ರಾಗ ಮಧ್ಯಮಾವತಿ ತ್ರಿವುಡೆತಾಳ

ಕೇಳಿ ಯೋಗವನಿಳುಹೆ ಭೀಷ್ಮನು | ಮೌಳಿಯನು ಪದಕಿಟ್ಟು ನಮಿಸಿದ |
ಶೀಲವಂತನ ಪರಸಿಮೊಮ್ಮನ | ತೋಳನೆಗೆದೊಡನಪ್ಪುತಾ | ಪೇಳ್ದನವಗೇ || ೧೩೪ ||

ಪಟ್ಟದಾನೆಯನೇರಿ ವಿಭವದಿ | ನೆಟ್ಟನೆತ್ತಿದ ಧವಳಛತ್ರದ |
ಮಟ್ಟಕೆಸೆಯುವ ಶುಭ್ರಚಾಮರ | ದೊಟ್ಟೆಗೆಯ್‌ತಹ ಭಾಗ್ಯವಾ | ಬಿಟ್ಟೆಯೇನೈ || ೧೩೫ ||

ತಾತ ನಿನ್ನಯ ಸಾಧ್ವಿಯರುಸಲೆ | ಮಾತ ಮನ್ನಿಪ ಸುಭಟ ತಿಂಥಿಣಿ |
ಗೀತವಾದ್ಯಗಳಿಂದ ಕೂಡಿದ | ಕೀರ್ತಿಯಾಸನ ತೊರೆದೆಯಾ | ಪೂರ್ತಿಯಾಗೀ || ೧೩೬ ||

ಸುತಸಹೋದರ ಶತಕವೆಲ್ಲಿದೆ | ಚತುರ ನಿನ್ನಯ ಬಲವದೆಲ್ಲಿದೆ |
ಸತತ ಸೇವಿಪ ಭೃತ್ಯರಿಹರೇ | ಪಿತನಿಗೇನನು ಗೈದೆ ಹಾ | ಗತಿಯೆ ನಿನ್ನ || ೧೩೭ ||

ಎಂದು ಕಂಬನಿಗರೆಯೆ ಕೌರವ | ನೆಂದನಜ್ಜಗೆ ಭಾವಿತಾತ್ಮರು |
ನೊಂದು ಕೂಗುವುದುಂಟೆ ಮನದೊಳು |  ಸಂದ ವಿಷಯಂಗಳನು ಭಾವಿಸಿ |                  ಕುಂದದಿಹುದೂ || ೧೩೮ ||

ವಚನ || ಎನೆ ಕೇಳ್ದಾಗಳೆ ಭೀಷ್ಮಂ ಮರುಗುತಲವನೊಡನಿಂತೆಂದಂ ||

ವಾರ್ಧಕ

ಮಗನೆ ಕೇಳ್ ಕಮಲಜನ ಮಾನಸದೊಳವತರಿಸಿ |
ಬಗೆಗೊಂಡ ಸಪ್ತರ್ಷಿ ವರ್ಗದೊಳಗತ್ರಿಗಂ |
ಮಗನಾಗೆ ಚಂದಿರಂ ಬಳಿಕವನ ದಿಸೆಯಿಂದಲಾಯ್ತೆಮ್ಮ ಭರತ ವಂಶಾ ||
ಪಗೆಯಿಲ್ಲದೀತಿರೆಯ ಕುರುಹಸ್ತಿ ಮೊದಲಾದ |
ವಿಗಡರತಿಕೆಳೆಯಿಂದ ಮುನ್ನಾಳ್ದರೆಲೆ ಮಗನೆ |
ಜಗಳವಿದ ನೀ ತೊರೆದು ಪಾಂಡವರನೊಡಗೂಡಿ ಬಾಳಯ್ಯ ಕೀರ್ತಿಯಿಂದಾ || ೧೩೯ ||

ವಚನ || ಎಂಬುದನಾಲಿಸಿ ಕೌರವಂಕೆಯ್ ಮುಗಿದಜ್ಜಗಂ ||

ರಾಗ ಕೇದಾರಗೌಳ ಝಂಪೆತಾಳ

ಸುರನದಿತನುಜ ಕೇಳೂ | ನಿನ್ನೊಳಾ | ನೊರೆಯುವುದಸಲೆಕೃಪಾಳೂ ||
ಧುರದೊಳೆನಗಿಲ್ಲ ಶಂಕೇ | ಚಾಗಿಗೇನ್ | ಬೆರಗಿಹುದೆಗೊಳ್ಳೆನಂಕೇ  || ೧೪೦ ||

ನೆಲಕಿರಿವುದಿಲ್ಲ ತಾತಾ | ಕೊಂತಿಜರ | ಛಲಕಿರಿವೆ ಸುಪ್ರಖ್ಯಾತಾ ||
ಜಲಜಸಖನಾತ್ಮಜನನೂ | ಬಲಿಗೊಟ್ಟು | ಕೊಲಿಸಿದೀ ನೆಲದೊಳಾನೂ || ೧೪೧ ||

ಪುದುವಾಳೆ ಮತವಿದಲ್ಲಾ | ಅನುಜರಿರೆ | ಕದನವನುಗೆಯ್ದ ಮಲ್ಲಾ ||
ಬೆದರಿದನದೆಂಬ ಸೊಲ್ಲಾ | ಕೇಳ್ದಿರೆನು | ಮದಮುಖರ ನಗೆಯ ಗುಲ್ಲಾ || ೧೪೨ ||

ಅನುಜರೊಡಗೂಡಿ ಮೆರೆವಾ | ಧರ್ಮಜನೊ | ಳನುಜವ್ಯರಹಿತನಿರುವಾ ||
ತನಗಹುದೆ ಸಂಧಿ ತಾತಾ | ಸಮ್ಮತವೆ | ಎನಗರುಹುನಯದ ಮಾತಾ || ೧೪೩ ||

ನೂರ್ವರನುಜಾತರಿನ್ನಾ | ಬಳಿಸಂದ ನೂರ್ವರೆಳೆ ಮಕ್ಕಳೆನ್ನಾ ||
ಉರ್ವರೆಯೊಳಸುವನೀಗೇ | ಬಾಳ್ವುದಾ | ನೊರ್ವನಿದುಹಿತವೆ ನಿಮಗೆ || ೧೪೪ ||

ಯೆನಗಾಗಿ ಶರತಲ್ಪವಾ | ಕೆಯ್‌ಕೊಂಡ | ಮುನಿಮಾನ್ಯನಿರದ ನೆಲವಾ ||
ಕನಸಿನೊಳಗಾಳ್ವನಲ್ಲಾ | ಗುರುವಿಲ್ಲ | ತನುವಿಡಿಯೆ ಬಾಳ್ವೆಸಲ್ಲಾ  || ೧೪೫ ||

ವಚನ || ಕೌರವನಿಂತೆನೆ ಗಂಗಾತನೂಜಂ ಕೇಳ್ದಾಲೋಚಿಸಿ ಮತ್ತಂ ||

ಕಂದ

ಶರಮೊಂದಂತೆಗೆದುನಿಜೋ |
ದರದಿಂಲೆಕ್ಕಣಿಕೆ ಮಾಡಿಗಜಮದ ಮಸಿಯಂ ||
ತರಿಸಿಪತಾಕಾಪಟದೊಳ್ |
ಬರೆದಿಟ್ಟದನಂಧನೃಪತಿಗಾಸಿಂಧುಮತಂ  || ೧೪೬ ||

ವಚನ || ಸಂಜಯನ ನಿಂತು ಕಳುಹಲ್ಕುರುಭೂಪಂ, ತಾನಾ ಲೋಚಿಸುತಜ್ಜನೊಳಿಂತೆಂದಂ ||

ರಾಗ ಸಾಂಗತ್ಯ ರೂಪಕತಾಳ

ಸಂಧಾನವಿನಿತೆಂಬುದಕೆ ಮಾಡಿ ಇತಿಶ್ರೀಯ | ಸಂಧಿಸಲುಬಳಿಯಿರ್ಪುದೆರಡೂ ||
ಕುಂದಿಲ್ಲಹತನಾಗೆ ಸುರಲೋಕಜಿತನಾಗೆ | ನಿಂದಿರುವತಿರೆಯೆನ್ನದೈಸೇ || ೧೪೭ ||

ಭುಜದಂಡದೊಳಗೆನ್ನ ಗದೆಯಿರ್ಪತನಕಾನು | ನಿಜಶೌರ್ಯದಿಂಕಾದಿ ರಣದೀ ||
ವಿಜಿತಪೌರುಷನಪ್ಪೆ ಛಲಕೆದೂಷಣಮಿಲ್ಲ || ರಜತೇಶ ರಕ್ಷಿಸುವನೆನ್ನಾ || ೧೪೮ ||

ಭಳಿರೆಂದು ಕೌರವನ ನಿಜಮತಕೆತಲೆದೂಗಿ | ಕುಲತಿಲಕನೊಡನೆಂದ ಭೀಷ್ಮ ||
ಕಲಿತನದೊಳೇಕಾಂಗ ವೀರತ್ವದೊಳ್ನಿನ್ನ | ನಿಳಿಗೈವ ಭಟರಿಲ್ಲ ಜಗದೀ || ೧೪೯ ||

ಬಲದೇವಬರ್ಪನ್ನಕಾದಿರ್ದು ಬಳಿಕನೀ | ನುಳಿದಿರ್ಪಕೃತವರ್ಮ ಕೃಪರ ||
ನೆಲೆಯರಿತುಗುರುಸುತನ ಮತವಿಡಿದು ಧುರವೆಸಗು | ಪಳಿವಿಲ್ಲ ಕೊನೆಗೊಂದ ಪೇಳ್ವೇ || ೧೫೦ ||

ಭಾಮಿನಿ

ಶಶಿಕುಲಾನ್ವಯತಿಲಕ ಕೇಳೈ |
ಪೆಸರವೈಶಂಪಾಯನದ ಸರ |
ಮೆಸೆವುದೀ ಕುರುಭೂಮಿಗುತ್ತರ ದಿಸೆಯಭಾಗದಲಿ ||
ಪಸರದಿಂದಿನ ನಿಶಿಯನದರೊಳು |
ಕುಸಿತುಕಳೆನಿನಗೀವೆಸಿದ್ಧಿಯ |
ಬೆಸುಪಮಂತ್ರವನೆನುತ ವಕಿವಿಯೊಳಗೊರೆಯೆ ಕೆಯ್‌ಕೊಳುತಾ  || ೧೫೧ ||

ರಾಗ ಕೇದಾರಗೌಳ  ತ್ರಿವುಡೆತಾಳ

ಭರದೊಳಜ್ಜನ ಪದಕೆವಂದಿಸಿ | ಪೊರಟನಾಬಳಿವಿಡಿದು ಮುಂದೆಯ್ |
ತರುತೆ ಕಂಡನು ಮೆರೆವ ಕೊಳನನು | ಕೌರವೇಂದ್ರ  || ೧೫೨ ||

ಬಿರಿದ ಕಮಲದೆ ಮೊರೆವ ತುಂಬಿಯ | ಸಿರಿಯಮಾಡದೆ ಚರಿಸುವಂಚೆಯ |
ಸರದತಡಿಗೆಯ್ ತಂದುಜನಪತಿ | ಹರುಷದಿಂದಾ  || ೧೫೩ ||

ಕಂದ

ಕರಚರಣಂಗಳತೊಳೆದಾ |
ಚರಿಸುತಲಾಚಮನಮಂತ್ರತೀರ್ಥೋಪಾಯಂ |
ಪೆರಗಡಿಯಿನ್ನೀರ್ಗಿಳಿಯುತೆ |
ಸರಸಿಜವಿಷ್ಟರಮನಾಂತಿರೆ ತಪದೊಳತ್ತಂ  || ೧೫೪ ||

ದ್ವಿತೀಯಾಂಕ ಸಂಪೂರ್ಣಂ

* * *


ತೃತೀಯಾಂಕ ಗರ್ಭಸಂಧಿ
[ಧರ್ಮರಾಯ ಮತ್ತು ಶ್ರೀಕೃಷ್ಣರ ಪ್ರವೇಶ-ಭೀಮನೂ ಅಲ್ಲಿರುವನು]

ರಾಗ ಭೈರವಿ ಝಂಪೆತಾಳ

ಇಳೆಯರಸ ಮಾದ್ರೇಶ | ನಳಿದ ಬಳಿಕೆಲ್ಲಿಯುಂ |
ಛಲದಂಕ ಕೌರವನ | ನೆಲೆಯರಿಯದಿರಲೂ  || ೧೫೫ ||

ನಳಿನಾಕ್ಷನೊಡನೆಂದ | ಕಳವಳಿಸಿ ಧರ್ಮಜನು |
ಕೊಳುಗುಳಕೆ ದಾರಿಯೇನ್ | ಪೇಳೋಡೆಯ ಹರಿಯೇ  || ೧೫೬ ||

ಕದನದೊಳು ದಾಟಿದುದು | ಪದಿನೇಳು ದಿನದವಧಿ |
ಹದನವಿನಿತೇಕಾಯ್ತು | ಮುದಮುಖನ ಕಾಣೇ  || ೧೫೭ ||

ಎಲ್ಲಿ ಪೋದನೊ ಜಾಣ | ಸೊಲ್ಲಿಲ್ಲ ಕೌರವನ |
ಬಲ್ಲಿದನೆ ನೀ ಪೇಳು | ಯೆಲ್ಲವನು ನಮಗೇ  || ೧೫೮ ||

ಎನೆ ಕೇಳುತಸುರಾರಿ | ಜನಪತಿಗೆ ನಗುತೆಂದ |
ಮನಕಿನಿತು ನೋವೇಕೆ | ನಿನಗರಸ ಬರಿದೇ  || ೧೫೯ ||

ಭಾಮಿನಿ

ಜೀವದಾಶೆಯೊಳಡಗಿಕೊಂಡಿಹ |
ಪಾವಮಾನಿಯ ಭಯದೊಳೆತ್ತಲೊ |
ಸಾವಕಾಲದೊಳಮಮ ಕೌರವರಾಯಗಿನಿತಾಯ್ತೇ ||
ಕಾವುದೊಳ್ಳಿತು ಬಂದನಾದೊಡೆ |
ನೀವು ಸೋದರರೊಂದೆ ಬುದ್ಧಿಯೊ |
ಳೋವಿಕೊಂಡಿಹುದೆನಲು ಕೇಳುತೆ ಭೀಮನಿಂತೆಂದಾ  || ೧೬೦ ||

ರಾಗ ಕೇತಾರಗೌಳ ತ್ರಿವುಡೆತಾಳ

ದೇವ ಕಂಸಾಂತಕನೆ ನಿನ್ನಯ | ಭಾವವೇನದತಿಳಿಯದಾದೆನು |
ಸಾವು ಬಾರದೆ ಕೌರವೇಂದ್ರಗೆ | ಕಾವುದಾರಾ  || ೧೬೧ ||

ಅಂದು ಕೃಷ್ಣೆಯ ಮಾನಭಂಗದೊ | ಳೆಂದ ಭಾಷೆಯನರಿಯದಾದಿರೆ ||
ಕಂದಿದಾನನ ಮಾಣ್ದುದಿಲ್ಲವ | ಳಂದವರಿತೂ  || ೧೬೨ ||

ಯೇನಿದೇತರರಾಜಕಾರ್ಯವ | ಮಾನನಿಧಿನೀ ಪೇಳ್ದೆಯಣ್ಣಗೆ |
ಹೀನಕೌರವನೆತ್ತಲಡಗಿದ | ಕಾಣೆನವನಾ  || ೧೬೩ ||

ಲೋಕ ಪದಿನಾಲ್ಕೆನಿಪ ಭುವನಾ | ನೀಕವಿದರೊಳು ಶರಧಿನಾಲ್ಕರೊ |
ಳಾಕೆವಾಳನದಿಲ್ಲ ನಿಶ್ಚಯ | ಸಾಕುಸಹಸಾ  || ೧೬೪ ||

ಚರಮಚರದೊಳಗಿರ್ಪ ಭುವನದೊ | ಳುರಗಕೇತನ ಹರಿಹರಾದ್ಯರ |
ಮರೆಯಗೊಳ್ಳಲಿ ದುರುಳನವನನು | ತರಿಯದಿರೆನೂ  || ೧೬೫ ||

ರಾಗ ಕೇದಾರಗೌಳ ಅಷ್ಟತಾಳ

ಕಾಲ ಸಂಭವ ಧರ್ಮಶೀಲ ಸದಾಶ್ರಯ | ಭೂಲಲಾಮನೆ ಧರ್ಮಜಾ ||
ಲೋಲಜಾಂಬಕಿ ಬಾಲೆಯಗ್ನಿಜೆ ನವೆದಳು | ಕೇಳ್ವರಿಲ್ಲದೆಯಗ್ರಜಾ  || ೧೬೬ ||

ಕರುಣಿಯೆಂಬರು ನಿನ್ನ ಕರುಣವಿದೇನಹ | ತುರುಬಕಟ್ಟಿಸಬೇಡವೇ ||
ಇರಲಿ ನಿನ್ನಯ ಮಾತ ಮೀರುವೆ ನೋಡಿಕೊ | ತರಿವೆ ಧೂರ್ತನನೀಗಳೆ || ೧೬೭ ||

ಹಿರಿಯ ಧರ್ಮಜನೆಂಬ ಗುರುತನವಿರಿಸೆನು | ದುರುಳನಾತನ ಕೊಲ್ಲದೇ ||
ತುರುಬಿಗಿಕ್ಕಿದ ಕೈಯ್ಯಕರುಬನ ಸೀಳಿದೆ | ಮರೆಯೆನೀತನ ಗೆಲ್ಲದೇ  || ೧೬೮ ||

ವಚನ || ಇಂತರುಹುತವರ್ಗಂ ಪೊಡಮಟ್ಟತಿ ಜವದೊಳ್ಭೀಮಂ ಪರಿವಂಬಂ ಪಾರ್ದು ಪಿಡಿವಂತೆ, ರಣಕಣಮಂತ್ವರಿತದೆ, ಶೋಧಿಸಿ ಕುರುಪತಿಯಂ ಕಾಣದೆ ಮತ್ತಂ, ದುರ್ಯೋಧನನ ಶಿಬಿರದೆಡೆಗಂ ಪಾರ್ದಲ್ಲಿಯ ಕಾವಲಭಟರಂ ಕಂಡಾಗಳ್, ಪಲ್ಮೊರೆದಿಂತೆಂದ ||

ರಾಗ ಕೇತಾರಗೌಳ ಝಂಪೆತಾಳ

ಎಲ್ಲಿರುವ ದುರ್ಯೋಧನ | ಜತುಗೃಹದ | ಬಲ್ಲಿದನು ಕಾಣೆನವನಾ ||
ಎಲ್ಲಿರುವನಂಧಸುತನೂ | ನಂಜುಣಿಸಿ | ಕೊಲ್ಲಿಸುವ ತೋರಿಸವನಾ || ೧೬೯ ||

ಎಲ್ಲಿರುವ ಪಗಡೆಗಾರಾ | ಕರೆಯವನ | ಸೊಲ್ಲಿಸಲಿಕಿದೆ ವಿಚಾರಾ ||
ಎಲ್ಲಿರುವ ನಾರಿಮಣಿಯಾ | ಉಟ್ಟುಡೆಯ | ತಲ್ಲಣಿಸೆಪೇಳ್ದರಾಯಾ || ೧೭೦ ||

ಸುತಸೋದರಾದಿಗಳನೂ | ಬಲಿಗೊಟ್ಟ | ಮತಿವಿಕಳ ಕೌರವನನೂ ||
ಹಿತದಿಂದ ತೋರೊಬೇಗಾ | ಉರಿಗೊಡುವೆ | ಜೊತೆಗೊಳಿಸಿ ಶಿಬಿರಕೀಗಾ || ೧೭೧ ||

ವಚನ || ಎಂಬುದ ಕೇಳ್ದಾಗಳೆ ಗಾಂಧಾರಿಯು ಧೃತರಾಷ್ಟ್ರನೊಡವೆರಸುತ್ತಂ
ಬಂದಲ್ಲಿಗೆ ಭೀಮನಂ ಕಾಣುತ್ತೆ ಬೆದರ್ದು ||

ರಾಗ ನೀಲಾಂಬರಿ ರೂಪಕತಾಳ

ಯೆನ್ನಯ ಕುವರರು ನೊರ್ವರ | ಮಣ್ಣಿಗೆ ಕೂಡಿಸುತೆಮ್ಮನು ||
ತಿನ್ನಲು ಬಂದೆಯ ಪಾಪಿಯೆ | ನಿನ್ನೆದೆ ಸುಡದಿಹುದೇ || ಯೆನ್ನ  || ೧೭೨ ||

ರಾಗ ಕೇತಾರಗೌಳ ತ್ರಿವುಡೆತಾಳ
ಇನಿತು ಮಕ್ಕಳು ಸತ್ತಡಳಿಯದೆ | ತನುವಿಡಿದು ಬಾಳ್ದಿರ್ಪನಿಮ್ಮನು |
ಕನಲಿನೋಡದೆ ಜವನೆ ಬಿಟ್ಟಿರೆ | ತನಗದೇಕೇ  || ೧೭೩ ||

ರಾಗ ನೀಲಾಂಬರಿ ರೂಪಕತಾಳ

ನರಭಕ್ಷಕರಿದುವರೆಗೀ | ಕುರುವಂಶದಿ ಜನಿಸಿದುದಾ |
ನರಿಯೆನು ಶಿವಶಿವ ಧೂರ್ತರ | ಗುರು ಪೈಶಾಚಿಕನೇ  || ೧೭೪ ||

ರಾಗ ಕೇತಾರಗೌಳ ತ್ರಿವುಡೆತಾಳ
ಕುರಿಗೆ ಧಾರೆಯನೆರೆದ ನಿನ್ನೊಳು | ಮರಿಗಳಾದರು ಪಲವು ಕುರಿಗಳು |
ಸರಿಯೆ ನಮ್ಮಯ ವಂಶಧರ್ಮಕೆ | ತರಿದೆನವರಾ  || ೧೭೫ ||

ರಾಗ ನೀಲಾಂಬರಿ ರೂಪಕತಾಳ

ಪಲವರಿಗುದಿಸಿದ ಮಕ್ಕಳ | ನೆಲೆಯರಿಯಲು ಸಾಧ್ಯವೆ ಶಿವ ||
ಹಳುವದೆ ರಾಕ್ಷಸಿಗೊಲಿಸಿದ ಖಳನಿನಗೊರೆಯುವುದೇ  || ೧೭೬ ||

ರಾಗ ಕೇತಾರಗೌಳ ತ್ರಿವುಡೆತಾಳ

ಹುಟ್ಟುಕುರುಡನ ಪಟ್ಟದರಸಿಗೆ | ಪುಟ್ಟಿದನಿಬರು ಹೋತಪುತ್ರರ |
ಗುಟ್ಟನರಿದೊಡೆ ದುಷ್ಟಬೀಜವು | ಕಷ್ಟಧರೆಗೇ  || ೧೭೭ ||

ರಾಗ ನೀಲಾಂಬರಿ ರೂಪಕತಾಳ

ಧರ್ಮಜನುಣ್ಣಲಿ ಭಾಗ್ಯವ | ಶರ್ಮಗಳೆಲ್ಲವ ತೀರಲಿ |
ಕರ್ಮದ ಫಲವಿದಭೋಗಿಸ | ಲೊರ್ಮೆಗೆ ಮಾಧವನೂ  || ೧೭೮ ||

ರಾಗ ಕೇತಾರಗೌಳ ತ್ರಿವುಡೆತಾಳ

ಆಡಿದಂದದೊಳೆನ್ನ ಭಾಷೆಯ | ಮಾಡಿತೋರಿಸಲೆತ್ತ ಪೋದನು |
ಹೇಡಿ ಕೌರವನೆಂಬುದರಿವೆಯ | ಬೇಡಿಕೊಂಬೇ  || ೧೭೯ ||

ವಚನ || ಎನೆಕೇಳ್ದವರ್ ತೆರಳಲ್ಕಲ್ಲಿಗೆ ತ್ವರಿದೊಳ್ – ವಿಂಧ್ಯಕ, ಜಾಲಕರೆಂಬ ಭೀಮಸೇನನ ಕಿರಾತರ್ಬಂದೊಡನಂ, ದೂರಪ್ರಣತರಾಗುತ್ತಂ ಭೀಮನೊಳಿಂತೆಂದರ್ ||

ರಾಗ ಮುಖಾರಿ ಏಕತಾಳ

ಕೇಳ್ದೇವ ಮಹಾವೀರ ಭೀಮಯ್ಯಾ | ನಾವೆಂಬಸೊಲ್ಲಾ  || ಪಲ್ಲವಿ ||

ಕುರುಕ್ಷೇತ್ರದೊಳಗೆಲ್ಲಜೀಯಾ | ಎಡೆಬಿಡದಲ್ಲಲ್ಲಿ | ತಿರಿದೆವು ಕೇಳ್ಮಹರಾಯಾ ||
ಕುರುನರಪಾಲಕ ನಿರುವೆಡೆಯರಿಯದೆ | ಬಿರು ಬಿರು ಬಿಸಿಲಿಗೆ  ತರಹರಗೊಳುತೇ ||
ಕುರುನೆಲದುತ್ತರಕಿರುತಿಹತಿಳಿನೀರ | ಸರದತ್ತಬಂದೆವು ವಿರಮಿಸಲೆನುತಾ || ಕೇಳ್ದವ || ೧೮೦ ||

ಕಾಲೊತ್ತು ಪೊಸರೀತಿವಡೆದಾ | ಗುರುತಿದೆಪದಮುದ್ರೆ | ಸಾಲ್ಗೊಂಡುತೋರ್ಪುದುನಡೆದಾ ||
ಜಲದಿಂದಪೊರಮಟ್ಟು ಬಳಿಸಾರ್ದತೆರನಿರ್ಪ | ಚೆಲುವಿನಕಾಲಚ್ಚು ನೆಲದೊಳಗಿಹುದೂ ||
ಸಲೆಶಂಖಚಕ್ರವು ಹಲಕುಲಿಶಂಗಳು | ತಳರೇಖೆಯೊಳಗಿವೆ ತಿಳಿಯಲುಬಹುದೂ || ಕೇಳ್ದೇವ ||

ಭಾಮಿನಿ

ದೂತರಾಡಿದ ಮಾತನಾಲಿಸಿ |
ವಾತಸಂಭವನಾತತೂಕ್ಷಣ |
ನೂತನವನಿದನರಿಯ ಬೇಕೆನುತವರನೊಡವೆರಸೀ ||
ಖ್ಯಾತಧರ್ಮಜನೆಡೆಗೆಬಂದಾ |
ವಾರ್ತೆಯುಸುರಲು ಕೇಳ್ದು ಮುರರಿಪು |
ಧೂರ್ತನೆಸಗಿದ ಕೃತ್ಯವರಿದೊಡನೆಂದ ಧರ್ಮಜಗೇ  || ೧೮೧ ||

ರಾಗ ಘಂಟಾರವ ಏಕತಾಳ

ವೊಳ್ಳಿತಾಯ್ತು ಕಾರ್ಯ | ಧರ್ಮರಾಯಾ | ವೊಳ್ಳಿತಾಯ್ತು ಕಾರ್ಯ    || ಪಲ್ಲವಿ ||

ಸುಳ್ಳಿದಲ್ಲನುಡಿ | ಎಲ್ಲವರಿತೆನಿಜ | ಸೊಲ್ಲಿದುಚಿತ ಭಲೆ | ಕಳ್ಳನವನುಧಿಟ ||  || ಅನು ಪಲ್ಲವಿ ||

ಗಂಗೆಯಣುಗನವಗೇ | ಜಲಮಂತ್ರವ | ಭಂಗವಿರದ ಹಾಗೇ ||
ಕಿವಿಯೊಳ | ಗಂಗವರಿದುಪೇಳೇ | ಭೀತಸಲಿಲ | ರಂಗಕಿಳಿದಕೇಳೆ ||
ಪಿಂಗದೆಸಿದ್ಧಿಯೋ | ಳಿಂಗಿತವದುಸಲೆ | ಸಂಘಟಿಸಲುಖಳ | ನುಂಗುವನೆಮ್ಮನು || ವೊಳ್ಳಿತಾಯ್ತು ಕಾರ್ಯಾ  ||೧೮೨||

ಕಾಮಪಾಲಕೃಪನೂ | ಗುರುಸುತ | ರೊರ್ಮೆಬರಲುನೃಪನೂ ||
ಕಾಲದ | ನೇಮವರಿತುಮನದೀ | ನಾಳೆಗೆ | ಭೀಮಬಲನುಧುರದೀ ||
ಭೀಮನೊಳೊದಗುವ | ಕಾಮದೆನಿಂದಿಹ | ನಾಮಹಕೊಳನೊಳು | ತಾಮಸತಂತ್ರದೆ || ವೊಳ್ಳಿತಾಯ್ತು ಕಾರ್ಯಾ  || ೧೮೩ ||

ಬಲಕೃಪರೈತರಲೂ | ನಮ್ಮೊಳು | ಬಲವಧಿಕರಿಸಿರಲೂ ||
ಧುರದೊಳು | ಗೆಲಲಿಕವರನರಿದೂ | ತ್ವರಿತದೆ | ಛಲಮತಿಯನುತರಿದೂ ||
ಬಲದಿಂದವನನು | ಕೊಳದಿಂಪೊರಡಿಸಿ | ತಳುವದೆಕೈವಶ | ಗೊಳಿಸುವುದತಿಹಿತ || ವೊಳ್ಳಿತಾಯ್ತು ಕಾರ್ಯಾ || ೧೮೪ ||

ಭಾಮಿನಿ

ವಾರಿಜಾಂಬಕನೆಂದನುಡಿಯನು |
ವೀರರೈವರು ಕೇಳಿಪೊರಟರು |
ಮೀರಿದುತ್ಸವದಿಂದ ಮಧುರಿಪುಸಹಿತ ಪಾಂಡವರೂ ||
ಚಾರುವೈಶಂಪಾಯನದಸರ |
ತೀರ ಕೈತಂದವರು ಪಜ್ಜೆಯ |
ನೂರಿಪಿಂದಕೆ ಸರಿದ ಚಿತ್ರವಕಂಡು ಯಮಸುತನೂ  || ೧೮೫ ||

ಕಂದ

ಭರತಜರೊಳ್ಮುನ್ನಿಲ್ಲದ |
ಪರಿಭಾಷೆಯನುಂಟುಮಾಡಿ ಪೆರಗಡಿಯಿಟ್ಟಂ ||
ಕುರುರಾಜನೆಂದು ಲಜ್ಜಾ |
ಭರದಿಂದಂ ತಲೆಯ ಬಾಗಿದ ಯಮಜನಾಗಳ್  || ೧೮೬ ||