ವಾರ್ಧಕ
ಶಿಲೆಗೆರೆದ ನೀರಾಯ್ತು ಮದ್ಬೋಧೆ ಶಿವಶಿವಾ |
ತಲೆತಿರುಕನೆಂದಿವನ ತೊರೆಯಲೇ ಋಣಭಾರ |
ಮುಳಿದಪುದು ಸೇವ್ಯನಿವಗದರಿಂದಲನುಕೂಲವೃತ್ತಿಯಿಂದರುಹಿನೋಳ್ಪೇ ||
ಪಳಿವನಿವ ನುಡಿಗೆಡೆಯಗೊಡಲಾರನೆಂತಾದೊ |
ಡಳುಕೆನೆಂದೊರೆದನೆಲೆ ಕುರುರಾಯ ಗುರುಸುತಂ |
ಬಲದೇವ ಕೃತವರ್ಮ ಕೃಪರಿತ್ತ ಬರುವನಕ ನೀಕಾದು ಬಳಿಕಲವರಾ || ೭೭ ||
ಮತವಿಡಿದು ನಾಲ್ವರೊಳಗೊರ್ವಂಗೆ ನೀಕಟ್ಟು |
ಪತಿಕರಿಸಿ ಸೇನಾಧಿಪಟ್ಟಮಂ ಬಳಿಕಿರಿದು |
ಮತಿವಂತಪಗೆಗಳಂ ಕೈವಶವ ಮಾಳ್ಪುದೆನೆ ಕುರುಜನಪ ನುಡಿದನವಗೇ ||
ಹಿತವಹುದು ರಿಪುಗಳಂ ಜಯಿಸಿದೊಡೆ ಸುರನದಿಯ |
ಸುತನಿಂದ ಗುರುಕರ್ಣರಿಂಸಾಗದಾಹವಂ |
ಪತಿಕರಿಸೆ ಗುರುಸುತನೊಳಪ್ಪುದೇನ್ಬಿಡುಬರಿದೆ ಮತಿವಿಕಳ ವಾಕ್ಯಾರ್ಥವಾ || ೭೮ ||
ವಚನ || ಆಗಳ್ ಧೃತರಾಷ್ಟ್ರ ಗಾಂಧಾರಿಯರ್, ಸುಯೋಧನನಿರವಂ ಕಾಣದೆ ರಣಭೂಮಿಯೊಳ್ ಕರೆಕರೆದರಸುತ್ತಂಬರೆ ||
ಕಂದ
ಪಡೆಪನ್ನೊಂದಕ್ಷೆಹಿಣಿ |
ಗೊಡೆಯನೆ ಮೂರ್ಧಾಭಿಷಿಕ್ತನೈ ಮೂರುಂಬೆಳ್ ||
ಗೊಡೆಯನಡುವಿರ್ಪನೀನಿ |
ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ || ೭೯ ||
ವಚನ || ಎಂದಳುತ್ತಂಬರುವ ದಂಪತಿಗಳಾಗಮನಮಂ ತಿಳಿದಾಗಳೆ ಸಂಜಯಂ, ಮುಕುಳಿತ ಕರಪುಟನತಿ ದೈನ್ಯದೊಳಂ, ಕುರುಭೂಪಾಲಕಗೆಚ್ಚರಿಸಲ್, ಕೇಳ್ದೊಡನಾದುರ್ಯೋಧನಂ ||
ಕಂದ
ಶೋಕಂ ಮಿಗೆ ಫಣಿರಾಜಪ |
ತಾಕಂ ವಿಕಳಿತ ವಿವೇಕ ಶೂನ್ಯಂ ಬಾಷ್ಪೋ ||
ದ್ರೇಕಂ ಹಾ ದುಶ್ಯಾಸನ |
ಹಾಕರ್ಣಾ ಎನುತಮಂತೆ ಮೂರ್ಛೆಗೆ ಸಂದಂ || ೮೦ ||
ವಚನ || ಅಂತು ಮೂರ್ಛಾಪ್ರಸಂಗನಾದ, ಪನ್ನಗ ಪತಾಕಂಗೆ, ಶಿಶಿರೋಪಚಾರಂಗಳಂ ಮಾಳ್ಪಸಂಜಯನಿರವಂ ತತ್ಪರಿಜನಂ ಕಂಡು ಪೇಳೆ ಗಾಂಧಾರಿ ಮನದೊಳಲ್ಕಿನನೆ ಕೊನೆವೋಗುತ್ತಂ ||
ರಾಗ ಬೇಗಡೆ ತ್ರಿವುಡೆತಾಳ
ಬಾಲಕೌರವನೆಯೆನ್ನಾ | ವಂಶದರನ್ನಾ | ಬಾಲ ಕೌರವನೆಯೆನ್ನಾ | || ಪಲ್ಲವಿ ||
ಅಮೃತಕರ ಕುಲಸೋಮವಲ್ಲಿಗೆ | ವಿಮಲಸುರಕುಜಸಮರ ಸಾಹಸ |
ನಮಿತ ಭೂಭುಜ ಮಗನೆ ಮಡಿದೈ | ಕುಮತಿಭೀಮನ ಗದೆಯ ಘಾತಕೆ || ಅನು ಪಲ್ಲವಿ ||
ತಾತಗಂಧನೃಪಾಲಗೆ | ಮಾತೆಗೆನಗೆ | ಈ ತೆರನೆಸಗಿಪೋದೆಯಾ ||
ಮಾತನಾಡದೆ ಮುನಿಸಿದೇತಕೋ | ತಾತ ಕೌರವ ಜರೆಯ ಕಾಲಕೆ |
ಜಾತ ನಿನ್ನೀತನುವೆ ನಮಗಿದು | ಪೂತಕೈಗೋಲಿರಲು ಸೆಳೆದೆಯ |
ಪಾತಕರು ನಾವಾದ ಕಾರಣ | ಧೂರ್ತಜವನೇಗೈದನಿನಿತಕ |
ನಾಥರಾಗಲು ನಮ್ಮನೇನಹ || ಬಾಲಕೌರವನೆ || ೮೧ ||
ಜನಕಜನನಿಯರೆಮ್ಮನು | ಕಾಣಲಿನಿತು | ಮನಕೆ ಲಜ್ಜೆಯೆ ಮಗನೇ ||
ಮಣಿಯದೆರಗದೆ ಗುರುಜನಂಗಳ | ಕಣಿಯೆ ಪರಕೆಯನಾನದೀಪರಿ |
ಮೌನವಿರ್ಪುದು ಸರಿಯೆ ಕೌರವ | ದಿನಪಸುತ ದುಶ್ಶಾಸರೇನವ |
ರಿನ್ನು ಮರುಗಲು ಬರುವರೇನ್ಬಿಡು | ಬನ್ನಗೊಳಿಸಲು ಬೇಡವೃದ್ಧರ |
ಯನ್ನ ಕರುಳಿನ ಕಣವೆ ಮಾತಾ | ಡೆನಲುಧೊಪ್ಪನೆ ಕೆಡೆದನಂಧಕ ||
ಬಾಲ ಕೌರವನೆಯನ್ನ || || ೮೨ ||
ವಚನ || ಇಂತಾಧೃತರಾಷ್ಟ್ರಂ ಸುಯೋಧನನಂಘ್ರಿಯೊಳ್ವಿದ್ದು ಪೊರಳ್ದವಂ ದುಃಖದೊಳ್ ||
ಕಂದ
ಹಾ ಕುರುಕುಲಚೂಡಾಮಣಿ |
ಹಾ ಕುರುಕುಲಚಕ್ರವರ್ತಿಹಾಸಕಲಧರಿ ||
ಶ್ರೀಕಾಂತನಿನ್ನು ಮಂಪರ |
ಲೋಕಕ್ಕಟ್ಟಿದನೆ ಕಾಯ್ದು ಮಾಯ್ದು ವಿಧಾತಂ || ೮೩ ||
ರಾಗ ಸಾಂಗತ್ಯ ರೂಪಕತಾಳ
ಮನಮರುಗಿ ಬಾಯಾರಿ ಹಾಯೆಂದು ಮೊರೆಗೊಡುವ | ಜನಪಾಲಗಾಂಧಾರಿಯರನೂ ||
ಅನುವರಿದು ತಕ್ಕೈಸಿ ಸಂಜಯನು ಬಳಿಕೆಂದ | ಮನದೆಣಿಕೆ ಬೇರಾಯ್ತು ನಿಮಗೇ || ೮೪ ||
ಅನುಜಾತರಿನಜಾದಿ ಭಟರಳಿದ ಶೋಕದೊಳು | ಜನನಾಥಧೃತಿಗೆಟ್ಟು ನೆಲದೀ ||
ಇನಿತಿರ್ಪ ಮೈಮರೆದು ಚಿಂತಿಸಲುಬೇಡಯ್ಯ | ಕಣ್ದೆರೆವನವನೀಶನೀಗಾ || ೮೫ ||
ಸಂದೇಹಮಿಲ್ಲೆಂದು ಸಂತೈಸಿ ನಯನಾಂಬು | ಬಿಂದುಗಳ್ ಸೂಸಲಂಧಕಗೇ ||
ಬೆಂದೊಡಲಿನುಚ್ಛ್ವಾಸ ಪರಿಘೋಷಮಾಗಲ್ಕೆ | ಕಂದೆರೆದು ಕೌರವನು ಮಣಿಯೇ || ೮೬ ||
ವಚನ || ಕೌರವಂ ಪದಕೆರಗಿದನೆಂದಾಗಳ್ ಸಂಜಯಂ ಸೂಚಿಸಲ್, ಅಂಧನೃಪಾಲಂ ಪರಸುತ್ತವನಂ ||
ರಾಗ ಮಧುಮಾಧವಿ ತ್ರಿವುಡೆತಾಳ
ಬೇಡ ಮಗನೇ ಪಾಂಡುಪುತ್ರರ | ಕಾಡದಿರುಸಿರಿವನಿತೆಗಾದಳು |
ಜೋಡಿಯವರಿಗೆ ಜಯಮಹಾವಧು ||
ಕೇಡುಗರ ಮತದಿಂದ ನಿನಗಹ | ಪಾಡಿದಾಯ್ತೂ || ೮೭ ||
ಸಮರಸಲ್ಲದು ಮಗನೆ ನಿನಗೀ | ಸಮಯಸಲ್ಲದ ಕಾಲವಕಟಾ |
ಭ್ರಮೆಯಗೊಳ್ಳದೆ ಸಂಧಿಗೊಡಬಡು ||
ಯಮಜನೊಳ್ಳಿದನಹನು ಧಾರ್ಮಿಕ | ಸುಮತಿಯವನಾ || ೮೮ ||
ನುಡಿಯ ಸೋದರರೊಪ್ಪುಗೊಂಬರು | ತಡೆಯದೀಗಳೆ ಸಂಜಯನನವ |
ರೆಡೆಗೆಕಳುಹುವೆ ಕುರುಕುಲಾಂತಕ ||
ನೊಡನೆ ಪಗೆತನ ಬೇಡ ಬೇಡುವೆ | ತೊಡಕು ಮಗನೇ || ೮೯ ||
ಕಂದ
ಕಲ್ನೀರಾಗುವ ತೆರದೊಳ್ |
ನಲ್ನೀತಿಯೊಳಾ ಸುಯೋಧನಂಗವರರುಹಲ್ ||
ಕಲ್ಲೆದೆಗಾರಂ ಹಿರಿಯರ |
ಸೊಲ್ಲರಿದಾಗಳ್ ನಯೋಕ್ತಿಯೊಳಗಿಂತೆಂದಂ || ೯೦ ||
ರಾಗ ತೋಡಿ ಅಷ್ಟತಾಳ
ಲಾಲಿಸೆನ್ನಯ ಮಾತೆ ಮಾತಾ | ಯೇನ | ಪೇಳ್ವೆನಾನಿದಕೆನ್ನ ತಾತ ||
ಜಾಲವಪ್ಪುದೆನುಡಿ ಧರ್ಮನಂದನನ |
ಕಾಲಗತಿಯಲೀಲೆಗಾಳಾದನವನಾ || ಲಾಲಿಸೆನ್ನಯ || ೯೧ ||
ಕೇಳೊಂದು ಕೃತಕಭಾಷೆಯನೂ | ಪೇಳ್ದ | ಕಾಲನಾತ್ಮಜನೆಂಬೆನದನೂ ||
ಬಾಳಿಕೊಂಡಿರುವನು ಜಾತರ್ನಾಲ್ವರೊಳೂ |
ಕಾಲವಶದೊಳೊರ್ವನಳಿಯಲಾಕ್ಷಣದೊಳು || ಲಾಲಿಸೆನ್ನಯ || ೯೨ ||
ಜ್ವಲಿಪಗ್ನಿಯೊಳೆ ಬೀಳ್ವೆನೆಂದೂ | ಆಹಾ | ಛಲದ ಭಾಷೆಯತಾಳ್ದನಂದೂ ||
ಅಳಿದರೆನ್ನನುಜಾತರ್ನೂರ್ವರಿಂದೂ |
ಉಳಿವುದೆಂತೊಡಲೆನ್ನ ಸಾಯದೆ ಬೆಂದೂ || ಲಾಲಿಸೆನ್ನಯ ಮಾತ || ೯೩ ||
ಅನುಜರ್ಗಾದುದೆ ತನ್ನಗತಿಯೂ | ಅಪ್ಪ | ತನುಜರಾಪ್ತರೆಯೆನ್ನ ಧೃತಿಯೂ ||
ಎನಗಿನ್ನು ಪೇಳದಿರ್ಬಿಡುವುದಾಶೇ |
ದಿನಘಟಿಯಾಯ್ತೀಗಬಿಡಲೆಂತು ಭಾಷೆ || ಲಾಲಿಸೆನ್ನ ಮಾತಾ || ೯೪ ||
ಕಂದ
ಸಾಧಿಸುವೆಂ ಫಲ್ಗುಣನಂ |
ಸಾಧಿಸುವೆಂ ಪವನಸುತನ ಬಸಿರಿಂ ಹಾ ಕ |
ರ್ಣಾದುಶ್ಶಾಸರತೆಗೆವೆಂ |
ನಿರ್ದೋಷಿ ಬಳಿಕ್ಕೆ ಯಮಜನೊಳ್ಪುದುವಾಳ್ವೆಂ || ೯೫ ||
ರಾಗ ಮಧ್ಯಮಾವತಿ ಏಕತಾಳ
ತಾತ ಕೇಳೆನ್ನ ಮಾತಾ | ಪೆತ್ತಮ್ಮ | ಪ್ರೀತೇಕೇಳ್ಸು ಪ್ರಖ್ಯಾತೆ || ತಾತ ಕೇಳೆನ್ನ ಮಾತಾ || ಪಲ್ಲವಿ ||ನಿಮಗಾನು ಮಗನೆಂಬ ಭ್ರಮೆಗೊಳ್ಳದಿಹುದೂ |
ಯಮಜಾತನೊಡಗೂಡೆ ಸಮನಾಗ ಬಹುದೂ ||
ಕ್ಷಮೆಗೊಳ್ಳಬೇಕೆನ್ನ ನಮಸ್ಕಾರ ನಿಮಗೇ |
ಯೆಮಗಿಲ್ಲಋಣಭೋಗ ನಿಮಗಿರ್ಕೆಕೊನೆಗೇ || ತಾತ || ೯೬ ||
ಬಿಡಿರೆನ್ನನೆಂದಾಗ ಪೊಡಮಟ್ಟುಪದಕೇ |
ನಡೆಗೊಳ್ಳೆ ಮರುಗುತ್ತ ಬಿಡದಾಗ ಧುರಕೇ ||
ತಡೆದೆಂದ ಧೃತರಾಷ್ಟ್ರ ಕಡೆಗೊಂದುಬೆಸನಾ |
ಧೃಡವಾಯ್ತೆ ಛಲವಿಂತು ಮಡಿವಾಶೆ ಜತನಾ || ತಾತ || ೯೭ ||
ಯಿನಿತೊಂದ ನೀಮಾಳ್ಪುದೆಮಗಾಗಿ ಹಿತವಾ |
ವಿನಯಾತ್ಮನಿಹ ಭೀಷ್ಮ | ನನು ಕೇಳಿತಿಳಿದೂ ||
ಅನುಗೊಂಡ ತೆರನಾಗು ಮನಕಿಲ್ಲಪಿರಿದೂ |
ಎನಲೆಂದ ಕುರುಭೂಪ ಜನಕಂಗೆ ಮಣಿದೂ || ತಾತ || ೯೮ ||
ಯೆನಗೀಗ ನೀವೆಂದುದನು ಮಾಳ್ಪೆ ಜವದೀ |
ಮನಕಾಯ್ತೆ ಪರಿತೋಷ ಜನಕಂಗೆ ನಯದೀ ||
ಕೊನೆಗಿದೋ ನಿಮಗಮ್ಮವಿನಮ್ರನಾಗೀ |
ತನುಬಾಗಿ ನಮಿಸಿರ್ಪೆ ಪುರದತ್ತಸಾಗೀ || ೯೯ ||
ಕಂದ
ಗುರುಜನರಂಬೀಳ್ಕೊಳುತಂ |
ಭರದೊಳ್ನಿಜ ಭುಜ ಸಹಾಯದೊಳ್ಗದೆ ಗೊಳುತಂ ||
ಧರಣಿಪನೊಡನಿರೆ ಸಂಜಯ |
ನೊರುವಂ ರಣಭೂಮಿಗೆ ನರಪತಿನಡೆತಂದಂ || ೧೦೦ ||
* * *
ದ್ವಿತೀಯಾಂಕ ಪ್ರತಿಮುಖ ಸಂಧಿ
ಭಾಮಿನಿ
ಘನಪರಾಕ್ರಮಿ ಕೌರವೇಶ್ವರ |
ಪೆಣನ ರಾಶಿಯನೇರುತಿಳಿಯುತೆ |
ಪೊನಲರಕುತದ ಪೊಳೆಯನುತ್ತರಿಸುತ್ತ ನಡೆತರಲೂ ||
ಮನದಿ ಮರುಗುತಲೆಂದ ಸಂಜಯ |
ಜನಪ ನಿನಗೀವಿಧಿಯೆ ಬಳಲಿದೆ |
ಕಣೆಯ ಕೊಂತದ ಮೊನೆಯ ಕಣದೊಳಗೆಂತು ಕಾಲ್ದೆಗೆವೇ || ೧೦೧ ||
ವಚನ || ಎನೆ ಮರುಳೊಂದಾಡಿದುದಾಗಳೆ ನವಭೂತಭಾಷೆಯೊಳ್ ||
ರಾಗ ಘಂಟಾರವ ಏಕತಾಳ
ಎಲವೆಲೊ ಓ ಓ ಕೌರವನೇ | ಭಳಿರೈ | ಭಲನಿಲುಮಾತಿದೆ | ಖಲನೀಭೂವರನೇ ||
ಅಲಲಲ ಕಾಯ್ತೆನಿ ನಿನ್ಸಾವಾ | ಹಸಿಬಿಸಿ | ಪಲಲದ ತೊಡೆತೋಳ್ತಿನಿಸಿಗೆನನ್ಬಾವಾ ||
ಎಲವೆಲೊ ಓ ಓಕೌರವನೇ || ೧೦೨ ||
ಕಲಶಜನುದರದರಕುತವನೂ | ಕುಡಿಯಲಿ | ಕಲಸಿದೆ ಹೇಸುತೆ ಭೂಸುರನೆಂದವನೂ ||
ಕೊಳೆತಿದೆ ಪೆಣಗಳ ರಾಸಿಗಳೂ | ಹುಡುಕಿದೆ |
ಕಣದೊಳು ತೋರದು ಪೊಸಪಸಿಮಾಂಸಗಳೂ || ಎಲವೆಲೊ || ೧೦೩ ||
ಬಲ್ಲಿದ ನಿನ್ನಯ ಸೋದರನಾ | ನೆತ್ತರ | ನೆಲ್ಲವ ಭೀಮನೆ ಕುಡಿದನು ಬಗಿದವನಾ ||
ಅಲ್ಲಿಹನೊರ್ವನುಮುದಿಬರಡಾ | ಸಾಯನು |
ಮುಳ್ಳಿನ ಕಣೆಯೊಳೆ ಮಲಗಿಹನ ತಿವಿಗಡ || ಎಲವೆಲೊ || ೧೦೪ ||
ಕುರುಪತಿ ನಿನ್ನಯಕೆನ್ನೀರಾ | ಕುಡಿಯಲು | ಪರಿತಪಿಸುತಲಿಹೆ ಬಿಸಿಬಿಸಿಯನು ಬೀರಾ ||
ಅರಿತಿರು ಪೋದೊಡೆ ನಿನ್ನೂರಾ | ಪವನಜ |
ಮುರಿಯಲು ಕಾದಿಹನೀಕಡೆಗವಬಾರಾ || ಎಲವೆಲೊ || ೧೦೫ ||
ಕಂದ
ಮರುಳಿನ ಮಾತಿನೊಳಿಲ್ಲಂ |
ಪುರುಳೆನುತವನೀಶ್ವರನಡಿಗೊಳಲಾ ಪ್ರಮಥಂ ||
ಕರೆದಾರ್ಭಟಿಸುತಲೆಂದುದು |
ಮರುಳಂ ಪೇಳಾರ್ದುರುಳನೆ ನಮ್ಮಿರ್ವರೊಳಂ || ೧೦೬ ||
ರಾಗ ಶಂಕರಾಭರಣ ಝಂಪೆತಾಳ
ವಿಷದ ಲಡ್ಡುಗೆಯಿಂದ | ಪೊಸಮಾಡದುರಿಯಿಂದ |
ನಸಿದೊಡಲ ಮೂಳೆಗಳ | ಪೆಸರಾಟದಿಂದಾ ||
ಶಶಿಮುಖಿಯ ಸೀರೆಯೊಳು | ಕಸುದೋರಿ ಕಪಟದೊಳು |
ಅಸುವಿಡಿದು ಜೀವಿಸಿದ | ಪುಸಿಗಾರಚೋರಾ || ೧೦೭ ||
ಆತತಾಯಿಗನೆ ಸುಡು | ವಾತಜನ ಪಗೆಯೊಳೀ |
ಭೀತಿಗೆಡೆಯಾದೆ ಖಲ | ಪೇತುಗನೆ ಮರುಳಾ ||
ಭೂತ ಕೋಟಿಗಳಿಂಗೆ | ನಾಥನೆಂದೆನಿಸುತೀ |
ಪೂತರಣ ಕಣದೊಳಿಹೆ | ನಾರ್ತಿರುಕಪೇಳೂ || ೧೦೮ ||
ಮರುಳೆಂದ ಮಾತಿಗಾ | ಕುರುಭೂಪ ಕಿವಿಗುಡದೆ |
ಭರದಿ ಮುಂದೈದುತಿರೆ | ಕರೆದಡ್ಡಗಟ್ಟೀ ||
ಮರುಳನಾರ್ಪೇಳಣ್ಣ | ಬರಿದೆಬಿಡೆ ಪೋಗದಿರ್ |
ಹರನಾಣೆ ಮೀರಿದೊಡೆ | ಮರುತಸುತನಾಣೇ || ೧೦೯ ||
ಕಂದ
ಶಿವನಾಣೆಗೆ ನಿಂದಿರೆ ಕೌ |
ರವನಾ ಪವಮಾನಿಯ ಪೆಸರೆತ್ತಲ್ ಭೂತಂ ||
ಜವನೊಲ್ಗದೆಗೊಳೆ ಸಂಜಯ |
ನವನಂ ಸಂತವಿಸುತಾ ದುರಂತವ ನೀಗಲ್ || ೧೧೦ ||
ವಚನ || ಮತ್ತಾಸುಯೋಧನಂ, ಸಂಜಯನ ಕೈವಿಡಿದು ಮುಂದೆವರೆ ಬರೆ | ಕಡಿವಡೆದ ಕುಂಭಜನ ಮೃತದೇಹಮಲ್ಲಿರಲು, ಕಂಡು ಮನನೊಂದು, ಬಿಸುಸುಯ್ವುತ್ತುಂ ||
ರಾಗ ನೀಲಾಂಬರಿ ರೂಪಕತಾಳ
ಗುರುವರ ನಿನಗೀ ವಿಧಿಹಾ | ಧುರದೊಳಗೊದಗಿತೆ ಶಿವಶಿವ |
ನರನಂತಿರಲಾ ಧೂರ್ಜಟಿ | ನೆರೆಯನು ಸಮರದಲೀ ||
ಕಿರಿದಾದುದೆ ಪುಣ್ಯದ ಫಲ | ಪಿರಿದಾಲಸ್ಯವ ತಾಳ್ದಿರೆ |
ಕರುಬರಭಾಗ್ಯದೆ ಸಾವಿದಿ | ತರಿಯಲು ನಿಮಗಾಯ್ತೇ || ೧೧೧ ||
ಬಲವೆಂದೆರಗುತೆ ಕುರುನೃಪ | ಬಳಿವಿಡಿದೈತರೆ ಸಮರದಿ |
ಛಲದಿಂಕಾದುತ ನಿಜಭುಜ | ಬಲವನು ಕಾಣಿಸಿದಾ ||
ಪೊಳೆಯುವರುಣಜಲಸರಸಿಯ | ಚೆಲುವಿನ ಕೆಂದಾವರೆಯೆನೆ |
ಬೆಳಗುತೆ ವಿಜಯಾತ್ಮಜನಿರೆ | ಕುಲಕಂಠೀರವನೂ || ೧೧೨ ||
ವಚನ || ಆ ಕಡುಗಲಿಯಪ್ಪಭಿಮನ್ಯು ಕುಮಾರನ ಕಳೇಬರಮಂ ಕಂಡಾಸುಯೋಧನಂ ||
ರಾಗ ಕಾಂಭೋಜಿ ಅಷ್ಟತಾಳ
ಸರಿಗಾಣೆ ನಿನಗಯ್ಯ ಮಗನೇ | ಆಹ | ಕುರುವಂಶವಿಯದಭಾಸ್ಕರನೇ || ಪಲ್ಲವಿ ||
ಪಲರಿರ್ದು ಕಾದಿದಡಳುಕದೆಸಮರದಿ |
ತಲೆಯಗಡಿದೈ ನಿನ್ನ ಪೆತ್ತಳ್ | ಮೊಲೆಯವೆತ್ತಳದೇನು ಧನ್ಯಳೊ || ಸರಿಗಾಣೆ || ೧೧೩ ||
ಇನಿತೊಂದು ಕೃತಕಾರ್ಯಭರನ | ಸಾ | ವೆಣಿಸಿರ್ಪುದಹ ನಿನ್ನ ತೆರನ ||
ಗುಣರನ್ನ ನಿಜಸಾಹಸೈಕದೊಳೊದಗಲಿ |
ಕೊನೆಯಮರಣವದೆನುತ ಪ್ರಾರ್ಥಿಪೆ | ತನಯ ನಿನ್ನಡಿಗೆರಗಿ ಮನದೊಳು || ಸರಿಗಾಣೆ || ೧೧೪ ||
ವಚನ || ಅಂತಭಿಮನ್ಯುಗೆ ಕೆಯ್ಗಳ ಮುಗಿದುಬರೆ ಮುಂದಾಸನ್ನ ಪ್ರದೇಶದೊಳ್ ತನ್ನ ಕುಮಾರನಪ್ಪ ಲಕ್ಷ್ಮಣಂ ಕೆಡೆದಿರೆ ಕಾಣುತ್ತುಂ ಶೋಕೋದ್ರೇಕನಾಗಿ ಧೊಪ್ಪನೆ ಕೆಡೆದುಂ ||
ರಾಗ ನೀಲಾಂಬರಿ ಆದಿತಾಳ
ಹಾಮಗನೇ ನೀ ಮಡಿದೆಯಯ್ಯೋ | ಕಾಮಸನ್ನಿಭರುಚಿರಾ ||
ಸೋಮವಂಶದ ಸಿರಿಯೆನೀಹಾ | ಪ್ರೇಮವಿಲ್ಲದೆ ಪೋದೇ || ಹಾ ಮಗನೇ || ೧೧೫ ||
ಎನಗೆ ನೀಜಲ ದಾನವೀಯದೇ | ನಿನಗೆ ನಾಕುಡಲಾಯ್ತೇ ||
ತನುಜನೆನಗೇ ಸಾವಕಾಲಕೇ | ಇನಿತುಗತಿಯೇಕಾಯ್ತೋ || ಹಾಮಗನೇ || ೧೧೬ ||
ಕಂದ
ಎನ್ನಯ ದೃಗ್ಜಲದಿಂದಂ |
ರನ್ನನೆ ನಿನಗಂತಿಮಜಲದಾನವನೀವೆಂ ||
ಪೊನ್ನಿನ ಮಣಿಪಾಪಿಯೊಳಂ |
ಚೆನ್ನಿಹುದೆಂತೈಕಳಂಕಿತೀಭವದಾಟಂ || ೧೧೭ ||
ವಾರ್ಧಕ
ಎಂದಲ್ಲಿ ನಿಲಲಾರದಾನೃಪಂನೊಂದು ಮನ |
ದಂದುಗದೆ ಕಂದವೃಷಸೇನಗಂ ಮರುಗುತ್ತೆ |
ಮುಂದೆ ಬರೆ ಧರ್ಮಜನ ಶರಹತಿಗೆ ಮಡಿದಿರ್ದ ಮಾದ್ರೇಶನಂ ಕಂಡನೂ ||
ಪಿಂದಲ್ಲಿ ನರನಶರಕೊಡಲಿತ್ತ ಭಗದತ್ತ |
ಸೈಂಧವರ್ಬದಿಯೊಳಿರೆ ಸಹದೇವಖಡ್ಗೋಗ |
ದಿಂದಳಿದ ಶಕುನಿಯಂ ನಕುಲಾಂಕನುರುಕೊಂತಕಸುವಿತ್ತದಂದ ಶುಕರಾ || ೧೧೮ ||
ಪೆಣಗಳಂ ದಿಟ್ಟಿಸುತೆ ಸಂಶಪ್ತಕಾದಿಗಳ |
ನೆನೆದೊರ್ಮೆ ಬಿಸುಸುಯ್ದು ಮರುಕ ಮಿಗೆ ಕೌರವಂ |
ರಣದೆ ಹಾ ಲೋಕೈಕವೀರರಿರ ನಿಮಗೊದಗಿದೀಭವಣಿತನ್ನದೆನುತಾ ||
ಮಣಿದವಂಕಂಬನಿಯ ನೀರಿತ್ತು ಮುಂದೈದೆ |
ಕಣದೆಡೆಯ ಕೌತುಕವ ತೋರಿಸಿದ ಸಂಜಯಂ |
ಜನಪಾಲ ನೋಡಿಲ್ಲಿ ಮರುತಸುತ ನಿನ್ನನುಜನಂ ಸೀಳ್ದರೌದ್ರರಸವಾ || ೧೧೯ ||
ವಚನ || ಆಗಳ್ ಕೌರವನದನೀಕ್ಷಿಸೆ ||
ರಾಗ ತೊಡಿ ರೂಪಕತಾಳ
ಸೋದರನ ಕಣ್ಣುಗಳ ಕಾಗೆಗಳ್ ಕರ್ದುಂಕೆ | ಛೇದಿಸಲು ಪರ್ದುಗಳ್ಕರುಳಾ ||
ಭೇದಿಸುತ್ತಿರೆ ನಾಯಿ ಸೀಳ್ದೆತ್ತಿ ಸ್ನಾಯುಗಳ | ವಾದಿಸುತ್ತಿರೆ ಭೂತ ನಿಚಯಾ || ೧೨೦ ||
ಬೆನ್ನೆಲುಬ ಬೇತಾಳರೆಳೆದೊಟ್ಟ ರಕ್ಕಸಿಯ | ರಿನ್ನೇನು ತಮಗೆಂದು ಭರದೀ ||
ಮುನ್ನಾಯ್ದು ಕೆನ್ನೆಯನು ಕತ್ತಿಯೊಳ್ಕಡಿದಿಡುವ | ಬನ್ನಗಳ ಕಂಡಲ್ಲಿ ನೃಪತೀ || ೧೨೧ ||
ರಾಗ ಬೇಗಡೆ ತ್ರಿವುಡೆತಾಳ
ಬಾಲದುಶ್ಶಾಸನನೆ ಹಾ | ಅನುಜ ಸೌ | ಶೀಲ ಮೂರುತಿಯೇ ಹಾ || ಪಲ್ಲವಿ ||
ತಾಯ ಮೊಲೆಯನು | ಕುಡಿದೆನಾಮೊದ | ಲಯ್ಯೋನೀಬಳಿಕದನೀಂಟಿದೆ |
ಪೇಯಸೋಮಾವೃತವನಾಸವಿ | ದೀಯೆನೀನದನುಂಡ ಮರಿಯೈ || ಅ. ಪಲ್ಲವಿ ||
ಆವಕಾರ್ಯವ ಪೇಳಲು | ಒಡನೆಧೈರ್ಯದಿ | ಸಾವಿಗಂಜದೆ ಗೈಯುವ ||
ಭಾವಶುದ್ಧಿಯ ವೀರಸೋದರ | ವಿನಯಮತಿ | ಸಾವಿಗೆನ್ನಿಂ ಮುನ್ನ ಸಂದೈ | ಸಹಜಹಾ |
ಪಾವಮಾನಿಯೊಳೊದಗಿಧುರದಲಿ | ಮಡಿದೆಯಾ | ಸಾವು ನಿನಗಲ್ಲೆನಗೆ ಸಮನಿಸಿ |
ತಾವವಿಧದಿಂದಾಡದವನನು | ಭೂವಲಯದೊಳಗಿಲ್ಲವೆನಿಸುತೆ |
ಕೋವಿದನೆ ನಿನಗಣ್ಣ ನೆನಿಸುವೆ || ಬಾಲ ದುಶ್ಶಾಸನನೆ || ೧೨೨ ||
ನೋಡಲಿಕಾಗದೆ ಜನಪಾ | ರಣದಕಣದೆ | ಪಾಡಳಿದೈತರೆ ನೆಲದೇ |
ಮೂಡಲಾಸೆಯನೇಸರಂಬಿನ | ವೀರಭಟ | ಜೋಡುಗಾಣದ ದಾನಚಿಂತಾ | ಮಣಿಯಂಗ |
ನಾಡಿನಗ್ಗದ ಮಂಗಳಾತ್ಮಕ | ನಂಗವಿರೆ | ರೂಢಿಪತಿಗನುಗಾಲ ಸೇವೆಯ |
ಮಾಡುವಾಳ್ತನದಿರವ ಕಾಣಿಸಿ | ನೋಡುವನೆ ತಾನೆಂಬ ಕರ್ಣನ |
ನೋಡಿದನುಕುರುಧಾರುಣೀಶ್ವರ || ಬಾಲದುಶ್ಯಾಸನನೆ || ೧೨೩ ||
ವಚನ || ಅಂತಿರ್ದವನಿವಂ ಶೋಕಾನಲದಹ್ಯಮಾನಾಂತಃಕರಣನಾಗಿರ್ದ ಸುಯೋಧನಂ ನೋಡಿ ||
ರಾಗ ನೀಲಾಂಬರಿ ರೂಪಕತಾಳ
ಶಿವ ಶಿವ ಹಾಸಖ ಸೂರ್ಯಜ | ಭವಣಿಯೆ ನಿನಗೀರಣಕಣ |
ದವನಿಯೊಳೆನ್ನಯ ಪಾಪದ | ನವಲಿಪಿಶಾಸನವೇ ||
ಭವರಕೆದುಶ್ಶಾಸನ ಬಳಿ | ಕಿರ್ವರು ನಾವಿರ್ದೆವು ಗಡ |
ಜವನೊಯ್ದನು ಸೋದರನನು | ಶಿವನಿನಗಿನಿತಾಯ್ತೇ || ೧೨೪ ||
ನೀನಿಲ್ಲದೆ ಬಾಳ್ಪೆನೆ ಪೇಳ್ | ನೀನಿಲ್ಲದೆ ನೆಲನಿದನಾಳ್ಪೆನೆ |
ನೀನಿಲ್ಲದೆ ಸಂಧಿಯೆ | ಮಾನಿತಹಾಕರ್ಣಾ ||
ನಿನ್ನಯ ಮಗ ವೃಷಸೇನನು | ಎನ್ನಯ ಮಗ ಲಕ್ಷಣನೀ |
ಚನ್ನಿಗರಳಿವಿನ ಮರುಕದೊ | ಳೆನ್ನನು ಸಂತವಿಸೇ || ೧೨೫ ||
ನೀನಿಲ್ಲದೆ ಪೆರತೊರ್ವರ | ಕಾಣೆನು ಹಾಸಖ ಬಂದಿಹೆ |
ನಾನಿದೊ ನಿನ್ನನು ಕಾಣಲು | ಗುಣವನಧಿಯೆಕಣಾ ||
ನಿನಗಪಮಾನದೆಪಳಿದೆನೊ | ಮೇಣ್ ನಡವಳಿತೆಯ ತಪ್ಪಿದೆ |
ನೋ ನಿನಗೇತರೊಳಾದುದು | ತನ್ನೊಡನೀ ಮುನಿಸೂ || ೧೨೬ ||
ಆನರಿವೆನು ಪೃಥೆಯರಿವಳು | ದಾನವರಿಪು ತಾನರಿವನು |
ಮೇಣಿದರತಿಳಿದಪನ ಕು | ಲಾನುಜನಿದ ಬಲ್ಲಾ ||
ನೀನಾರ್ಗೆಂಬುದ ನರಿಯರು | ಮಾನವಮಹಿತರು ದಿನಪಜ |
ನೀನರಸಿರ್ದುದನೂ || ೧೨೭ ||
ಕಂದ
ಪರಶುಧರಂ ಚಕ್ರಧರಂ |
ಸುರಪತಿ ಭೂಕಾಂತೆ ಕೊಂತಿಯೆಂದೀ ಪೇಳ್ದ ||
ಯ್ವರೆಕೂಡಿ ನಿನ್ನ ಕೊಂದರ್ ||
ನರನೊರ್ವನೆ ಕೊಂದನಲ್ಲನಂಗಾಧಿಪತೀ || ೧೨೮ ||
ವಚನ || ಎಂದವಗಂ ಶೋಕದೆ ಕಣ್ಣೀರಿತ್ತು ಮುಂದೈತರ್ಪೆಡೆಯೊಳ್ ಭೀಷ್ಮರಿತ್ತಲಿರ್ದಪರೆಂದು ಸಂಜಯಂ ಕೆಯ್ ಮುಗಿಯೆ, ನದೀ ನಂದನಂಗೆರಗಲೆಂದು ಸುಯೋಧನನೆಯ್ದೆವಂದಜ್ಜನಂ ಕಾಣಲ್ ||
ರಾಗ ನಾಟಿ ಝಂಪೆತಾಳ
ಕವಲಂಬೆ ತಲೆಗಿಂಬು | ಕವಲುಡೆಯೆ ಮಂಚಮಾ |
ದವನಿಯೊಳು ಶರಶಯನ ಮುಕ್ತಾತ್ಮನಾಗೀ || ೧೨೯ ||
ಮಲಗಿರುವ ಯೋಗೀಂದ್ರ | ಫಲದಂಕ ಭೀಷ್ಮನಿರೆ |
ಕಳವಳಿಸೆ ಕೌರವನ ಹೃತ್ಕರಣ ಬಿಗಿದೂ || ೧೩೦ ||
ದೇವನದಿಯಣುಗಹಾ | ಕೋವಿದನೆ ನೀವೆಂದ |
ಭಾವಶುದ್ಧಿಯ ಮಾತ ಭಾವಿಸದೆ ಪೋದೇ || ೧೩೧ ||
ಮಾರುತಿಯ ಪಗೆಯಿಂದ | ಮಾರಿದೆನು ನಾ ನಿಮಗೆ |
ಸೇರಿತರ್ಜುನಗೆ ಮಹಭಾರತದ ಜಯವೂ || ೧೩೨ ||
ವಚನ || ಎಂಬುದ ನಾಲಿಸಿ ಮಂದಾಕಿನೀ ಸುತಂ ಕಣ್ದೆರೆಯಲಾಗಂ ||
ಕಂದ
ಬಾಗುತೆ ಸಂಜಯನಾಗಳ್ |
ಬೇಗನೆ ಮಹದಾತ್ಮನ ಬಳಿಗಂ ಸಾರ್ದೊಡನಂ ||
ಯೋಗಿಯ ಕರ್ಣದೊಳುಸುರಿದ |
ನಾಗಮಿಸಿಹ ಕೌರವೇಶ್ವರನ ದುಃಸ್ಥಿತಿಯಂ || ೧೩೩ ||
Leave A Comment