ರಾಗ ಭೈರವಿ ಏಕತಾಳ

ಹನುಮನು ಬೆರಗಾಗುತ್ತ | ತಾ |
ಕಿನಿಸಿಲಿ ಪಲ್ಮೊರೆಯುತ್ತ |
ಇನಿತೆಸಗಿದರಾರಿಂದು | ಬೇ |
ಹಿನ ಚರರಾರೆಂದಂದು ||415||

ಕತ್ರಿಮವಾರಿಂದಾಯ್ತು | ತಿಳಿ |
ಯುತ್ತಿರುತಿರೆ ಈ ಹೊತ್ತು |
ಧೂರ್ತರ ಕಳುಹಿಸಲೆನಗೆ | ಕೈ |
ವರ್ತಿಸುತಿತ್ತೈ ನಿಜಕೆ ||416||

ದ್ರುಹಿಣನೆ ತಿಳಿದೆನು ಇದಕೆ | ಈ |
ಕುಹಕವು ತನ್ನಯ ಪದಕೆ ||
ಅಹಿತವು ಎಂದೀ ಪರಿಯ | ಬಹು |
ಗಹನದಿ ಮಾಡಿದ ಕೃತಿಯ ||417||

ಸುಡುವೆನು ಬ್ರಹ್ಮಾಂಡವನು | ಎಳೆ |
ದಿಡುವೆನು ವಿಧಿಪುರವನ್ನು |
ಕೆಡುಕುತನವ ನಿಲಿಸುವೆನು | ಎನು |
ತೊಡಸುತ್ತಿದ ಬಾಲವನು ||418||

ಸಡಲಿತು  ವಿಶ್ವದ ಜಠರ | ಮೇ |
ಣೊಡೆಯಿತು ಕುಲಗಿರಿ ಶಿಖರ |
ಒಡನಜ ಬೆದರಿದ ಮನದಿ | ಸುರ |
ರಡಿಗಡಿಗಳಲಲು ರವದಿ ||419||

ಚಾಡಿಯು ಹೊರಗಾಯ್ತೆಂದು | ನಲಿ |
ದಾಡಿದ ನಾರದನಂದು |
ನೋಡಿದನಜನೀ ಕೃತಿಯ | ಕೈ |
ಜೋಡಿಸುತೆಂದನು ಹರಿಯ ||420||

ರಾಗ ಸಾಂಗತ್ಯ ರೂಪಕತಾಳ

ಲಾಲಿಸೆನ್ನಯ್ಯ ಕೋಪಿಸದಿರು ಮಾತನು |
ಪಾಲಿಸಬೇಕು ತಪ್ಪುಗಳ |
ಬಾಲನಾರದನಿಂದಲಪರಾಧವಾಯ್ತಂದು |
ಕೇಳು ನೀ ಮರುತಜಾತನಿಗೆ ||421||

ಇತ್ತ ಶೇಷಾನ್ನದಿ ಗುಹನ ಕೆರಳಿಸಿಯೊಂದು |
ಯತ್ನ ಮಾಡಿದನು ನಾರದನು |
ಸತ್ಯಲೋಕವ ನಿನಗಿತ್ತುದ ಹನುಮಗೆ |
ಮತ್ತೆ ಕೊಟ್ಟನು ರಾಮನೆನಲು ||422||

ಸತ್ಯವೆಂದರಿತು ತಂದೆಗೆ ಪೇಳೆ ಶಿವ ಖತಿ |
ವೆತ್ತೆನ್ನ ಕರೆದು ಪೇಳಿದನು ||
ವರ್ತಮಾನವ ಪೇಳಲಂಜುತ ನಿನಗಾಗ |
ಪುತ್ರನ ಕರೆದು ಸಂತೈಸೆ ||423||

ಪಾಯವೇನೆಂದರುಹಲು ನಾರದನು ಕೇಳ್ದು |
ಹಾಯಿದ ಕ್ಷೀರಸಾಗರಕೆ ||
ರಾಯ ನಿನ್ನಯ ಭಕ್ತ ಕುಮುದರ ಬೋಧಿಸಿ |
ವಾಯುಜಾತನನಲ್ಲಿ ಕಳುಹಿ ||424||

ಸರಸಿಜಾಸನನಲ್ಲಿಗಯ್ದಿ ಮಾತಾಡುತ |
ತಿರುಗಿ ನಿನ್ನಯ ಭೋಜನವನು ||
ಚರಿಸೆಂಬುದುಸಿರಲಟ್ಟಿದ ಮೇಲೆ ಕುಮುದರು |
ಅರಿಯದೆ ಕದ್ದೊಯ್ದರವರು ||425||

ಹೊರಲತ್ತ ಶೇಷಾನ್ನ ಹನುಮ ಬಂೆನ್ನನು |
ಬರಲಟ್ಟಲೇಕೆಂದು ಕೇಳೆ ||
ನಿರತಾವನರಿಯೆನೆಂದೊರೆಯಲಯ್ದುತ ಪಾತ್ರ |
ವಿರದಿರೆ ಖತಿಯ ಕೊಂಡವನು ||426||

ವಿಧಿಯಪರಾಧಿಯೆಂದೆನುತ ಲಾಂಗೂಲವ |
ಮದಮುಖತನದಿ ಸುತ್ತಿದನು |
ಕದನ ನಾರದನಿಂದಲಾಯ್ತು ಕದ್ದವರು ನಿ |
ನ್ನಧಿಭಕ್ತ ಕುಮುದರೆಂಬವರು ||427||

ನೀನಿತ್ತ ಜಗ ಉರುಳುವುದು ಕರೆದು ಪಾವ |
ಮಾನಿಯ ನಿಲಿಸು ಶಾಂತದಲಿ ||
ಕ್ಷೋಣಿಯು ತಲೆಕೆಳಗಾದರೇನುಂಟಲ್ಲಿ |
ನೀನೆ ಯೋಚಿಪುದೆನೆ ಹರಿಯು  ||428||

ಕಾರ್ಯವು ಕೈಮೀರಿತೇನು ಸೋಜಿಗವೆಂದು |
ವಾರಿಜನಾಭನಂಗದನ ||
ಕಾರಣ ಗಡುತರ ಸತ್ಯಲೋಕಕೆ ನೀನು |
ಹಾರಬೇಕೀಗಲೆಂದೆನುತ ||429||

ರಾಗ ಘಂಟಾರವ ರೂಪಕತಾಳ

ಪೋಗು ಬಾಲಕ | ಮರುತಜಾತನ |
ಬೇಗದಿಂದಲಿ | ಕರೆಯೊ ಕಡುಗಲಿ ||
ಆಗದಾಗದು | ಖತಿಯು ಬರಿದದು |
ಸಾಗದಾತನ |  ಪರಿಯು ನೂತನ || ಪೋಗು ||430||

ತಡಮಾಡದೆ | ಪೋಗೊ ಬೇಗನೆ |
ಬಿಡದೆಯವನನು | ಕರೆದು ತಾರೆನೆ ||
ಒಡನೆ ಹಾರಿದ | ಸತ್ಯಲೋಕಕೆ |
ಒಡೆಯನಾಜ್ಞೆಯ |  ನೆಂದನವನಿಗೆ | ಪೋಗು ||431||

ಮಾರುತಾತ್ಮಜ | ಚೋದ್ಯವೇನಯ್ಯ |
ಧಾರೆಯೆರೆದಿಹ | ಪುರವನೇನಯ್ಯ ||
ಸೂರೆಗೊಂಬೆಯ | ಪೇಳು ನಿಶ್ಚಂು |
ಧಾರಿಣಿಯೊಳು | ನಗುವರಲ್ಲಯ್ಯ | ಪೋಗು ||432||

ಕಾರಣೀಕನು | ಕೋಪ ಗೆಯ್ವನು |
ಬಾರೊ ಎನ್ನಯ | ಕೂಡೆ ನೀನಯ್ಯ ||
ಧೀರತನವೆನೆ | ಬಂದನೊಯ್ಯನೆ |
ಮಾರುತಾತ್ಮಜ | ಸುರಪಜಾತ್ಮಜ || ಪೋಗು  ||433||

ರಾಗ ಕೇದಾರಗೌಳ ಝಂಪೆತಾಳ

ಹನುಮ ತಾನಯ್ತಂದಿರೆ | ಕಾಣುತ |
ಜನರೆಲ್ಲ ಜವಗುಂದಿರೆ ||
ಘನಸೊಬಗಿನಾಶ್ಚರ್ಯದಿ | ಶರಣೆಂದ |
ನಿನಕುಲಗೆ ತಾನು ಜವದಿ ||434||

ವಂದಿಸಲು ಕಡು ಭಕ್ತನ | ಮೆಯ್ದಡವಿ |
ಮಂದರಾಧರನಾತನ ||
ಸಂದೇಹಗಳನೆಲ್ಲವ | ಮರೆಮಾಜ |
ದಂದು ಕೇಳಿದ ಮಾಧವ ||435||

ಮನದ ಖತಿಯೇನು ಪೇಳು | ತೊಡರುಗಳ |
ನಿನಗೆ ಗೆಯ್ದವರೆನ್ನೊಳು ||
ಮನವೊಲಿದು ಪೇಳೆನ್ನಲು | ಜಯ ಜಯೆಂ |
ದನು ಹನುಮ ರಾಘವನೊಳು ||436||

ರಾಗ ಮಾರವಿ ಏಕತಾಳ

ದೇವನೆ ನಿನ್ನ ಪ್ರಸಾದವ ಪಡೆದಾನು |
ಭಾವದಿ ಕೊಂಡೊಯ್ದು ||
ನಾವುಣ್ಣುವ ಸಮಯದಿ ಕಪಟಂಗಳ |
ನೀ ವಿಧ ತೋರಿದುದು ||437||

ಸಮ್ಮತವೇ ಸುರಸಂತತಿ ಠಕ್ಕಿನ |
ಹೆಮ್ಮೆ ಪುರಾತನದಿ ||
ತಮ್ಮಯ ಪದಚ್ಯುತ ಕಾರ್ಯಕೆ ಬೇಕಾ |
ಧರ್ಮರು ತಾವ್ ನಿಜದಿ ||438||

ಸಗರ ಯಯಾತಿ ಪರಂಪರೆ ರಾಜರ |
ಹೊಗಬಿಟ್ಟರೆ ಸ್ವರಕೆ ||
ಮಿಗೆ ತನ್ನೊಳು ತೋರಿದರೀ ವಿಕ್ರಮ |
ರಘುವರ ತವ ಮನಕೆ ||439||

ಒಪ್ಪಿದುದೇ ತವ ಪುತ್ರನ ಕುಹಕವ |
ತಪ್ಪದೆ ನಿಲಿಸುವೆನು ||
ಕಪ್ಪಿನ ಕಂಠನ ಮರೆಯೊಗಲವನನು |
ಅಪ್ಪಳಿಸುವೆ ನಾನು ||440||

ಶುದ್ಧ ಪರಾತ್ಪರವಸ್ತುವ ಬೇಡುತ |
ಸಿದ್ಧಿಸಿದೂಟವನು ||
ಕದ್ದವರಸುವೆಳೆಯದೆ ಬಿಡೆ ನಾನೆಂ |
ದೊದ್ದನು ಭೂಮಿಯನು ||441||

ವಾರ್ಧಕ

ಸುರರಂಜೆ ಸಭೆಯು ದಿಗಿಯಾಯ್ತಜನು ಬೆದರಿದನು |
ಮರುತಜನ ಸಿಂಹರವಕುರೆ ನಾರದಂ ನಡುಗೆ |
ಮುರಹರಂ ಬೋಳಯ್ಸುತೆಂದನಾ ಹನುಮನೊಳು ನಾರದಂ ನಿನಗಿಕ್ಕಿದೆ ||
ಪರುಟವಣೆ ಸುರರಜನ ತಪ್ಪಿಲ್ಲ ಷಣ್ಮುಖನ |
ಕೆರಳಿಸಿದ ಕಥನ ನಿನಗಿದರಿಂದ ದೋಷಮೇ |
ಣೊರೆದುದಿದು ನಿಶ್ಚಯವೆ ಇರುಸುಮ್ಮನೇಳುದಿನ ಪರಿಯಂತ ಗುಹಗೆಂದನು ||442||

ಭಾಮಿನಿ

ಆ ಸಮಯದಲಿ ಕ್ಷೀರಸಾಗರ |
ವಾಸ ಗಯ್ದುತಲೆರಗುತಲಿ ಬಿ |
ನ್ನಯಿಸಿಕೊಂಡರು ನಾರದನ ಬಲೆಗಿಂದು ಸಿಲುಕಿದೆವು ||
ಕೇಶವನೆ ನಾವ್ ತಾಯನಗಲಿದ |
ಕೂಸುಗಳ ತೆರವಾದೆ ನಿಮ್ಮಭಿ |
ಲಾಷೆಯಿಂದಪರಾಧಕಾವುದು ಬಂದು ನಿಜಪುರಕೆ ||443||

ರಾಗ ಮಧುಮಾಧವಿ ಏಕತಾಳ

ಕಣ್ಣನೀರನು ಸುರಿಸುತ ಸೀತೆಯಡಿಗೆ |
ಬಣ್ಣಗೆಟ್ಟೆರಗಿದರ್ ತಾಯೆ ಬಂದೆಮಗೆ ||
ಮುನ್ನಿನಂದದಿ ಕಾಯಬೇಕೆನಲಂದು |
ಚೆನ್ನಕೇಶವ ನಿರೂಪಿಸಿದನಿಂತೆಂದು ||444||

ನಿಜದ ಸೇವಕರಾಗಿ ಬೆದರಲೇಕಯ್ಯ |
ಭಜಕರೆಲ್ಲಿರುವರಲ್ಲಿರುವೆ ನಾನಯ್ಯ ||
ನಿಜವಿದು ಬರುವೆನಳಲಬೇಡಿರೆಂದು |
ಅಜನಯ್ಯ ಮನ್ನಿಸಿ ಕಳುಹಿದನಂದು ||445||

ನಾರದ ನೀನೇತಕಿಂತು ಗೆಯ್ದಿಹುದು |
ಯಾರು ದೋಷವ ಮಾಡಿದರು ನಿನಗಿಂದು |
ಮಾರಾರಿ ಗುಹನಜಮುಖ್ಯ ದೇವರಿಗೆ |
ಭೂರಿ ಸಂತಾಪವು ಕೂಡಿದ ಜನಕೆ ||446||

ತ್ರೈಮೂರ್ತಿಗಳು ನಾವು ಒಂದೇಯೆಂಬುವುದು |
ನೀ ಮಾಡಿದುದರಿಂದ ಭೇದವಾಯ್ತಿಂದು
ಭೂಮಿಪಾಲರು ನೆರೆದವರೆಲ್ಲ ಬಳಲಿ |
ಈ ಮರುಳೇನೆಂದು ನೋಳ್ಪರಿಂದಿಲ್ಲಿ ||447||

ಮನದಿಚ್ಛೆ ನಿನಗೇನು ಬೇಕು ಕೇಳೆನಲು |
ಮುನಿಯಂದು ನಸುನಕ್ಕು ಪೇಳ್ದ ರಾಮನೊಳು ||
ಎನಗೇನು ಬೇಕು ಸಂಸಾರವ ಮಾಡು |
ಜನದಿಚ್ಛೆ ಸಲಿಸು ಕಲ್ಯಾಣ ಮುಂಕೊಂಡು ||448||

ದ್ರಾಕ್ಷೆಬೀಜವ ಬಿತ್ತಿ ಬೆಳೆದುದು ಹಣ್ಣು |
ಪ್ರೇಕ್ಷಕರುತ್ತಮರಿಗೆ ಬಾಳೆಹಣ್ಣು ||
ಸೀಕ್ಷ ಪಾತ್ರರಿಗಾಯ್ತು ಬಾಯ್ಗದು ಮಣ್ಣು |
ಈಕ್ಷಿಪ ಜನರಿಗೆನ್ನಯ ಮೇಲೆ ಕಣ್ಣು ||449||

ಹರಿಭಕ್ತರನು ನೀನು ನೋಡಿದೆ ಗುಟ್ಟು |
ಮರುತಜಗಾಯ್ತೆನ್ನ ಮೇಲತಿ ಸಿಟ್ಟು |
ಪರಮಸಾಹಸಿ ತನ್ನ ವೀಣೆಯೊಂದಿವಸ |
ತುರುಕಿಸಿದನು ಕಲ್ಲ ಗರ್ಭಕೆನ್ನ ರಸ  ||450||

ಅದರ ಮೇಲಣಿಕೆಯನಿತ್ತನು ತನಗೆ |
ವಿಧಿಯ ಪುರಕೆ ಬಾಲ ಸುತ್ತಿದನದಕೆ |
ಪದುಮಜನಪರಾಧವಿಹುದೇನೆಂಬುದನು |
ಮಧುವೈರಿ ನೀನೆ ನಿರ್ಣಯಿಸಬೇಕಿದನು ||451||

ಭಾಮಿನಿ

ಹರಿಯೆ ಸರ್ವೋತ್ತಮನೆ ಲಕ್ಷ್ಮೀ |
ವರನೆ ಕರುಣಾಕರನೆ ಜಗದೋ |
ದ್ಧರನೆ ಖಳಸಂಹರನೆ ಜಾನಕಿವರನೆ ಮುರಹರನೆ ||
ನಿರತ ವೈಕುಂಠದೊಳುರಂಜಿಪ |
ಸಿರಿಯರಸ ಶರಣಾಗು ಸಂತತ |
ಕರುಣವಿರಲೆಂದಡರೆ ಹಂಸೆಯ ಮೇಲೆ ನಭದೊಡಲ ||452||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ನಾರದನ ಲೀಲೆಗಳ ಕಂಡಸು |
ರಾರಿ ಮೊದಲಾದವರು ನಕ್ಕರು |
ಮಾರಮಣನಭವಂಗೆ ಪೇಳಿದ | ಕಾರಣವನು ||453||

ಜಗಳ ನಮಗಿಕ್ಕಿದನು ನಾರದ |
ದುಗುಡವೇತಕೆ ಬಾ ಗುಹನೆ ನಿ |
ಮ್ಮಗಣಿತದ ಗುಣಕಿಂದು ಮೆಚ್ಚಿದೆ | ಸುಗುಣರಿರದೆ ||454||

ಬಂದುದಿದು ನೀವೆಲ್ಲ ಹರುಷವು |
ಸಂದ ಭಾಗ್ಯೋದಯವು ನಮ್ಮದು |
ಎಂದು ಪ್ರೀತಿಯೊಳಭವ ಮುಖ್ಯರ | ನಂದು ಕಳುಹೆ ||455||

ಮಾರಣೆಯ ದಿನವೆಲ್ಲ ಭೂಮಿಪ |
ಧಾರಿಣೀಸುರ ಮುಖ್ಯಮುನಿಗಳ |
ಭೂರಿ ಮನ್ನಣೆಯಿಂದ ಕಳುಹಿದ | ಮಾರಪಿತನು ||456||

ಬಂಧುಬಾಂಧವರನ್ನು ಪ್ರೀತಿಯೊ |
ಳಂದು ಕಳುಹಲು ನೆರೆದ ಜನರುರೆ |
ಮಂದರಾಧರನನ್ನು ಪೊಗಳುತ | ಲಂದು ತೆರಳೆ ||457||

ದಾನವೋತ್ತಮನನ್ನು ಕರೆಯುತ |
ತಾನೆ ಮರ್ಯಾದೆಯೊಳು ಮನ್ನಿಸಿ |
ಸೇನೆ ಸಹ ಕಳುಹಿದನು ತರಣಿಯ | ಸೂನುಮುಖ್ಯ ||458||

ಸ್ವಾಮಿಕಾರ್ಯಧುರಂಧರರ ಬಹು |
ಪ್ರೇಮದಿಂ ಹರಸುತಲಿ ಕಳುಹುತ |
ಲಾ ಮರುತಸುತಗೆಂದ ದಯದಲಿ | ರಾಮಚಂದ್ರ ||459||

ಭಾಮಿನಿ

ಜಗದೊಳುತ್ತಮ ನಿನ್ನ ಸೇವಿಪ |
ರುಗಳಘನಾಶನವು ಹೊದ್ದಲಿ |
ಯಗಣಿತದ ಸಾಮ್ರಾಜ್ಯಪದವಿಯ ಪಡೆದೆನಿನ್ನೇನು ||
ಮಿಗೆಯರಣ್ಯದಿ ಹಣ್ಣು ಹಂಪಲ |
ಮಗನೆ ಭುಂಜಿಸಿ ಬಾಳು ನಿನಗೇನ್ |
ದುಗುಡ ಬೇಡೆಂದೆನುತ ಬೋಳಯಿಸಿದನು ಶ್ರೀಹರಿಯು ||460||

ರಾಗ ಕಲ್ಯಾಣಿ ಝಂಪೆತಾಳ

ಆ ಸಮಯದಲಿ ಸೀತೆ ಕಣ್ಣೀರ ತಾ ಸುರಿಯೆ |
ಆ ಸಮೀರನ ಸುತನ ಪೊಗಳಿ ಮನದಣಿಯೆ ||
ಏಸು ಜನ್ಮಾಂತರಕು ಮರೆಯತಕ್ಕುದೆ ನಿನ್ನ |
ಈಸು ಗುಣವೆಂದು ಹರಸುತ ಕಳುಹಲವನ ||461||

ಮಾಗಧಿಯು ಮರುಗಿ ಬಾಯ್ದಣಿಯೆ ಕೊಂಡಾಡಿದನು |
ಆಗಲಕ್ಷಯ ವಯೋವಂತನಾಗಿನ್ನು ||
ರಾಘವನ ಕಡು ಭಕ್ತನಾಗು ಹೋಗೆನಲಂದು |
ಯೋಗಿವಂದ್ಯನು ಬೇಡಿ ಬಳಿಕ ತಾನಂದು ||462||

ಸೌಮಿತ್ರನಿಗೆ ನಮಿಸಿ ಬಲಬಂದು ಪುರಕೆರಗಿ |
ಕಾಮಿತವ ಧಿಕ್ಕರಿಸಿ ಕಣ್ಣೀರ ಸುರಿಸಿ |
ಭೂಮಿಯೊಳು ಪೊರಳುತಯ್ದರಣ್ಯ ಗುಹೆಯೆಡೆಯು |
ರಾಮ ರಾಮೆಂದು ಭಜಿಸುತ್ತಿರ್ದ ಹರಿಯ ||463||

ಪಾಲಿಸಲು ಶ್ರೀರಾಮನಿಳೆಯ ದಶಸಾವಿರದ |
ಕಾಲ ಬಲು ಸೊಗಸಿನಿಂ ತಮ್ಮಂದಿರಿಂದ ||
ಕೀಳುಮೇಲೆನಿಸದತಿ ಧರ್ಮದಿಂ ರಾಜ್ಯವನು |
ಆಳಿದನು ತವ ಜನನಿಯೊಡಗೂಡುತವನು ||464||

ಮೂಢ ರಜಕನ ಮಾತಿಗವನಿಜೆಯ ಬಿಟ್ಟಿರಲು |
ಕಾಡುಪಾಲಾಗಿರ್ದ ನಿಮ್ಮ ಜನನಿಯಳು ||
ಕೂಡೆ ಕರೆತಂದಿಲ್ಲಿ ಪರ್ಯಂತ ಕಥನವಿದು |
ಗೂಢವದ ಪೇಳ್ದೆನಾ ಮೇಲೆ ತಿಳಿದಿಹುದು ||465||

ರಾಮರಾಜ್ಯದ ಸೊಬಗನೇನೆಂಬೆನೆಳೆಮರಣ |
ಕಾಮುಕ ದುರಾಚಾರ ದೂರು ದುರ್ಗ್ರಹಣ ||
ಭೂಮಿಯೊಳು ಕತಕತ್ಯ ಪ್ರತ್ಯಕ್ಷ ವೈಕುಂಠ |
ಸೀಮೆಯೆನೆ ರಾಮ ಬಲು ರಂಜಿಸಿದನೆನಲು ||466||

ಕ್ಷಿತಿಸುರೋತ್ತಮ ರಾಮನಾಲೆಟ್ಟ ಎನುತಿಹರು |
ಕೃತಿ ಇದನು ಪೇಳ್ದೆ ಮನ್ನಿಪುದು ಬಲ್ಲವರು ||
ಕ್ಷಿತಿಯೊಳುತ್ತಮರಿದನು ಪಾಡಿ ಪೊಗಳಿದರವರು |
ಸುತಸಂಪದಾದ್ಯಷ್ಟಭಾಗ್ಯ ಹೊಂದುವರು ||467||

ಧರೆಯೊಳಾದಿಯ ಕಾವ್ಯ ಕವಿಯು ವಾಲ್ಮೀಕಿಯಡಿ |
ಗೆರಗಿದನು ಪಟ್ಟಾಭಿರಾಮನನು ಪಾಡಿ |
ವರದ ಸೀತಾರಾಮ ರಾಮೆಂದೆದೋಷಗಳು |
ಪರಿಹರಿಸಿ ಪಾಲಿಸೈ ಹರಿಯೆ ಕರುಣಾಳು ||468||

ಮಂಗಳ
ರಾಗ ಕಾಂಭೋಜಿ ಝಂಪೆತಾಳ

ದಶರಥನ ಸುತ ರಾಮಚಂದ್ರನಿಗೆ ಇಂದ್ರನಿಗೆ |
ಕುಶಿಕಸುತಮಖ ಪೊರೆದ ಹರಿಗೆ ದೇವರಿಗೆ ||
ವಸುಧಜೆಯ ವರಿಸಿ ಧನು ಮುರಿದವಗೆ ಮೆರೆದವಗೆ |
ಅಸಮ ಭಾರ್ಗವಪರಶು ಎಳೆದವಗೆ ಬಲಗೆ || ಮಂಗಳಂ ||469||

ಕಾನನವ ಪೊಕ್ಕಯುತ ರಾಮನಿಗೆ ಭೀಮನಿಗೆ |
ಮಾನಿನಿಯ ನೆವದಿ ಖಳರರಿದಗೆ ಮೆರೆದಗೆ ||
ವಾನರನ ಕೊಂದುದಧಿ ಬಲಿದವಗೆ ನಲಿದವಗೆ |
ಕ್ಷೋಣಿ ಲಂಕೆಯ ಶರಣಗಿತ್ತವಗೆ ಹರಿಗೆ || ಮಂಗಳಂ ||470||

ಮಂಗಳಂ ಸೀತೆಯನು ನೋಡಿದಗೆ ಕೂಡಿದಗೆ |
ಮಂಗಳ ಸಾಕೇತವಾಸಗೆ ಈಶೆಗೆ ||
ಮಂಗಳಂ ಪಟ್ಟಾಭಿರಾಮನಿಗೆ ರಾಮನಿಗೆ |
ಮಂಗಳಂ ಜಯಜಯತು ಸಿರಿಗೆ ಶ್ರೀವರಗೆ || ಮಂಗಳಂ ||471||

ಶ್ರೀಕೃಷ್ಣಾರ್ಪಣಮಸ್ತು