ರಾಗ ಕಲ್ಯಾಣಿ ಏಕತಾಳ

ಇನಿತು ನಾರಿಯರೆಲ್ಲ ಮಂಗಳಾತ್ಮನನು |
ಸನಕಾದಿಗಳು ಜಯವೆನಲಾರತಿಯನು ||
ಮಿನುಗೆ ವಸಿಷ್ಠರ ಮತದಿಂದ ಭರತ |
ನನೆ ಯುವರಾಜನೆಂದೊರೆದರು ಸತತ ||359||

ಸೇನೆಗಳೊಡೆತನ ಶತ್ರುಘ್ನಗಂದು |
ಜಾಣ ಲಕ್ಷ್ಮಣಕೋಶದಧಿಕಾರಿಯೆಂದು ||
ಏನೆಂಬೆ ಸಂತೋಷ ರಾಮಚಂದ್ರಮನು |
ತಾನೆ ಭೋಜನಕಾಗಿ ಕರೆದನೆಲ್ಲರನು ||360||

ಎಂದು ನೇಮಿಸಿ ಹೊನ್ನದೆಲೆಗಳ ತಂದು |
ತಂದು ಇಕ್ಕುತ ಬಡಿಸಿದರೆಲ್ಲ ಬಂದು ||
ಮುಂದೆ ಈಶಾನದೇವತೆಗಳೆ ಬೇರೆ |
ಬಂದದು ವಿಪ್ರರ ಪಙ್ಕ್ತೆಯಂದೋರೆ ||361||

ರಾಜಪಙ್ಕ್ತಯ ನಿಕ್ಕಿ ಮಣೆಗಳನಿಡಲು |
ಬೇಜನ ಸುಗ್ರೀವ ಜಾಂಬವಾದಿಗಳು ||
ಭೋಜನ ಲಂಕೇಯ ದಾನವರೆಂದು |
ಗೌಜುಮಾಡದಿರೆಂದು ಪಙ್ಕ್ತೆಬೇರೆಂದು |362||

ಹೆಮ್ಮಕ್ಕಳಿಗೆ ಬೇರೆ ಕಪಿಗಳಲ್ಲಿಹವು |
ಗುಮ್ಮನಂತಿಹ ದೊಡ್ಡ ಹಲ್ಲು ಚೇಷ್ಟೆಯವು ||
ಎಮ್ಮ ಕೊಂಡೊಯ್ವವೆಂದತ್ತತ್ತ ಮುಂದು |
ಹೆಮ್ಮೆಯಾಡುತಿರಿರ್ದ ರಬಲೆಯರಂದು ||363||

ದೊಡ್ಡ ಧೋತ್ರವನುಟ್ಟು ಪಟ್ಟೆಯ ಸೆರಗ |
ದುಡ್ಡನು ಕೊಡಿರೆಂದು ಕೂಗಲಂದಾಗ ||
ಗಡ್ಡುಪಾಧ್ಯರು ಕರೆದೆಂದರು ಮುಂದು |
ಹೆಡ್ಡರಾಗದಿರೆಂದು ಪೇಳ್ದರಿಂತೆಂದು ||364||

ಪಟ್ಟಿದಾನವು ನಮ್ಮ ಲೊಟ್ಟೆಜೋಯಿಸಗೆ |
ಕೊಟ್ಟು ಬಿಡಲಿ ನಾರುಬಟ್ಟೆಯಿಂದವಗೆ ||
ಚಟ್ಟೋಪಾಧ್ಯಾಯಗೆ ತಾಮ್ರ ಕಬ್ಬಿಣವು |
ಗುಟ್ಟಿನೊಳುಂಬಳಿಯನು ಕೊಂಬೆವಾವು ||365||

ಬೆಳ್ಳಿ ಕುಂಭಗಳು ನಮ್ಮುಳ್ಳ ಗೋಪನಿಗೆ |
ಒಳ್ಳೆ ಪುತ್ಥಳಿ ಪಚ್ಚೆ ನೀಲಕಂಠನಿಗೆ ||
ಗುಲ್ಲು ಮಾಡದಿರೆನೆ ಪದುಮಲೋಚನನು |
ಎಲ್ಲ ಸಂತೈಸುತಿತ್ತನು ಬೇಕಾದುದನು ||366||

ದ್ವಿಪದಿ

ಭೂರಿ ಭೋಜನಶಾಲೆಯೊಳಗೆ ಪಙ್ಕ್ತೆಗಳ |
ಸಾರಿಯೊಳು ಬಡಿಸಿದರು ಹಲವು ಪಾಕಗಳ ||367||

ಪಾಯಸವು ಕೋಸಂಬ್ರಿ ಪಚ್ಚಡಿಯ ಸಾಲು |
ಕಾಯನ್ನವೇ ಮೊದಲಿಗಿಕ್ಕಲೆಲೆಗಳಲಿ ||368||

ಉಪ್ಪು ಉಪ್ಪಿನಕಾಯಿ ಚಟ್ಣಿ ಪಲ್ಯಗಳು |
ಹಪ್ಪಳವು ಸೇಮಿಗೆಯು ತುಪ್ಪದಡಿಗೆಗಳು ||369||

ಜೀರಸಾಲೆಯದನ್ನವದಕೆ ಘತವೆರೆದು |
ಸಾರುಗಳ ಸುರಿಸಿದರು ಪಲ್ಯ ಬಹುವಿಧದು ||370||

ಹುಳಿಯು ಕೋಸೆಂಬ್ರಿ ತಂಬುಳಿಯು ಸಾಸ್ವೆಗಳು |
ಕಲಸು ಮೇಲೋಗರವು ಹುಳಿರಸವನಿಡಲು ||371||

ಮೇಲೆ ಮೇಲೈದಿದವು ಭಕ್ಷಗಳ ಹೆಡಿಗೆ |
ಹೋಳಿಗೆ ಜಿಲೇಬಿ ಲಾಡುಗಳಿಕ್ಕಲೆಲೆಗೆ ||372||

ಫೇಣಿ ಕೇಸರಿಬೋನ ಚಿತ್ರಾನ್ನಗಳನು |
ಮೇಣೆನಲು ಸುಕಿನುಂಡೆ ಚೀರೋಟಿಗಳನು ||373||

ಬಾಳೆಕಾಯನು ಹುರಿದ ಸಕ್ಕರೆಯ ಪಾಕ |
ಸೋಲಿಸುವ ಬಾಳೆಹಣ್ಣಿನ ರಾಸಿಯನಕ ||374||

ಎನಗೆಂಟು ಮೂರವಗೆ ಎನುವ ಹಾರುವರು |
ತನತನಗೆ ಗೌಜಿಯಲಿ ಎಳಕೊಂಡರವರು ||375||

ಪಙ್ಕ್ತೆಯೊಂದಾಯ್ತೂಟವವನಿವನ ಜಗಳ |
ಪಂಥಗಳನಾಡು ತುಂಡರು ಮತ್ತೆ ಬಹಳ ||376||

ಇನಿತು ನಡೆಯಲ್ಕೊಂದು ಕಥನ ಪೊಸತಾಯ್ತು |
ಇನಕುಲೇಶಗೆ ಲಕ್ಷ್ಮಣನು ಕಯ್ಯ ಮುಗಿದು ||377||

ಹನುಮಂತನಿಲ್ಲೆಂದು ತಿಳಿಸಲಂದಾಗ |
ಜನಪಾಲ ಕರೆಸಿ ಬೆಸಗೊಂಡನತಿಬೇಗ ||378||

ಭಾಮಿನಿ

ಏನು ನಿನ್ನಂತರ್ಯವೆನೆ ಪವ |
ಮಾನಿಯುಸಿರಿದ ಭಕ್ತ ತಾನೆಂ |
ಬೀನಿಧಾನದ ಸಲುಗೆಯಿದ್ದರೆ ಕೊಡಲುಬೇಕೆನಗೆ ||
ನೀನು ಭೋಜನ ಗೆಯ್ದಶೇಷವ |
ಮಾಣದೀಯುವ ವರವನೆಂದೆನೆ |
ಶ್ರೀನಿವಾಸನು ಕೊಟ್ಟೆನೆಂದನು ನಗುತ ಹನುಮನಿಗೆ ||379||

ಕಂದ

ಎನಲುಂ ತೋಷದಿ ಹನುಮಂ |
ಜನಪಾಲಕನ ಪರಿಶೇಷ ಭೋಜನ ಪಾತ್ರೆಯ ||
ವನಜಾಸನಪುರಿಗೆಯ್ದುತ |
ಲನುವಿಂ ಭುಂಜಿಸುತಿರಲತಿ ಹರುಷದೊಳವನುಂ ||380||

ವಾರ್ಧಕ

ನಿಗಮಯೋಗಿವ್ರಜಕೆ ಮನಗೊಡದ ಪರಮಾತ್ಮ |
ನಗಣಿತದ ಬ್ರಹ್ಮ ಸಾಯುಜ್ಯಮಂ ಹನುಮನಿಗೆ |
ತೆಗೆದಿತ್ತು ಧಾರೆಯೆರೆಯಲ್ಕೆ ನಾರದ ಮನದಿಯಗಣಿತಪಹಾಸ್ಯ ನೆನೆದು ||
ಜಗದೊಳುತ್ತಮನಾದನೀ ಕಪಿಯು ಬ್ರಹ್ಮಪದ ||
ವಿಗಯೋಗ್ಯನೆಂದೆಂಬ ಬಗೆಯ ಕಾಣಿಪೆನೊಂದು |
ಜಗಳ ಹೂಡುವೆ ಭಕ್ತತನವರಿಯಲಿಂತೆಂದು ಗುಹರಾಯಗೆಂದ ಬಂದು ||381||

ರಾಗ ಸುರುಟಿ ಅಷ್ಟತಾಳ

ಗುಹರಾಯ ಲಾಲಿಸಯ್ಯ | ಹನುಮಂತನ |
ಕುಹಕವ ಪೇಳ್ವೆಜೀಯ ||
ಅಹಿಶಯನನು ಧಾರೆಯೆರೆದ ನಿನ್ನಯ ಪಟ್ಟ |
ದ್ರುಹಿಣನ ಪುರವನು ವಂಚಿಸಿ ಪಡೆದನು ||  ||382||

ನಿನಗೆ ಮೊದಲು ಪಟ್ಟವ | ಕೊಡುತಲಿಂದು |
ಅನಿಲಜಗಾ ರಾಘವ ||
ಎನಗೇನು ಕರೆದಿತ್ತ ಕಂಡೇನು ಇದು ಸತ್ಯ |
ನಿನಗೆ ಬಿಲವೆ ಮುಂದು ಎನಲೆಂದ ಗುಹನೊಂದು ||  ||383||

ಸರ್ವಲೋಕೇಶನಾತ | ಇತ್ತಿರಲದ | ತಿರುಗಿ ತಾನೇ ಮರೆತ |
ತರುಚರಗಿತ್ತನೆಂಬುರುಹಾಸ್ಯಕಿನ್ನೇನು |
ಪರಿಹಾರ ದಯಮಾಡಿ ಪೇಳೆನೆ ನಗೆಮೂಡಿ ||  ||384||

ಭಾಮಿನಿ

ಕ್ಷೋಣಿಯೊಳು ಜಗಳವನು ಬಿತ್ತಲು |
ತಾನೆ ಕಾರಣನೆಂಬರೆಲ್ಲರು |
ನೀನಿದನು ಗುಪಿತದಲಿ ನಿನ್ನಯ ಪಿತನಿಗಿಂದುಸಿರು ||
ಏನಗೆಯ್ಯುವದೆಂಬುದರಿವುದು |
ನೀನೆ ಪೇಳೆಂದೆನುತ ಕಳುಹಲು |
ಸ್ಥಾಣುವಿಂಗೆರಗುತ್ತಲೆಂದನು ಗುಹನು ದುಗುಡದಲಿ ||385||

ರಾಗ ಛವಿ ಏಕತಾಳ

ಲಾಲಿಸು ಜನಕನೆ ಎನ್ನರಿಕೆಗಳನ್ನು |
ಶ್ರೀಲಲಾಮನು ಇಂದು ಗೆಯ್ದಕಾರ್ಯವನು |
ಹಾಳುಮಾಡಿದ ಬ್ರಹ್ಮಪಟ್ಟವನೆನಗಿತ್ತು |
ಕೀಳು ಕಪಿಗೆ ಧಾರೆಯೆರೆದನೀ ಹೊತ್ತು || ಲಾಲಿಸು  ||386||

ಏಸರ ನ್ಯಾಯವಾಯ್ತೆಂದು ಪೇಳಿದುದನ್ನು |
ಈಶನು ಮನದಲಿ ನೊಂದೆಂದನವನು ||
ಹೇಸಿಗೆಯನು ಗೆಯ್ದನೆಂದು ವಾಣೀಶನ |
ಬೇಸರದಲಿ ಕರದೆಂದನೀ ಹದನ || ಲಾಲಿಸು  ||387||

ಭೂಮಿಯೊಳತಿ ಚೋದ್ಯ ಅಜ ಲಾಲಿಸೇನಯ್ಯ |
ನೀ ಮನದೊಳು ನೋಡು ಮತವಲ್ಲವಯ್ಯ ||
ರಾಮಚಂದ್ರನು ಇಂದು ನಮ್ಮನು ಕರೆಸುತ |
ಆ ಮರುತಜಗೆ ನಿನ್ನಯ ಪಟ್ಟವಿತ್ತ || ಲಾಲಿಸು  ||388||

ನೋಡು ನಿನ್ನಯ್ಯನ ಅಪಹಾಸ್ಯತನಗಳು |
ಮೂಢರಾದೆವು ನಾವು ಮೂರು ಮೂರ್ತಿಗಳು ||
ಆಡಿ ತಪ್ಪಿದನವನನು ದೂರದೇ ಹೇಳು |
ಮಾಡಿಕೊಳರಿಕೆಯ ಬೇಗದೊಳೆನಲು || ಲಾಲಿಸು  ||389||

ಭಾಮಿನಿ

ಬೇಡ ನಮ್ಮಯ ಮುನಿಸು ಹಿರಿದದು |
ಮಾಡಲಾಗದು ಕಡೆಗೆನೆಮ್ಮೊಳು |
ಮೂಡುವುದು ವೈರಾಗ್ಯ ಕೊನೆಗೇನಾಗುವುದೊ ತಿಳಿಯೆ ||
ಮಾಡು ಬಿನ್ನಪವೆನಲು ವಿಧಿ ಮಾ |
ತಾಡಿದನು ನೀ ತಿಳಿಯದಜ್ಞನೆ |
ಖೋಡಿ ಏತಕೆ ಬಿಡು ಮನದ ಸಂಶಯವ ನೀನಿನ್ನು ||390||

ರಾಗ ಮಧ್ಯಮಾವತಿ ತ್ರಿವುಡೆತಾಳ

ಮಾತನಾಲಿಸು ಭವನೆ ಶ್ರೀಹರಿ |
ತಾತ ಜಗಕವ ಭಕ್ತರೆಂದರೆ |
ಸೋತ | ಸತಿಸುತರಾರನೊಲ್ಲನು | ಮಾತು ಹೆಚ್ಚೇನಾತನು |  ||391||

ಮನಕೆಣಿಸ ಪರಮಾತ್ಮನಿಂದಿನ |
ದಿನವೆ ನಮ್ಮಿಂದಾಗಿ ಕೆಡುವುದು |
ಕೊನೆಗೆಯವ ನೆನೆದುದನೆ ಮಾಡುವ |
ಮುನಿಸು ಕಾರಣವಪ್ಪುದು | ನಾವೆನುವುದು ||392||

ನಿರತನವನಿಂಗಚ್ಚುಮೆಚ್ಚಿನ |
ಶರಣ ಮರುತಜ ಲೋಕವನು ಶ್ರೀ |
ವರನು ಸಜಿಸುವನೀಕ್ಷಿಸುವ ನಮ |
ಗಿರದ ಭಾರಗಳೇತಕೆ | ಎನೆ ಮಾತಿಗೆ ||393||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಾಕು ನಿನ್ನಯ ಬೊಮ್ಮತನವಿಂ |
ದೀ ಕುಟಿಲಕೌಷಧಿಯ ಬಲ್ಲೆನು |
ಜೋಕೆ ನಡೆ ನಿನ್ನಯ್ಯಗರುಹಿಸ ವಿ | ವೇಕತನವ ||394||

ಮುರಿವುದೀ ಶುಭಕಾರ್ಯವೆಂಬುದ |
ಕೊರೆದೆನೆಂದೆನಲಂದು ಬ್ರಹ್ಮನು |
ಮರುಗಿಪಾಯವ ನೆನೆದು ಮಗನನು | ಕರೆಯುತೆಂದ ||395||

ಮಗನೆ ಲಾಲಿಸು ರುದ್ರನಿರವನು |
ವಿಗಡತನ ವಿಪರೀತ ವಾಕ್ಯವ |
ರಘುಜನರಿಯನು ಮಾಡಲೇನೈ | ಸುಗುಣ ನೀನು ||396||

ಇದಕುಪಾಯವ ಮಾಡು ತನ್ನನು |
ಬದುಕಿಸೆನೆ ಕೈಮುಗಿದು ಪೇಳಿದ |
ಮಧುವಿರೋಧಿಯ ಮುನಿಸು ತನಗಿಂ | ದೊದಗದಿಹುದೆ ||397||

ಮೊದಲೆ ನಾರದರೆಂಬರೆನ್ನನು |
ಹದನ ನೀನೇ ಬಲ್ಲೆನೆಂದನ |
ಲೊದಗಿದಾಪತ್ತುಗಳು ಕಳೆಯಲಿ | ಕದನವಿನ್ನು ||398||

ಮಾಡು ನೀನೆನಲೊಪ್ಪಿನಾರದ |
ಮೂಡಿದೆಳೆನಗೆಯಿಂದ ನಡೆದನು |
ಗಾಢದಿಂ ವೈಕುಂಠಪುರಕಿ | ನ್ನಾಡಲೇನು  ||399||

ಮಂರಾಧರಭಕ್ತ ಕುಮುದಾ |
ನಂದರೆಂದೆಂಬುವರ ನರಸುತ |
ಬಂದು ಪೇಳಿದ ಯುಕ್ತಿಯನು ಬಹು | ಚಂದದಿಂದ ||400||

ರಾಗ ಸುರುಟಿ ಏಕತಾಳ

ದ್ವಾರಪಾಲರಯ್ಯ | ಏನು ವಿ | ಚಾರ ಕಾವಲಯ್ಯ |
ದ್ವಾರದ ರಕ್ಷಾಭಾರಕರಾ ಹರಿ |
ದೂರದೊಳಿಹನಿನ್ನಾರನು ಕಾದಿರಿ || ದ್ವಾರ ||401||

ಯೋಗಿವಂದ್ಯನವನು | ಬಿಟ್ಟಿದ | ಪೋಗಿ ಸುಖದೊಳಿಹನು ||
ಭೋಗವ ಬಯಸುತ ಭೂಮಿಲಿ ಜನಿಸಿದ |
ನಾಗಶಯನ ಸಂಸಾರವ ಹೂಡಿದ || ದ್ವಾರ ||402||

ಪಟ್ಟವ ಸೇರಿದನು | ಕೋಸಲ | ಸೃಷ್ಟಿಗೊಡೆಯನಿನ್ನು ||
ಬಿಟ್ಟನು ನಿಮ್ಮನು ಜಪವೇಕವನನು |
ಲೊಟ್ಟೆಯ ನುಡಿಯನು ನಂಬಿದಿರೇನು || ದ್ವಾರ ||403||

ಕಂದ

ಸುರಮುನಿನುಡಿಯಂ ಕೇಳ್ದಾ |
ಹರಿಭಕ್ತರು ಮನಮರುಗುತ ಮುನಿಯಡಿಗಳಿಗಂ ||
ಎರಗುತಲೆಮ್ಮನು ಪೊರೆಯೈ |
ಹರಿಯೆಮ್ಮೆಡೆಗೈದುವ ಯುಕುತಿಯ ಮಾಡೆನಲುಂ ||404||

ರಾಗ ಶಂಕರಾಭರಣ ರೂಪಕತಾಳ

ದ್ವಾರಪಾಲರಿಂದು ನೀವು ಬಳಲಬೇಡಿರಿ |
ಮಾರಜನಕನಿಲ್ಲಿ ಬರಲುಪಾಯ ನೀವು ಕೇಳಿರಿ ||
ಮಾರುತಾತ್ಮಜಾತನಿಂಗೆ ಧಾರೆಯೆರೆದನು |
ವಾರಿಜಾಸನನ ಪುರಿಯನೊಲಿದು ಕೊಟ್ಟನು ||405||

ಸತ್ಯಪುರದೊಳೀಗ ಹನುಮ ರಾಮನುಂಡಿಹ |
ಭುಕ್ತಶೇಷ ತಂದು ಸುಖದಿ ಉಣುತಲಿರುತಿಹ ||
ಸತ್ಯನುಡಿಯು ಬರುವುದಿನ್ನು ಸಂಶಯಂಗಳು |
ಯತ್ನ ಪೇಳ್ವೆ ಕ್ಷಣದಿ ನೀವು ಪೋಗುತವನೊಳು ||406||

ವಿಧಿಯು ಬರಲು ಪೇಳ್ದಯೋಧ್ಯೆಗೆಂದು ಪೇಳ್ದುದು |
ಮುದದಿ ಪುಸಿಯ ನುಡಿಯಲವನು ಬರುತ ನಿಜವಿದು ||
ಹದನನರಿತು ಹನುಮಪೋದಮೇಲೆ ಪಾತ್ರೆಯ |
ಕದಿಯುತೆತ್ತಿ ತಂದರಾಯ್ತುಪಾಯ ನಿಶ್ಚಯ  ||407||

ಹರಿಯ ಭಕ್ತನಧಟನವನು ಮುನಿದರೆಮ್ಮನು |
ಪೊರೆವರಾರು ಹರಿಯ ಮುನಿಸನೆನಲು ನಕ್ಕನು ||
ತರುಚರಂಗೆ ಹೆದರಬೇಡಿ ಬಲ್ಲೆನೌಷಧಿ |
ಭರದಿಪೋಗಿ ರೆನಲು ಬಂದರವರು ನಿಮಿಷದಿ ||408||

ವಾರ್ಧಕ

ಬಂದಿರುವ ವೈಷ್ಣವರ ನೋಡಿ ಮರುತಜ ಕೇಳ |
ನಿಂದು ನೀವೆಲ್ಲಿಂದ ಬರವು ನೀವಾರೆನಲು |
ಮಂದರಾಧರಭಕ್ತರೆಂದರೆಲೆ ಮರುತಸುತ ಕಮಲಸಂಭವನೆಮ್ಮನು ||
ಇಂದಿರೇಶನ ದಾಸ ಹನುಮಂತನೆಡೆಗಯ್ದಿ |
ಸಂದೇಹಪೇಳಿರೆಂದನೆ ಬಂದೆ ಶೇಷಾನ್ನ |
ವಿಂದುಣದೆ ಬಂದೆನ್ನ ಮಾತಾಡಿ ಪೋಗಲೆಂದೆನಲಿಲ್ಲಿ ಬಂದೆವಾವು ||409||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸುಳ್ಳು ಮಾತುಗಳಲ್ಲ ನಾವ್ ಶ್ರೀ |
ವಲ್ಲಭನ ಸೇವಕರು ನಿಜವಿದು |
ಮಲ್ಲ ಸಾಹಸಿಯಲ್ಲವೇ ಜಗ | ದಲ್ಲಿ ನೀನು ||410||

ಶೇಷದನ್ನವನುಂಡು ಮುಗಿಸಲು |
ದೋಷವಿಹುದೆಂಬುದನು ತಿಳಿದೆವು |
ವಾಸುದೇವನ ತನುಜಮುಖದಿಂ | ದೀಸು ಪರಿಯ ||411||

ಭಾಮಿನಿ

ಮರುತಜನು ಇವನೆಂದ ಕುಹಕವ |
ನರಿಯದುಬ್ಬುತ ತನ್ನ ಸ್ಥಿತಿಯನು |
ಮರೆತು ಬಂದನು ಕಮಲಸಂಭವನೆಡೆಗೆ ವೇಗದಲಿ ||
ತೆರಳೆ ಹನುಮನು ಕುಮುದರಾಕ್ಷಣ |
ಹರಿಯ ಶೇಷದ ಪಾತ್ರ ಕದ್ದೋ |
ಡಿರಲು ಬಂದೆರಗುತ್ತ ಕೇಳಿದ ವಿಧಿಯನಾ ಹನುಮ ||412||

ರಾಗ ಕೇದಾರಗೌಳ ಅಷ್ಟತಾಳ

ಸೃಷ್ಟಿಗೊಡೆಯ ತನ್ನ ಕರೆದುದೇತಕೆ  ದಯ |
ವಿಟ್ಟು ನೀ ಪೇಳೆನಲು ||
ತಟ್ಟನೆಂದನು ಹನುಮಂತಗೆ ವಿಧಿಯಾಗ |
ಲೊಟ್ಟೆಯನರಿಯೆನೆಂದು ||413||

ಯಾರೆಂದುದೆನಲು ಆಶ್ಚರ್ಯದಿ ವಾತಜ |
ಹಾರಿದನಜಪುರಿಗೆ ||
ಆರೋಗಣೆಯ ಪಾತ್ರವಲ್ಲಿ ಕಾಣದೆ ಖತಿ |
ಯೇರುತ ಕನಲುತೆಂದ ||414||