ರಾಗ ಕಾಂಭೋಜ ಝಂಪೆತಾಳ

ಹನುಮನೀಪರಿಯಿಂದ ಮುನಿಪಗರುಹಿದು ತೆರಳೆ |
ವನಚರನ ಚಾತುರ್ಯಕಂದು ||
ಮನದಿ ನಾಚುತಲೆಣಿಸೆ ಗಣಿತವಾ ರಾಮಚಂ |
ದ್ರನ ಸ್ಮರಣೆಯೇ ಬಂತು ಕಡೆಗೆ ||  ||295||

ಲೆಕ್ಕವರಿಯದೆ ತಾನು ಮರೆತನು ಸಮಾಧಿಯನು |
ಸಿಕ್ಕಿ ಕಪಿಜಾಲದಿಂ ನೊಂದು ||
ಹಕ್ಕಿವಾಹನಗೆಂಬೆ ಬಿಡೆನೆನುತಲಾ ಮುನಿಪ |
ಹೊಕ್ಕ ತನ್ನಯ್ಯನಿದ್ದೆಡೆಗೆ   ||296||

ವಾತಜನು ಮುನಿಯ ಚೇಷ್ಟೆಗೆ ನಕ್ಕು ರಾಮನನು |
ಜಾತನಿದ್ದಲ್ಲಿಗೆಯ್ದಿದನು ||
ಭೀತಿ ಬೇಡೈ ರಾಮ ಬಂದನೆಂದಬ್ಬರವು |
ಭೂತಳವು ತುಂಬಲಿಂತೆಂದ ||  ||297||

ರಾಗ ನವರೋಜು ಏಕತಾಳ

ಹೋ ಹೋ ಸೈರಿಸು ಭರತ | ಸ | ನ್ನಾಹವದೇ ವಿಪರೀತ ||
ಆ ಹರಿ ಬಂದನು ನೋಡಾತನನು |
ಬೇಹಿನ ಚರ ಹನುಮಂತನು ತಾನು || ಹೋ ಹೋ  ||298||

ರಾವಣನಾ ಪುಷ್ಪಕದಿ | ಭೂ | ದೇವಿಜೆಯು ಸಹ ಮುದದಿ ||
ಭಾವಜನಯ್ಯನು ತವಕದಿ ಬಂದಿಹ |
ಪಾವಕನುರಿಯ ನಿಧಾನಿಪುದಯ್ಯ || ಹೋ ಹೋ  ||299||

ನಿನ್ನಯಗೋ ಸುಗವಿಲ್ಲಿ | ಹರಿ | ಎನ್ನಕಳೂ ಹಿದನಿಲ್ಲಿ |
ಪನ್ನಗಶಯನ ಪರಾತ್ಪರವಸ್ತುವ |
ಕಣ್ಣಲಿ ನೋಡಸುರಾರಿಯ ಪರಿಕಿಸು || ಹೋ ಹೋ  ||300||

ಭಾಮಿನಿ

ಇತ್ತ ಭರತನ ಸಂತವಿಸುತಿರ |
ಲತ್ತಮುನಿ ರಾಘವನ ಭೋಜನ |
ಕುತ್ತಮದ ಸುರಧೇಯ ತರಿಸುತ ಮಾಡಿ ಬಹುವಿಧವ ||
ಇತ್ತು ಷಡುರಸ ಬೋಜನವ ಮಿಗೆ |
ಸತ್ಯಪುರುಷರ ಕಳುಹೆ ಮುನಿ ಭೂ |
ಪೋತ್ತಮರು ಬಂದಿಳಿಯೆ ಹನುಮನು ತೋರ್ದ ಭರತನಿಗೆ ||301||

ರಾಗ ಮೋಹನ ಏಕತಾಳ

ದೂರದಿ ತೋರ್ದನು ಹನುಮಂತ | ಆ |
ಧಾರಿಣಿಪಾಲರ ಗುಣವಂತ ||
ನಾರಿಯ ಸೀತಾಂಗನೆಯರು ಬರುವರ
ಶ್ರೀರಾಮನು ಬಂದನು ಎಂಬಬ್ಬರ || ದೂರದಿ  ||302||

ನಿರ್ಗುಣ ನಿಸ್ಸಹನೋಂಕಾರ | ನೈ |
ಸರ್ಗ ನಿರಾಮಯಭವದೂರ ||
ಭರ್ಗಸಖನಂತರ್ಗದ ರೂಪನ |
ದುರ್ಘಟನಾಶನ ದುರಿತವಿನಾಶನ || ದೂರದಿ ||303||

ರಾಮನು ಬಂದುದ ನೋಡಿದರು | ನಿ |
ಷ್ಕಾಮಗೆ ನಮಿಸಿದರೆಲ್ಲವರು ||
ಭೂಮಿಯೊಳೆರಗುತ ಭರತನು ಪಾಡಿದ
ಕಾಮಿತಫಲದಾಯಕನನು ಬೇಡಿದ || ದೂರದಿ ||304||

ಹರಸುತ ಭರತನ ಜಗದೊಡೆಯ | ಮ |
ತ್ತೆರಗಿದ ಮಾತೆಯ ಪದದಡಿಯ ||
ಚರಣದೊಳೆರಗಲು ಕೈಕಾಸತಿಯಂ |
ದೊರಲುತ ನುಡಿದಳು ಕಣ್ಣೀರೆರದಳು || ದೂರದಿ ||305||

ತಪ್ಪನು ಮಾಡಿದೆ ನಾ ನಿನಗೆ | ನಿ |
ನ್ನಪ್ಪನ ಕೆಡಿಸಿದೆ ಭವದೊಳಗೆ ||
ದರ್ಪಜ್ವರವನು ತಡೆದಪಕೀರ್ತಿಯ
ತಪ್ಪಿಸಿ ಪಾಲಿಸು ಕುಲದ ಸುಕೀರ್ತಿಯ || ದೂರದಿ ||306||

ನಿನ್ನನು ಅಗಲಿದ ದೆಸೆಯಿಂದ | ನೋ |
ಡೆನ್ನಯ ಕಂದನ ಮುಖದಿಂದ ||
ಕಣ್ಣೆತ್ತನು ನೋಡಲು ವಿಷಯಂಗಳ |
ಇನ್ನೀ ಧರೆಯನು ಪಾಲಿಸು ನೀನು || ದೂರದಿ ||307||

ಮಗಳೇ ಮನ್ನಿಸು ನಿಮಿಜಾತೆ | ನಿ |
ನ್ನಗಲಿದ ತಾಪದಿ ನಾ ಸೋತೆ ||
ಹಗಲಿರುಳೆನ್ನದೆ ಕಾನನದೊಳು ನೀ |
ಬಗೆಬಗೆ ಕೋಟಲೆ ಪಡೆದ ಸುಶೀಲೆ || ದೂರದಿ ||308||

ರಾಗ ಸಾಂಗತ್ಯ ರೂಪಕತಾಳ

ಆ ಸಮಯದಿ ವಸಿಷ್ಠರು ಬಂದುದನು ಕಂಡು |
ದಾಶರಥಿಯು ಮಣಿದಿರಲು ||
ಆಶೀರ್ವದಿಸುತೆತ್ತಿ ಪೇಳ್ದ ಕಥೆಯನಂದು |
ಕ್ಲೇಶನಾಶನದ ಸಂಗತಿಯ ||309||

ತರುಣಿಯ ಕದ್ದೊಯ್ದ ದುರುಳ ರಾವಣನನು |
ತರುಚರರ್ವೆರಸಿ ರಾಘವನು ||
ಶರಧಿಗೆ ಸೇತುವ ಬಲಿದು ದುಷ್ಟರನು ಸಂ |
ಹರಿಸಿಪಟ್ಟವ ವಿಭೀಷಣಗೆ ||310||

ಕೊಡುತಾ ಸೀತೆಯನಗ್ನಿಯೊಳು ಪರೀಕ್ಷೆಯ ಗೆಯ್ದು |
ಪೊಡವಿಪಾಲಕ ದಶರಥನ ||
ನುಡಿಗೊಡಬಟ್ಟೀಕೆಯನು ಕೂಡುತಯ್ತಂದ |
ಮಡನಜಸುರರ ಸಂಸ್ತುತಿಯ ||311||

ಕೊಳುತಿಲ್ಲಿ ಭರತನಮಾತ ಪಾಲಿಸೆ ಬಂದ |
ನಳಿನಾಕ್ಷ ಜಗದೈವವೆನಲು ||
ಬಲು ಕ್ಲೇಶಗೊಳುತವನಿಯ ಪಾಲಿಸೆನೆ ಕೇಳು |
ತಳುವವರಿಗೆಂದ ರಾಘವನು ||312||

ಭಾಮಿನಿ

ಏತಕಳಲುವಿರಕಟ ವಿಧಿವಶ
ತಾತ ದರ್ಶನವಾಯ್ತು ನಿಮ್ಮಯ
ಮಾತಿನಿಂದಲಿ ಪಡೆದ ಕೀರ್ತಿಯು ಬ್ರಹ್ಮಚರ್ಯೆಗಳ ||
ನೀತಿ ನಿಯಮದ ತನು ದಢತೆಯಿಂ |
ದಾಯ್ತು ರಕ್ಕಸರಳಿದರಯ್ಯನ
ಭೂತಳವ ಕೈಕೊಂಡೆ ನಿಮ್ಮಾಜ್ಞೆಯಲಿ ನಾನೆಂದ ||313||

ರಾಗ ಶಂಕರಾಭರಣ ರೂಪಕತಾಳ

ಅಳಲಬೇಡ ತರಳ ಭರತ | ನಿಲಿಸು ವ್ರತವನು |
ತೊಲಗಿ ಪೋದ ಜನಕ ನಿಂಗೆ | ದುಃಖವಹುದಿನ್ನು ||
ಇಳೆಯನಾಳಲೊಪ್ಪಿಕೊಂಡೆ | ಬಲಗಳೆಮ್ಮದು |
ಹೊಳಲು ಪೊಗಲಿ ಗುರು ವಸಿಷ್ಠ | ರಾಜ್ಞೆಯಿನ್ನದು ||  ||314||

ಎಂದು ರಾಮ ಮುನಿಪ ಭರತ | ರೊಂದುಗೂಡುತ |
ಬಂದರೆಲ್ಲ ಯೋಧ್ಯಪುರಕೆ | ಚಂದ ನೋಡುತ ||
ಕಂದ ಶತ್ರುಮಥನ ಬಂದು | ವಂದಿಸಿದನು |
ಸಂದಣಿಯು ಸಾಮಂತರೆರಗ | ಲಂದು ರಘುಜನು ||  ||315||

ಭಜಿಪ ತನ್ನ ರಾಜ್ಯದರಸು | ಪ್ರಜೆಗಳೆಲ್ಲರ |
ಅಜನನಯ್ಯ ಮನ್ನಿಸಿದ | ಸಚಿವ ಮುಖ್ಯರ ||
ರಜನಿಚರ ವಿಭೀಷಣಾದಿ | ರವಿಜರಾಕ್ಷಣ |
ಭಜಕರೈದೆ ಮನ್ನಿಸಿದನು | ಕಮಲಲೋಚನ ||  ||316||

ಭಾಮಿನಿ

ಬಂದವರ ಸತ್ಕರಿಸಿ ಗುರುಮುಖ |
ದಿಂದ ನಿಶ್ಚಯಿಸಿದರು ದಿನವನು |
ಇಂದಿರಾಸತಿವರನ ಸಾಮ್ರಾಜ್ಯಾಭಿಷೇಚನಕೆ |
ಚಂದದಿಂ ರಚಿಸುವರೆ ವ್ರತವ |
ನ್ನಂದು ಕರಣಿಕನೀಯೆ ಚರರು ವ |
ಸುಂಧರೆಯ ಸುತ್ತುತಲಿ ಓಲೆಯ ನಿತ್ತು ಬಂದವರು ||317||

ರಾಗ ಭೈರವಿ ಝಂಪೆತಾಳ

ಬಂದೆರಗಲಾ ಸುಮಂತ್ರನು ರಾಮಗಂದೆನಲು |
ಮಂದಿರವ ಶಂಗರಿಸು ಚೆಲುವ ನಾಡುಗಳು  ||318||

ಚಂದ ಗೋಪುರಗಳನು ಕಟ್ಟಿಸೆನೆ ಕೇಳ್ದು ನಲ |
ವಿಂದ ಶಿಲ್ಪಿಗರ ಮುಖದಿಂದ ರಚಿಸಿದನು  ||319||

ಕೋಟಿಯುಪ್ಪರಿಗೆ ಸೌಧಗಳು ಚಾವಡಿ ಬೇರೆ |
ಊಟದುಪಮನೆ ಗೋಪುರಗಳ ಸಾಲುಗಳು ||320||

ಫೋಟಕದ ಭವನ ಚತುರಂಗಸೈನ್ಯದ ಠಾವು |
ಆಟಗಳ ನಿಲಯ ಶಸ್ತ್ರಾಸ್ತ್ರ ಠಾಣೆಗಳು  ||321||

ಸಾಲುಗೇರಿಯ ಬೀದಿಗಳಲಿ ಮೇಲ್ಗಟ್ಟುಗಳ |
ಮೇಲುದಿಪ ಚಂದ್ರಾರ್ಕವೀಥಿಯಂತೆಸೆವ  ||322||

ಮೇದಿನಿಯ ವಿಸ್ತಾರ ಹನ್ನೆರಡು ಯೋಜನದ |
ಹಾದಿಯಳತೆಯ ಬಿಸಿಲುಚಪ್ಪರವು ಹೊಳೆವ  ||323||

ಮುತ್ತು ರತ್ನದ ಜಲ್ಲಿ ಹವಳಗಳ ವೇದಿಕೆಯು |
ಕೆತ್ತನೆಯು ವಜ್ರ ವೈಡೂರ್ಯ ಚಿತ್ರಗಳು  ||324||

ಛತ್ರ ಚಾಮರ ಕುರುಜು ಸೀಗುರಿಯು ತೋರಣವು |
ವಿಸ್ತಾರದಿಂದಯೋಧ್ಯೆಯು ರಂಜಿಸಿರಲು   ||325||

ಭದ್ರಪೀಠವ ಮಾಡಿ ಮಾಣಿಕ್ಯಮಯದಿಂದ |
ಮುದ್ದು ಮುದ್ದಾದ ಹರಿವಿಷ್ಟರವ ರಚಿಸಿ |  ||326||

ಚಿತ್ರಮಯವಾಗಿ ರಂಜಿಸಲು ಲೋಕಕೆ ಪೊಸತು
ಪ್ರತ್ಯಕ್ಷ ವೈಕುಂಠವೆನಲು ಸುರವರರು  ||327||

ಇಂದ್ರ ತಾ ಕರೆದೆಂದ ದಿಕ್ಪಾಲಕರನವನು |
ಎಂದ ನಾವೆಲ್ಲವರು ರಾಮನೆಡೆಗಿನ್ನು  ||328||

ದುಷ್ಟರನು ಮುರಿದು ಪಾಲಿಸಿದ ಮೇಲನವರತ |
ಶಿಷ್ಟರಾಗಲು ಬೇಕು ನಡೆಯಿರೆಂದೆನು  ||329||

ದ್ವಿಪದಿ

ಸುರಪಾಲ ತಾನೆ ಸರ್ವಾಧ್ಯಕ್ಷನಾಗೆ |
ನಿರುಪಮಿತ ಬಾಣಸಿಗನಗ್ನಿಯಿಂದಡಿಗೆ  ||330||

ಕಸಬರಿಕೆತನವಂದು ವಾತನಿಂದಲ್ಲಿ |
ಶರವ ಪೂರೈಸುವುದು ವರುಣನೇತ್ರದಲಿ  ||331||

ರಕ್ಷೆಯನು ಕೈಗೊಂಡ ಕೋಣಪನು ಬಂದು |
ಅಕ್ಷಯಾರ್ಥವನಿತ್ತ ಧನೃಪ ತಾನಂದು  ||332||

ಯಮರಾಜ ದಂಡವಳಿಸಿದನು ಈಶಾನ |
ಉಮೆಯ ಗುಹ ಗಣಪಾದಿಯೊಡನಯ್ದಲವನ ||333||

ಕಂಡು ಕಮಲಜಯ್ಯ ಕೋಪಿಸುವನೆಂದು |
ಹೆಂಡತಿಯ ಕೂಡುತಯ್ತಂದ ತಾನಂದು   ||334||

ಜಗಳವೇನಿಹುದೆಂದು ನಾರದನು ಬರಲು |
ಜಗಕೆ ಪೊಸತಾಯ್ತು ಋಷಿ ವಿಪ್ರರಯ್ತರಲು ||335||

ಅತ್ರಿ ಭಗು ದೂರ್ವಾಸ ಕಣ್ವಕಾಶ್ಯಪರು |
ಮಿತ್ರನಾಂಗೀರಸ ಜಾಬಾಲಿ ಮುನಿವರರು  ||336||

ಸುರರುಚಾರಣ ಸಿದ್ಧ ಸಾಧ್ಯ ಕಿನ್ನರರು ||
ಪರಮ ತುಂಬುರ ಗೀತ ಗಾನಕೋವಿದರು  ||337||

ಆಟ ನರ್ತಕ ಹಾಸ್ಯಹರಿಸೇವೆಯವರು |
ಬೋಟಬರ್ಬರ ಚೋಳ ಪಾಂಡ್ಯ ಕೇರಳರು  ||338||

ಅಂಗವಂಗಾದಿ ಛಪ್ಪನ್ನದವರೆಲ್ಲ |
ಸಂಗದಿಂದಯ್ತರಲು ಸಚಿವನಂದೆಲ್ಲ  ||339||

ತರವರಿತು ಮನ್ನಿಸಿದ ವಾನರರನೆಲ್ಲ |
ಶರಣಮುಖ್ಯಾದಿ ನಿಶಿಚರರನಂದೆಲ್ಲ  ||340||

ರಾಗ ಮಧ್ಯಮಾವತಿ ತ್ರಿವುಡೆತಾಳ

ಆ ಸಮಯಕಯ್ತರಲು ಜನಕಗೆ |
ವಾಸುದೇವನು ನಮಿಸೆ ಹರುಷದಿ
ಕ್ಲೇಶನಾಶನವಾಹ ಕಥನವ |
ದೂಷಣಾರಿಯು ತಿಳುಹಲು | ಮತ್ತವನೊಳು ||341||

ರಾಘವನಕೊಂಡಾಡೆಸೀತೆಯು |
ಕೂಗುತವನಂಘ್ರಿಯೊಳಗೆರಗಲು |
ನಾಗವೇಣಿಯ ಮನದ ಚಿಂತೆಯ |
ನಾಗಲೇ ಪರಿಹರಿಸಿದ | ಮೇಣ್ಲೋಕದ  ||342||

ಕಷ್ಟ ಸುಖಮೆಂಬೆರಡ ತುತಿಯೊಳ |
ಗಿಟ್ಟಡೊಂದೆಂದೆಣಿಸಲತಿ ವ್ಯಥೆ |
ಗಿಷ್ಟ ಒದಗದು ದೈವತಂತ್ರದ |
ಚೇಷ್ಟೆಯೆಂದೊಡಬಡಿಸಿದ | ಸುತೆಗೊರೆಯುತ ||343||

ಧರೆಯ ಪಾಲಿಸು ರಾಮ ನಿನ್ನಯ |
ಚರಿತೆ ಬಲ್ಲುದುಲೋಕವೆಲ್ಲವು |
ಬರಿದೆ ತಡಮಾಡದಿರು ಸತಿಸಹ |
ಹರಿಯ ವಿಷ್ಟರವೇರಲು | ಎಂದೆನ್ನಲು  ||344||

ರಾಗ ಅಹೇರಿ ಝಂಪೆತಾಳ

ಛತ್ರ ಚಾಮರ ಕಲಶಗನ್ನಡಿಯ ಪಿಡಿದು |
ಮುತ್ತಯ್ದೆಯರು ನಿಲಲು ವಾದ್ಯದವರಂದು ||
ವಿಸ್ತಾರ ಬಹುಭೇರಿ ತಂಬಟಾದಿಗಳ |
ನತ್ಯ ತುಂಬಿತು ಕರ್ಣಪರಿಯಂತ ಜಗಳ  ||345||

ವೇದ ಘನ ಜಟೆ ಶಾಸ್ತ್ರ ತರ್ಕ ಸಂವಾದ |
ಭೇದಿಸಿತು ರವವು ಪೌರಾಣ ಮುಂತಾದ ||
ಆದುದು ಸುಮೂಹುರ್ತ ಶುಭಕಾಲ ಬಂತೆಂದು |
ವಾದಿಸಿದರಾ ಘಟಿಯವಟ್ಟಲವರಂದು  ||346||

ರಾಮಗೋಪನ ಮಜ್ಜನಾದಿಗಳ ಗೆಯ್ದು |
ಕಾಮಿನಿಯ ಸಿಂಗರಿಸಿ ಸತಿಯರಂದೊಲಿದು |
ಹೇಮದೊಡವೆಯನಿಟ್ಟು ಝರಿಯ ವಸನದಲಿ |
ಭೂಮಿಜೆಯಲಂಕರಿಸೆ ಮಿನುಗುವಂದದಲಿ  ||347||

ಆದಿನಾರಾಯಣನು ಲಕ್ಷ್ಮಿಯೆಂದೆನುತ |
ವೇದಗರ್ಭನೆ ಪೊಗಳಲೆಲ್ಲ ಹರುಷಿಸುತ ||
ಭೂದಿವಿಜರಂದು ಮಂತ್ರಾಕ್ಷತೆಯ ಪಿಡಿದು |
ವೇದದಾಶೀರ್ವಾದ ಘೋಷಿಸಿದರಂದು  ||348||

ಕಲಶಕುಂಭವ ಪಿಡಿದು ಗುರುಗಳಾಕ್ಷಣದಿ |
ಜಲಜನಾಭಗೆ ಪೀಠವೇರೆನಲು ಜವದಿ |
ಮೆಲುನಗೆಯ ಸುಂದರಾನನ ರಾಮಚಂದ್ರ |
ಒಲವ ತೋರುತ ಸೀತೆ ಸಹಿತಲಯ್ತಂದ  ||349||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಘನಮತಿಯು ಶ್ರೀರಾಮಚಂದ್ರನು |
ಜನನಿಗೆರಗುತ ಕೈಕೆಗೊಂದಿಸಿ |
ವಿನಯದಿಂ ಭರತಾದ್ಯರೊಲವನು | ಮನವರಿಯುತ ||350||

ಬ್ರಹ್ಮನಭ ವಾದ್ಯನಿಮಿಷಾದ್ಯರ |
ಸಮ್ಮತಿಯ ಪಡೆದಂದು ವಿಪ್ರರ |
ಪೆರ್ಮೆಯಿಂದೇರಿದನು ಹರಿಪರ | ಬ್ರಹ್ಮನಂದು ||351||

ಹರಿಯ ವಿಷ್ಟರದಲ್ಲಿ ರಂಜಿಪ |
ಸಿರಿಯರಸಗಂದಜನ ಪುತ್ರನು |
ಸುರರು ಜಯ ಜಯವೆನಲು ತೀರ್ಥವ | ಎರೆಯಲಂದು ||352||

ಅನಿಮಿಷರು ಪೂಮಳೆಯ ಕರೆದರು |
ಜನರ ಜಯ ರವವಾದ್ಯ ನಾದಗ |
ಳನಕ ಮೂರ್ಲೋಕದೊಳು ಧಣಿ ಧಣಿ | ಯೆನುತ ನಲಿಯೆ ||353||

ಕಾಣಿಕೆಯನಿತ್ತಖಿಲ ಜನರುರೆ |
ಯಾನರೇಂದ್ರನ ಬೇಡಿಕೊಂಡರು |
ದಾನಧರ್ಮಾದಿಗಳು ನಡೆದುದ | ನೇನನೆಂಬೆ ||354||

ನಿಗಮ ಸ್ತುತಿ ಪೌರಾಣವಿರಹಿತ |
ಜಗಕಗೋಚರನಿಂದು ತಾನೆನೆ |
ಮಿಗೆ ವಿರಾಜಿಸೆ ತಂದರಾರತಿ | ನಗುಮುಖಿಯರು ||355||

ರಾಗ ಢವಳಾರ ಏತಾಳ

ಸಕಲಲೋಕೈಕನಾಯಕ ರಘುರಾಮ |
ನಿಖಿಲ ಬ್ರಹ್ಮಾಂಡಮೂರುತಿಯೆ ನಿಸ್ಸೀಮ ||
ಮಖಪಾಲ ಶ್ರುತಿಲೋಲ ಧೂರ್ತವಿಧ್ವಂಸ |
ಶುಕನುತ ಸುರನುತ ರವಿದಂಶೋತ್ತ್ಹಂಸ |
ಅಕ್ಷತೆಯ ತಳಿದರು || ಶೋಭಾನೆ  ||356||

ಸಂಭ್ರಮದೊಳು ವಾನರರ ಕೂಡಿ ನಿಧಿಗೆ |
ಗಾಂಭೀರ್ಯದೊಳು ಸೇತುವೆಯ ಕಟ್ಟಿದವಗೆ
ಜಂಭಾದಸುರ ರಾವಣಾರಿಗೆ ಶರಣಗೆ |
ಕುಂಭಿನಿಪಟ್ಟವ ರಚಿಸಿದಾತನಿಗೆ |
ತಾಂಬೂಲವ ಕೊಡಿಸ್ಯಾರು || ಶೋಭಾನೆ ||357||

ಪಥ್ವಿನಂದನೆಯೊಡನಾಯೋಧ್ಯಪುರಕೆ |
ಮತ್ತಯ್ದಿ ಭರತನ ಭಾಷೆ ಪಾಲಿಸಿದಗೆ ||
ಚಿತ್ತಜನಯ್ಯಗೆ ಸಿರಿ ಸೀತಾಮಣಿಗೆ |
ಮುತ್ತಯ್ದೆಯರು ಕೂಡಿ ಸೀತಾರಾಮರಿಗೆ |
ಮುತ್ತಿನಾರತಿಯ ಬೆಳಗಿರಿ || ಶೋಭಾನೆ ||358||