ಕಂದ ಪದ್ಯ
ಉದಯದಿ ಕೈಗಲಸುತ ಖಳ |
ಗಡಣದೊಡನೆ ದೇವ ನರಾಂತಕರಳಿಯಲ್ಕಾಗಲ್ ||
ಒಡೆಯಗೆ ಪರಿಚರ ರುರಹ |
ಲ್ಕದನಾಲಿಸುತತ್ಯುಗ್ರದಿ ಕಿಡಿಯಿಡುತಸುರಂ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕಂಡರೋಡುವ ಮನುಜ ಮರ್ಕಟ | ತಂಡವೆಮ್ಮನು ಕೆಣಕಿ ಜೀವಿಸೆ |
ಗಂಡುಗಲಿ ತಾನೆನಿಸಿ ಫಲವೇ | ನಿಂದು ರಣದಿ || ೧ ||
ಬಡಿದು ಕೋತಿಗಳಡಗ ಶಾಕಿನಿ | ಗಡನಕೌತಣ ಬಡಿಸಿ ರಘುಜನ |
ಕೆಡಹಿ ಸುಲಿಸುವೆ ಪಿಡಿ ದನುಜ ಕುಲ | ಗೆಡುಕನನ್ನು || ೨ ||
ಬರಲಿ ಭೈರವ ಚಾಪವಾಹಿಮ | ಕಿರಣಹಾಸವಿಧಾತ ರಥವೆಂ |
ದುರವಣಿಸಲತಿಕಾಯನಯ್ಯನ | ಚರಣಕೆರಗಿ || ೩ ||
ಭಾಮಿನಿ
ಮಂಡೆ ಬಲಿತಿಹುದೆಂದೆನುತ ಹೆ |
ಬ್ಬಂಡೆಯನು ಹಾಯ್ದಪರೆ ಪಿತ ಕೈ |
ಗುಂಡಿನಲಿ ಬ್ರಹ್ಮಾಂಡ ಭಾಂಡವ ನೊಡೆಯಲೆಳಸುವರೆ ||
ಚಂಡ ವೈಶ್ವಾನರನ ಕರ್ಪುರ |
ಖಂಡವಿದಿರಿಪುದೆಂಟೆ ಸಮರೋ |
ದ್ದಂಡ ರಘುಪತಿಯಸ್ತ್ರಕಿದಿರಿಲ್ಲಹಿತ ಬೇಡೆಂದ || ೧ ||
ರಾಗ ಜಂಜೋಟಿ ಅಷ್ಟತಾಳ
ತಾತಯೇನಿದು ಮರುಳಾಟ | ವೇದ ವೇತ್ತ ವಿಖ್ಯಾತ ಸಾಮ್ರಾಟ ||
ಖಾತಿಯೇನಿದು ರಘು ನಾಥನ | ಹಗೆ ಸರ್ವ ||
ಘಾತವಲ್ಲದೆ | ರೀತಿಯಪ್ಪುದೆ | ನೀ ತಿಳಿಯೆಯಾ | ನೀತಿ ಕೋವಿದ || ತಾತ || ೧ ||
ಅಖಿಲ ಬ್ರಹ್ಮಾಂಡವ ರಚಿಸಿ | ಜೀವ ನಿಖಿಲದಂತರ್ಯಾಮಿಯೆನಿಸಿ ||
ಸಕಲ ತನ್ನೊಳಗೈಕ್ಯೆ | ಗೊಳಿಸಿ | ಮೇಣ್ ಸೃಜಿಸುವ ||
ಶಕುತ ಸಾಕ್ಷಾ | ದ್ವಿಷ್ಣು ರಘುಪತಿ | ಪ್ರಕೃತಕೀ ಹಗೆ | ಯಕುತವೇ ತೆಗೆ || ತಾತ || ೨ ||
ಖರ ವಿರಾಧರ ತಲೆಗಳೆದ | ಮಹ | ಶರಧಿಯುದ್ದಕೆ ಸೇತು ಬಲಿದ ||
ತರಿದನೆಮ್ಮವರನೆ | ಲ್ಲರ ಧುರದೊಳು ರಘು ||
ವರೆಗೆ ಸೀತೆಯ | ನಿತ್ತು ಸಹಜಗೆ | ಧರೆಯ ಪಟ್ಟವ | ಗೈವುದುಚಿತವು || ತಾತ || ೩ ||
ಭಾಮಿನಿ
ಇದಿರು ನಿಲದಿರು ಹೇಡಿ ಫಡ ಹೆ |
ತ್ತೊಡಲ ಭಾರಕ ತೊಲಗು ತನ್ನಯ |
ದೃಢವ ನೀನೇನ್ ಬಲ್ಲೆ ಬಿಡುವೆನೆ ತೊಟ್ಟ ಛಲಗಳನು ||
ಮೃಡನೆ ತಡೆದರು ಬಿಡೆನೆನುತ ದಶ |
ವದನನೇಳಲ್ಕರಿತು ಹೆರವರ |
ಹೃದಯವಾರ್ಗಳವರಿಯಲೆನುತತಿಕಾಯನುತ್ಸಹದಿ || ೧ ||
ರಾಗ ಕೇತಾರಗೌಳ ಝಂಪೆತಾಳ
ಜೀಯ ತಾ ವೀಳಯವನು | ಬರಿದೆ ಮನ | ನೋಯದಿರು ರಿಪು ಬಲವನು ||
ಸಾಯ ಬಡಿವೆನು ಸಹಸವ | ನೋಡೆನಲು | ರಾಯನಿತ್ತನು ನೇಮವ || ೧ ||
ತಂದೆಯನು ಬೀಳ್ಕೊಳ್ಳುತ | ತಾಯ್ಗೆರಗಿ | ಚಂದದಿಂ ನೇಮಗೊಳುತ ||
ದಂಡೆ ತುಳಸಿಯ ಕೊರಳೊಳು | ಧರಿಸುತ ತ್ರಿ | ಪುಂಡ್ರ ರೇಖೆಯ ಪಣೆಯೊಳು || ೨ ||
ಭರದಿ ಮಣಿರಥವೇರುತ | ಕರದಿ | ಧನು | ಶರವಾಂತು ಬಲವೆರಸುತ ||
ಭರಿತ ಹರುಷದೊಳುಬ್ಬುತ | ತನ್ನವರ | ಕರೆ ಕರೆದು ನುಡಿದ ನಗುತ || ೩ ||
ವಾರ್ಧಿಕ್ಯ
ಬನ್ನಿ ಪ್ರಾಕ್ತನಪುಣ್ಯ ಕರ್ಮಫಲ ಸೇರ್ದುದದೊ |
ಬನ್ನಿರೆಲ್ಲರ ಭಾಗ್ಯ ರವಿಯುದಯಮಾದುದದೊ |
ಬನ್ನಿರಖಿಲೇಷ್ಟಾರ್ಥ ಸುರಧೇನು ಕರೆವುದದೊ ಬನ್ನಿರೈ ಬನ್ನಿರೆಲ್ಲ ||
ಬನ್ನಿ ಸಂಸಾರ ಕಡಲುತ್ತರಿಪನಾವೆಯದೊ |
ಬನ್ನಿ ಭವಬಂಧನಗಳನ್ನರಿವ ಪರಶುವದೊ |
ಬನ್ನಿರೆಮ್ಮುದ್ಧಾರ ಕರ್ತೃಭಗವಂತನದೊ ಬನ್ನಿರೀಪ್ಸಿತ ಪೊಂದಲು || ೧ ||
ರಾಗ ಕಾಂಬೋಧಿ ಝಂಪೆತಾಳ
ಉಚ್ಛರಿಸುತಿಂತು ನಡೆ | ದಚ್ಚುತನ ಸೈನ್ಯವನು | ನುಚ್ಚುನೂರಾಗೆ ಖಂಡಿಸಿದ ||
ಎಚ್ಚರಿಸಲದ ವಿಭೀ | ಷಣ ರಘುಜಗೆರಗಿ ಖತಿ | ಪೆರ್ಚಿ ಸೌಮಿತ್ರನಿದಿರಾಗ || ೧ ||
ಕಾಣುತತಿಕಾಯ ಖಳ | ಸೇವೆಗಳ ನಿಲಿಸಿ ರಾ | ಮಾನುಜನೊಳೆಂದ ತವನಾಮ ||
ಏನಿಹುದು ರವಿಕುಲ ಲ | ಲಾಮನೋ ಲಕ್ಷ್ಮಣನೊ | ನೀನರುಹಿಸೆನಲು ನಿಸ್ಸೀಮ || ೨ ||
ದನುಜ ಕೇಳೈ ನಿನ್ನ | ಮನಕೆ ತೋರಿದ ತೆರದೊ | ಳೆಣಿಸ ಬಹುದೆಂದ ಲಕ್ಷ್ಮಣನು ||
ರಣಕದಾವವನಾದ | ರೆಣಿಕೆಯೇನೆಮ್ಮಾತ್ಮ | ಚಿನುಮಯಾರ್ಪಣವೆನುತ್ತವನು || ೩ ||
ಭಾಮಿನಿ
ಪಾವನಾತ್ಮಕ ನೀನೆ ಜಗದಧಿ |
ದೈವವೆಂಬುದ ಬಲ್ಲೆನಿದೊ ಸ |
ದ್ಭಾವದಿಂದರ್ಚಿಸುವೆ ಶಸ್ತ್ರದೊಳೆನುತ ತೆಗೆದೆಚ್ಚ ||
ಭಾವಶುದ್ಧದಿ ಗೈವ ಷೋಡಶ |
ದಾ ವಿಧಾನದ ಪೂಜೆಗಳ ಹ |
ರ್ಷಾವಹದಿ ಕೈಕೊಂಡು ಲಕ್ಷ್ಮಣನೆಂದ ಪೊಗಳುತ್ತ || ೧ ||
ರಾಗ ಪಂಚಾಗತಿ ಮಟ್ಟೆತಾಳ
ಭಳಿರೆ ವೈಷ್ಣಾವಾಗ್ರಗಣ್ಯ | ಧರೆಯೊಳುಂಟೆ ನಿನ್ನ ಪೋಲು |
ವಲಘು ಭಕ್ತರದರೊಳಸುರ | ಕುಲದೊಳೆಂದನು || ೧ ||
ಭಕ್ತಿಯಿಂದಲಧಿಕ ರಣದಿ | ಶಕ್ತಿ ಮೆರೆಸಿ ಚಿತ್ತವಲಿಸಿ |
ಮುಕ್ತಿ ಪದವ ಪಡೆವೆನೆನುತ | ರಕ್ಕಸಾತ್ಮಜ || ೨ ||
ಥಟ್ಟನುಲಿವುತಕ್ಷಯಾಸ್ತ್ರ | ವೃಷ್ಟಿಗರೆಯಲಷ್ಟ ದೆಸೆಯೊ |
ಳಟ್ಟಿ ಹೊಯ್ದುದರಿಯದಾಯ್ತು | ಸೃಷ್ಟಿನಭಗಳು || ೩ ||
ಅಕ್ಷಯಾತ್ಮನನುಜನದರ | ತಕ್ಷಣದಲಿ ಸವರುತವನ |
ವಕ್ಷಕಿಡಲು ದಿವ್ಯ ಶರದಿ | ಲಕ್ಷ್ಯಗೆಟ್ಟನು || ೪ ||
ಭಾಮಿನಿ
ಸಾಯಕದಿ ಸೌಮಿತ್ರಿ ದೈತ್ಯ ನಿ |
ಕಾಯವನು ಮರ್ದಿಸಿದನೆದ್ದತಿ |
ಕಾಯ ಕೊನೆಯಾಯ್ತ ಕಟ ಪಿತನಾಯುಷ್ಯಕೆಂದೆನುತ ||
ಕಾಯ ಶಾಶ್ವತವಲ್ಲ ಮಿಕ್ಕಿನ |
ಮಾಯೆ ನಮಗೇಕೆನುತ ಕಮಲದ |
ಳಾಯತಾಕ್ಷನ ಹೃದಯ ಪೀಠದಿ ನಿಲಿಸಿ ನುತಿಸಿದನು || ೧ ||
ಕಂದ ಪದ್ಯ
ಜಯ ವೇದೋದ್ಧಾರ ಮಹೀಧರ |
ಜಯತು ಹಿರಣ್ಯಕ ಹರ ನರಹರಿ ಮಾರಮಣಂ |
ಜಯ ಬಲಿಬಂಧನ ಭಾರ್ಗವ |
ಜಯ ರಘುವರ ಸುರವಂದಿತ ವಾಸುಕಿ ಶಯನಂ || ೧ ||
ರಾಗ ಪಂತುವರಾಳಿ ಮಟ್ಟೆತಾಳ
ತಡವದೇಕೆ ವೀರ ತೊಡು ನೀ | ನೊಡನೆ ಜಡಜಭವ ಶರ ||
ಒಡಯ ರಾಮನಡಿಯ ಕೂಡಿ | ನಡೆವೆ ದೃಢದಿ ಕಿಂಕರ || ೧ ||
ಎನುತ ಭಾರಿ ಧನುವ ಗೊಂಡು | ಕಣೆಯ ಸುರಿಸಲು ||
ಕ್ಷಣದಿ ವನಜಜಾಂಡ ನಡುಗಿ | ತನಿತು ಭಯದೊಳು || ೨ ||
ಕಡಿವುತಂಣನಡಿಯ ನೆನೆವು | ತೊಡನೆ ಲಕ್ಷ್ಮಣ ||
ಬಿಡಲಜಾಸ್ತ್ರ ಝಡಿದು ಶಿರವ | ಕಡಿದುದಾಕ್ಷಣ || ೩ ||
ಭಾಮಿನಿ
ಭಾನುಪಥದಲಿ ನೆಗೆದು ಶಿರಹರಿ |
ವಾಣದಾರತಿಯೆನೆ ಸುಳಿದು ಗೀ |
ರ್ವಾಣ ವಂದಿತಂಘ್ರಿಗುರುಳಿತು ರಾಮ ರಾಮೆನುತ ||
ದಾನವಾಧಿಪನರಿತು ಲಯದ ಕೃ |
ಶಾನುವೆನೆ ಖತಿ ಮಸಗಿ ಸಮರಕೆ |
ತಾನೆ ಸನ್ನಹವಾಗಿ ಪೊರಟನು ಸೇನೆ ಸಹಿತಾಗಿ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ರಣಕೆ ಬಹ ದಶಶಿರನ ರಘುಪತಿ | ಯನುಜ ಕಂಡಡಹಾಯ್ದು ರೋಷದಿ |
ಜನನಿಗಳುಪಿದ ಪಾಪಿ ಕೊಲುವೆನು | ಕ್ಷಣದಿ ನಿನ್ನ || ೧ ||
ಗಳಹದಿರು ನರರಧಮ ನೀತಿಯ | ನುಳಿದು ಭಗಿನಿಯ ನಾಸಿಕವನರಿ |
ದಳಲ ಖಳತವ ರುಧಿರ ಜಲದಲಿ ಕಳೆವೆನೆಂದ || ೨ ||
ಎನುತಲೀರ್ವರು ಸೆಣಸುತಿರೆ ವಿಭೀ | ಷಣನೆಣಿಸುತೆಂತಹುದೊ ಲಕ್ಷ್ಮಣ |
ಗೆನುತ ಗದೆಗೊಂಡಿದಿರು ಬರೆ ರಾ | ವಣನರಿವುತ || ೩ ||
ನೋಡುತೊಡನುರಿದುರಿದು ರೋಷದೊ | ಳೌಡುಗಡಿಯುತ ಸಾಯದಹಿತನ |
ಕೂಡಿ ಬಂದೆಯ ತನ್ನಿದಿರು ಕುಲ | ಗೇಡಿಯೆನುತ || ೪ ||
ತನಗೆ ಮಯನೊಲಿದಿತ್ತ ಶಕ್ತಿಯ | ದನುಜನಿಡೆ ಕಂಡನಿಮಿಷರು ಹಾ |
ಯೆನಲು ರಾಘವನನುಜ ಮನದೊಳಗೆಣಿಸುತಾಗ || ೫ ||
ಭಾಮಿನಿ
ಅಳಿವ ನಿಶ್ಚಯ ಶರಣನೆಮ್ಮ |
ಗ್ಗಳಿಕೆ ಫಲಿಸದೆನುತ್ತ ಮನದು |
ಮ್ಮಳದಿ ಶರಕಡಹಾಯ್ದು ಮಲಗಿದನಚಲ ನಿದ್ದೆಯಲಿ ||
ಘಳಿಲನೀತನ ನೊಯ್ವೆನೆಂದೆನು |
ತಿಳಿಯೆ ರಥದಿಂದಿಳೆಗೆ ದಾನವ |
ಬಲಿದು ಮುಷ್ಟಿಯ ಮರುತ ಸುತನಡಹಾಯ್ದು ಖಳಪತಿಯ || ೧ ||
ರಾಗ ದೇಶಿ ಅಷ್ಟತಾಳ
ಭಳಿರೆ ರಾವಣ | ಲಲನೆಯ ಕದ್ದೊಯ್ದ ||
ಒಲವಿನಿಂ ಮೈ | ತಿಳಿ | ಯದವನನು | ಕೊಲಲು ಬಗೆದೆಯ | ಕಳವಿಲಿ || ೧ ||
ಕರೆಸು ಬ್ರಹ್ಮನ | ಬರಿಸು ಶುಕ್ರನ ನಿನ್ನ ||
ಹರಣವುಳುಹಲು | ಹರನ ಸ್ಮರಿಸೆನು | ತೆರಗಿದನು ನಡು | ಶಿರದೊಳು || ೨ ||
ಹತ್ತು ಬಾಯೊಳ | ಗೋಕರಿಸಿದು ಬಿಸಿ ||
ನೆತ್ತರವ ಕಾ | ರುತ್ತ ರಾವಣ | ಪೃಥ್ವಿಗೊರಗೆ ಮ | ರುತ್ಸುತೆ || ೩ ||
ಭಾಮಿನಿ
ತಪ್ಪಿದೆನು ರಾಮಾಯಣದ ಬದ |
ಲಪ್ಪುದ್ಹನುಮಾಯಣವೆನುತ ಜಲ |
ದುಪ್ಪಟೆಯನೆದೆಗೊತ್ತಿ ದಾನವನೆದ್ದನಂತರಿಸಿ ||
ತಪ್ಪುವವರಾವಲ್ಲ ಘಾಯದೊ |
ಳಿರ್ಪೆ ನಡೆಯೆನುತಟ್ಟಿ ಭವನಕೆ |
ಸರ್ಪಶಯನನ ಹೊರೆಗೆ ತಂದಿಳುಹಿದನು ಲಕ್ಷ್ಮಣನ || ೧ ||
ರಾಗ ನೀಲಾಂಬರಿ ಆದಿತಾಳ
ಆಗಮವೇನೆಂದೆನುತ | ರಾಘವನೀಕ್ಷಿಸುತಳುತ ||
ಏಗುಣ ಸುಂದರಧೀರ | ಸಾಗರ ಸಾಂತ್ವ ಗಭೀರ || ೧ ||
ಬೇಡವೆಂದರೆ ಮಗನೆ | ಕಾಡಿಗೈದೆನ್ನೊಡನೆ ||
ಕೇಡಾಯ್ತೆ ನಿನಗಕಟ | ನಾದಿನಿಗೇನೊರೆವೆ ದಿಟ || ೨ ||
ತಾಯಿಗೀಮುಖವಿಂತು | ಸಾಯದೆ ತೋರುವದೆಂತು ||
ಮಾಯಾವಾಯ್ತಿನ ವಂಶ | ಶ್ರೇಯ ಮತ್ತೇನಾಶ || ೩ ||
ಭಾಮಿನಿ
ನೋಯಲೇಕರೆಘಳಿಗೆ ಸೈರಿಸು |
ಜೀಯ ತಹೆನೌಷಧಿಯ ಲಕ್ಷ್ಮಣ |
ರಾಯಗಳಿವಿಲ್ಲೆನುತ ವಾಯುಜ ತೆರಳುತಭ್ರದಲಿ ||
ಕಾಯಕದ ಖಳ ಕಾಲನೇಮಿಯ |
ಕಾಯವನು ನಿಗ್ರಹಿಸುತಚಲವ |
ಪ್ರೀಯದಿಂ ತರಲೆಬ್ಬಿಸಿದನು ಸುಷೇಣನಖಿಲರನು || ೧ ||
ವಾರ್ಧಿಕ್ಯ
ಮಿತ್ರನುದಯದಿ ಕೈಕಸಾತ್ಮಜಂ ರಿಪುಸುಭಟ |
ಮೊತ್ತ ಬದುಕಿದುದರಿತು ಕುಂಭಕರ್ಣನನೆಬ್ಬಿ |
ಸುತ್ತ ಜನಮುಖದಿ ಮಗುಳಿತ್ತು ನೇಮವ ಸಮರಕಟ್ಟಿದಂ ಸೇನೆ ಸಹಿತ ||
ಪೃಥ್ವಿಯದುರಲು ಘಟಶ್ರೋತ್ರ ಬಲ ಸಹಿತ ಮುಂ |
ದೊತ್ತಿ ಕಪಿಮೋಹರವ ತುತ್ತು ಗೈವುತ ಕಾಲ |
ಮೃತ್ಯುವಂತುರವಣಿಸುತೆತ್ತಲೋಡಿದರು ಬೆಂಬೊತ್ತಿ ಬರಿಗೈವುತಿರ್ದ ||೧|
ಭಾಮಿನಿ
ತಿಂದು ತೇಗಿದನಸುರ ಖಳರಂ |
ನ್ನೊಂದು ಕಡೆಯಲಿ ಮಡುಹುತಿರೆ ಕಪಿ |
ವೃಂದ ಬರಿದಾದುದ ವಿಭೀಷಣ ಕಂಡು ರಘುಪತಿಗೆ ||
ಎಂದನೇಳೈ ದೇವ ಕದನಕೆ |
ಬಂದನತಿಬಲ ಕುಂಭಕರ್ಣನ |
ಮುಂದೆ ನಿಲುವವರಿಲ್ಲ ನೀಹೊರತೆನಲು ಭೂವರನು || ೧ ||
ರಾಗ ಭೈರವಿ ಮಟ್ಟೆತಾಳ
ಶರಧಿ ಘೋಷದಿ | ಧುರಕೆ ರೋಷದಿ ||
ಮರುತಸುತನ ಹೆಗಲನೇರಿ | ತೆರಳುತುಗ್ರದಿ || ೧ ||
ಸತ್ತ ಹೆಣಗಳ | ನೆತ್ತಿ ಕೈಗಳ ||
ತುತ್ತುಗೈವ ಧೂರ್ತ ಸತ್ವ | ವಿತ್ತ ತೋರೆಲ || ೨ ||
ತ್ಯಾಗಿ ಸತಿಯಳ | ಮೂಗನರಿದೆಲ ||
ಜೋಗಿಯೆನಿಸಿ ಭೋಗಕೆಳಸಿ | ಸಾಗಿದೆಯ ಭಲ || ೩ ||
ಭೋಗಿ ನಾ ಖರೆ | ತ್ಯಾಗಕೇನ್ ಕೊರೆ ||
ಯೋಗದರ್ಥ ಲೋಗದೈತ್ಯ | ರೇಗಳರಿವರೆ || ೪ ||
ಸುಡು ಸುನೀತಿಯ | ಅಡಗಿ ಕೋತಿಯ ||
ಮಡುಹಿದಧಮನೆನುತ ಶಸ್ತ್ರ | ಗಡಣ ವೃಷ್ಟಿಯ || ೫ ||
ಭಾಮಿನಿ
ಕೆಡಹಿ ರಘುವರ ತರಿದನೀಪರಿ |
ಝಡಿದು ಹೆಣಗಿದರುರು ಮಹಾಸ್ತ್ರದಿ |
ಕುದಿದವಬುಧಿಗಳುರಿಗೆ ತ್ರೈಜಗ ಕಮರೆ ಸುಮನಸರು ||
ಮಡುಹು ಬೇಗದೊಳೆನುತ ಮೊರೆಯಿಡ |
ಲೊಡನೆ ಖಂಡಿಸೆ ಕರಯುಗವ ಖಳ |
ನೊದೆದು ಕಪಿಗಳ ಸದೆಯೆ ಪದಗಳ ಕಡಿದನವನೀಶ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಉರುಳುತಿಳೆಗೆ ಮಹಾದ್ರಿಯೆನೆ ಬೊ | ಬ್ಬಿರಿದು ಹೊರಳುತಸಂಖ್ಯ ಬಲಗಳ |
ನರೆಯಲಚ್ಚುತ ನಚ್ಚಟಾಸ್ತ್ರದಿ | ಶಿರವ ಕಡಿದ || ೧ ||
ಭೀಮ ಬಲ | ಮಕರಾಕ್ಷ ಸಾರಣ | ಧೂಮ್ರಲೋಚನ ಖಡ್ಗ ವೃಶ್ಚಿಕ |
ರೋಮಮುಖ್ಯಸುರೌಘವಳಿದುದು | ರಾಮ ಶರದಿ || ೨ ||
ಅರಿವುತಿದ ಶಕ್ರಾರಿ ಪಿತನಡಿ | ಗೆರಗಿ ಪೇಳಿದ ಕರುಣಿಸಪ್ಪಣೆ |
ಮರುಗಲೇಕೆ ನಿಕುಂಭೆಳೆಯೊಳ | ಧ್ವರವ ಗೈದು || ೩ ||
ಹುತವಹನನಿಂ ಪಡೆದು ಸಾಯಕ | ರಥ ಧನುವ ಮೇಳೈಸಿ ರಿಪುಗಳ |
ಮಥಿಸದಿರೆ ತವ ಸುತನೆ ತೆಗೆ | ವ್ಯಥೆಯನೆಂದು || ೪ ||
ತೆರಳಿ ಹೋಮವನೆಸಗೆ ಧೂಮವ | ಪರಿಕಿಸುತ ಸರಮೇಶನಿರದೆ |
ಚ್ಚರಿಸಿ ಕೆಡಿಸಿದನೆಂದು ರಘುಪತಿ | ಗೆರಗುತಾಗ || ೫ ||
ಭಾಮಿನಿ
ಓ ರಘೋತ್ತಮನವಧರಿಪುದೀ |
ರಾರು ವತ್ಸರ ಸುರತ ನಿದ್ರಾ |
ಹಾರ ವರ್ಜಿತಗಲ್ಲದಳುಕುವನಲ್ಲವವನೆಂದ ||
ಊರ್ಮಿಳಾಪತಿ ಕೇಳಿ ನಸುನಗು |
ತಾರಮೇಶನಿಗೆರಗಿ ಮನದಲಿ |
ಬೇರೆ ಯೋಚನೆಯೇಕೆ ಕಳುಹಿಸು ತಾನೆ ಸಮನೆಂದು || ೧ ||
ರಾಗ ತುಝಾವಂತು ಮಟ್ಟೆತಾಳ
ಲಕ್ಷ್ಮಣಾಂಕ ನಡೆದ ಸಮರಕೆ | ತರುಬುತಯುತ | ಲಕ್ಷ ಪ್ಲವಗ ತತಿಯ ಸಹಯಕೆ || ಪಲ್ಲ ||
ಲಕ್ಷ್ಮಣಾಂಕ ಪೊರಡೆ ಸಮರ | ಕಕ್ಷಿಗಿಡಿಯನುಗುಳಿ ರೋಷ |
ವುಕ್ಕಿ ಹರಿಗಳೈದಿ ಭರದಿ | ರಕ್ಕಸೇಂದ್ರರೊಡೆಯನಣುಗ ||
ನಿಕ್ಕೆಲದಲಿ ಹೊಕ್ಕುಹೊಯ್ದರು | ಉಗುಳು ಮೂತ್ರ | ವಿಕ್ಕಿ ಮಖವ ಕೆಡಿಸಿ ನಲಿದರು |
ದಿವಿಜರರಲ | ತಕ್ಷಣದಲಿ ವೃಷ್ಟಿಗರೆದರು || ಲಕ್ಷ್ಮಣಾಂಕ || ೧ ||
ಕಾಣುತಸುರ ಕೆರಳಿ ಲಯದ | ಸ್ಥಾಣುವೆನೆ ಮಹಾಂತ ಕಿಡಿಯ |
ಸೋನೆಗರೆವುತೊಡನೆ ಸಿಂಹ | ಧ್ವಾನದಿಂದ ಕರದಿ ಬಿಲ್ ||
ಬಾಣವಾಂತು ರಥವನಡರುತ | ಮುತ್ತಿದಹಿತ | ವಾನರೇಂದ್ರ ಬಲವ ಕೆಡಹುತ |
ಬರಲು ತಡೆದು | ಭಾನುಕುಲಜನೆಂದ ಗಜರುತ || ಲಕ್ಷ್ಮಣಾಂಕ || ೨ ||
ರಾಗ ಭೈರವಿ ಏಕತಾಳ
ಎಲವೊ ಖಳಾಧಮ ನಿನ್ನ | ಶಿರ | ವಿಳುಹಿ ತೆಗೆವೆ ನೀ ಮುನ್ನ ||
ಕಳವಿನೊಳೆಮ್ಮಯ ಪಡೆಯ | ಗೆಲಿ | ದಳವಿಯನೆನೆ ಪಲ್ಮೊರೆದ || ೧ ||
ಗೆಲುವ ಪರಾಕ್ರಮ ಸರಿಯೆ | ಹೆಂ | ಗಳ ನಾಸಿಕವಲ್ಲರಿಯೆ ||
ಕೊಳುಗುಳಕೆಮ್ಮೊಳು ಸುರರು | ಮೇ | ಣಳುಕುವರಜ ಹರಿ ಹರರು || ೨ ||
ಎನುತ ಮಹಾಸ್ತ್ರವನುಗಿದು | ರಘು | ಜನಿಗೆಸೆಯಲ್ಕದ ಮುರಿದು ||
ದನುಜಗಿಡಲು ಬಿರು ಶರದಿ | ಕಡಿ | ದನು ಖಳನತ್ಯಬ್ಬರದಿ || ೩ ||
ಭಾಮಿನಿ
ಮುಂತೆ ಬಂಣಿಸಲವರ ಧುರವನ |
ನಂತಗರಿದತಿ ಬಲರು ಸರಿಸಮ |
ಪಂಥದಿಂದೆಚ್ಚಾಡಲುರು ದಿವ್ಯಾಸ್ತ್ರ ಸಂಘದಲಿ ||
ಎಂತಹುದೊ ಲಕ್ಷ್ಮಣಗೆನುತ ಸುರ |
ತಿಂಥಿಣಿಯು ತರಹರಿಸುತಿರೆ ಕಡಿ |
ದಂತರಿಕ್ಷಕೆ ಜಿಗಿದು ಖಳಶಿರವುರುಳಲವನಿಯಲಿ || ೧ ||
ಕಂದ ಪದ್ಯ
ಅರಿತು ದಶಾನನನೆಡೆಗೈ |
ತರುತನುಚರರತಿ ಭಯದಿಂ ಮರುಗುತ ಬೆಸಸಲ್ ||
ಒರಗಿದನಿಳೆಯೋಳ್ ಬರಶಿಡಿ |
ಲೆರಗೆ ಮಹಾ ತರುವುರುಳ್ವೋಲ್ ದಾನವರೆರೆಯಂ || ೧ ||
ರಾಗ ಸಾಂಗತ್ಯ ರೂಪಕತಾಳ
ಹಾ ಕುಮಾರಕ ವಂಶ | ರಾಕಾಸುಧಾಂಶು ಹಾ | ನಾಕೇಶ ಜಿತ ಕೀರ್ತಿಹಾರ ||
ಲೋಕ ದುರ್ಜಯ ರಿಪು | ಭೀಕರ ಸುಗುಣ ಹಾ | ಹಾ ಕಂದ ಶರಧಿ ಗಭೀರ || ೧ ||
ಅಡಗಿದೇನೈ ಚಿತ್ತ | ಜಡಜ ಭಾಸ್ಕರ ಪೆತ್ತ | ಒಡಲಿದರಾಸೆ ಮತ್ತೇನು ||
ಕಡಿದು ಸೀತೆಯ ವೈರಿ | ಪಡೆಯ ಭಸ್ಮವಗೈದು | ಇಡುವೆನಗ್ನಿಗೆ ಕಾಯವಿದನು || ೨ ||
ಒಡನೆದು ಖಡುಗವ | ಝಡಿಯೆ ಕಾಣುತಮಾತ್ಯ | ತಡೆದು ಹೆಂಗೊಲೆ ಹೇಯವಯ್ಯ ||
ಕದನದಿ ಖ್ಯಾತಿಯ | ಪಡೆವುದೆಂದೆನೆ ಶುಕ್ರ | ನೊಡನೆ ಹೊಕ್ಕನು ನಿಕುಂಭಿಳೆಯ || ೩ ||
ಭಾಮಿನಿ
ಮಾರಣಾಧ್ವರ ಗೈವುತಿರಲದ |
ನಾ ರಘೂದ್ವಹನಿಗೆ ವಿಭೀಷಣ |
ಸಾರಿ ಕಪಿಬಲ ಸಹಿತಲೈದಿದ ಮಖವ ಭಂಗಿಸಲು ||
ಸಾರೆ ಸನಿಹದೊಳಿಹ ಪರಿವ್ರತೆ |
ನಾರಿ ಮಂಡೋದರಿ ಮಹಾಸಿಯ |
ಭೋರನುಗಿದಡಹಾಯ್ದು ತಡೆದಳು ಕಾರ್ಯವೇನೆನುತ || ೧ ||
ರಾಗ ಮಾರವಿ ಮಟ್ಟೆತಾಳ
ಕಾರ್ಯವುಂಟನಾರ್ಯನ | ದುಷ್ಕಾರ್ಯ ಭಂಗವರಿಯೆ ಪುಣ್ಯ |
ಕಾರ್ಯಪದಕೆ ಬಂದೆ ಸ್ವಾಮಿ | ಕಾರ್ಯವತ್ತಿಗೆ || ೧ ||
ನಾಯಿ ಬಗುಳಲೇಕೆ ಹೆತ್ತ | ತಾಯಿಗಳುಪಿದಧಮ ಪೊರೆದ |
ರಾಯಗಧಿಕ ಸ್ವಾಮಿಯಾವ | ನೈ ವಿಭೀಷಣ || ೨ ||
ಅರಸನಾದರೇನು ಧರ್ಮ | ವರಿಯದಾತ ವಧ್ಯ ಪರರ |
ತರುಣಿಗಳುಪಿದವನ ಸೇವೆ | ಸರಿಯೇನತ್ತಿಗೆ || ೩ ||
ತಪ್ಪದೊಂದಕಸಮ ಪ್ರಾಜ್ಞ | ನಪ್ಪವನ ಕೊಲ್ಲುವರೆ ಪ್ರಿಯನೊ |
ಳಿಪ್ಪ ಗುಣವ ಮರೆಯೆ ದೋಷಿ | ಯಹೆ ವಿಭೀಷಣ || ೧ ||
ಅರಿತ ಪ್ರಾಜ್ಞೆಯಿಂತು ದುಷ್ಟಾ | ಚರಣೆಗೊಪ್ಪುಗೊಟ್ಟಮೇಲೆ |
ಇರದು ಧರ್ಮಕಡೆಯು ಮತ್ತೇ | ನೊರೆವುದತ್ತಿಗೆ || ೫ ||
Leave A Comment