ರಾಗ ಕೇದಾರಗೌಳ ಅಷ್ಟತಾಳ

ಹಿರಿತನ ಸಾಕೇತ ಪರಿಯರಿಯುತಲೆಲ್ಲ |
ಅರುಹಿದರೆನಗೆ ನೀವು ||
ಸುರಸ್ವರ್ಗವಾದರು | ಸರಕುಮಾಡುವರಲ್ಲ |
ತರುಣಿಯ ಪಾಡೇನಿಂದು  ||122||

ಹೆಚ್ಚು ಮಾತಾಡಬೇಡಿರಿ ಬಲ್ಲೆ ತಾನೆಂದು |
ಅಚ್ಯುತ ಕರೆದೆಂದನು ||
ನಿಶ್ಚಯವಿದು ತಮ್ಮ ಸಂಶಯ ಬೇಡಿನ್ನು |
ಕಿಚ್ಚಿಯನುರಿಸೆಂದನು ||123||

ಕಿರಿಯ ನೀನಾದರೆ ತನ್ನಾಜ್ಞೆ ನಡೆಸೆನ |
ಲುರಿಗೊಳ್ಳಿಗಳನೆಲ್ಲರು ||
ಉರುಹ ಲಗ್ನಿಯ ಕುಂಡವನು ಕಾಣುತೆಂದಳು |
ಧರಣಿಜೆ ರಾಮನಿಗೆ ||124||

ಕಾಂತಲಾಲಿಸು ಎನ್ನ ನಿಜವ ನಾನೊರೆವೆನೇ |
ಕಾಂತದಿ ನಿನ್ನ ನಾನು ||
ಚಿಂತಿಸದನ್ಯರ ನೆನೆದರೆ ಎನಗೆ ಕ |
ತಾಂತನ ಸೆರೆಯಾಗಲಿ ||125||

ಮುಡಿದಬ್ಬ ಕುಸುಮ ಬಾಡಿದರೆ ನೀ ನೋಡೆಂದು |
ಅಡಿಗೆ ಪ್ರದಕ್ಷಿಣಿಯ ||
ಬಿಡದೆ ಬಂದುಮೆಯ ವಂದಿಸಿ ಸುರನಿಕರಕೆ |
ಜಡಜಾಕ್ಷಿ ನಮಿಸುತಲಿ ||126||

ಅನ್ಯಾಯಗೆಯ್ದರೆನ್ನಗ್ನಿ ಕೊಳ್ಳಲಿಯೆಂದು |
ಪನ್ನಗವೇಣಿಯಾಗ ||
ಚೆನ್ನಾಗಿ ಉರಿವಗ್ನಿಕುಂಡದಿ ಧುಮುಕಲು |
ಕಣ್ಣ ಮುಚ್ಚಿದರೆಲ್ಲರು ||127||

ಆಯ ತಪ್ಪಾಯ್ತೆಂದು ಗೌರಿ ಮಿಡಿಯೆ ಕಣ್ಣ |
ತೋಯುವ ಸುರವರರು ||
ಹಾಯೆನೆ ಕಪಿಗಳು ಸೌಮಿತ್ರಿಯಳಲು ಉ |
ಮೇಯ ವಲ್ಲಭ ಮರುಗೆ ||128||

ರಾಗ ಸಾವೇರಿ ರೂಪಕತಾಳ

ಸೀತೆಯುರಿದಳೆಂಬುದದ್ಭುತ ರವಂದು |
ಭೂತಳ ತುಂಬಲಗ್ನಿಯು ಮುಸುಕಿದುದು ||
ತಾತನ ಮುಖ ಕುಂದಿತಬ್ಜ ಬಾಡಿತು ಮುಂದೆ |
ಮಾತೆ ಜಾನಕಿಯಗ್ನಿ ಕುಂಡಮಧ್ಯದಲಿ ||129||

ಮಿಸುನಿ ಪುತ್ಥಳಿಯಂತೆ ಹೊಳೆಯೆ ಗೌರಿಯು ಹಾರಿ |
ಕುಸುಮಾಕ್ಷಿಯನು ತಾನೆ ತೆಗೆದಳಂದವಳು ||
ಅಸುರಾರಿ ನೀ ಬಲು ದೋಷಹೊತ್ತಪೆಯಿಂದು |
ವಸುಮತಿಸುತೆಯ ನಿರೀಕ್ಷಿಸೆಂದೆನಲು ||  ||230||

ಭರ್ಗನು ಮುನಿದೆಂದ ತಪ್ಪು ಮಾಡಿದೆಯ ನೀ |
ಯಾರ್ಗೆ ಸಂಶಯವಿನ್ನು ಪ್ರತ್ಯಕ್ಷವಾಯ್ತು ||
ಮಾರ್ಗ ತಪ್ಪಿದೆ ಮಾತ ಮರೆಯಬೇಡಸುರಾರಿ |
ದುರ್ಗತಿಗೀಡಕ್ಕು ಪಾಲಿಸಿನ್ನಿವಳ ||231||

ವಾಣಿವಲ್ಲಭ ಕಯ್ಯ ಮುಗಿದಿರೆ ಸುರಪತಿ |
ತಾನು ವಂದಿಸೆ ಕಪಿಕಟಕವಂದಳಲಿ ||
ದಾನವಾಂತಕಗೊಂದಿಸಿದ ಶರಣನು ಬಾಗು |
ತಾ ನರಪತಿಗೆರಗಲು ರಾಮನೆಂದನು ||232||

ರಾಗ ಮಧುಮಾಧವಿ, ಅಷ್ಟತಾಳ

ಕೇಳಿರಭವಮುಖ್ಯ ದೇವರು ಮಾತ | ಎಮ್ಮ |
ಪೀಳಿಗೆ ಮನೆತನ ಮರಿಯಾದೆಯೆತ್ತ ||
ಏಳಿಗೆಗಿಂದಾಯ್ತು ಎನ್ನಯ ಮುಖದಿ | ಕೆಟ್ಟ |
ಹಾಳಪವಾದವು ಈ ಸತಿನೆವದಿ || ಕೇಳಿ ||    ||233||

ಸತಿಯನೊಯ್ದುದಕಾಗಿ ಕೊಂದುದಲ್ಲಿವನ | ಎನ್ನ |
ಪಿತಪಿತಾಮಹನರಿದುದಕಾಗಿ ಮುನ್ನ ||
ಮಥಿಸಿದೆ ಎನಗಿಂದು ಯಾರ ಹಂಗಿಲ್ಲ | ಹೀಗೆ |
ಸತಿಯ ಕೂಡಲು ನೀವು ಹೇಳಿದಿರಲ್ಲ || ಕೇಳಿ ||234||

ಕಪಿರಾಜ ಕೇಳು ನಿನ್ನಯ ಭಾಷೆಯಾಯ್ತು | ಯಾವ |
ಶಪಥವಿನ್ನಿಲ್ಲ ಬಾ ಶರಣ ಬೇಸತ್ತು ||
ಅಪರಾಧವೇನುಂಟು ಲಂಕೆಯ ನಿನಗೆ | ಕೊಟ್ಟು |
ಉಪಚಾರವಾಯ್ತೆಂದ ಮೇಲೇನು ಮರುಗೆ || ಕೇಳಿ ||235||

ಪ್ರಾಣಮಿತ್ರನೆ ಹನುಮಂತ ಬಾರಯ್ಯ | ನಮ್ಮ |
ಪ್ರಾಣ ರಕ್ಷಿಸಿದುದಕಿತ್ತೆ ನಾನಯ್ಯ ||
ಕ್ಷೋಣಿಯೊಳತ್ಯಂತ ವಿರಳ ಮುಕ್ತಿಯನು | ಮತ್ತೆ |
ನೀನು ದೂರುವುದೇನು ಪೋಗಿರಿಂದಿನ್ನು || ಕೇಳಿ ||236||

ಅನುಜ ಸೌಮಿತ್ರಿ ಚಿಂತಿಸದಿರು ಸತಿಗೆ | ಈಕೆ |
ಅನಸೂಯ ರತ್ನವಾದರು ನಮ್ಮ ಕುಲಕೆ
ಜನಕನು ಮೊದಲಾಗಿ ರಾಜ್ಯವಾಳಿದರು | ಇಂಥ |
ಜನಜನಿತದ ಹಾಸ್ಯ ಉಂಟೆನೀನುಸಿರು || ಕೇಳಿ ||237||

ಕಾಮವಾಸನೆಗಾಗಿ ಕೂಡಲಿನ್ನಿವಳ | ನಾವು |
ಸೋಮಾರ್ಕ ಪರಿಯಂತ ಹೊರಲವಹೇಳ ||
ಕಾಮಿಸುವುದೆ ನಮ್ಮ ಪ್ರಾರಬ್ಧವಿದಕೆ | ಸುಮ್ಮ |
ನೀ ಮರುಗುವುದೇಕೆ ಫಲವುಣ್ಣುವುದಕೆ || ಕೇಳಿ ||238||

ಮುನಿಯದಿರಜಭವ ಸುರರಿಗೆ ನಮಿಪೆ | ವಿಪ್ರ |
ಮುನಿಗಳಿಗೆರಗುವೆ ಪುರಕಿಂದು ಪೋಪೆ ||
ವನಿತೆಯ ಮನದಿಚ್ಛೆ ಗೆಯ್ಯಲಿನ್ನಿವಳು | ಎನೆ |
ಮುನಿ ವಸಿಷ್ಠನು ಬಂದು ಕೈಪಿಡಿದೆನಲು || ಕೇಳಿ ||239||

ರಾಗ ಶಂಕರಾಭರಣ, ತ್ರಿವುಡೆತಾಳ

ಲಾಲಿಸೈ ರಘುರಾಮ ನಿನ್ನಯ | ಶೀಲಚರಿತೆಗೆ ಸೋತೆನು ||
ಕೋಳುಗೊಂಡಳಲುವರು ನಿಮ್ಮಯ | ಪೀಳಿಗೆಯರು ||240||

ಇಕ್ಷು ನಿಮ್ಮನ್ವಯ ದಿಲೀಪನು | ಕುಕ್ಷಿ ನಪನು ಭಗೀರಥ ||
ಆ ಕ್ಷಿತಿಪರಿಂಗಿಲ್ಲ ನಿನಗೆಣೆ | ನಿಶ್ಚಯವಿದು  ||241||

ನೋಡು ನಿಮ್ಮಜಮುಖ್ಯ ರವಿಕುಲ | ರೂಢಿಪಾಲರ ಮುಖವನು ||
ಬಾಡಿಹುದು ಜಾನಕಿಯ ಸತ್ಯಕೆ | ನಾಡ ಜನರು ||242||

ಮೆಚ್ಚುವಂತಾಚರಿಸಿದಳು ಜಗ | ಕಚ್ಚರಿಯೆ ಕೇಳಯ್ಯನ ||
ಮುಚ್ಚುಮರೆಯೇಕವನ ಮತವನು | ಸಚ್ಚರಿತ್ರ ||243||

ತಂದೆ ದಶರಥನೊಪ್ಪದಿರೆ ಬೇ | ಡೆಂದೆನಲು ಪೊಡವಂಟನು ||
ಮಂದರಾಧರನೆರಗಲೆತ್ತುತ | ಲೆಂದನವನು ||244||

ಬಾಲ ನಿನ್ನಯ ಮನದ ದಢತೆಯ | ಶೀಲಕುರೆ ನಾ ಮೆಚ್ಚಿದೆ ||
ಪಾಲಿಸವನಿಯ ಮಾತು ಸಂದುದು | ಈ ಲಲನೆಯು ||245||

ನಿನ್ನನೇಕೋಭಾವದಿಂದಲಿ | ಕನ್ನಿಕೆಯು ನಂಬಿರ್ಪಳು ||
ಕನ್ಯೆ ಗುಣವತಿ ಕೀರ್ತಿಯುತೆ ಸಂ | ಪನ್ನೆಯವಳು ||246||

ಬಾ ಮಗಳೆ ಕಾನನದಿ ನೊಂದೆಯ | ತಾಮಸರಿಗೀಡಾಗುತ ||
ಭಾಮಿನಿಯರೊರೆಗಲ್ಲಿ ಪುತ್ಥಳಿ | ಕ್ಷೇಮವಾಯ್ತು ||247||

ತರಳ ಲಕ್ಷ್ಮಣ ನಿನ್ನ ಭಕ್ತಿಯ | ಸರಳತೆಯು ಜಗ ತುಂಬಿತು ||
ತೆರಳಿ ನೀವೆಲ್ಲರು ಭರತನಿಹ | ಪೊರೆಗೆ ಬೇಗ ||248||

ಹರಿಯ ರೂಪದಿ ಬಂದು ಲೋಕವ | ಪೊರೆದೆ ಪಾಲಿಸು ರಾಜ್ಯವ ||
ಸಿರಿಯವಳ ಸಲಹೆನುತಲಪ್ಪಿದ | ಮರುಗುವವರ ||249||

ಭಾಮಿನಿ

ಆಸಮಯದಿ ಬಂದನಾ ಕೈ |
ಲಾಸವಾಸನು ಬೇಡು ನಿನ್ನಭಿ |
ಲಾಷೆ ಏನೆನೆ ರಾಮ ಕೈಮುಗಿದೆಂದನೀಶನಿಗೆ ||
ಈ ಸಮರಮುಖದಿಂದ ಸತ್ತಿಹ |
ಕೀಶಸಂತತಿ ಏಳಲೆಂದೆನ |
ಗಾಸೆ ಬೇರಿಲ್ಲೆನಲು ಕಮಲಜಗುಸಿರೆ ಸಂತಸದಿ ||250||

ರಾಗ ಶಂಕರಾಭರಣ ರೂಪಕತಾಳ

ಕಮಲಭವನು ಅಳಿದ ಕಪಿಗ | ಳೇಳುವಂತೆ ಮಂತ್ರಜಲವ |
ಸುಮನ ಸಾದ್ಯರುಲಿಯಲೆರೆಯು | ತಿದ್ದರೆಲ್ಲರು ||251||

ರಾಮನೊಪ್ಪಿಕೊಂಡನೆಂದು | ಭೂಮಿಜೆಯು ನಲಿಯೆ ಜನರು |
ಆ ಮಹಾವಸಿಷ್ಠ ಮುಖ್ಯ | ರೆಲ್ಲ ಹರಸಲು ||252||

ಇದು ಸಮಗ್ರ ಜಗಕೆ ಶುಭವು | ವಧುವರರ ವಿವಾಹವೆನುತ |
ತ್ರಿದಶರೆರೆಯಲರಳಮಳೆಯ | ನಭವನಡರಲು  ||253||

ಗಿರಿಜೆ ಸಹಿತ ತೆರಳಲೆಲ್ಲ | ಸುರಪ ಬ್ರಹ್ಮಶಾರದೆಯ |
ರರಿಕೆಗೊಂಡು ಪೋದರತ್ತ | ಮುನಿಕುಲೌಘವು ||254||

ಹರಸಿ ಪರ್ಣಮಂದಿರಕ್ಕೆ | ಪೊರಡಲಾಗ ದಶರಥೇಂದ್ರ |
ಧರಣಿಪಾಲರೆಲ್ಲ ಹರುಷ | ಗೊಂಡು ನಡೆದರು ||255||

ಗುರುವಸಿಷ್ಠನೆಂದ ರಾಮ | ಗಿರದೆ ಭರತನಲ್ಲಿ ಪೋಗು |
ಧರಣಿಯನ್ನು ಪಾಲಿಸೆಂದು | ಹರಸಲೆಲ್ಲರು ||256||

ರಾಘವನ್ನ ಪೊಗಳುತೆಲ್ಲ | ಪೋಗಲವರು ಮಗುಳೆ ಶರಣ |
ನಾಗಶಯನನಿಂಗೆ ನಮಿಸು | ತೆಂದನೊಲವಿಲಿ ||257||

ವಾರ್ಧಕ

ಇನಕಲೇಶನೆ ನಿನ್ನ ಮಹಿಮೆ ತಿಳಿದಾಯ್ತೆನಗೆ |
ಮನವಿದ್ದರಿಂದು ಭೋಜನವ ನೀ ಮಾಡುತಲಿ |
ಮನೆಗೆ ತೆರಳೆನ್ನನುದ್ಧರಿಸು ನೀನೆಂದೆನುತ ಶಿರವಾಗಲಿಂತೆಂದನು ||
ವನಚರವ್ರಜವನುಪಚರಿಸು ನಾನಿನ್ನು ಭರ |
ತನಬಿಡುತಲುಣಲೊಲ್ಲೆನಿಂದೆ ತೆರಳಲು ಬೇಕು |
ದಿನಕಳೆದರಾತನಳಿವನು ಬೇಗಲುಣಬಡಿಸು ನಿಜಮನೋಗತಮೆನ್ನಲು ||258||

ರಾಗ ಮೆಚ್ಚು ಅಷ್ಟತಾಳ

ಸಿದ್ಧವಾಯ್ತಡನೆ ಊಟಗಳು | ಪಙ್ಕ್ತಿ |
ಉದ್ದಕಿಟ್ಟರು ಬಾಳೆಲೆಗಳು ||
ಉದ್ದಾದ ಬಾಳೆಹಣ್ಣುಗಳು ಪಲ್ಯಗಳಿಂದ |
ಗದ್ದಳ ಬಿರಿಸಾಯ್ತು ಸಾಸಿವೆ ಚಟ್ನಿಯು ||  ||259||

ಉಪ್ಪಿನಕಾಯಿ ತೋವೆಗಳು | ಮೇಲಾ |
ಗಿಪ್ಪ ಕೋಸಂಬ್ರಿ ಸಾರುಗಳು ||
ಅಪ್ಪ ಕಜ್ಜಾಯ ಹುಳ್ಯನ್ನ ಮೇಲೋಗರ |
ಹಪ್ಪಳ-ಸಂಡಿಗೆ ತುಪ್ಪನ್ನ ಪಾಯಸ ||   ||260||

ಮಂಗನವನಿಗೆಬೇಡೆಂದು | ಬೇರೆ |
ಸಿಂಗಾರ ಪಙ್ಕ್ತ್ತಿ ಇದೆಂದು ||
ಲಾಂಗೂಲ ಸುಡುಕ ಜಾತಿಯೆ ಕೀಳು ಭಲ್ಲೂಕ |
ಸಂಗಡ ಸಲ್ಲದು ಎನುತೊಬ್ಬರೊಬ್ಬರು ||  ||261||

ಪಙ್ಕ್ತಗೆ ಬಾರದನ್ನಗಳು | ಪಾಯ |
ಸೆಂತು ಸಿಹಿಯಲ್ಲ ಖಾರಗಳು ||
ಸಂತೆಯ  ಬಾಳೆಹಣ್ಣೊಂದೊಂದ ಸಿಕ್ಕಿದ |
ರೆಂತು ತುಂಬುದು ಹೊಟ್ಟೆ ಸಾಕು ನಿನ್ನೌತಣ ||  ||262||

ಇನಿತೊಬ್ಬರೊಬ್ಬರಂದವರು | ಸಣ್ಣ |
ವನಚರನನು ತಿಕ್ಕಲವರು ||
ಹೆಣಗಿ ಗುದ್ದಿದನೊಬ್ಬಗಾತಗಿನ್ನೊಬ್ಬರೆಂ |
ದೆಣಿಸಿಕೊಂಡರು ಪೆಟ್ಟು ಪೆಟ್ಟಿಗಂದವರು ||  ||263||

ಭಾಮಿನಿ

ಇನಿತು ಭೋಜನ ನಡೆಯಲಂದಾ |
ಜನಪರಾ ಫಲ ಕದಳಿ ಕ್ಷೀರದಿ |
ದಣಿಯಲತಿಹರುಷದೊಳು ಶರಣನೊಳೆಂದ ರಘುಪತಿಯು ||
ಮನವಯೋಧ್ಯೆಯೊಳಿಹುದು ಭರತನ |
ನೆನಹು ಬಿಗಿಯಾಯ್ತಿಂದು ಕಳುಹೆಂ |
ದೆನಲು ಭಕ್ತಿಯೊಳಿತ್ತು ನಮಿಸಿದನಂದು ಪುಷ್ಪಕವ ||264||

ವಾರ್ಧಕ

ದೇವರೇರಲು ಬೇಕು ಎಂದೆನಲು ನಸುನಗುತ |
ದೇವಿಯನು ಕುಳ್ಳಿರಿಸಿ ಸೌಮಿತ್ರಿ ಸುಗ್ರೀವ |
ಪಾವಮಾನಿಯು ರಾಮನಿಂತೈವರೇರ್ದು ಬಳಿಕುಳಿದವರು ಬೆನ್ನಹಿಂದೆ ||
ಸಾವಧಾನದಿ ಬರಲು ನೇಮಿಸುತ ಮಯಸುತೆಯ ||
ಭಾವವರಿದಂ ರಾಮನಾಜ್ಞಾಪಿಸಲ್ಕಿಂತು |
ದೇವಿ ನಿನ್ನಯ ಸ್ಮರಣೆ ಮಾಡಿದ ಸತೀಜನರು ಪಾವನರು ಜಗದೊಳಹರು ||265||

ರಾಗ ಆರ್ಯಸವಾಯ್ ಏಕತಾಳ

ಇನಿತಾ ರಾಮನು ಪೇಳುತ ಮುಂದಕೆ |
ವನಿತೆಯು ಸಹಿತಲಿ ಮುದದಿ ||
ಘನ ಪುಷ್ಪಕದಿಂ ಹಾಯಲು ಸೀತೆಯು |
ಜನಪನೊಳೆನೆ ಸಂತಸದಿ ||  ||266||

ಲಾಲಿಪುದೆನ್ನಯ ಬಿನ್ನಪ ಲಂಕೆಯ |
ಲೀಲೆಯ ಪುರನೋಡಲಿಕೆ ||
ಸೋಲುವುದೆನ್ನಯ ಮನದರಿಕೆಯ ನೀ |
ಪಾಲಿಸಿ ತೋರಿಂದೆನಗೆ ||  ||267||

ಸತಿ ಕೇಳ್ ಮೊದಲೀ ನಗರಿ ಕುಬೇರನ |
ಸ್ಥಿತಿಯಾಗಿರಲಯ್ತಂದು |
ದಿತಿಜನಪೇಕ್ಷಿಸಿ ಮುನಿಯಿಂದಪ್ಪಣೆ |
ಹಿತದಿಂ ಕೇಳ್ದಿರಲಂದು ||  ||268||

ಬೆದರುತ ರಾವಣಗಿತ್ತವನಯ್ದಿದ |
ಬದಲಳಕಾನಗರವನು ||
ತ್ರಿದಶರಮನ ಸೋಲುವುದಾ ರಾಕ್ಷಸ |
ಸದನದ ಚೆಲುವಿಗೆ ನೀನು ||269||

ಲಂಕೆಯ ವೈಭವ ಕಂಡರೆ ಹದಯದಿ |
ಶಂಕೆಯು ಕಾಣಿಸದಿರದು ||
ಕಿಂಕರಗಿತ್ತಿಹೆ ನಡೆಯೆಂದೆನ್ನುತ |
ಪಂಕಜನಯನ ಮುಂದರಿದು ||270||

ವಾರಿಧಿಗೇರಿಸಿ ಕಟ್ಟಿಹ ಸೇತುವ |
ತೋರಿದನಾ ಗಣಪತಿಯ ||
ಕಾರಣಿಕವನರುಹುತತರಿದಸ್ತ್ರದಿ |
ಮೂರಾಗಲು ಸೇತುವೆಯ ||271||

ಕತ್ತರಿಸುತ ಜನಹತ್ತದ ತೆರದಲಿ |
ಮತ್ತೈದಿದರವರಂದು ||
ಉತ್ತರದಿಸೆ ವೈಶ್ರವಣವ ನೋಡುತ |
ವೆತ್ತರವೇರಲ್ಕಂದು ||272||

ಬಾಲೆಯಿದೇ ಕಪಿಜಾಲವ ಕೂಡುತ |
ಲಾಲೋಚಿಸಿದ ಸ್ಥಳವು ||
ಮೇಲಕೆ ನೋಡದು ಕಿಷ್ಕಿಂಧಾದ್ರಿಯ |
ಮೂಲವು ವಾನರಠಾವು ||273||

ಕಾಣುತ ದೂರದಿ ರುಮೆತಾರೆಯರಾ |
ಕಾಣಿಕೆ ಕೊಡಲಯ್ದಿದರು ||
ಶ್ರೀನಿವಾಸನ ಸತಿಗಿಟ್ಟೆರಗಲು |
ಭಾನುಜಸಹಿತೆಲ್ಲವರು ||274||

ಭಾಮಿನಿ

ಹರಿಯೆ ಮತ್ಪುರದೊಳಗೆ ಸೇವೆಯ |
ನರಿದು ನಾಳೆಗೆ ಪಯಣಗೆಯ್ವುದು |
ಚರಣದೊಂದಿಗೆ ಬಹೆವು ಪಾವನರಾದೆವಾವಿಂದು |
ಹಿರಿದು ಬಿನ್ನಹವಿಲ್ಲ ದೇವರಿ |
ಗರಿಕೆಯೆಂದೆನಲೆಂದ ರಾಘವ |
ತರಣಿನಂದನ ನೀನು ತಿಳಿಯದ ಕಾರ್ಯವೇನುಂಟು ||275||

ರಾಗ ಘಂಟಾರವ, ರೂಪಕತಾಳ

ತರಣಿನಂದನ | ನಿರತ ಸಜ್ಜನ |
ಪರಿಕಿಸೆಮ್ಮಯ | ಭರತನಾಜ್ಞೆಯ ||
ಒರೆದ ಮಾತನು | ಮೀರಲಾಗದು |
ಮರೆದೆನಾದರೆ | ಜೀವವಳಿವುದು ||276||

ದೇವರಾಲಿಸಿ | ಯೆಂದು ಪದದೊಳು |
ದೇವಿಯಾಭರ | ಣಂಗಳೀಯಲು ||
ರಾವಣಾಂತಕ | ಸೀತೆಗದರನು |
ದೇವಿ ನೋಡೆನೆ | ತೆಗೆಯುತದರನು ||277||

ಅತ್ತು ದುಃಖದಿ | ನೋಡುತೆಲ್ಲವ |
ಪಥ್ವಿಜಾತೆಯು | ಧರಿಸೆ ಸರ್ವವ ||
ಪಥ್ವಿಪಾಲನು | ಪೊಗಳುತೆಲ್ಲರ |
ಮತ್ತೆ ನಡೆದನು | ಮಂದರಾಧರ ||278||

ಕಮಲದೆಲೆಯೊಳು | ಭ್ರಮಿಸಿದೆಲ್ಲವ |
ನಿಮಿಕುಲಾಂಗನೆ | ಗೆಂದ ರಾಘವ |
ಭ್ರಮರಕೇಶಿನಿ | ಶಬರಿಕಥೆಯನು |
ಅಮರವಂದ್ಯನು | ಪೇಳ್ದನದರನು ||279||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಮುಂದೆ ಪುಷ್ಪಕದಿಂದ ಬರಲು ಕ |
ಬಂಧನುದ್ವಾಸನೆಯ ಮುಕ್ತಿಯ |
ನಂದು ವರ್ಣಿಸುತಯ್ದಲಾ ಪ | ಕ್ಷೀಂದ್ರನಿರವ ||280||

ಕೇಳಿ ದುಃಖಿಸುತೆನಲು ಸೀತೆಯು |
ಹೇಳು ಖಗವಂದೇನ ಮಾಡಿತು |
ಖೂಳವಂಚಿಸಿ ಹೊಡೆಯೆ ಬಿದ್ದುದ | ಮೇಲಣೆನಲು ||281||

ಖಗವು ನಿನ್ನಯ ಕಥೆಯನರುಹುತ |
ನೆಗೆದುದಂದಂಬರಕೆ ಮೇಣದ |
ಮಿಗೆ ರಚಿಸಿಯೂರ್ಧ್ವಾದಿಕ್ರಿಯೆಯನು | ಮುಗುದೆ ಕೇಳು ||282||

ಹೋದೆವೆಂದೆನುತರುಹುತಯ್ದುತ |
ಐದೊಟವ ಕಾಣಿಸಲು ಕಳವಳ |
ಗೆಯ್ದ ಕಾಮಿನಿಗಂದು ತೋರಿದ | ವೇದವಂದ್ಯ ||283||

ಸುರಭಿಯಾಶ್ರಯದುಪವನವನುರೆ |
ತರಗೆಲೆಯ ಮಂದಿರವನೋಡೆನೆ |
ಮರುಗೆ ಮುಂದಕೆ ಸರಿಯೆ ಪುಷ್ಪಕ | ಭರದೊಳಾಗ ||284||

ಮತ್ತೆ ತೋರಿದ ದನುಜೆನಾಸಿಕ |
ಕೆತ್ತಿದೂರನು ದಂಡಕವ ಮಿಗೆ |
ಚಿತ್ರಕೂಟ ವಿಚಿತ್ರವೆಲ್ಲವ | ಪಥ್ವಿಸುತೆಗೆ ||285||

ಕಾಗೆ ಸದೆಬಡೆದಿರುವ ಶಂಭುಕ |
ಗಾಗಿರುವ ಮರಣಗಳ ಸ್ಥಳವನು |
ಸಾಗಿ ಭಾರದ್ವಾಜನಾಶ್ರಮ | ಕಾಗಿಬರಲು ||286||

ವಾರ್ಧಕ

ದೂರದಿಂ ಕಂಡಿವರ ಕರೆಯೆ ರಘುರಾಜೇಂದ್ರ |
ಧಾರಿಣಿಯೊಳಿಳಿದೆರಗೆ ಪಿಡಿದೆತ್ತುತಾಗ ಋಷಿ |
ಪಾರಗನು ಹರಸುತಲಿ ಪೇಳಿದನು ರಾವಣಾದ್ಯಖಿಳ ಖಳರನು ಮರ್ದಿಸಿ ||
ಭಾರವಿಳಿದಾಯ್ತಿನ್ನು ಮಂದಿರದೊಳಿಂದಿರ್ದು |
ಸಾರನ್ನ ಭೋಜನವ ಗೆಯ್ದು ತೆರಳಲು ಬೇಕು |
ಕಾರಣಿಕರೆಂದೆನಲು ಕಯ್ ಮುಗಿದು ರಘುರಾಮ ಬೇಡಿದಂ ಯತಿಪದದೊಳು ||287||

ಭಾಮಿನಿ

ಗುರುಗಳವಧರಿಸುವುದು ಇಂದಿಗೆ |
ಭರತನೆನ್ನನು ಕಾಣದಿರೆ ತನು |
ತೊರೆವ ಮಾತಿದು ಸತ್ಯವೀ ನುಡಿ ಸಮಯವಿಲ್ಲವಲಾ ||
ಪರಮಸದ್ಗುಣಿ ಕರುಣಿಸಲು ಬೇ |
ಕಿರದೆ ಪೋಪೆವು ನಂದಿಗ್ರಾಮಕೆ |
ಭರವಸದ ಮಾತಿಂದ ಮೇಲಿಹುದುಂಟೆಯೆಂದೆನಲು ||288||

ರಾಗ ಕಾಂಭೋಜಿ ಝಂಪೆತಾಳ

ಧರೆಯಾಣ್ಮ ನೀನರಿಯದೇನು ಜಗ ನಿರ್ಮಿಸುವೆ |
ತರಿವೆಯೊಂದೆಸೆ ಹುಟ್ಟು ಸಾವು ||
ಬರುವುದಚ್ಚರಿಯೇನು ಯಾರು ಶಾಶ್ವತರಿಹರು |
ಅರುಹಲೇತಕೆ ಬೊಮ್ಮನೆನಗೆ  ||289||

ಮುನಿಯ ಮಾತನು ಕೇಳಿ ಹನುಮನನು ಕರೆದೆಂದ |
ಚಿನುಮಯನು ಪೋಗು ಭರತನಿಗೆ ||
ಬಂದೆನೆಂದರುಹು ಶರಣರ ಸುಸಂಜೀವನನೆ |
ಮುನಿಮಾತಿಗೊಡಬಟ್ಟೆನೆನಲು  ||290||

ದೂತತ್ವ  ಬಲ್ಲಿದನು ಹನುಮಂತನೆಂಬಂತೆ |
ವಾತಜನು ಬಂದನಂಬರದಿ ||
ಕೋತಿಯುಬ್ಬರನೋಳ್ಪೆನೆನುತನಾರದ ಜವದೊ |
ಳಾತನನು ತಡೆದೆಂದ ನಭದಿ  ||291||

ಎಲ್ಲಿಗಯ್ದುವ ಭರವು ರಾವಣಾದ್ಯರ ಕೊಂದು |
ಫುಲ್ಲನಾಭನ ಬಿಟ್ಟು ನೀನು ||
ನಿಲ್ಲೊಂದು ಕ್ಷಣ ಕೇಳ್ವೆ ರಾವಣನ ಮೂಲಬಲ |
ಮಲ್ಲ ಸಂಖ್ಯೆಯನೊಮ್ಮೆ ಹೇಳು  ||292||

ವತ್ತಾಂತವರುಹಿ ನೀನೆಲ್ಲಿಗಾದರು ಪೋಗು |
ಭತ್ಯನಲ್ಲವೆ ರಾಮಬಲದ ||
ಸತ್ತ್ವಶಾಲಿಯೆ ಎನಲು ಹನುಮ ಮದ್ದರೆವೆನೆಂ |
ದುತ್ತರವಪೇಳ್ದ ನಗುತವಗೆ ||  ||293||

ವಾರ್ಧಕ

ಕರಿಗಳಯುತಕೆ ನಿಯುತ ತುರಗವದರರ್ಧ ರಥ |
ವರ ಮಹಾಕಾಲಾಳು ಕೋಟಿಕೊಲೆಗೊಂದು ನೃಪ |
ಶಿರವಿರದ ಮುಂಡವಾಡುವುದು ಕೇಳದರಂತೆ ನರಕಬಂದದ ಕೋಟಿಯು ||
ಹರಿದಾಡೆ ರಾಘವನ ಕರದ ಚಾಪಾಂಕಿತದ |
ವರಮಣಿಯೊಳೊಂದು ರವ ಕೇಳ್ವುದೆಣಿಕೆಯ ನೋಡ |
ಲಿರುತಿರ್ಪ ಚೌಷಷ್ಟಿಮಣಿಗಳುರೆ ಜಾವಾರ್ಧವೊರಲಿತದನೆಣೆಸೆಂದನು ||294||