ರಾಗ ಸೌರಾಷ್ಟ್ರ ತ್ರಿವುಡೆತಾಳ

ನುಡಿಗೆ ಕುದಿದಳು ಕೈಕೆ ಬಾಲವ | ನೊದೆದ ನಾಗಿಣಿಯೆನೆ ಮಹೋಗ್ರದ |
ಹೆಡೆಯರಳಿ ವಾಗ್ವಿಷವನುಗುಳಿದ | ಳದುಭುತದಲಿ     || ೧ ||

ಬೇಡು ನೀನೆಂದಿತ್ತೆ ಭಾಷೆಯ | ಬೇಡಲದಕೆದೆಗರಗಿ ಮರುಗಿದೆ |
ಬೇಡವೆನೆ ಮತಿಗೆಟ್ಟು ಜರೆವೆಯ ಮೂಢರಂತೆ         || ೨ ||

ಭಾಷೆಗಳುಕುವರುಂಟೆ ಸೂನೃತ ಭಾಷಿಗಳು ರವಿಕುಲಜರವದಿರ |
ವಾಸಿಗೆಡಿಸದೆ ಸಲಿಸು ನುಡಿದಭಿ | ಲಾಷೆಗಳನು       || ೩ ||

ಭಾಮಿನಿ

ವರ್ಮವಿಡಿದಿಂತೆಂದಡಾ ಸಹ |
ಧರ್ಮಿಣಿಯ ನುಡಿಯಲಗು ರಾಯನ |
ಮರ್ಮದಲಿ ಥಟ್ಟುಗಿಯೆ ನೊಂದತಿ ಧರ್ಮ ಸಂಕಟದಿ ||
ಉಮ್ಮಳಿಸಿ ಮೈಮರೆಯೆ ಮಂಥರೆ |
ಬೊಮ್ಮಪಿತಗಿದನರುಹಲೇನಿದು |
ಕರ್ಮಗತಿಯೆನುತೈದಿ ರಾಘವನೆತ್ತಿದನು ಪಿತನ        || ೧ ||

ರಾಗ ಹಿಂದುಸ್ಥಾನಿ ರೂಪಕತಾಳ

ತಾತ ಚಿಂತೆ ಯೇ ತಕಿದುವೆ | ಜಾತನಿರಲು ಸನಿಹದಿ ||
ಮಾತೆ ಕುಪಿತಳಾಗಿ ಕುಳಿತ ರೀತಿಯರುಹು ಕರುಣದಿ  || ೧ ||

ವಾಸುಕೀಯ ಶಿರದ ಮಣಿಯೊ | ಳಾಸೆಯಾಯ್ತೆ ಜನಕನೆ ||
ಆ ಸುರೇಂದ್ರ ಗಜವ ತರುವೆ | ನೀ ಸಮಯದಿ ಬೇಕೆನೆ || ೨ ||

ಸೀತೆ ಮನ್ಮನ ಪ್ರೀತೆ ಸರುವ | ಪೂತೆ ದ್ವಿಕುಲ ಪಾವನೆ ||
ಪ್ರೀತಿಯಹುದೆ ನಾ ತೊರೆವೆ ಮ | ಹಾತಿಶಯದ ತನುವನೆ      || ೩ ||

ಕಂದ ಪದ್ಯ

ರಾಘವನಿಂತೆನೆ ದ್ವಿಗುಣಿತ | ಮಾಗೆ ಶೋಕ ನೃಪ ಮೂಗನಾಗಿ ಕಂಬನಿಯಿಳುಹಲ್ ||
ಆಗಮವರಿದಪುದೆಂತೆನು | ತಾ ಗರುವಂ ಮಾತೆಯನೀಕ್ಷಿಸೆ ನಗುತೆಂದಳ್         || ೧ ||

ರಾಗ ಸುರಟಿ ಏಕತಾಳ

ಕೇಳು ಸುಗುಣ ಶೀಲ | ವಿವರವ | ಪೇಳುವೆ ಭೂಪಾಲ ||
ತಾಳಿದ ದುಗುಡದ | ಮೂಲವ ನಿನಗದ | ಪೇಳಲಭೀಷ್ಟವ | ಪಾಲನೆ ಗೈವೆಯ     || ೧ ||

ಜನುಮದಾತನ ನುಡಿಯ | ಮೀರುವ | ನಣುಗನೆ ಕೇಳ್ ಸ್ಥಿತಿಯ ||
ಎಣಿಸಲವನ ಮಲ | ಕೆಣೆಯಹ ಸತ್ಸುಹ | ಮನವರಿದೆಸಗುವ | ನೆನಗೊಲಿದುಸುರೌ          || ೨ ||

ವರವೆರಡೆನಗಿತ್ತ ಒಂದಕೆ | ಭರತಗವನಿ ಪಟ್ಟ ||
ಕರುಣಿಸಿದನು ವನ | ವರುಷ ಚತುರ್ದಶ | ತರಳ ನಿನಗೆ ಪರಿ | ಯರುಹಲು ಮರುಗುವ     || ೩ ||

ರಾಗ ಮಧುಮಾಧವಿ ತ್ರಿವುಡೆತಾಳ

ಧನ್ಯನಾದೆನು ತಾತ ಮರುಗದಿ | ರನ್ಯನೇ ಭರತಾಂಕನಾಳಲಿ ||
ಕನ್ನೆ ಚಿಕ್ಕವಳವ್ವೆ ನಿರ್ಬಲ | ಳಿನ್ನು ಸಲಹಿಕೊ ಜತನದಿ || ೧ ||

ಒಡಲು ಸತಿಸುತ ಪೊಡವಿ ಸಿರಿ ಸುಖ | ವಡಗುವವು ರುಣದೊಡನೆ ದಿಟ ಮಿಗಿ ||
ಲೊಡೆತನದ ಬದಲೆಮಗೆ ಬಡತನ | ದಡವಿ ಸಾವಿರ ಗುಣದಲಿ  || ೨ ||

ಎನುತ ಬಲ ಬಂದೆರಗಿ ಭಕ್ತಿಯೊ | ಳನುಪಮನು ನಡೆತಂದು ಜನನಿಗೆ ||
ಮಣಿಯೆ ಬಿಗಿವಡೆದೆತ್ತಿ ರಿಕ್ತಗ | ಮನವಿದೇನೆನಲೆಂದನು         || ೩ ||

ಭಾಮಿನಿ

ಮಾತೆ ಕೈಕೆಯ ಮಾತಿನಲಿ ಸಹ |
ಜಾತ ಭರತಂಗವನಿಪಟ್ಟವ |
ತಾತನೊಲಿದೆನಗಿತ್ತ ದಂಡಕ ಧಾತ್ರಿಯೊಡೆತನವ ||
ಜಾತನನು ಹರಸೆನಲು ವಜ್ರಾ |
ಘಾತದಲಿ ಹಾಯೆನುತುರುಳೆ ರಘು |
ನಾಥನುಪಚರಿಸುತಿರಲೂ ರ್ಮಿಳೆಯಾಣ್ಮ ಖಾತಿಯಲಿ || ೧ ||

ರಾಗ ಭೈರವಿ ಅಷ್ಟತಾಳ

ಏನಗ್ರಭವ ಪಿತನು | ಕಾಮುಕನಾಗಿ | ಮಾನಿನಿಯೊಳಗಾದನು ||
ಮಾನ್ಯನಲ್ಲವ ಮತಿ | ಗೆಡುಕ ಲಂಪಟ ಧರ್ಮ | ಹೀನ ಶಿಕ್ಷಾರ್ಹನಯ್ಯ    || ೧ ||

ಪೂಜ್ಯರೆಂಮನ್ವಯದಿ | ಜ್ಯೇಷ್ಠನ ಬಿಟ್ಟು | ರಾಜ್ಯವ ದುರ್ಣಯದಿ ||
ತ್ಯಾಜ್ಯ ಕಿರಿಯಗಿತ್ತ | ಕಜ್ಜವಿಪ್ಪುದೆ ಪಿರಿ | ಪ್ರಾಜ್ಞ ನಂದನನಿರಲು || ೨ ||

ಮುಡಿಯ ತುಡುಕಿ ವಿಧಿಯ | ಭಾಳದ ಲಿಪಿ | ತೊಡೆವೆನಾಹವದಿ ಕೈಯ್ಯ ||
ತಡೆವವದಿರ ನೆಲ | ಕಿಡುವೆ ಕೈಕೆಗೆ ಸರ‍್ವ | ಪೊಡವಿ ಮಾರಿತೆ ರಾಘವ    || ೩ ||

ರಾಗ ಬೇಗಡೆ ತ್ರಿವುಡೆತಾಳ

ಏತಕೀಪರಿ ಮುನಿಸು | ಸೈರಿಸು ಸಹ | ಜಾತ ಸುಗುಣನೆನಿಸು   || ಪಲ್ಲ ||

ಏತಕೀಪರಿ ಮುನಿಸು ಶಸ್ತ್ರ | ವ್ರಾತ ಪಂಡಿತನಹುದು ಮಗುಳಭಿ | ಘಾತದಲಿ ನಾ ಭೀತನೆ ಗುಹ | ತಾತ ವಿಧಿ ಪುರುಹೂತರಳುಕುವ || ರೇತಕೀಪರಿ    || ಅ.ಪ ||

ಆದರೋರ್ವನ ಸೌಖ್ಯಕೆ | ಕಾದಲು ನಿಜ | ಸೋದರರೊಳು ಮರ್ತ್ಯಕೆ ||
ಹಾದಿಯ | ತಪ್ಪಿಸಿದನಹೆ ದಾಯಾದಿಯ | ಮಾತ್ಸರ್ಯ ಶಿಖಿ ಜಗ |
ದಾದಿಯ | ಸುಟ್ಟುರುಹುವುದು ನಿ | ವ್ಯಾಧಿಯ || ಕಾನನವ ಪೊಗಲು ||
ಮೇದಿನಿಗೆ ಹಿತಮಾದಪುದು ನಾ | ಪೋದರೊಂಟಿಗ ಖೇದವೇ ಮಹ |
ದಾದ ಸಿದ್ಧಿಗಳಾದಿ ಕಷ್ಟವ | ದಾದಡಲ್ಪವು ಸಾಧುವಿದು ಮಗು || ಏತಕೀಪರಿ        || ೧ ||

ಸದರ ಲಂಪಟ ಕಾಮುಕ | ನಿಂದ್ಯನೆ ಪಿತ | ವಿದಿತ ಸುವ್ರತ ಧಾರ್ಮಿಕ ||
ಬಿದಿಯೊಳು | ಬೆರೆತರೆಯೆ ಕಲಿ ಹಲ | ವಿಧಿಯೊಳು ಮಾರ್ಮಲೆಯೆ ಬಲಿ ನಿರ |
ವಧಿಯೊಳು | ಬಿಗುಹಿಹುದೆನುತ ಶಿರ | ದುದಿಯೊಳು || ಹಾಯ್ದಪರೆ ಶಿಲೆಯ ||
ಪಡೆದವರ ರುಣವಧಿಕ ವಚನವ | ನಡೆಸದಣುಗನ ಪೊಡವಿ ಹೊರುವಳೆ |
ದುಡುಕದಿರು ತೆಗೆ ಹುಡುಗ ತನವೆಂ | ದೊಡನೆ ಕರುಣದಿ ಮುಡಿಯ ಸವರಿದ || ಏತಕೀಪರಿ || ೨ ||

ಕಂದ ಪದ್ಯ

ರಾಘವನಿಂತೆನೆ ವಿನಯದಿ | ನಾಗಸರವ ಕೇಳ್ದಹಿಯೆನೆ ಲಕ್ಷ್ಮಣ ಶಿರವಂ ||
ಬಾಗಲ್ ಕೌಸಲೆ ಚಿಂತಾ | ಸಾಗರದೋಳ್ ತೇಲಾಡುತ ಗೋಳಿಡುತೆಂದಳ್      || ೧ ||

ರಾಗ ನೀಲಾಂಬರಿ ರೂಪಕತಾಳ

ಪುತ್ರರ ಕಾಣದೆ ಮೊದಲಲಿ | ಹೊತ್ತಿದೆ ವ್ಯಥೆಯಲಿ ಹರಿಯೊಲಿ |
ದಿತ್ತನು ಸುಗುಣನ ಕಡೆಯಲಿ | ದೆತ್ತಣ ವಿಧಿಯಗಲಿ ||
ಹೆತ್ತ ಕರುಳ ಕಾಂತಾರದ | ಮೃತ್ಯುವಿಗಿತ್ತಪುದೆಂತಿದ |
ಮತ್ತಾರ್ಗೆಂಬೆನು ಪತಿ ಪದ | ತೊತ್ತು ಸವತಿಗಾದ     || ೧ ||

ಧರೆಯನು ಪ್ರಿಯ ಸುತಗೀಯಲಿ | ಇರಲೇನ್ | ಕೊರೆ ನೀನೂರಲಿ |
ಬರುವೆನು ತೆರಳಲು ಜತೆಯಲಿ | ಇರಲೆಂತಾನಗಲಿ ||
ಹರಣವನುಳಿದೀ ತನು ಬಾ | ಳಿರುವುದೆ ಕರೆದೊಯ್ಯೆನುತಲಿ |
ಮರುಗುವ ಜನನಿಯ ಕಂಬನಿ | ಯೊರೆಸುತ ಚಿನ್ಮಯನು        || ೨ ||

ರಾಗ ನವರೋಜು ಆದಿತಾಳ

ಸೈರಿಸು ಶೋಕವ ತಾಯೆ | ಮಮ | ಕಾರವು ಲೋಕದ ಮಾಯೆ ||
ಸಾರಸಭವ ಲಿಪಿ | ಮೀರಲು ಪುನರಪಿ | ಅರಿಗಳವು ಸಂ | ಸಾರವಸಾರ || ಸೈರಿಸು         || ೧ ||

ಧರ್ಮವೆ ಶಾಶ್ವತವಮ್ಮ | ಸ | ತ್ಕರ್ಮವೆ ಪಾಲಿಪುದೆಮ್ಮ ||
ನೆಮ್ಮುವುದರಮನೆ | ಗಿಮ್ಮಡಿ ವಿಪಿನದಿ ನೆಮ್ಮದಿಯದು ತಾ | ಯ್ನಿಮ್ಮುಡಿಲಹುದೌ || ಸೈರಿಸು        || ೨ ||

ತಾತನ ನೇಮವು ತನಗೆ | ಮ | ತ್ತಾತನ ಸೇವೆಯು ನಿನಗೆ ||
ನೀತಿಗಳಿದು ವಿಪ | ರೀತವ ನೆನೆವರೆ | ಮಾತೆ ಹರಸು ಬಹೆ | ನಾತಿ ವಿಲಂಬದಿ || ಸೈರಿಸು || ೩ ||

ಭಾಮಿನಿ

ಇಂತೆನುತ ಬಲಬಂದು ಪಣೆಯನು |
ಕಂತುಪಿತ ಪದಕೊತ್ತಿ ತದ್ರಜ |
ವಂತಳೆದು ಕೈ ಮುಗಿದು ನಿಂತನು ತಾಯೆ ಕಳುಹೆನುತ ||
ಚಿಂತೆಯನು ತೊರೆದಾಗ ಬಾಲನ |
ಕಾಂತೆ ಗಲ್ಲವನಲುಗಿ ಮುದ್ದಿಸಿ |
ನಿಂತು ಶಿರವಾಸನಿಸಿ ಕಂಬನಿದುಂಬಿ ತಲೆವಾಗಿ       || ೧ ||

ವಾರ್ಧಿಕ್ಯ

ಎಲೆ ತಾಯೆ ಭೂದೇವಿ ಗಿರಿವನ ಸ್ಥಳಗಳಿರ |
ಎಲೆ ದೇವ ಹರಿ ಹರ ವಿರಿಂಚಿ ದಿಕ್ಪತಿಗಳಿರ |
ಎಲೆ ಭುಜಗ ಸುರದನುಜ ಮನುಜ ಖಗ ಮೃಗಗಳಿರ ಎಲೆ ನದಿ ನದಾದಿಗಳಿರ ||
ತಲೆ ಬಾಗಿ ಬೇಡುವೆನು ಸಲೆ ಧರ್ಮ ಪಥವಿಡಿದು |
ಹಳುವಕೈತರುವೆನ್ನ ಮೊಲೆಹಾಲ ಮೂರ್ತಿಯಂ |
ಒಲಿದು ರಕ್ಷಿಪುದಳುಪೆ ತಾಯಾಣೆ ನಿಮಗೆಂದು ತಿಳುಪಿ ಹರಸಿದಳಣುಗನ || ೧ ||

ಕಂದ ಪದ್ಯ

ಮಾತೆಯೊಳಪ್ಪಣೆ ಗೊಂಡಾ |
ಪೀತಾಂಬರನೈದಿದ ತಾನಿನಿಯಳ ಗೃಹಕಂ ||
ಪ್ರೀತನ ರಿಕ್ತಾಗಮವಂ |
ಕಾಂತಾಮಣಿ ಕಂಡಚ್ಚರಿ ಯೇನೆನಲೆಂದಂ    || ೧ ||

ಭಾಮಿನಿ

ಧಾರಿಣಿಯು ಭರತಾಂಕಗೆನಗೆಂ |
ಟಾರು ವತ್ಸರ ವನವು ತಂದೆಯ |
ಚಾರುಮತ ಪೂರೈಸಿ ಬಹೆ ನೀನಿರು ನಿಜಾಲಯದಿ ||
ನಾರಿ ಬೆದರದಿರೆನಲು ಕೋಸಲ |
ಕಾರು ವಲಿದರು ರಘುಜಗಲ್ಲದೆ |
ನೀರ ನಿನ್ನಗಲಿಹೆನೆ ಬಹೆತಾನೆಂದಳಿಂದುಮುಖಿ        || ೧ ||

ರಾಗ ಬೇಹಾಗ್ ರೂಪಕತಾಳ

ವನವದೋರ್ವ | ಗೆನಗೆ ಮಿಕ್ಕ | ಜನಕೆ ಸಲ್ಲದಂಗನೆ ||
ಇನಿಯ ನಿನ್ನ | ವನಿತೆಗನ್ಯ | ತನುವಿಹುದೆ ಶುಭಾಂಗನೆ         || ೧ ||

ಸಾವ ಪೂಜ್ಯ | ಹಿರಿಯರಡಿಯ | ಸೇವೆಗೈವುದನುಪಮ ||
ದೇವ ಸತಿಗೆ | ಪತಿಯ ಚರಣ | ಕಾವುದಿಹುದು ಸರಿಸಮ        || ೨ ||

ವನಿತೆಯೊಡನೆ | ವನವು ಕಠಿಣ | ಮನೆಯೊಳಿರುವುದೇ ಘನ ||
ತನಗೆ ರಮಣ | ನೆದೆಯ ಹೊರತು | ಮನೆಯದೆಲ್ಲಿ ಮೋಹನ   || ೩ ||

ರಾಗ ಕೇದಾರಗೌಳ ಝಂಪೆತಾಳ

ತರುಣಿ ಬಿಡು ಛಲವಿದೇನೆ | ವನದೊಳುಣಿ | ಸಿರದು ಫಲ ಜಲವು ಕಾಣೆ ||
ಒರಗಲರೆ ದರಗಿನೆಲೆಯು | ಬಿಡು ವ್ಯಥೆಯ | ದುರುಳ ಮೃಗ ಖಳರ ನೆಲೆಯು     || ೧ ||

ನಿನ್ನ ನೋವಿಂಗಲ್ಲದೆ | ಮರುಕವೆನ | ಗಿನ್ನುಂಟೆ ನೀನಿರ್ದೊಡೆ ||
ಬಣ್ಣನೆಯ ವನ ತ್ರಿದಿವವು | ನೀನಿರದ | ರಣ್ಯಕಿಮ್ಮಡಿ ಭವನವು  || ೨ ||

ತರೆನು ತವ ವ್ರತಕೆ ಭಂಗ | ಸತಿಧರ್ಮ | ವರಿಯೆಯಾ ಮಂಗಳಾಂಗ ||
ತೊರೆಯಲಾಗದು ಸರ್ವಥಾ | ಕೈ ಬಿಡದೆ ಕರೆದೊಯ್ಯೊ ಪ್ರಾಣನಾಥ     || ೩ ||

ಭಾಮಿನಿ

ಉಸುರುತಿಂತಳುತೆರಗಿದಬಲೆಯ |
ಬಿಸಜಲೋಚನನೆತ್ತಿ ನೀನೆ |
ನ್ನುಸಿರು ಬಾಳ್ವೆನೆ ತೊರೆದಡಸುವನೆನುತ್ತವಳ ವೆರಸಿ ||
ವಸುಧೆ ಸುರರಿಗೆ ತಮ್ಮ ಭೂಷಣ |
ವಸವನಖಿಲವನಿತ್ತು ಪೊರಮಡ |
ಲಸುರ ಹರನಂಘ್ರಿಯಲಿ ಮುಡಿಯಿಕ್ಕಿದನು ಸೌಮಿತ್ರಿ   || ೧ ||

ಕಂದ ಪದ್ಯ

ಅಡಿಗೆರಗಿದ ಸಹಭವನಂ | ಜಡಜಾಂಬಕ ನೆಗಹಲ್ಕೇಳದೆಯಿಹನಂ ||
ಒಡಗೊಂಬೆನು ಬಹುದೆನುತಿವ | ರೊಡನೈದಿದ ಪಿತನಾಜ್ಞೆಯ ಪಡೆಯಲ್ ಜವದೋಳ್      || ೧ ||

ರಾಗ ಕಾಂಬೋಧಿ ಝಂಪೆತಾಳ

ಈ ತೆರದಿ ಮೂವರಿವ | ರೈತಂದು ನಮಿಸೆ ಭೂ | ನಾಥ ಕೊರಳಪ್ಪಿ ಹಾಯೆನುತ ||
ಧಾತ್ರಿಗೊರಗಲು ನೆಗಹಿ | ಸಂತೈಸುತೊಡನೆ ರಘು | ನಾಥ ಕಿರಿ ಜನನಿಗೊಂದಿಸುತ        || ೧ ||

ವನಿತೆಯವರಜರೆನ್ನ | ನನುಸರಿಸಿದರೆ ನಿನ್ನ | ಮನಕೆ ಹರುಷವೆ ನೀಡಪ್ಪಣೆಯ ||
ಎನೆ ರೋದಿಸುತ ಸಮಂತ್ರನ ಕರೆದು ರಥದಿ ಸುತ | ರನು ಕಳುಹಿ ಬಾರೆಂದ ರಾಯ        || ೨ ||

ತಂದು ಕೊಟ್ಟಳು ಕೈಕೆ | ನಾರುಡೆಯ ಮೂವರದ | ಕೊಂಡು ತಾಯ್‌ಯಮಗೆ ದಿಟವೆನುತ
ವಂದಿಸುತ ಪಿತಗೆ ಬಲ | ಬಂದು ರಘುವರ ಪೊರಡೆ | ಕಂಡು ನೃಪ ಮೂರ್ಛಿಸಿದನಳುತ    || ೩ ||

ವಾರ್ಧಿಕ್ಯ

ಮಂಗಲಂ ಮನೆಯನುಳಿವಂದದಿಂ ರಥದಿ ರಘು |
ಪುಂಗವಂ ಪೊರಡೆ ಕಂಡಖಿಲ ಪುರಜನರಳುತ |
ಸಂಗಡಿಸಿ ತೆರಳೆ ತಮಸಾನದಿಯ ದಂಡೆಯೋಳ್ ತಂಗಿರಲ್ಕಂದಿನಿರುಳು ||
ತಿಂಗಳೇಳಲು ಪೌರರನ್ನಗಲಿ ಜವದಿ ಹೊಳೆ |
ಯಂಗಳೆದು ಮಂತ್ರಿಯೊಡನೈದಿ ಗಂಗಾ ತಟದಿ |
ತುಂಗ ವಿಕ್ರಮ ತೇರನಿಳಿದು ಗುಹನಾತಿಥ್ಯಮಂಗೊಂಡು ಮರುವುದಯದಿ         || ೧ ||

ಭಾಮಿನಿ

ತರಲು ನಾವೆಯ ಗುಹ ಸುಮಂತ್ರನ |
ಕರೆದು ನೀತಿಯನರುಹಿ ರಾಘವ |
ಪುರಕೆ ತೆರಳಿಸುತೇರ್ದನೊತ್ತಿಗರೊಡನೆ ಹರಿಗೋಲ ||
ಸರಿದು ಗಂಗೆಯ ದಾಂಟಿ ಗಿರಿ ಗೌ |
ಹರವ ಕಳೆವುತ ವಲ್ಮಿಕಾದ್ಯರ |
ದರುಶನಾಂತದಿ ಮೂವರಿರ್ದರು ಚಿತ್ರಕೂಟದಲಿ       || ೧ ||

ಕಂದ ಪದ್ಯ

ಬಿಸಜಾಂಬಕ ನಗಲಿಕೆಯಿಂ |
ಮಸಣವ ಪುಗುವೊಲಯೋಧ್ಯೆಯ ಪೊಕ್ಕಾಸಚಿವಂ ||
ದಶರಥನೆಡೆಗೈತರೆ ಸುತ |
ರೊಸಗೆಯದೇನೆಂದಳಲುವ ನೃಪಗಳುತೆಂದಂ         || ೧ ||

ರಾಗ ಕಾಂಬೋಧಿ ಝಂಪೆತಾಳ

ಮರುಕ ಬೇಡೆಮಗಾಗಿ | ಭರತ ಸೇವಿಪ ಮುದದಿ | ಬರುವೆ ವಾಜ್ಞೆಯ ನಡೆಸೆ ತಿರುಗಿ ||
ಅರುಹು ತೆರಳೆನುತೆನ್ನ | ತಿರುಹಿ ಗಂಗೆಯ ದಾಂಟಿ | ಸರಿದರೆನೆ ಭೂಪನಿಳೆಗೊರಗಿ         || ೧ ||

ಹಾ ರಾಮ ಮಮ ಪಂಚ | ಪ್ರಾಣ ದುಷ್ಟವಿರಾಮ | ಹೇ ರಾಮ ಲೋಕಾಭಿರಾಮ ||
ಓ ರಾಮ ಸರ್ವಜನ | ಪ್ರೇಮ ಸುಂದರ ಶ್ಯಾಮ | ಶ್ರೀರಾಮ ರವಿಕುಲ ಲಲಾಮ   || ೨ ||

ಮರುಗುತೀಪರಿ  ಚಿತ್ತ | ಜ್ವರ ವಿರಹ ಸನ್ನಿಯಲಿ | ಕರೆದು ಕಂಡವರ ರಾಮೆನುತ ||
ಭರದೊಳಪ್ಪುತ ಮರಳಿ | ಕೆರಳಿ ಥೂಯೆಂದುಗುಳಿ | ದುರುಳೆ ರಕ್ಕಸಿ ಕೈಕೆಯೆನುತ          || ೩ ||

ವಾರ್ಧಿಕ್ಯ

ಸೃಷ್ಟಿಪತಿಯಿಂತು ಮತಿವೈಕಲ್ಯವಾಂತು ದೆಸೆ |
ಗೆಟ್ಟೋಡುತಿರಲಾ ಸುಮಿತ್ರೆ ಕೌಸಲೆ ಮುನಿ ವ |
ಶಿಷ್ಠಾದಿಗಳು ಪಿಡಿದು ಪರ್ಯಂಕಕೊಯ್ಯೆ ಕೈಗೊಟ್ಟ ಕೈಕೆಯ ಕಾಣುತ ||
ಮುಟ್ಟದಿರು ತೊಲಗು ತಂನಿದಿರು ನಿಲದಿರು ಪಾಪಿ |
ದುಷ್ಟೆ ನಿನ್ನನು ಕಂಡನರ್ಥಕೆಡೆ ಗೈದವೀ |
ದೃಷ್ಟಿ ತನಗೇಕೆನುತ ಕಿತ್ತೆಸೆದು ಋಷಿಹತ್ಯ | ಕೃತ್ಯಕಿದೆ ಶಾಪವೆನುತ      || ೧ ||

ಕಂದ ಪದ್ಯ

ಎತ್ತಣ ಶಾಂತಿಯಿದೋ ಕಾಂತಿಯಿ |
ದೆತ್ತಣ ದಿವ್ಯ ಮೂರ್ತಿ ಸಂದರ್ಶನವಮಮ ||
ಪುತ್ರನು ನೀನೆಂದೆನಿಸಿದ |
ಕಿತ್ತೆನಿದೋ ಮಸ್ತಕವ ದೇವ ನಿನ್ನಡಿಗೆನುತಂ  || ೧ ||

ಭಾಮಿನಿ

ಮಂಚದಿಂದಿಳೆಗುರುಳಿ ದಶರಥ |
ಪಂಚತುವವೈದಿದನು ಕಂಡರ |
ಸಂಚೆಗಮನೆಯರಳಲ ಗುರು ಸಂತೈಸಲಾ ರಾತ್ರಿ ||
ಮಿಂಚಿತತಿ ದುಸ್ವಪ್ನ ತಿಳಿದಾ |
ಕುಂಚ ಮಾನಸನಾಗುತುದಯದ |
ಮುಂಚೆ ಪೊರಟನು ಭರತನನುಜ ಸಮೇತ ನಿಜಪುರಕೆ          || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತ್ವರಿತ ಗಮನದಿ ಬರುತಯೋಧ್ಯಾ | ಪುರದಶೋಭೆಗೆ ಕರಗಿ ಜನನಿಯ |
ಚರಣಕೆರಗಿದಡೆತ್ತಿ ಪೇಳ್ದಳು | ಸರುವವನ್ನು   || ೧ ||

ಕೇಳಿ ಹಾಯೆಂದುರುಳಲಾ ನಿಜ | ಬಾಲಕನ ತೆಗೆದಪ್ಪಿ ಮುದ್ದಿಸಿ ||
ಹಾಳು ವ್ಯಸನವ ತ್ಯಜಿಸುತವನಿಯ | ಪಾಲಿಸೆನಲು    || ೨ ||

ನುಡಿಗೆ ಕಿಡಿ ಕಿಡಿಯಾಗಿ ತೊಲಗೆ | ನ್ನಿದಿರು ನಿಲದಿರು ಪಾಪಿ ಹಾಲಿ |
ತ್ತೆದೆಯೊಳುಗುಳಿದೆ ವಿಷವ ನಿರಿಕಿಸೆ | ವದನವನ್ನು     || ೩ ||

ಅಂಣನನು ವನಕಟ್ಟಿ ತಾತನ | ಮಣ್ಣುಗೂಡಿಸಿದಸುರೆ ಪಾಪಿಗ |
ಳಿನ್ನು ನಿನಗೆಣೆಯಾರು ಕೆಟ್ಟೆನು | ನಿನ್ನೊಳುದಿಸಿ        || ೪ ||

ತೊರೆವೆನಸುವಿದ ತರಳ ಪತಿಹತ | ದುರಿತವೊದಗಲಿ ನಿನಗೆನುತ ಕೈ |
ಯಿರಿಸೆ ಖಡುಗಕೆ ತಡೆದ ಶತ್ರುಹ | ನೊರೆದು ನಯವ || ೫ ||

ಭಾಮಿನಿ

ಗುರುವಿನಪ್ಪಣೆಯಂತೆ ಪಿತಗು |
ತ್ತರ ವಿಧಿಯ ಪೂರೈಸಿ ಭರತನು |
ಪೊರಡೆ ರಘುವರನೆಡೆಗೆ ಪದಡಿದಪ್ಪಿ ಕೈಕೇಯಿ ||
ತರಳ ಹಾ ಕೈಬಿಡದಿರೊರೆದಂ |
ತಿರುವೆನೆನೆ ಜತೆಗೊಂಡು ಕೌಸಲೆ |
ವರ ಸುಮಿತ್ರೆ ಸಮಸ್ತ ಪರಿಜನವೆರೆದು ಹೊರವಂಟ    || ೧ ||

ವಾರ್ಧಿಕ್ಯ

ಭರದಿ ತಮಸಾನದಿಯನುತ್ತರಿಸುತಮರ ನಿ |
ರ್ಝರಿಣಿಯಂ ದಾಂಟಿ ನಡೆದಾ ಚಿತ್ರಕೂಟದೋಳ್ |
ಹರಿಯ ಪದ ಚಿನ್ಹಮಂ ಕಂಡು ಭಕ್ತಿಯಲಿದಿಂಡುರುಳಿ ಪಣೆಗಾರೇಣುವ ||
ಧರಿಸಿ ಮುಂದೆಸೆ ನೋಡಿ ರವಿಕೋಟ ಭಾಸದಿಂ |
ವರ ಜಟಾಮಂಡಲದಿ ಮೆರೆವ ರಾಘವನಡಿಗೆ |
ಶರಜಮಂ ಕಂಡೆರಗುವಾರಡಿಯೆನಲ್ ಭರತ ನೆರಗಿದಂ ಸಾಷ್ಟಾಂಗದಿ   || ೧ ||

ಭಾಮಿನಿ

ಕರುಣದಿಂ ತೆಗೆದಪ್ಪಿ ರಾಘವ |
ಶಿರದಿ ಜಟೆ ವಲ್ಕಲವಿದೇನೈ |
ಅರುಹು ಕುಶಲವೆ ಯೆನಲು ಸಕಲವನೊರೆದ ಭರತಾಂಕ ||
ಧರಣಿಜಾಪತಿ ಪಿತನ ಮರಣಕೆ |
ಮರುಗಿ ಜನಕಂಗೌರ್ಧ್ವದೈಹಿಕ |
ವಿರಚಿಸುತ ಮಾತೆಯರ ಮನ್ನಿಸುತಿರಲು ಗುರು ನುಡಿದ         || ೧ ||

ರಾಗ ಬೇಗಡೆ ಅಷ್ಟತಾಳ

ಏನು ರಾಘವ ರಾಜ್ಯ ಪಾಲನವೊ | ನಿತ್ಯಾತ್ಮ ಜನ್ಮವಿ |
ಧಾನ ವಿಸ್ತೃತ ವಿಶ್ವಚಿಂತನವೋ ||
ಕಾನನದಿ ಬರಿ ಕಾಲ ಹರಣವೋ | ಆನತರ ರಕ್ಷಣವೋ ತಿಳುಹೆನ |
ಲಾ ನರಾಧಿಪನರಿತು ಗುರುಪದ | ಕಾನಿಸುತ ಸಿರಿ ಮುಡಿಯನೆಂದನು    || ೧ ||

ಆಲಿಸೆನ್ನಭಿಮತವ ಗುರುವರ್ಯ | ಪಿತೃವಾಕ್ಯ ವನಸಂ |
ಚಾಲನವು ಮೇಣಾದ್ಯಕರ್ತವ್ಯ ||
ಮೇಲು ಮೇಲೀ ಜನನಿಯರ ಕಂ | ಗಾಲು ಭರತನ ಸಹಜ ಸ್ನೇಹ |
ವ್ಯಾಳ ಕಾಲ್ವಿಡಿದರೆಯು ಮನ್ಮನ | ದೇಳಿಗೆಗೆ ಪ್ರತಿಕೂಲವಿಲ್ಲೈ   || ೨ ||

ಕಂದ ಪದ್ಯ

ಇಂತೆನೆ ಭರತಾಂಬಿಕೆ ಘನ |
ಚಿಂತೆಯೊಳೆರಗುತ ಕ್ಷಮಿಸೇಳ್ ಪುರಕೆನೆ ರಘುಜಂ ||
ಸಂತೈಸುತಲಾಕೆಯ ತಾ |
ನೆಂತಾದರು ಬರೆನವಧಿಯೊಳೆನೆ ಮಾಂಡವಿಯಾಳ್ದಂ  || ೧ ||

ರಾಗ ಸಾರಂಗಿ ತ್ರಿವುಡೆತಾಳ

ಏನಿದೇನಣ್ಣ ದೇವ | ಮಾತ್ಸರ್ಯವಿ | ದೇನು ಮಹಾನುಭಾವ   || ಪಲ್ಲವಿ ||

ಏನಿದಸಮ ಜ್ಞಾನಿ ಸೂನೃತ | ವಾಣಿ ಸಮರ ತ್ರಾಣಿ ಘನ ಸ |
ನ್ಮಾನಿ ನಿರ್ಭಯ ಪಾಣಿ ವಾಂಛಿತ | ದಾನಿ ತನ್ನೊಡನೀ ನಿರಾಕೃತಿ || ಏನಿ || ಅ. ಪ ||

ವಿಕಟ ಕಾಮುಕ ಸ್ತ್ರೀಜಿತ | ಮುಪ್ಪಿನ ಮತಿ | ವಿಕಲ ಮತ್ಪಿತ ದೂಷಿತ ||
ಆತನ ನುಡಿ | ಗಖಿಲ ಶಾಸ್ತ್ರವನರಿತ | ನೀನೊಪ್ಪಿಕೊಳುತ ||
ಅಕಟ ಕೈ ಬಿಟ್ಟೆಮ್ಮ ಗಿರಿವನ | ನಿಕರವನು ಪೊಗಲಿಳೆಯ ನಾಳುವ |
ಶಕುತರಾರೈತರದಿರಲು ತವ | ನಿಕಟವಿದ ಬಿಡೆ ಪ್ರಕಟವೀ ನುಡಿ  || ಏನಿ || ೧ ||

ಈ ಮಾತಾಡುವರೆ ತಮ್ಮ | ಪೆತ್ತವ ಸತ್ಯ | ಕಾಮ ಸಚ್ಚರಿತನಮ್ಮ |
ಕೈಕಾದೇವಿ | ತಾ ಮಾರ್ಗದರ್ಶಿಯಮ್ಮ || ಮೇಣ್ ಪ್ರಕೃತಕರ್ಮ ||
ನೀ ಮನದಿ ಕವಲೆಣಿಸದಿರು ಪಿತ | ನೇಮ ಪಿರಿದುಭಯರಿಗಯೋಧ್ಯಾ |
ಸೀಮೆಯಾಳುವುದನಕ ನಾ ವನ | ವಾ ಮುಗಿಸಿ ಮರಳುವೆನು ಮರುಗದಿ || ರೀಮಾ        || ೨ ||

ಅಂಣನೀನವಧರಿಸು | ಬಿನ್ನಪವ ಸಂ | ಪನ್ನ ದಯದಿ ಮನ್ನಿಸು |
ಪಿತನಾಜ್ಞೆಗ | ರಣ್ಯ ವೆನಗೆ ನೇಮಿಸು || ಧಾರಿಣಿಯ ವಹಿಸು ||
ಭಿನ್ನವಿರೆ ಮತ ನಿರಶನ ವ್ರತ | ವನ್ನೆಸಗಿ ಅಸುಗಳೆವೆ ತಾನೆನೆ |
ಚಿನ್ಮಯನು ಗುರುವನ್ನಿರೀಕ್ಷಿಸ | ಲನ್ನೆಗವ ಕರೆದೆಂದ ಗುಪಿತದಿ || ಅಂಣ   || ೩ ||