ಸಂಪೂರ್ಣ ರಾಮಾಯಣ

ಶಾರ್ದೂಲವಿಕ್ರೀಡಿತ ವೃತ್ತ

ಶ್ರೀಮದ್ ಭಾನುಕುಲಪ್ರದೀಪ ವಿನುತಪ್ರೇಮಂ ಜಗದ್ವಂದಿತಂ |
ರಾಮಂ ಸಜ್ಜನರಿಷ್ಟದಾತೃ ಖಲಹೃದ್ ಭೀಮಂ ಸುರೇಶಾರ್ಚಿತಂ ||
ಶಾಮಂ ಲೋಕ ಸಮಸ್ತ ಶಾಂತಿನಿಲಯಂ ಭೌಮೀ ಮನೋವಲ್ಲಭಂ |
ಸೋಮಾರ್ಕಾಮಿತತೇಜಸಂ ಕವಿಗಣಕ್ಷೇಮಂ ಪರೇಶಂ ಭಜೇ   || ೧ ||

ರಾಗ ನಾಟಿ ಝಂಪೆತಾಳ

ಜಯತು ಜಯ ಗಜವದನ | ಜಯತು ನಗಜಾ ತರುಣ |
ಜಯತು ದೀನೋದ್ಧರಣ | ಜಯ ವಿಘ್ನಹರಣ ||
ಜಯತು ಜಯ ಖಳಹನನ | ಜಯತು ಸರ್ಪಾಭರಣ |
ಜಯತು ಪಾವನಚರಣ | ಜಯ ಸಿದ್ಧಿರಮಣ |
ಜಯತು ಜಯ ಜಯತು   || ೧ ||

ಜಯತು ಜಯ ಸರ್ವೇಶ | ಜಯತು ರವಿಸಂಕಾಶ |
ಜಯತು  ಭವಭಯನಾಶ | ಜಯ ಭಕ್ತಪೋಷ ||
ಜಯತು ಜಯ ಶೃತಿಘೋಷ ಜಯತು ಗಾನವಿಲಾಸ |
ಜಯತು ಕವಿಕುಲತೋಷ ರಕ್ಷಿಸನಿಶ || ಜಯತು ||     || ೨ ||

ಜಯತು ಜಯ ಚಿದ್ರೂಪ | ಜಯತು ಚಂದನಲೇಪ |
ಜಯತು ಕೀರ್ತಿಕಲಾಪ | ಜಯ ಸುಪ್ರತಾಪ ||
ಜಯತು ನುತವಿಧಿಸುರಪ | ಜಯತು ಜಗನಿಷ್ಪಾಪ |
ಜಯತು ಕಪಿಲಾವನಿಪ | ಜಯವೀಯೋ ಗಣಪ ||
ಜಯತು ಜಯ ಜಯತು   || ೩ ||

ರಾಗ ನಾಟಿ ಬೇಹಾಗ್ ರೂಪಕತಾಳ

ವಾಣಿ ಭುಜಗವೇಣಿ ಅಜನ | ರಾಣಿ ಶಾರದೆ ||
ನೀನೆ ದಯದಿ ಗಾನಗೈಸ | ಲೇನು ಬಾರದೆ  || ಪಲ್ಲ ||

ಪ್ರಾಕೃತರೆನಿಪಾ ಕವಿಗಳ | ನೇಕ ಜನರನ ||
ಪ್ರಾಕೃತರ ಗೈದಾ ಕರುಣದೊ | ಳೀ ಕುಮಾರನ || ವಾಣಿ        || ೧ ||

ವಾಕು ಮತಿಯೋಳೈಕ್ಯಳೆನಿಸಿ | ಲೋಕ ಸತ್ಕೃತಿ ||
ನೀ ಕರುಣಿಪುದೀಕೃತಿಗೆ ವಿ | ವೇಕಿ ಭಾರತಿ || ವಾಣಿ    || ೨ ||

ಮಾತೆಯೆ ಪ್ರಣಿಪಾತ ನಾಂ ಪ್ರ | ಪೂತ ಪಾದದ ||
ಖ್ಯಾತೆ ಖಗವರೂಥೆ ಸಲಹು | ಜಾತನಂ ಸದಾ || ವಾಣಿ         || ೩ ||

ವಾರ್ಧಿಕ್ಯ

ಶೇಷಾದ್ರಿಪತಿ ವೆಂಕಟೇಶನಂ ನುತಿಸಿ ಸ |
ರ್ವೇಶ ಹರಿಹರ ಸರಸಿ ಜಾಸನರ್ಗೆರಗಿ ಕೈ |
ಲಾಸನರ್ಧಾಂಗಿ ಸಿರಿ ವಾಗ್ದೇವಿಯರ ಭಜಿಸಿ ವಾಸವಾದ್ಯಮರ ತತಿಯ |
ತೋಷದಲಿ ಪೊಡಮಡುತ್ತಾ ಸುಕವಿ ವಾಲ್ಮೀಕಿ |
ವ್ಯಾಸಭಾಸಾದ್ಯಖಿಲ ಭೂಸುರೋತ್ತಮರ ಮಣಿ |
ದಾ ಸಕಲ ಗುರುಹಿರಿಯರಂ ಸ್ಮರಿಸಿ ಭಕ್ತಿಯಿಂದೀ ಸುಕಾವ್ಯವ ಗೈವೆನು   || ೧ ||

ಭಾಮಿನಿ

ಆದಿಯಲಿ ಶಿವನುಮೆಗೆ ಬೋಧಿಸಿ |
ದಾದಿ ಕಥೆಯನನಂತ ರೀತಿಯ |
ಲಾದಿಕವಿ ವಾಲ್ಮೀಕಿ ಮುನಿವರ್ಯಾದಿಗಳು ಬರೆದ ||
ಆದಿಪುರುಷನ ಚರಿತೆಯಿದರನ |
ನಾದಿ ಮಾರುತಿ ನುಡಿಸೆ ನವ್ಯತೆ |
ಗಾದಿಯೆ ನಲಾನೊರೆವೆ ಕನ್ನಡದೆಕ್ಷಗಾನದಲಿ || ೧ ||

ರಾಗ ಸೌರಾಷ್ಟ್ರ ತ್ರಿವುಡೆ ತಾಳ

ತ್ರಿಣಯ ಕರುಣದೊಳನಘ ರಾಮಾ | ಯಣವನಭಿವರ್ಣಿಸುತಲಿರೆ ಮಣಿ |
ದಿನಿಯನನು ಬೆಸಗೊಂಡಳುಮೆಯತಿ | ವಿನಯದಿಂದ  || ೧ ||

ಕೇಳಿದಣಿಯವು ಕಿವಿಗಳಿವು ಮುದ | ತಾಳಿ ತಣಿಯದು ಮನವು ಶ್ರೀಹರಿ |
ಲೀಲೆಗಳ ಕೊಂಡಾಡಿ ಜಿಹ್ವೆಯು | ಸೋಲದೈಸೆ        || ೨ ||

ನಾರಿಯವರಜರೊಡನಯೋಧ್ಯಾ | ಧಾರಿಣಿಯನುಳಿದಾರಘೂತ್ತಮ |
ಸೇರಿದನದೆಂತಮಮ ದುರ್ಗಮ | ಘೋರಟವಿಯ      || ೩ ||

ಇರೆ ಜನಸ್ಥಾನದಲಿ ಸೀತಾ | ತರುಣಿಯನು ಕೊಂಡೊಯ್ದು ರಾಮನ |
ಧುರದಿ ಪಡೆದನದೆಂತು ದಶಶಿರ | ಪರಮ ಪದವ      || ೪ ||

ಅರುಹು ರಾಘವನಿಳೆಯ ಭಾರವ | ತರಿದು ಜಾನಕಿ ಸಹಿತ ರಾಜ್ಯವ |
ಪೊರೆದನೆನೆ ತಕ್ಕೈಸಿಪೇಳಿದ ಹರನು  ಮುದದಿ        || ೫ ||

ವಾರ್ಧಿಕ್ಯ

ರವಿಕುಲೋತ್ತುಂಗ ನೃಪ ಕೀರ್ತಿಕುಜ ಫಲರೂಪ |
ದಿವಿಜಸಖನಹಿತ ಗಜ ಪಂಚಾಸ್ಯನೆನಿಸುವಜ |
ಕುವರ ದಶರಥನಾಳುತಿಳೆಯ ಮೂವೆಂಡಿರೊಳು ವಿವಿಧದತಿ ವೈಭವದೊಳು ||
ಸವೆದುದರುವತ್ತು ಸಾವಿರ ವರುಷ ಸುತರುದಿಸ |
ದವ ಪುತ್ರ ಕಾಮೇಷ್ಟಿ ಗೈದು ಲೋಕ ಸಮಷ್ಟಿ
ಧವನ ಶಿಶು ತುಲ್ಯೆಯಿಂ ಪಡೆಯೆ ಕೌಸಲ್ಯೆಯಿಂ |
ಭುವನ ನುತ ರಾಮಾಖ್ಯೆಯಿಂ       || ೧ ||

ಭಾಮಿನಿ

ಅರಸನಚ್ಚಿನ ಕೈಕೆಯೆಂಬವ |
ಳೆರಡನೆಯ ಸತಿಗುದಿಸೆ ಭರತನು |
ಕಿರಿಸುಮಿತ್ರಯೊಳವಳಿ ಲಕ್ಷ್ಮಣ ಶತ್ರುಹರರೆನುವ ||
ತರಳರೊಡನತ್ಯಧಿಕ ಹರುಷದೊ |
ಳಿರುತ ನೃಪ ಕಾಲೋಚಿತದ ಸಂ |
ಸ್ಕರಣಗಳ ವಿರಚಿಸಿದನಿರದೆ ವಸಿಷ್ಠರಭಿಮತದಿ        || ೧ ||

ವಾರ್ಧಿಕ್ಯ

ದಕ್ಷಸುತೆ ಕೇಳು ಶ್ರೀವಕ್ಷ ದಿನದಿನದಿ ಸಿತ |
ಪಕ್ಷ ಶಶಿಯಂತೆ ಬೆಳೆ ದುಕ್ಕಿಬಹ ಜವ್ವನದಿ |
ಲಕ್ಷ್ಮಣನ ಜತೆಯೊಳೈದಕ್ಕರದಿ ರಕ್ಕಸರನಿಕ್ಕಿ ಕೌಶಿಕನ ಮಖವ ||
ರಕ್ಷಿಸುತಹಲ್ಯೆಯಂ ಸತ್ಕರಿಸಿ ಮಿಥಿಲೆಗೈ | ದಕ್ಕಜದಿ ಧನುವೆತ್ತು ತಕ್ಷರಂ ಜಾನಕಿಗೆ |
ತಕ್ಕ ಪತಿಯೆಂದೆನಿಸಿ ವಿಕ್ರಮದಿ ಭಾರ್ಗವನ ಮಿಕ್ಕಯೋಧ್ಯೆಗೆ ಬಂದನು  || ೧ ||

ಶಾರ್ದೂಲ ವಿಕ್ರೀಡಿತ ವೃತ್ತ

ಸೀತಾವಕ್ತ್ರ ಸರೋರುಹಾಪ್ತ ಸವಿತಾಮಾತಾಪಿತಾಸ್ಸರ್ವದಾ |
ಪ್ರಿತ್ಯಾಗಾರ ಸುದೀಪ್ತ ದೀಪ ವರಖದ್ಯೋತಾನ್ವಯಾಖ್ಯಾರ್ಣವ ||
ಶೀತಾಂಶೂಪಮ ರಾಮಚಂದ್ರನಿರೆ ಭೂಜಾತಾಸಹಾನಂದದೊಳ್ |
ಏತತ್ಕಾಲದಿ ತೋರ್ದುದಲ್ಲಿ ಮಹದು | ತ್ಪಾತಂ ಮನೋಭೀಕರಂ        || ೧ ||

ಭಾಮಿನಿ

ವನಿತೆ ಕೇಳದ ಕೋಸಲೇಶ್ವರ |
ನೆಣಿಸುತಿನಿತುತ್ಪಾತವಿದು ಮತ್ |
ಪಣೆಯ ಲಿಪಿಯ ವಿಧಾತ ಚಿತ್ರಿಸಿ ತೋರ್ದ ಬಾನ್ ಪಟದಿ ||
ತನುವನಿಶ್ಚಿತವವನಿ ಪಟ್ಟವ |
ನಣುಗ ರಾಘವಗೀವೆನೆನೆನುತಲಿ |
ಮನದೊಳರಿತೋಲಗಕೆ ನಡೆತಂದೆಂದನುತ್ಸವದಿ      || ೧ ||

ರಾಗ ಕಾಂಬೋಧಿ ಝಂಪೆತಾಳ

ಆಲಿಸೈ ಮಂತ್ರಿ ಬಹು | ಕಾಲ ಭಾಗ್ಯದೊಳಿಳೆಯ |
ನಾಳಿದೆ ಸಮಸ್ತ ಸಿರಿ | ಯಾಲಯವಿದೆನಿಸಿ ||
ಹಾಳು ಜರೆಯಡಸಿತೀ | ವೇಳೆ ಸುತರಭ್ಯುದಯ |
ದಾಲೋಚನೆಯದೊಂದೆ | ಮೇಲೆ ಮೇಲುದಿಸಿ         || ೧ ||

ಕೆಟ್ಟ ವಿಧಿಯೆಂತಿಹುದೊ | ಪಟ್ಟವನು ರಾಘವಗೆ |
ಕಟ್ಟುವೆನು ನಾಳೆಯೆ ವ | ಸಿಷ್ಠ ಮೊದಲಾಗಿ ||
ಇಷ್ಟ ಭೂಸುರರಖಿಲ | ಸೃಷ್ಟಿಪರ ಬರಿಸುತ ವಿ |
ಶಿಷ್ಟ ಸಂಗ್ರಹವ ಸಂ | ಘಟ್ಟಿಸನುವಾಗಿ        || ೨ ||

ಭರತ ಶತ್ರುಹರಿಲ್ಲ | ಕರೆವಡೀಗಳವಲ್ಲ
ಮರುಗಿ ಫಲವಿಲ್ಲ ಸಿಂ | ಗರಿಸು ಪುರವೆಲ್ಲ ||
ಅರಸನುಕ್ತಿಗೆ ಹರುಷ | ಭರದಿಸಭೆಯೋಲಾಡೆ |
ತರಳ ರಾಮನ ಬರಿಸು | ತೋರೆದನೀ ಸೊಲ್ಲ          || ೩ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಮಗನೆ ಬಾ ಬಾ ಸುಗುಣ ವಾರಿಧಿ | ಖಗ ಕುಲಾನ್ವಯ ದೀಪ ನೀನೀ |
ಜಗತಿಯನು ಪಾಲಿಪುದು ಪೂರ್ವಜ | ರುಗಳ ಮಿಗಿಸಿ  || ೧ ||

ತಾತ ಬಿನ್ನಹ ಖ್ಯಾತರಿಂಗಹ | ಜೈತ್ರ ಯಾತ್ರೆಯ ಗೈದು ಕ್ಷಾತ್ರಿಯ |
ನೀತಿಯಲಿ ಕೈಕೊಂಬೆನವಸರ | ವೇತಕೀಗ   || ೨ ||

ಲೇಸು ಮನುಜ ಸುರಾ ಸುರರು ಮಣಿ | ದಾ ಸದಾಶಿವ ಧನುವ ಮುರಿದವ |
ಗೇಸರದು ಭೂತಳವ ಜೈಸುವು | ದೇ ಸುನೀತ         || ೩ ||

ಲೋಕ ಕಂಟಕರಿಹರನೇಕರ | ನೀಕವನು ಮರ್ದಿಸದೆ ರಾಜ್ಯವ |
ಸ್ವೀಕರಿಸೆ ಬಳಿಕಹುದೆ ಮತ್ಪಿತ | ವ್ಯಾಕುಲವಿದು        || ೪ ||

ಶೀಲವಹುದೆಲೆ ಬಾಲ ತನ್ನಯ | ಬಾಳದಕೆ ಪ್ರತಿಕೂಲವವನಿಯ |
ಪಾಲನೆಯ ಕೈಕೊಂಬುದೀಗಳೆ | ನಾಳೆಯೆನದೆ        || ೫ ||

ಭಾಮಿನಿ

ಎನೆ ಪ್ರಸಾದವೆನುತ್ತ ರಾಘವ |
ಜನಕನಡಿಗಭಿನಮಿಸಿ ತೆರಳಲು |
ಜನಪನಪ್ಪಣೆಯಲಿ ಸುಮಂತ್ರನು ಬರೆಸಿ ಲೇಖನವ ||
ಮುನಿ ವಸಿಷ್ಠಾದ್ಯಖಿಲ ಭೂಸುರ |
ಗಣವ ನೃಪರಾಪ್ತೇಷ್ಟ ಬಂಧುಗ |
ಳನು ಕರೆಸಿ ಶೃಂಗರಿಸಿ ಸಂಭಾರಗಳ ನೆರಹಿದನು     || ೧ ||

ವಾರ್ಧಿಕ್ಯ

ಮೊದಲೆ ಸಿರಿಸುಖನಿಕರದಾಗಾರಮಾ ನಗರ |
ವದರೊಳು ರಘೂಧ್ವಹನ ಪಟ್ಟ ಸಂಘಟ್ಟ ಸಂ |
ಪದವ ಬಣ್ಣಿಸಲಹಿಪಗಳವಲ್ಲ ಕಳವಲ್ಲ ವಿಧಿವಿಷ್ಣು ಸುರಪುರಗಳ ||
ಬದಿಗಿಕ್ಕುತತುಲ ರಂಜನಗಳಿಂ ಜನಗಳಿಂ |
ದಧಿಕತರ ಶಿಲ್ಪ ವೈಚಿತ್ರ್ಯದಿಂ |
ಸದನಂಗಳಖಿಲ ಸೌರಂಭದಿಂ ರಂಭದಿಂ ಕೆದರಿ ಶೋಭಿಸಿತುದಯದಿ     || ೧ ||

ಭಾಮಿನಿ

ನೆರದರಖಿಲಾಪ್ತರುಗಳವನೀ |
ಶ್ವರರು ಭೂಸುರ ಪರಮ ಹಂಸರ |
ನೆರವಿಯಲಿ ಕಿಕ್ಕಿರಿದುದಾಪುರ ಪರಿಜನಾದಿಗಳ ||
ಮೊರೆವ ಮಂಗಲ ವಾದ್ಯರವಕೆ |
ಚ್ಚರಿತು ಮಂಥರೆ ಕಂಡಿದೇನ |
ಚ್ಚರಿಯೆನುತ ಕಾತರದಿ ಪೊರಟಳು ರಾಜಬೀದಿಯಲಿ   || ೧ ||

ರಾಗ ಘಂಟಾರವ ಅಷ್ಟತಾಳ

ಏನಿದೇನೆಂದು | ಕೇಳುತೈತರೆ ಸರ್ವ ||
ರಾನನವ ತಿರು | ಹಿದರಮಂಗಳ | ತಾನಿದೆನುತಲಸಹ್ಯದಿ       || ೧ ||

ಬಳಿಕ ಸೀತೆಯ | ದಾಸಿಯ ಕಂಡಿದ ||
ರೊಳವನರಿವುತ | ಕುಬ್ಜೆ ಬಾಂದಳ | ಕಳಚಿತೆನೆ ಕಳವಳಿಸುತ  || ೨ ||

ಉದಯವಾಯ್ತೆನ | ಗಾಗಿಯೆ ಭರತನ ||
ಸಡಗರಕ್ಕೆಡೆಯೆನಿಸಿ ರವಿ ಶಶಿ | ಪೊಡವಿ ಸಚರಾಚರಗಳು      || ೩ ||

ರಾಮಗೀಯಲು | ಬಿಡೆನೀಗ ಜಗದಭಿ ||
ರಾಮ ಭರತನ | ಸಿರಿಯನಿದ ಸು | ತ್ರಾಮ ತಡೆದಡೆನುತ್ತಲಿ    || ೪ ||

ವಾರ್ಧಿಕ್ಯ

ಬಿಲ್ಲುಬಾಗಿನ ತೊನ್ನು ಚುಕ್ಕೆಗಳ ಕಾಳ್ಮೈಯ್ಯ |
ಪಲ್ಲುದುರಿ ಜೊಲ್ಲಿಳಿವ ಬಚ್ಚು ಬಾಯಿಯ ಸ್ಥವಿರ |
ಟೊಳ್ಳು ಕಾಯದ ಗೂಳಿಹಿಣಿಲಂತೆಸವ ಗೂನ ಕುಳ್ ನಿಲುವ ಮರಡು ಮೊಗದ ||
ಬೆಳ್ವಕ್ಕಿ ತುಪ್ಪುಳೆನೆ ನೆರೆತು ಕೆದರಿದ ನವಿರ |
ಜೊಳ್ಳುಗೆನ್ನೆಯ ಮೆಳ್ಳು ದೃಷ್ಟಿಯ ತ್ರಿವಕ್ರೆ ತಾ |
ನೆಲ್ಲ ವೈರೂಪ್ಯ ಮೈವೆತ್ತು ಬಹುದೆನೆ ತೆರಳಿ ಚೆಲ್ವೆ ಕೈಕೆಯ ಕಂಡಳು     || ೧ ||

ಭಾಮಿನಿ

ಕೆಟ್ಟೆ ಹಾ ಹಾ ಕೈಕೆ ಕಂದೆರೆ |
ಸೃಷ್ಟಿಗುರುಳಿದುದಿಷ್ಟ ಗೋಪುರ |
ಪಟ್ಟವದ ಕೌಸಲ್ಯೆಯಣುಗಂಗೀವರಿಂದಕಟ ||
ಕಷ್ಟವೆನೆ ಭರತಾಂಬೆಯತಿ ಸಂ |
ತುಷ್ಟಿಯಲಿ ಶುಭವಾರ್ತೆಯೆನುತ ವಿ |
ಶಿಷ್ಟ ಮೌಕ್ತಿಕ ಹಾರವಿತ್ತಳು ಪಾರಿತೋಷಕವ || ೧ ||

ರಾಗ ತೋಡಿ ಮಟ್ಟೆತಾಳ

ಸಿಡುಕಿ ಸರವನಿಡುಕಿ ಗೂನಿ | ನುಡಿದಳೆಲೆಗೆ ಜಡಮತಿಯಲಿ ||
ಪಡೆದ ಸುತನ ಮಡುಹಿದೆಯಲ | ದಡಿಗ ರಕ್ಕಸಿ        || ೧ ||

ಕಡುಗಿ ಕೈಕೆ ನುಡಿದಳರಿಯೆ | ಬಡಿದು ಕಳೆವರಸುರೆ ನಿನ್ನ ||
ಮುದುವಿ ಮುಚ್ಚು ಬಾಯ ಭೇದ | ಹುಡುಗರೊಳುಂಟೆ  || ೨ ||

ಧರಣಿ ರಾಮಗಾಗಲವನ | ಚರಣಸೇವೆ | ಭರತಗಹುದು ||
ಮರುಳೆ ನೀ ಕೌಸಲ್ಯೆ ತೊತ್ತೆಂ | ದರಿಯೆ ಯಾ ಕೈಕೆ   || ೩ ||

ಆಗಲೊಳ್ಳಿತಾ ಗರುವನು | ತ್ಯಾಗಶೀಲ ಪಿರಿಯನಿಳೆಯ ||
ಭೋಗವಡೆಯ ಕುಂದೇನೆಮಗೆ | ಗೂಗೆ ತೊಲಗೆಲೆ    || ೪ ||

ಭಾಮಿನಿ

ನೀನರಿಯೆ ಬೇನೆಯಲಿ ಭರತನು |
ತಾನೆ ಮೊದಲುದಿಸಿದನು ಪಟ್ಟದ |
ರಾಣಿಯಲಿ ಸಂಜನಿಸಿ ರಾಘವ ಜ್ಯೇಷ್ಠನಾದನಲ ||
ಆ ನರಾಧಿಪ ಗುರುಸುಮಂತ್ರರ |
ಹೀನ ತಂತ್ರಗಳಿಂದು ನಿನ್ನಯ |
ಸೂನುವನು ಹೊರತಳ್ಳಿರಾಮಂಗೀವರೊಡೆತನವ      || ೧ ||

ರಾಗ ಶಂಕರಾಭರಣ ಏಕತಾಳ

ಆಳಿಯ ದುರ್ನುಡಿಯೊ ವಿಧಿಯ | ಲೀಲೆಯೋ ಲಂಕೇಶಾದಿಗಳ ||
ಭಾಳಲಿಪಿಯೊ ನೃಪತಿಗಿರ್ದ | ಹಾಳು ಶಾಪವೊ        || ೧ ||

ಆಲಿಸಿದಳಾ | ನುಡಿಯ ಕೈಕೆ | ಆಲಿಗಳ್ ಕೆಂಪಡರೆ ತನ್ನ ||
ಆಳಿದನಲಿ ಮುಳಿದು ಮುಂದಿ | ನಾಲೋಚನೆಗಳ      || ೨ ||

ಅರುಹು ತನಗೆ ಹಿತವರನ್ಯ | ರಿರರು ಮತ್ತೀ ಧರೆಯೊಳೆಂದು ||
ಭರದಿ ಬಿಗಿದಪ್ಪಿದಳು ಕೈಕೆ | ಜರಠೆಯಂಗವ || ೩ ||

ಮರೆತೆಯ ಭೂವರನು ನಿನಗೆ | ಮರುಳುಗೊಂಡು ವರಗಳೆರಡ ||
ಕರುಣಿಸಿಹನು ಪರಿಣಯದ | ವರ ಮುಹೂರ್ತದಿ        || ೪ ||

ಭರತಗೊಂದು ವರದಿ ರಾಜ್ಯ | ಸ್ಥಿರತೆಗಿಳೆಯನಗಲಿ ರಘುಜ ||
ತೆರಳಲೀರೇಳ್ ವರುಷ ವಚನ | ವೆರಡಕಡವಿಗೆ        || ೫ ||

ಕಂದ ಪದ್ಯ

ಈ ಪರಿಯುಸುರಲ್ ಮಂಥರೆ | ಭಾಪೆನುತಲಿ ಕೈಕಾರಾಣಿ ತಾನತಿ ಮುದದಿಂ ||
ಓಪನ ಕರೆಸುವೆನೆನುತಲೆ | ಕೋಪಗೃಹವ ನೆರೆ ಪೊಕ್ಕಳ್ ಕಡುಜವದಿಂದಂ        || ೧ ||

ರಾಗ ಸಾಂಗತ್ಯ, ರೂಪಕ ತಾಳ

ಇತ್ತರಾಮನ ಪಟ್ಟ | ದುತ್ಸವಾಂಗಣದಿ ವಿ | ಪ್ರೋತ್ತಮರಖಿಲ ನಾಡಿಗರು ||
ಮತ್ತೆ ಸಾಮಂತ ಸ | ಮಸ್ತಾಪ್ತ ಪರಿಜನ | ಮತ್ತಕಾಶಿನಿಯರೊಪ್ಪಿದರು    || ೧ ||

ನೆರೆದ ಸರ್ವರನುಪ | ಚರಿಸುತರಸ ಮೋಹ | ದರಸಿ ಕೈಕೆಯ ಕಾಣದಲ್ಲಿ ||
ಕರಗಿ ಚಿತ್ತದೊಳೇನೋ | ಸ್ಮರಿಸಿ ಬಂದವಳಂತಃ | ಪುರವ ಕಂಡಡೆ ಶೂನ್ಯವಲ್ಲಿ    || ೨ ||

ತಿರುಗಿ ಕಂಡನು ಕ್ರೋಧಾ | ಗೃಹವ ಪೊಕ್ಕಲ್ಲಲ್ಲಿ ಹರಿದು ಚಲ್ಲಿಹ ತೊಡವುಗಳ ||
ಬರಿ ನೆಲನೊಳು ಮುಸು | ಕಿರಿಸಿ ಕಟ್ಟುಗ್ರದಿಂ | ದರೆ ಬಂಡೆಯೆನೆ ಮಲಗಿಹಳ      || ೩ ||

ಭಾಮಿನಿ

ಪೃಥ್ವಿಪತಿ ಕಾತರಿಸಿ ಕಾಂತೆಯ |
ನೆತ್ತಿ ತನ್ನಂಕದಲಿ ಕುಳ್ಳಿರಿ |
ಸುತ್ತವಳ ತಳ್ಕಿಸುತ ಕಂಬನಿಯೊರಸಿ ಮುದ್ದಿಸುತ ||
ಮತ್ತಧಿಕ ಸಂತೈಸು ತಿರೆಕೆಲ |
ಕೊತ್ತಿ ಮೊಗದಿರುಹಿದಳು ರವಿಕುಲ |
ಸತ್ತಮನು ಮಗುಳೆಂದನುರು ಮೃದು ಮಧುರ ವಚನದಲಿ       || ೧ ||

ರಾಗ ಸಾವೇರಿ ರೂಪಕ ತಾಳ

ಈ ಶೋಕವೇನೆ | ಕೋಕ ನಯನೆ | ಶ್ರೀಕರಾನನೆ ||
ನಾಕರುಣಿಪೆನೇಕೆ ತಿಳುಪೆ | ಲೋಕ ಮೂರನೆ || ಈ ಶೋಕ     || ೧ ||

ಶ್ರೀರಾಮನೆಂತೊ | ಪುರುಷರೊಳು ನೀ | ಕಾಮಿನಿಯರಲಿ ||
ಪ್ರೇಮ ಮೂರ್ತಿ | ಯೈಸೆ ತನಗೀ | ರೇಳ್ಮಹಿಗಳಲಿ || ಈ        || ೨ ||

ಆ ಕಂದ ರಾಮ | ಚಂದ್ರನಾಣೆ | ಸಂದುದೆಂದರಿ ||
ಬಂದ ಬವಣೆ | ಯಂದವರುಹಿ | ಸಿಂದು ಸುಂದರಿ || ಈ          || ೩ ||

ರಾಗ ಶಂಕರಾಭರಣ ತ್ರಿವುಡೆತಾಳ

ಎಂದ ನುಡಿಗಾ ಕೈಕೆಯಿನಿಯನ | ಕಂಧವರನೂ | ತಳ್ಕಸಿ ||
ಹಿಂದಣದ ಸ್ಮರಿಸೆಮ್ಮ ಪ್ರಣಯ ಪ್ರ | ಬಂಧದನುವ     || ೧ ||

ಮರೆತೆಯಾ ವರವೆರಡನಿತ್ತುದ | ಕರುಣಿಸುವೆ ನೀ | ನಾದರೆ ||
ಧರೆಯ ಭರತನಿಗೀವುದಾರ್ಜಿತ | ಪರಿಕರದಲಿ         || ೨ ||

ಅಟ್ಟು ವರ ಮತ್ತೊಂದಕೀರೇಳ್ | ವತ್ಸರಾಮುನಿವೇಷದಿ ||
ಪಟ್ಟದರಸಿಯ ಸುತನ ಗಹನಕೆ | ಮೊಟ್ಟ ಮೊದಲು     || ೩ ||

ಭಾಮಿನಿ

ಆ ಲತಾಂಗಿಯ ಕಠಿಣ ವಚನ ಕ |
ರಾಳ ವಿಷವಾವರಿಸುತವನೀ |
ಪಾಲನಖಿಲೇಂದ್ರಿಯದೊಳುರಿಡಾವರಿಸಿ ಕಾತರಿಸಿ ||
ಮೇಲೆ ವಶವಳಿದಶನಿ ಹೊಯ್ಲಿಗೆ |
ಬೀಳ್ವ ಹೆಮ್ಮರನಂತೆ ಮೂರ್ಛೆಯ |
ತಾಳಿ ದೊಪ್ಪನೆ ಕೆಡೆವುತೊಯ್ಯನೆ ತಿಳಿದು ಹಾಯೆನುತ         || ೧ ||

ಕಂದ ಪದ್ಯ

ಆಳಿಗಾಲದೊಳಮೃತ ಹಲಾಹಲ |
ಸಲೆ ಪಥ್ಯಮಪಥ್ಯಮಾಪ್ತರಹಿತರ್ ಜಗದೊಳ್ ||
ಚಲುವದು ವಿಕೃತ ಕುರೂಪಂ |
ತಿಳಿಯಲ್ ನಾರಿ ಮಾರಿಯಾದಳಿಂದೆನಗಕಟ || ೨ ||

ರಾಗ ನೀಲಾಂಬರಿ ಆದಿತಾಳ

ಚಿಂಣರಿಲ್ಲ | ದನ್ವಯಾ ವಿ | ವರ್ಣವಾಗೆ ಮಖದಿ ||
ಸ್ವರ್ಣತೇಜ | ರುದಿಸೆ ನಾಲ್ವ | ರನ್ನು ಕೂಡಿ ಸುಖದಿ   || ೧ ||

ಬಾಳಲೆನ್ನ | ಹಾಳು ಪುಣ್ಯ | ಕೋಳುಹೋಯ್ತು ಮುನ್ನ ||
ಖೂಳನೆಂತಾ | ನಗಲಿ ಸುತನ | ತಾಳಲಿ ದುರ್ವ್ಯಸನ || ೨ ||

ಮಲಿನವಾಯ್ತೀ | ಕುಲದ ಖ್ಯಾತಿ | ಖಲನಾ ಜನ್ಮವೆತ್ತಿ ||
ಇಳೆಗೆ ಭಾರ | ನೆಂದು ಹಲುಬೆ | ಲಲನೆಗಾಯ್ತು ಭೀತಿ || ೩ ||

ರಾಗ ಕಮಾಚ್ ರೂಪಕತಾಳ

ತರಹರಿಸುತಲೆರಗಿ ನುಡಿದ | ಳರಸ ನಿನ್ನಯ ||
ಕರುಣವೊಂದೆ ಸಾಕು ವರವ | ದಿರಲಿ ನಿರ್ಣಯ        || ೧ ||

ಮರುಕಬೇಡವೆನುತ ಕರವ | ಪಿಡಿಯೆ ಸ್ನೇಹದಿ ||
ಅರಸಗಾಯ್ತು ಮೂದಲಿಕೆಯ | ತೆರದೊಳಾನುಡಿ       || ೨ ||

ನಿಲ್ಲದಿದಿರು ತೊಲಗು ಪಾಪಿ | ಖುಲ್ಲೆ ನಿನ್ನಯ ||
ಚಲ್ವಿಗೊಲಿದು ಕೆಟ್ಟೆನಲ್ಲ | ದಿಲ್ಲ ದುರ್ಣಯ     || ೩ ||

ಮಿರುಪ ಹಾರವೆನುತ ಕೊರಳೊ | ಳುರುಳುಗಣ್ಣಿಯ ||
ಧರಿಸಿದಂತೆ ಸುಮದ ಬೆಮೆಯೊಳ್ | ಶಿರದೊಳಹಿಣಿಯ         || ೪ ||

ಮುಡಿವವೋಲು ಮಂಚವೆನುತ | ಮಡುವ ದುಮುಕುವ ||
ಜಡರ ಗತಿಗೆ ನಡೆದೆ ಕೈವಿಡಿದು ಕುವಪುವ    || ೫ ||

ಭಾಮಿನಿ

ಖೋಡಿ ರಕ್ಕಸಿ ಮೊದಲು ವರಗಳ |
ಬೇಡಿ ಬೇಡೆಂದುಸುರಿ ಕೀರ‍್ತಿಯ |
ನೀಡಿರಿದು ವೋಡಿಸುವೆಯಾ ರೌರವಕೆ ಪಿತೃಗಳನು ||
ಕಾಡಿಗಟ್ಟುವ ನೆವದಿ ರಘುಜನ |
ದೂಡುತಿಹೆ ಮಾಂಗಲ್ಯವನು ಕುಲ |
ಗೇಡಿ ನಿನ್ನಿಂದಾಯ್ತ ಹರಿದರಿಯೆನಗೆ ಕೆಲ ಬಲದಿ       || ೧ ||