಡುತ್ತೆ | ನಾರದನೈತರಲು ||
ಭೂರಿ ತೋಷವನಾಂತು ಸಹಜರಿಂದೊಡಗೂಡಿ | ಧಾರುಣೀಶ್ವರನು ಬಂದು         || ೯೦ ||

ಪಾದಕ್ಕೆ ವಂದಿಸುತರ್ಘ್ಯಪಾದ್ಯವನಿತ್ತು | ಮೋದದಿಂ ಮನ್ನಿಸುತೆ ||
ಹೇ ದಯಾಮಯನೆ ವಿಶೇಷವೇನೆನೆ ಮುನಿ | ಸಾದರದಿಂದೊರೆದ          || ೯೧ ||

ರಾಗ ಸಾಂಗತ್ಯ ರೂಪಕತಾಳ
ಕೇಳಯ್ಯ ಧರ್ಮಸಂಜಾತನೆ ನಿನ್ನಂತ | ರಾಳದ ದುಃಖವನರಿತು ||
ತಾಳಲಾರದೆ ಬಂದೆನದನರುಹಲು ನಿನ್ನ | ವೇಳೆಯ ನರಿಯುತಿಂದೀಗ    || ೯೨ ||

ವನವಲಯಕೆ ತಪಕೆಂದು ಪೋಗಿಹ ನಿನ್ನ | ಜನಕಾದಿಗಳು ಶತಯೂಪ ||
ಮುನಿಯಿಂದ ಸನ್ಯಾಸದೀಕ್ಷೆಯ ಕೈಕೊಂಡು | ವಿನುತ ಗಂಗಾಮೂಲದೆಡೆಗೆ          || ೯೩ ||

ನಡೆಯುತಲ್ಲೊಂದು ಪರ್ಣಾಲಯವನು ಗೈದು | ದೃಢಮನದಿಂ ಜಪತಪವ ||
ನಡೆಸುತ್ತಲಿರಲೊಂದು ದಿನ ವಿದುರನು ತನ್ನ | ಕಡೆಯುಸುರೆಳೆದನು ಬಳಿಕ           || ೯೪ ||

ಮತ್ತೊಂದು ದಿನ ದಾವಾನಲವು ಕಾನನವನ್ನು | ಮುತ್ತಿ ನಿಮ್ಮವರೆಲ್ಲರನ್ನು ||
ಮಿತ್ತುವಿನೆಡೆಗಟ್ಟಿತೀಪರಿ ಬಂದಿಹಾ | ಪತ್ತ ನಿನ್ನೆಂತು ಪೇಳುವೆನು           || ೯೫ ||

ಆಗ ಸಂಜಯನಿದನೀಕ್ಷಿಸಿ ನಡೆದನು | ಬೇಗನೆ ಬದರಿಕಾಶ್ರಮಕೆ |
ಹೀಗಿದೆ ಸಂಗತಿ ಎನುತೆ ನಾರದರಂದು | ಸಾಗಿದರೆಲ್ಲರಪರಸಿ   || ೯೬ ||

ವಾರ್ಧಕ
ಇದನರಿತು ಧರ್ಮಜಂ ಮರುಗಿ ನಮ್ಮವರಿಗೀ |
ವಿಧಿಯಾಯ್ತೆ ಹಾ ಎಂದು ಮರುಗುತೆಲ್ಲರ ಬರಿಸಿ |
ವಿಧಿವಿಹಿತದಿಂದಪರಕರ್ಮಮಂ ಗೆಯ್ದು ವಿಪ್ರರ್ಗೆ ದಾನವನೀಯುತೆ ||
ಸದಮಲಾತ್ಮಕನಾಗಿ ಭಕ್ತಿಯಿಂ ಶ್ರೀಹರಿಯ |
ಪದವ ನೆನೆ ನೆನೆಯುತ್ತೆ ನಿಜಸಹೋದರ ಸಹಿತ |
ಮುದವಿವರ್ಜಿತನಾಗಿ ರಾಜ್ಯ ಭಾರಂಗೆಯ್ಯುತಿರ್ದನೆಂದಿನ ತೆರದೊಳು    || ೯೭ ||

ಅಂಕ ೬.  ಕಣ್ವಶಾಪ

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ನಿಜಪುರವರದೊಳಾ ಪುರು | ಷೋತ್ತಮನು ಕೃತವರ್ಮ ಸಾಂಬರ |
ಹತ್ತಿರಕೆ ಕರೆಯುತ್ತೆ ನುಡಿದನು | ದಾತ್ತನಾಗಿ  || ೯೮ ||

ಬರುವ ನವರಾತ್ರಿಯ ಮಹೋತ್ಸವ | ಕುರುತರದ ಸಿದ್ಧತೆಯನೆಸಗುತೆ |
ಪುರವರವ ಸಿಂಗರಿಪುದನುಪಮ | ತೆರದೊಳಿಂದು       || ೯೯ ||

ಹತ್ತು ದಿನದುತ್ಸವವ ನಾಳೆಯೆ | ಚಿತ್ತ ಶುದ್ದಿಯೊಳೆಯ್ದೆ ತೊಡಗುತೆ |
ಮತ್ತೆ ಗಿರಿಜೆಯ ಭಜಿಸ ಬೇಕೀ | ಪತ್ತನದೊಳು |         || ೧೦೦ ||

ಏನು ಕಾರ್ಯಕ್ರಮವನಿರಿಸುವು | ದೀ ನವೀನ ಮಹೋತ್ಸವಕ್ಕೆನೆ |
ಸಾನುರಾಗದೆ ಸಾಂಬನೆರಗುತೆ | ತಾನು ನುಡಿದ        || ೧೦೧ ||

ಪರಿಪರಿಯ ಸಂಗೀತ ನರ್ತನ | ಸರಸ ನಾಟಕ ವಾದ್ಯವಾದನ |
ದುರುತರದ ಕಾರ್ಯಂಗಳನು ನಾ | ವಿರಿಸಬೇಕು        || ೧೦೨ ||

ವಿಧವಿಧದ ದೃಶ್ಯಂಗಳಿಂದತಿ | ಮುದವನೀಯುವ ಛದ್ಮವೇಷವ |
ಹದವರಿತು ನಾವೆಸಗುವುದು ಬಲು | ಚದುರತೆಯೊಳು || ೧೦೩ ||

ಆಗ ಕೃತವರ್ಮಕನು ನುಡಿದನು | ಸಾಗರಾಂತರ ನೃಪಮಹೀಸುರ |
ಯೋಗಿ ಮುಖ್ಯರ ಬರಿಸಬೇಕು ಸ | ರಾಗದಿಂದ          || ೧೦೪ ||

ರಂಗಭೂಮಿಯ ಸರ್ವಭಾಗವ | ಶೃಂಗರಿಸಿ ರತಿಪತಿಗೆ ಸರಿಯಹ |
ಮಂಗಲಾಂಗಿಯರಿಂದ ನರ್ತನ | ಸಂಗಟಿಪುದು         || ೧೦೫ ||

ಹರಿಕಥೆಯ ಮೇಳವಿಸಿ ಭಜನೆಯ | ನಿರಿಸಿ ಧಾರ್ಮಿಕ ಕಾರ್ಯಗಳ ನುರು |
ತರದೊಳೆಸಗುತೆ ಹರುಷಗೊಳಿಪುದು | ಪುರಜನರನು  || ೧೦೬ ||
ವಾರ್ಧಕ
ಹರುಷದಿಂದವರೆಂದ ಮಾತುಗಳನಾಲಿಸುತೆ |
ಸರಸಿಜಸುನೇತ್ರನತ್ಯಾನಂದನಿಂದವರೊ |
ಳೊರೆದನೀ ಕಾರ್ಯಮಂ ನಿರ್ವಹಿಸುವಧಿಕಾರಮಂ ನಿಮಗೆ ಕೊಟ್ಟೆನಿಂದು ||
ಸರಿಯಾಗಿ ನೀವಿದಂ ನಡೆಸಿರೆಂದೊರೆಯುತ್ತೆ |
ಹರಿ ನಡೆದ ಬಳಿಕ ಸಾಂಬನು ಬಹಳ ತೋಷದಿಂ |
ಕರೆದು ಕೃತವರ್ಮಕನ ಕೂಡೆ ಮರುದಿನದ ಕಾರ್ಯಕ್ರಮದ ಕುರಿತೆಂದನು            || ೧೦೭ ||

ರಾಗ ಬೇಗಡೆ ಆದಿತಾಳ
ಕೃತವರ್ಮಕನೆ ಕೇಳು ನೀನೆನ್ನ ಮಾತ |
ಹಿತದಿಂದ ನುಡಿಯುವೆನೀಗ ವಿಖ್ಯಾತ || ಪಲ್ಲವಿ ||

ನಾರಿಯ ವೇಷವ ಧರಿಸುತ್ತೆ ನಾನು |
ಭೋರನೆ ಬರಲೆನ್ನ ಪತಿಯಾಗು ನೀನು ||
ತೋರುವ ನಾವು ನಮ್ಮಭಿನಯವನ್ನು |
ಸಾರಸಾಕ್ಷನು ಮೆಚ್ಚುವಂತೆ ಮುಂದಿನ್ನು        || ೧೦೮ ||

ನಾನು ಪೇಳುವೆನು ಗರ್ಭಿಣಿ ಎಂದೆನುತ್ತೆ |
ನೀನದಕಹುದೆಂದು ತಲೆಯ ತೂಗುತ್ತೆ ||
ಸಾನುರಾಗದೊಳು ಬೀದಿಯೊಳು ಪೋಗುತ್ತೆ |
ಮಾನಿನಿಯರನು ನಂಬಿಸಬೇಕು ಮತ್ತೆ          || ೧೦೯ ||

ಪರಿಚಯವಾರಿಗೂ ಸಿಕ್ಕದ ಹಾಗೆ |
ಸುರುಚಿರ ವೇಷವ ಧರಿಸುತ್ತೆ ಹೀಗೆ ||
ಪುರಜನರೆಲ್ಲರ ಸೇರಿಸಿ ಕೊನೆಗೆ |
ಪರಿಹಾಸವೆಸಗುತ್ತೆ ತೆರಳುವ ಮನೆಗೆ           || ೧೧೦ ||