ರಾಗ ತೋಡಿ ಆದಿತಾಳ

ಜಯ ಜಯ ಜನಕ ಜಾತೆ | ಓ ಮಾತೆ ಸೀತೆ | ಜಯತು ಶ್ರೀ ಹರಿ ವನಿತೆ  || ಪಲ್ಲ ||

ಜಯ ಕ್ಷೀರನಿಧಿ ವಾಸೆ | ಜಯತು ಸಜ್ಜನ ಪೋಷೆ || ಜಯ ಪದ್ಮಾಕರೆ |
ಜಯ ಸಿದ್ಧಿಪ್ರದೆ | ಜಯ ಸುಖದಾತೆ | ಜಯ ಜಗವಿನುತೆ || ಜಯ ಜಯ  || ಅ.ಪ. ||

ಪ್ರಾಣ ಸನ್ನಿಭ ಮಾರುತ | ಪೆತ್ತಾತ ಮುಖ್ಯ | ಪ್ರಾಣ ನಾ ಚರಣಾನತ ||
ಕೌಣಪಾಧಮ ನಿನ್ನ | ತಾನೊಯ್ದುದನು ಖಿನ್ನ ಪ್ರಾಣದೊಳಿಹ ಖಗ |
ಶ್ಯೇನಿಜನರುಹಲು | ಪ್ರಾಣದೊಡೆಯ ನೆಲೆ | ಗಾಣಲ್ಕಟ್ಟಿದ ||
ಜಯ ಜಯ       || ೧ ||

ಹುಡುಕಿ ನಾವ್ ಬಹು ಪರಿಯ ಸೇರ್ದೆವು ತೆಂಕ | ಜಡಧಿಯಂಚಿನ ಗಿರಿಯ ||
ನುಡಿಯೆ ಸಂಪಾತಿಯೀ | ಕಡಲ ಲಂಘಿಸಿ ತಾಯಿ ||
ಯಡಿಗಳನೀಕ್ಷಿಸಿ | ಕಡುಧನ್ಯನುಹುಸಿ | ನುಡಿಯೆನು ಮುದ್ರಿಕೆ |
ಯೊಡೆಯನದಿದೆಕೊ ||     || ೨ ||

ಭಾಮಿನಿ

ಕಂದೆರದು ಕಮಲಾಕ್ಷಿಕೊಂಡದ |
ಕುಂದಿದಾತ್ಮವ ಹೊಂದುತತುಲಾ |
ನಂದದಿಂ ಪಣೆಗೊತ್ತಿ ಮುದ್ದಿಸುತಂಗುಳೀಯಕವ ||
ಚಂದವೇನ್ಯೆ ಹನುಮಸರುವರಿ |
ಗೆಂದಿಗಿನಿಯನ ಕಾಂಬೆ ದಿನ ದಿನ |
ಬಂದು ದಾನವನೀವ ನಿರ್ಬಂಧವದನೆಂತೆನಲಿ         || ೧ ||

ರಾಗ ಕಾಂಬೋಧಿ  ಝಂಪೆತಾಳ

ಅನಲಾರೆನು ವ್ಯಥೆಯ | ಕೌಣಪನ ವಧಿಸಿ ಪ್ರಿಯ | ತಾನೆನ್ನ ಬಿಡಿಸದಿರೆ ಸೆರೆಯ ||
ಪ್ರಾಣಗಳೆವೆನು ಮರೆಯ | ದಾನರಾಧಿಪಗುಸುರು | ನೀನೆನುತ ಕೊಡೆ ಶಿಖಾಮಣಿಯ       || ೧ ||

ಕೊಂಡು ಬಲಬಂದೆರಗಿ | ಮುಂದೆ ದಿನವೆಂಟರಲಿ | ತಂದೆ ರಾಘವನ ಕರೆತಂದು ||
ಹಂದೆಗಳ ಮಡುಹಿ ತವ | ಬಂಧನವ ಬಿಡಿಸದಿರೆ | ಸಿಂಧುಶಯ ಭಜಕನಲ್ಲೆಂದು    || ೨ ||

ನಂದನವ ಪುಡಿಗೈದ | ಬಂದು ರಣಕಡಹಾಯ್ದ | ಕಂದನಕ್ಷಾದಿಗಳ ತರಿದ ||
ಇಂದ್ರಜಿತು ಕೆರಳಿ ನಡೆ | ತಂದು ಬ್ರಹ್ಮಾಸ್ತ್ರದಿಂ | ಬಂಧಿಸುತ ಪಿತನೆಡೆಗೆ ಸರಿದ   || ೩ ||

ಭಾಮಿನಿ

ಅಂದಿನೋಲಗದಿದಿರು ಹನುಮನ |
ತಂದು ನಿಲ್ಲಿಸಿ ಶಕ್ರಜಿತ ಪಿತ |
ಗೆಂದ ನೆಮ್ಮುಪವನವ ಕೆಡಿಸಿದ ಕೋತಿಯಿದೆಯೆನುತ ||
ಕಂಡು ದಶಶಿರ ಹಿರಿದು ಖಡುಗವ |
ಮಂದಮತಿ ಬಗುಳೆಮ್ಮ ತೋಟವ |
ಕುಂದಿಸಿದುದೇಕ್ಯಾವನನುಚರ ನಾಮವೇನೆಂದ        || ೧ ||

ಕಂದ ಪದ್ಯ

ಅಬ್ಬರಿಸಲ್ ಖಳ ಮರುತಜ |
ನುಬ್ಬುತ ಬಂಧನಮಂ ಬಿಸುಟತ್ಯುಮ್ಮಹದೋಳ್ ||
ಕರ್ಬುರ ಸರಿಗದ್ದುಗೆಯಂ |
ಹೆರ್ಬಾಲದಿ ಗೈದೇರ್ದು ಗಾಂಭೀರ್ಯದೊಳಂ          || ೧ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಮಾತೆ ಸೀತೆಯ ಕದ್ದು ದಶಮುಖ | ದಾತನೊಯ್ದನೆನುತ್ತೊಡೆಯ ರಘು ||
ನಾಥನಟ್ಟಿದನರಸುತಿಲ್ಲಿಗೆ | ದೂತ ವಾತಜ ಬಂದೆನು  || ೧ ||

ಆವವನು ನೀ ರಜತ ಗಿರಿಯ ಕ | ರಾಮಲಂಬದಿ ನೆಗಹಿದರಿವಿ |
ದ್ರಾವಣನೊ ಹೆಂಗಳ್ಳ ಕಾಮುಕ | ರಾವಣನೊ ಪೇಳೆಂದನು     || ೨ ||

ನಾವು ನೀತಿಯನರಿಯೆವಪ್ರತಿ | ಕೋವಿದರು ಪರಚಕ್ರದೂತನ |
ನೀವಿಧದ ಬಂಧಿಸಲು ನ್ಯಾಯವ | ದಾವುದೆಂಬುದ ಕಾಣೆವು     || ೩ ||

ಭಾಮಿನಿ

ಮಾತ ಕೇಳದೆ ವನವ ಚೂರ್ಣಿಸಿ |
ಯಾತುಧಾನರ ಬಡಿದುದೀ ನಿ |
ರ್ಭೀತವಹ ಲಾಂಗೂಲ ತಾನಪರಾಧಿಯಲ್ಲೆಂದ ||
ಖಾತಿಯಲಿ ದನುಜೇಂದ್ರ ದೋಷಿತ |
ಕೋತಿಯಲ್ಲಹುದಹುದು ಬಾಲಕೆ |
ಸಾತಿಶಯ ತೈಲಾರ್ದ್ರವಸನವ ತೊಡಿಸಿ ಸುಡಿರೆಂದ  || ೧ ||

ವಾರ್ಧಿಕ್ಯ

ಮತ್ತ ದಾನವ ಸುಭಟರಿಕ್ಕೆಲದಿ ಮರುತಜನ |
ಮುತ್ತಿ ಬಾಲಕೆ ತೈಲ ವಸ್ತ್ರಮಂ ತೊಡಿಸುತುರಿ |
ಹೊತ್ತಿಸಿದ ಮಾತ್ರದೊಳಗೆತ್ತಿ ಬೀಸುತ ಹನುಮಸುತ್ತಣವರಂ ಹೋಮಿಸಿ ||
ಸತ್ವದಿಂ ಜಿಗಿದು ರಾವಣನರ್ಥಭವನಮಂ |
ವಿತ್ತೇಶನಖಿಲ ಸಂಪತ್ತಿನಿಂ ತುಂಬಿ ತುಳು |
ಕುತ್ತಿರುವ ಪುರವ ಸಂಪೂರ್ತಿ ಶಿಖಿಗಾಹುತಿಯ ನಿತ್ತು ಪೃಥ್ವಿಜೆಗೊಂದಿಸಿ   || ೧ ||

ಭಾಮಿನಿ

ಹರಿದು ವಾಲದ ಹರಿಯ ನಂದಿಸಿ |
ಹರಿಪದದೊಳಾಗಮಿಸಿ ವಿವರಿಸಿ |
ಹರಿಬಲನೊಡವೆರಸಿ ಹರಿಕುಲ ದೀಪಗಭಿನಮಿಸಿ ||
ಹರಿಯಣುಗ ಚೂಡಾಮಣಿಯ ಶ್ರೀ |
ಹರಿಯ ಪದಕರ್ಪಿಸಲು ಕೊಂಡದ |
ಹರಿಶಯನ ಹರಿದೊಗುವ ಹರಿಸಸ್ಫುರಿತ ಬಾಷ್ಪದಲಿ   || ೧ ||

ರಾಗ ಸುರಟಿ ಏಕತಾಳ

ಬಂದಿರೆ ಕಪಿ ವರರು | ಬಹುಪರಿ | ನೊಂದಿರೆ ಬಲ್ಲಿದರು ||
ಮಂದಗಮನೆಯನು | ಸಂಧಿಸಿ ವಾರ್ತೆಯ | ತಂದಿರೆ ರುಣಿಗಳೆಂ | ದೆಂದಿಗು ನಿಮಗಾವ್   || ೧ ||

ಆಲಿಪುದಿನ ಜಾತ | ಹೃದಯವು | ಸೀಳುವುದೈ ಸೀತಾ ||
ಬಾಲಿಕೆ ದಿನದಿನ | ಖೂಳ ನಿರ್ಬಂಧವ | ತಾಳುವಳೆಂತೈ | ಕಾಲಗಳೆವರೆ || ೨ ||

ದಾನವನನು ವಧಿಸಿ | ಮತ್ಪ್ರಿಯ | ಮಾನಿನಿಯನು ಬಿಡಿಸಿ ||
ಕ್ಷೋಣಿ ಹೊರೆಯ ಕಡೆ | ಗಾಣಿಪೆನೆನುತ ಮ | ಹಾರ್ಣವಡೆದೆಯೊಳು | ಸೇನೆಯ ನಿಲಿಸಿದ   || ೩ ||

ಕಂದ ಪದ್ಯ

ಕಡಲಾಣ್ಮನ ಗರ್ವವನುಂ |
ಅಡಗಿಸಿ ಸೇತುವೆಯನು ಗೈಸುತ್ತಿರಲಾಗಳ್ ||
ಒಡನದನರಿತು ದಶಾನನ |
ನೆಡೆಗೈದೆರಗುತ ಬೇಹಿನ ಚರರತಿಭಯದೊಳ್        || ೧ ||

ರಾಗ ಮುಖಾರಿ ಏಕತಾಳ

ಜೀಯ ಬಿನ್ನಹ ರಾವಣೇಂದ್ರ | ನರ ನಾಗ ಸುರನಿ | ಕಾಯ ಸಂಸ್ತೂಯ ಗುಣಸಾಂದ್ರ  || ಪ ||
ರಾಯರಮಲ ಪದ | ತೋಯಜ ಷಟ್‌ಚರ | ಣಾಯತ ಬೇಹಿನ |
ಸೇವಕರಿದಕೊ || ಜೀಯ || ಅ.ಪ ||

ಹರಿಗಳೆಪ್ಪತ್ತೇಳು ಕೋಟಿ | ಒಟ್ಟಾಗಿ ತೆಂಕ | ಶರಧಿಯುದ್ದಕೆ ಸೇತುವೆಗಟ್ಟಿ ||
ತರಣಿಜ ಪಡೆಯಂತುರವಣಿಸುತಲತಿ | ತ್ವರಿತದಿ ಲಂಕೆಗೆ | ಪೊರಟಿಹ ರಘುಜನ |
ತರುಣಿಯನಿತ್ತೆಂ | ಮ್ಹರಣವ ಕಾಯ್ವುದು || ಜೀಯ     || ೧ ||

ಭಾಮಿನಿ

ಸೀಳಿ ಬೆನ್ನಿಲಿ ತೆಗೆವ ಕರುಳನು |
ಖೂಳರಿರ ಭಯವೇಕೆ ತಾನಿರೆ |
ಕೀಳು ನರ ವಾನರರೊಳೇನಹುದೆನುತ ದಶಗಳನು ||

ಮೂಲಬಲ ಮೇಳವಿಸಿ ಯುದ್ದಕೆ |
ನಾಳೆ ಪೊರಡುವುದೆನೆ ಪ್ರಹಸ್ತಗೆ |
ಕೇಳುತಂಣನ ಕಾಲಿಗೊಂದಿಸುತಲಿ ವಿಭೀಷಣನು       || ೧ ||

ರಾಗ ಪಂತುವರಾಳಿ ಝಂಪೆತಾಳ

ಸರುವಥಾ ಬೇಡ ರಘು | ವರನ ವೈರ    || ಪಲ್ಲ ||
ತರವಲ್ಲ ಪರನಾರಿ | ಸುರತ ನರಕದ ದಾರಿ || ಸರುವಥಾ  || ಅ.ಪ ||

ಧರೆಯ ದೂರನು ಕೇಳಿ | ಹೊರೆಯನಿಳುಹುವ ಮನದಿ |
ನರರೊಳುದಿಸಿದನಿಳೆಗೆ | ಪುರುಷೋತ್ತಮ ||
ಸಿರಿಸತಿಯ ನೆವಮಾಡಿ | ಹರಿಗಳಿಂದೊಡಗೂಡಿ |
ಹರಣಗೊಂಬನು ದನುಜ | ಪರಿವಾರವ || ಸರುವಥಾ  || ೧ ||

ಭೂಧರವ ನೆಗಹಿ ಗಿರಿ | ಜಾಧವನ ಮನವಲಸಿ |
ವೇದಭಾಷ್ಯವ ಪ್ರಕಟ | ಗೈದಪ್ರಾಜ್ಞ  ||
ಆದಿಲಕ್ಷ್ಮಿಯನಿತ್ತು | ಮಾಧವನ ಪದಕೆರಗ |
ದಾದರಾನಿರೆನಿಲ್ಲಿ | ನೀಡಿಸಾಜ್ಞ || ಸರುವಥಾ || ೩ ||

ಮುಂದೆ ನಿಲದಿರು ತೊಲಗು | ಹಂದೆ ಪರಮಂಡಲವ |
ಕೊಂಡಾಡಿ ಮದ್ಬಲವ | ನಿಂದಿಸುವೆಯ ||
ಎಂದು ರಾವಣ ಕೈದು | ಗೊಂಡಡವ ಕಾಲ್ದೆಗೆದು |
ಬಂದು ರಘುವರಗೆರಗು | ತೆಂದ ಪರಿಯ || ಸರುವಥಾ || ೪ ||

ರಾಗ ಯಮುನಾ ಕಲ್ಯಾಣಿ ಆದಿತಾಳ

ಶರಣು ಶರಣು ರಾಘವ | ಜನಾರ್ದನ | ದುರಿತ ಭಂಜನ ಕೇಶವ   || ಪಲ್ಲ ||
ಶರಣು ಸುರಾಸುರ | ನರಭುಜಗಾರ್ಚಿತ || ಸಿರಿವರ ವಾರಣ |
ವರದ ವಿಶ್ವೇಶ್ವರ | ಕರುಣದಿ ರಕ್ಷಿಸು | ಶರಣ ಮಂದಾರ  || ಶರಣು  || ಅ.ಪ. ||

ಚರಣ ನಂಬಿದ ಭಕ್ತರ | ಪೊರೆವುದೆ ನಿನ್ನ | ಬಿರಿದು ಪಾಪಾಸಕ್ತರ ||
ತರಿದು ಭೂಭಾರವ | ಪರಿಹರಿಸಲ್ಕವ ||
ತರಿಸಿದ ಮಾಯಾ | ನರ ಹರಿ ನಿನ್ನನು | ಮರೆಹೊಕ್ಕೆನು ಶಿರ |
ವರಿಯುವನಗ್ರಜ | ಕರುಣದಿ ರಕ್ಷಿಸು | ಹರಣವನುಳುಹಿ || ಶರಣು         || ೧ ||

ಭಾಮಿನಿ

ಎಂದು ವಂದಿಸಿ ಕರಪುಟಾಂಜಲಿ |
ಯಿಂದ ನಿಂದಿರಲೆರಗಿ ರಘುಪತಿ |
ಗೆಂದನನಿಲಜ ಸಹಜ ವೈಷ್ಣವನಿವನ ಸಲಹೆನುತ ||
ಚಂದದಿಂ ಪಿಡಿದೆತ್ತಿ ರವಿಕುಲ |
ಚಂದ್ರನಭಯವನಿತ್ತು ಶರಣಗೆ |
ಸಿಂಧು ಬಂಧವ ನೋಡಿ ಲಂಕೆಗೆ ಪೊರಟ ಶುಭ ದಿನದಿ || ೧ ||

ವಾರ್ಧಿಕ್ಯ

ಚಂದದಿಂ ಕಪಿಸುಭಟವೃಂದ ನೆಗೆದಾರ್ಭಟಿಸಿ |
ದಂಡು ನಡೆವಬ್ಬರಕೆ ಡೆಂಡೆಣಿಸೆ ದಿಗ್ದಂತಿ |
ಕುಂದಿದಂ ಕಮಠ ಗಿರಿ ಕಂದರಗಳಲ್ಲಾಡೆ ಸಿಂಧು ಕುದಿದುಕ್ಕಿತೇಳು ||
ತಂಡ ತಂಡದ ತೆರೆಗಳಂದದಿಂದಾಕಡಲ |
ಬಂಧವಂ ದಾಟಿ ನಡೆತಂದು ತ್ರಿಕುಟಾಚಲವ |
ಹೊಂದಿ ಹೊರವಲಯದೊಳ್ ಗುಂಡಾರ ಹೊಯ್ಸಿ ರಘು ನಂದನಂ ವಾಲಿಸುತಗೆ  || ೧ ||

ಭಾಮಿನಿ

ತೆರಳಿ ದಶಶಿರನೆಡೆಗೆ ಸಾಮದಿ |
ಧರಣಿಜೆಯನಿತ್ತೆರಗಿ ಸೋದರ |
ಗರಸುಪಟ್ಟವ ಗೈದು ಬಾಳ್ವುದು ಮಿಕ್ಕರಾಹವಕೆ ||
ಪರಿಜನರ ಮೇಳೈಸಿಯಮ್ಮಯ |
ಹೊರೆಗೆ ಬಹುದೆಂದರುಹಿ ಬಾರೆನ |
ಲೆರಗಿ ಬೀಳ್ಕೊಂಡೈದಿ ಕಂಡನು ಪುರದ ವೈಭವವ     || ೧ ||

ಕಂದ ಪದ್ಯ

ಅರರೇ ಖಳಸಂಸ್ಕೃತಿಯ |
ಚ್ಚರಿಯಂ ಪರ್ಚಿಸುತಿಹುದೈ ಸಿರಿಗೆಣೆಯಿಲ್ಲಿಳೆಯೊಳ್ ||
ವರ ರತ್ನಾಳಿ ಸುವರ್ಣಂ |
ಪೆರತಿರದೀಪುರಗೋಪುರ ನೆಲ ಸೌಧಂಗಳ್  || ೧ ||

ರಾಗ ಪಂತುವರಾಳಿ ಅಷ್ಟತಾಳ

ಸಿರಿಯಿದು | ಬಾಳ | ಲರಿದು ನಾಗರಿಕ ವೈ | ಖರಿಯಿದು  || ಪಲ್ಲ ||
ಮನ | ಕರಗುವದಿದ ಕಂಡು | ಬರಿದೆ ಯೋಚನೆಯೆಂದು ||
ತೆರಳಿ ಪೊಕ್ಕಾ ರಾವಣೇಂದ್ರನ | ಸರಿಸದಲಿ ನಿಲುತಾಕ್ಷಣ || ಸಿರಿ    || ಅ.ಪ ||

ವಾಲದಿ | ಖಳ | ಲೋಲ ಗದ್ದುಗೆಯ ವಿ | ಶಾಲದಿ | ಗೈದು |
ಮೇಲೇರ್ದಾಸನವ ಸ | ಮ್ಮೇಳದಿ | ಸುರ | ಪಾಲನ ಮೊಮ್ಮ ವಾ |
ಚಾಲದಿ | ಪೇಳ್ದ | ಮೇಲುವರಿವ ದೈತ್ಯ | ಜಾಲದಿ || ಅಹ |
ಕೇಳಿ ಬಲ್ಲಿರೆ ಧರ್ಮ | ಶೀಲ ಶ್ರೀರಘುರಾಮ ||
ಪಾಳಯದ ಕಟ್ಟಾಳ್ಗಳೊಳು ಬಲ ||
ಶಾಲಿ ವಾಲಿಯ ಬಾಲ ನಾನಹೆ || ಸಿರಿ        || ೧ ||

ಬಲ್ಲೆವು | ಕಡು | ಖುಲ್ಲ ಮರ್ತ್ಯನ ಕೃತ್ಯ | ವೆಲ್ಲವು | ಹೆಂಣಿ |
ನಲ್ಲಿ ದುರಾಚಾರವಲ್ಲವು | ಇದಿ | ರಲ್ಲಿ ವಾಲಿಯ ಗೆಲಲಿಲ್ಲವು |
ಜೀವ | ಗಳ್ಳನಿಗೆಣೆ ಯಾವ | ನಿಲ್ಲವು ||
ಬರಿ | ಜಳ್ಳು ಮಾನವನನೆ | ಮ್ಮಲ್ಲಿ ಬಂಣಿಸದಿರು ||
ಹಲ್ಲ ಮುರಿವನು ರಾವಣೇಶ್ವರ | ನಿಲ್ಲಿಸೆಂದ ಪ್ರಹಸ್ತನು || ಸಿರಿ    || ೨ ||

ಯಾರಯ್ಯ | ಖಳ ರಾವಣನೆಂಬ ಮಹಾರಾಯ | ಪರ |
ನಾರಿಯ ಕದ್ದ ವಿ | ಚಾರಿಯ | ಜಗ | ಮೂರಕುಬ್ಬಸ ದುಃಖ |
ಕಾರಿಯ | ಕೇಳ್ವ | ಪಾರುಪತ್ಯವನಿತ್ತ | ನಾರಾಯ ||
ರಘು | ವೀರ | ವೀರನಂಗನೆಯಿತ್ತು | ಪೌರುಷಗಳ ಬಿಟ್ಟು ||
ಸೇರಿ ಬಾಳ್ವನೊ ಮೀರಿದರೆ ಘನ | ಘೋರ ಯುದ್ಧವದೋರಿ ಸಾಯ್ವನೊ || ಸಿರಿ   || ೩ ||

ಭಾಮಿನಿ

ಇಂತೆನಲು ದನುಜೇಂದ್ರ ಬೊಬ್ಬಿರಿ |
ದಂತಕನ ಹೆತ್ತಯ್ಯನೊ ಕ |
ಲ್ಪಾಂತ ವಡಬನೊ ತಿಳಿಯೆನೆನೆ ಖತಿಮಸಗಿ ಕಿಡಿಯಿಡುತ ||
ತುಂಟನನು ಬಂಧಿಸುವುದೆನೆ ಖಳ |
ತಿಂತಿಣಿಯು ಮುಸುಕಲ್ಕೆ ನುಗ್ಗರೆ |
ದಂತರಿಕ್ಷಕೆ ಜಿಗಿದು ಸೇರ್ದನು ಪಡೆಯನಂಗದನು     || ೧ ||

ರಾಗ ಕೇತಾರಗೌಳ ಝಂಪೆತಾಳ

ಸಂಧಿ ಮುರಿದಿಹ ವಾರ್ತೆಯ | ಕೇಳಿ ರಘು | ನಂದನನು ತಾಳಿ ಖತಿಯ ||
ಕಂಡು ಕಪಿಬಲಕಾಜ್ಞೆಯ | ನಿತ್ತ ಪುರ | ಕಿಂದೆ ಮುತ್ತಿರಿ ಲಗ್ಗೆಯ  || ೧ ||

ಅಪ್ಪಣೆಯ ಕೊಂಡೆರಗುತ | ಇನಜ ಮುಂ | ತಪ್ಪ ಭಟರುರಿದೇಳುತ ||
ಅಪ್ಪಳಿಸಿ ಪುರದುರ್ಗವ | ಕೆಡಹಿ ಕಾ | ದಿಪ್ಪ ಸಮ ಖಳ ವರ್ಗವ || ೨ ||

ಮಡುಹಿ ಮುಂದೈದುತಿರಲು | ಚಾರರದ | ನುಡಿಯೆ ಹರಿಜಿತನಾಗಳು ||
ಸಿಡಿಲಿನಂತಾರ್ಭಟಿಸುತ | ಕ್ರವ್ಯಾದ | ಪಡೆವೆರೆದು ಪರುಠವಿಸುತ         || ೩ ||

ರಾಗ ಮುಖಾರಿ ಏಕತಾಳ

ಬಂದನಾ ಶಕ್ರಜಿತನು ರಣಕೆ | ವೈರಿ ಮಾರಣಕೆ | ಬಂದ ನಾ ಶಕ್ರಜಿತನು ರಣಕೆ  || ಪಲ್ಲ ||
ತಂಡ ತಂಡದ ಖಳ ಮಂದಿ | ಗಜ ರಥ ಹಯ | ವೃಂದ ಪಾಠಕ ಶಸ್ತ್ರ ಬಂಡಿ ||
ಸಂದಣಿಸುತ ರಣ | ದುಂದುಭಿರವಕೆ ವ | ಸುಂಧರೆಯದುರ | ಲ್ಕಂದು ದಶಾನನ |
ನಂದನನಾಹವ | ಖಂಡಪರಶುವೆನೆ || ಬಂದ || ೧ ||

ಪುರವ ಮುತ್ತಿದ ರಿಪು ಭಟರ | ಚಂಡಾಡುತಸುರ | ತರಳ ಹೊಕ್ಕನು ಕಪಿನಿಕರ ||
ಕರಿ ಕದಳಿಯ ಹಿಂ | ಡರೆವಂದದಿ ಬಡಿ | ದುರುಳಿಸುತಿರಲದ | ನರಿತು ಮಹೋಗ್ರದಿ |
ತರಣಿಜ ತಡೆದ || ಬಂದ   || ೨ ||

ರಾಗ ಶಂಕರಾಭರಣ ಮಟ್ಟೆತಾಳ

ಹೆಣ್ಣಿನಾಸೆಗಾಗಿ ಮರೆಯೊ | ಳಣ್ಣನಸುವ ಹೀರಿದಧಮ |
ಮಣ್ಣಗೂಡಿಸುವೆನು ವಿಶಿಖ | ಗಂಣ ತಡೆದರು ||
ವನ್ಹಿ ನಯನನೇಕೆ ಪರರ | ಹೆಣ್ಣಿಗಳುಹಿದಸುರನಣುಗ |
ನಿನ್ನ ಕೊಲಲು ರವಿಜಗಗ್ರ | ಗಂಣ್ಯವೆನದಿರು  || ೧ ||

ಎನುತ ಭಾರಿ ಶಿಲೆಯೊಳಿಡಲು | ಜುಣುಗುತಸುರ ದಿವ್ಯ ಶರವ |
ನಿನಜನಗಂಗ ಕೆಸೆಯೆ ಮರೆದು | ತನುವ ಮಲಗಿದ ||
ಜನಕನಿರವ ಕಂಡು ವಾಲಿ || ಯಣುಗನುರಿಯನುಗುಳುತಾಗ |
ದನುಜನಂಗಕೆತ್ತಿ ಗಿರಿಯ | ನಿನಿತು ಪೇಳಿದ   || ೨ ||

ಎಲವೊ ದನುಜ ಹರಿಯ ಹಗೆಯ | ಬಳಸಿ ಬದುಕಲುಂಟೆ ಸರಿದು |
ವಿಳೆಯ ರುಣವೆನುತ್ತಲೆರಗೆ | ಖಳನು ಸವರುತ ||
ಮುಳಿದು ಘೋರ ಶಕ್ತಿಯಿಂದ | ಘಳಿಲನಂಗಕಿಡಲು ಮೂರ್ಛೆ |
ದಳೆಯಲರಿತು ಮರನ ಮುರಿದು | ಕಲಿ ಮರುತ್ಸತ    || ೩ ||

ಕಡುಹಿನಿಂದ ಬಡಿಯಲದರ ಕಡಿದು ದನುಜನುರುತರಾಸ್ತ್ರ |
ಗಡಣದಿಂದ ಮುಸುಕೆ ಹನುಮ | ಪುಡಿಯಗೈದನು ||
ಕಿಡಿಯ ಸೂಸುತಾಗಳಸುರ | ನಡರಿ ನಭವನಂಧಕಾರ |
ವಡಸಿಮಾಯದಿಂದ ಪ್ಲವಗ | ಪಡೆಯ ತರಿದನು        || ೪ ||

ಭಾಮಿನಿ

ಸಿಡಿಲು ಮಿಂಚುಗಳಿಂದ ಕಲ್ಪದ |
ಕಡೆಯ ಮೇಘದ ತೆರದೊಳವನಿಗೆ |
ರುಧಿರ ಮಾಂಸಗಳುದುರಲದ್ಭುತ ಬಾಣವೃಷ್ಟಿಯಲಿ ||
ಕೆಡಹುತಿರೆ ರಿಪು ಬಲವ ಕಂಪಿಸು |
ತಡಿಗಡಿಗೆ ಸುರನಿಕರ ಹಾಯೆನ |
ಲೊಡೆಯನಡಿಗೊಂದಿಸಿ ವಿಭೀಷಣ ನುಡಿದ ವಿನಯದಲಿ         || ೧ ||

ರಾಗ ಸೌರಾಷ್ಟ್ರ ಅಷ್ಟತಾಳ

ದೇವ ಕಂಡೆಯ ರಣ | ಕಿಂದ್ರಾರಿಯೈತಂದ | ರಾಘವೇಂದ್ರ |
ದೈತ್ಯ | ರಾವಣ ಸುಕುಮಾರ | ನತುಲ ಪರಾಕ್ರಮ | ರಾಘವೇಂದ್ರ       || ೧ ||

ಅಂಧಕಾರವ ಗೈದ | ನಡಗಿ ಬಾಂದಳದೊಳು | ರಾಘವೇಂದ್ರ || ಕಪಿ |
ವೃಂದವ ಕೊಂದುದ | ಕೆಣೆಯುಂಟೆ ಮಾಯಾವಿ | ರಾಘವೇಂದ್ರ || ೨ ||

ವಾಯು ಸಂಭವ ಮುಖ್ಯ | ರಾಯತಿಗೆಡಿಸಿದ | ರಾಘವೇಂದ್ರ || ಖಳ |
ಕಾಯಕವನು ಪರಿ | ಹರಿಸಿ ಭೃತ್ಯರ ಕಾಯೊ | ರಾಘವೇಂದ್ರ     || ೩ ||

ಕಂದ ಪದ್ಯ

ಇಂತೆನೆ ಲಕ್ಷ್ಮಣನುರಿದೆ | ದ್ದಂತಕನೆನೆ ಪಲ್ಗಡಿವುತ ಕೊಂಡಸ್ತ್ರಗಳಂ ||
ಕಂತುಪಿತನ ಪದಕೆರಗು | ತ್ತಂ ತಳುವದೆ ಪೊರಟಾಗ್ರಹದಿಂ ಖಳಗೆಂದಂ || ೧ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲವೊ ಖಳಾಧಮ ಮರೆಯೊಳು | ಹೇಡಿ | ಗೊಳದಿದಿರಾಗೆಮ್ಮ ಧುರದೊಳು ||
ಛಲವ ನೀ ಮೆರೆಸಬೇಕಲ್ಲದೆ | ಇಂಥ | ಕಳವಿನಳವಿ ನೀತಿಯಪ್ಪುದೆ       || ೧ ||

ಎನುತ ರಾಮನ ಸಿರಿ ಚರಣವ | ನೆನೆ | ದನುಗೊಳಿಸುತ ವೈಷ್ಣವಾಸ್ತ್ರವ ||
ಕನಲಿ ಕರ್ಣಾಂತಕೆ ಸೆಳೆಯುತ್ತ | ಬಿಡೆ | ಕ್ಷಣದಿ ಮಾಯವ ಪರಿಹರಿಸುತ್ತ  || ೨ ||

ಖಳನ ತೇರ್‌ಹಯಗಳ ಖಂಡಿಸೆ | ಧರೆ | ಗಿಳಿದನ್ಯ ರಥದಿ ಪ್ರಕಾಶಿಸೆ ||
ಬಲು ಶರದೊಳು ರಾಮನನುಜನು | ಮೂರ್ಛೆ | ಗೊಳಿಸಿ ಕೊಂದನು ಮಿಕ್ಕಸುರರನ್ನು       || ೩ ||

ರಾಗ ಮಾರವಿ ಏಕತಾಳ

ಕಿಡಿಯುಗುಳುತ ಖಳ | ನೋಡನೇಳುತ ನರ | ರಧಮ ಸತಿಯ ತುಡುಕಿ ||
ವಿಧಿಸಿದಳಲ ತವ | ರುಧಿರದಿ ತಣಿಸುವೆ | ಖಡುಗಕೆ ಬಲಿಯಿಕ್ಕಿ || ೧ ||

ಬಲ್ಲೆನೆಲವೊ ಹೆಂ | ಗಳ್ಳನಣುಗ ಛಲ | ಸಲ್ಲದು ನಿನಗೆನುತ ||
ಬಿಲ್ಲಿಗೆ ಬಲುಶರ | ನಿಲ್ಲಸಿ ಬಿಡಲದ | ನೆಲ್ಲವ ಖಂಡಿಸುತ         || ೨ ||

ಉರಿವ ಮಹಾ ಫಣಿ | ಶರವನುಗಿಯೆ ಸಾ | ವಿರವಾಯ್ತದ ಬಿಡಲು ||
ಪರಿಗಣನೆಯ ಮಿ | ಕ್ಕರಿಗಳ ಬಂಧಿಸು | ತುರುಳಿಸೆ ಶೀಘ್ರದೊಳು        || ೩ ||

ಭಾಮಿನಿ

ಶರದ ಬಲುಹೆಂತುಟೊ ಮಹೀಧರ |
ತರಳೆ ಕೇಳ್ ಬಿಗಿವಡೆದು ರಾಘವ |
ವರ ವಿಭೀಷಣ ಸಹಿತಲುರುಳಿದರಖಿಲ ನಾಯಕರು ||
ತಿರುಗೆದಾನವ ಪುರಿಗೆ ನಿಶಿಯೊಳು |
ಗರುಡದೇವನು ಬರಲು ಬಂಧನ |
ಹರಿದು ನೃಪನೀಕ್ಷಿಸಿದನುಳಿದವರೊಡನೆ ನಿಜ ಬಲವ   || ೧ ||

ವಾರ್ಧಿಕ್ಯ

ಕಂಡ ಕಡೆಯಲಿ ಕಪಿಗಳಟ್ಟಮಯ ಬೆಟ್ಟಮಯ |
ದಿಂಡುರುಳುವಮಿತ ಗಾಯಾಳಮಯ ಸೀಳಮಯ |
ಸಂದಣಿಸಿ ನೆಲಸಿದರುಣಾಂಬುಮಯ ವಂಬುಮಯ ತುಂಡಿಸಿದ ವೃಕ್ಷ ಮಯವು ||
ತಂಡ ತಂಡದ ಖಳರ ಮುಂಡಮಯ ರುಂಡಮಯ |
ಖಂಡಿಸಿದ ಕರಿತುರಗ ದಿಂಡಮಯ ಖಂಡಮಯ |
ಸಂದುಡಿದು ಕೆಡೆದ ಕರಚರಣಮಯ ಕರುಣಮಯದಿಂದೆಸೆವೆ ರಣಕಣವನು        || ೧ ||

ಭಾಮಿನಿ

ಕಾಣುತವನಿಪ ಮರುಗಲೌಷಧ |
ದ್ರೋಣಗಿರಿಯೊಳಗಿಹುದದರ ಪವ |
ಮಾನಿ ತರಲಿ ಸುಷೇಣ ಬದುಕಿಪನೆಂದ ಜಾಂಬವನು ||
ಭಾನುಮಾರ್ಗದಿ ತೆರಳಿ ಮುಖ್ಯ |
ಪ್ರಾಣ ತರೆ ಮೂಲಿಕೆಯ ಕೊಂಡಾ |
ಶ್ವೇನಿಮೃತಸಂಜೀವಿನಿಯೊಳೆಬ್ಬೆಸಿದನೆಲ್ಲರನು         || ೧ ||