ಅಂಕ ೧. ಪ್ರಾರ್ಥನೆ

ಶಾರ್ದೂಲವಿಕ್ರೀಡಿತ
ಶ್ರೀಮದ್ದಿವ್ಯಮುನೀಂದ್ರವಂದ್ಯನನಘಂ ಪಾಪಾದ್ರಿವಜ್ರಂ ಸುಖಾ
ರಾಮಂ ಭಕ್ತಜನೇಷ್ಟದಾತನಮಿತಂ ಸಂತೋಷಪಾರಾನ್ವಿತಂ |
ಕಾಮಕ್ರೋಧಮದಾಬ್ಜಸಂಕುಲಮಹಾಮಾತಂಗನಬ್ಜೇಕ್ಷಣಂ
ಧೀಮಂತಂ ಯದುವಂಶವಂದ್ಯನಮಲಂ ವಂದೇ ರಮಾವಲ್ಲಭಂ            || ೧ ||

ಮತ್ತೇಭವಿಕ್ರೀಡಿತ
ಗಿರಿಜಾಧೀಶ್ವರನಂ ಶಶಾಂಕಧರನಂ ಶ್ರೀರಾಜರಾಜೇಶ್ವರೀ
ವರನಂ ಸಂಗರಶೂರನಂ ಸುಗುಣಸಾನಂದೈಕರತ್ನಾಕರೇ |
ಶ್ವರನಂ ಸುಂದರನಂ ತ್ರಿಶೂಲಧರನಂ ಮೋಕ್ಷೈಕಸಂತೋಷಸಾ –
ಗರನಂ ಭಾಸುರನಂ ತ್ರಿಣೇತ್ರಧರನಂ ನಾಂ ವಂದಿಪೆಂ ಭಕ್ತಿಯಿಂ           || ೨ ||

ಕಂದ
ಸರಸಿಜ ಸಂಭವನಂ ಸುರ |
ನರಗಂಧರ್ವಾಪ್ಸರೋರಗರುಡನುತನಂ ||
ವರವಾಣೀವರನಂ ನಾ |
ನುರುತರ ಭಯಭಕ್ತಿಯಿಂದೆ ಭಜಿಸುವೆನನಿಶಂ            || ೩ ||

ಸುರನುತೆಯಂ ಮತಿಯುತೆಯಂ |
ಪರಿಶೋಭಿಪ ಸರ್ವಗುಣಗಣಾಲಂಕೃತೆಯಂ ||
ವರವಿದ್ಯಾದೇವತೆಯಂ |
ನೆರೆ ನುತಿಪೆಂ ಭಕ್ತಿಯಿಂದೆ ಮಹಿಮಾನ್ವಿತೆಯಂ          || ೪ ||

ರಾಗ ಸಾಂಗತ್ಯ ರೂಪಕತಾಳ
ಜಯ ಜಯ ವಿಘ್ನೇಶ | ಜಯ ಸುರನರ ಪೋಷ |
ಜಯ ಜಯ ಮುನಿಜನತೋಷ ||
ಜಯ ಸೂರ್ಯಸಂಕಾಶ | ಜಯ ಪಾಪಕುಲನಾಶ |
ಜಯ ಜಯ ಸುಗುಣವಿಶೇಷ           || ೫ ||

ಧುರಧೀರಸುಕುಮಾರ | ಪರಮ ದಯಾಸಾರ |
ಶರಣಜನಾಳಿಮಂದಾರ ||
ವರಗುಹ ಧುರಧೀರ | ಪೊರೆಯೊ ಮಹಾವೀರ |
ದುರಿತಾಳಿ ಸಂಹಾರ ಶೂರ            || ೬ ||

ಪರಿವರ್ಧಿನಿ ಷಟ್ಪದಿ
ಸುರರಾಕ್ಷಸರಂದಮೃತವ ಪಡೆಯಲು |
ಶರನಿಧಿಯನು ಮಥಿಸುತ್ತಿರುತಿರಲಾ |
ಗುರುತರತೋಷದೊಳಲ್ಲಿಯೆ ಜನಿಸುತೆ ಹರಿಯನು ಕರವಿಡಿದು ||
ಧರೆಯೊಳು ಭಕ್ತರ ಪೊರೆಯುತ್ತಿರುವಾ |
ವರಧನಲಕ್ಷ್ಮಿಯೆ ದಯೆಯಿಂದೆನ್ನನು |
ಪೊರೆಯೆಂದೆನುತೀಗೆರಗುವೆ ಭಕ್ತಿಯೊಳನುಪಮ ತವ ಪದಕೆ     || ೭ ||

ಕುಸುಮ ಷಟ್ಪದಿ
ಗಿರಿಜಾತೆ ಹರವನಿತೆ |
ಪರಮ ಮಂಗಲಚರಿತೆ |
ಸುರನರ ಭುಜಂಗ ಗರುಡಾದಿ ವಿನುತೆ ||
ಭರಿತಗುಣ ಶೀಲಯುತೆ |
ಶರಣ ಸಜ್ಜನ ನಮಿತೆ |
ಪೊರೆವುದೆನ್ನನು ನೀನು ಗುಹನ ಮಾತೆ         || ೮ ||

ರಾಗ ಸಾಂಗತ್ಯ ರೂಪಕತಾಳ
ರವಿ ಸೋಮ ಮಂಗಳ ಬುಧ ಬೃಹಸ್ಪತಿ ರಾಹು |
ಕವಿಶನೈಶ್ಚರ ಕೇತುವೆನುವ ||
ಭುವನವಂದಿತ ನವಗ್ರಹರ ಪಾದಕ್ಕೆ ನಾ |
ನವನತನಪ್ಪೆ ನಂದದಲಿ    || ೯ ||

ಸುರಪಾಗ್ನಿ ಯಮ ವಾಯು ವರುಣ ಕುಬೇರಾದಿ |
ಮೆರೆವಷ್ಟ ದಿಕ್ಪತಿಗಳನು ||
ಭರಿತ ಭಕ್ತಿಯೊಳು ವಂದಿಸುತೆನ್ನನನುದಿನ |
ಪೊರೆವುದೆಂದೈದೆ ಬೇಡುವೆನು        || ೧೦ ||

ಚೌಪದಿ
ಹೆತ್ತ ತಾಯ್ತಂದೆಯರ ಪಾದ ಪದ್ಮವನು |
ಚಿತ್ತ ಶುದ್ಧಿಯೊಳು ನೆನೆ ನೆನೆದು ಭಜಿಸುವೆನು ||
ಹೊತ್ತ ಭೂಮಾತೆಯಡಿಗೆರಗುತ್ತೆ ನಾನು |
ಮತ್ತೆ ಗೋಮಾತೆಯಡಿಗಳಿಗೆ ಮಣಿಯುವೆನು || ೧೧ ||

ವರಕವಿಗಳಡಿದಾವರೆಗೆ ವಂದಿಸುತ್ತೆ |
ಪರಮ ವಿದ್ವಾಂಸರನು ಬಿಡದೆ ನೆನೆಯುತ್ತೆ ||
ಗುರುಗಳನು ಭಕ್ತಿಯಿಂದೈದಿ ವಂದಿಸುತೆ |
ಧರೆಯ ಸುಜನರಿಗೆರಗುವೆನು ನಾನು ಮತ್ತೆ   || ೧೨ ||

ವಾರ್ಧಕ
ಇದರೊಳರಿಯದೆ ಬಂದ ತಪ್ಪುಗಳಿರಲ್ಕದನು |
ಬುಧರು ಮನ್ನಿಸಿ ತಿದ್ದಿ ದೋಷ ವರ್ಜಿತಮಪ್ಪ |
ವಿಧದೊಳುರೆ ಸಹಕರಿಸಿ ತಮ್ಮ ಸಜ್ಜನಿಕೆಯನು ತೋರುತೌದಾರ್ಯದಿಂದ ||
ಸದಯರೆಂದೆವಿಪುದಲ್ಲದೆ ಮತ್ಸರದೊಳಿದನು |
ವಿಧ ವಿಧದೊಳೈದೆ ಕೀಳ್ಗೈದು ಬರಿದೇ ಹಳಿದೊ |
ಡದು ಮಹಾಗ್ರಾಮಸೂಕರದ ಸುನ್ಯಾಯಮಂ ಪೋಲದಿರ್ಪುದೆ ಧರೆಯೊಳು          || ೧೩ ||

ಅಂಕ ೨. ಪಾಂಡವರ ರಾಜಸಭೆ

ವಾರ್ಧಕ
ಒಂದು ದಿನ ಧರ್ಮಜನು ನಿಜಸಹೋದರ ಸಚಿವ |
ಬಂಧುಬಾಂಧವರ ಕರೆಸುತ್ತೆ ಸಿಂಹಾಸನವ |
ನಂದದಿಂದೇರುತೊಡ್ಡೋಲಗವನಿತ್ತಿರಲ್ ವಿನಯದಿಂ ಸಾಮಂತರು ||
ವಂದಿಸುತೆ ಕಪ್ಪಕಾಣಿಕೆಯನಿತ್ತಧಿಕ ಮುದ |
ದಿಂದಿರುತಿರಲ್ಕವರನೀಕ್ಷಿಸುತೆ ಯಮಧರ್ಮ |
ನಂದನಂ ತೋಷದಿಂದನುಜಾತರಂ ಕರೆದು ಮನ್ನಿಸುತೆ ಬಳಿಕೆಂದನು     || ೧೪ ||

ರಾಗ ಭೈರವಿ ಝಂಪೆತಾಳ
ಅನುಜಾತರೆಲ್ಲರಾಲಿಪುದು ನೀವೀವರೆಗೆ |
ವಿನಯದಿಂದೆನ್ನ ಮಾತನು ಮಿರದಿರ್ದು ||
ಮನದೊಲವಿನಿಂದೆ ಸಹಕಾರವಿತ್ತುದರಿಂದೆ |
ಜನನಾಥನೆನಿಸಿದೆನು ನಾನು ಮುದದಿಂದೆ    || ೧೫ ||

ಧುರದೊಳಾ ಕುರುವರನು ನಿಜಸಹೋದರ ಸಹಿತ |
ಧರೆಗೊರಗಿ ಮೃತನಾದ ಬಳಿಕ ನಾನಿಳೆಯ ||
ದೊರೆ ಎನಿಸಿ ದಶವರ್ಷ ಕಳೆಯಿತಿಂದಿನವರೆಗೆ |
ಹರಿಯ ದಯದಿಂದೆ ನಾವಿಹೆವು ಸುಖದಿಂದ   || ೧೬ ||

ಧರೆಯಧಿಪರೆಲ್ಲರನು ಧುರದಿ ಸೋಲಿಸಿ ಮತ್ತೆ |
ತುರಗಮೇಧವನೆಸಗಿ ಬಂಧುಜನರನ್ನು ||
ತರಿದ ಪಾಪವ ನೀಗಿ ಪುಣ್ಯಾತ್ಮರೆನಿಸುತ್ತೆ |
ಪರಮ ಸತ್ಕೀರ್ತಿಯನು ಗಳಿಸಿಹೆವು ನಾವು   || ೧೭ ||

ಹಿರಿಯಯ್ಯ ಗಾಂಧಾರಿಯರ ಸೇವೆಯನು ನಾವು |
ಪರಿತೋಷದಿಂದೆಸಗುತಿಹೆವು ಭಕ್ತಿಯಲಿ ||
ವರವಿದುರಸಂಜಯಯುಯುತ್ಸುವೆಂದೆಂಬವರು |
ಹರುಷದಿಂದಿಹರು ನಮ್ಮರಮನೆಯೊಳೀಗ     || ೧೮ ||

ಧರಣಿಯೊಳು ನಮಗರಿಗಳಾರಾದರಿರ್ಪರೋ |
ದುರುಳರುಪಟಳವಿಹುದೊ ನಮ್ಮ ರಾಜ್ಯದೊಳು ||
ವರಸಹೋದರರೆ ಯೋಚಿಸಿ ಪೇಳಿರೆನಲಾಗ |
ಳೊರೆದನಾ ಮರುತಸುತನೆರಗಿ ಧರ್ಮಜಗೆ   || ೧೯ ||

ರಾಗ ಮಾರವಿ ಏಕತಾಳ
ಹಿರಿಯಣ್ಣನೆ ಕೇ | ಳರಿಗಳ ಬಾಧೆಯು | ಧರಣಿಯೊಳಿನಿತಿಲ್ಲ ||
ಪರಿತೋಷದೊಳೀ | ವರೆಗೆಲ್ಲರು ಸು | ಸ್ಥಿರಸುಖದಿಂದಿಹರು       || ೨೦ ||

ಎನಲಾಕ್ಷಣ ಪಾ | ರ್ಥನು ಪೇಳಿದನಿಂ | ದಿನವರೆಗಿಳೆಯೊಳಗೆ ||
ದನುಜರ ಸುಳಿವಿರ | ದನುಪಮ ಸುಖದಿಂ | ವಿನಯದೊಳಿಹರೆಲ್ಲ           || ೨೧ ||

ಒಡನೆಯೆ ನಕುಲನು | ಪೊಡಮಡುತಗ್ರಜ | ನೊಡನುಸುರಿದನೀಗ ||
ದಡಿಗರು  ನಮ್ಮಿ | ಪೊಡವಿಯೊಳಿರರೆನೆ | ನುಡಿದನು ಸಹದೇವ || ೨೨ ||

ನಮ್ಮಿ ಪ್ರಜೆಗಳು | ನೆಮ್ಮದಿಯಿಂ ಸುಖ | ಸುಮ್ಮಾನದೊಳಿರ್ದು ||
ಹೆಮ್ಮಕ್ಕಳುಗಳ | ನೊಮ್ಮೆಯು ಪೀಡಿಸ | ದೊಮ್ಮತದಿಂದಿಹರು  || ೨೩ ||

ಭಾಮಿನಿ
ಅನುಜರಾಡಿದ ನುಡಿಯನಾಲಿಸಿ |
ಘನತರದ ಸಂತೋಷದಿಂ ಯಮ |
ತನುಜನೆಂದನು ಹರಿಯ ದಯೆಯಿಂ ಧರ್ಮರಾಜ್ಯವನು ||
ಮನದೊಲವಿನಿಂದೈದೆ ನಾವಾ |
ಳ್ವನಿತು ಭಾಗ್ಯವ ಪಡೆದೆವೆನ್ನುತೆ |
ವಿನಯದಿಂ ಸಭೆಯನು ವಿಸರ್ಜಿಸಿದನು ಮಹೀರಮಣ  || ೨೪ ||

ಅಂಕ ೩.  ಧೃತರಾಷ್ಟ್ರಾದಿಗಳ ವನನಿರ್ಗಮನ

ರಾಗ ಸಾಂಗತ್ಯ ರೂಪಕತಾಳ
ಅಂಧ ನೃಪಾಲನು ವಿದುರಸಂಜಯವರ್ಯ |
ಗಾಂಧಾರಿ ಸಹಿತ ಶ್ರೀಹರಿಯ ||
ಚಂದದಿಂ ನೆನೆಯುತ್ತೆ ಕುಳಿತಿರಲೊಡನಾಗ |
ಲೆಂದನು ಮನಮರುಕದೊಳು         || ೨೫ ||

ಎನ್ನ ನಂದನರಿಂದ ಬಂದೊದಗಿದ ಹಾನಿ |
ಯನ್ನಿಂದು ನೆನೆ ನೆನೆಯುತ್ತೆ ||
ಬನ್ನವನಾಂತು ಚಿಂತಿಸುತಿರ್ಪೆನಿದಕೆನ |
ಗಿನ್ನೆಂತೊ ಪರಿಹಾರವರಿಯೆ           || ೨೬ |

ತರಳ ಧರ್ಮಜನವನನುಜಾತರೆಲ್ಲರು |
ಸರಳ ಸದ್ವರ್ತನೆಯಿಂದೆ ||
ನಿರತ ಸೇವೆಯನೆಸಗುತ್ತಿರ್ಪರಾದೊಡೆ |
ದುರುಳ ಭೀಮನು ದುರ್ವಿನೀತ       || ೨೭ ||

ಹಿತವೆನಿಸದು ಮನಕವನ ವರ್ತನೆ ಎನ |
ಗತಿ ದುಃಖವೆನಿಸಿಹುದವನು ||
ಪ್ರತಿದಿನ ಪಕ್ಕದ ಕೋಣೆಗೈತಂದಾತ್ಮ |
ಸುತರ ನಿಂದಿಪನೆಡೆಬಿಡದೆ || ೨೮ ||

ಎನಗೆ ಬೇಸರವಾಗಬೇಕೆಂಬ ಬಯಕೆಯಿಂ |
ದನಿಲಸುತನು ಹಂಗಿಸುವನು ||
ದಿನನಿತ್ಯವೆನುವಾಗ ನಿಜನರ್ಮ ಸಖನೊಡ |
ನನಿಲಜನೈತಂದು ನುಡಿದ || ೨೯ ||

ರಾಗ ಕಾಂಭೋಜಿ ಮಟ್ಟೆತಾಳ
ವೀರ ಮಾರುತಾತ್ಮಜಾತಗೆ | ಸಮಾನರಾರು |
ಧಾರುಣಿಯೊಳು ನೋಳ್ಪೆನೊಮ್ಮೆಗೆ ||
ಮಿರಿಬಂದ ಕೌರವರನು | ಭೂರಿಶೌರ್ಯದಿಂದ ಕೊಂದು |
ಮಾರಿಗೌತಣವನು ಕೊಟ್ಟ | ಧೀರನಹುದು ನಾನೆ ದಿಟವು          || ೩೦ ||

ಹಂದೆಯಂತೆ ರಣವ ನುಳಿಯುತೆ | ಬಾಳ್ವಾಸೆಯಿಂದೆ |
ಮುಂದುವರಿದು ಕೊಳದೊಳಡಗುತೆ ||
ನಿಂದ ಕುರುಕುಲೇಶನನ್ನು | ಸಂಧಿಸುತ್ತೆ ತೊಡೆಯ ಮುರಿದು |
ಕೊಂದು ಕೆಡಹಿ ಭಾಷೆಯನ್ನು | ಚಂದದಿಂದ ತೀರಿಸಿಹೆನು          || ೩೧ ||

ಕುರುಕುಲೇಶನನುಜನೆನಿಸಿದ | ದುಶ್ಶಾಸನಾಖ್ಯ |
ದುರುಳನನ್ನು ಕೆಡಹುತುದರದ ||
ಕರುಳನೆಳೆದು ರಕ್ತವನ್ನು | ಭರದಿ ಕುಡಿದು ಸತಿಯ ತಲೆಯ |
ಕುರುಳ ಕಟ್ಟಿ ಭಾಷೆಯನ್ನು | ಸರಸದಿಂದ ತೀರಿಸಿಹೆನು || ೩೨ ||

ಅಂಧರಾಜನಂದು ಪಿಡಿಯುತೆ | ಮತ್ಸರಿಸಿ ಬಾಹು |
ಬಂಧನದೊಳು ಬಿಗಿಯುತಪ್ಪುತೆ ||
ಕೊಂದು ಕೆಡಹಲೆಂದು ಬಗೆದ | ಡಂದದಿಂದ ಹರಿಯ ಕರುಣೆ |
ಯಿಂದ ಬಾಳಿದಂಥ ಭಕ್ತ | ನೆಂದು ಕರೆವರೆನ್ನನೀಗ      || ೩೩ ||

ವಾರ್ಧಕ
ಎಂದು ನಿಜನರ್ಮಸಖನೊಡನೆ ಹೆಗ್ಗಳಿಕೆಯಂ |
ಚಂದದಿಂದೊರೆದು ಮನಬಂದಂತೆ ಕೌರವರ |
ನಿಂದಿಸುತೆ ಗಾಂಧಾರಿ ಧೃತರಾಷ್ಟ್ರರಿಂಗೈದೆ ಮನನೋಯುವಂತೆಸಗುತೆ ||
ಗಂಧವಾಹಾತ್ಮಜಂ ನಿಜಭುಜವ ಚಪ್ಪರಿಸು |
ತಂದದಿಂ ಮಿಸೆಯಂ ತಿರುಹುತ್ತೆ ನಡೆಯಲೊಡ |
ನಂಧನೃಪನಿವನ ವರ್ತನೆಯ ನೀಕ್ಷಿಸುತೆ ಗಾಂಧಾರಿಯೊಡನಿಂತೆಂದನು  || ೩೪ ||

ರಾಗ ನೀಲಾಂಬರಿ ತ್ರಿವುಡೆತಾಳ
ಅಯ್ಯಯ್ಯೊ ನಾರೀಮಣಿ | ಭೀಮನು ಬಂದು |
ಬಯ್ಯುವನೆಲೆ ರಮಣಿ ||
ಮುಯ್ಯಾಂತು ಬಂದು ತಾ | ನೊಯ್ಯಾರದಿಂದೆಮ್ಮ |
ನೊಯ್ಯನೆ ಪೀಡಿಪನು | ಹಂಗಿಸುತಿಹನು       || ೩೫ ||

ಹೃದಯಕೆ ಚುಚ್ಚುವಂಥ | ಮಾತನು ಪೇಳು |
ತಧಿಕ ಬೇಸರವೀವಂಥ ||
ಮದಮುಖನೆಡೆಯೊಳು | ಬೆದರುತೆ ಬಾಳುವ |
ವಿಧಿಯೊದಗಿತೆ ನಮಗೆ | ದುಃಖವು ಕಡೆಗೆ      || ೩೬ ||

ಹಿರಿಯಾತ ಧರ್ಮಜನು | ಯೋಗ್ಯನು ಪಾರ್ಥ |
ನುರುತರ ಸತ್ಯಾತ್ಮನು ||
ವರಯಮಳರು ವಿಧೇ | ಯರು ಭೀಮನೊರ್ವನು |
ದುರುಳನಾಗಿರುತಿರ್ಪನು | ಗರ್ವಿತನವನು    || ೩೭ ||

ವಾರ್ಧಕ
ಆದ ಕಾರಣ ನಾವು ಬೇಗನಡವಿಗೆ ಪೋಗಿ |
ಮೋಹದಿಂ ತಪವನೆಸಗುತೆ ಮೋಕ್ಷ ಸಾಮ್ರಾಜ್ಯ |
ದಾಧಿಪತ್ಯವ ಪಡೆವ ಕಾರ್ಯವಂ ಗೆಯ್ವುದೊಳಿತೆಂದು ನಿಶ್ಚಯಿಸುತಿರಲು ||
ಮೇದಿನೀಶ್ವರ ಯುಧಿಷ್ಠಿರನಲ್ಲಿಗೈತಂದು |
ಪಾದಪದ್ಮಂಗಳಿಗೆ ಮಣಿಯಲಾಶೀರ್ವದಿಸು |
ತಾದರದೊಳವನೊಡನೆ ನುಡಿದನಾ ಧೃತರಾಷ್ಟ್ರ ಭೂಪಾಲನಾಕ್ಷಣದೊಳು           || ೩೮ ||

ರಾಗ ಸಾಂಗತ್ಯ ರೂಪಕತಾಳ
ತನಯನೆ ಕೇಳು ನಾನಿಂದೀಗ ತಪಕಾಗಿ |
ವನಕೆ ಪೋಪೆನು ಸತಿಸಹಿತ ||
ಮನದೊಲವಿಂದೆ ನೀನೊಪ್ಪಿಗೆಯನ್ನೀವು |
ದೆನಗೆನೆ ಯಮಸುತನೊರೆದ          || ೩೯ ||

ರಾಗ ಕಾಂಭೋಜಿ ಝಂಪೆತಾಳ
ಹಿರಿಯಯ್ಯನಮಗೆ ನೀವಿಂತೊರೆದೊಡೀಗ ಬೇ |
ಸರವೆನಿಸುತಿಹುದೆನ್ನ ಮನಕೆ ||
ತೆರಳದಿರಿ ನೀವಿಲ್ಲೆ ಕುಳಿತು ಹರಿಯನು ಭಜಿಸಿ |
ಪರತರವ ಚಿಂತಿಸುವುದೊಳಿತು      || ೪೦ ||

ಅತಿವೃದ್ಧರಂಧರಾತ್ಮಜರಳಿದ ದುಃಖವಿಂ |
ತತಿಶಯದ ಬಾಧೆಯಿಂ ಬಳಲಿ ||
ಗತಿಗೆಟ್ಟ ನಿಮ್ಮನೆಂದಿಗು ಕಳುಹೆನೆನುವ ಭೂ |
ಪತಿಯೊಡನೆ ಧೃತರಾಷ್ಟ್ರನೆಂದ       || ೪೧ ||

ರಾಗ ಸಾಂಗತ್ಯ ರೂಪಕತಾಳ
ಬೇಡಯ್ಯ ಮಗನೆ ನೀ ಕಾಡದಿರೆಮ್ಮನು |
ಕಾಡಿಗೆ ಕಳುಹಯ್ಯ ಮುದದಿ ||
ನಾಡೆನಗಹಿತವೆಂದೆನಿಸಿದೆ ಸತಿಯೊಡ |
ಗೂಡಿ ನಾ ನಡೆವೆನು ತಪಕೆ           || ೪೨ ||

ಮುಪ್ಪಡಸಲು ಮುನಿ ವೃತ್ತಿಯು ಯೋಗ್ಯವೀ |
ಚಪ್ಪನ್ನ ಭೂಪತಿಗಿಡುವೆ ||
ಒಪ್ಪುವ ಧರ್ಮವೆಂದೆನಲು ನೀನಿದಕಿಂದು |
ತಪ್ಪದೊಪ್ಪಿಗೆಯನು ನೀಡು            || ೪೩ ||

ರಾಗ ಕಾಂಭೋಜಿ ಝಂಪೆತಾಳ
ಎಂದೆನಲು ಯಮಧರ್ಮನಂದನನು ಮಣಿಯುತಿಂ |
ತೆಂದನೆಲೆ ಬೊಪ್ಪ ನಿಮ್ಮೊಡನೆ ||
ಬಂದಪೆನು ನಿಮ್ಮ ಶುಶ್ರೂಷೆ ನಾನಿಂದಿದಕೆ |
ಚಂದದಿಂದೀವುದೊಪ್ಪಿಗೆಯ            || ೪೪ ||

ಕುರುಡರಾಗಿಹ ನಿಮ್ಮ ಸೇವೆಯನು ಗೆಯ್ಯುತೀ |
ಬರಡು ಬಾಳನು ಧನ್ಯಗೊಳಿಸಿ ||
ಧರೆಯೊಳಾದರ್ಶನೆಂದೆನಿಸುವೆನು ನಾನೆನ |
ಲ್ಕೊರೆದಳವನೊಡನೆ ಗಾಂಧಾರಿ     || ೪೫ ||

ರಾಗ ಸಾಂಗತ್ಯ ರೂಪಕತಾಳ
ಬೇಡಯ್ಯ ಬರಬೇಡ ನೀನು ಬಂದರೆ ನಮ್ಮ |
ನಾಡಿನ ಜನರನು ಬಿಡದೆ ||
ನಾಡ ಸಂರಕ್ಷಿಸುವವರಿಲ್ಲ ನೀನೀಗ |
ಕಾಡಿಗೆ ಕಳುಹು ನಮ್ಮನ್ನು  || ೪೬ ||

ನಮ್ಮ ಭೂಪಾಲರ ಸೇವೆಯನಾನತಿ |
ಸುಮ್ಮಾನದಿಂದೆ ಗೆಯ್ಯುವೆನು ||
ದುಮ್ಮಾನವನು ತೊರೆದೆಮ್ಮನು ಕಳುಹೆನ |
ಲುಮ್ಮಳಿಸುತೆ ನೃಪನೆಂದ || ೪೭ ||

ರಾಗ ಕಾಂಭೋಜಿ ಝಂಪೆತಾಳ
ಬಿಟ್ಟಿರೆನು ನಿಮ್ಮನೀದಿನವೆ ಭೀಮಂಗಿಳೆಯ |
ಪಟ್ಟವನು ಕಟ್ಟಿ ನಿಮ್ಮೊಡನೆ ||
ತಟ್ಟನೆ ಬಪ್ಪೆನೆನಲಂಧನೃಪನವನ ಮೈ |
ಮುಟ್ಟಿ ಬಳಿಕಿಂತೆಂದನಾಗ || ೪೮ ||

ರಾಗ ಸಾಂಗತ್ಯ ರೂಪಕತಾಳ
ಬರಿದೇತಕೆಮ್ಮ ನೀ ಪರಿಯೊಳು ತಡೆಯುವೆ |
ಕರುಣೆ ಬಾರದೆ ನಿನ್ನ ಮನಕೆ ||
ಪುರದೊಳಿನ್ನೆಂದಿಗು ನಾವಿರಲಾರೆವು |
ತರಳನೆ ನೀಡೊಪ್ಪಿಗೆಯನು            || ೪೯ ||

ಅಲ್ಲದೊಡನ್ನಪಾನವ ತೊರೆಯುತೆ ಬಳಿ |
ಕಿಲ್ಲೆ ಸಾಯುವೆವಿಂದು ದಿಟವು ||
ಸಲ್ಲದ ಕಾರ್ಯವಿದೆಂದೆಣಿಸದಿರೆನ |
ಲಲ್ಲಿರ್ಪ ವಿದುರನಿಂತೆಂದ  || ೫೦ ||

ರಾಗ ಮಧುಮಾಧವಿ ತ್ರಿವುಡೆತಾಳ
ತಡೆಯದಿರು ಭೂಪನನು ಮುದದಿಂ | ನಡೆಯಲಡವಿಗೆ ತಪವನೆಸಗಲು |
ಮಡದಿಯೊಡನೀದಿನವೆ ಛಲವನು | ಬಿಡು ಬಿಡೆಲೊ ಧರ್ಮಾತ್ಮನೆ          || ೫೧ ||

ನಾನು ಪೋಗುವೆನಿವರ ಸೇವೆಗೆ | ಸಾನುರಾಗದೊಳಿದಕೆ ಬೆದರದೆ |
ನೀನು ನೀಡಪ್ಪಣೆಯ ನೀಗನು | ಮಾನವನು ಬಿಡು ಬೇಗನೆ       || ೫೨ ||

ಎನಲು ಸಂಜಯನೆಂದನೆಲವೋ | ಜನಪ ಧರ್ಮಾತ್ಮಜನೆ ನಾನೇ |
ವನಕೆ ತೆರಳುವೆನಿವರ ಸೇವೆಗೆ | ನಿನಗೆ ಭಯವಿನಿತೇತಕೆ         || ೫೩ ||

ಎನಲು ಕೇಳಿಯುಯುತ್ಸು ನಾನೇ | ವನಕೆ ತೆರಳುವೆನೆನ್ನ ಜನನೀ |
ಜನಕರನು ಶುಶ್ರೂಷೆಗೆಯ್ಯುವೆ | ನೆನಲು ಯಮಜನು ಮರುಗಿದ || ೫೪ ||