ಸೋತರೆ ಮತ್ತೆ ನಯದೀ || ಭಳಿರೆ  || ೨೩೯ ||

ಭಾಮಿನಿ

ಬಳಿಕ ಕೌರವ ಜನಪನಾಳಲಿ |
ಇಳೆಯಧರ್ಮದೆ ನೀವುನಾಲ್ವರು |
ಬಳಕೆಗೊಳ್ಳುತೆ ಸೇರುತವನನು ಬಾಳ್ವುದೆಂದೆನಲೂ ||
ಮುಳಿದು ಭೀಮನು ಪೇಳ್ದನಾಕ್ಷಣ |
ಬಲನೆ ಧರ್ಮಜಪಾರ್ಥನಕುಲರ |
ಕೊಲಿಸಲೇತಕೆ ತೋರಿಬಿಡು ನೀನೆನಗೆ ಕೌರವನಾ  || ೨೪೦ ||

ಭೀಮ ಕೌರವರೊಂದೆಮತಗೊಳೆ | ರಾಮಕೃಷ್ಣರ ಸಾಕ್ಷಿಯಿಂದಲೆ |
ಆಮಹಾಭುಜರೊಪ್ಪೆ ಧರ್ಮದಸಮರ ಸಂಧಿಯನೂ ||
ಸೋಮವಂಶದ ಕಿಚ್ಚಿನುಜ್ವಲ | ದೀಮಹಾರಣ ಘಟಿಸೆಕಲಿಗಳು |
ನೇಮದಿಂದಲಿ ಕೈಯ್ಯಪೊಯ್ದರುಸುರರು ಭಾಪೆನಲೂ  || ೨೪೧ ||

ಕಂದ

ಎನಿತುಂ ಕುರುಕ್ಷೇತ್ರದೊಳೆಡೆ |
ಯನಿತುಂಬರಿದಿಲ್ಲದಂತು ಶವಶತದಿಂತೆ ||
ಕ್ಕನೇತಿವೆರಣೋತ್ಸವದಿಂ |
ದನಿಲಸುತಂ ತಾನೆಸವರಿದಂ ಕೊಳ್ಗುಳವಂ  || ೨೪೨ ||

* * *


ಚತುರ್ಥಾಂಕ ಅವಮರ್ಶಸಂಧಿ

ವಾರ್ಧಕ

ದ್ವಿಜರಾಜ ಗೋತ್ರಜರ ಸಂಗರಂ ದ್ವಾಪರದೆ |
ನಿಜಮಾರ್ಗಶಿರ ಶುಕ್ಲ ತೇರಸಿಯೆ ಭರಣಿಯೊ |
ಳ್ಗಜಪುರದ ಪರಮ ಕುರುರಂಗದೊಳು ಮೊದಲಾಯ್ತು ಕೊನೆಮೂಲದಮವಾಸ್ಯೆಗೆ ||
ವಿಜಯಮದ ಪೆರ್ಚುಗೆಯ ಭೀಮದುರ್ಯೋಧನರ್ |
ಭುಜಬಲದ ಸಾಸದಿಂ ಕಾದಲನುವಾಗುತಿರ |
ಲಜಮುಖರ್ಪೊಗಳೆ ಮಾಭಾರತದ ವೀರರಂ ನೆರೆಯೆಸುರರಂಬರದೊಳೂ || ೨೪೩ ||

ವಚನ || ಅಗಳ್ ಭೀಮದುರ್ಯೋಧನರ್ ||

ಭಾಮಿನಿ

ಗುರುವಿನಂಘ್ರಿಗೆ ಮಣಿದು ಮನದಲಿ |
ಮರುತ ಸಂಭವನಿರಲು ಬಲನಡಿ
ಗೆರಗಿಕೌರವ ಪರಕೆಗೊಂಡತಿ ಜವದಿ ಕಾಳಗಕೆ ||
ತಿರಿದರೀರ್ವರು ಮತ್ತೆ ಗದೆಗಳ |
ನರಿದಿದುತ್ತಮ ಮಧ್ಯಮಾಧಮ
ದೆರಕವೆನುತಲಿ ಪರಿಕಿಸಿದರಾ ಗುರುಲಘುತ್ವಗಳ  ||೨೪೪||

ವಾರ್ಧಕ

ಜಗಜಟ್ಟಿಕಲಿಗಳಾ ಭೀಮದುರ್ಯೋಧನರ್ |
ನೆಗೆದಾರ್ದು ಮಾಲೀಢನಾಲೀಢನದೆನಿಂದು |
ಮಗುಳೆಸಮಪಾದ ವೈಷ್ಣವಮಂಡಲಂಗಳೆನಿಪೈದುತಾನಂಗಳಿಂದಾ ||
ಬಗೆದೋರಿಸವ್ಯಾಪಸವ್ಯಗಳಗತಿಯಿಂದ |
ಲೊಗುಮಿಗೆಯೊಳಾಸ್ಫಾಲನವನೆಸಗಿ ಬಿಗಿದೋರಿ |
ಚಿಗಿದೊರ್ಮೆ ಕುಂಚಿತಂ ಮಾಸ್ಪೋಟಮೆನಿಪೆಂಟು ಪಗರಣದೆ ಪಂಕ್ತಿವರಿದೂ || ೨೪೫ ||

ರಾಗ ಭೈರವಿ ತ್ರಿವುಡೆತಾಳ

ನಿಂದರಾಗ | ಸಮರಕೆ ನಿಂದರಾಗ  || ಪಲ್ಲವಿ ||

ಕಿರಿದು ಕಿರಿದೆನೆ ಮೆಟ್ಟಿಮುಂದಕೆ | ಕಿರಿದು ಕಿರಿದೆನೆ ಸಾರ್ಚಿಗದೆಗಳ ||
ಕಿರಿದು ಕಿರಿದೆನೆ ತಿರುಪಿಮಾಣದೆ | ಕಿರಿದು ಕಿರಿದೆನೆ ನೊಂದಿತೂಂಕಿದ |
ರರಿದು ಬಲದಡಿ ಪುಗಿಸುತೆಡದಡಿ | ಪೊರಗೆ ನೀಡುತೆ ನೀಳ್ಕಿದಂಡೆಯ |
ಭರದಿ ಗದೆಯನು ಬೀಸಿತೋರುವ | ಬೆರಗುರಂಜಿಸೆ ಮಲ್ಲಕಲಿಗಳು || ನಿಂದರಾಗಾ || ೨೪೬ ||

ತಪ್ಪದಪ್ಪರಿತಟ್ಟು ಪೊಟ್ಟೆನೆ | ಧೊಪ್ಪ ಧೊಗಲುಲಿ ದಿದಿಲು ಬಧಿಲೆಂ |
ದೊಪ್ಪೆಗದೆಗಳ | ನೇರ್ಪುನೇರ್ಪಿನೊ | ಳಪ್ಪೆ ಹತಿಗಳು ಪೊಯ್ದರವರುರೆ |
ಭಾಪು ಭಾಪೆನೆ ಗದೆಯ ಗದೆಯಿಂ | ಬೇರ್ಪುಗೊಂಡಿಡೆ ಘಟ್ಟ ಘಡರೆನೆ |
ತೋರ್ಪಕಿಡಿಗಳದೆಂಟು ಮೂಲೆಯೊ | ಳಿರ್ಪನೋಟಕರೆದೆಗೆ ಜುಮ್ಮನೆ || ನಿಂದರಾಗಾ || ೨೪೭ ||

ರಾಗ ಶಂಕರಾಭರಣ ಮಟ್ಟೆತಾಳ

ಪೂತುಮಝರೆ ಭೀಮಸೇನನೇ || ಬೀತನಾಗ ಬೇಡನಿಲ್ಲು |
ಆತುಕೊಳ್ಳಿದೆನ್ನಗದೆಯ | ಘಾತಕೋಡಬೇಡನಿಲ್ಲೆಲಾ || ಪೂತು  || ೨೪೮ ||

ಭಳಿರೆ ಭಾಪು ಕೌರವೇಂದ್ರನೇ || ತಿಳಿದುದಿಲ್ಲವೆನ್ನ ಕರದ |
ಕಲಿತ ಮಹದ ಗದೆಯ ಸವಿಯ | ದಲಿತ ಬಲನೆ ನೋಡು ನೋಡೆಲಾ || ಭಳಿರೆ ಭಾಪು || ೨೪೯ ||

ಕರಿಕಳಿಂಗರನ್ನು ಕೊಂದ | ಗರುವಕಿದಕೊ ಕೊಳ್ಳಿದೊಂದ |
ಧುರದೊಳನುಜರನ್ನು ಕೊಂದ | ಬಿರಿದಿಗಿದಕೊ ಕೊಳ್ಳಿದೆರಡನೂ || ಪೂತು ಮುಝರೆ ||೨೫೦||

ಅನುಜನಾದುಶ್ಶಾಸಗಿರಿದು | ಮನುಜಮಾಂಸತಿಂದ ಧೂರ್ತ |
ದನುಜಕೊಳ್ಳೊ ಮೂರನಿದಕೊ | ತಿನಿಸ ನೋಡುಗದೆಯ ಸವಿಯನೂ || ಪೂತು ಮಝರೆ || ೨೫೧ ||

ಇದುವೆಲಾಕ್ಷಗೇಹ ಕೊಂದು | ಇದುವೆಗರಳದನ್ನ ಕೊಂದು |
ಇದುವೆ ನಾಡ ಜೂದಿಗೊಂದು | ಇದುವೆ ಕೊಳ್ಳೊ ವಸ್ತ್ರಹರಣಕೇ | ಭಳಿರೆ ಭಾಪು  || ೨೫೨ ||

ಕೃತಕ ಸಭೆಯ ಮಾಟಕೊಂದು | ಜತನ ನೋಡೆನುತ್ತಪೊಯ್ದ |
ಖತಿಯೊಳುರಕೆತರಕೆ ಕಾಲ್ಗೆ | ಜೊತೆಗೆ ನೆತ್ತಿಗೆನುತಲೀ || ಭಳಿರೆ ಭಾಪು  || ೨೫೩ ||