ರಾಗ ಪಂತುವರಾಳಿ ರೂಪಕತಾಳ
ದೇವ ಲಾಲಿಸಬುಜಲೋಚನ | ಬಿನ್ನಪಗಳ | ನೀವಲಿದು ಭಯ ವಿಮೋಚನ || ಪಲ್ಲ ||
ವಾಯು ಜನಕ ಜನನಿಯಂಜನ | ದೇವಿ ನಾಮ | ಧೇಯ ಹನುಮನೆಂಬರೈ ಜನ ||
ತೋಯಜಾಕ್ಷ ಕೇಳು ಪ್ಲವಗ | ರಾಯ ಸಚಿವನೆನಗೆ ಮಿಕ್ಕ ||
ಮಾಯೆಯರಿಯದೈ ನಿಜಾಂಗವ | ನೋಡು ದಯದೊ |
ಳೀಯೊ ದಿವ್ಯ ಚರಣ ಸೇವೆಯ | ಇಷ್ಟಾರ್ಥವಿತ್ತು |
ಕಾಯೊ ಶರಣನನು ದಯಾಮಯ || ದೇವ || ೧ ||
ಭಾನುಸುತ ವನೌಕಸಾಧಿಪ | ಋಷ್ಯಮೂಕ | ತಾಣವದರೊಳಡಗಿ ಶೋಕಿಪ ||
ಜಾಣ ವಾಲಿಯಣ್ಣನವನ | ರಾಣಿಯ ತಾ ನಿರಿಸಿಕೊಂಡು ||
ಗೋಣ ಮುರಿವೆನೆನುತ ಬೆರಸಿದ | ಮಾತಂಗ ಶಾಪ | ವಾಣಿಗಿಲ್ಲಿ ಬರಲು ಬೆದರಿದ | ಏನೆಂಬೆನಸಮ | ತ್ರಾಣಿಯವನು
ಬವರ ಬಲ್ಲಿದ || ದೇವ || ೨ ||
ದೇವರಾಜನಣುಗನಿದಿರಿಗೆ | ಕಾದಿ ಗೆಲುವ | ನಾವನಿಳೆಯೊಳಿಹನು ಕೇಳ್ ಮಿಗೆ ||
ದೇವ ದಾನವರಲಿ ಕಾಣೆ ರಾವಣನನು ಗೆಲಿದು ಗೆಳೆತ ||
ನಾವಗೈದನೆನಗೆ ಮಿಕ್ಕಿಹ | ಮಾತೇಕೆ ಸು | ಗ್ರೀವ ನಿನ್ನ ಮರೆಯ ಹೊಕ್ಕಿಹ |
ಕರೆಯಲೆನ್ನ | ದೇವ ನಿನ್ನ ಸರಿಸಕಟ್ಟಿಹ || ದೇವ || ೩ ||
ಬಪ್ಪುದೆನುತ ಪೆಗಲನೇರಿಸಿ | ಜವದೊಳೊಡೆಯ |
ನಿಪ್ಪ ಗಿರಿಗೆ ವೈದು ಕಾಣಿಸಿ ಮುಪ್ಪುರಾರಿ ಮಿತ್ರನಿರವ | ತಪ್ಪದೊಂದನುಸುರಲಿನಜ ||
ಸರ್ಪಶಯನನಡಿಯೊಳೆರಗುತ | ದೈನ್ಯದಿಂದ | ಲಪ್ರಮೇಯ ರಕ್ಷಿಸೆನ್ನುತ |
ಮರುಗಿ ಮನದೊ | ಳಿಪ್ಪ ಬವಣೆಯಲ್ಲ ತಿಳುಹುತ || ದೇವ || ೪ ||
ರಾಗ ಕಾಂಬೋಧಿ ಝಂಪೆತಾಳ
ಭಕ್ತವತ್ಸಲ ಕೇಳು | ಮತ್ತನಗ್ರಜನೆನ್ನ | ಮಿತ್ರೆಯನು ತಾನಿರಿಸಿ ಕೊಂಡು ||
ಕತ್ತ ಮುರಿವನು ದೇವ | ಧೂರ್ತನನು ತರಿದು ತನ | ಗಿತ್ತೆ ಯಾದರೆ ರುಮೆಯನೆಂದೂ || ೧ ||
ಮರೆಯೆನುಪಕಾರವನ | ವರತ ಕಪಿಬಲ ಸಹಿತ | ಚರಣ ಸೇವೆಯೊಳಿರ್ಪೆನೀಗ ||
ಅರಿಯೆ ಜೋಡೆಮಗೆ ನಿ | ಷ್ಠುರ ವಾಲಿ ದುರುಳ ದಶ | ಶಿರರಕೃತದಿಂದೆನಲಿಕಾಗ || ೨ ||
ಕಂಡೆನಾದರೆ ಜೀವ | ದಿಂದ ಮರಳುವದುಂಟೆ | ಹಂದೆ ಖಳನೆನುತ ರಾಘವನು ||
ಚಂಡರಿವೆ ರಣಕೆ ದೋ | ರ್ದಂಡ ವಾಲಿಯ ಕರೆವು | ದೆಂದನಲ ಮುಖದಿ ಸಖ್ಯವನು || ೩ ||
ಭಾಮಿನಿ
ಹೊಂದುತೊಡನೈತಂದು ಸಂಗರ |
ಕಿಂದ್ರಜನ ಕೂಗಿದನು ರವಿಸುತ |
ಕೊಂದು ಕಳೆವೆನು ಪುರವ ಹೊರವಡು ಭಂಡ ನೀನೆನುತ ||
ಎಂದಡಾ ನುಡಿ ಕೇಳಿ ಗಜಘಟೆ |
ತಂಡದುಲಿ ಗುರಿದೇಳ್ವ ಸುಪ್ತ ಮೃ |
ಗೇಂದ್ರನೆನೆ ಕಿಡಿಗೆದರಿ ಬಂದಿದಿರಾದನಾ ವಾಲಿ || ೧ ||
ರಾಗ ಶಂಕರಾಭರಣ ಮಟ್ಟೆತಾಳ
ಎಲವೋ ಹೇಡಿ ನಿಲ್ಲುವೋಡಿ | ತಲೆಯ ಮರೆಸಿ ಬದುಕಿದೆಯಲ |
ಕೊಲುವೆನೀಗ ನಿನ್ನ ಕಾಯ್ವ | ಕಲಿಯದಾವನು || ೧ ||
ಕಲಿಯ ತೋರ್ಪೆನೆಲವೊ ಕ್ಷಣದೊ | ಳಿಳೆಯ ರುಣವು ಸಂತು ನಿನ್ನ |
ತಲೆಯ ಕಾಯ್ವೆನೀವುದೆನ್ನ | ಚಲುವ ತರುಣಿಯ || ೨ ||
ತರುಣಿಗಾಗಿ ಬಂದೆ ಭಳಿರೆ | ಅರೆಯ ನಡಚಿ ಗವಿಯೊಳೆನ್ನ |
ತರಿಯ ಬಗೆದ ಪಾಪಿ ಬಿಡೆನು | ಹರಣ ಮಾತ್ರದಿ || ೩ ||
ಹರಣಗೊಂಬ ಭಟನ ಪರಿಯ | ನರಿವೆ ನಿಮಿಷತಾಳೆನುತ್ತ |
ಶಿರಕೆ ಥೋರ ಶಿಲೆಯೊಳಿಡಲು | ತರಣಿ ನಂದನ || ೪ ||
ಕಡುಗಿ ವಾಲಿ ನುಡಿದ ನಿನ್ನ | ಮಡದಿಯೈದೆತನಕೆ ಧಕ್ಕೆ |
ವಡೆವುದೆನುತ ತಡೆದಡಿನಿತು | ಕಡುಹ ತೋರ್ದೆಯ || ೫ ||
ಭಾಮಿನಿ
ಎಂದು ಬಂಡೆಯೊಳೆರಗೆ ರವಿಸುತ |
ನೊಂದು ಓಡಿದ ರುಷ್ಯಮೂಕಕೆ |
ಕಂಡು ರಾಘವನಹಿತನ್ಯಾರೆಂದರಿಯದಸ್ತ್ರವನು ||
ಹಿಂದೆಗೆಯೆ ಬೆಂಬೊತ್ತುತಿಂದ್ರಜ |
ಹಂದೆ ತೊಲಗೆಂದನುತಲಾ ಕಿ |
ಷ್ಕಿಂಧೆಗೈದುತ ಮುದದಿ ಹೊಕ್ಕನು ತಾರೆಯಾಲಯವ || ೧ ||
ವಾರ್ಧಿಕ್ಯ
ಇತ್ತಲಿವರರಸುತೈತರಲಚ್ಚುತಂಗಿನಜ |
ಮಿತ್ರ ಕುಲಜರು ಕೊಟ್ಟ ಭಾಷೆಗಳುಕುವರಲ್ಲೆ |
ನುತ್ತ ನಂಬಿದು ಶಿರವ ತೆತ್ತೆನೆನೆ ದಾಶರಥಿ ಮಿತ್ರನಂ ಸಂತೈಸುತ ||
ಇತ್ತ ಕೇಳೈ ನಿಮ್ಮೊಳಾಳು ಭೇದವ ಕಾಣ |
ದೆತ್ತಿದಸ್ತ್ರವ ನಿಳುಹಿದೆನು ಸಟೆಯ ಮಾತಲ್ಲೆ |
ನುತ್ತವನ ಗಳಕೆ ನಿಜ ಕೊರಳ ಮಾಲೆಯ ತೊಡಿಸಿ ಮತ್ತೆ ಕರೆಯೆನೆ ಧೈರ್ಯವ || ೧ ||
ಭಾಮಿನಿ
ತಾಳಿ ಪುರಬಾಹ್ಯದೊಳು ನಿಲುತತಿ |
ಖೂಳ ಬಾರೆಂದುರವಣಿಸೆ ಬಲ |
ಶಾಲಿ ಸತಿಯೊಳು ಸರಸ ಕೇಳಿಯೊಳಿರ್ಪನಾ ವಾಲಿ ||
ಕೇಳಿ ಕಿಡಿ ಕಿಡಿಯಾಗಿ ಕಲ್ಪದ |
ಕಾಲಭೈರವನಂತೆ ಭೋರ್ಗರೆ |
ದೇಳಲಾತನ ತಡೆದು ನುಡಿದಳು ತಾರೆ ಕಾಲ್ವಿಡಿದು || ೧ ||
ರಾಗ ಕಾಂಬೋಧಿ ಏಕತಾಳ
ಲಾಲಿಸೆನ್ನ ನುಡಿಯ ದಯದಿ | ಪ್ರಾಣಕಾಂತ ||
ಸಮರ | ಶೀಲವಲ್ಲ ಸೋದರನಲಿ | ಪ್ರಾಣಕಾಂತ || ಪಲ್ಲ ||
ತಪ್ಪೆನುತ್ತ ಕೊಲುವರುಂಟೆ | ಪ್ರಾಣಕಾಂತ ||
ಪ್ರಾಜ್ಞ | ರಪ್ಪ ಹಿರಿಯರಣುಗರಹರ | ಪ್ರಾಣಕಾಂತ || ೧ ||
ಹಿಂದಣ ಸ್ನೇಹವನೆಣಿಸು | ಪ್ರಾಣಕಾಂತ ||
ಗೈದು | ದೊಂದಪರಾಧವ ಕ್ಷಮಿಸು | ಪ್ರಾಣಕಾಂತ || ೨ ||
ಸರುವಥಾ ಬೇಡಿಂದು ಸಮರ | ಪ್ರಾಣಕಾಂತ ||
ಹರಿಯ | ನೆರವ ಪಡೆದನಂತೆ ರವಿಜ | ಪ್ರಾಣಕಾಂತ || ೩ ||
ರಾಗ ಭೈರವಿ ಏಕತಾಳ
ತಿಳುಹಿಸಲೇಕದನೆಲೆಗೆ | ಮನ | ವಳುಕುವದೆನಗೊಳಗೊಳಗೆ ||
ತಿಳಿಯದದರ ಮತಿ ಮೂಢ | ಘನ | ಮುಳಿಸನೆ ಕೆಣಕುವ ನೋಡ || ೧ ||
ಮಂದ ಮತಿಯ ತಹೆನೆಳೆದು | ಕೊಲೆ | ನೆಂದೆಂದಿಗು ದಿಟ ಮುಳಿದು ||
ಇಂದು ರುಮೆಯ ಸಿಂಗರಿಸು | ಬಲು | ಚಂದದೊಳೌತಣ ಬಡಿಸು || ೨ ||
ಜಡಜಾಸನ ಹರಿ ಹರರು | ಮೇಣ್ ತ್ರಿದಶ ಭುಜಗ ನರ ಖಳರು ||
ಇದಿರಾಂತರೆ ನಾ ಗೆಲುವೆ | ನೀ | ಬೆದರದಿರದಕೆಲೆ ಚಲುವೆ || ೩ ||
ಭಾಮಿನಿ
ಎಂದವಳ ಸಂತೈಸಿ ಪುಟನೆಗೆ |
ದಿಂದ್ರಸುತ ಪ್ರೋಲ್ಲಾಸದಿಂ ಬರೆ |
ಕಂಡಿನಜ ಗಿರಿ ತರುನಿಕಾಯಗಳಿಂದಲತಿಜವದಿ ||
ಮಂಡೆಗೆರಗಲು ವಾಲಿಯದ ಸೆಡೆ |
ಚಂಡನಾಡುತ ಪಿಡಿದು ಸಹಜನ |
ಕೊಂಡು ಮರಳಲು ಪುರಕೆ ಕೆಲದಿಂದೆಚ್ಚನಾ ರಾಮ || ೧ ||
ವಾರ್ಧಿಕ್ಯ
ಬಿದ್ದನಾಹತಿಗೆ ಕಲ್ಪದ್ರುಮಂ ಕೆಡೆದುದೆನ |
ಲುದ್ಧತ ಪರಾಕ್ರಮಂ ಗದ್ಗದಿಸಿ ಸುಗ್ರೀವ |
ಮುದ್ದಿಸಿದ ಕೈಗಳಂ ಛಿದ್ರಿಸಿದೆಯೆನುತ ಕೆಲಕಿದ್ದ ರಘುಜನ ಕಾಣುತ ||
ಶುದ್ಧ ಮನದಿಂದ ತಮ್ಮನ ಕೊಂಡು ತಾನೆಲ |
ಕ್ಕೆದ್ದವನ ಕದ್ದೆಚ್ಚ ಕೊಳೆಮಾಳ್ಕೆ ಹೊಲೆಬಾಳ್ಕೆ |
ವಿದ್ಯೆ ಕಲಿತೆಯದೆಲ್ಲಿ ರವಿಕುಲಜ ಸುಡುನಿನ್ನ ಬುದ್ಧಿ ಬಲ ಶೌರ್ಯಗಳನು || ೧ ||
ಭಾಮಿನಿ
ರೂಢಿ ಪಟ್ಟಕೆ ಸಲ್ಲದಲೆ ಹೋ |
ಗಾಡಿದಬಲೆಯ ಬಯಕೆಗೀ ಹೊಲೆ |
ಹೇಡಿ ಕೊಲೆಯೇ ನಿನಗಿವನು ದಶಮುಖನ ನಿಗ್ರಹಕೆ ||
ಜೋಡಿಯೇ ನಾ ಲೀಲೆಯಲಿ ಕೈ |
ಗೂಡಿಸುವ ಹುಲುಗೆಲಸ ಮೂರ್ಖರಿ |
ಗಾಡಿ ಫಲವೇನಿದು ಭಗೀರಥ ಯತ್ನನಿಮಗೆಂದ || ೧ ||
ರಾಗ ಭೈರವಿ ಝಂಪೆತಾಳ
ಈಶಸಖ ನಗುತೆಂದ | ಕೀಶವರ ಕೇಳ್ವಿಧಿ ವಿ |
ನ್ಯಾಸವಿದು ಜರೆಯೆಬರು | ವಾ ಸಫಲವೇನು || ೧ ||
ಅರರೆ ನಿನ್ನಯ ಸತಿಯ | ದುರುಳ ದಾನವನೊಯ್ದು |
ದರಿಯೆ ವಿಧಿ ವಿನ್ಯಾಸ | ಮರುಗಲೇಕದಕೆ || ೨ ||
ನಿನ್ನ ವಿಧಿಯಾಯ್ತು ರುಮೆ | ಯನ್ನಳುಪಿ ಖಳನ ವಿಧಿ |
ಮಣ್ಣ ಮುಕ್ಕಿಪುದು ಪರ | ಹೆಣ್ಣಿನೊಡಲುರಿಯು || ೩ ||
ನಡೆಸಿದಪರಾಧಗಳ | ನಡಗಿಸುವಡೀ ಪಳಿವೆ |
ಪಡೆದ ಸುತೆ ರುಮೆ ಸಾಕ್ಷಿ | ಜಡಜಮುಖಿ ತಾರೆ || ೪ ||
ಅರಿಯದಾದೆನೆನುತ್ತ | ಮರುಗಲಿನಸುತ ವಿಧಿಯ |
ತರಳ ವಾಲಿಯೊಳನೃತ | ಬರದು ದಿಟವೆಂದ || ೫ ||
ಭಾಮಿನಿ
ನೊಂದು ರಘುವರನೆಂದ ವಿಧಿ ನಿನ |
ಗೆಂದ ವರವೇ ಶಾಪವಾಯ್ತದ |
ರಿಂದ ಮರೆಗೊಂಡೆಚ್ಚೆ ಕ್ಷಮಿಸೆಲೆ ವೀರ ಮತ್ಶರವ ||
ಹಿಂದೆ ಕರೆವೆನು ಸಹಜನೊಡನಾ |
ನಂದದಿಂ ಬಾಳೆನಲು ಚಿತ್ತದಿ |
ಮಂದರಾಧರನಸಮ ರೂಪವ ಕಾಣುತಾ ವಾಲಿ || ೧ ||
ರಾಗ ಮಧು ಮಾಧವಿ ಆದಿತಾಳ
ರಾಘವೇಶ್ವರ | ಪಾಹಿ ಗೋವಿಂದ | ನಾಗಶಯನ ಮುಕ್ತಿ | ದೇಹಿ ಮುಕುಂದ || ಪಲ್ಲ ||
ಅರಿತೆ ನೀನ್ಯಾರೆಂಬ | ಪರಿಯ ಲೋಕೇಶ | ಹರಿದುದಸ್ತ್ರದಲಿ ದು | ರ್ಧರ ಭವಪಾಶ ||
ಧರೆಯೊಳಾನಿರಲಾರೆ | ಕರುಣಿಸು ಮೋಕ್ಷ | ದುರಿತ ಭಂಜನ ದೇವ | ದುರ್ಜನ ಶಿಕ್ಷ || ೧ ||
ನೀ ಸತ್ಯವ್ರತನಹು | ದೆನ್ನಹಂಕೃತಿಯು | ಘಾಸಿ ಮಾಡಿದುದಜ್ಞಾ | ನದ ನಿಂದ್ಯ ಸ್ತುತಿಯು ||
ದೋಷ ಶತವ ಮರೆ | ದಿತ್ತು ಸಾಯುಜ್ಯ | ಓ ಸರ್ವಾತ್ಮಕ ಪಾಲಿ | ಸಾದ್ಯಂತ ವರ್ಜ್ಯ || ೨ ||
ಬಾ ತಮ್ಮ ಸುಗ್ರೀವ | ಜಾತನಂಗದನ | ಪ್ರೀತಿಯಿಂ ಪೊರೆ ಮರೆ | ನಾಗೈದ ಹದನ ||
ಆ ತಾರೆ ಹದಿಬದೆ | ತನವ ಕಾಯೆಂದು | ಸೀತಾರಾಮನ ಪದ | ವನು ಸೇರ್ದನಂದು || ೩ ||
ಭಾಮಿನಿ
ಮರುಗಿ ಮುಡಿಯಡಿಗಿಟ್ಟ ತಾರೆಯ |
ಧರಣಿಪತಿ ಸಂತೈಸಿ ನಿನ್ನನು |
ಸ್ಮರಿಪ ಮನುಜರ ದುರಿತ ಹರಿದಪುದೆನುತ ವರವಿತ್ತು ||
ತಿರೆಯನಿನ ಸುತಗಿತ್ತು ವರ್ಷೋ |
ತ್ತರಣ ಗೈದನು ಶ್ರವಣಗಿರಿಯಲಿ |
ಹರಿಗಳೆಪ್ಪತ್ತೇಳು ಕೋಟಿಯ ನೆರಹಿ ಖಗಜಾತ || ೧ ||
ವಾರ್ಧಿಕ್ಯ
ಸಂಗಡಿಸಿ ಬಂದು ಕಾಣಿಸಿ ರಾಘವಗೆ ಪರಿಚ |
ಯಂಗೊಳಿಸಿ ನೇಮವಾಂತಂಗದಗೆ ಮೂಲಬಲ |
ಮಂ ಗೊಂಡು ನಳ ನೀಲ ಮೈಂದ ಮಾರುತಿ ಜಾಂಬವಂ ಗವಯ ಮುಖ್ಯರೊಡನೆ ||
ಹಿಂಗದರಸೈತೆಂಕನುಳಿದವರು ಮಿಕ್ಕಿಹ ದಿ |
ಶಂಗಳೋಳ್ ಜಾನಕಿಯ ಹುಡುಕಿ ವಾರ್ತೆಯನವಧಿ |
ತಿಂಗಳದಿ ತಾರದಿರೆ ಕೊಂದು ಬಿಸುಡುವೆನೆನಲ ವಂಗೆರಗಿಬೀಳ್ಕೊಳ್ಳುತ || ೧ ||
ಭಾಮಿನಿ
ಬಂದು ಭೂಪತಿಗೆರಗಲವದಿರ | ಚಂದದಿಂ ಬೀಳ್ಕೊಟ್ಟು ಹನುಮಂ |
ಗೆಂದನೇಕಾಂತದಲಿ ರಘುವರ ಜಾನಕಿಯ ಕುರುಹ ||
ತಂದೆಯಾದರೆ ನೀನೆ ವಾರ್ತೆಯ | ನೆಂದು ಮುದ್ರಿಕೆಯೀಯೆ ಪೊಡಮಡು |
ತಂದು ತೆರಳಿದರವರವರು ನಿರ್ದಿಷ್ಟ ದೆಸೆಗಾಗಿ || ೧ ||
ರಾಗ ಪಂತುವರಾಳಿ ಮಟ್ಟೆತಾಳ
ಪೊರಟರಾ ವನೌಕಸೇಂದ್ರರು | ಹರುಷ ಮಿಗಿಲು | ಪೊರಟರಾವನೌಕಸೇಂದ್ರರು || ಪಲ್ಲ ||
ಪೊರಟರಾ ವನೌಕಸೇಂದ್ರ | ರಿರದೆ ಮಾತೆ ಸೀತೆಯರಸಿ |
ಸರಸದಿಂ ಚತುರ್ದೆಸೆಯಲಿ | ಹರಿದು ತ್ವರಿತ ಗಮನದಿಂದ || ಅ.ಪ ||
ಧರೆಯ ಚರಿಸಿ ದಣಿದು ರಜತ | ಗಿರಿಯ ಸತ್ಯ ಸ್ವರ್ಗಲೋಕ |
ವರಸಿ ಮರಳಿ ಭೂಮಿಗಿಳಿದು | ಭರದೊಳೊಂದು ಗೌಹರವನು ||
ಪರಿಕಿಸುತ್ತಲೆಲ್ಲರಿಳಿದರು | ಸ್ವಯಂ ಪ್ರಭೆಯೋ | ಳರಿವುತಾಗಲಿಳೆಗೆ ಬಂದರು |
ಸಂಪಾತಿಯಿರ್ಪ | ವರ ಮಹೇಂದ್ರಾಚಲದಿ ಸೇರ್ದರು || ಪೊರಟ || ೧ ||
ರಾಗ ತುಜಾವಂತು ಝಂಪೆತಾಳ
ಮರುಗುತಂಗದನೆಂದ | ಬರಿದೆ ಕಪಿವರರು | ಧರಣಿಜೆಯನರಸಿ ಬಳ | ಲಿದಿರೆ ಬಲ್ಲಿದರು ||
ದುರುಳ ರಾವಣನಿರವ | ನೊರೆವರಾರಿಲ್ಲ | ವರರಾಮಕಾರ್ಯಕಂ | ತರವೊದಗಿತಲ್ಲ || ೧ ||
ಪೇಳಿದವಧಿಗೆ ದಿವಸ | ಮೇಲೆ ಮೂರಿಹುದು | ಪೇಳದಿರೆ ಕುರುಹ ಕಡೆ | ಗಾಲವೆಮಗಹುದು ||
ಮಾಲೋಲ ಸತಿದೊರಕೆ | ಳಾಲಸ್ಯವೇಕೆ | ತಾಳಿ ನಿರಶನ ವ್ರತವ | ಬಾಳನೀಗಲಿಕೆ || ೨ ||
ಪರರೊಳಳಿವುದಕಿಂತ | ಹರಿಯ ಧ್ಯಾನದಲಿ | ತೊರೆವುದೊಳ್ಳಿತು ನಾವೆ | ಹರಣವೆನೆ ಕೇಳಿ ||
ಕರುಣದಿಂ ಸಂಪಾತಿ | ಕರೆದವರೊಳೆಂದ | ಅರುಹಿ ದೇಹತ್ಯಾಗ | ದಿರವ ಜವದಿಂದ || ೩ ||
ಭಾಮಿನಿ
ಎನಲು ಜಾಂಬವನೆಂದ ಪಿತನ |
ಪ್ಪಣೆಗೆ ರಘುವರ ಪಂಚವಟ್ಯದ |
ವನದೊಳಿರೆ ತತ್ಸತಿಯ ದಶಗಳನೊಯ್ಯಲಾತನಲಿ ||
ಸೆಣಸಿ ಮಡಿವ ಜಟಾಯು ಪೇಳಿದ |
ಡಿನಜನಲ್ಲಿಗೆ ಬರಲು ಸಖ್ಯದಿ |
ಜನಕಜಾನ್ವೇಷಣಕೆ ನೃಪನೆಮಗಿತ್ತನಾಣತಿಯ || ೧ ||
ರಾಗ ಕೇತಾರಗೌಳ ಅಷ್ಟತಾಳ
ಪಂಕಜಾಕ್ಷಿಯ ಬಲು | ಬಿಂಕದೊಳರಸುತ್ತ | ಲಂಕೆಯ ನೆಲೆಗಾಣದೆ ||
ಮಂಕುವಡೆದು ದೇಹಾ | ತಂಕ ಯೋಚನೆಯುತ | ವಾಂಕಿತ ವೆನಬಾರದೆ || ೧ ||
ಜನಕ ನರುಣಶ್ಯೇನಿ | ಜನನಿ ಸಂಪಾತಿ ಯ | ನ್ನನುಜನಾತನೆ ಜಟಾಯು ||
ದನುಜ ಯೋಜನ ಶತ | ವನಧಿಯಾಚೆಯೊಳಿಹ | ಕನಕ ಲಂಕೆಯೆ ಮನೆಯು || ೨ ||
ಎಂದ ಮಾತ್ರದಿ ಬೆಂದ | ಗರಿಗಳುದ್ಭವಿಸಲು | ಬಂದು ಶೈಲಾಗ್ರದಲಿ ||
ನಿಂದು ತೋರಿದನಿವ | ರಿಗೆ ಲಂಕಾದ್ವೀಪವ | ನಂದು ಸರಾಗದಲಿ || ೩ ||
ಕಂಡು ಮಹಾಂಬುಧಿ | ಯನು ಮಿಕ್ಕವರು ಹತ್ತ | ರಿಂದ ಯೋಜನ ತೊಂಭತ್ತ ||
ಚಂದದಿಂ ಜಿಗಿವೆವೆಂ | ದೆನೆ ವಾಲಿಸುತ ಶತ | ವಿಂದು ಲಂಘಿಸುವೆ ಮಾತ್ರ || ೪ ||
ತಿರುಗುವದನುಮಾನ | ವೆನೆ ಜಾಂಬವನು ವಾಯು | ತರಳನನೀಕ್ಷಿಸುತ ||
ಸರಿ ವೀರ ನೀನಲ್ಲ | ದಿಲ್ಲ ನಿಶ್ಚಯವೆನೆ | ಮರುತಾತ್ಮಭವನುಬ್ಬುತ
ವಾರ್ಧಿಕ್ಯ
ಅರ್ಗಳದ ಹನುಮನುಬ್ಬೇರಿದಂ ಸಾರಿದಂ |
ಪೆರ್ಗಡಲ ದಾಂಟಿ ಕಂಡಾರ್ತೆಯಂ ವಾರ್ತೆಯಂ |
ನುಗ್ಗಿಡಿಪೆ ನಿಮಗೆ ಮಗುಳೆನ್ನುತಂ ಸನ್ನುತಂ ಭರ್ಗಾಪ್ತನಂ ನೆನೆವುತಂ ||
ಧಿಗ್ಗನುತ್ತರಿಸಿ ಮುಂಬಟ್ಟೆಯಂ ಹೊಟ್ಟೆಯಂ |
ನುಗ್ಗಿ ಸಿಂಹಿಕೆಯ ತರಿದೊಟ್ಟುತಂ ಮೆಟ್ಟಿತಂ |
ಒಗ್ಗಿ ಬೀಳ್ಕೊಂಡು ಮೈನಾಕವಂ ಮೇಕವಂ ನಿರ್ಗಮಿಸಿದಂ ಲಂಕೆಗೆ || ೧ ||
ಭಾಮಿನಿ
ಇಳಿದು ಭೇದಿಸಿ ದ್ವಾರ ಯಂತ್ರವ |
ಒಳ ಪೋಗಲು ಮಾರುತಿಯ ಕಾಣುತ |
ಮುಳಿದು ಲಂಕಾಲಕ್ಷ್ಮಿ ತಡೆದಳು ಘೋರ ರೂಪಿನಲಿ ||
ಎಲವೊ ಕೋಡಗ ಜೀವದಾಸೆಯ |
ನುಳಿದು ಕಳವಿಂದೆಮ್ಮ ನಗರದಿ |
ಚಲಿಸುತಿಹೆ ಸರಿನಿಶಿಯೊಳಟ್ಟಿದರಾರು ಪೆಸರೇನು || ೧ ||
ರಾಗ ಘಂಟಾರವ ಅಷ್ಟತಾಳ
ಕಳ್ಳನಲ್ಲಂಜನಾ ಸುತ ಹನುಮ ನಾ |
ಫುಲ್ಲನಾಭನ ಚರಣ ಸೇವಕ | ಖುಲ್ಲೆ ನೀನ್ಯಾರರುಹಿಸು || ೧ ||
ಲಂಕೆಯನ್ನಂಗೋಪಾಂಗ ಲಂಕಿನಿಯೆಂಬ ||
ರ್ಮಂಕು ಮರ್ಕಟ ಸಾಯದಿರು ನಡೆ | ಬಿಂಕ ನಡೆಯದು ನಮ್ಮಲ್ಲಿ || ೨ ||
ಒಳ್ಳೆ ಮಾತಿಲಿ ಬಿಡು ದ್ವಾರ ತಡೆಯೆ ಹೆಂ ||
ಗಳ್ಳನಿಂ ಮೊದಲಲ್ಲಿ ನಾಯಮ | ನಲ್ಲಿಗಟ್ಟುವೆ ನಿನ್ನನು || ೩ ||
ಕರುಳ ಬೆನ್ನಿನೊಳುಗಿವೆ ನೋಡೆನುತವ |
ಳೆರಗಲಸಿಯನು ಕಸಿದು ಮುಷ್ಟಿಯೊ | ಳೆರಗಿದನು ನಡು ಶಿರದೊಳು || ೪ ||
ಫಡ ವನೌಕಸ ಕಡೆಗಾಲ ಸನಿಹವೆಂ ||
ದಿಡಲು ಶೂಲವ ಮುರಿದದರ ಮು | ಕ್ಕಡಿಯ ಗೈದನು ಮರುತಜ || ೫ ||
ಭಾಮಿನಿ
ವೇದ್ಯವಿದು ಕಡೆಗಾಲವೀ ದು |
ರ್ಭೇದ್ಯ ಶೂಲವು ಮುರಿದುದಿನ್ನಿ |
ಲ್ಲಿರ್ದು ಫಲವಿಲ್ಲೆನುತ ಲಂಕಾ ಭಾಗ್ಯಸಿರಿಯಡೆಗೆ ||
ಸೇರ್ದು ಸೂಕ್ಷ್ಮಾ ಕೃತಿಯ ಗೃಹ ಸ |
ಮ್ಮರ್ದದಲಿ ಶೋಧಿಸುತ ಸತಿ ಸಹಿ |
ತಿರ್ದು ನಿದ್ರಿಪ ರಾವಣೇಂದ್ರನ ಕಂಡನಾ ಹನುಮ || ೧ ||
ಕಂದ ಪದ್ಯ
ಚಲುವೆಯ ಕಂಡಚ್ಚರಿಯಿಂ | ಖಳನಿವನಂ ಮಾಸತಿಯೊಲಿದಳೆ ಹಾ ಹಾಯೆನುತಂ ||
ಕೊಲುವೆನು ತಾನೆನಲಿವನಂ | ಜಲಜಾಕ್ಷನದೇಂ ಪೇಳ್ವನೊ ಮುಳಿದೆನ್ನೊಡೆಯಂ || ೧ ||
ವಾರ್ಧಿಕ್ಯ
ಎಚ್ಚರದಿ ಸ್ಮರಿಸಿ ಮಗುಳೀಕ್ಷಿಸುತ ಬಲತೊಡೆಯ |
ಮಚ್ಛಲಾಂಚನವಿಲ್ಲ ಪದುಮ ರೇಖೆಯ ಪದದಿ |
ಸ್ವಚ್ಛಾಂಗಿಯಲಿ ಕಾಣೆ ಶಿವಶಿವಾ ಕೆಡು ನುಡಿದೆನಚ್ಚುತನ ಸತಿಗೆನ್ನುತ ||
ಬೆಚ್ಚಿ ಭಕ್ತಿಯಲಿ ಬಾಹೊಯ್ದುಕೊಳುತಲ್ಲಿಂದ |
ಚಚ್ಚರದಿ ಪೊರಟಶೋಕಾವನಕ್ಕೈತಂದು |
ಸಚ್ಚರಿತ್ರೆಯ ಕಂಡು ಮರನೊಳಡಗಿರೆ ಸೀತೆಗುಚ್ಚರಿಸಿದರ್ ಖಳೆಯರು ||
ರಾಗ ಯರಕಲ ಕಾಂಬೋಧಿ, ಅಷ್ಟತಾಳ
ಏನು ಸಂದೇಹವೆ | ಜಾನಕಿ ಮಗು | ಳೇನು ಸಂಶಯವೆ || ಪಲ್ಲ ||
ಏನು ಸಂಶಯ ನೋಡೆ | ದಾನವೇಂದ್ರನ ಕೂಡೆ |
ಕ್ಷೋಣಿಯೊಳೆಗಾಣೆವು || ನಿಶ್ಚಯವು || ಏನು || ಅ.ಪ ||
ರಾವಣೇಂದ್ರನಂಥ | ವೈಭವಗಳು | ಮಾವರಗಿಲ್ಲ ನಿತ್ಯ ||
ದೇವ ದಾನವ ಭುಜ | ಗಾವಳಿ ಬೆಸಕೈವು | ದಾವವನೆಣೆ ಜಗದಿ ||
ಐಶ್ವರ್ಯದಿ || ಏನು || ೧ ||
ವೃತ್ರ ವೈರಿಯನು | ಗೆದ್ದವಸುತ | ಶತ್ರು ಭೈರವನು ||
ಒತ್ತಿನನುಜ ದಿನ | ನಿತ್ಯಯ ದೇವಾಂಗನ | ಮೊತ್ತ ಸೇವಿಪುದು ನಿನ್ನ ||
ಮಾಳ್ಪುದು ಮನ || ಏನು || ೨ ||
ಏಕೆ ಬಗುಳುವಿರೆ | ಕುನ್ನಿಯನೆನ್ನೊ | ಳ್ಯಾಕೆ ಪೊಗಳುವಿರೆ ||
ಆ ಕಮಲಾಂಬಕ | ನಾ ಕಡೆಗೂದಲಿ | ಗೀಖಳನಿದಿರೆ ಮುಂತೆ ||
ಎಂದಾ ಸೀತೆ || ಏಕೆ || ೩ ||
ಭಾಮಿನಿ
ಪ್ರೀತನೈತಂದೀದುರಾತ್ಮನ |
ಘಾತಿಸದೆ ಬಿಡನಾದರೀಯಮ |
ಯಾತನೆಗೆ ಬದಲಳಿದು ಕಾಂಬುದೆ ಲೇಸು ಪತಿ ಪದವ ||
ನಾಥನೆಂದಿಗೆ ಬಹನೊತಾನೆಂ |
ದಾತಳೊದರಿ ಹಲುಬುತಿರೆ ನೀ |
ದ್ರಾತಿಶಯದಿಂ ಖಳೆಯರೊರಗಲು ವಾತಸುತ ಮನದಿ || ೧ ||
ಕಂದ ಪದ್ಯ
ಇವಳೇ ಮಾಸತಿ ತ್ರಿಜಗ |
ಕ್ಕಿವಳೇ ಮಾತೆ ಸೀತೆ ಪೂತೆ ರಾಘವದಯಿತೆ ||
ಇವಳಂ ಪಡೆದವರೇಂ ಪು |
ಣ್ಯವ ಗೈದರೊ ನಾಂ ಕಂಡು ಧನ್ಯನೆನುತ್ತಡಿ ಗೆಡೆದಂ || ೧ ||
Leave A Comment