ಶಾರ್ದೂಲವಿಕ್ರೀಡಿತಂ

ಶ್ರೀರಾಮಂ ದಿವಿಜೌಘಸನ್ನುತಪದಂ ಪೂರ್ಣೇಂದುಕಾಂತಾನನಂ
ಬಾಲಾರ್ಕಾಯುತಭಾಸುರಾಂಗಮಮಲಂ ಗಾಂಭೀರ್ಯರತ್ನಾಕರಮ್ |
ಕೋದಂಡೇಫುದಿಶೋಭಿತಾತತಭುಜಂ ವಾತಾತ್ಮಜಾದಿರ್ವತಂ
ವಂದೇಭೀಷ್ಟಫಲಪ್ರದಂ ರಘುವರಂ ಶ್ರೀಜಾನಕೀಲಾಲಸಮ್ ||1||

ದ್ವಿಪದಿ

ಮುನಿಪ ವಾಲ್ಮೀಕಿಯಡಿಗೆರಗಿ ಸಂತಸದಿ |
ಚಿನುಯಾತ್ಮಕ ರಾಮ ಚಂದಿರನ ಮುದದಿ  ||2||

ಬಲಬಂದು ಸೀತೆಪದಕೆರಗಿ ಹನುಮನಿಗೆ |
ತಲೆವಾಗಿ ಸುರವರರ ಬೇಡುತೀಶನಿಗೆ  ||3||

ನಮಿಸಿ ರವಿ ಮುಖ್ಯ ನವಗ್ರಹರಕೊಂಡಾಡಿ |
ಅಮರಮುನಿ ಸನಕಾದಿಗಳಿಗೆ ಕಯ್ ನೀಡಿ  ||4||

ಬೇಡಿಕೊಳುತಲಿ ಸೂತಶೌನಕಾದಿಗಳ |
ಪಾಡುತಲಿ ಗುಹಗಣಪರುಗಳ ಪಾದಗಳ  ||5||

ಕೊಂಡಾಡಿ ವಾಗ್ದೇವಿಮೂಕಾಂಬಿಕೆಯರ |
ದಂಡದಂತೆರಗಿ ಪದಗಳಿಗೆ ಕವಿವರರ  ||6||

ಒರೆವೆನೀ ಪೌರಾಣಕಥೆಯ ಮೆರೆಸುವುದು |
ಕರುಣದಿಂದಂಚೆಪಾಲಿನ ಗತಿಯೊಳೊಲಿದು  ||7||

ವ್ಯಾಕರಣದೋಷ ರಸ ಗುಣ ಗಣಾದಿಗಳ |
ನಾ ಕಾಣೆ ಛಂದ ಯತಿ ವೃತ್ತ ರೀತಿಗಳ  ||8||

ಬಲ್ಲಂತೆ ಬಣ್ಣಿಸುವೆ ಯಕ್ಷಗಾನದಲಿ |
ಸೊಲ್ಲು ತಪ್ಪಲು ರಾಮ ಸಲಹೊ ಹರಸುತಲಿ  ||9||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ರವಿಕುಲೋತ್ತಮರಾಗಿರುವ ಕುಶ |
ಲವರು ಪುನರಪಿ ಮುನಿಯ ಚರಣಕೆ |
ತವಕದಿಂ ಮಣಿಯುತ್ತಲೆಂದರು | ವಿನಯದಿಂದ ||10||

ದುರುಳ ದಶಕಂಠಾದಿ ದೈತ್ಯರ |
ಮುರಿದ ಮೇಲೆಮ್ಮವ್ವೆಯನು ಪತಿ |
ಕರಿಸೆ ದೋಷಗಳೇನು ಬಂತೆಂ | ದೊರೆಯಬೇಕು ||11||

ಕಿಚ್ಚಿಗೇತಕೆ ಹೊಕ್ಕಳಾ ಮೇ |
ಲಚ್ಚುತನು ಒಲಿದೆಂತು ಕೂಡಿದ |
ನುಚ್ಚರಿಸು ಲಂಕಾಧಿಪತ್ಯವ | ಸಚ್ಚರಣಗೆ  ||12||

ಕಟ್ಟಿ ಸಾಕೇತದೊಳು ಜನಕನು |
ಪಟ್ಟವೇರುತ ಧರೆಯ ಸಲಹಿವಿ |
ಶಿಷ್ಟನೆನಿಸಿದ ಕಥೆಯ ಪೇಳೆನೆ | ಶಿಷ್ಟ ನಗುತ ||13||

ಪೊಡವಿಯೊಳಗೆರಗಿರುವ ಕುವರರ |
ಮುಡಿಯ ಬೋಳಯ್ಸುತಲಿ ಮುನಿಪತಿ |
ಜಡಜನಾಭನ ನೆನೆಯುತೆಂದನು | ಸಡಗರದಲಿ ||14||

ರಾಗ ತುಜಾವಂತು ಝಂಪೆತಾಳ

ಬಾಲಕರು ಕೇಳಿರೈ ಕಾಳಗದಿ ಖಳನ |
ಕಾಲಗೊಪ್ಪಿಸಿ ಮಾತಲಿಯನು ಕರೆದವನ ||
ಓಲೈಸುತಿಂತೆಂದ ರಾಮನಿಂಗಿತವ |
ಖೂಳರಳಿದಾಯ್ತರುಹು ಸುರಪಾಲಗಿರವ ||15||

ಇನ್ನು ಕಳವಳ ಬೇಡ ಸ್ವರ್ಗಕೆ ನಿರ್ಭಯವು |
ಚೆನ್ನಾಗಿ ಸುರರ ಪಾಲಿಸಲೆನ್ನುತರುಹು ||
ಎನ್ನತವನನು ಕಳುಹಿರವಿಜಗಿಂತೆಂದ |
ನಿನ್ನ ಸೇವೆಗಳಿಂದ ಹರಿವುದಾನಂದ ||16||

ರಾಗ ಭೈರವಿ ಝಂಪೆತಾಳ

ಬಾಲನಂಗದನೇಸು | ಕಾಳಗದಿ ನೊಂದಿಹನೊ |
ಶೀಲ ಸದ್ಗುಣನಿಕರ | ವಾಲಿಸುಕುಮಾರ ||17||

ಜಾಂಬವರದುಪಕಾರ | ಸ್ಮರಣೀಯವಿಂದವರ |
ನಾಂ ಬಣ್ಣಿಸುವುದೇನು | ಸರ್ವರಕ್ಷಕನು ||18||

ನಳನೇಸು ಸಹಸಿಗನು | ಜಲನಿಧಿಗೆ ಸೇತುವನು |
ಬಲವಾಗಿ ಬಂಧಿಸಿಹ | ಛಲಗಳೇನಹಹ ||19||

ನೀಲನಾಯಕನಾಗಿ | ಬಳಲಿದನು ಬೆಂಡಾಗಿ |
ಕಾಳಗದ ಕಡುಹುತನ | ಪೇಳಲೇನವನ ||20||
ಮರುತಜನು ಗುಣಸಿಂಧು | ಪರಸೇವೆಯಲಿ ಮುಂದು |
ಮರೆಯಲಳವೇ ಸುಧೆಯ | ತಂದಿತ್ತ ಪರಿಯೆ ||21||

ಭೇಷಜರ ಪರಿ ಬೇರೆ | ಬದುಕಿಸಿದರಿಂದವರೆ |
ಗಾಸಿಯಾದರನುಳುಹಿ | ವಾಸಿಯಿಂ ಸಲಹಿ ||22||

ಉಳಿದ ತರುಚರರಿನ್ನು | ಸಾಮಾನ್ಯರಿಂದೇನು |
ಮುಳಿದು ಕಾದಾಡಿದರು | ತನುವರ್ಪಿಸಿದರು ||23||

ಏಸು ಪೊಗಳಲು ತೀರ | ದೀ ಸೇನೆಯೂಳಿಗವ |
ಕೈಸೇರಲುಂಟೆ ರಣ | ದಾಸೆಯಿಂ ಮರಣ ||24||

ಗುರುಸೇವೆ ಮಿಗಿಲೆಂದು | ಧರೆಗೆ ತೋರಿದನಿಂದು ||
ತರಳ ಸೌಮಿತ್ರಿಯನು | ಕಷ್ಟಪಡಿಸಿದೆನು ||25|

ಸ್ವಾರ್ಥಸಾಧನೆಗಾಗಿ | ಹಂಗಿಗನು ನಾನಿಂದು |
ಸ್ತುತ್ಯರೈ ನೀವ್ ಜಗದಿ | ಸಾಹಸರು ನಿಜದಿ ||26||

ಭಾಮಿನಿ

ಎನಲು ರವಿಸುತನೆದ್ದು ಕಯ್‌ಮುಗಿ |
ದಿನಿತು ಬರಿದೇ ಪೊಗಳಲೇತಕೆ |
ಚಿನುಮಯನೆ ನಿನ್ನೊಡಲೊಳಡಗಿಹುದೀ ಜಗತ್ತ್ರಯವು ||
ಮನುಜತನದುರು ಲೀಲೆ ಸಾಕೆಂ |
ದನಘನಂಘ್ರಿಯೊಳೆರಗೆ ರಾಘವ |
ಮಿನುಗುವತಿಹರುಷದಲಿ ಹನುಮನ ಕರೆಯುತಿಂತೆಂದ ||27||

ರಾಗ ಮಾಧುಮಾಧವಿ ಏಕತಾಳ

ಮರುತಸಂಭವ ಬಾರೊ ಬಾರಿತ್ತ ನೀನು | ಬೇಗ |
ತೆರಳು ಲಂಕೆಗೆ ಶರಣನ ಕಾಣಲಿನ್ನು ||
ನೆರೆದವರೊಳು ಹೆಚ್ಚು ಕುಂದಿದ್ದರಲ್ಲಿ | ಪೇಳಿ |
ಕರಕರೆಗಳ ಮಾಣಲೊರೆ ಎಲ್ಲರಲ್ಲಿ ||  ||28||

ಆರಾಜಪದವೆಂದು ಹೊಡೆದಾಟಬೇಡ | ಲಂಕಾ |
ಧಾರಿಣಿಗೊಡೆಯ ವಿಭೀಷಣ ಪ್ರೌಢ ||
ನೀರೆ ಮಂಡೋದರಿಗರುಹೆಮ್ಮ ಮನವ | ಮತ್ತೆ |
ಚಾರುಹಾಸಿನಿ ಚಿಂತಿಸದಿರೆಂಬ ಮತವ ||  ||29||

ಇಂತೆಂಬುದುಸಿರಿಸಿ ಸೀತೆಯ ಬಳಿಗೆ  | ಪೋಗು |
ತಂತಾರಭಾವಗಳೊರೆಯುವುದೆಮಗೆ ||
ಅಂತರ್ಯದಿಂದರುಹುವ ಜಾಣ ನೀನು | ಶೌರ್ಯ |
ವಂತನೆ ಸಾಗಯ್ಯ ಕಾತರಿಸುವೆನು ||  ||30||

ರಾಘವನೆಂದುದ ಕೇಳಿ ವಾತಜನು | ಬಹಳ |
ವೇಗದಿಂದಯ್ದಿದ ಲಂಕಾದುರ್ಗವನು ||
ಆಗ ವಿಭೀಷಣ ಕಾಣುತ್ತಲವನು | ಬಂದ |
ಯೋಗವೇನೆಂದು ಮನ್ನಿಸುತ ಕೇಳಿದನು ||  ||31||

ರಾಮ ಹೇಳಿದ ಮಾತನೆಡೆಬಿಡದಂದು || ಎಲ್ಲ |
ತಾಮಸಿಚರರಿಗೆ ತಿಳುಹಿದನಂದು ||
ಕಾಮಿನಿಮಣಿಗಳೆಲ್ಲರ ಸಂತವಿಡುತ | ಪೋಗಿ |
ಕಾಮನಯ್ಯನ ನೋಡಿರೆಲ್ಲ ನೀವೆನುತ ||  ||32||

ರಘುವರ ಕೋಪಿಸುವನು ಪೋಗಿರೆಂದು | ಪೇಳಿ |
ಜಗತ್ಪ್ರಾಣಸುತನು ಮತ್ತಲ್ಲಿಂದ ಬಂದು ||
ನೆಗೆದೊಡತಿಯ ಕಾಂಬ ತವಕದೊಳಂದು | ಕಂಡು |
ಮುಗುದೆಯ ಪದಕೆರಗಿದ ಬಳಿಕಂದು ||33||

ರಾಗ ಘಂಟಾರವ ಏಕತಾಳ

ರಾಮನರಸಿ ಪಟ್ಟದಂಗನೆ ಮೋಹದ |
ಕಾಮಿನಿ ಪ್ರೇಮದ ಕಣಿ ಜಯವೆಂದ ||
ಭೂಮಿಭಾರವೆ ಹಿಂಗಿ ದಶಶಿರ ಮಡಿದನು |
ಸ್ವಾಮಿಯೊಡನೆ ಮಲೆದೆಸಕದೊಳವನು ||34||

ದೇವಸಂತತಿಯೆಲ್ಲ ಕೊಂಡಾಡುತಿಹುದು ||
ದೇವರಥವೆ ಬಂತು ಕಾದಲಿನ್ನಿಂದು ||
ದೇವ ರಾಘವ ನಿನಗೋಸುಗ ಕಷ್ಟವ |
ದೇವಿ ಪಟ್ಟನು ಸೇತು ಬಲಿಯಲು ಶ್ರಮವ ||  ||35||

ಅನ್ನ ನೀರಿಲ್ಲದೆ ಬಳಲಿ ಬೆಂಡಾದನು |
ಇನ್ನು ದುಃಖಿಸಬೇಡ ಝಾವರ್ಧಕವನು ||
ನಿನ್ನ ಕೊಂಡೊಯ್ವನು ಜಗತಿವಲ್ಲಭನಿಂದು |
ಎನ್ನುತೆರಗೆ ಪೇಳ್ದಳಂಗನೆಯಂದು ||36||

ರಾಗ ಕೇದಾರಗೌಳ, ಅಷ್ಟತಾಳ

ಹನುಮ ನಿನ್ನಯ ಮಾತ ಕೇಳಲಾನಂದವು |
ಘನ ವಿಕ್ರಮಾದಿಗಳು ||
ಇನಕುಲಜಗೆ ಬೆಂಬಲವು ನೀವು ದೊರೆತದ |
ರನುವರ ಜಯವಾದುದು ||37||

ಯಾರು ಮಾಡುವುದು ಆಶ್ಚರ್ಯವು ಸೇತುವು |
ವಾರಿಧಿಯುತ್ತರಣೆ ||
ಶೂರನೆ ನೀನು ಸಂಜೀವನ ತಂದುಪ |
ಕಾರವ ಮರೆಯಲೆಂತು  ||38||

ಆದರೆನ್ನಯ ವಿಧಿವಶವೆಂತೊ ರಾಮನ |
ಹಾದಿಯನರಿವರಾರು |
ಕ್ರೋಧವಿರಲು ಸಾಕು ಮಾಗಧಿಯನು ನಾನು |
ಬಯ್ದಟ್ಟಿದೆನು ಕಾಡಿಗೆ ||39||

ಮಗಕೆ ಮೋಹಿಸಿ ಸ್ವಾಮಿಯನು ನಾನು ಕಳುಹಿದ |
ಬಗೆಯಪರಾಧವುಂಟು ||
ಖಗವಂಶರೆದೆಯನಾರರಿವರು ಶಿವ ಶಿವ |
ಬಿಗಿಯಾಗಿರಲು ಬಹುದು ||40||

ನಿನ್ನ ನಂಬಿಗೆ ಇಂದುಪರಿಯಂತ ಕುಳಿತಿಹೆ |
ಎನ್ನ ನಿಶ್ಚಯವ ಕೇಳು ||
ಪನ್ನಗಶಯನನೆನ್ನೊಳು ಮುನಿದರೆ ಪ್ರಾಣ |
ವನ್ನೇ ನಾ ಕಳಕೊಂಬೆನು ||41||

ಭಾಮಿನಿ

ಎಂಬ ಸೀತಾಂಬಕದಿ ಕಂಬನಿ |
ದುಂಬಿ ಹರಿಯುತ್ತಿರಲು ಹನುಮನು |
ಅಂಬುಗರೆಯುತ್ತೆಂದ ಬೆದರದಿರಮ್ಮ ನಿಮ್ಮೊಳಗೆ ||
ಅಂಬುರುಹನಯನಂಗೆ ನೆನಹಿನ |
ಹಂಬಲಿಲ್ಲದಡೆನ್ನ ಕಳುಹುವ |
ಹುಂಬತನವೇಕಕಟ ಬೆದರದಿರೆಂದು ಬೀಳ್ಗೊಂಡು ||42||

ರಾಗ ಕಮಾಚ್ ಅಷ್ಟತಾಳ

ಎಂದು ಸಂತಯಿಸುತ್ತ ಹನುಮಂತ | ರಾಮ |
ಗಂದು ಬಂದೊರೆದನು ಗುಣವಂತ ||
ಕಂದಿಹರಬುಜಾಕ್ಷಿ ಮನದಲ್ಲಿ | ಧ್ಯಾನ |
ವೊಂದೆಯೂಟಗಳಿಲ್ಲವವರಲ್ಲಿ ||  ||43||

ರಾತ್ರೆ ಹಗಲು ನಿದ್ದೆಯೇನಿಲ್ಲ | ಸ್ವಪ್ನ |
ದಾಸ್ಥಿತಿ ತಿಳಿದೆನು ನಾನೆಲ್ಲ ||
ವತ್ತಾಂತವೆನೆ ಕಣ್ಣ ತೆರೆದರು | ನಿಮ್ಮ |
ವರ್ತಮಾನವನೆಲ್ಲ ಕೇಳ್ದರು ||   ||44||

ರಾವಣನಳಿವಿಂಗೆ ನಕ್ಕರು | ತನ್ನ |
ಭಾವವೆಲ್ಲವನು ಹೀಗೊರೆದರು ||
ದೇವಿ ಕಣ್ಣಲಿ ನೀರ ಸುರಿದರು | ರಾಮ |
ದೇವನೆಂದೇ ಹಾಡುತಿರ್ಪರು ||  ||45||

ಭಾಮಿನಿ

ಮರುತಜನ ನುಡಿಗಂದು ಲಕ್ಷ್ಮಣ |
ಮರುಗೆ ನಿಖಿಲ ವನೇಚರ ವ್ರಜ |
ಕೊರಗೆ ರಘುನಂದನನ ನಯನದಿ ಬಪ್ಪ ಹೊನಲಾಗಿ |
ಹರಿಯಲಂತರ ಪ್ರಣಯಸುಧೆಯಂ |
ತಿರಲು ಕಟಕವೆ ಮರುಕಗೊಂಡಿರೆ |
ಶರಣಬಂದೆರಗುತಲಿ ಬಿನ್ನಹ ಮಾಡಿದನು ಹರಿಗೆ ||46||

ರಾಗ ಸಾಂಗತ್ಯ ರೂಪಕತಾಳ

ಆಗ ವಿಭೀಷಣನನು ಪಿಡಿದೆತ್ತುತ |
ರಾಘವನೆಂದ ತೋಷದಲಿ |
ಹೋಗು ಲಂಕೆಯ ಪಟ್ಟ ನಿನಗಿನ್ನು ಚಿಂತಿಸ |
ಲಾಗದು ತಾಗುಬಾಗಿನಲಿ  ||47||

ಕಂದುಕುಂದನು ತಿದ್ದುತಿಳೆಯನು ಧರ್ಮದಿ |
ಮುಂದೆ ಪಾಲಿಸುದೇವಿಯರನು ||
ಸಂದೇಹ ದ್ವೇಷಂಗಳೆಲ್ಲ ಮರೆತು ನಿಮ್ಮೊ |
ಳೊಂದಾಗಿಖಳರ ಕೀರ್ತಿಯನು ||48||

ರಾಯನಾಗುತ ಮೆರೆಸೆನುತ ಮಂಡೋದರಿ |
ಗಾಯತಾಂಬಕನೆಂದ ದಯದಿ |
ತಾಯೆ ಸೈರಿಸು  ನಿತ್ಯವಲ್ಲ ಸಂಸಾರವು |
ಮಾಯೆ ಸತ್ಯವೆ ನಿಶ್ಚಯೆಮಗೆ ||49||

ಪರಸತಿ ಪರಧನ ಪರಪೀಡೆಯಾಯುಷ್ಯ |
ವುರಿದು ಪೋಗುವುದು ಭಾಗ್ಯಗಳು |
ಗರುವದೊಳಳಿದ ತಪ್ಪೇನೆನ್ನ ಸಾರಿದೆ |
ಚರಿತೆ ಬಲ್ಲುದು ಜನಜನಿತ  ||50||

ಪೂರ್ವಸಂಚಿತ ಮೀರಲಾರಿಗಪ್ಪುದು ಮುಂದೆ |
ಊರ್ವೀಶ ಶರಣನೆಂದೆನಿಸಿ ||
ಇರ್ವುದು ಲೇಸು ದುಃಖಿಸಬೇಡವೆನಲಾಗ |
ಶರ್ವ ಮಿತ್ರಗೆ ಪೇಳ್ದ ನಮಿಸಿ ||51||

ಭಾಮಿನಿ

ದೇವರರಿಕೆಯನವಧರಿಸಬೇ |
ಕಾವು ಸ್ವಾತಂತ್ರ್ಯವನು ನೀಗಿಹೆ |
ಕಾವ ಕೊಲ್ಲುವ ಕರ್ತ ಚರಣದಿ ಮನವನರ್ಪಿಸಿಹೆ |
ಈ ವಿಭವ ಮತ್ತೇಕೆ ಪದರಾ |
ಜೀವದೈಕ್ಯವ ಬೇಡುವೆನು ಕೈ |
ಗಾವುದೆಂದೆರಗಿದರೆ ಕರುಣದೊಳೆತ್ತುತಿಂತೆಂದ ||52||

ರಾಗ ಮಧ್ಯಮಾವತಿ ತ್ರಿವುಡೆತಾಳ

ಶರಣ ಲಾಲಿಸು ಸೂರ್ಯವಂಶದಿ |
ಪೊರೆದ ರಾಜರು ಪೇಳ್ದ ನುಡಿಗನು |
ಸರಿಸಿ ನಡೆವುದು ಮೀರಲಸದಳ |
ಎರೆದೆ ನಿನಗಾಧಾತ್ರಿಯ | ಏನೊರೆವೆಯ ||53||

ಲಕ್ಷವಳಿದರು ಕೈಗೊಳೆವು ನಿರ |
ಪೇಕ್ಷೆಯೇ ಸರಿ ಪಾಪಕರ್ಮಕೆ |
ಶಿಕ್ಷೆಯಾಯಿತು ಧರ್ಮಬಾಹಿರ |
ರಾಕ್ಷಸರು ಬಲಿಯಾದರು | ತಾವ್ ಮಡಿದರು ||54||

ಸತ್ತು ಹುಟ್ಟುವ ರೋಗಕೆಮ್ಮಯ |
ಕತ್ಯವೇ ಕಾರಣಗಳಲ್ಲದೆ |
ಮತ್ತೆ ಕೊಲುವವರಾರು ಕಾಯ್ವರು |
ತತ್ತ್ವಲೀಲೆಯ ತಿಳಿಯಲು | ನೆವ ಹೇಳಲು ||55||

ವಿಧಿವಿಲಾಸವ ಮೀರಲಳವ |
ಲ್ಲದುವೆ ಪ್ರಾರಬ್ಧಗಳು ಎಂಬರು |
ಇದಕೆ ಯೋಚಿಸಲೇಕೆ ನಮ್ಮದೆ |
ಹದನ ತಿಳಿಯುತಲೆನ್ನುವೆ | ಹೀಗೊರೆಯುವೆ ||56||

ಪಟ್ಟವೇರಲು ನೆನೆದ ಬಯಕೆಯು |
ಮುಟ್ಟಿತಾರಣ್ಯದೊಳು ಸತಿಯನು |
ಬಿಟ್ಟೆ ಬಳಿಕಲೆಯುತ್ತ ಪಡೆದಿಹ |
ಕಷ್ಟ ನೀನೇ ಬಲ್ಲೆಯ | ಏನೊರೆವೆಯ ||57||

ಮನದಿ ತರಹರಿಸದಿರು ನೀ ನಡೆ |
ನೆನೆದ ಕಾರ್ಯಕೆಯೆನುತ ತಮ್ಮನ |
ಮನಕೆ ಬರುವಂದದಲಿ ಪೇಳಿದ |
ನಿನಕುಲದ ಶ್ರೀರಾಮನು | ನಿಷ್ಕಾಮನು ||58||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ತಮ್ಮ ನೀ ಪೋಗೀಗ ಶರಣಗೆ |
ಧರ್ಮದಿಂ ಲಂಕಾಧಿಪತ್ಯವ |
ನೆಮ್ಮಮತದಿಂ ಕಟ್ಟಿ ಬಾರೈ | ಘಮ್ಮನಿಂದು ||59||

ಹನುಮಸುಗ್ರೀವಾದಿಗಳು ನೀ |
ವನುಜನಿಗೆ ಬೆಂಗಾವಲೈದಿರಿ |
ಎನುತ ಕಳುಹಲು ಬಂದರೆಲ್ಲರು | ಮನ ವೊಲಿಯುತ  ||60||

ಗುಡಿಯ ಕಟ್ಟಿದು ತೋರಣಂಗಳ |
ಸಡಗರದಿ ಸಿಂಗರಿಸಿ ಲಂಕೆಯ |
ಒಡೆತನದ ಪಟ್ಟವನು ಕಟ್ಟಿದ | ರೊಡನೆ ಮುದದಿ | ||61||

ಕಂಡು ಕಾಣಿಕೆಯಿತ್ತು ನಮಿಸಲು |
ಗಂಡ ಲಂಕೆಗೆ ಶರಣನೆನ್ನುತ |
ಚಂಡ ಭೇರಿಯ ಮೊಳಗಿಸಿದರಾ | ಮಂಡಲದಲಿ | ||62||

ದಾನಧರ್ಮಾದಿಗಳ ವಿರಚಿಸಿ |
ಭಾನುವಂಶನ ಕೀಶಸೇನೆಯ |
ದಾನವನು ಮನ್ನಿಸಿದ ವಿಹಿತ ವಿ | ಧಾನದಿಂದ | ||63||

ಸುರರು ಸುಮ್ಮಾನಿಸಲು ಕಾರಾ |
ಗರದೊಳುಳಿದಿಹ ಜನರನೆಲ್ಲರ |
ನಿರದೆ ಬಿಟ್ಟವರನ್ನು ಕಳುಹಿದ | ಹಿರಿದು ಗುಣದಿ | ||64||

ಬಳಿಕ ರಾಮಗೆ ಕಾಣಿಕೆಯನನು |
ಗೊಳಿಸಿ ಹೊರಿಸುತ ಭಂಡಿಯಿಂ ತಂ |
ದಿಳಿಸಿದನು ರತ್ನಗಳಪರಿಮಿತ | ನಲವಿನಿಂದ | ||65||