ಭಾಮಿನಿ

ಮಣಿಖಚಿತ ಕೇಯೂರ ಹಾರಾ |
ದ್ಯನುಪಮಿತ ಸಂಪದಗಳೆಲ್ಲವ |
ಧನಪನಿತ್ತಿಹ ಪುಷ್ಪಕವನಂದಾ ವಿಭೀಷಣನು ||
ಮನವೊಲಿದು ಭಕ್ತಿಯೊಳು ರಾಮನ |
ಸುನತಪದಕೊಪ್ಪಿಸುತಲೆರಗಿರೆ
ವನಜಲೋಚನೆ ತಲೆಯ ತೂಗುತಲೆಂದ ನಸುನಗುತ ||66||

ರಾಗ ನವರೋಜು ಆದಿತಾಳ

ಮೆಚ್ಚಿದೆ ನಾನೆಲೆ ಶರಣ | ತವ | ಹೆಚ್ಚಿನ ಹೊನ್ನಾಭರಣ ||
ಮುಚ್ಚುಮರೆಯೇ | ನೊಲ್ಲೆನು ಸರ್ವಥ |
ನಿಶ್ಚಯ ಮತವಿದು |  ನಚ್ಚಿನೊಳೊರೆವುದು || ಮೆಚ್ಚಿದೆ ||67||

ಪ್ರೇರಿಸಬೇಡೆಮ್ಮುವನು | ನಿಜ | ಧಾರಿಣಿಯನಿತ್ತಿಹೆನು ||
ಕೋರದು ಮನವದ | ಕಿಚ್ಚಿಸೆ ನಾ ಸಿರಿ |
ಸೇರಿಸು ಪುರಕದ | ಪಡದಿರುಖೇದ || ಮೆಚ್ಚಿದೆ | ||68||

ಪೋಗುವೆವು ನಾವ್ ಪುರಿಗೆ | ತಡ | ವಾಗದೆ ಬೀಳ್ಕೊಡು ನಮಗೆ ||
ಬೇಗನೆ ಭರತನ | ಕಾಣಲು ಬೇಹುದು |
ಆಗದು ತಡೆದರೆ | ನೀಗುವ ತನುವುದೆ || ಮೆಚ್ಚಿದೆ | ||69||

ಹದಿನಾಲ್ಕು ವತ್ಸರದ | ಮಾ|ತದು ನಮ್ಮ ನಿಶ್ಚಯದ||
ತುದಿ ದಿವಸದೊಳ|ಯ್ದದೆ ಹಿಂದುಳಿದರೆ |
ಒದಗದಿರದು ಬಲು ಕಷ್ಟಕರಂಗಳು || ಮೆಚ್ಚಿದೆ | ||70||

ವಾರ್ಧಕ

ನಳಿನಾಕ್ಷನೆಂದ ನುಡಿಗೊಡಬಟ್ಟು ತಲೆವಾಗಿ |
ಸಲುಗೆಯಿದ್ದರೆ ನಿನ್ನಕೂಡಿಂದು ನಾ ಬೇಡಿ |
ಕೊಳುವೆನತಿ ವಿಕ್ರಮದ ಶರಧಿಯಾಗುತ ಮೆರೆದು ಸೇತುವಂ ಬಂಧಿಸುತಲಿ ||
ಕೊಳುಗುಳದೊಳೊದಗಿ ಖಳಕುಲವ ಮಥಿಸುತಲೆನಗೆ |
ಇಳೆಯ ಪಟ್ಟವನಿತ್ತುದೇಕೆಂಬುದನು ನೀನು
ತಿಳಿದೀಗ ವಂಚಿಸದೆಸಲಿಸಿದರೆ ಧನ್ಯ ನಾನಿಳೆಯೊಳೆನಲಿಂತೆಂದನು ||71||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ತಿಳಿದೆ ನಿನ್ನಿಂಗಿತವನಂತರ |
ದೊಳಗೆ ಸೊಗಸಾಗಿರಲು ನೋಡುವೆ |
ಲಲನೆಯನು ಕರೆಸೆನಲು ಶರಣನು | ತಲೆಯ ಬಾಗಿ ||72||

ಹರುಷದಲಿ ಹಿಂತಿರುಗಿ ತನ್ನಯ|
ತರುಣಿಯರ ಕೂಡಯ್ದಿ ಸೀತೆಯ |
ಚರಣಸರಸಿಜದೊಳಗೆ ಮಣಿಯುತ | ಶರಣನೆಂದ ||73||

ಭಾಮಿನಿ

ಸೀತೆ ತ್ರಿಜಗನ್ಮಾತೆ ಧಾತ್ರಿಯ |
ಜಾತೆ  ರಘುಪತಿ ಪ್ರೀತೆ ನಿನ್ನಾ |
ರಾತಿಯಾಗಿಹ ಯಾತುಧಾನರು ಪ್ರೇತಪುರಕೇರೆ ||
ಸಾತಿಶಯ ಸುಪ್ರೀತಿಯೊಳು ರಘು |
ಜಾತ ಕಳುಹಿದನೀತಳಕೆ ವಿ |
ಖ್ಯಾತೆ ದಯಮಾಡೀ ತತುಕ್ಷಣನಾಥನೆಡೆಗೆನಲು ||74||

ರಾಗ ಬಿಲಹರಿ ಅಷ್ಟತಾಳ

ನಿಜವೇನೊ ಶರಣ ನಿನ್ನ | ಮಾತನು ನಂಬ |
ಲಜತಾತ ನೆನೆದುದೆನ್ನ ||
ಸುಜನವಂದಿತ ಸುಪ್ರ | ತಾಪ ಪ್ರತಾಪನು |
ಕುಜನಮರ್ದನ ಗುಣ | ವಂತನು | ಕಾಂತನು ||  ||75||

ಮನದಿರವೆಂತು ಪೇಳು | ನಿನ್ನೊಳು ಪೇಳ್ದ |
ಇನಯನ | ಮಾತುಗಳು ||
ಎನಗನುಮಾನ ಗ್ರ | ಹಣದಪವಾದವು |
ಜನಿತವಾಗಿರೆ ರಘು | ತನಯನ ಮತವು ||  ||76||

ಚಿಂತೆಯೇಕವ್ವ ರಾಮ | ಮೊದಲೆ ಗುಣ |
ವಂತನೆಂದರಿಯೆಯಮ್ಮ ||
ಕಂತುಜನನಿ ಕಾಕ | ಮಧ್ಯದಿ ಪಿಕನಿದ್ದ |
ರೆಂತಾಪವಾದವು | ಮನವು ನಿಶ್ಚಯವು ||   ||77||

ಲೇಸು ಹೊಲ್ಲೆಹನು ನಾನು | ತಿಳಿಯೆನಿಂದು |
ವಾಸುದೇವನೆ ಬಲ್ಲನು ||
ಆಶೆನಿರಾಶೆಯಾ | ದಪುದೇಕೆಯೊಡಬಟ್ಟೆ |
ಕ್ಲೇಶ ಬೇಡೌ ಮುಂದೆ | ನಡೆ ಬಪ್ಪೆ ನಾ ಹಿಂದೆ ||  ||78||

ಕರುಣಿಸು ವರವನೊಂದು | ಬೇಡುವೆನು ನಾ |
ಚರಣಾಬ್ಜದಡಿಯೊಳಿಂದು ||
ಸರ್ವಮಂಗಲೆಯೆಂದು | ನೋಡುವೆನದರಿಂದು |
ಧರಿಸು ಭೂಷಣವಿದು | ದೋಷವಿಲ್ಲೆಂದು ||  ||79||

ಭಾಮಿನಿ

ಶರಣ ಬೇಡುವೆನೊಲ್ಲೆನೀ ಸಿರಿ |
ಯರಸನನುವನು ತಿಳಿಯದೇ ನಾ |
ಮರುಳುಗೊಳೆ ಕೇಳ್ ಮುಳ್ಳ ಮೊನೆ ಮೇಲಿರುವ ಮನೆಯಿಂದು ||
ಉರುಳಿದರೆ ಗತಿಯಾವುದೆನಗೆಂ |
ದರಿದು ತಿಳಿದೇ ನೀನು ಬೇಡುವೆ |
ಶರಣ ಛಲ ಬಿಡುಯೆನಲು ಚರಣದೊಳೆರಗುತಿಂತೆಂದ  ||80||

ರಾಗ ಭೈರವಿ ಝಂಪೆತಾಳ

ಅಂಜಬೇಡಲೆ ತಾಯೆ | ನಿಜದ ಡಿಂಗರಿಗನಹೆ |
ಕಂಜನಾಭಗೆ ಕಯ್ಯ | ಮುಗಿವೆ ದಮ್ಮಯ್ಯ || ಅಂಜ ||81||

ಕಬ್ಬಿಣದ ಕಾಠಿನ್ಯ | ಬಲ್ಲುದದು ಬೆಂಕಿಯೇ |
ಉರ್ಬಿಪತಿ ರಾಮನನು | ತಿಳಿದಿಹೆನು ನಾನು ||  ||82||

ಬಂದೆಡರ ರಕ್ಷಿಸುವ | ಹೊಣೆ ರಾಮ ನಮಗೇನು |
ಮುಂದೆ ಭಕ್ತರ ಪಾಲಿ | ಸಲಿ ನಮ್ಮ ಬಿಡಲಿ ||  ||83||

ಸುಧೆಯಬ್ಧಿನಡುವಿನಲಿ | ತಿಲಗರಳ ಸಾಕಲ್ಲಿ |
ಹದನನರಿತಿಹೆ ತಿಳಿಯ | ಬಹುದದರ ಪರಿಯ ||  ||84||

ಆದಡಾಗಲಿ ಇನ್ನು | ಕೈಗೊಂಡೆನರಿಕೆಯನು |
ವೇದಗರ್ಭನು ನೆನೆದು | ದಂತಾಗಲೆಂದು ||   ||85||

ತೊಡಿಸಿದಳು ರಾಮನ | ರ್ಧಾಂಗಿ ಮೋಹನದಂಗಿ |
ಹದಯದಲಿ ಬಿಡಿಸಿದಳು | ಸಾಕ್ಷಾತವವಳು ||  ||86||

ಹೊನ್ನ ಕಡಗವನಿಟ್ಟು | ಮೆರೆವ ಕುಪ್ಪಸ ತೊಟ್ಟು |
ರನ್ನ ಪೀತಾಂಬರವ | ನುಟ್ಟಳತಿ ಚೆಲುವ ||   ||87||

ಕುಂಕುಮವನಿಟ್ಟು ತಿಲ | ಕವತಿದ್ದಿ ಮೇಖಲೆಯ |
ನಂಕದೊಳು ಕೇವಣಿಸಿ ಲಕುಮಿಯೆಂದೆನಿಸಿ  ||88||

ನವರತ್ನಮಯದ ದಂ | ಡಿಗೆಯೇರ್ದಳಂಗನೆಯು |
ಭುವನ ಜಯ ಜಯವೆನಲು | ಸತಿಪತಿಯೆ ಹೊರಲು ||  ||89||

ಕಲಶಕನ್ನಡಿ ವಾದ್ಯ | ರವದ ಪರುಟಣೆ ಹದ್ಯ |
ನಿಲುವ ಚಾಮರ ನಲಿವ | ನಾರಿಯರ ಚೆಲುವ ||  ||90||

ರಘುವರನ ನಾಟಕವ | ನೋಡಲಯ್ದಿದ ನಭವ |
ನಗಜೆ ಸಹಿತಲಿ ತ್ರಿದಶ | ರೊಡೆಯ ವಾಣೀಶ  ||91||

ರಘುಕುಲದ ಪೀಳಿಗೆಯ | ದಶರಥಾದಿಗಳೆಲ್ಲ |
ಬಗೆ ನಿರೀಕ್ಷಿಸುತಿದ್ದ | ರೇನೆಂಬೆ ಸದ್ದ ||   ||92||

ಕ್ಷೀರಾಬ್ಧಿಮಥನದಿಂ | ದೊಗೆದಯ್ದುವಂದದಿಂ |
ದೂರದಿಂ ರಾಘವನು | ಬರವ ನೋಡಿದನು ||  ||93||

ಬೆರಳ ಮೂಗಿನೊಳಿಡುತ | ಶಿರವ ತೂಗಾಡಿಸುತ |
ತರಳ ಲಕ್ಷ್ಮಣ ನೋಡು | ನೋಡೆಮ್ಮ ಪಾಡು ||  ||94||

ವಾರ್ಧಕ

ಗತಿಯ ಪ್ರತ್ಯಕ್ಷಾನುಭವವೆ ಮಾನವ ಕೊರೆವ |
ವ್ಯಥೆಯ ನಮ್ಮನು ಕಾಡುತಿಹುದಲೈ ಮೇಣದಕೆ |
ಮಥನ ಲವಣಾಗ್ನಿಯಿಂದೊಗ್ಗರಣೆ ಲೇಸಹುದೆ ಶಿವ ಶಿವಾ ನಾವರಿಯೆವು ||
ಸತಿಯು ಸಾಮಾನ್ಯಳಲ್ಲಿವಳಿಂದಲೇ ನೀನು |
ವ್ಯಥೆಗೊಂಡೆ ಹರಿಣ ಪುಡುಕುತ ಪೋಗಲೆಗಾಯ್ತು |
ಕಥನವೌದುಂಬರದ ಪುಷ್ಪ ನಾರಿಯ ಮನವನಾರ್ಗರಿವುದೆಲೆಗೆ ತಮ್ಮ ||  ||95||

ರಾಗ ಕಾಂಭೋಜಿ ಝಂಪೆತಾಳ

ತಾತನಾಜ್ಞೆಯ ಸಲಿಸುವುದಕೆ ಕಾನನ ಹೊಕ್ಕ |
ರೇತರದ ಪರಿಹಾಸ್ಯವಾಯ್ತು ||
ಮಾತು ಮರೆಯದ ಮುನ್ನ ಈ ತರುಣಿ ಸೊಬಗಮ್ಮ |
ಐತರುವುದನು ನೋಡು ತಮ್ಮ |  ||96||

ರವಿವಂಶದೊಳು ಪುಟ್ಟಿ ಕುಂದ ತವರೂರಾಯ್ತು |
ಇವಳಿಂದ ಲೇಸಿಲ್ಲವೆಂದು |
ಜವದಿ ಪೋಗಿಳುಹವಳನೆನುತಲಂಗದನನ್ನು |
ರವಿಕುಲನು ಕಳುಹಲಯ್ದಿದನು ||  ||97||

ಶರಣಗಿದನರುಹಿ ಕೈಸನ್ನೆಯೊಳಗಂಗದನು |
ತಿರುಹೆ ಸರಮಾಧವನು ತಾನು ||

ಕರಕರಿಸಿ ಮೈ ನಡುಗಿನಿಂದು ಜಾನಕಿಗಿದಿರು |
ಕರವ ಮುಗಿದಿದಿರಿರ್ದನಸುರ ||  ||98||

ಜಲಜಾಕ್ಷಿ ತಿಳಿದು ಹಾರಿದಳಂದು ಪಾಲಕಿಯ |
ಇಳೆಯಾತ್ಮಭವೆ ನಡುಗಿ ಮೈಯ್ಯ||
ಇಳೆಯು ಬಾಯ್ ಬಿಟ್ಟಿರಲ್ಕವಳಿಳಿಯುವಂತಿರಲು |
ಅಳಲುಮೊಗದಬಲೆಕೇಳ್ ಚೋದ್ಯ  ||  ||99||

ಬಿಸಿಲೆರೆದ ಕುಮುದದಂದದಿ ಬಾಯ ತುಟಿಯದುರೆ |
ವಸುಧೆಪತಿ ರಾಮನಿದಿರಿನೊಳು ||
ಕುಸುಮಾಕ್ಷಿಯೊಳವರಿತು ಶರಣನಂದೆರಗುತಲಿ |
ವಸುಧೆಪತಿಗೆಂದ ಭೀತಿಯೊಳು ||  ||100||

ರಾಗ ಸಾಂಗತ್ಯ, ರೂಪಕತಾಳ

ದೇವನೆ ಕ್ಷಮಿಸಬೇಕೆನ್ನಯ ತಪ್ಪನು |
ದೇವಿಯ ಪದಕೆರಗುತಲಿ||
ಸೇವೆ ಕೈಗೊಳಲುಬೇಕೆನ್ನುತೊತ್ತಾಯದಿ |
ಭಾವಕಿಗಿತ್ತೆ ವಸ್ತುಗಳ ||  ||101||

ತಿಳಿಯದೆ ಗೆಯ್ದ ಪರಾಧವನೆಣಸದೆ |
ನಳಿನಾಕ್ಷಿಯಳ ಕಾಯಬೇಕು ||
ಇಳೆಯ ನಂದನೆಯ ಮೇಲಾದೋಷ ಹೊರಿಸಲು |
ಉಳುಹಿಲ್ಲ ಎನಗೆ ನಿಶ್ಚಯವು ||   ||102||

ಲಂಕೆಗಿನ್ನಯ್ದೆನು ರಾಜ್ಯದೊಳಿರೆ ನಾನು |
ಕಿಂಕರಗಿದುವೆ ಸಾವಹುದು ||
ಪಂಕಜಾಕ್ಷನೆ ಪಾಲಿಸೆನೆ ಸುಗ್ರೀವಾದ್ಯರು |
ಶಂಕರಸಖಗೆಂದರಂದು ||  ||103||

ಭಾಮಿನಿ

ಕಾಡುಬೆಟ್ಟವ ಹೊತ್ತು ಶರಧಿಗೆ |
ಮಾಡಿ ಸೇತುವ ಲಂಕೆಯೊಳು ಹೊಡೆ |
ದಾಡಿರುವ ಶ್ರಮ ವ್ಯರ್ಥವಾಯ್ತಂದೊರೆದ ನುಡಿಗಾಗಿ ||
ಕೂಡಿದೆವು ಬರಿದೇಕೆ ಜನ ಕೊಂ |
ಡಾಡದಿಹುದೇ ಮಾತು ತಪ್ಪಲು |
ಮೂಢತನವೆಮಗಾಯ್ತು ಮನ್ನಿಸು ಸೀತೆಯನು ದಯದಿ ||104||

ರಾಗ ಕೇತಾರಗೌಳ, ಅಷ್ಟತಾಳ

ಆಗ ಸುರೇಶನಯ್ತಂದೆರಗುತ ಪೇಳ್ದ |
ರೋಗಿಯಂತಿಹಳು ದೇವಿ ||
ರಾಘವನನ್ಯತ್ರ ತಿಳಿಯದ ಸಾಧ್ವಿಯು |
ನೀ ಗುರು ಜಗದೈವವು ||105||

ಸುರರ ರಕ್ಷಿಸಲೆಂದು ಬಂದಿಹೆ ಸತಿಸಹ |
ಪೊರೆದು ನಮ್ಮೆಲ್ಲರನು ||
ಮರುಕಪಡಿಸಲೇಕೆ ದಯದಿಂದ ಪಾಲಿಸು |
ಸಿರಿಯ ನೀನೆನ್ನಲಾಗ ||106||

ವಾಣಿವಲ್ಲಭ ಕಯ್ಯ ಮುಗಿದು ಬೇಡಿದ ತಾಯಿ |
ಗೇನಪರಾಧವೆಂದು ||
ನೀನೆ ಸರ್ವಜ್ಞ ನಾಗುತಲಿಂತು ಗೆಯ್ದರೆ |
ಏನೆನ್ನುವರು ಲೋಕದಿ ||107||

ದಶರಥನೊಳು ಪುಟ್ಟಿ ಲಕುಮಿಯನೊಡಗೊಂಡು |
ವಸುಧೆಯ ಭಾರವನು ||
ಕುಸುರಿದರಿದ ನಿನ್ನದೀ ಚೋದ್ಯವೇನೆಂದು |
ಅಸಮಸಾಹಸಗೆನಲು ||108||

ಗೌರಿಯು ಸೀತೆಯಾನನವನು ತೆರೆಯುತ |
ವಾರಿಜನೇತ್ರಗಾಗ ||
ತೋರುತೆಂದಳು ಜಗದಾದಿಮಾತೆಯು ನಮ್ಮ |
ನಾರಿಸಂದೋಹಕಿಂದು ||109||

ಹರುಷವಿತ್ತಳು ತನು ಬಡವಾಯ್ತು ಭಕ್ತಿಯೊ |
ಳಿರುವಳಾರಿವಳಿಗೆಣೆ ||
ದೊರಕಲಾರರು ನಿನಗೇತಕೀ ದುಮ್ಮಾನ |
ಪೊರೆಯಬೇಕೆನಲು ತಾನು ||110||

ಗಂಗೆಯ ಪೊತ್ತೈದಿ ಬಂದೆಂದ ಮಗಧರ |
ನಂಗನಯ್ಯನಿಗೆ ಬೇಗ ||
ತಂಗಿಯ ಮೇಲೇಕೆ ಮನಮುನಿಸಿದು ಬೇಡ |
ರಂಗನೆ ಕೂಡವಳ ||111||

ಸುರಮುನಿಮನು ಮುಖ್ಯ ಪರಮಯೋಗಿಗಳೆಲ್ಲ |
ಬೆರಗುಗೊಂಡಿಹರು ನೋಡು ||
ಚರಿತೆ ಸಾಕೈ ರಾವಣನ ಕೊಂದು ಬಳಿಕಿನ್ನು |
ಹರುಷವಲ್ಲವು ಜಗಕೆ ||112||

ಸತಿಯರುಂಧತಿ ತಾರೆ ಸೀತೆಯಹಲ್ಯೆಯು |
ರತಿಚರಿತೆಯರು ಲಕ್ಷ್ಮೀ ||
ಪಥಿವಿನಂದನೆ ನಾವು ಮೂರು ಮೂರ್ತಿಗಳಯ್ಯ |
ಲತಿಹಾಸ್ಯವೆನಲೆಂದಳು ||  ||113||

ಭಾಮಿನಿ

ಮರುಗಿ ಬೆಂಡಾಗಿರ್ಪ ಸೀತಾ |
ತರುಣಿಯೈತಂದೊಡೆಯನಂಘ್ರಿಗೆ |
ಶಿರವ ಚಾಚುತಲೆಂದಳಂಗನೆ ನಿಜಮನೋಗತವ ||
ಕರುಣನಿಧಿ ನೀ ನಲ್ಲದನ್ಯರ |
ಸ್ಮರಿಸಿದೆನು ತಾನಾದಡಗ್ನಿಯ |
ವಿರಚಿಸೈ ಹೊಕ್ಕೊಗೆದು ಬಹೆ ನಿನ್ನಡಿಯ ಕರುಣದಲಿ ||114||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಎನಲು ಕೇಳುತ ಲಕ್ಷ್ಮಣನು ಮನ | ಮುನಿಸಿನಿಂದಣ್ಣನಿಗೆ ಪೇಳಿದ |
ನೆನಗೆ ನೇಮವ ಕೊಡು ಕೋಡೀಕ್ಷಣ | ಅನಲನುರಿಗೆ ||115||

ಪೊಗದರಿಂದೆನಗಿಂದು ವಿಶ್ವಾ | ಸಿಗರಿಗೊಂಚಿಸಿ ನಿನಗೆ ದ್ರೋಹವ |
ಬಗೆದ ಬಹು ದೋಷಂಗಳಯ್ದಲಿ | ಸುಗುಣ ಕೇಳು ||116||

ಸತ್ಯವರಿಯದೆ ಶಿಕ್ಷಿಸಲು ನಮ | ಗೆತ್ತಣಿಂ ಸೌಭಾಗ್ಯ ಬರುವುದು |
ಪಥ್ವಿ ಹೊರುವಳೆ ದೋಷ ಶಿವ ಶಿವೆ | ನುತ್ತ ಮಣಿಯೆ  ||117||

ಹನುಮನಂಗದ ತರಣಿಸುತರಂ | ದೆನಗೆ ತನಗೆಂದಳಲುತಾಜ್ಞೆಗೆ ||
ವನಜನಾಭನ ಬೇಡೆ ಗೌರಿಯು | ಕನಲುತಾಗ ||118||

ಬಂದು ಪೇಳ್ದಳು ರಘುಜನೊಳು ಬೇ | ಡೆಂದು ಚಿತೆಗೀ ಸತಿಯ ನೂಕುವ |
ಡಿಂದು ತಾನೇ ಹೊಗುವೆನೆನಲೈ | ತಂದನೀಶ ||119||

ಏನಿದಚ್ಚರಿ ಪೊಸತು ಪರಿಯಿದು | ದಾನವಾಂತಕನೇನ ಮಾಡುವೆ |
ನೀನೆ ಸುಜ್ಞನು ಬೇಡ ಬೇಡೆನೆ | ದಾನವೇಂದ್ರ ||120||

ಭಾಮಿನಿ

ಶರಣ ಮಮ್ಮಲ ಮರುಗೆ ಸುರಪತಿ |
ಸುರಿಸೆ ಕಂಬನಿ ಕಮಲಜಾಸನ |
ಕೊರಗೆ ಮನುಮುನಿನಿಕರ ಹಾಯೆನ್ನುತಲಿ ತರಹರಿಸೆ ||
ಪುರಹರನು ಮೊದಲಾದರೆಲ್ಲರಿ |
ಗರಿಯುವಂದದಿ ಪೇಳ್ದ ತನ್ನಯ |
ತರಣಿಕುಲಸದ್ಧರ್ಮ ನಿಷ್ಠೆಯ ಕ್ಷಾತ್ರಮರ್ಮವನು ||121||