ಅಂಕ ೧೨. ದಾರುಕನಿಗೆ ಶ್ರೀಕೃಷ್ಣ ದರ್ಶನ
ರಾಗ ಸೌರಾಷ್ಟ್ರ ತ್ರಿವುಡೆತಾಳ
ದ್ವಾರಕಾಪುರವರದೊಳಿತ್ತಲು | ವಾರಿಜಾಕ್ಷನ ಕಾಣದರಸುತೆ |
ದಾರುಕನು ನಡೆತಂದನಡವಿಗೆ | ಭೋರನಂದು || ೨೨೧ ||
ಎಡೆಯೆಡೆಯ ತರುಗುಲ್ಮಲತೆಗಳ | ನಡು ನಡುವೆ ಬಿಡದರಸಿ ಸುತ್ತುತೆ |
ಕಡೆಗೆ ನರಳುವ ದನಿಯನಾಲಿಸಿ | ಪುಡುಕಿ ಬರಲು || ೨೨೨ ||
ಒಂದು ಮರದಡಿಯಲ್ಲಿ ನರಳುತೆ | ನೊಂದು ಮಲಗಿದ ಹರಿಯನೀಕ್ಷಿಸಿ |
ಬಂದು ವಂದಿಸಿ ಮನದ ಮರುಕದೊ | ಳೆಂದನಂದು || ೨೨೩ ||
ರಾಗ ಕೇದಾರಗೌಳ ಅಷ್ಟತಾಳ
ಏನಾಯ್ತು ನಿನಗೆ ಹೇ ದೇವ ನೀನೀ ರೀತಿ |
ಕಾನನದೊಳು ಮಲಗಿ ||
ಹಾನಿಗೀಡಾದುದೆಂತೆಂದರುಹೆನಗೆ ನಿ |
ಧಾನದಿಂದೆನುತೆರಗೆ || ೨೨೪ ||
ಹರಿಯು ಕಣ್ತೆರೆದು ದಾರುಕನನೀಕ್ಷಿಸುತಾಗ |
ಳೊರೆದನು ಸಾರಥಿಯೆ ||
ಪರಮ ತೀರ್ಥಾಟನೆಗೆಂದು ಪೋಗಿಹ ಯದು |
ವರರೆತ್ತ ಪೋದರೆಂದು || ೨೨೫ ||
ನೆರೆಯರಿಯಲು ನಾನು ಪುಡುಕುತ್ತೆ ನಡೆತಂದು |
ಭರದಿಂದೀ ವನದೊಳಗೆ ||
ತಿರು ತಿರುಗುತೆ ಸುತ್ತಿ ಸುಳಿಯುತ್ತೆ ಬಂದೆನು |
ತರುಮೂಲದೀಯೆಡೆಗೆ || ೨೨೬ ||
ಆಗಳಂಬರ ವಾಣಿಯರುಹಿತೆಮ್ಮವರೆಲ್ಲ |
ಸಾಗರದೆಡೆಗೆ ಪೋಗಿ ||
ಬೇಗನೆ ಮದ್ಯವ ಸೇವಿಸಿ ಹೊಯ್ದಾಡಿ |
ನೀಗಿದರಸುವನೆಂದು || ೨೨೭ ||
ಇದನಾಲಿಸಿದ ನಾನು ಕುಸಿದಿಲ್ಲಿ ಬೀಳಲು |
ಮದಮುಖ ಶಬರನೊಬ್ಬ ||
ಹೆದೆಗೆ ಬಾಣವ ಹೂಡಿ ಹೊಡೆದನೆನ್ನಡಿಗಿದು |
ವಿಧಿಲೀಲೆಯಲ್ತೆ ಪೇಳು || ೨೨೮ ||
ವಾರ್ಧಕ
ಇನ್ನು ನೀನಿಲ್ಲಿ ನಿಲ್ಲದೆ ಪೋಗಿ ಗಜಪುರದೊ |
ಳೆನ್ನ ವಿಷಯವ ಧರ್ಮಜಂಗರುಹಿ ವಾಸವನ |
ಸನ್ನುತ ಕುಮಾರಕನ ನಿಂದೆನ್ನ ಬಳಿಗೆ ಬರ್ಪಂತೆ ಪೇಳುತ್ತೆ ಮತ್ತೆ ||
ಖಿನ್ನನಾಗದೆ ನಮ್ಮ ಪುರಕೆ ನಡೆದೆನ್ನ ಮನ |
ದನ್ನೆಯರಿಗಿದನರುಹೆನುತ್ತೆ ಕಳುಹಲ್ ನಮಿಸಿ |
ಪನ್ನಗಾಧೀಶ ಶಯನನ ನೆನೆಯುತೈದಿದಂ ದಾರುಕಂ ಕರಿಪುರಕ್ಕೆ || ೨೨೯ ||
ಅಂಕ ೧೩. ಶ್ರೀಕೃಷ್ಣನಿರ್ಯಾಣ
ರಾಗ ಭೈರವಿ ಝಂಪೆತಾಳ
ಒಂದು ದಿನ ಧರ್ಮಜನು ನಿಜಮಂದಿರದೊಳು ಕುಳಿ |
ತೆಂದನನುಜರ ಕೂಡೆ ನಾವು ಹರಿಚರಣ ||
ಸಂದರ್ಶನವ ಗೆಯ್ಯದಾಯ್ತು ಬಹು ಸಮಯವಿದ |
ರಿಂದೆನಗೆ ಖೇದವತಿಶಯವಾಯ್ತೆನಲ್ಕೆ || ೨೩೦ ||
ಬಂದನಲ್ಲಿಗೆ ದಾರುಕನು ಬಳಿಕ ವಿನಯದಿಂ |
ವಂದಿಸಲ್ಕವನ ಮನ್ನಿಸಿ ಯುಧಿಷ್ಠಿರನು ||
ಚಂದದಿಂ ಕುಳ್ಳಿರಿಸಿ ಬಂದ ಕಾರಣವನುಸು |
ರೆಂದೆನಲು ದುಃಖಿಸುತೆ ಹರಿಸೂತನೊರೆದ || ೨೩೧ ||
ರಾಗ ಸಾಂಗತ್ಯ ರೂಪಕತಾಳ
ಲಾಲಿಸು ಧರ್ಮಸಂಜಾತನೆ ಯಾದವ |
ಜಾಲವನ್ಯೋನ್ಯ ಯುದ್ಧದೊಳು ||
ಕಾಲನ ಪುರವನು ಸೇರಿತು ಮತ್ತೆ ಶ್ರೀ |
ಲೋಲನು ಕಾನನದಲ್ಲಿ || ೨೩೨ ||
ಜರನೆಂಬ ಬೇಡನ ಬಾಣದ ಹತಿಯಿಂದೆ |
ಧರೆಗುರುಳಿರ್ಪನೆಂದೆಂಬ ||
ಮರುಕದ ಸಂಗತಿಯನು ನಿನ್ನೊಳರುಹಲು |
ಹರಿಯಾಜ್ಞೆಯಿಂದೆ ಬಂದಿಹೆನು || ೨೩೩ ||
ಒಡನೆ ನೀನರ್ಜುನನನು ಕೃಷ್ಣನಲ್ಲಿಗೆ |
ತಡೆಯದೆ ಕಳುಹಬೇಕಂತೆ ||
ಜಡಜನಾಭನನುಜ್ಞೆಯಾಗಿದೆಯೆನುತಂದೆ |
ನಡೆದನಾ ದ್ವಾರಕಾಪುರಕೆ || ೨೩೪ ||
ವಾರ್ಧಕ
ಅನುಜ ಪಾರ್ಥನನು ಯಮತನುಜನಾಕ್ಷಣ ಕರೆದು |
ವನಜನಾಭನ ಬಳಿಗೆ ಘನವೇಗದಿಂದೆ ನಡೆ |
ಯೆನುತೆ ಕಳುಹಲ್ಕವನು ಮನಮರುಕದಿಂದೆ ನಡೆದನು ಕಂಡ ದುಶ್ಶಕುನವ ||
ಮನದೊಳೆಣಿಸದೆ ಹರಿಯ ನೆನೆದು ಮುಂಬರಿಯುತಿರೆ |
ಮುನಿ ನಾರದನು ಬಂದು ಸನಿಹದೊಳ್ ನಿಲಲವನು |
ವಿನಯದಿಂ ತಲೆವಾಗಲನುನಯದೆ ಪರಸುತಾ ಘನಮಹಿಮನಿಂತೆಂದನು || ೨೩೫ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ವೀರ ಪಾರ್ಥನೆ ಕೇಳು ನೀನಾ | ನೀರಜಾಕ್ಷನ ಬಳಿಗೆ ಪೋಪ ವಿ |
ಚಾರವರಿತಾನೀಗ ಬಂದೆನು | ಭೋರನೊಂದನು ತಿಳಿಸಲು | ನಿನ್ನ ಬಳಿಗೆ || ೨೩೬ ||
ಇಂದು ನೀನಾ ಹರಿಯ ಬಳಿಯನು | ಚಂದದಿಂ ಸೇರುತ್ತೆ ಮುಟ್ಟದಿ |
ರೆಂದಿನಂದದೊಳಲ್ಲದೊಡೆ ಬಲು | ದಂದುಗವು ನಿನಗಪ್ಪುದು | ಜತನವಯ್ಯ || ೨೩೭ ||
ಒಡನೆ ಪಾರ್ಥನು ಮುನಿಗೆ ಮಣಿಯುತೆ | ನುಡಿದನಿದರಿಂದೆನಗೆ ಬಪ್ಪಾ |
ತೊಡಕು ತೊಂದರೆಯೇನೆನಲು ಮುನಿ | ಮೃಡನು ತಡೆಯದೆ ನುಡಿದನು | ಪಾರ್ಥನೊಡನೆ || ೨೩೮ ||
ನಿನ್ನ ಶಕ್ತಿಯನವನು ಸೆಳೆವನು | ಬನ್ನ ನಿನಗಿದರಿಂದಲೊದಗುವು |
ದೆನ್ನು ತಾ ಮುನಿ ನಡೆಯೆ ಪಾರ್ಥನು | ಖಿನ್ನನಾಗುತೆ ಪೋದನು | ಹರಿಯ ಬಳಿಗೆ || ೨೩೯ ||
ಕಂದ
ಇಂತೈತಂದಾ ಪಾರ್ಥಂ |
ಚಿಂತೆಯೊಳುರೆ ನೊಂದು ಬೆಂದು ನರಳುತ್ತಿರ್ಪಾ ||
ಕಂತುವಿನಯ್ಯನನೀಕ್ಷಿಸು |
ತಂತರಿಸುತ್ತಂದು ಮಣಿಯೆ ಹರಿ ಇಂತೆಂದಂ || ೨೪೦ ||
ರಾಗ ಸಾಂಗತ್ಯ ರೂಪಕತಾಳ
ಏನಯ್ಯ ಪಾರ್ಥ ನೀನೀರೀತಿಯಿಂದನು | ಮಾನವನಾಂತು ಯೋಚಿಸುತೆ ||
ಸಾನುರಾಗದೊಳೇಕೆ ಬಾರದಿರ್ಪೆಯೊ ಬಲ | ಹೀನನಾಗಿರ್ಪೆನ್ನ ಬಳಿಗೆ || ೨೪೧ ||
ಭಾವನಲ್ಲವೆ ನಾನು ಭಾರತಾಹವದೊಳು | ಬೋವನಾಗಿರಲಿಲ್ಲವೇನು ||
ದೇವನಾಗಿಯೆ ಗೀತೆಯನು ಬೋಧಿಸಿಲ್ಲವೆ | ದೇವಕೀ ಸುತನು ನಾನಲ್ತೆ || ೨೪೧ ||
ಎಂದೊರೆದರು ವಿಜಯನು ಸನಿಹಕೆ ಬಾರೆ | ನೆಂದುಸುರಿದುದನು ಕೇಳಿ |
ಮಂದರಧಾರಿಯು ಮಲಗಿದಲ್ಲಿಂದಲೆ | ನೊಂದಿಂತು ನುಡಿದನು ಗಜರಿ || ೨೪೨ ||
ವಾರ್ಧಕ
ಹಿಂದೆ ಗಜನೋಹಿಯೊಳ್ ಪೊರೆದ ನಾ ಶರಸೇತು |
ಬಂಧನದೊಳೆಯ್ದೆ ರಕ್ಷಿಸಿದೆ ನಾ ಸೂತಸುತ |
ದಂದಶೋಕಾಸ್ತ್ರದಿಂ ಕಾಯ್ದೆನಾ ಭಗದತ್ತನಸ್ತ್ರದಿಂ ತಲೆಗಾಯ್ದೆನು ||
ಸಿಂಧುಭೂಪಾಲಕನ ಯುದ್ಧದೊಳ್ ಪೊರೆದೆ ನಾ |
ಸಿಂಧುಸುತನಸಿರತ್ನದಿಂದೆ ಪಾಲಿಸಿದೆ ನಾ |
ನಂದದಿಂದಶ್ವಮೇಧವ ಗೈಸಿದಂಥೆನ್ನನಿಂದು ಮರೆತೆಯೊ ಕೃತಘ್ನ || ೨೪೩ ||
ರಾಗ ಸಾಂಗತ್ಯ ರೂಪಕತಾಳ
ಎಂದೊರೆದೊಡನೆಯೆ ಪಾರ್ಥನು ದೂರದೊಳ್ |
ನಿಂದೆಲೆದೇವ ನಾರದರು ||
ಬಂದೆನ್ನೊಳೊರೆದರು ನಿನ್ನನು ಮುಟ್ಟುವು |
ದೆಂದಿಗು ಹಿತವಲ್ಲವೆಂದು || ೨೪೪ ||
ಆದಕಾರಣ ಮುಟ್ಟಲಾರೆನೆಂದೆನಲು ದಾ |
ಮೋದರನೊರೆದನಾ ಮುನಿಯು ||
ಸಾಧಿಸಿ ಜಗಳಗಂಟಿಕ್ಕುವನವನೆಂದ |
ಹಾದಿಯ ಹಿಡಿಯದಿರಯ್ಯ || ೨೪೫ ||
ಎನಗೆ ಬಾಯಾರಿಕೆಯಾಗುತಲಿದೆ ಬೇಗ |
ನಿನಿತು ನೀರನು ತಂದುಕೊಟ್ಟು ||
ಮನಕೆ ನೆಮ್ಮದಿಯ ನೀವೊಂದುಪಕಾರವ |
ಘನತೆಯಿಂ ನೀನೆಸಗಯ್ಯ || ೨೪೬ ||
ಭಾಮಿನಿ
ಎಂದು ಕೃಷ್ಣನು ಪಾರ್ಥನಿದಿರೊಳು |
ನೊಂದು ಯಾಚಿಸುತಿರಲು ಶಕ್ರನ |
ನಂದನನು ಮನಕರಗಿ ಜಲವನು ತಂದು ಕುಡಿಸಲ್ಕೆ ||
ಮಂದಹಾಸವ ಬೀರಿ ಪರಸು |
ತ್ತಂದವನ ಶಕ್ತಿಯನು ಸೆಳೆಯುತೆ |
ಮಂದರೋದ್ಧಾರಕನು ವೈಕುಂಠಕ್ಕೆ ತೆರಳಿದನು || ೨೪೭ ||
ಒಡನೆ ಪಾರ್ಥನು ಶಕ್ತಿಗುಂದುತೆ |
ಪೊಡವಿಯೊಳು ಬಿದ್ದೆದ್ದು ಹಾಹಾ |
ಜಡಜನಾಭನೆ ರಕ್ಷಿಸೆಂದಳುತಿರಲು ಮುರಹರನ ||
ಮಡದಿಯರು ಪುರಜನರು ದಾರುಕ |
ನೊಡನೆ ಜವದಿಂ ಬಂದು ಮರುಗುತೆ |
ಕಡೆಗೆ ಪರಕರ್ಮವನು ವಿಧಿವಿಹಿತದೊಳು ಮುಗಿಸಿದರು || ೨೪೮ ||
ಮತ್ತೆ ಪಾರ್ಥನು ನಿಜಧನುವ ತಾ |
ನೆತ್ತಲಾರದೆ ಧರೆಯೊಳದನೆಳೆ |
ಯುತ್ತೆ ನಡೆವೆಣನಂತೆ ಬಂದಾ ದ್ವಾರಕೆಯೊಳಿರ್ದ ||
ಚಿತ್ತದುಬ್ಬೆಗದಿಂದೆ ದಿನವಿ |
ಪ್ಪತ್ತು ಕಳೆದರು ತನ್ನ ಪುರವರ |
ದತ್ತ ಪೋಗದೆ ಚಿಂತೆಯಿಂದಾ ಎಡೆಯೊಳಿರುತಿರ್ದ || ೨೪೯ ||
ಅಂಕ ೧೪. ದ್ವಾರಕೆಗೆ ದಸ್ಯುಗಳ ದಾಳಿ
ರಾಗ ಭೈರವಿ ಝಂಪೆತಾಳ
ಒಂದು ದಿನ ಕಾಲಮುಖನೆಂಬ ದಸ್ಯುವು ತನ್ನ |
ಮಂದಿರಕೆ ನಿಜ ಸಹಾಯಕರನ್ನು ಬರಿಸಿ ||
ಮಂದಹಾಸವ ಬೀರುತೆಂದನೆನ್ನಾತ್ಮೀಯ |
ಬಂಧುಗಳೆ ಕೇಳಿರಿಂದೊಂದು ಪೊಸ ಸುದ್ದಿ || ೨೫೦ ||
ದ್ವಾರಾವತಿಯೊಳಿರ್ಪ ಯಾದವರು ಶೈಮಿನೀ |
ದ್ವಾರವನು ಪೊಕ್ಕಿರ್ಪರೆಂಬ ವಿಷಯವನು ||
ಭೋರನೇ ಕೇಳ್ದು ಬಲ ರಾಮನಹಿಯಾಗುತ್ತೆ |
ಸೇರಿರ್ಪನಂತೆ ಪಾತಾಳ ಲೋಕವನು || ೨೫೧ ||
ಹರಿಯಿದನು ಕೇಳುತ್ತೆ ವನದೆಡೆಗೆ ಪೋಗಿರಲು |
ಜರನೆಂಬ ಶಬರನವನನು ಕೊಂದನಂತೆ ||
ಪರಿಕಿಪೊಡೆ ನಮಗೆ ಸತ್ಕಾಲ ಸಮನಿಸಿತೇನ |
ನೊರೆವಿರೀ ವಿಷಯದ ವಿಚಾರದೊಳು ನೀವು || ೨೫೨ ||
ರಾಗ ಶಂಕರಾಭರಣ ಮಟ್ಟೆತಾಳ
ಎಂದೆನಲ್ಕೆ ರುದ್ರಮುಖನು | ನಿಂದು ನುಡಿದನೀಗ ನಾವು |
ಮುಂದುವರಿಯುತುಳಿದ ನರರ | ಕೊಂದು ತೀರಿಸಿ ||
ಚಂದದಿಂದ ಸರ್ವಧನವ | ನಿಂದೆ ಸೂರೆಗೆಯ್ವುದುಚಿತ |
ವೆಂದೆನಲ್ಕೆ ಭದ್ರಮುಖನು | ಬಂದು ನುಡಿದನು || ೨೫೩ ||
ಒಡೆಯ ಲಾಲಿಸಿನ್ನು ನಾವು | ತಡೆಯದಲ್ಲಿಗೀಗ ಪೋಗಿ |
ಕಡವರವನು ಸೂರೆಗೆಯ್ದು | ಕಡಿದು ಸರ್ವರ ||
ಕೆಡಹಿ ಬರ್ಪುದುಚಿತವೆನಲು | ದಡಿಗರೆಲ್ಲ ಸರಿಯಿದೆನುತೆ |
ನುಡಿಯಲಂದು ಕಾಲಮುಖನು | ಪಡೆಯ ನೆರಹುತೆ || ೨೫೪ ||
ಶರಷಟ್ಪದಿ
ಮತ್ತವರೈತಂ |
ದುತ್ತರ ದೆಸೆಯೊಳು |
ಮುತ್ತುತೆ ಕೋಟೆಗಳನು ಕೆಡಹಿ ||
ಪತ್ತನವನು ಪೊ |
ಕ್ಕೆತ್ತೆತ್ತಲು ಸುಳಿ |
ಯುತ್ತುರೆ ಬಡಿದರು ಸರ್ವರನು || ೨೫೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮನೆಮನೆಯ ಪೊಕ್ಕಲ್ಲಿ ಕುಳಿತಿಹ |
ವನಿತೆಯರ ಪಿಡಿಪಿಡಿದು ಸೆಳೆದರು |
ಕನಕ ರಜತಾಭರಣವೆಲ್ಲವ | ಮುನಿಸಿನಿಂದ || ೨೫೬ ||
ಓಡಿ ಪೋಗುವ ಬಾಲಕರನುರೆ |
ಪೀಡಿಸುತೆ ಪಿಡಿದೈದೆ ಸುಲಿದರು |
ಜೋಡು ಬಳೆಸರ ಕಡಗಗಳನು ಸ | ಗಾಢದಿಂದ || ೨೫೭ ||
ಅರಮನೆಯ ನೆರೆಮನೆಯ ಶೋಭಿಪ |
ಗುರುಮನೆಯ ಪೊಕ್ಕಲ್ಲಿ ವಾಸಿಸು |
ತಿರುವವರನುರೆ ಪೀಡಿಸಿದರಂ | ದುರುತರದೊಳು || ೨೫೮ ||
ಅಂಗಡಿಗಳನು ಸೂರೆಗೊಳುತೆ ಸು |
ಮಂಗಲೆಯರನು ಪೀಡಿಸುತೆ ಸ |
ರ್ವಾಂಗ ಸುಂದರಿಯರನು ಪಿಡಿದರ | ನಂಗ ಧುರಕೆ || ೨೫೯ ||
ಇಂತು ದಸ್ಯುಗಳೆಯ್ದೆ ರೋಷವ |
ನಾಂತು ಪುರವನು ಸುಲಿವ ವಿಷಯವ |
ನಂತಕಾತ್ಮಜನನುಜನರಿಯು | ತ್ತಿಂತು ಬಗೆದ || ೨೬೦ ||
ಭಾಮಿನಿ
ಬಂದು ಮುತ್ತಿಹ ಧೂರ್ತರನು ನಾ |
ನಿಂದು ತರಿಯದೆ ಬಿಡೆನೆನುತ್ತವ |
ನಂದು ಗಾಂಡೀವವನು ನೆಗಹಲ್ಕಾರದುರೆನೊಂದು ||
ಮುಂದೆ ನಾನಿನ್ನೇವೆನೆನ್ನುತೆ |
ಕಂದಿಕುಂದುತೆ ಕುಳಿತಿರಲು ನಡೆ |
ತಂದು ಮದಮುಖರವನನಣಕಿಸುತಾಗ ಪೇಳಿದರು || ೨೬೧ ||
ರಾಗ ಆರ್ಯಸವಾಯಿ ಏಕತಾಳ
ಎಲವೆಲವೋ ಹೇ | ಕಲಿಪಾರ್ಥನೆ ನೀ |
ಬಲಯುತನಂದೆನುತೆಲ್ಲವರು ||
ನೆಲದೊಳು ನಿನ್ನನು | ಸಲೆಪೊಗಳುವರೈ |
ಛಲದಂಕನೆ ಬಾ ಬಿಲುವಿಡಿದು || ೨೬೨ ||
ಗುರುಕೃಪಭೀಷ್ಮರ | ತರಿದವ ನೀನೋ |
ವರಕರ್ಣನ ನೀ ಕೊಂದಿಹೆಯೋ ||
ಕುರುಧಾರುಣಿಯೊಳು | ಮೆರೆದಿರ್ಪಧಟನು |
ನೆರೆ ತೋರಿಸು ನಮ್ಮೊಡನೀಗ || ೨೬೩ ||
ಹರಿ ಇಲ್ಲದೆ ದು | ರ್ಧರ ಧುರಗೆಯ್ವಾ |
ಪರಿಯನು ನೀನೆಂತರಿತಿಹೆಯಾ ||
ನರನಲ್ಲವೆ ಬಾ | ಪರಿಕಿಸುವೆವು ನಿ |
ನ್ನುರುತರ ವಿಕ್ರಮವನ್ನೀಗ || ೨೬೪ ||
ರಾಗ ಪಂತುವರಾಳಿ ಮಟ್ಟೆತಾಳ
ಎಂದು ಮುಟ್ಟಿ ಮೂದಲಿಸಲು | ನೊಂದ ಹಂದಿಯಂತೆ ಪಾರ್ಥ |
ನೆಂದು ಖಡ್ಗವನ್ನು ಪಿಡಿದು | ಬಂದು ದುರುಳರ ||
ಮುಂದೆ ನಿಂದು ಬಹಳ ರೋಷ | ದಿಂದೆ ಧುರವನೆಸಗೆ ದಸ್ಯು |
ವೃಂದದೊಡೆಯನಸಿಯನೆಳೆದ | ನಂದು ಪಾರ್ಥನ || ೨೬೫ ||
ಕರದ ಖಡ್ಗವನ್ನು ದಸ್ಯು | ವರನು ಸೆಳೆದ ಬಳಿಕ ನರನು |
ಭರದೊಳಂದು ಮುಷ್ಟಿಯಿಂದ | ಶಿರಕೆ ಬಡಿಯಲು ||
ಧರೆಗೆ ಬೀಳುತೆದ್ದು ರೋಷ | ಭರಿತನಾಗಿ ಧೂರ್ತರೊಡೆಯ |
ನೆರಗೆ ನರನು ಮೂರ್ಛೆ ಹೊಂದಿ | ತಿರೆಗೆ ಬಿದ್ದನು || ೨೬೬ ||
ಭಾಮಿನಿ
ಬಳಿಕ ದಸ್ಯುಗಳೆಲ್ಲರಾ ಪುರ |
ದೊಳಗೆ ಪೊಕ್ಕಲ್ಲಲ್ಲಿ ಶೋಭಿಪ |
ನಿಳಯ ನಿಳಯದೊಳುಳ್ಳ ಧನಕನಕಾದಿ ವಸ್ತುಗಳ ||
ತಳುವದೇ ಸುಲಿಸುಲಿದು ಸೂರೆಯ |
ಗೊಳುತೆ ಸತಿಯರ ಪಿಡಿದು ಪೀಡಿಸಿ |
ಗಳುವಕೈದಿದರಧಿಕ ಹರ್ಷದೊಳಂದು ನಲಿನಲಿದು || ೨೬೭ ||
ನರನು ಮತ್ತೆಚ್ಚೆತ್ತು ಧೂರ್ತರು |
ಪುರವ ಸುಲಿಯುತೆ ಪೋದ ವಿಷಯವ |
ನರಿತು ನೆರೆ ಮರುಗುತ್ತೆ ಬಳಿಕುಳಿದವರನೊಡಗೊಂಡು ||
ಪರಿತಪಿಸುತಾ ದಿನವೆ ಮಧುರಾ |
ಪುರಕೆ ನಡೆತಂದಲ್ಲಿ ವಜ್ರಗೆ |
ಧರೆಯ ಪಟ್ಟವ ಕಟ್ಟುತೈದಿದನಂದು ಗಜಪುರಕೆ || ೨೬೮ ||
ಅಂಕ ೧೫. ಪರೀಕ್ಷಿತ ಪಟ್ಟಾಭಿಷೇಕ
ರಾಗ ಭೈರವಿ ಝಂಪೆತಾಳ
ಇತ್ತಲಿಭಪುರದೊಳಿನ ಸುತನಸುತನಧಿಕ ಸಂ |
ಪತ್ತಿನಿಂ ನೆರೆ ಮೆರೆಯುತಿರ್ದು ತನ್ನವರ ||
ಹತ್ತಿರವೆ ಕುಳ್ಳಿರಿಸಿ ತನ್ನ ಮನ ಮರುಕವನು |
ಬಿತ್ತರಿಸಿದನು ಬಹಳ ಖೇದದಿಂದಾಗ || ೨೬೯ ||
ಅನುಜರೇ ನಮ್ಮ ಹಿರಿಯಯ್ಯ ಮುಂತಾದವರು |
ವನಕೆ ತೆರಳುತ್ತಲ್ಲಿ ಮಡಿದ ವಿಷಯವನು ||
ನೆನೆಯೆ ಮನಕತಿ ದುಃಖವಪ್ಪುದಲ್ಲದೆ ಶಕ್ರ |
ತನಯ ನಾ ದ್ವಾರಕೆಗೆ ಪೋದವನು ಮರಳಿ || ೨೭೦ ||
ಬರಲಿಲ್ಲವೇಕೊ ಮತ್ತಾಯೆಡೆಯೊಳೇನಾಯ್ತೊ |
ಹರಿಯು ಹೇಗಿಹನೊ ಎಂದರಿಯದಾನಿಂದು ||
ಮರುಮರುಗುತಿಹೆನೆನಲು ವರವೃಕೋದರನಾಗ |
ಳೆರಗುತ್ತೆ ನುಡಿದನಾ ಧರ್ಮಸುತನೊಡನೆ || ೨೭೧ ||
ರಾಗ ಮಾರವಿ ಏಕತಾಳ
ಹಿರಿಯಣ್ಣನೆ ನೀ | ಮರುಗದಿರೀಕ್ಷಣ | ತೆರಳುತೆ ವಿಷಯವನು ||
ಅರಿದೈತರ್ಪೆನು | ಹರುಷದೊಳೆನೆ ಯಮ | ಳರು ಬಳಿಕುಸುರಿದರು || ೨೭೨ ||
ಇಂದೆಮಗಾಜ್ಞೆಯ | ನಂದದೊಳಿತ್ತೊಡೆ | ಮುಂದೈದುತೆ ನಾವು ||
ಚಂದದೊಳೆಲ್ಲವ | ಬಂದರುಹುವೆವಾ | ನಂದದೊಳಿರು ನೀನು || ೨೭೩ ||
ಎಂದವರೊರೆಯಲು | ಬಂದಾ ಪಾರ್ಥನು | ವಂದಿಸುತಗ್ರಜಗೆ ||
ನಿಂದತಿ ಖೇದದೊ | ಳಂದಿರೆ ಕಾಲನ | ನಂದನ ನಿಂತೊರೆದ || ೨೭೪ ||
ರಾಗ ಕೇದಾರಗೌಳ ಅಷ್ಟತಾಳ
ಏತಕೀಪರಿಯಿಂದ ಮೌನವನಾಂತನು | ಜಾತನೆ ದೂರದೊಳು ||
ಕಾತರದಿಂದೆ ನಿಂತಿರ್ಪ ಕಾರಣವ ಸು | ಪ್ರೀತಿಯಿಂ ಪೇಳೆನ್ನೊಳು || ೨೭೫ ||
ಹರಿಗೆ ಸುಕ್ಷೇಮವೆ ಬಲಭದ್ರ ದೇವನು | ಸರಸದಿಂದಿರುತಿಹನೆ ||
ಭರದಿಂದೆ ನೀನೆಲ್ಲ ವಿಷಯವ ನೊರೆ ಎನೆ | ಮರುಗುತ್ತೆ ಪಾರ್ಥನೆಂದ || ೨೭೬ ||
ರಾಗ ಸಾಂಗತ್ಯ ರೂಪಕತಾಳ
ಲಾಲಿಸಿ ಕೇಳಗ್ರಜಾತನೆ ಯಾದವ | ಜಾಲವೆಲ್ಲವು ಮದ್ಯವನ್ನು ||
ಲೀಲೆಯಿಂ ಸೇವಿಸುತನ್ಯೋನ್ಯ ಹೋರಾಡಿ | ಕಾಲನ ಪುರಕೈದಲೊಡನೆ || ೨೭೭ ||
ಬಲನು ವೈರಾಗ್ಯದಿಂದಹಿಯಾಗಿ ಮತ್ತೆ ಭೂ | ತಲವನು ತೊರೆದ ತಲಕ್ಕೆ ||
ಜಲಮಾರ್ಗದಿಂದೆ ಪೋಗಲು ಹರಿ ವನದೆಡೆ | ಗಲೆಯುತ್ತೆ ಪೋದನು ಬಳಿಕ || ೨೭೮ ||
ಜರನೆಂಬ ಶಬರನಾ ವನದೊಳು ಹರಿಗೊಂದು | ಶರವನು ಬಿಟ್ಟವನನ್ನು ||
ಧರೆಗುರುಳಿಸಿದನಲ್ಲಿಗೆ ನಾನು ಪುಡುಕುತ್ತೆ | ತೆರಳಿದೆನಾಗ ಶ್ರೀಹರಿಯು || ೨೭೯ ||
ನೀರು ಬೇಕೆಂದೆನ್ನೊಳೊರೆಯಲು ಜಲವನು | ಭೋರನೆ ತಂದೀಂಟಿಸಲ್ಕೆ ||
ಸಾರಸಾಕ್ಷನು ಜಲದೊಡನೆನ್ನ ಬಲವನು | ಹೀರುತೆ ಮಡಿದನಾ ಬಳಿಕ || ೨೮೦ ||
ಅವನುತ್ತರ ಕ್ರಿಯೆಗಳನೆಲ್ಲ ಮಾಡಿಸು | ತವಿರಳ ದುಃಖದಿಂದಿರಲು ||
ಜವದಿಂದೆ ದಸ್ಯುಗಳೈ ತಂದು ಪುರವನು | ತವೆ ಸೂರೆಗೆಯ್ದರೆನ್ನಿದಿರೆ || ೨೮೧ ||
ಬಲಹೀನನಾಗಿ ನಾನವರೊಳು ಕಾದುತ್ತೆ | ಸಲೆಸೋತು ಬಳಿಕ ದ್ವಾರಕೆಯ ||
ಲಲನೆಯರೊಂದಿಗೆ ಮಧುರೆಗೆ ಪೋಗಿ ಮ | ತ್ತೊಲಿದುಷಾತನಯ ವಜ್ರನಿಗೆ || ೨೮೨ ||
ಧರೆಯ ಪಟ್ಟವ ಕಟ್ಟಿದಂದೇ ದ್ವಾರಾವತೀ | ಪುರವು ಸಮುದ್ರ ಪಾಲಾಯ್ತು ||
ಭರದಿಂದ ಮತ್ತಿಲ್ಲಿ ಗೈತಂದೆನೆನೆ ಯಮ | ತರಳನಾಲೋಚಿಸುತೆಂದ || ೨೮೩ ||
Leave A Comment