ಕಂದ ಪದ್ಯ
ನೀತಿಯಿದಲ್ಲೆಂದಖಿಲರ್ |
ನಾಥನ ತಿಳಿಹಿದರಾಂ ಬೇಡಿದೆ ಕಾಲ್ವಿಡಿದನಿಶಂ ||
ಮಾತದ ಮೀರ್ದನೆನುತ್ತ ಭಿ |
ಘಾತಕ್ಕಿಂತಿದಿರಿಪರೇಂ ಭ್ರಾತೃಘಾತಕಿ ತೊಲಗೈ || ೧ ||
ಭಾಮಿನಿ
ವಾಲಿಸುತನದನಾಲಿಸುತ ಹೆಣ್ |
ಮೂಳಿಗೆನಿತಧಟೆನುತಲಾ ನೀ |
ಲಾಳಕಿಯನಡಹಾಯ್ದು ಕೈಗೊಡಲುಡೆಯ ಸೆರಗಿಂಗೆ ||
ಬಾಲೆಯದನೀಕ್ಷಿಸುತ ರೋಷಾ |
ಭೀಳ ನಯನದಿ ಕಿಡಿಯಿಡುತ ಫಡ |
ಖೂಳ ತೊಲಗೆಂದುಲಿದು ಝಳಪಿಸಲಸಿಯನಾಕ್ಷಣದಿ || ೧ ||
ವಾರ್ಧಿಕ್ಯ
ನಾರಿಯೆಂ ಶತಕೋಟಿ ಸೂರ್ಯ ಕಿರಣಗಳೊ ಮದ |
ನಾರಿಯದ್ಭುತಲಯದ ನಿಟಿಲ ವನ್ಹಿಯೊ ತಿಳಿವ |
ನಾರಿಲ್ಲವೆನೆ ಜ್ವಲಿಸುತಾ ಹರಿ ಸುದರ್ಶನಂ ನಾರಿಯಂ ಬೆಂಬಲಿಸಿತು ||
ನಾರಿಗಳ ಶಿರವ ದಿಗ್ಬಲಿ ಹೊಡೆದು ತ್ರೈ ಜಗದಿ |
ನಾರಿಯೆನಿಸುವೆ ಪತಿಗೆನಲು ಪರಿಕಿಸುತ ಧೈರ್ಯ |
ನಾರಿ ಕಡಿದೆಣ್ ದೆಸೆಗೆ ಕಾಲ್ದೆಗೆದರಹಿತರಿನ್ನಾರಿಗಳ ಮೀರೆ ವಿಧಿಯ || ೧ ||
ಭಾಮಿನಿ
ಹೊಳೆವ ಸೂರ್ಯ ಸಹಸ್ರ ದೀಪ್ತಿಯ |
ಝಳಕೆ ದೆಸೆಗೆಟ್ಟಾದಶಾನನ |
ಘಳಿಲನೆದ್ದಡಿಗೆರಗಿ ನಿಂದನು ತಾಯೆ ಸಲಹೆನುತ ||
ಕೆಲಕೆ ಸರಿದಭಿನಮಿಸಿ ದುಃಖದೊ |
ಳಿಳಿವ ಕಂಬನಿಯಿಂದ ಕಾಂತನ |
ಗಳವ ಬಿಗಿವಡೆದಪ್ಪಿ ನುಡಿದಳು ಮಯನ ಸುತೆಯಳುತ || ೧ ||
ರಾಗ ಶಂಕರಾಭರಣ ಏಕತಾಳ
ಹವನವಳಿದು ಶಕ್ತಿಯೊಲುಮೆ | ಸವೆದುದಯ್ಯೋ ವಿಧಿಯ ದುಷ್ಟ ||
ಹವಣವೆಂತೊ ನಿಲಿಸೀ ಸಮರ | ಸವನವ ಕಾಂತ || ೧ ||
ನಿಲಿಸಲುಂಟೆ ಧುರವ ಜಗದಿ | ಹಳಿವದೊಂದೆ ಸಾಕು ಕಳವಿ ||
ನಳವಿಗಂಜಿದಪಯಶಂಗ | ಳೊಳಿತೇನೆ ಕಾಂತೆ || ೨ ||
ಕದ್ದ ಫಲಕನರ್ಘ ಬಲವಿ ದಗ್ಧವಾಯ್ತಿನ್ನಾದರವಳ ||
ಬದ್ಧ ವೀರಗಿತ್ತು ಕುಲವ | ನುದ್ಧರಿಸು ಕಾಂತ || ೩ ||
ಬದ್ಧವೀರನೊಬ್ಬನೇ ಪ್ರ | ಸಿದ್ಧವೆನ್ನಾತ್ಮಜರ ತರಿದ ||
ಕ್ಷುದ್ರರಸುವ ಗೊಳದೆ ಫಲವೇ | ನಿರ್ದು ನಾ ಕಾಂತೆ || ೪ ||
ಸಂದ ಸುತರೈತಹರೇ ನಿನ್ನ | ಕಂಡು ಬದುಕಬಹುದೆಂಬಾಸೆ ||
ಕೊಂದು ಕೊಲಿಸಿ ಕೊಂಬುದೀಗ ಚಂದವೇಕಾಂತ || ೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೊಲುವನಾವವನೆಲೆಗೆ ಲೋಕವ | ಗೆಲಿದು ಬೊಮ್ಮನ ವರದಿ ರಜತಾ |
ಚಲವ ಬೆರಳಿಂದೆತ್ತಿದಗೆ ನರ | ಹುಳುಗಳಿದಿರೆ || ೧ ||
ನರನೆ ರಾಘವನಿಳೆಯ ಭಾರವ | ತರಿಯಲವತರಿಸಿರುವ ಶ್ರೀಹರಿ |
ಕರವ ಮುಗಿವೆನು ಕಾಂತ ಬಿಡು ಹಗೆ | ಸರಸವಲ್ಲ || ೨ ||
ಲೋಕ ಮಾತೆಯನಿತ್ತು ರಾಮನ | ಶ್ರೀಕರಾಂಘ್ರಿಯ ಸೇರಲಿಹ ಪರ |
ಸೌಖ್ಯವಹುದೆಂದೊಂದಿಸಿದಳ | ತ್ಯಾಕುಲದಲಿ || ೩ ||
ಭಾಮಿನಿ
ಬಲ್ಲೆ ರಘುವರನಿರವ ಸಾಮವ |
ನೊಲ್ಲೆನೆಂದಿಗು ಮಣಿದು ಬದುಕುವ |
ನಲ್ಲೆ ಸೆಣಸಿದು ಹಿಂಗುವವನಲ್ಲಿಂದಿನಾಹವದಿ ||
ಮಲ್ಲ ಸಹಸದಿ ಸೆರೆವಿಡಿದು ರಘು |
ವಲ್ಲಭನನವನರಸಿಗೊಪ್ಪಿಸಿ |
ಸಲ್ಲಲಿತ ವೈಭವದಿ ಬೀಳ್ಕೊಡುವೆನು ವಿಮಾನದಲಿ || ೧ ||
ಕಂದ ಪದ್ಯ
ಛಲವಂ ಸಾಧಿಪೆ ನಳಿಯಲ್ |
ತಳೆವೆಂ ಶಾಶ್ವತ ದೈವ ಸಾಮಿಪ್ಯ ವನುಂ |
ಉಳಿದವರಾರ್ ಮಿತ್ತುವ ನೀ |
ತಿಳಿದಿಂತಳುವರೆ ವೀರರಮಣಿ ಸೈರಿಪುದಳಲಂ || ೧ ||
ವಾರ್ಧಿಕ್ಯ
ಕುರುಳ ನೇವರಿಸಿ ಕಂಬನಿಯೊರಸಿ ಕಾಮಿನಿಯ |
ತೆರಳಿಸಿ ನಿಜಾಲಯಕೆ ಹರಿಯ ಧುರಕೆನುತ ಕಾ |
ದಿರಿಸಿದುರು ಬಲ ಶಸ್ತ್ರವೆರೆದು ಘನ ಸಾಹಸವ ಮೆರೆದು ಸಿರಿವರನ ರಣದಿ ||
ಸೆರೆವಿಡಿವೆನೆನುತಲುರವಣಿಸಿ ರಥವೇರ್ದಸುರ |
ರರಸ ಪೊರಮಡಲವನಿ ಕಂಪಿಸಿತು ಕಪಿಕಟಕ |
ಮರಣ ಭಯದಿಂದೋಡುತಿರೆ ರಘೂದ್ವಹ ಚಾಪ ಶರವಾಂತು ರಿಪುದಹನಕೆ || ೧ ||
ಭಾಮಿನಿ
ತೆರಳುತಿರಲರಿತನಿಮಿಷಾಧಿಪ |
ಕರೆದು ಮಾತಲಿಯೊಡನೆ ಯಮ್ಮಯ |
ವರರಥವ ಮೇಳವಿಸಿ ಸಹಕರಿಸೆನೆ ರಘೂತ್ತಮನ ||
ಹೊರೆಗೆ ನಡೆತಂದೆರಗಿ ಸೂಚಿಸೆ |
ಕರವ ಪಿಡಿದಸುರಾರಿ ಸ್ಯಂದನ |
ವರವನೇರ್ದೊಡನಸುರಗೆಂದನು ಗಜರಿ ಘರ್ಜಿಸುತ || ೧ ||
ರಾಗ ಶಂಕರಾಭರಣ ಮಟ್ಟೆತಾಳ
ಖುಲ್ಲ ದನುಜ ನಿಲ್ಲು ಕಳವಿ | ನಲ್ಲಿ ಸತಿಯ ತಂದ ದುರುಳ |
ಚಲ್ಲ ಬಡಿವೆ ಕ್ಷಣದೊಳೆಂದ | ಫುಲ್ಲಲೋಚನ || ೧ ||
ಕಳವಿನಲ್ಲಿ ಪ್ಲವಗ ಪತಿಯ | ಗೆಲಿದನ್ಯಾರು ಸತಿಯ ಮೂಗ |
ನಿಳುಹಿದಧಮ ನಿಲು ನಿಲೆಂದ | ಕಲಿ ದಶಾನನ || ೨ ||
ಓಡಿ ಬಲಿಯ ಚರನ ನೋಡಿ | ವೇದವತಿಯ ಶಾಪಗೊಂಡ |
ಹೇಡಿ ಕಾರ್ತವೀರ್ಯ ಸೆರೆಗೆ | ದೂಡಿಸಿದನಲ || ೩ ||
ದಂಡ ನಡೆಸುತಖಿಲ ಬ್ರ | ಹ್ಮಾಂಡವನ್ನು ಗೆಲಿದ ಸತ್ವ |
ದಂದವರಿಯದಾದೆ ಮನುಜ | ಮಂದ ಮತಿಯಲ || ೪ ||
ಬಲ್ಲೆ ಮಿಥಿಲೆಗೈದಿ ಹರನ | ಬಿಲ್ಲಿನಡಿಯೊಳುರುಳಿದುದ ಸಾ |
ಸಲ್ಲಲಿತದಿ ಮುರಿದು ಗೆಲಿದೆ | ಫುಲ್ಲನೇತ್ರೆಯ || ೫ ||
ರಾಗ ಭೈರವಿ ಅಷ್ಟತಾಳ
ಮೃಡನಾವಾಸದ ಗಿರಿಯ | ನೆಗಹಿ ತೋಷ | ಪಡಿಸಿ ತ್ರಿಪುರ ವೈರಿಯ ||
ಪಡೆದೆ ಬೇಕಾದ ಸಂ | ಪದವ ಕಾರ್ಮುಕ ತನ | ಗಿದಿರೆ ನೀನರಿಯೆಯಯ್ಯ || ೧ ||
ಅರಿತಿಹೆವೈ ಸದ್ಯಕೆ | ಪರನಾರಿ ತ | ಸ್ಕರನೆಂಬ ಪರಿಯ ಜೋಕೆ ||
ತರುಣಿಯನಿತ್ತೆನ್ನ | ಚರಣಕೆರಗು ನಿನ್ನ | ಹರಣವನುಳುಹಲಿಕೆ || ೨ ||
ಮಾನಿನಿ ಮಣಿಗಳನು | ಭಂಗಿಸಲಪ್ಪ | ಹಾನಿಯೇನೆಂಬುದನು ||
ನೀನರಿವಡೆ ತಂದೆ | ನಾ ನಾರಿ ನಿನಗೇಕೆ | ಕಾನನ ತಿರುಗಲಿಕೆ || ೩ ||
ರಾಗ ಮಾರವಿ ಏಕತಾಳ
ಅರರೆ ಖಳಾಧಮ | ಪರಿಕಿಸು ವನಸಂ | ಚರರೆಮ್ಮಯ ಬಲುಹ ||
ಶಿರವರಿದವನಿಯ | ಹೊರೆಯ ಕಳೆವೆ ಫಢ | ದುರುಳನೆನುತ ಶರವ || ೧ ||
ತೂರಲದರ ಪುಡಿ | ಹಾರಿಸಿ ದಶಗಳ | ಭೋರಿಡುತಾಗ್ರಹದಿ ||
ಧಾರಿಣಿ ಕಂಪಿಸೆ | ಹೇರಿದನುರು ಶರ | ವಾರವ ವಿಗ್ರಹದಿ || ೨ ||
ಖಂಡಿಸಿ ಸಮರೋ | ದ್ದಂಡ ರಘೂದ್ವಹ | ತುಂಡಿಸೆ ಚಾಪವನು ||
ಕೊಂಡನ್ಯವ ಮುಂ | ಕೊಂಡು ದನುಜ ಶರ | ವೃಂದದಿ ಮುಸುಕಿದನು || ೩ ||
ವಾರ್ಧಿಕ್ಯ
ದಾನವಾಧಿಪನಸಮ ಬಾಣಕಿತಿ ಮಿತಿಯಲ್ಲ |
ಚೂರ್ಣಿಸುವ ರಘು ಪತಿಯ ತ್ರಾಣಕೆಣೆ ತೊಣೆಯಿಲ್ಲ |
ಚಾಣರವರುರು ಶಕ್ತಿ ಸೋನೆಯಿಂದೆಚ್ಚಾಡ ಲೇನೆಂಬೆನದ್ಭುತವನು ||
ಕಾಣದಾಯ್ತವನಿ ನಭ ವೇಣ್ದೆಸೆಯೊಳುರಿ ಗೆದರಿ |
ಭಾನು ಪಥಕೆಡರಾಯ್ತು ಕ್ಷೋಣಿಯೀರೇಳ್ಕಮರಿ |
ಪ್ರಾಣಕುಬ್ಬಸವಾದುದೇನು ಸತ್ವಾಧಿಕನೊ ಕೌಣಪೇಂದ್ರ ಧರೆಯೊಳು || ೧ ||
ಭಾಮಿನಿ
ಧರೆಯ ಮರುಕವ ಕಂಡು ಜಾನಕಿ |
ಯರಸನುರೆ ದಿವ್ಯಾಸ್ತ್ರದಿಂದಶ |
ಶಿರವನೊಮ್ಮೆಗೆ ಕಡಿದನರಿತನಿಮಿಷರು ಘೇಯೆನಲು ||
ಮರಳಿ ಚಿಗಿಯುತ್ತಿರ್ದವದನರಿ |
ದರಿದು ಮೈಸಿರಿಗುಂದಿ ಮನದೊಳು |
ಮರುಗಿದನು ರಘುನಾಥನಚ್ಚರಿಯೇನಿದೆಂದೆನುತ || ೧ ||
ವಾರ್ಧಿಕ್ಯ
ಏನಿದದ್ಭುತವರಿದಡಾನಿವನ ಶಿರವರಿದ |
ಡಾನುವನಹಾ ಚಿಗುರಿ ದಾನವನ ಕೊಲುವ ಗುರಿ |
ಕ್ಷೀಣವಾಯ್ತಮಮ ನುಡಿದೇನು ತಾನಿತ್ತ ನುಡಿ ಹಾನಿಯಾಯ್ತು ಕಟ ಜಗದಿ ||
ಭಾನು ಕುಲಜರ ಕೀರ್ತಿ ಮ್ಲಾನವಾದುದು ಪೂರ್ತಿ |
ತಾನುದಿಸಿ ದಿಟವಲಾ ಮಾನಿನಿಯ ಬಿಡಿಸೆ ಬಲ |
ಹೀನನಾದೆನೆನುತ್ತಲಾ ನರೇಂದ್ರಂ ಪೊತ್ತ ಮೌನದಿಂದಿರೆ ಕಾಣುತ || ೧ ||
ರಾಗ ವಸಂತ ತೋಡಿ ಅಷ್ಟತಾಳ
ಏನೋ ರಾಘವ | ದೀನ ಮುದ್ರೆಗಳು | ತ್ರಾಣಿಯರರೆ ಮಗು | ಳೇನು ಮೌನಗಳು || ಪಲ್ಲ ||
ದೇವನೆನುತ ನಂಬಿ | ದಾ ವಿಭೀಷಣಗಿಂಬಿ | ನ್ನಾವ ಕಡೆಯೊಳುಂಟು |
ಸಾವು ಸನಿಹ ಬಂತು || ಏನೊ || ೧ ||
ರಣದೊಳೆನ್ನನುಜೈಸಿ | ವನಿತೆಯ | ಮೇಳೈಸಿ | ಮನೆಯ ಸೇರುವ ಭ್ರಾಂತು |
ಕನಸಾಗಿ ಹೋಯ್ತು || ಏನೊ || ೨ ||
ಹರನ ಧನುವನೆತ್ತಿ | ಮುರಿದ ಮಹಾಶಕ್ತಿ | ಮೆರೆಸಬಾರದೆ ಮಿಗೆ |
ಮರುಕವೇನಿದು ತೆಗೆ || ಏನೊ || ೩ ||
ಭಾಮಿನಿ
ಭರಿತ ಗರ್ವದೊಳಿಂತು ರಾವಣ |
ಜರೆಯೆ ಕೆಂಗಿಡಿಗೆದರಿ ರಾಘವ |
ಕೆರಳಿ ತುಡುಕಲು ಧನುವ ಪರಿಕಿಸುತಲಿ ವಿಭೀಷಣನು ||
ದುರುಳನೆದೆಯೊಳಗಿದೆ ಸುಧಾರಸ ಭರದಿ |
ತೆಗೆಯೆನೆ ವಿಲಯ ವನ್ಹಿಯ |
ಶರವನುರಕಿಡಲಸುರ ಮೈಮರೆತಾಗ ಚಿನ್ಮಯನ || ೧ ||
ವಾರ್ಧಿಕ
ಕಂಡನಸುರೇಂದ್ರನಖಿಲಾಂಡ ನಾಯಕನ ವಪು |
ಮಂಡಲದಿ ಭೂವ್ಯೋಮ ಪಾತಾಳ ಲೋಕ ಮಾ |
ಖಂಡಲಾದಿತ್ಯ ವಸು ರುದ್ರ ಮರುದಮರ ಗಣ ಸಿಂಧು ನಭ ದಶದಿಶಗಳ ||
ಸಂದ ಖಳ ನರ ಭುಜಗ ಸಂದಣಿಗಳಮಿತ ಋಷಿ |
ಮಂಡಳಿಯ ಗ್ರಹ ತಾರ ನಿವಹ ತಿರ್ಯಗ್ಜಂತು |
ವೃಂದನದಕಾಂತಾರ ಗಿರಿ ನಿಕರ ಸಹಿತನ್ಯಮೊಂದಿಲ್ಲದಾ ವಿಶ್ವವ || ೧ ||
ರಾಗ ಮಧು ಮಾಧವಿ ತ್ರಿವುಡೆತಾಳ
ಕಂಡು ಪುಳಕೋತ್ಸವದಿ ರಘುವರ | ಗೆಂದನೊಲಿದೆಯ ದೇವ ತನ್ನಯ ||
ಗಂಡುತನಕಿದೆ ಸಾಕು ಫಲಿಸಿತು | ಕೊಂಡ ಕಾರ್ಯ ಸರಾಗದಿ || ಕಂಡ ತೆರದಿ || ೧ ||
ಮಹಿಮ ತವ ಚರಣಾಗ್ರಹಾನು | ಗೃಹವಭಿನ್ನಗಳದರೊಳಾ ಸಂ ||
ನ್ನಿಹಿತ ಪಥವೆನಿಪತಿ ವಿರೋಧವ | ಗ್ರಹಿಸಿ ಹಗಲಿರುಳೆನ್ನದೆ || ಅರಸುತಿರ್ದೆ || ೨ ||
ವಂಚಿಸಿದೆ ಬಲುತೆರದೊಳರಸಿ ಪ | ಳಂಚಿಸಿದೆ ನಡಿಗಡಿಗೆ ತಿಳಿದರ ||
ಸಂಚೆಗಮನೆಯ ನೆವದಿ ದರುಶನ | ಸಂಚಿತವಿದಾಯ್ತಿಂದಿಗೆ | ಪುಣ್ಯವೊದಗೆ || ೩ ||
ಸಿರಿ ಪದಾಬ್ಜಕೆ ಹರಣಗಾಣಿಕೆ | ಇರಿಸಿಹೆನು ಕೈಕೊಂಡು ಬಿಡದು ||
ದ್ಧರಿಸಿ ಮುನ್ನಿನ ಚರಣ ಸೇವೆಯ | ಹರಿಯೆ ನೀ ಕೃಪೆಗೈವುದು || ಶರಣಗೊಲಿದು || ೪ ||
ತನುವಿನಾಶೆಗಳಿಲ್ಲ ಮಾತೆಯ | ಮಣಿದು ಬಿಡವವನಲ್ಲ ನಿಶ್ಚಯ ||
ರಣಕೆ ಬೆದರುವುದಿಲ್ಲೆನುತ್ತುರು | ಕಣೆಯ ವೃಷ್ಟಿಯಗರೆದನು || ದನುಜ ವರನು || ೫ ||
ರಾಗ ಕಾಂಬೋಧಿ ಝಂಪೆತಾಳ
ಕಡಿವುತದ ನೃಪತಿ ಕುಂ | ಭಜದತ್ತ ವಿಧಿ ವಿಷ್ಣು | ಮೃಡ ಶಕ್ತಿ ಶರವ ಸಿಂಜಿನಿಗೆ ||
ಇಡಲು ತ್ರೈಜಗ ನಡುಗಿ | ತಡಿಗಡಿಗೆ ಬಲವೆರಡು | ಬೆದರಿ ಕಣ್ಮುಚ್ಚಿತರೆ ಘಳಿಗೆ || ೧ ||
ಪರಿಕಿಸುತಲಸುರ ಪ್ರತಿ | ಶರವಿಡದೆ ದೃಢಮನದಿ | ಹರಿಯ ಧ್ಯಾನಿಸುತ ನಿಂದಿರಲು ||
ಭರದಿ ಕಡಿವಡೆದು ಗರ | ಗರನೆ ಬಾಂದಳ ಶಿರ | ತಿರುಗಿ ರಘುಪತಿಯ ಚರಣದೊಳು || ೨ ||
ಮಾಲೋಲ ಶರಣೆಂದು | ಬೀಳಲದ ನೆಗಹಿ ಕರು | ಣಾಳು ತಕ್ಕೈಸಿ ಧರೆಗಿಡಲು ||
ಪೇಳಲೇನಾತ್ಮ ಸಿರಿ | ಯಾಳಿದನೊಳೈಕ್ಯತೆಯ | ತಾಳಿತನಿಮಿಷರು ಜಯವೆನಲು || ೩ ||
ಕಂಡು ಮೇಲ್ವಾಯ್ವ ಖಳ | ಸಂದಣಿಯನಮಿತ ಶರ | ವೃಂದದಿಂ ತರಿದ ಭೂಪತಿಯು ||
ಸಂದರಾಹವದಿ ತೊಂ | ಬತ್ತು ಕೋಟಿ ನಿಶಾಟ | ರಿಂದಿಗೊಳಿತಾಯ್ತು ವಸುಮತಿಯು || ೪ ||
ಮರುಗುತಿದ ತೆರಳಿ ಚರ | ರರುಹೆ ಹಾಯೆಂದು ಮಯ | ತರಳೆ ಹಂಮೈಸಿ ಚೇತರಿಸಿ ||
ತರಹರಿಸು ತೈದಿ ನಿಜ | ಹರಣದೊಲ್ಲಭನ ಶವ | ಕೆರಗಿ ತೆಗೆದಪ್ಪಿ ಕಾತರಿಸಿ || ೫ ||
ರಾಗ ಸಾವೇರಿ ಆದಿತಾಳ
ಏನಿದು ಮುನಿಸು ಕಾಂತ | ಮಾತಾಡು ಪ್ರಿಯ | ಮಾನಿನಿಯೊಳು ವಿಕ್ರಾಂತ ||
ನೀನಾಗಿ ಸಮರದೊಳು | ರಘುಪತಿಗಿತ್ತೆ | ಪ್ರಾಣವನಿಂದಿನೊಳು || ೧ ||
ವರ ಭುಜ ಬಲ ವೀರ್ಯದಿ | ನಿನ್ನನು ಪೋಲು | ವರಕಾಣೆ ಮೂರ್ಲೋಕದಿ ||
ಸುರನರನುತ ಧೀಮಂತ | ತವ ಕಾಂತೆಗಿಂತ | ಪರದೇಶಿತನವೆ ಕಾಂತ || ೨ ||
ಪರನಾರಿಗಳುಪಿದಡೆ ಇಂತಪ್ಪುದೆಂದು | ಧರಣಿಗಾದರ್ಶನಾದೆ ||
ಅರಿತು ಸೌಖ್ಯದಿ ಬಾಳಲಿ | ಜಗವೆಂದು ಲಕ್ಷ್ಮೀ | ವರನ ಪಾದದೊಳುರುಳಿ || ೩ ||
ಭಾಮಿನಿ
ದೇವ ನೀನೀಜಗಕೆ ಭಕ್ತರ |
ಭಾವವರಿತೊಲಿದುದ್ಧರಿಪ ಕರು |
ಣಾವನಧಿ ಸತಿಗೀಯೊ ಕಾದಲನೊಡನೆ ಸದ್ಗತಿಯ ||
ಜೀವ ತಾನೈದಿಹನು ಮಿಗೆ ನೀ |
ರ್ಜೀವವೀಜಡ ತನುವ ಜತೆಯಲಿ |
ಪಾವಕಂಗರ್ಪಿಸುವೆನಪ್ಪಣೆಯೀವುದೆನೆ ಕೇಳಿ || ೪ ||
ರಾಗ ಸವ್ವಾ ಏಕತಾಳ
ಭಲಾ ಭಲಾ ನಿ | ಶ್ಚಲ ಸುವ್ರತೆ ನಿನ | ಗೊಲಿದುದು ಮನ್ಮನ ದಿಟವಮ್ಮ ||
ಇಳೆಯ ಮನುಜರಘ | ಗಳೆವುದು ಭಕ್ತಿಗ | ಳಲಿ ಭಜಿಸಲು ಪತಿವ್ರತೆ ನಿನ್ನ || ೧ ||
ಶ್ರುತಿಸಮ್ಮತವತಿ | ಹಿತವವನಿಗೆ ಪತಿ | ಜತೆಯಲಿ ಸತಿಪೊಂದಲು ಚಿತೆಯ ||
ಚ್ಯುತಿಯಿಲ್ಲದ ಸ | ದ್ಗತಿಯಿತ್ತಿಹೆ ಮಹಾ | ಸತಿ ಬಿಡು ಬಿಡು ಮನಸಿನ ವ್ಯಥೆಯ || ೨ ||
ಕಾದಲನೊಡನೆ ವಿ | ನೋದದಿ ನಡೆಮನ | ವಾದ ತೆರದಿ ಸದ್ಗುಣ ಶೀಲೆ ||
ಬೇಡು ವರವ ದಯ | ಮಾಡುವೆನೆನಲುರ | ಮಾಧವನಡಿಗೆಡೆದಾ ಬಾಲೆ || ೩ ||
ಭಾಮಿನಿ
ಏ ಸುಮಂಗಲ ಚರಿತ ಮಗುಳಿ |
ನ್ನೇಸು ದೋಷಿಗಳುದಿಸಿದರೆಯು ವಿ |
ಭೀಷಣನ ತೆರ ಸ್ವಜನದ್ರೋಹಿಗಳೊಗೆಯದಿರಲಿಳೆಗೆ ||
ಆಸೆ ಬೇರೊಂದಿಲ್ಲ ತನ್ನ ವಿ |
ಲಾಸದಖಿಲ ಸುವಸ್ತು ನಿಚಯವು |
ಮೀಸಲವನಿಜೆಗದನು ಸ್ವೀಕರಿಸುವುದು ಮಮತೆಯಲಿ || ೧ ||
ವಾರ್ಧಿಕ್ಯ
ಎನುತ ಭಕ್ತಿಯೊಳೆರಗಲಸ್ತೆನುತಲಾ ಸತಿಯ |
ಚಿನುಮಯಂ ಬೀಳ್ಕೊಟ್ಟೊಡೈದಿ ಪತಿಯೊಡನೆ ಚಿತಿ |
ಯನು ಪೊಕ್ಕು ಹರುಷ ಮಿಗಿಲಮಲ ಸಿರಿ ಸಾಯುಜ್ಯವನು ಪೊಂದಲವಳಿತ್ತಲು ||
ಜನಕಜೆಯ ಬಂಧನವ ಬಿಡಿಸಿ ಕರೆತರೆ ವಿಭೀ |
ಷಣ ರಾಮಚಂದ್ರನಪ್ಪೆಣೆಯಾಂತು ಭೂಸುತೆಗೆ |
ಮಣಿದು ವಾರ್ತೆಯ ಬೆಸಸಲತಿ ಹರುಷ ಭಾರದಿಂದಿನಿಯನೆಡೆಗೈತಂದಳು || ೧ ||
ಭಾಮಿನಿ
ಪತಿಯ ಕಂಡತ್ಯಧಿಕ ಹರ್ಷಾ |
ತ್ಪತಿತ ಬಾಷ್ಪದಿ ತೊಳೆವುತಂಗವ |
ಪತಿಕರಿಸಿ ಪೊರೆಯೆಂದಳಂಗನೆಯಡಿಗೆ ಮುಡಿಯಿರಿಸಿ ||
ಪತಿತ ಪಾವನ ಸರಿದು ಸತಿ ಖಳ |
ಪತಿಯ ಬಂದಿಯೊಳಿರ್ದು ಸದ್ಯಕೆ |
ಪತಿತಳಹೆ ಚಿತಿಗಿಳಿಯದಾಂ ಪರಿಗ್ರಹಿಸಲರಿದೆಂದ || ೧ ||
ರಾಗ ಕೊರವಿ ಆದಿತಾಳ
ಪೇರ್ಮೆಯಿದುವೆ ಸ | ದ್ಧರ್ಮಕೆ ಜಗದೊಳು | ಕೂರ್ಮೆಯೆಂಬುದಿನಿತಿಲ್ಲ ||
ಧರ್ಮಶಾಸ್ತಿ ಕೃತ | ಕರ್ಮಕೆನುತ ಮಿಗೆ | ನಿರ್ಮಿಸೆ ಚಿತೆಯ ರಮಾನಲ್ಲ || ೧ ||
ಕಾಣುತಲಾ ವನ | ಜಾನನೆ ಪತಿಪದ | ಕಾನಿಸಿ ಮುಡಿಯ ಮುಗಿದು ಕೈಯ್ಯ ||
ಪ್ರಾಣದೊಡೆಯ ತವ | ಮಾನಿನಿಯೊಳವ ನಿ | ಧಾನಿಸಲನಲ ಸೋಂಕಲು ಮೈಯ್ಯ || ೨ ||
ಧಾರ್ಮಿಕ ತವ ಸಹ | ಧರ್ಮಿಣಿಯೇ ದೃಢ | ಕರ್ಮಯೋಗಿ ಜನಕಾತ್ಮಜೆಯೆ ||
ನಿರ್ಮಲತೆಯ ಜಗ | ಸಮ್ಮೀಕ್ಷಿಪುದೆನು | ತೊಮ್ಮೆಯೆ ಜಿಗಿದಳು ಸುರರುಲಿಯೆ || ೩ ||
ಭಾಮಿನಿ
ಪರಮ ಪಾತಿವ್ರತ್ಯದುರಿಗುರಿ |
ಸರಿದು ನಿಲಲಭ್ರದಲಿ ಸುಮನಸ |
ರೊರೆದರವನಿಜೆಯೆಡೆಗೆ ಕಲ್ಮಷ ಸೋಂಕದೆಂದೆನುತ ||
ತರಣಿ ಕುಲದೇಳಿಗೆಗೆ ತಕ್ಕವ |
ಳರಸಿಯನು ಸ್ವೀಕರಿಸು ಸಂಶಯ |
ವಿರಿಸಬೇಡೆಮ್ಮಾಜ್ಞೆಯೆಂದನು ನಭದಿ ದಶರಥನು || ೧ ||
ವಾರ್ಧಿಕ್ಯ
ಸುರರ ಮೊರೆ ಪಿತನಾಜ್ಞೆಯುರಿಗಿಳಿದು ಕೊಂಕದಿಹ |
ಸಿರಿಮುಡಿಯ ಸುಮದ ಪರಿಯರಿತು ನಿಶ್ಯಂಕೆಯಿಂ |
ಧರಣಿಜೆಯ ಕರೆದಪ್ಪಿ ಕರುಣದಿಂ ಕೋಸಲೇಶ್ವರ ಪರಿಗ್ರಹಿಸುತವಳ ||
ಧುರದಿ ಮಡಿದಿಹ ಕಪಿಗಳಂ ಬದುಕಿಸುತ ಲಂಕೆ |
ಯರಸು ಪಟ್ಟವ ವಿಭೀಷಣಗಿತ್ತು ಪುಷ್ಪಕದಿ |
ತರುಣಿ ಯವರಜ ನಿಖಿಲ ಪರಿವಾರದೊಡನೆ ಸತ್ವರದಿ ಪುರಕೈತಂದನು || ೧ ||
ಭಾಮಿನಿ
ಮುರುಗುತಿತ್ತಲು ಭರತನಗ್ರಜ |
ನೊರೆದವಧಿಯಯ್ತೆನುತ ವೈಶ್ವಾ |
ನರನ ಕುಂಡದಿ ಸ್ಥಾಪಿಸುತ ಬಲವಂದು ಭಕ್ತಿಯಲಿ ||
ಕರವ ಮುಗಿದಾ ಹರಿಯ ಚರಣವ |
ಸ್ಮರಿಸಿ ವನ್ಹಿಯ ಪೊಗುವೆನೆಂಬನಿ |
ತರಲಿ ರಾಘವನಿಳಿದು ತೆಗೆದಪ್ಪಿದನು ಸೋದರನ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅನುಜನನು ತಕ್ಕೈಸಿ ಭವನವ | ಚಿನುಮಯಾತ್ಮಕ ಪೊಕ್ಕು ಮರುಗುವ |
ಜನನಿಯರ ಸಂತೈಸಿದನು ದರು | ಶನವನಿತ್ತು || ೧ ||
ಪರಿಜನರ ಮನ್ನಿಸುತ ಗುರುವರ | ನೊರೆದ ಸುಮುರ್ಹೂದಿ ರಘೂದ್ವಹ |
ಮೆರೆವ ಸಿಂಹಾಸನವನೇರ್ದನು | ತರುಣಿ ಸಹಿತ || ೨ ||
ಪುಣ್ಯ ಪುರುಷನ ಶಿರದಿ ಋಷಿಗಳು | ಪುಣ್ಯ ಜನದಭಿಷೇಕವೆಸಗೆ ಸು |
ವರ್ಣದಾರತಿಯೆತ್ತಿದರು ಸುರ | ಕನ್ನಿಕೆಯರು || ೩ ||
ವಾರ್ಧಿಕ್ಯ
ಹರನು ಪರಶಿವೆಗೊರೆದ ವರ ಪುಣ್ಯ ಚರಿತೆಯಿದ |
ಹರಿಯು ಪ್ರೇರಿಸಿದಂತೆ ಬರೆದು ಪ್ರಕಟಿಸಿದೆ ನು |
ತ್ತರ ಕನ್ನಡದಿ ಸಿದ್ಧಪುರದ ಬೆಳಸಲಿಗೆಯ |
ಮ್ಮಿರವು ಬುಧ ವಿಠಲಾಖ್ಯನ ||
ತರಳ ಗಣಪತಿಯೆಂದು ಕರೆವರೆನ ಗೀ ಧರೆಯೊ |
ಳಿರುವ ವಿದ್ವನ್ಮಣಿಗಳೆನ್ನೆರಡನೆಯ ಕೃತಿಯೊ |
ಳಿರುವ ದೋಷವ ತಿದ್ದಿ ಮೆರೆಸಲಿಷ್ಟಾರ್ಥಮಂ ಸ್ಮರಪಿತಂ ಕರುಣಿಸುವನು || ೧ ||
ಮಂಗಲ ಪದ
ರಾಗ ಢವಳಾರ ಏಕತಾಳ
ಮಂಗಲಂ ಜಯ ಮಂಗಲಂ ||
ಮಂಗಲ ಮತ್ಸ್ಯಗೆ ಕೂರ್ಮನಿಗೆ | ಮಂಗಲ ವರಹಗೆ ನರಹರಿಗೆ ||
ಮಂಗಲ ವಟು ವಾಮನ ಮೂರ್ತಿಗೆ ಜಯ | ಮಂಗಲ ಭಾರ್ಗವ ರಾಮನಿಗೆ ||
ಜಯ ಮಂಗಲಂ || ೧ ||
ಕುಶಿಕಸವನ ಸಂರಕ್ಷಣಗೆ | ಶಶಿಧರ ಕಾರ್ಮುಕ ಭಂಜನಗೆ ||
ವಸುಧಿಜೆ ನೆವದಿಂಸುರರ ಮರ್ದಿಸಿ | ರಸೆಯ ಪೊರೆದ ರಘು ರಾಮನಿಗೆ ||
ಜಯ ಮಂಗಲ || ೨ ||
ಮಂಗಲ ಬೌದ್ಧಗೆ ಕಲ್ಕ್ಯನಿಗೆ |
ಮಂಗಲ ಸುಜನೋದ್ಧಾರಕಗೆ ಮಂಗಲ ಶೇಷಾಚಲದೊಳು ನೆಲೆಸಿಹ
ರಂಗನಾಯಕ ಶ್ರೀನಿವಾಸನಿಗೆ ಜಯ ಮಂಗಲಂ || ೩ ||
|| ಶ್ರೀ ವೆಂಕಟೇಶಾರ್ಪಣವಸ್ತು ||
ಅಂತು ಪದ ೪೫೫ಕ್ಕೆ ಯಕ್ಷಗಾನ ಸಂಪೂರ್ಣ ರಾಮಾಯಣ ಸಂಪೂರ್ಣವು || ಶ್ರೀ ||
Leave A Comment