ಭಾಮಿನಿ

ತಿಳಿಯೆ ನಿನಗಗ್ರಜನೆ ದುಷ್ಟರ |
ತಲೆಯರಿದು ಭೂಭಾರವಿಳುಹಲ್ |
ಕೆಳಸಿ ಬಂದಚ್ಯುತನ ಕಾರ್ಯಕೆ ವಿಘ್ನವೇಕೆನಲು ||

ತಿಳಿದು ಭಯಭಕ್ತಿಯಲಿ ಹರಿಯಡಿ |
ಗಳ ಪಿಡಿದು ದೈನ್ಯದಲಿ ಸಿರಿಪದ |
ಜಲರುಹೋಪಮ ಪಾದುಕೆಯ ನೀಡೆನುತ ಭರತಾಂಕ || ೧ ||

ವಾರ್ಧಿಕ್ಯ

ಇತ್ತಡವುಗಳ ಸೇವಿಸುತೀರ್ಪೆನೀರೇಳು |
ವತ್ಸರವನುತ್ತರಿಸಿ ದರುಶನವ ನೀಯದಿರ |
ಲಿತ್ತು ವನ್ಹಿಗೆ ತನುವ ತವ ಪದವ ಕಾಂಬೆನೆನಲೆತ್ತಿ ನಿಜ ಸೋದರನನು ||
ಮತ್ತಪ್ಪಿ ರಘುಜ ಸಂತೈಸಿ ಪಾದುಕೆಯೀಯು |
ತುತ್ಸವದಿ ಕಳುಹಲವ ಪತ್ತನವ ಪೊಗದೆಯದ |
ರೊತ್ತಿಗಿಹ ನಂದಿಗ್ರಾಮದೊಳಿರ್ದು ಧರೆಯಾಧಿ ಪತ್ಯಮಂ ನಡೆಸುತಿರ್ದ  || ೧ ||

ಭಾಮಿನಿ

ವರ ರಘೂದ್ವಹ ಚಿತ್ರಕೂಟವ |
ತೊರೆದಗಸ್ತ್ಯಾತ್ರ್ಯಾದಿ ಮುನಿಗಳ |
ದರುಶನವಗೊಳುತೈದಿ ಮಡುಹಿ ವಿರಾಧ ಮುಖ್ಯರನು ||
ಹರುಷದಿಂದಿರೆ ಪಂಚವಟ್ಯದಿ |
ಧರಿಸಿ ದಿವ್ಯಾಕೃತಿಯ ನಭದಲಿ |
ಚರಿಪ ದಶಶಿರನನುಜೆ ಕಂಡಳು ರಾಘವೇಶ್ವರನ       || ೧ ||

ರಾಗ ಹಿಂದೂಸ್ತಾನಿ ಕಾಪಿ, ರೂಪಕತಾಳ

ಅರೆರೆ ಎನಿತು ಚಲುವು ಭಲ | ದೊರೆಕಿತೆನಗೆ ಸುಕೃತ ಫಲ   || ಪಲ್ಲ ||
ಧರೆಯ ಲಾವಣ್ಯವೆಲ್ಲ | ಎರಕಗೈದಿಹನು ಕಬ್ಬಿಲ್ಲ  || ಅರರೆ || ಅನು ಪಲ್ಲ ||

ದೊರೆತನೆನಗೆ ಸಾರ್ಥ ವಿಟ | ಹರನೆ ಕರುಣಿಸಿದನು ದಿಟ ||
ಸುರತಕಿಂಥ ವರನ ಹೊಂದ | ದಿರುವ ಹೆಣ್ಣು ಜನುಮ ದಂಡ || ಅರರೆ ||
ಮದನ ಕದನಕೊದಗಲಹ | ಮುದದೊಳಪ್ಪಿಕೊಳುತ ಮಹ ||
ಮಧುರ ಬಂಧ ಚುಂಬನಾದಿ | ವಿಧಿಯೊಳ್ನಲಿವೆ ನಿವನ ಕೂಡಿ || ಅರರೆ    || ೨ ||

ಕಂದ ಪದ್ಯ

ಗುರು ಕುಚಭಾರದಿ ಹರಿ ನಡು | ಮುರಿದಪುದೆನೆ ಬಲು ಬಳಕುತ ಲಂದುಗೆ ರವದೊಳ್ ||
ಕರೆವುತ ವಿಟನಂ ಕಿರು ನಗೆ | ವೆರೆದೈದುತ ರಘುವರನೊಡ ನತಿ ಬೆಡಗಿನೊಳಂ   || ೧ ||

ರಾಗ ಮೋಹನ ಏಕತಾಳ

ಸ್ವಾಗತ | ಪಿರಿಯಭಾಗ್ಯತಹನಹೆ ಸು | ಸ್ವಾಗತ ರಘು ನಾಥ    || ಪಲ್ಲ ||
ಸ್ವಾಗತ ಸಿರಿಸುಖ | ದಾಗರ ಲಂಕಾ | ನಾಗರಿಕಳು ಶಿರ | ಬಾಗುವೆನಿದಕೊ || ಸ್ವಾಗತ  || ಅ.ಪ ||

ಮೋಹನ | ಸುರತಾಹವಕೆನಗೆಣೆ | ಯಾಹ ಸುಗುಣವಿಟನ ||
ಈ ಹರೆಯದಿ ನೆರೆ | ವಾ ಹವಣದಿ ಬರೆ | ಆ ಹಸಿವೆಯ ದಣಿ |
ವಾ ಹರಿಸಿದೆ ಧಣಿ || ಸ್ವಾಗತ        || ೧ ||

ಮತ್ಪ್ರಿಯ | ಕಂದರ್ಪ ಕೇಳಿಗೊಲಿದೈ | ತರ್ಪೆಯ ಸುಮಕಾಯ ||
ಚಪ್ಪರಿಸುತ ಬಿಗಿ | ದಪ್ಪುತ ಕುಚವೆದೆ | ಗಪ್ಪಳಿಸುತ ಮಿಗಿ |
ಲಪ್ಪ ವಿಲಾಸಕೆ || ಸ್ವಾಗತ || ೨ ||

ರಾಗ ಕೇದಾರಗೌಳ ಅಷ್ಟತಾಳ

ಉಪಚಾರವಿದು ನಮ | ಗಪರೂಪವರಿಯೆ ಕೌ | ಣಪ ವಧು ವಿಧವೆಯೈಸೆ ||
ವಿಪರೀತ ವಿಧಿ ಮಗು | ಳೇಕ ಪತ್ನೀವ್ರತ | ಸಫಲವಾಗದು ನಿನ್ನಾಸೆ       || ೧ ||

ಒಲ್ಲೆನೆಂದರೆ ಪೋಪ | ಳಲ್ಲವೆಂದನುತೈದಿ | ಗಲ್ಲವನಲುಗಿದಳು ||
ತಳ್ಳಿ ರಾಘವ ತಮ್ಮ | ಚಲ್ವ ನನ್ನಿಂದಾತ | ನಲ್ಲಿ ನೀ ಬೆರೆಯೆನಲು         || ೨ ||

ಗುರುತೀಯಬೇಹುದೆಂ | ದೆರಗೆ ರಘೂದ್ವಹ | ಬರೆದನಾಕೆಯ ಬೆನ್ನಿಲಿ ||
ಪರಿಕಿಸಿದೊಡನೆ ತಾ | ನರಿವ ಪೋಗೆನಲವ | ಳಿರದೆ ತೋಷದಿ ಮರಳಿ  || ೩ ||

ಭಾಮಿನಿ

ತೆರಳಿ ಲಕ್ಷ್ಮಣಗೆರಗಿ ನಿಶ್ಚಯ |
ಹಿರಿಯ ಕಳುಹಿದನೆನಲು ಬರೆಹವ |
ಪರಿಕಿಸುತ ಗಹಗಹಿಸುತೊಯ್ಯನೆ ಪಿಡಿದು ಚಂಡಿಕೆಯ ||
ಕರದ ಖಡುಗದಿ ನಾಸಿಕವ ಚರ |
ಚರನೆ ಕೆತ್ತಿದನುರಿಗೆ ದಾನವಿ |
ಧರಿಸಿ ಘೋರಾಕೃತಿಯೊಳೊದರಿದಳದುರೆ ಸುರನಿಕರ || ೧ ||

ರಾಗ ಕಾಂಬೋಧಿ ಝಂಪೆತಾಳ

ಅನುಜೆ ಕೂಗಿದ ಭರಕೆ | ದನುಜ ಖರ ಕನಲಿ ದೂ | ಷಣನೊಡನೆ ಮೂಲಬಲ ಸಹಿತ ||
ಅನುವರಕ್ಕೊದಗಿ ಕರೆ | ದಿನ ಕುಲಾಧಿಪನ ತಡೆ | ದಣಕಿಸುತ ಗಜರಿ ಬೊಬ್ಬಿಡುತ || ೧ ||

ಎಲವೋ ನರಗುರಿಯೆಮ್ಮ | ಹೊಳಲನಿದ ಪೊಕ್ಕಸುವ | ಕಳೆದೆ ಮೇಣ್ ಸತಿಯ ಭಂಗಿಸುತ ||
ತಲೆಯರಿದು ಮಿದುಮಾಂಸ | ರುಧಿರ ಸಹಿತುಂಬೆ ತವ | ಲಲನೆಗಿದ ತಿಳುಹಿ ಬಾರೆನುತ    || ೨ ||

ಎಚ್ಚು ಶರವರ್ಷದಲಿ | ಮುಚ್ಚಿದನು ರಘುಪತಿಯ | ಬೆಚ್ಚುತನಿಮಿಷರು ಹಾಯೆನಲು ||
ಕೊಚ್ಚುತಚ್ಯುನೆಚ್ಚ | ನಿಚ್ಚಾಟಾಸ್ತ್ರದಲಿ ಶಿರ | ಉಚ್ಚಿ ಖಳನುರುಳಲವನಿಯೊಳು      || ೩ ||

ಭಾಮಿನಿ

ಬಳಿಕ ಖಳ ಕಾನನ ಕುಠಾರನ |
ಕೊಳುಗುಳದಿ ಹದಿನಾಲ್ಕು ಸಾವಿರ |
ದಳದೊಡನೆ ಮೃತನಾಗೆ ದೂಷಣನಾಗ ಶೂರ್ಪನಖಿ ||
ಎಲೆ ನರಾಧಮಗೈದ ಕೃತ್ಯಕೆ |
ಘಳಿಗೆಯಲಿ ಮದ್ದರೆಯದಿರ್ದರೆ |
ಲಲನೆ ತಾನಲ್ಲೆನುತಲೋಡಿದಳಗ್ರಭವನಡೆಗೆ || ೧ ||

ವಾರ್ಧಿಕ್ಯ

ವನಿತೆ ಕೇಳ್ ಕನಕ ಲಂಕೆಯೊಳತ್ತ ಸುರ ಭುಜಗ |
ಮನುಜದಲ್ಲಣ ದಶಗ್ರೀವನೋಲಗದಿ ಸಾ |
ರಣ ಶುಕ ಮಹೋದರ ಪ್ರಹಸ್ತಾಕ್ಷನತಿಕಾಯ ರಣವಿಜಿತ ಮೇಘನಾದ ||
ಘನ ಮದೋನ್ಮತ್ತ ರಾಕ್ಷಸ ಖೇಚರಾದಿಗಳ್ |
ದನುಜೇಂದ್ರನಿತ್ತಟದಿ ಮೆರೆದಿರಲ್ ಬೆಸಕೈವು |
ತನಿಮಿಷಾಧಿಪ ಮುಖ್ಯ ದಿಕ್ಪತಿಗಳಿರುತಿರ್ದರೆನಿತೆಂಬೆನಾ ವಿಭವವ       || ೧ ||

ರಾಗ ಸಾಂಗತ್ಯ ರೂಪಕತಾಳ

ಅನಿತರೊಳೊರಲುತ | ಲ್ಲಿಗೆ ಮೃತ್ಯುವೆನೆ ಬಂದು | ಮಣಿವುತಂಣಗೆ ಶೂರ್ಪನಖಿಯು ||
ಮನುಜ ಪಾಲಕ ರಾಮ ಅನುಜ ಲಕ್ಷ್ಮಣ ಸೀತೆ | ವನಿತೆ ವಸತಿ ಪಂಚವಟಿಯು    || ೧ ||

ಸುಂದರಿ ನಿನಗಾಹ | ಳೆಂದು ಕೈಗೊಡೆ ಮೂಗ | ಖಂಡಿಸಿದನು ರಾಮನನುಜ ||
ಬಂದು ಕಾದಲು ಖರ | ದೂಷಣಾದ್ಯರನೆಲ್ಲ | ಕೊಂದನು ದಶರಥ ತನುಜ || ೨ ||

ನಕ್ಕಳಾ ಸೀತೆಯ | ನ್ನಭಿಮಾನವಿದು ನಿನ್ನ | ದೊಕ್ಕಣಿಸುವ ದೇನಾ ಸತಿಗೆ ||
ತಕ್ಕವಳಿಕ್ಕೆ ತಂ | ದಿಕ್ಕದಿರಲು ಗೆಲ | ವಕ್ಕೆ ಭಾವಿಸು ನಮ್ಮ ಕ್ಷಿತಿಗೆ        || ೩ ||

ಭಾಮಿನಿ

ಕೇಳಿ ದಶಶಿರ ಕನಲಿ ವಿಲಯದ |
ಕಾಲನೋ ಕಲ್ಪಾಂತ ರುದ್ರನೊ |
ಪೇಳಲರಿದೆನಲೆದ್ದ ರೌದ್ರದಿ ಗದ್ದುಗೆಯನೊದ್ದು ||
ಕೀಳು ಮಾನವನೆಮ್ಮನೀ ಪರಿ |
ಕೋಳುಗೊಂಡರೆ ತನಗೆ ಬಲುಗೈ |
ಯ್ಯಾಳುತನವೇಕೆನುತ ಘರ್ಜಿಸಿ ಮೀಸೆಗೈಯ್ಯಾಗಿ     || ೧ ||

ರಾಗ ಭೈರವಿ ಏಕತಾಳ

ಬೆದರುವರೆನಗಜಭವರು | ಪದ | ದಡಿಯೊಳಿಹರು ನಿರ್ಜರರು ||
ವಿದಿತವು ಲೋಕತ್ರಯದಿ | ಹರಿ | ಯಡಗಿಹ ಜಡದೊಳು ಭಯದಿ         || ೧ ||

ಹರಿಗಿದಿರಹ ಮದ ಕರಿಯ | ಖಗ | ವರನನು ತಡೆವಹಿ ಪರಿಯ ||
ನರಗುರಿ ಕೆಣಕಿದ ವಹವ | ತಾ ನರಿತರಿತೆನ್ನಾಳ್ತನವ   || ೨ ||

ಧಾರ್ಮಿಕರೆಂಬರು ಜಗದಿ | ದು | ಷ್ಕರ್ಮವನಾರ್ಯರ ತೆರದಿ ||
ದುರ್ಮದ ವಿಳಿಸುವೆನವಗೆ | ಕಡು | ದುಮ್ಮಾನವ ಸತಿಗೆಸಗೆ    || ೩ ||

ಭಾಮಿನಿ

ಕರೆದು ಮಾರೀಚನನು ದಶಗಳ |
ತೆರಳು ಪೊಂಮಿಗವಾಗಿ ಜಾನಕಿ |
ಇರುವ ಬಳಿಗೆನೆ ಹರಿಯ ಹಗೆ ಕುಲಲಯವು ತೆಗೆಯೆಂದ ||
ಮರುನುಡಿಯೆ ಶಿರವರಿವೆ ನೋಡೆಂ |
ದಿರದೆ ಸುರಗಿಯನುಗಿಯಲಾ ರಘು |
ವರನೊಳಳಿದರೆ ಮುಕ್ತಿ ಕೊಲದಿರು ಪೋಪೆ ತಾನೆನುತ          || ೧ ||

ರಾಗ ಮಾರವಿ ಏಕತಾಳ

ಉಸುರುತಲೀಪರಿ | ನಿಶಿಚರ ನೆಗೆದಾ | ಗಸಕಡರುತಲಾಗ ||
ಬಿಸಜ ಸಖಾನ್ವಯ | ನೊಸತಿಯ ಕಾನನ | ದೆಸೆಗಿಳಿಯುತ ಬೇಗ        || ೧ ||

ಮಾಯದಿ ಕಾಂಚನ | ಛಾಯೆ ಮಿನುಗೆ ಮಿಗ | ದಾಯತಿಕೆಯೊಳಂದು ||
ತೋಯಜ ನೇತ್ರೆಗ | ಪಾಯವನೆಸಗುವು | ಪಾಯದೊಳೈತಂದು        || ೨ ||

ಬೊಗರಿಯ ತೆರದೊಳು | ಜಿಗಿದು ಸುಗಿದು ಯಳೆ | ಚಿಗುರನು ಹರಿಯುತ್ತ ||
ಸೊಗಸಿನೊಳೈತಹ | ಚಿಗರೆಯ ಕಾಣುತ | ಮಿಗೆ ಜಾನಕಿ ನಗುತ         || ೩ ||

ವಾರ್ಧಿಕ್ಯ

ದಾನವನ ಕಪಟವದ ನೋಡಿದಳು ಓಡಿದಳು |
ಮಾನಸದ ಹರುಷ ಮುದ್ವೇಗದೊಳು ವೇಗದೊಳು |
ತಾನಿನಿಯನಪ್ಪಿ ಕೊಂಡಾಡಿದಳು ಆಡಿದಳು ಏಣವದ ಪಿಡಿದೀಗಳು ||
ನೀನೀವುದೆನುತ ಮೈತೀಡಿದಳು ತೀಡಿದಳು |
ಮೇಣೆದ್ದು ಮಿಗದ ಬಳಿ ಸಾರಿದಳು ಸಾರಿದಳು |
ಕಾಣಿದರನುಳಿದು ಬದುಕುವಳಲ್ಲೆನುತ ಲಲ್ಲೆ ಜಾನಕಿಯು ಬಿಸುಸುಯ್ದಳು  || ೧ ||

ರಾಗ : ಕೇದಾರಗೌಳ,  ಅಷ್ಟತಾಳ

ಓಡಿ ಲಕ್ಷ್ಮಣನೆಂದ | ಖೋಡಿಗೊಂಬುವರುಂಟೆ | ಮೂಢ ರಕ್ಕಸರ ಮಾಯೆ ||
ಓಡುವವದ ಕಂಡು | ಕಾಡಿನ ಮೃಗವೆಲ್ಲ | ಬೇಡಿತ್ತ ಬನ್ನಿ ತಾಯೆ || ೧ ||

ಒಲ್ಲೆ ನಾನಿದರ ಕೊಂ | ಡಲ್ಲದೆ ತಿರುಗುವ | ಳಲ್ಲ ನಿಲ್ಲದು ಹರಣ ||
ಬಲ್ಲೆ ನಿನ್ನಯ ನುಡಿ | ಎಲ್ಲ ಚಮತ್ಕೃತಿ | ಸಲ್ಲದೆನ್ನೊಳು ಮೈದುನ         || ೨ ||

ಎಂಣಿಸಬೇಡಿ ಸು | ವರ್ಣ ಕಾಯವಿದು ಹಿ | ರಣ್ಯ ಗರ್ಭನ ಸೃಷ್ಟಿಯೆ ||
ಬಂಣನೆಯೇಕೆ ಕೈ | ಗನ್ನಡಿಯಿರೆ ಮುಖ | ಬಂಣವೇನೆಂದರಿಯೆ || ೩ ||

ಅನಕ ರಾಘವನೆಂದ | ಅನುಜ ತನ್ನಿನಿಯಳ | ಎಣಿಕೆಯಾಗಲಿ ಕಡೆಗೆ ||
ದನುಜ ಮಾಯಕವಾದ | ರೆಯು ಪರಿಹರಿಸುವು | ದನಿವಾರ್ಯವೈ ನಮಗೆ         || ೪ ||

ಪಿಡಿವೆನಲ್ಲದಡದ | ವಧಿಸಿ ಬೇಗದಿ ಬಹೆ | ನೊದಗಿ ಕಾಯ್ದಿಹುದಿವಳ ||
ತುದಿ ಬಯಕೆಯ ಬದಿ | ಗಿಡಲೇಕೆಂದುಸುರುತ್ತ | ಲೊಡನೆದ್ದ ನಾಕೆವಾಳ  || ೫ ||

ವಾರ್ಧಿಕ್ಯ

ಇಂತಿರಲ್ ಪುಷ್ಪಕದಿ ಲಂಕಾಧಿನಾಥ ನಡೆ |
ದಂತರಿಕ್ಷದೊಳಡಗಿ ನೋಡುತಿರೆ ಕೈದುಗಳ |
ನಾಂತು ರಘುಪುಂಗವಂ ಬೆನ್ನಟ್ಟೆ ಕಿತವ ಮಿಗವಂತರಿಸಿ ಗಿರಿವನಗಳ ||
ಮುಂತಳೆಯೆ ಬಳಲಿ ರಾಘವನೆಚ್ಚ ಶರದಿ ಹರ |
ಣಾಂತದಲಿ ಖಳ ಲಕ್ಷ್ಮಣಾ ಲಕ್ಷ್ಮಣಾಯೆನು |
ತ್ತಂತಕನ ಬಳಿಗೈದಲದ ಕೇಳಿ ವೈದೇಹಿ ಚಿಂತಿಸುತ ಮೈದುನಂಗೆ        || ೧ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಓಡು ನೀ ತಡಮಾಡದಿರು ಕೇ | ಡಾದುದಕಟಾ ಕರೆವನಿನಿಯನು ||
ಖೋಡಿ ದೈತ್ಯರು ಕೊಲುತಿಹರು ತ್ವರೆ | ಮಾಡು ದಯದಿ        || ೧ ||

ಮರುಳುಗೊಂಬರೆ ತಾಯೆ ದನುಜರು | ಹರಿಯ ಕೊಲ್ಲುವುದುಂಟೆ ರಘುಪತಿ |
ಕರೆದುದಿಲ್ಲದು ಕಪಟ ಪೋಗೆನು | ತೊರೆದು ನಿಮ್ಮ     || ೨ ||

ಜಡಜಲೋಚನನಳಿಯೆ ನಾನಿನ | ಗೊದಗುತಿಹೆನೆಂದರಿತೆಯಲ ತಾ |
ಬೆದೆಯ ಬಯಸುವ ಬಸವ ದಿಟನೀ | ನಧಮ ತೊಲಗೈ         || ೩ ||

ವಾರ್ಧಿಕ್ಯ

ಅತ್ತಿಗೆಯ ನುಡಿಗೆ ಕಿವಿಯೊತ್ತಿ ಸೌಮಿತ್ರಿ ಮಾ |
ರುತ್ತರಂಗೊಡದೆ ಕಂಬನಿದುಂಬಿ ಕಾಲ್ಗೆರಗಿ |
ಚಿತ್ತದೋಳ್ ರಾಮಚಂದ್ರನ ನೆನವುತೈದೆ ದಶಮಸ್ತಕಂ ಯತಿವೇಷದಿ ||
ಪೃಥ್ವಿಗಿಳಿಯುವ ವೇದಘೋಷದಿಂದೆಲೆ ಮನೆಯ |
ಹತ್ತಿರಕೆ ನಡೆತಂದು ಭವತಿ ಭಿಕ್ಷಾಂದೇಹಿ |
ತೃಪ್ತಿಗಾಣದೆ ಜಗವ ಸುತ್ತಿ ಬಳಲಿದೆನಿಷ್ಟವಿತ್ತನುಗ್ರಹಿಸೆಂದನು    || ೨ ||

ರಾಗ ಕೇತಾರಗೌಳ ಅಷ್ಟತಾಳ

ಬೆದರಿದಂತಿದೆ ವಿಧು | ವದನೆ ರಕ್ಷೆಗಳಿಲ್ಲ | ದಡವಿಯೊಳಿಹರೆ ಹೀಗೆ ||
ಪಡೆದವರ‍್ಯಾರು ಕೈ | ವಿಡಿದಾತನೆಲ್ಲಿಹ | ನದನುಸುರೀಗೆನಗೆ    || ೧ ||

ಜನಕರಾಯ ಮಗ | ಳೆನಗೆ ಸೀತಾಂಕಿತ | ಇನಿಯ ರಾಘವ ಪಿತನ ||
ಮನದಂತೀರೇಳ್ ವರ್ಷ | ವನವನುತ್ತರಿಸೆ ಲ | ಕ್ಷ್ಮಣಸಹಿತಿರಲೀ ದಿನ   || ೨ ||

ತಹೆನೊಂದು ಮಿಗವೆಂದು | ಮಹಿಮ ರಾಘವ ಪೋದ | ಸಹಯಕನುಜ ಪೊರಟ ||
ಬಹರೀಗ ಮನವ ನಿ | ರ್ವಹಿಸಲಪ್ಪಣೆಯಿಲ್ಲ | ಸಹಿಸಿ ನೀವರೆ ನಿಮಿಷ     || ೩ ||

ಭಾಮಿನಿ

ಇಂತು ನೆವನವೆ ದೇವಿ ಖಳರ ದು |
ರಂತ ದುಷ್ಕೃತಿಗಾಜ್ಞೆಯದು ನಾ |
ವಂತರಿಸಲರಿದಿದಕೊ ಶಾಪವನೆಂದನಾಗ್ರಹದಿ ||
ಚಿಂತಿಸುತ ಮುಂಗಾಣದವನಿಜೆ |
ಯಾಂತುಭಿಕ್ಷೆಯ ಪೊರಡೆ ದಶಶಿರ |
ದಂತಿಗಮನೆಯ ನೆಗಹಿಗಮನೋದ್ಯೋಗಪರನಾಗೆ   || ೧ ||

ರಾಗ ಬಿಲಹರಿ ರೂಪಕ ತಾಳ

ಅಯ್ಯೋ ಕೆಟ್ಟೆನು ದುಷ್ಟ | ದಾನವ ಕಪಟದಿ |
ಒಯ್ವನು ಬಿಡಿಸೆನ್ನ | ದಯದಿ | ಶ್ರೀರಾಮ     || ೧ ||

ಹಟವ ಹಿಡಿದು ಕೆಟ್ಟೆ | ಕಟು ನುಡಿಗಳ ಬಿಟ್ಟೆ |
ಕಟುಕನ ಕೈಯ್ಯಿಂದ | ಬಿಡಿಸೋ | ಶ್ರೀರಾಮ || ೨ ||

ತೊರೆದು ಸರ್ವವ ನಿನ್ನ | ಚರಣವ ನಂಬಿ ನಾ |
ಪೊರಟೆ ಕೈಬಿಡದೆನ್ನ | ಪೊರೆಯೋ | ಶ್ರೀರಾಮ        || ೩ ||

ವಾರ್ಧಿಕ್ಯ

ಈ ತೆರದಿ ವನಿತೆ ಕಂಗೆಟ್ಟೊರಲೆ ಗಿರಿವನ |
ವ್ರಾತಬಾಯ್ ಬಿಟ್ಟಳಲಿತೆನೆ ಪ್ರತಿಧ್ವನಿಸೆ ಸಂ |
ಪಾತಿಯವರಜ ಕೇಳುತಡಹಾಯ್ದು ಪುಷ್ಪಕವ ಘಾತಿಸಿದ ಮಸ್ತಕವನು ||
ಯಾತುಧಾನನಿದೆಲ್ಲಿಯದು ಹಾಳುಹದ್ದೆನುತ |
ಖಾತಿಯಿಂಝಡಿದು ಪಕ್ಕಗಳ ಕಡಿದುರುಳಿಸುತ |
ತಾ ತಾಳುವದೈದಿ ಸೀತೆಯ ಶಿಂಶುಪಾವನದಿ ಬೈತಿಟ್ಟು ನಡೆದ ಪುರಕೆ   || ೧ ||

ರಾಗ ಸಾಂಗತ್ಯ ರೂಪಕತಾಳ

ಇತ್ತಲಣ್ಣನ ನರ | ಸುತ್ತಲೈತರುವ ಸೌ | ಮಿತ್ರಿಯ ಕಂಡು ರಾಘವನು ||
ಚಿತ್ತದಿ ಕಳವಳಿ | ಸುತ್ತ ಕೇಳಿದ ವಾರ್ತೆ | ಮತ್ತೇನು ಬರಲಿಲ್ಲಿ ನೀನು      || ೧ ||

ಕರೆದೆ ನೀನೆನುತೆನ್ನ | ನಿರಗೊಡದತ್ತಿಗೆ | ಜರೆದು ನೂಕಲು ಬಂದೆನಂಣ ||
ಒರೆದ ಕಟೂಕ್ತಿಯ | ನರುಹಲಾರೆನು  ಜೀಯ | ಪರಸೇವೆಯರಿಯೆ ಬಲ್ ಕಠಿಣ    || ೨ ||

ಘಾತವಾಯಿತು ದುಷ್ಟ | ದೈತ್ಯನುಲಿಯು ಕಷ್ಟ | ಹೇತುವೆಂದೆನುತೋಡಿ ಬರುತ ||
ಸೀತೆಯನರಸಿ ಸೋ | ದರರು ಕಾತರಿಸಿ ಭೂ | ಜಾತೆ ಕಾಣದೆ ರಾಮನಳುತ      || ೩ ||

ರಾಗ ಮಧು ಮಾಧವಿ ತ್ರಿವುಡೆತಾಳ

ಮಡದಿಯೆಲ್ಲಿಹೆ ದಗೆಯನಾಂತಿಹೆ | ತಡೆಯಲಾರೆನು ವಿರಹದುರಿಯನು ||
ಜಡಜಲೋಚನೆ ಮೃಗಧರಾನನೆ | ಸಿಡುಕದೆನ್ನಲಿ ಬೇಗನೆ || ಬಾರೆ ಸುಗುಣೆ        || ೧ ||

ದಡಿಗ ದಾನವರೊಯ್ದರೊ ಕೊಂ | ದಡಗನಗಿದರೊ ದುಷ್ಟಶ್ವಾಪದ |
ಗಡಣ ತಿಂದವೊ ಕಾಣೆನೆನ್ನುಸಿ | ರಡಗಿತಿನ್ನೇಂಗೈವೆನು || ಬದುಕಿ ನಾನು || ೨ ||

ತೊರೆದು ತಾನರಘಳಿಗೆ ಬಾಳಿರ | ಲರಿದೆನುತ ನಡೆ ತಂದೆಯಾದಡೆ ||
ಪರಿಯು ಬೇರಾಯ್ತೀಗ ಸತಿಯರ | ಇರವರಿಯೆ ಕಡುದುಸ್ತರ || ಪೇಳು ವಿವರ      || ೩ ||

ವಾರ್ಧಿಕ್ಯ

ವ್ಯಾಕುಲವ ಬಿಡು ಲೋಕ ಮೂರರೊಳಗೆಲ್ಲಿರ್ದ |
ಡಾಕಮಲ ಮುಖಿಯ ತಂದೀಯದಾದರೆ ಪಿಡಿಯೆ |
ನೀಕರಾಗ್ರದಿ ಧನುವನೆನುತಂಣ ನಡಿಗೆರಗಿ ಬೀಳ್ಕೊಂಡ ಸೌಮಿತ್ರಿಯ ||
ತಾ ಕಂಡು ತಿಳುಹಿ ಸಂತೈಸಿ ಜತೆಯಲಿ ಜನಕ |
ಜಾಕಾಂತ ದೆಸೆ ದೆಸೆಯ ಹುಡುಕುತೈದಿ ಜಟಾಯು |
ವಂಕಂಡಿದೇನೆಂದಡವ ನಡೆದುದರುಹಿ ಪರ ಲೋಕಮಂ ಸಾರಲಾಗ     || ೧ ||

ರಾಗ ಕಾಂಬೋಧಿ ಝಂಪೆತಾಳ

ಶರಣಗುತ್ತಮ ಗತಿಯ | ಕರುಣಿಸಿ ಕಬಂಧನನು | ತರಿದಿಡುಕಿ ಗಿರಿ ಗೌಹರಗಳ ||
ಚರಿಸುತರಸುತ ಶಬರಿ | ಯಾಶ್ರಮಕೆ ಬರಲವಳು | ಅರಿತು ಬಂದಪ್ಪಿ ಚರಣಗಳ   || ೧ ||

ಬರವ ನೋಡುತ ಹತ್ತು | ವರುಷವಾಯ್ತೀ ಹೊತ್ತು | ದರುಶನವಿದಾಯ್ತವನಿಸುತೆಯ ||
ಇರವೆಲ್ಲಿ ಶರಣಜನ | ಸುರಧೇನು ಶೂದ್ರಳೆಂ | ದರಿಯದುದ್ಧರಿಸಿದೆಯ ಸತಿಯ     || ೨ ||

ಎಂದು ಮಿಗಿಲಾದರಿಸ | ಲೆಂದು ವಾರ್ತೆಗಳನವ | ಳಿಂದರಿತು ಸುಗ್ರೀವನಿರವ ||
ಚಂದದಿಂ ಕೈವಲ್ಯ | ಪದವ ಕರುಣಿಸಿ ರಘುಜ | ಬಂದು ಕಂಡನು ಪಂಪಸರವ      || ೩ ||

ಭಾಮಿನಿ
ಹೊಳೆವ ನೀಲೋತ್ಪಲವ ಕಾಣುತ |
ಲಲನೆಯೆಂದರಿತಾಗ ಮನದು |
ಮ್ಮಳದಿ ಹಾ ಹಾ ಸೀತೆ ಹಾಯೆನುತಪ್ಪಿಕೊಳಲೆನುತ |
ಕೊಳವ ದುಮುಕಲ್ಕೆಳಸೆ ಲಕ್ಷ್ಮಣ |
ತಿಳುಹುತಿರಲಾ ಋಷ್ಯಮೂಕದಿ |
ಚಲುವರಿವದಿರ ಕಾಣುತಿನಸುತನೆಂದ ಹನುಮಂಗೆ     || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನೋಡಿ ಬಾರೈ ಪಂಪೆಯೆಡೆಯಲಿ | ರೂಢಿಪಾಲರದಾರು ಹಿತವರೊ ||
ಖೋಡಿ ವಾಲಿಯ ಸಖರೊ ನೀನತಿ | ಗೂಢವಾಗಿ      || ೧ ||

ಎನೆ ಹಸಾದವೆನುತ್ತಲಂಜನೆ | ಯಣುಗ ವಟು ರೂಪದಲಿ ನಡೆತಂ |
ದಿನ ಕುಲಾಧಿಪನಡಿಗೆ ಮಣಿವುತ | ವಿನಯದಿಂದ       || ೨ ||

ವೀರರಾಗಮವೇನು ಪೆತ್ತವ | ರಾರು ನಿಜಪುರವೆಲ್ಲಿ ವನಸಂ ||
ಚಾರವೇಕಿದು ಪೇಳಿ ಪೆಸರೇನ್ | ಭೂರಿದಯದಿ        || ೩ ||

ವಾರ್ಧಿಕ್ಯ

ತರಣಿ ಕುಲ ಸಾಕೇತದರಸ ದಶರಥ ಜನಕ |
ಹಿರಿಯ ಸುತ ನಾ ರಾಮ ಭರತ ಶತ್ರುಹರೂರೊ |
ಳಿರುವನುಜರಿವ ಲಕ್ಷ್ಮಣಂ ವನಿತೆಯಹ ಸೀತೆಯರ ವೆರೆದು ಪಿತನಾಜ್ಞೆಗೆ ||
ವರುಷ ಹದಿನಾಲ್ಕುನುತ್ತರಿಸೆ ವನಕೈ ತಂದು |
ಇರೆ ಪಂಚವಟಿಯೊಳಾವಿರದ ಸಮಯದಿ ಕದ್ದು |
ದುರುಳ ದಶಶಿರನೊಯ್ದ ತರುಣಿಯನ್ನರಸುತ್ತ ಸರಿದೆವೀಯಡೆಗೆಂದನು   || ೧ ||

ಭಾಮಿನಿ

ಕೇಳಿ ಭಯ ಭಕ್ತಿಯಲಿ ಮರುತಜ |
ನೀಲಗಾತ್ರನ ಪದದಿ ಪಣೆಯಿ |
ಟ್ಟೇಳುತೊಡನೀಕ್ಷಿಸುತ ಕುಲಿಶೋಪಮ ನಿಜಾಂಗವನು ||
ಬಾಲನೆನಗೊಲಿದವ್ವೆಯರುಹಿದ |
ಶೀಲಮೂರ್ತಿಯ ಕಂಡೆನಿಂದಿಗೆ |
ಶೀಳಿದುದು ಭವ ಬಂಧವೆನುತಡಿಗೆಡೆದು ನುತಿಸಿದನು  || ೧ ||

ವಾರ್ಧಿಕ್ಯ

ಜಯ ಜಯ ಜಗದ್ಭರಿತ ಸಚ್ಚರಿತ ಮುನಿ ವಿನುತ |
ಜಯ ಜಯ ಮಹಾನಂದ ಸ್ವಚ್ಛಂದ ನಿರ್ದ್ವಂದ್ವ |
ಜಯ ಜಯ ಘನ ಶ್ಯಾಮ ರಿಪು ಭೀಮ ಶುಭನಾಮ | ಜಯ ಜಯಾ ಭಕ್ತಪ್ರೇಮ ||
ಜಯ ಜನಕಜೌಲೋಲ ಜನಪಾಲ ವನಮಾಲ |
ಜಯ ಸಿತಾಂಬುಜ ನೇತ್ರ ಸರ್ವತ್ರ ನುತಿಪಾತ್ರ |
ಜಯ ದೈತ್ಯ ನಿರ್ನಾಮ ನಿಸ್ಸೀಮ ಗುಣಧಾಮ ಜಯ ಸತ್ಯಕಾಮ ರಾಮ || ೧ ||